ಕೈಲಾಸಂ ಕಲ್ಪಿಸಿದ, ಜಿ.ಪಿ.ರಾಜರತ್ನಂ ರಚಿಸಿದ, “ಕೈಲಾಸಂ ಕೀಚಕ”

ಕೈಲಾಸಂ ಕಲ್ಪಿಸಿದ,  ಜಿ.ಪಿ.ರಾಜರತ್ನಂ ರಚಿಸಿದ, “ಕೈಲಾಸಂ ಕೀಚಕ”
ದಿನಾಂಕ : 31-07-2016 | ಸಮಯ ಸಂಜೆ : 6:30 ಗಂಟೆಗೆ | ಸ್ಥಳ : ಭೂಮಿಗೀತ | ಕಲ್ಪನೆ  :  ಕೈಲಾಸಂ  |  ರಚನೆ : ಜಿ.ಪಿ.ರಾಜರತ್ನಂ | ವಸ್ತ್ರವಿನ್ಯಾಸ – ಎನ್.ಮಂಗಳಾ | ಸಂಗೀತ ನಿರ್ದೇಶನ: ಗಜಾನನ.ಟಿ.ನಾಯ್ಕ | ರಂಗರೂಪ ಮತ್ತು ನಿರ್ದೇಶನ: ಎಸ್.ರಾಮನಾಥ, ರಂಗಾಯಣ |  ಬೆಳಕು-ವಿನಯ್ ಚಂದ್ರ   |  ಟಿಕೆಟ್‌ ದರ 50 ರೂಗಳು

 

ಕೈಲಾಸಂ ಕಲ್ಪಿಸಿರುವ ಕೀಚಕ ಮಹಾಭಾರತದ ಕಾಮಿ ಕೀಚಕನಲ್ಲ. ಇವನು ಮದುವೆಯಾಗಲು ಮನಸ್ಸಿಲ್ಲದವನು. ಅದಕ್ಕೆ ಕಾರಣ ವಿರಾಟಪರ್ವದ ಕಾಲಕ್ಕೆ ಇಪ್ಪತ್ತೈದು ವರುಷಗಳ ಹಿಂದೆ ದ್ರೌಪದಿಯ ಸ್ವಯಂವರ ನಡೆಯುತ್ತದೆ. ಆಗ ಕೀಚಕನು ಅಲ್ಲಿಗೆ ಹೋಗಿರುತ್ತಾನೆ. ದ್ರೌಪದಿಯನ್ನು ಕಂಡು ಅನುರಕ್ತನಾಗುತ್ತಾನೆ. ದ್ರೌಪದಿಯು ತನ್ನೆಡೆಗೆ ಒಲಿದಳೆಂದು ಕೇಳಿ ತಿಳಿಯುತ್ತಾನೆ. ಆದರೆ ಧನುರ್ವಿದ್ಯೆಯಲ್ಲಿ ಅಪ್ರತಿಮನಾದವನಿಗೆ ಮಾತ್ರ ಆ ಹೆಣ್ಣು ಎಂಬ ಪಣವಿದ್ದ ಕಾರಣ, ಗಧಾಯುದ್ಧದಲ್ಲಿ ನಿಪುಣನಾದ ಕೀಚಕನು ಭಗ್ನಮನೋರಥನಾಗಿ ಹಿಂದಿರುಗುತ್ತಾನೆ. ಅಂದಿನಿಂದ ಆ ಪ್ರಣಯಭಂಗದ ಯಾತನೆಯನ್ನು ಮರೆಯುವುದಕ್ಕಾಗಿ ಪ್ರತಿವರುಷವೂ ದಿಗ್ವಿಜಯ ಕೈಗೊಳ್ಳುತ್ತಿರುತ್ತಾನೆ. ಹೀಗೆ ಹಿಂದೆ ದ್ರೌಪದಿಗೆ ಒಲಿದ ಮನಸ್ಸು ಮತ್ಯಾವ ಹೆಣ್ಣಿನ ಕಡೆಗೂ ತಿರುಗದೆ ಹಾಗೆ ನಿಲ್ಲುತ್ತದೆ. ಅವಿಚಲವಾದ ಪ್ರಣಯಕ್ಕೆ ತನ್ನನ್ನು ಅರ್ಪಿಸಿಕೊಂಡ ಈ ಕೀಚಕ ಅಗ್ನಾತವೇಷದ ಸೈರಂಧ್ರಿಯನ್ನು ಕಂಡು ದ್ರೌಪದಿಯ ನೆನಪಾಗಿ ರೋಮಾಂಚನಗೊಳ್ಳುತ್ತಾನೆ. ಅನಾಥೆಯಾದ ಸೈರಂಧ್ರಿಯ ದುಸ್ಥಿತಿಗೆ ಮರುಕಗೊಂಡು ಅವಳಿಗೊಂದು ನೆಲೆ ಕಲ್ಪಿಸಬೇಕೆಂದು ಬಯಸುವ ಕೀಚಕ ತನ್ನ ತಂಗಿ ಸುದೇಷ್ಣೆಯ ಬಲವಂತಕ್ಕೆ ಮತ್ತು ತನ್ನಲ್ಲಿ ಸೈರಂಧ್ರಿ ಕೆರಳಿಸಿದ ದ್ರೌಪದಿಯ ನೆನಪಿಗೂ ಕಟ್ಟುಬಿದ್ದು ಒಪ್ಪಿ ಮಹಾಭಾರತದ ಕೀಚಕನಂತೆಯೇ ಭೀಮನ ಕೈಯಲ್ಲಿ ಹತನಾಗುತ್ತಾನೆ. ಮಹಾಭಾರತದ ಆ ಕೀಚಕ ದ್ರೌಪದಿಯ ಮೇಲಿನ ಕಾಮದಿಂದ ಹತನಾದರೆ ಕೈಲಾಸಂ ಕೀಚಕ ದ್ರೌಪದಿಯ ಮೇಲಿನ ಪ್ರೇಮದಿಂದ ಹತನಾಗುತ್ತಾನೆ. ಕೈಲಾಸಂ ಕಂಡ ವಿರಾಟನಗರದಲ್ಲಿ ಪರಪುರುಷ, ಪರಸ್ತ್ರೀ ಪರಸ್ಪರರಲ್ಲಿ ತಪ್ಪಿ ನಡೆದರೆ ತಲೆದಂಡ. ಇಂಥಹ ಶಾಸನವನ್ನು ಏರ್ಪಡಿಸಿದ ಪರದಾರ ಸಹೋದರನಾದ ಕೀಚಕನ ಕಣ್ಣಳತೆಯಲ್ಲೇ ಸೈರಂಧ್ರಿಯು ವಲಲನನ್ನು ಸಂಧಿಸಿದಾಗ ಕೀಚಕ ಅವರನ್ನು ಪರಸ್ತ್ರೀ, ಪರಪುರುಷ ಎಂದು ಭಾವಿಸಿದುದರಿಂದ ಇಬ್ಬರ ನಡುವೆಯೂ ಮಲ್ಲಯುದ್ಧ ವಾಗುತ್ತದೆ. ದಿಗ್ವಿಜಯದಿಂದ ಹಿಂದಿರುಗಿ ಬಂದ ಹೊತ್ತಿನಿಂದ ತಾನು ಭೀಮನ ಮೃತ್ಯುಬಂಧದಲ್ಲಿ ದೇಹವನ್ನು ಒಪ್ಪಿಸುವವರೆಗೂ ಹೆಜ್ಜೆ ಹೆಜ್ಜೆಗೂ ಕೀಚಕ ತಾನು ಪಡೆಯದೇ ಹೋದ ದ್ರೌಪದಿಯನ್ನು ನೆನಪಿಸಿಕೊಂಡು ವಿರಹದಿಂದ ಪರಿತಪಿಸುತ್ತಾನೆ. ಒಂದು ಕಡೆ ಸಹಿಸಲಾರದ ತನ್ನ ಪ್ರಣಯದ ನೆನಪು ಇನ್ನೊಂದೆಡೆ ತನಗೆ ನೆಮ್ಮದಿಕೊಡಲು ಬಾರದಿರುವ ಸಾವು – ಈ ಎರಡರ ನಡುವೆ ಚಿತ್ತವಿಫಲನಾದುದರಿಂದಲೇ. ಆಗ್ನಾತವೇಷದ ಪಾಂಡವರನ್ನು ಕಂಡು ಅವನಿಗೆ ಪಾಂಡವರ ನೆನಪಾದರೂ ಅವರನ್ನು ಪಾಂಡವರೆಂದು ಗುರುತಿಸಲಾಗದೆ ಅದನ್ನು ತನ್ನ ಚಿತ್ತ ವಿಭ್ರಮಣೆ ಎಂದುಕೊಳ್ಳುತ್ತಾನೆ. ಇಂಥಹ ಸ್ಥಿತಿಯಲ್ಲಿ ಅವನ ನೆರವಿಗೆ ಬರಬಹುದಾದದ್ದು ಒಂದೇ – ಸಾವು. ಅದು ಬಂದು ಕೀಚಕನ ಬದುಕಿಗೆ ಮುಕ್ತಾಯ ಹಾಡುತ್ತದೆ.

ನಿರ್ದೇಶಕರ ಬಗ್ಗೆ; ಎಸ್.ರಾಮನಾಥ್
ಎಸ್.ರಾಮನಾಥ್ ಹುಟ್ಟಿದ್ದು ಕೊಳ್ಳೇಗಾಲದಲ್ಲಿಯಾದರೂ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದು ಮೈಸೂರಿನಲ್ಲಿ. ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ, ಮಾಡಿ ಸೇರಿದ್ದು ರಂಗಾಯಣವನ್ನು.ಅಲ್ಲಿ ಬಿ.ವಿ.ಕಾರಂತರ ಗರಡಿಯಲ್ಲಿ ನಾಟಕ ಕಲಿಕೆಯ ಹಲವು ಸಾಧ್ಯತೆಗಳ ಬೆಳಕಿಗೆ ತೆರೆದುಕೊಂಡವರು. ಎರಡು ದಶಕಗಳಿಂದ ರಂಗಭೂಮಿಯಲ್ಲಿ ನಟರಾಗಿ, ನಿರ್ದೇಶಕರಾಗಿ, ನಾಟಕಕಾರರಾಗಿ ಗುರುತಿಸಿಕೊಂಡಿದ್ದಾರೆ. ಅಶ್ವಪರ್ವ, ಪುಗಳೇಂದಿ ಪ್ರಹಸನ, ಅರಹಂತ ಇವರ ಪ್ರಕಟಿತ ನಾಟಕಗಳಾದರೂ ಸ್ವಪ್ನಾಲಾಪ, ಮಕ್ಕಳಿಗಾಗಿ ಮಹಾಭಾರತ,ಕಮಲಮಣಿ ಕಾಮಿಡಿ ಕಲ್ಯಾಣ, ಕಸ್ತೂರಬಾ, ಶಿಕರ ಸೂರ್ಯ, ಟೀ ತೋಟ, ಮುಂತಾದ ಹಲವಾರು ಸ್ವತಂತ್ರ ನಾಟಕಗಳು, ಅನುವಾದಗಳು, ರಂಗರೂಪಗಳಿಗೆ ಕಾರಣರಾಗಿದ್ದಾರೆ. ಹಲವಾರು ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿದ್ದಾರೆ, ರಂಗಶಿಕ್ಷಣದ ಕುರಿತಾಗಿ ಕೇಂದ್ರ ಸರ್ಕಾರದ ಮಾನವಸಂಪನ್ಮೂಲ ಕೇಂದ್ರದಿಂದ ಜೂನಿಯರ್ ಫೆಲೋಶಿಪ್ ಪಡೆದಿದ್ದಾರೆ, ಪ್ರಸ್ತುತ ರಂಗಾಯಣದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಂಗದ ಮೇಲೆ
ಗಣಪತಿ ಗೌಡ, ನಿಶಾ, ಗಿರೀಶ್, ಸಂಚಾರಿ ವಿಜಯ್, , ಧನುಶ್, ನಾಗರಾಜ.ವಿ, ನಾಗರಾಜ ಸೋಮಯಾಜಿ, ಶಶಿಕುಮಾರ್, ಮಂಗಳಾ.ಎನ್, ಚುಕ್ಕಿ, ,ಸೌಮ್ಯಶ್ರೀ. ರಶ್ಮಿ

ರಂಗದ ಹಿಂದೆ

ರಂಗವಿನ್ಯಾಸ-ಹೆಚ್.ಕೆ.ದ್ವಾರಕಾನಾಥ್,
ಬೆಳಕು-ವಿನಯ್ ಚಂದ್ರ,
ವಸ್ತ್ರವಿನ್ಯಾಸ – ಎನ್.ಮಂಗಳಾ,
ಪ್ರಸಾಧನ – ರಾಮಕೃಷ್ಣ ಕನ್ನರಪಾಡಿ
ಸಂಗೀತ ಸಾಂಗತ್ಯ: ಕೃಷ್ಣಮೂರ್ತಿ, ದುರ್ಗಾದೇವಿ,
ಸಂಗೀತ ನಿರ್ದೇಶನ: ಗಜಾನನ.ಟಿ.ನಾಯ್ಕ
ರಂಗರೂಪ ಮತ್ತು ನಿರ್ದೇಶನ: ಎಸ್.ರಾಮನಾಥ, ರಂಗಾಯಣ