ಪುಷ್ಪ ಪಾರಿಜಾತ
ನಾಟಕ: ಪುಷ್ಪ ಪಾರಿಜಾತ
ಹಿಂದಿ ಮೂಲ : ಶ್ರೀಕಾಂತ್ ಕಿಶೋರ್
ಕನ್ನಡಕ್ಕೆ : ಸದಾಶಿವ ಗರುಡ (ಅಣ್ಣಯ್ಯ)
ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್

ವಸ್ತ್ರ ವಿನ್ಯಾಸ: ಸಿಗ್ಮಾ ಉಪಾಧ್ಯಾಯ
ನೃತ್ಯ ಸಂಯೋಜನೆ : ಅಭಿಷೇಕ್ ಚೌಧರಿ
ಬೆಳಕಿನ ವಿನ್ಯಾಸ : ಕೃಷ್ಣಕುಮಾರ್ ನಾರ್ಣಕಜೆ
ಸಂಗೀತ ಮತ್ತು ನಿರ್ದೇಶನ: ಸಂಜಯ್ ಉಪಾಧ್ಯಾಯ

ರಂಗಾಯಣ ಪ್ರಸ್ತುತಪಡಿಸುತ್ತಿರುವ ಪುಷ್ಪ ಪಾರಿಜಾತ. ನಾಟಕದ ಹಿಂದಿ ಮೂಲದ ಹೆಸರು ಹರ್‌ಸಿಂಗಾರ್. – ಎಂದರೆ ಪಾರಿಜಾತ ಪುಷ್ಪ. ಆ ಕಾರಣಕ್ಕಾಗಿಯೇ ನಮ್ಮ ನಾಟಕವನ್ನು ಪುಷ್ಪ ಪಾರಿಜಾತ ಎಂದು ಹೆಸರಿಸಿದ್ದೇವೆ. ಈ ಪಾರಿಜಾತ ನಾಟಕಕ್ಕೂ ನಮ್ಮಲ್ಲಿನ ಪರಂಪರಾಗತ ಪಾರಿಜಾತ ಜಾನಪದ ಕಲೆಗೂ ಯಾವುದೇ ಸಂಬಂಧವಿಲ್ಲ. ನಿಮಗೆಲ್ಲ ಗೊತ್ತಿರುವಂತೆ ಪಾರಿಜಾತ ಪುಷ್ಪ ಅತ್ಯಂತ ಸೂಕ್ಷ್ಮ ಶ್ವೇತವರ್ಣ ಹಾಗೂ ಸುಂದರವಾದುದು. ಇದೊಂದು ನಮ್ಮ ಪುರಾಣಗಳಲ್ಲಿ ಕಂಡು ಬರುವ ಶಾಪಗ್ರಸ್ಥ ಪುಟ್ಟ ಹೂ. ಇದರ ಬದುಕು ಕೆಲವೇ ಕ್ಷಣಗಳದ್ದಾದರೂ, ತನ್ನ ಸೌಂದರ್ಯ ಹಾಗೂ ಸುಗಂಧಗಳಿಂದ ಎಲ್ಲರ ಮನಸ್ಸನ್ನು ಮುದಗೊಳಿಸುವುದರಲ್ಲಿ ಸಂಶಯವಿಲ್ಲ.

ನಮ್ಮ ಸಮಾಜದಲ್ಲಿ ಔದ್ಯೋಗೀಕರಣವು ಹೆಚ್ಚಾದಂತೆ ಕೊಳ್ಳುಬಾಕತನವೂ ಹೆಚ್ಚಾಗುತ್ತಲೇ ನಡೆದಿದೆ. ಆದರೆ ಹಣದ ಆಮಿಷದಿಂದ ಪ್ರಾರಂಭಗೊಂಡ ಈ ಪ್ರಕ್ರಿಯೆ ಅನೇಕ ತರಹದ ವಂಚನೆ-ಮೋಸಗಳ ಮಾರ್ಗದಲ್ಲಿ ನಡೆದು, ಈಗ ಅದು ಶಿಥಿಲಗೊಳ್ಳುತ್ತಿರುವ ಮಾನವೀಯ ಸಂಬಂಧಗಳನ್ನು ಪ್ರಶ್ನಿಸಬಹುದಾದಂತಹ ಜಾಲದಲ್ಲಿ ಸಿಕ್ಕಿ ಹಾಕಿಕೊಂಡುಬಿಟ್ಟಿದೆ. ಗ್ರಾಮಗಳಲ್ಲಿ ಸಿಗುವ ನಾಲ್ಕಾಣೆಯ ವಸ್ತು ಶಹರಕ್ಕೆ ಬರುತ್ತಿದ್ದಂತೆಯೇ ನಾಲ್ಕು ರೂಪಾಯಿ ಆಗಿರುತ್ತದೆ. ಈ ನಾಟಕ ನಶಿಸಿ ಹೋಗುತ್ತಿರುವ ಸಾಮಾಜಿಕ ಮೌಲ್ಯಗಳನ್ನು ಹುಡುಕಲು ಪ್ರಯತ್ನಿಸುತ್ತದಲ್ಲದೆ, ಊಳಿಗಮಾನ್ಯ ಪದ್ಧತಿಯಲ್ಲಿನ ಪಾತ್ರಗಳನ್ನು ಬಿಂಬಿಸುತ್ತಾ, ಚದುರಿ ಹೋಗುತ್ತಿರುವ ಹಾಗೂ ಕ್ಷೀಣಗೊಳ್ಳುತ್ತಿರುವ ಮೌಲ್ಯಗಳ ಅನ್ವೇಷಣೆಯನ್ನೂ ಮಾಡಲು ಪ್ರಯತ್ನಿಸುತ್ತದೆ. ಪಾಶ್ಚಿಮಾತ್ಯ ಧನದಾಹಿ ಪರಂಪರೆಯ ಆಸಕ್ತಿಗಳನ್ನು ಶಮನಗೊಳಿಸಲೆಂದೇ ಈ ಪಾರಂಪರಿಕ ರಂಗ ಪ್ರಯೋಗವನ್ನು ಆಯೋಜಿಸಲಾಗಿದೆ. ವಿಶೇಷವೆಂದರೆ, ಕೆಲವೊಮ್ಮೆ ಪಾರಂಪರಿಕ ರಂಗ ಪದ್ದತಿಯನ್ನೇ ನಾಟಕದ ವಿನ್ಯಾಸ ಅಲ್ಲಲ್ಲಿ ತಿರಸ್ಕರಿಸುತ್ತದೆ; ಮತ್ತೆ ತನ್ನನ್ನೇ ತಾನು ನಾಟಕವಾಗಿ ಕಟ್ಟಿಕೊಳ್ಳುತ್ತಾ ಹೋಗುತ್ತದೆ. ಇದರ ನಾಟ್ಯ ಬಂಧವು ಒಂದೊಂದು ಕಡೆ ನಾಟಕ ಸರಣಿಯಂತೆ ಕಂಡರೂ ಕೆಲವೊಂದು ಕಡೆ ನಿಜದ ಬದುಕಿನಂತೆಯೇ ಬಂಧಮುಕ್ತವಾಗಿದೆ.

ಉತ್ತರ ಭಾರತದ ಬಿಹಾರ ರಾಜ್ಯದ ಬೋಜ್‌ಪುರಿ, ಮ್ಯಾಥಿಲಿ, ಮಗಹಿ, ಬಜ್ಜಿಕಾ, ಅಂಗಿಕ ಭಾಷೆಯಲ್ಲಿ ಹಾಗೂ ಜಾರ್ಖಂಡ್, ನಾಗ್‌ಪುರಿ, ಛತ್ತೀಸ್‌ಘಡ್ ಪ್ರಾಂತ್ಯದಲ್ಲಿ ಡೊಮ್‌ಕಚ್ ಎಂಬ ಪಾರಂಪರಿಕ ನಾಟ್ಯ ಪ್ರಕಾರದಲ್ಲಿನ ಈ ಹರಬಿಸನಾ ಹಾಗೂ ಹರಬಿಸನಿ ದಂಪತಿಗಳ ಕಥೆಯಿದೆ. ಇದು ಸ್ತ್ರೀ-ಪುರುಷ ಸಂಬಂಧಗಳ ಬಗ್ಗೆ ಯಾರೂ ಯೋಚಿಸದ ಹಲವು ಮುಗ್ಗಲುಗಳ ಮೇಲೆ ಬೆಳಕು ಚೆಲ್ಲುತ್ತಾ, ಅಂತ್ಯದಲ್ಲಿ ಬದುಕಿನ ವಿಜಯಗಾಥೆಯಾಗಿ ಬದಲಾಗಿಬಿಡುತ್ತದೆ. ಪುಷ್ಪ ಪಾರಿಜಾತ ಮಾನವ ನಿರ್ಮಿತ ಬಂಧsನಗಳನ್ನು ಮುರಿಯುತ್ತಾ ವಾಸ್ತವವನ್ನು ನಿಮ್ಮ ಮುಂದೆ ತೆರೆದಿಡಲು ಪ್ರಯತ್ನಿಸುತ್ತದೆ.

ನಿರ್ದೇಶಕರ ನುಡಿ

ಪುಷ್ಪ ಪಾರಿಜಾತ ದ ಮೂಲ ಹೆಸರು ಹರ್ ಸಿಂಗಾರ್. ಈ ನಾಟಕವನ್ನು ನಾನು ಮೊದಲು ನಿರ್ದೇಶಿಸಿದ್ದು, ಸುಮಾರು ಹನ್ನೊಂದು ವರ್ಷಕ್ಕೂ ಹಿಂದೆ; ನಿರ್ಮಾಣ್ ಕಲಾಮಂಚ್‌ನಲ್ಲಿ. ಇದು ನಮ್ಮ ಸಮಾಜದ ಶೋಷಿತರ ಹಾಗೂ ಧಮನಿತರ ದನಿಯಾಗಿದೆ. ಪಾರಿಜಾತದ ಹೂವಿನ ಹಾಗೆ ಕೆಲವೇ ನಿಮಿಷಗಳಲ್ಲಿ ಹುಟ್ಟಿ, ಸುಗಂಧ ಬೀರಿ ನಂತರ ಉದುರಿ ಹೋಗುವ ವರ್ಗದ ಕತೆ. ಅವಕಾಶ ವಂಚಿತರು ಹಾಗೂ ಸಮಾಜದ ಬೇರೆ ಬೇರೆ ಸ್ತರದಲ್ಲಿನ ಹೆಣ್ಣು ಮಕ್ಕಳ ಬಗ್ಗೆ ಈ ನಾಟಕ ಮಾತನಾಡುತ್ತದೆ. ಗಂಡು ಹೆಣ್ಣಿನ ನಡುವಿನ ಸಂಬಂಧಗಳ ವೈಚಿತ್ರ್ಯಗಳನ್ನು ಕೂಡ ನಾವು ಈ ನಾಟಕದ ಮೂಲಕ ಶೋಧಿಸಲು ಪ್ರಯತ್ನಿಸಿದ್ದೇವೆ. ಇದು ನಾನು ನಿರ್ದೇಶಿಸುತ್ತಿರುವ ಮೂರನೆಯ ಕನ್ನಡ ನಾಟಕವಾಗಿದೆ. ಭಾಷೆಯ ತೊಡಕು ಮೊದಲಿಗೆ ಸ್ವಲ್ಪ ಅಡಚಣೆ ಎನ್ನಿಸಿದರೂ ನಂತರ ಅರೆಬರೆ ಹಿಂದಿ ಹಾಗೂ ಅರೆಬರೆ ಕನ್ನಡದ ಮೂಲಕ ಸುಗಮವಾಯಿತು. ನಟರೆಲ್ಲಾ ನನ್ನ ವಯಸ್ಸಿನವರೆ ಆಗಿರುವುದರಿಂದ ನಾಟಕದ ಸಿದ್ಧತೆ ಅತ್ಯಂತ ಸ್ನೇಹಮಯ ವಾತಾವರಣದಲ್ಲಿ ನಡೆಯಿತು. ನನ್ನನ್ನು ಈ ನಾಟಕ ನಿರ್ದೇಶಿಸಲು ಆಮಂತ್ರಿಸಿದ ಶ್ರೀಮತಿ ಭಾಗೀರಥಿಬಾಯಿ ಕದಂ ಅವರಿಗೆ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಾಟಕದ ಸಿದ್ಧತೆಗಾಗಿ ಎಲ್ಲ ರೀತಿಯಲ್ಲೂ ಸಹಕಾರ ನೀಡಿದ ಜಂಟಿ ನಿರ್ದೇಶಕರಾದ ಶ್ರೀ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಅವರಿಗೂ ನಾನು ವಂದನೆಗಳನ್ನು ಸಲ್ಲಿಸುತ್ತೇನೆ ಹಾಗೂ ಈ ಸೃಜನಶೀಲ ಪ್ರಕ್ರಿಯೆಯಲ್ಲಿ ನನ್ನ ಜೊತೆಯಾಗಿ ನಡೆದ ಮತ್ತು ಎಲ್ಲ ರೀತಿಯಲ್ಲಿಯೂ ನನಗೆ ಅದ್ಬುತ ಸಹಕಾರ ನೀಡಿದ ರಂಗಾಯಣದ ಅದ್ಭುತ ಕಲಾವಿದರಿಗೆ ನನ್ನ ಧನ್ಯವಾದಗಳು.   

ನಿರ್ದೇಶಕರ ಬಗ್ಗೆ

ಸಂಜಯ್ ಉಪಾಧ್ಯಾಯ ಅವರು ರಂಗಭೂಮಿಗಾಗಿ ಮತ್ತು ಯುವ ಪೀಳಿಗೆಯಲ್ಲಿ ಹೊಸ ರಂಗ ಪ್ರಜ್ಞೆಯನ್ನು ಜಾಗೃತಿಗೊಳಿಸುವುದಕ್ಕಾಗಿ ದೇಶದ ಉದ್ದಗಲಕ್ಕೂ ಸಂಚರಿಸಿದ ಕೆಲವೇ ಕೆಲವು ರಂಗ ನಿರ್ದೇಶಕರುಗಳಲ್ಲಿ ಒಬ್ಬರು. ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ರಂಗ ನಿರ್ದೇಶನದಲ್ಲಿ ಪದವಿ ಪಡೆದು, ಪಾಟ್ನಾ ಯುನಿವರ್ಸಿಟಿಯಲ್ಲಿ ಇಂಗ್ಲಿಷ್‌ನಲ್ಲಿ ಎಂ.ಎ ವ್ಯಾಸಂಗ ಮಾಡಿರುವ ಇವರು ಹಿರಿಯ ರಂಗಕರ್ಮಿಗಳಾದ ರತನ್ ಥಿಯ್ಯಾಮ್, ಹಬೀಬ್ ತನ್ವೀರ್ ಹಾಗೂ ಬಿ.ವಿ. ಕಾರಂತರಂತೆ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಇವರು ಪಾಟ್ನಾದ ನಿರ್ಮಾಣ್ ಕಲಾಮಂಚ್ ಸಂಸ್ಥೆಯ ನಿರ್ದೇಶಕರು. ಈ ಸಂಸ್ಥೆಯು ಕಳೆದ ಇಪ್ಪತ್ತಾರು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿದೆ. ಮಕ್ಕಳಿಗಾಗಿ ಇರುವ ಇದರ ಅಂಗ ಸಂಸ್ಥೆಯಾದ ಸಫರ್ಮೈನ ಮೂಲಕ ದೇಶದ ತುಂಬಾ ಹಲವಾರು ನಾಟಕಗಳನ್ನು ಪ್ರದರ್ಶಿಸಿ ಬಿ.ವಿ.ಕಾರಂತ, ಬ್ಯಾರಿ ಜಾನ್, ರತನ್ ಥಿಯ್ಯಾಮ್, ಡಿ. ಆರ್. ಅಂಕುರ್ ಮುಂತಾದವರಿಂದ ಪ್ರಶಂಶಿಸಲ್ಪಟ್ಟಿದ್ದಾರೆ. ಇದಲ್ಲದೆ ಇವರು ಶ್ರೀ ರಾಮ್ ಸೆಂಟರ್‌ನ (ನವದೆಹಲಿ) ನಿರ್ದೇಶಕರಾಗಿದ್ದು, ಅಲ್ಲಿ ಅರೆಕಾಲಿಕ ರಂಗ ತರಬೇತುದಾರರಾಗಿ ಕೆಲಸ ನಿರ್ವಹಿಸಿ ಅನೇಕ ರಂಗ ಶಿಬಿರಗಳಲ್ಲಿ ಪಾಲ್ಗೊಂಡಿದ್ದಾರೆ. ಭಾನು ಭಾರ್ತಿ, ಗೌತಮ್ ಮುಜುಮ್‌ದಾರ್, ರಾಬಿನ್ ದಾಸ್, ಬನ್ಸಿಕೌಲ್, ಬಿ.ಎಂ. ಶಾಹ್, ರಾಂಗೋಪಾಲ್ ಬಜಾಜ್, ಸತ್ಯದೇವ್ ದುಬೇ, ಬ್ಯಾರಿ ಜಾನ್, ಡಿ. ಆರ್. ಅಂಕುರ್, ಅಲೋಕ್ ಚಟರ್ಜಿ, ಅವತಾರ್ ಸಾಹ್ನಿ, ಅಜಯ್ ಮಲ್ಕಾನಿ ಮುಂತಾದ ಹಿರಿಯ ರಂಗ ನಿರ್ದೇಶಕರ ನಾಟಕಗಳಿಗೆ ಸಂಗೀತವನ್ನೂ ನೀಡಿದ್ದಾರೆ. ಕೊಲಂಬಿಯಾ, ಸೂರಿನಾಮ್, ಕರಾಕಾಸ್ ಮುಂತಾದ ಕಡೆ ಅಂತರರಾಷ್ಟ್ರೀಯ ರಂಗೋತ್ಸವಗಳ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಭಾರತೀಯ ರಂಗಭೂಮಿಗೆ ಇವರು ನೀಡಿದ ಕೊಡುಗೆಯನ್ನು ಸ್ಮರಿಸಿ, ಭಾರತ ಸರ್ಕಾರದ ಸಂಸೃತಿ ಇಲಾಖೆಯ ಅನುಮತಿಯೊಂದಿಗೆ ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯು ಇವರಿಗೆ 2010 ರಲ್ಲಿ ಮನೋಹರ್ ಸಿಂಗ್ ಸ್ಮೃತಿ ಸನ್ಮಾನ ಪ್ರಶಸ್ತಿ ನೀಡಿ ಗೌರವಿಸಿದೆ. ಇದಲ್ಲದೆ ಇವರಿಗೆ ಹಬೀಬ್ ತನ್ವೀರ್ ಸನ್ಮಾನ, ಪಾಟಲೀಪುತ್ರ ಸನ್ಮಾನ, ಜಗದೀಶ್ಚಂದ್ರ ಮಾಥುರ್ ಸನ್ಮಾನ, ರಾಷ್ಟ್ರ ಗೌರವ್ ಸನ್ಮಾನ, ಶಿವಮಂಗಲ್ ಸಿಂಗ್ ಸುಮನ್ ಸನ್ಮಾನ ಮುಂತಾದ ಅನೇಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ.

ಇವರು ನಿರ್ದೇಶಿಸಿರುವ ನಾಟಕಗಳಲ್ಲಿ ಪ್ರಮುಖವಾದವುಗಳು – ಬಕ್ರಿ,  ಬಿದೇಸಿಯಾ, ಜೀವನ್ ಲೀಲಾ, ಗಾಬರ್ಗ್ಹಿಚೊರ್, ಅಂಧೇರ್ ನಗ್ರಿ, ಸಂಜೌತ, ಹಮಾರಿ ಬುಡಿಯ, ಜಸ್ಮ ಓಡನ್, ನಲ್ ದಮಯಂತಿ, ಕಾಮ್ರೇಡ್ ಕಾ ಕೋಟ್, ಖಡಿಯಾ ಕಾ ಘೇರಾ, ಗಾಜಿಪುರ್ ಕಾ ಹಜ್ಜಮ್, ರುಸ್ತಮ್ ಸೊಹ್ರಾಬ್, ಥ್ರೀ ಪೆನ್ನಿ ಒಪೇರಾ, ಮಾಳವಿಕಾಗ್ನಿಮಿತ್ರಮ್, ಬಡ ನಾಟಕಿಯ ಕೌನ್, ಗಗನ್ ಘಟ ಗಹ್ರಾಣಿ, ನೀಲಕಾಂತ್ ನಿರಾಲ, ಕಂಪನಿ ಉಸ್ತಾದ್, ಘಾಸಿರಾಂ ಕೊತ್ವಾಲ್, ಹೀರಾ ಡೋಮ್, ಗಗನ್ ದಮನ ಬಜೆಯೋ, ಮೃಚ್ಛಕಟಿಕಂ (ಕನ್ನಡ), ಸ್ಮೃತಿ ರೇಖಾ, ಹರ್‌ಸಿಂಗಾರ್, ಧರ್ತಿ ಆಬಾ, ಮಂಗೋಸೀಲ್, ಕಹಾ ಗಯೇ ಮೇರೇ ಉಗನಾ, ಅಂಬಾಪಾಲಿ, ಪತ್ರಿಪತ್ರಿಕತಾ, ಉತ್ತರ್ ಪ್ರಿಯದರ್ಶಿ, ಜಾನ್ವಾಸ, ಅಂಧಾ ಯುಗ್, ಸ್ವಪ್ನ ಮಂಗಲ್ ಕಥಾ, ಜಾನತ್ ತುಲಸೀದಾಸ್, ಹೇ ತಥಾಗತ್, ಡಾಲಿಯ ಮುಂತಾದವು. ಕವನ, ಕಥೆ ಮುಂತಾದ ಪ್ರಾಕಾರಗಳನ್ನೂ ಇವರು ರಂಗಕ್ಕಳವಡಿಸಿ ಪ್ರಯೋಗಿಸಿದ್ದಾರೆ. ಖ್ಯಾತ ಬರಹಗಾರರನ್ನು ಕುರಿತಾದ ರಂಗ ಪ್ರಸ್ತುತಿಗಳಲ್ಲೂ ಇವರು ಕಾರ್ಯ ನಿರ್ವಹಿಸಿದ್ದಾರೆ. ಅವುಗಳಲ್ಲಿ ಪ್ರಮುಖವೆಂದರೆ – ನಿರಾಲ, ರಾಹುಲ್, ಹಬ್ಬ ಖಾತೂನ್, ತುಳಸೀದಾಸ್, ಮಹೇಂದ್ರ ಮಿಸಿರ್, ಭರತೇಂದು, ಕಬೀರ್, ಫಣೀಶ್ವರ್ ನಾಥ್ ರೇಣು, ಭಿಕಾರಿ ಠಾಕೂರ್, ಮೋಹನ್ ರಾಕೇಶ್, ವಿದ್ಯಾಪತಿ, ಮಹಾದೇವಿ ವರ್ಮಾ, ರವೀಂದ್ರನಾಥ್ ಟ್ಯಾಗೂರ್, ಹೀರಾ ಡೋಮ್, ಜಯಪ್ರಕಾಶ್ ನಾರಾಯಣ್, ಬಿರ್ಸಾ ಮುಂಡ, ಅಶೋಕ ದಿ ಗ್ರೇಟ್, ಭಗತ್ ಸಿಂಗ್, ಆಮ್ರಪಾಲಿ ಮುಂತಾದವು. ಪ್ರಸ್ತುತ ರಂಗಾಯಣಕ್ಕಾಗಿ ಸದಾಶಿವ ಗರುಡ (ಅಣ್ಣಯ್ಯ) ಅವರು ಕನ್ನಡಕ್ಕೆ ಅನುವಾದಿಸಿರುವ ಪುಷ್ಪ ಪಾರಿಜಾತ  ನಾಟಕವನ್ನು ನಿರ್ದೇಶನ ಮಾಡಿದ್ದಾರೆ.

ಸದಾಶಿವ ಶ್ರೀಪಾದರಾವ ಗರುಡ

ಅಣ್ಣಯ್ಯ ಎಂದೇ ಕರೆಯಲ್ಪಡುವ ಸದಾಶಿವ ಶ್ರೀಪಾದರಾವ ಗರುಡ ಇವರು ಕಂಪನಿ ನಾಟಕದ ಶ್ರೇಷ್ಠ ನಟ, ನಾಟಕಕಾರ ಮತ್ತು ನಾಟಕಾಲಂಕಾರ ಶ್ರೀ ಸದಾಶಿವರಾವ್ ಗರುಡ ಇವರ ಮೊಮ್ಮಗ. ಅಜ್ಜ ಸದಾಶಿವರಾಯರು ತೀರಿಕೊಂಡ ಒಂದು ವರುಷದ ಅಂತರದಲ್ಲೇ ಇವರ ಜನನವಾದುದರಿಂದ (15-12-1954, ಗದಗ) ಇವರಿಗೆ ಅಜ್ಜನ ಹೆಸರನ್ನೆ ಇಡಲಾಯಿತು. ಮನೆಯಲ್ಲಿ ಎಲ್ಲರೂ ಅಣ್ಣಯ್ಯನೆಂದೆ ಕರೆಯುತ್ತಿದ್ದುದರಿಂದ ಅದೇ ಹೆಸರು ಇವರ ರೂಢನಾಮವಾಯಿತು. ತಂದೆ ಶ್ರೀಪಾದರಾಯರೂ ಕಂಪನಿ ನಟ, ನಾಟಕಕಾರ. ಮನೆತನವೆ ರಂಗಭೂಮಿಯಲ್ಲಿ ತೊಡಗಿಸಿಕೊಂಡುದದರಿಂದ ಸಹಜವಾಗಿಯೆ ಇವರಿಗೆ ಚಿಕ್ಕಂದಿನಿಂದ ರಂಗ ಸಂಸ್ಕಾರವಾಯಿತು. ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಇವರು ಅಭಿನಯಿಸುತ್ತಿದ್ದರು. ಯಜ್ಞೇಶ್ವರಶಾಸ್ತ್ರಿ ಕಾತರಕಿ ಎಂಬುವವರಲ್ಲಿ ಸಂಸ್ಕೃತ ಅಭ್ಯಾಸವನ್ನು ಚಿಕ್ಕಂದಿನಲ್ಲಿಯೇ ಮಾಡಿದರು. ಕಾರಾಣಾಂತರಗಳಿಂದ ಇವರು ಬಟ್ಟೆ ವ್ಯಾಪಾರದಲ್ಲಿ ತಮ್ಮ ೨೦ನೇ ವಯಸ್ಸಿನಲ್ಲೇ ತೊಡಗಿಸಿಕೊಂಡರು. ಆ ಕಾರಣದಿಂದಾಗಿ ಇವರು ಇಡಿ ದೇಶವನ್ನೇ ಸುತ್ತಿದರು. ಇವರಲ್ಲಿನ ಕಲಾವಿದ ಸದಾ ಜಾಗೃತನಾಗಿದ್ದನಾದ್ದರಿಂದ ಈ ಭಾರತ ಯಾತ್ರೆಯನ್ನು ಇವರು ತಮ್ಮ ಕಲಾಪೋಷಣೆಗೆ ಬಳಸಿಕೊಂಡರು. ಗುಜರಾತಿ, ಹಿಂದಿ, ಮರಾಠಿ, ಭೋಜಪುರಿ, ಭಾಷೆಗಳನ್ನು ಕರಗತಮಾಡಿಕೊಂಡರು. ಇವರು ವ್ಯಾಪಾರದ ನಿಮಿತ್ತ ದೇಶ ಸುತ್ತಿದರೂ ವ್ಯಾಪಾರಕ್ಕೆ ಮಾತ್ರ ತಮ್ಮ ಪಯಣವನ್ನು ಸೀಮಿತಗೊಳಿಸದೇ ತಾವು ಭೇಟಿಕೊಟ್ಟ ಪ್ರತಿಯೊಂದು ಪ್ರದೇಶದ ಕಲೆ, ಸಂಸ್ಕೃತಿ, ಭಾಷೆ ಸಂಗೀತವನ್ನು ಸೂಕ್ಮವಾಗಿ ಅವಲೋಕಿಸಿದರು; ಆಸ್ವಾದಿಸಿದರು. ಹೀಗಾಗಿ ಇವರೊಡನೆ ಮಾತನಾಡುತ್ತಿದ್ದರೆ ನಮ್ಮ ದೇಶದ ಒಂದು ಸಾಂಸ್ಕೃತಿಕ ಯಾತ್ರೆ ಮಾಡಿದ ಅನುಭವವಾಗುತ್ತದೆ. ಇವರಿಗೆ ಕಂಪನಿ ನಾಟಕಗಳ ಅನೇಕ ಅಧಿಕೃತ ಮತ್ತು ಸ್ವಾರಸ್ಯಕರ ಮಾಹಿತಿ ಕೂಡಾ ಇದೆ. ಅದು ಇವರೊಡನೆ ಹರಟುವಾಗ ಓತಪ್ರೋತವಾಗಿ ಅನಾವರಣಗೊಳ್ಳುತ್ತದೆ. ವ್ಯಾಪಾರದ ಬಿಡುವಿನ ಮಧ್ಯ ಇವರು ಗುಜುರಾತಿ, ಮರಾಠಿ ನಾಟಕಗಳ ಅನುವಾದಕ್ಕೆ ಕೈಹಾಕಿ ಸಖಾರಾಮ್ ಬೈಂಡರ್, ತೀನ್ ಪೈಸಾಚಾ ತಮಾಶಾ, ಮಿತ್ರ, ಗಗನಭೇದಿ, ಮಿ ಮಾಝಾ ಮುಲಾಂಚಾ. ಐನ್‌ಸ್ಟೈನ್, ಇತ್ಯಾದಿ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರು ಅನುವಾದಿಸಿದ ಸಖಾರಾಂ ಬೈಂಡರ್ ಅಮೇರಿಕಾದ ರಂಗ ಅಮೇರಿಕಾ ತಂಡದಿಂದ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ತೀನ ಪೈಸಾಚಾ ತಮಾಶ ಕೂಡ ಧಾರವಾಡದಲ್ಲಿ ಪ್ರದರ್ಶನ ಕಂಡಿದೆ. ಆತಿ ಕ್ಯಾ ಮಲೇಶಿಯಾ ಎಂಬ ಗುಜರಾತಿ ಪ್ರಹಸನವನ್ನೂ ಸಮಕಾಲೀನ ರಂಗಕರ್ಮಿ ಇವರ ಸಹೋದರ ಡಾ. ಪ್ರಕಾಶ್ ಗರುಡ ಇವರೊಂದಿಗೆ ರೂಪಾಂತರಿಸಿ ರಂಗಕ್ಕೆ ತಂದಿದ್ದಾರೆ. ಡಾ. ಪ್ರಕಾಶ ಗರುಡ ಅವರು ಧಾರವಾಡ ರಂಗಾಯಣ ರೆಪರ್ಟರಿ ಕಲಾವಿದರಿಗೆ ಸಿದ್ಧಪಡಿಸಿದ ಸಂಗೀತ ನಾಟಕ ಶ್ರೀ ರಾಮ ಪಾದುಕಾ ಪಟ್ಟಾಭೀಷೇಕ ನಾಟಕಕ್ಕೆ ವಸ್ತ್ರವಿನ್ಯಾಸ ಹಾಗೂ ರಂಗಸಜ್ಜಿಕೆ ವಿನ್ಯಾಸವನ್ನೂ ಇವರು ಮಾಡಿದ್ದಾರೆ. ಇವರ ಅಜ್ಜ ಸದಾಶಿವರಾವ್ ಗರುಡರು ಬರೆದ ಸುಮಾರು ಮುನ್ನೂರು ಪುಟಗಳ ಹೊಸ ಹಿಂದೂ ಧರ್ಮ ಎಂಬ ಜಟಿಲ ಹಸ್ತಪ್ರತಿಯ ಕೃತಿಯನ್ನು ಸಂಪಾದಿಸಿದ್ದಾರೆ. ಹಲವಾರು ಕಂಪನಿ ನಟರ ಹಾಗೂ ಕಂಪನಿಗಳ ಜೊತೆ ಒಡನಾಟ ಇಟ್ಟುಕೊಂಡಿರುವ ಇವರು ಯಾವುದೇ ಪ್ರಚಾರ ಬಯಸದೆ ಎಲೆಮರೆಯ ಕಾಯಿಯಂತೆ ತಮ್ಮ ರಂಗಾಸಕ್ತಿ ಹಾಗೂ ನಾಟಕ ಅನುವಾದದ ಆಸಕ್ತಿಯನ್ನು ಹವ್ಯಾಸವಾಗಿ ಪೋಷಿಸಿಕೊಂಡಿದ್ದಾರೆ. ಇದೀಗ ರಂಗಾಯಣದ ಆಹ್ವಾನದ ಮೇರೆಗೆ ಹಿಂದಿ ಭಾಷೆಯ ಹರಸಿಂಗಾರ್ ನಾಟಕವನ್ನು ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಅನುವಾದಿಸಿ ಕೊಟ್ಟಿದ್ದಾರಲ್ಲದೇ, ಈ ನಾಟಕದಲ್ಲಿ ಬರುವ ಹಾಡುಗಳನ್ನೂ ಇವರು ಹೊಸ ರೂಪಕೊಟ್ಟು ರಚಿಸಿದ್ದಾರೆ.

ಸಿಗ್ಮಾ ಉಪಾಧ್ಯಾಯ

ಸಿಗ್ಮಾ ಉಪಾಧ್ಯಾಯ

ವಸ್ತ್ರ ವಿನ್ಯಾಸ

ಅಭಿಷೇಕ್ ಚೌಧರಿ

ಅಭಿಷೇಕ್ ಚೌಧರಿ

ನೃತ್ಯ ಸಂಯೋಜನೆ

ಶ್ರೀಕಾಂತ್ ಕಿಶೋರ್

ಶ್ರೀಕಾಂತ್ ಕಿಶೋರ್ ಅವರು ಜನಿಸಿದ್ದು ಹದಿನಾಲ್ಕು ಜುಲೈ 1965 ರಲ್ಲಿ. 1988 ರಲ್ಲಿ ಪಾಟ್ನಾದ ಯೂನಿವರ್ಸಿಟಿಯಿಂದ ಎಂ.ಎ. ಪದವಿಯನ್ನು ಪಡೆದ ಇವರು ಪ್ರಸ್ತುತ ಬಿಹಾರ್‌ನ ಜಹಾನಾಬಾದ್‌ನಲ್ಲಿ ನೆಲೆಸಿದ್ದಾರೆ. 1992 ರ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಸಿ.ಐ.ಎಸ್.ಎಫ್‌ನಲ್ಲಿ ನೇಮಕಗೊಂಡರು. ಪ್ರಸ್ತುತ ಇವರು ದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಡಿಐಜಿ/ಸಿಎಎಸ್‌ಒ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪಾಟ್ನಾದ ಅನಾಗತ್ ಮತ್ತು ಇಪ್ಟಾನಲ್ಲಿ 1980 ರಿಂದ ಹತ್ತು ವರ್ಷಗಳ ಕಾಲ ನಟನೆ, ನಿರ್ದೇಶನ ಹಾಗೂ ನೇಪಥ್ಯದಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿರುವ ಇವರು ರಂಗ್ ಪ್ರಸಂಗ್, ಕಸೌಟಿ, ಇಂಡಿಯನ್ ಲಿಟರೇಚರ್ ಮುಂತಾದ ಪತ್ರಿಕೆಗಳಲ್ಲಿ ನಟನೆಯ ವಿಧಾನಗಳ ಬಗ್ಗೆ ಅನೇಕ ಮೌಲಿಕ ಲೇಖನಗಳನ್ನು ಬರೆದಿದ್ದಾರೆ.
ಅವರ ಕೆಲವು ಪ್ರಮುಖ ಕೃತಿಗಳೆಂದರೆ, ಬ್ರೆಕ್ಟ್‌ನ ನಾಟಕ ಎಕ್ಷಪ್ಷನ್ ಆಂಡ್ ರೂಲ್ ನ ಅನುವಾದ-ಸೌದಾಗರ್ (1990ರಲ್ಲಿ, ಪಾಟ್ನಾದ ಇಪ್ಟಾ ಪ್ರಸ್ತುತಿ. ರಂಗ್ ವಿದೂಷಕ್, ಭೋಪಾಲ್ ತಂಡದಿಂದ ಬನ್ಸಿಕೌಲ್ ನಿರ್ದೇಶನದಲ್ಲಿ 1999ರಲ್ಲಿ ಪುನಃ ಪ್ರಸ್ತುತಿ). ಇದು ಭಾರಂಗಂ 2000ರಲ್ಲಿ  ಆಯ್ಕೆಯಾದ ನಾಟಕ. ದೇಶಾದ್ಯಂತ ಹಲವಾರು ತಂಡಗಳು ಈ ನಾಟಕವನ್ನು ಪ್ರದರ್ಶಿಸಿವೆ. ಅರಣ್ಯ ಕಥಾ  (1999ರಲ್ಲಿ ಶ್ರೀ ಪರ್ವೇಜ್ ಅಖ್ತರ್ ನಿರ್ದೇಶನದಲ್ಲಿ ಪ್ರಾಚಿಯಿಂದ ಪ್ರಸ್ತುತಿ, 1999 ರಲ್ಲಿ ನಟರಂಗ್ ಪತ್ರಿಕೆಯಲ್ಲಿ ಪ್ರಕಟಣೆ). ಇದು ಭಾರಂಗಂ 2011 ರಲ್ಲಿ ಆಯ್ಕೆಯಾದ ನಾಟಕ. ಈವರೆಗೂ ಸುಮಾರು 15 ಪ್ರದರ್ಶನಗಳನ್ನು ಕಂಡಿದೆ ಮತ್ತು ಚಾಂದ್, ಜಮೀನ್ ಕಾ ಟುಕ್ಡಾ ಔರ್ ಮೈ (2000 ರಲ್ಲಿ ದೆಹಲಿಯ ಬಹುರೂಪ್ ತಂಡಕ್ಕೆ ಅಪರಾಜಿ ಡೇ ನಿರ್ದೇಶನದಲ್ಲಿ ಪ್ರಸ್ತುತಿ ಮತ್ತು ಆಶೀರ್ವಾದ್ ರಂಗಮಂಡಲ್, ಬೇಗುಸರಾಯ್ ಮತ್ತು ಹಲವಾರು ತಂಡಗಳಿಂದ ದೇಶದಾದ್ಯಂತ ಪ್ರಸ್ತುತಿ, ಈ ನಾಟಕವು 1999 ರಲ್ಲಿ ವರ್ತಮಾನ್ ಸಾಹಿತ್ಯದಲ್ಲಿ ಪ್ರಕಟಣೆ).
2003 ರಲ್ಲಿ ಸಿದ್ಧಪಡಿಸಿದ ಹರ್‌ಸಿಂಗಾರ್ ನಾಟಕವನ್ನು ಪಾಟ್ನಾದ ನಿರ್ಮಾಣ್ ಕಲಾಮಂಚ್ ಹಾಗೂ ಹಲವಾರು ರಂಗ ತಂಡಗಳಿಂದ ಪ್ರಸ್ತುತಪಡಿಸಲಾಗಿದೆ. 2009 ರ ಭಾರಂಗಂ ಮಹೋತ್ಸವಕ್ಕೆ ಆಯ್ಕೆಯಾದ ಈ ನಾಟಕವು ದೇಶದಾದ್ಯಂತ ಐದು ನೂರಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ.

ರಂಗದ ಮೇಲೆ

ಹರ್‌ಬಿಸನಾ : ಮಹದೇವ
ಹರ್‌ಬಿಸನಿ : ಪ್ರಮೀಳಾ ಬೆಂಗ್ರೆ
ನಟ, ಸೂತ್ರಧಾರ : ಜಗದೀಶ್ ಮನವಾರ್ತೆ
ನಟಿ : ನಂದಿನಿ ಕೆ.ಆರ್.
ಕೊತ್ವಾಲ : ಪ್ರಶಾಂತ್ ಹಿರೇಮಠ
ಸಂತ್ರಿ : ಕೃಷ್ಣಕುಮಾರ್ ನಾರ್ಣಕಜೆ
ರಾಜ : ಹುಲಗಪ್ಪ ಕಟ್ಟಿಮನಿ
ರಾಣಿ : ಶಶಿಕಲಾ ಬಿ.ಎನ್.
ದಿವಾನ : ರಾಮು ಎಸ್.
ವ್ಯಾಪಾರಿ : ವಿನಾಯಕ ಭಟ್ ಹಾಸಣಗಿ
ದಲ್ಲಾಳಿ : ಸುಭಾಷ್ ಎ.ಎಸ್
ದಲ್ಲಾಳಿ ಸಹಾಯಕ : ರಂಜಿತಾ ಆರ್
ಗುಂಪು : ಗಿರಿಜಾ ಅರುಣ್, ರಂಜಿತಾ ಆರ್., ಸುಭಾಷ್ ಎ.ಎಸ್., ಸರೋಜ ಹೆಗಡೆ, ಗೀತಾ ಮೋಂಟಡ್ಕ

ರಂಗದ ಹಿಂದೆ

ರಂಗಸಜ್ಜಿಕೆ: ಪ್ರಮೀಳಾ ಬೆಂಗ್ರೆ, ರಾಮು .ಎಸ್.
ಪರಿಕರ: ಮಹದೇವ್, ಸರೋಜ ಹೆಗಡೆ, ಸುಭಾಷ್ ಎ.ಎಸ್.

ವಸ್ತ್ರ: ಹುಲಗಪ್ಪ ಕಟ್ಟೀಮನಿ, ರಂಜಿತಾ, ಗಿರಿಜಾ, ಮೋಹನ

ಪ್ರಚಾರ: ಪ್ರಶಾಂತ್ ಹಿರೇಮಠ, ಶಶಿಕಲಾ ಬಿ.ಎನ್.

ಪ್ರಸಾದನ: ಕೃಷ್ಣಕುಮಾರ್, ಜಗದೀಶ್ ಮನವಾರ್ತೆ

ಸಂಗೀತ ವಿಭಾಗ: ವಿನಾಯಕಭಟ್

ರಂಗ ನಿರ್ವಹಣೆ: ಗೀತಾ ಮೋಂಟಡ್ಕ