ಯಶವಂತ ಚಿತ್ತಾಲರ ಕಾದಂಬರಿ ’ಶಿಕಾರಿ’

ಸಂಗೀತ : ಪವನ್ ಕೆ.ಜೆ.
ರಂಗವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್
ವಸ್ತ್ರ ವಿನ್ಯಾಸ : ಸಂಕೀರ್ತಿ ಐಪಂಜಿಗುಳಿ
ಬೆಳಕು : ಮಹೇಶ್ ಕಲ್ಲತ್ತಿ
ರಂಗರೂಪ ಮತ್ತು ನಿರ್ದೇಶನ : ಪ್ರಕಾಶ್ ಬೆಳವಾಡಿ

ಯಶವಂತ ಚಿತ್ತಾಲ

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಬಳಿ ಇರುವ ಒಂದು ಸಣ್ಣ ಊರು ಹನೇಹಳ್ಳಿ. ಇಲ್ಲಿ ಹುಟ್ಟಿ ಬೆಳೆದವರು ಯಶವಂತ ವಿಠೋಬಾ ಚಿತ್ತಾಲ. ಅವರು ಹುಟ್ಟಿದ ದಿನ ಆಗಸ್ಟ್ ೩, ೧೯೨೮. ಯಶವಂತ ಚಿತ್ತಾಲರ ಅಣ್ಣ ಗಂಗಾಧರ ಚಿತ್ತಾಲ. ಅಣ್ಣ ಕವಿಯಾದರೆ ತಮ್ಮ ಯಶವಂತ ನಮ್ಮ ಕನ್ನಡದ ಒಬ್ಬ ಶ್ರೇಷ್ಠ ಕಥೆಗಾರ, ಕಾದಂಬರಿಕಾರ.

ವಿಠೋಬಾ – ರುಕ್ಮಿಣಿ ದಂಪತಿಗಳ ಏಳು ಮಕ್ಕಳಲ್ಲಿ ಯಶವಂತರು ಐದನೆಯವರು. ನೋವು-ಸಾವು – ನಲಿವು – ನಿರಾಶೆಗಳ ತೂಗುಯ್ಯಾಲೆಯಲ್ಲಿ ಸಾಗಿದ ಬದುಕು. ಕುಮಟಾ, ಧಾರವಾಡ, ಮುಂಬಯಿ, ನ್ಯೂಜರ್ಸಿ (ಅಮೇರಿಕಾ)ಗಳಲ್ಲಿ ಓದು. ರಸಾಯನ ವಿಜ್ಞಾನದ ಶಾಖೆಯಾದ ಪಾಲಿಮರ್ ತಂತ್ರಜ್ಞಾನದಲ್ಲಿ ತಜ್ಞತೆಯ ಸಂಪಾದನೆ. ಮುಂಬಯಿ ವಿಶ್ವವಿದ್ಯಾನಿಲಯದ ಪ್ಲಾಸ್ಟಿಕ್ ವಿಭಾಗದಲ್ಲಿ ಪ್ರಥಮ ಪದವಿ. ಸ್ಟೀಫನ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸ್ನಾತಕೋತ್ತರ ಪದವಿ. ಬೇಕ್‌ಲೈಟ್ ಹೈಲಂ ಸಂಸ್ಥೆಯಲ್ಲಿ ಉದ್ಯೋಗ ಮಾಡಿ, ಉನ್ನತ ಸ್ಥಾನಕ್ಕೇರಿ ವಿದೇಶ ಪ್ರವಾಸ ಮಾಡಿ ಬಂದು ಪಡೆದ ವೃತ್ತಿ ನೈಪುಣ್ಯ, ಅನುಭವ, ಅವಧಿ ಪೂರ್ಣ ದುಡಿದು ನಿವೃತ್ತಿ (೧೯೮೫).

ಚಿಕ್ಕವರಿದ್ದಾಗ ಜಲವರ್ಣ ಚಿತ್ರ ರಚನೆಯಲ್ಲಿ ಗಾಢವಾದ ಆಸಕ್ತಿ. ಅದನ್ನೇ ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿ ಮಾಡಿಕೊಳ್ಳಬೇಕೆಂಬ ಆಕಾಂಕ್ಷೆ. ಅದಕ್ಕಾಗೆಂದೇ ಅವರು ಮುಂಬೈಗೆ ಹೋದದ್ದು; ಅಲ್ಲಿ ’ಕಲಾನಿಕೇತನ’ದ ಸಂಜೆಯ ವರ್ಗಗಳಿಗೆ ಸೇರಿದ್ದು. ಆದರೆ ಅದೇ ಜೀವನದ ಮುಖ್ಯ ತಿರುವಾಗಿ ಪರಿಣಮಿಸಿತು. ಆಗಲೇ ಅವರು ಎಂ.ಎನ್. ರಾಯ್‌ರ ಪ್ರಭಾವಕ್ಕೆ ಒಳಗಾದದ್ದು. ಕಲಾನಿಕೇತನವನ್ನು ಬಿಟ್ಟು ರಾಯ್‌ರ ಪಕ್ಷಕ್ಕೆ ಸೇರಿದ್ದು. ವಿಚಾರದ ಹಾದಿಯಲ್ಲಿ ಅದೊಂದು ದೊಡ್ಡ ಮೈಲುಗಲ್ಲು. ಎಂ.ಎನ್. ರಾಯ್ ಅಲ್ಲದೇ ಡಾರ್ವಿನ್, ಐನ್‌ಸ್ಟೈನ್, ಯೂಂಗ್, ಮಾರ್ಕ್ಸ್, ಮಾಸ್ತಿ, ಕಾರಂತ, ಪುಟ್ಟಪ್ಪ, ಮೊಪಾಸಾ, ಟಾಲ್ಸ್‌ಟಾಯ್, ಚೆಕಾಫ಼್, ಹೆಮ್ಮಿಂಗ್ವೇ, ಸ್ಟೀಫನ್ ಝ್ವೀಗ್, ಸ್ಟೆಟ್‌ಬೆಕ್, ದಾಸ್ತೋವ್‌ಸ್ಕಿ, ಕಾಫ್ಕಾ, ಕಾಮೂ ಮುಂತಾದ ಮಹಾ ಮನಸ್ಸುಗಳ ಪ್ರಭಾವ. ಜೊತೆಗೆ ವೃತ್ತಿ ಸಂಬಂಧವಾದ ತಂತ್ರಜ್ಞಾನದ ಪರಿಚಯ. ಮನಸ್ಸಿನಲ್ಲೇ ಊರಿ ನಿಂತದ್ದು ಹುಟ್ಟೂರಾದ ಹನೇಹಳ್ಳಿಯ ನೆನಪಿನ ಬುತ್ತಿ. ಈ ಮಹಾಪರಿವರ್ತನೆಯಾಗುವುದಕ್ಕೂ ಮುಂಚಿನಿಂದಲೇ ಒಳಗೊಳಗೇ ಮೊಳೆತು ಕುಡಿಯೊಡೆದು ಬೆಳೆಯತೊಡಗಿದ್ದು ಕಥನ ಪ್ರಕ್ರಿಯೆ. ’ಬೊಮ್ಮಿಯ ಹುಲ್ಲು ಹೊರೆ’ ಇದು ಚಿತ್ತಾಲರ ಮೊದಲ ಕಥೆ. ಆ ನಂತರ ಸುಮಾರು ಇಪ್ಪತ್ತೈದು ವರ್ಷಕ್ಕೆ ಇನ್ನೊಂದು ಮಹತ್ವದ ಕತೆ. ‘ಕಥೆಯಾದಳು ಹುಡುಗಿ’ ನಾನು ಏಕೆ ಬರೆಯುತ್ತೇನೆ? ಎಂಬ ಪ್ರಶ್ನೆಗೆ ಅವರು ಕೊಟ್ಟಿರುವ ಉತ್ತರ ಇದು: ಒಟ್ಟಿನಲ್ಲಿ ನಾನು ಬರೆಯುತ್ತಿದ್ದುದು ನಾನು ನಾನೇ ಆಗಲು. ನಾನು ನಾನಾಗಿಯೇ ಉಳಿದು, ಉಳಿದವರೊಂದಿಗೆ ಬರೆಯಲು; ಪ್ರೀತಿಸುವುದನ್ನು ಕಲಿಯಲು; ಪ್ರೀತಿಸುವುದರ ಮೂಲಕ ಜೀವಂತ ಸಂಬಂಧಗಳನ್ನು ಹುಟ್ಟಿಸಿಕೊಳ್ಳಲು. ಉಳಿದವರನ್ನು ತಿದ್ದುವುದಕ್ಕಲ್ಲ. ಆ ಯೋಗ್ಯತೆಯಾಗಲಿ, ಅಧಿಕಾರವಾಗಲಿ ನನಗಿಲ್ಲ.

ಉತ್ತರ ಕನ್ನಡ ಜಿಲ್ಲೆ, ಅದರಲ್ಲೂ ನನ್ನ ಹುಟ್ಟೂರಾದ ಹನೇಹಳ್ಳಿ. ಇವು ನನ್ನ ಮಟ್ಟಿಗೆ ಬರೇ ನೆಲದ ಹೆಸರುಗಳಲ್ಲ. ಬದಲಾಗಿ ನನ್ನ ಸಾಹಿತ್ಯದ ಹುಟ್ಟಿಗೆ ಕಾರಣವಾಗಿ ಅದರ ಚೈತನ್ಯಕ್ಕೆ ನಿರಂತರವಾದ ಜೀವಸೆಲೆ ಎನ್ನುತ್ತಿದ್ದರು ಅವರು.

ಮುಂಬಯಿಯಂಥ ನಗರದ ವಾತಾವರಣಗಳಲ್ಲಿನ ಹೀನ ನಾಗರೀಕತೆಯ ವಿಷಮತೆಗಳ ನಡುವೆ ಮಾನವತೆ ಮರೆಯಾಗುವ ಅಪಾಯವಿದೆ. ಇದನ್ನು ಚಿತ್ತಾಲರಂತೆ ಕಲಾತ್ಮಕವಾಗಿ ನಿರ್ವಹಿಸಿ ಯಶಸ್ಸು ಸಾಧಿಸಿರುವವರು ಯಶವಂತರೊಬ್ಬರೇ. ನಗರ ಜೀವನದ ಹಣಕೇಂದ್ರಿತ ಸಂಬಂಧಗಳು ’ಶಿಕಾರಿ’ ಕಾದಂಬರಿಯಲ್ಲಿ ಶಕ್ತವಾಗಿ ನಿರೂಪಿತವಾಗಿದೆ. ಸುಲಭವಾಗಿ ಕಾಣೆಯಾಗುವುದೇ ಅಭ್ಯಾಸವಾಗಿಬಿಟ್ಟ ನಮ್ಮೊಳಗಿನ ಮನುಷ್ಯನನ್ನು ಪತ್ತೆ ಮಾಡುವ ರೋಮಾಂಚನಕಾರಿ ಸಾಹಸದ ವಿವಿಧ ಮಜಲುಗಳನ್ನು ಅವರ ಕೃತಿಗಳಲ್ಲಿ ನಾವು ಗುರುತಿಸಬಹುದು.

ಹನೇಹಳ್ಳಿ, ಸಾವಿನ ನಿಗೂಢತೆ, ನಮ್ಮೊಳಗಿನ ಮನುಷ್ಯನನ್ನು ಹುಡುಕುವ ಪ್ರಯತ್ನ, ಇದು ನನ್ನ ಸಾಹಿತ್ಯದ ಆರಂಭದ ದಿನಗಳಿಂದಲೂ ನನ್ನ ಆಸ್ಥೆಗೆ ಒಳಪಟ್ಟ ವಿಷಯ. ನಾವು ಅಸಮಗ್ರತೆಯಿಂದ ಸಮಗ್ರತೆಯೆಡೆಗೆ, ಅಪ್ರಬುದ್ಧತೆಯಿಂದ ಪ್ರಬುದ್ಧತೆಯೆಡೆಗೆ ಸಾಗುವ, ಸ್ವಲ್ಪದರಲ್ಲಿ, ಮನುಷ್ಯರಾಗಿ ಸಾಗುವ ಪ್ರಕ್ರಿಯೆಗೆ ’ಶಿಕಾರಿ’ ರೂಪಕವಾಗಿದೆ ಎಂದು ಯಶವಂತ ಚಿತ್ತಾಲರು ಹೇಳಿಕೊಂಡಿದ್ದಾರೆ.
’ಆಟ’ (1969) ಕಥಾ ಸಂಕಲನ ಕಲಾತ್ಮಕತೆಯ ದೃಷ್ಟಿಗಳಿಂದ ಮಹತ್ವದ್ದು.

’ಕತೆಯಾದಳು ಹುಡುಗಿ’ ಸಂಕಲನ ಪರಿಪೂರ್ಣತೆಯ ಗಡಿಯನ್ನೇ ಸ್ಪರ್ಶಿಸಿತೆನ್ನಬೇಕು. ‘ಬೋನ್ಸಾ’, ‘ಸಿದ್ಧಾರ್ಥ’ಗಳೂ ಇದೇ ರೀತಿಯವು. ಇವಲ್ಲದೆ ಅವರು ’ಕುಮಟೆಗೆ ಬಂದ ಕಿಂದರಿ ಜೋಗಿ’ ಮತ್ತು ’ಓಡಿ ಹೋದ ಮುಟ್ಟಿ ಬಂದು’ ಎಂಬ ಕಥಾ ಸಂಕಲನಗಳನ್ನು ತಂದಿದ್ದಾರೆ. ಚಿತ್ತಾಲರು ಬರೆದ ಕಾದಂಬರಿಗಳು ’ಮೂರು ದಾರಿಗಳು’, ’ಶಿಕಾರಿ’, ’ಛೇದ’, ’ಪುರುಷೋತ್ತಮ’ ಮತ್ತು ’ಕೇಂದ್ರದ ವೃತ್ತಾಂತ’, ಕನ್ನಡ ಸಾಹಿತ್ಯದ ಶ್ರೇಷ್ಠ ವಿಮರ್ಶಕ ವಿದ್ವಾಂಸರಾದ ಜಿ.ಎಸ್. ಅಮೂರರ ಮಾತಿನಲ್ಲೇ ಹೇಳುವುದಾದರೆ ಚಿತ್ತಾಲರ ’ಶಿಕಾರಿ’ ಕನ್ನಡದ ಗತ್ತು. ಅತ್ಯುತ್ತಮ ಕಾದಂಬರಿಗಳಲ್ಲೊಂದು.

ಚಿತ್ತಾಲರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳು ಅರಸಿ ಬಂದಿವೆ.
ಈ ಮಹಾನ್ ಕಥೆಗಾರ, ಕಾದಂಬರಿಕಾರ ಮಾರ್ಚ್ ೨೨, ೨೦೧೪ ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮ್ಮ ನಮನಗಳು.

(ಆಧಾರ: ಎಚೆಸ್ಕೆ ಅವರ ‘ಶ್ರೇಷ್ಠ ಕಾದಂಬರಿಕಾರ ಯಶವಂತ ಚಿತ್ತಾಲ’ ಲೇಖನವನ್ನು ಈ ಬರಹ ಆಧರಿಸಿದೆ.)
ಕೃಪೆ : ಸಂಸ್ಕೃತಿ ಸಲ್ಲಾಪ ತಾಣ – – www.sallapa.com

ರಂಗಾಯಣದ ನಿರ್ದೇಶಕರ ನುಡಿ :

ಭಾರತೀಯ ರಂಗಭೂಮಿಯಲ್ಲಿ ಮೈಸೂರಿನ ರಂಗಾಯಣದ ರಂಗಪಯಣವು ಇಪ್ಪತ್ತೇಳು ವರ್ಷಗಳಿಂದ ನಿರಂತರವಾಗಿ ಸೃಜನಶೀಲವಾಗಿ ನಡೆದು ಬಂದಿರುವ ವಿಶಿಷ್ಟ ಹಾಗೂ ಏಕೈಕ ರಂಗಪಯಣವಾಗಿದೆ. ನುರಿತ ಕಲಾವಿದರ ಸತತ ಆರು ವರ್ಷಗಳ ರಂಗಶಿಕ್ಷಣ, ತರಬೇತಿ, ಇಪ್ಪತ್ತೈದು ವರ್ಷಗಳ ದೇಶ-ವಿದೇಶಗಳ ಶ್ರೇಷ್ಠ ರಂಗನಿರ್ದೇಶಕರುಗಳ ಜೊತೆಗಿನ ಅಪಾರ ಅನುಭವ ಇಂದು ಫಲಪ್ರದವಾಗಿ ನಿಂತಿದೆ. ಕಳೆದ ಕಾಲು ಶತಮಾನದಿಂದ ರಂಗಾಯಣದ ಕಲಾವಿದರಿಂದ ನಿರಂತರವಾಗಿ ನಾಟಕಗಳು ಪ್ರಯೋಗಗೊಳ್ಳುತ್ತಲೇ ಇರುವುದು ಭಾರತೀಯ ರಂಗಭೂಮಿಯ ಹೆಮ್ಮೆಯ ವಿಷಯವಾಗಿದೆ.

ಇದು ರಂಗಭೀಷ್ಮ ಬಿ.ವಿ. ಕಾರಂತರ ಕನಸನ್ನು ನನಸು ಮಾಡಿರುವುದಷ್ಟೆ ಅಲ್ಲದೆ, ನಾಡಿನ ರಂಗಭೂಮಿಯನ್ನೂ ಶ್ರೀಮಂತಗೊಳಿಸಿದೆ. ಈ ಅವಿರತ ಪಯಣ ರಂಗಭೂಮಿಯಲ್ಲಿ ಸಂಚಲನವನ್ನುಂಟುಮಾಡಿ, ಹೊಸತೊಂದು ಚಳವಳಿಯನ್ನು ಹುಟ್ಟು ಹಾಕಿದೆ.

ಈ ಚಳವಳಿಯು ಒಂದೇ ವೇಳೆಗೆ ಕಿರಿಯ ಕಲಾವಿದರಿಗೆ ಮಾರ್ಗದರ್ಶನ ಹಾಗೂ ಪ್ರೇಕ್ಷಕರಿಗೆ ರಸದೌತಣ ನೀಡುವುದರ ಜೊತೆಗೆ ಹೊಸ ರಂಗಚಿಂತನೆಯನ್ನು ಮೂಡಿಸಿದೆ. ಈ ರಂಗಚಳವಳಿಯನ್ನು ಹುಟ್ಟು ಹಾಕಿದ ಮೈಸೂರು ರಂಗಾಯಣದ ಹಿರಿಯ ಕಲಾವಿದರಿಗೆ ನವ್ಯ ಸಾಹಿತ್ಯದ ಅತ್ಯಂತ ಪ್ರಮುಖ ಕಾದಂಬರಿಯಾದ ಯಶವಂತ ಚಿತ್ತಾಲರ ‘ಶಿಕಾರಿ’ ಯನ್ನು ರಂಗರೂಪಕ್ಕೆ ತಂದು ನಿರ್ದೇಶನ ಮಾಡುತ್ತಿರುವವರು ನಟ, ನಿರ್ದೇಶಕ, ವಿಮರ್ಶಕ ಹಾಗೂ ಚಿಂತಕರಾದ ಶ್ರೀ ಪ್ರಕಾಶ್ ಬೆಳವಾಡಿಯವರು. ಮನೋವೈಜ್ಞಾನಿಕ ಸಂಘರ್ಷಣೆಯ ನಿರೂಪಣೆಯಲ್ಲಿ ರೂಪಗೊಂಡ ಕಾದಂಬರಿ ನವ್ಯ ಸಾಹಿತ್ಯದ ಕಾಲದ ವಿಭಿನ್ನ ಮಾರ್ಗವನ್ನು ಆಯ್ಕೆಮಾಡಿಕೊಂಡು ರಚಿತವಾದ ಅದ್ಭುತ ಕಲಾಕೃತಿ. ಅಸ್ತಿತ್ವವಾದದ ಕಾಫ್ಕಾ ಮತ್ತು ಕಾಮೂ ಅವರ ದಟ್ಟ ಪ್ರಭಾವವಿರುವ ಈ ಕಾದಂಬರಿಯನ್ನು ನಾಟಕ ರೂಪಕ್ಕೆ ತರುವುದು ಒಂದು ಸಾಹಸದ ಕೆಲಸವೇ ಸರಿ. ನಾಟಕ ನಿರ್ದೇಶಿಸುವಾಗಿನ ಪ್ರಕಾಶ್ ಬೆಳವಾಡಿಯವರ ಉತ್ಸಾಹ, ಪಾತ್ರಗಳನ್ನು ಮತ್ತು ಸನ್ನಿವೇಶಗಳನ್ನು ವಿವರಿಸುವಾಗ ಅವರು ಸಂತಸಪಡುವ ಪರಿ ನಟರಲ್ಲಿ ಹೊಸತೊಂದು ಸ್ಫೂರ್ತಿಯನ್ನು ಮೂಡಿಸಿದೆ. ಈ ’ಶಿಕಾರಿ’ ನಾಟಕವು ನಾಡಿನ ಪ್ರೇಕ್ಷಕರನ್ನು ರಂಜಿಸಿ, ಮತ್ತೊಂದು ಹೊನ್ನ ಗರಿಯಾಗಿ ರಂಗಾಯಣದ ಮುಕುಟ ಸೇರಲಿ ಎಂಬ ಆಶಯ ನನ್ನದು.

– ಭಾಗೀರಥಿ ಬಾಯಿ ಕದಂ

 

ಪ್ರಕಾಶ್ ಬೆಳವಾಡಿ

ಶ್ರೀ ಪ್ರಕಾಶ್ ಬೆಳವಾಡಿ ಯವರು ಓರ್ವ ಪತ್ರಕರ್ತ, ನಟ, ಲೇಖಕ, ಮತ್ತು ರಂಗಭೂಮಿ, ಕಿರುತೆರೆ ಹಾಗೂ ಚಲನಚಿತ್ರ ನಿರ್ದೇಶಕರು. Centre for Film and Drama ಹಾಗೂ ಚಲನಚಿತ್ರ ನಿರ್ಮಾಣ ಹಾಗೂ ನಟನೆಯ ಶಾಲೆಯೊಂದನ್ನು ನಡೆಸುತ್ತಿರುವ ಹಾಗೂ ಚಲನಚಿತ್ರ ನಿರ್ಮಾಣ ಹಾಗೂ ನಟನೆಗಳ ಕೋರ್ಸ್‌ಗಳನ್ನು ಮತ್ತು ಚಲನಚಿತ್ರ ವೀಕ್ಷಣೆ, ಪ್ರದರ್ಶನ, ಮಾಧ್ಯಮ ಹಾಗೂ ಸಮಕಾಲೀನ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಉಪನ್ಯಾಸಗಳನ್ನು ಸಂಯೋಜಿಸುವ Suchitra Cinema and Dramatic Arts and Cultural Academy ಗೆ ಇವರು ನಿರ್ವಾಹಕ ಟ್ರಸ್ಟಿ ಆಗಿದ್ದಾರೆ.

ಇವರು ಚಿತ್ರಕತೆ ಬರೆದು ನಿರ್ದೇಶಿಸಿದ ಮೊದಲ ಚಲನಚಿತ್ರ ‘Stumble’ ರಾಷ್ಟ್ರೀಯ ಶ್ರೇಷ್ಠ ಚಲನಚಿತ್ರ ಪುರಸ್ಕಾರಕ್ಕೆ (2003) ಪಾತ್ರವಾಗಿದೆ.

ಭಾರತದಲ್ಲಲ್ಲದೆ ವಿದೇಶಗಳಲ್ಲಿ ಕೂಡ ಅಂದರೆ, ಹಾರ್ವರ್ಡ್ ವಿಶ್ವವಿದ್ಯಾಲಯ, ಸ್ಯಾನ್‌ಫ್ರ್ರಾನ್ಸಿಸ್ಕೊ ಸ್ಟೇಟ್ ವಿಶ್ವವಿದ್ಯಾಲಯ ಹಾಗೂ ಲಂಡನ್, ಸಿಯೋಲ್, ಗೋಟೆನ್‌ಬರ್ಗ್ ಮತ್ತು ಬರ್ಲಿನ್‌ಗಳ ಅನೇಕ ಸಮಾವೇಶಗಳಲ್ಲಿ ಆಹ್ವಾನಿತರಾಗಿ ಅನೇಕ ಉಪನ್ಯಾಸಗಳನ್ನು ನೀಡಿದ್ದಾರೆ. ಸ್ವೀಡನ್ ಹಾಗೂ ಟರ್ಕಿಯ ಇಸ್ತಾನ್‌ಬುಲ್‌ನ ಚಲನಚಿತ್ರ ಕೋರ್ಸ್‌ಗಳಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ.

ಇವರು ನಿರ್ದೇಶಿಸಿದ ಪ್ರಮುಖ ನಾಟಕಗಳು ಯು.ಆರ್. ಅನಂತಮೂರ್ತಿಯವರ ‘ಅವಸ್ಥೆ’, ಈವ್ ಎನ್ಸ್ಸ್‌ಲರ್‌ಳ ‘ನೆಸೆಸ್ಸರಿ ಟಾರ್ಗೆಟ್ಸ್’, ಮೈಕೆಲ್ ಫ್ರೆನ್‌ನ ’ಕೋಪನ್ ಹೆಗನ್’, ಬರ್ಟೋಲ್ಟ್ ಬ್ರೆಕ್ಟ್‌ನ ‘ಗೆಲಿಲಿಯೋ’, ರಿಚರ್ಡ್ ಶಾನೆನ್‌ನ ‘ದಿ ಲೇಡಿ ಆಫ್ ಬರ್ಮಾ’, ಸ್ಟೀವ್‌ವಿಲ್ಮರ್‌ನ ‘ಸೀನ್ಸ್ ಫ್ರಮ್ ಸೋವಿಟೋ’, ಬಾದಲ್ ಸರ್ಕಾರ್ ಅವರ ‘ಬಾಕಿ ಇತಿಹಾಸ್’, ವಿಜಯತೆಂಡೂಲ್ಕರ್ ಅವರ ‘ಸದ್ದು…! ವಿಚಾರಣೆ ನಡೆಯುತ್ತಿದೆ’, ಸುರೇಂದ್ರನಾಥ್ ಕನ್ನಡಕ್ಕೆ ಅಳವಡಿಸಿದ ದಾರಿಯೋಫೋನ ‘ಆತಂಕವಾದಿಯ ಆಕಸ್ಮಿಕ ಸಾವು’, ಜಾನ್ ಮಿಲಿಂಗ್ಟನ್ ಸಿಂಗ್‌ನ ‘ಪ್ಲೇ ಬಾಯ್ ಆಫ್ ದಿ ವೆಸ್ಟರ್ನ್ ವರ್ಲ್ಡ್’, ಪಿರ್‍ಯಾಂಡಲೋನ್‌ನ ‘ಹೆನ್ರಿ ದ ಫೋರ್ತ್’, ಆರ್ತರ್ ಮಿಲ್ಲರ್‌ನ ‘ದ ಪ್ರೈಸ್’, ಇವರೇ ಕನ್ನಡಕ್ಕೆ ಅಳವಡಿಸಿದ ಟೆನಿಸ್ ವಿಲಿಯಮ್ಸ್‌ನ ‘ಗಾಜಿನ ಗೊಂಬೆಗಳು’, ಕೆ.ವಿ. ಅಕ್ಷರ ರಂಗರೂಪ ಮಾಡಿರುವ ಪೂರ್ಣಚಂದ್ರ ತೇಜಸ್ವಿಯವರ ‘ಚಿದಂಬರ ರಹಸ್ಯ’, ಬ್ರಯಾನ್ ಫ್ರಿಯಲ್‌ನ ‘ಟ್ರಾನ್ಸ್‌ಲೇಷನ್ಸ್’ ಮುಂತಾದವುಗಳು.

ತಮ್ಮ ರಂಗಭೂಮಿ ಹಾಗೂ ತೆರೆಯ ಮೇಲಿನ ಸೇವೆಗಳಿಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಂಗ್ಲೀಷ್ ಹಾಗೂ ಕನ್ನಡ ರಂಗಭೂಮಿಯ ತಮ್ಮ ಸೇವೆಗಾಗಿ ಇವರು ೨೦೧೨ ರ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ.

ರಂಗಾಯಣಕ್ಕೆ 2011 ರಲ್ಲಿ ರವೀಂದ್ರನಾಥ ಟ್ಯಾಗೋರರ ‘ಗೋರಾ’ ಕಾದಂಬರಿಯನ್ನು ರಂಗಭೂಮಿಗೆ ಅಳವಡಿಸಿ ಯಶಸ್ವಿಯಾಗಿ ನಿರ್ದೇಶಿಸಿದ್ದಾರೆ. ಪ್ರಸ್ತುತ ಯಶವಂತ ಚಿತ್ತಾಲರ ‘ಶಿಕಾರಿ’ ಕಾದಂಬರಿಗೆ ರಂಗರೂಪ ನೀಡಿ ರಂಗಾಯಣಕ್ಕೆ ನಿರ್ದೇಶಿದ್ದಾರೆ.

ನಾಟಕ ನಿರ್ದೇಶಕರ ನುಡಿ :

ಪ್ರತಿಷ್ಠೆಗಳ ಹೋಮ
ಚಿತ್ತಾಲರ ಕಾದಂಬರಿಯಲ್ಲಿ ಒಂದು ನಾಟಕವನ್ನು ಕಂಡುಕೊಳ್ಳುವುದು, ಅದಕ್ಕೆ ಒದಗಬಹುದಾದ ಅಂಶಗಳನ್ನು ಬಿಡಿ ಬಿಡಿಯಾಗಿ ಹಿಡಿದು ಪೋಣಿಸಿ ದೃಶ್ಯಗಳನ್ನು ಕಟ್ಟುವುದು ಕಷ್ಟದ ಕೆಲಸ. ನಾಟಕದ ಕಟ್ಟುವಿಕೆಗೆ ಮುಖ್ಯವಾಗಿ ಪ್ರೇರಕವಾಗಿರುವುದು ನಾಗಪ್ಪನಲ್ಲಿ ಹುಟ್ಟುವ ಪ್ರಶ್ನೆಗಳು. ಅವೆ ನಾಟಕಕ್ಕೆ ಹೇತು. ಪ್ರಾರಂಭದಲ್ಲೇ ಅವನು ಕೇಳಿಕೊಳ್ಳುತ್ತಾನೆ: ಲವಲವಿಕೆಯಿಂದ, ಆನಂದದಿಂದ, ಆಸ್ಥೆಯಿಂದ ಬದುಕುವುದು, ಬದುಕಬೇಕು ಅನ್ನಿಸುವುದು ಎಲ್ಲ ಜೀವಕ್ರಿಯೆಯ ಗುಣಧರ್ಮ ಅಲ್ಲವೇ?

ಒಂದು ಖಾಸಗಿ ಅಂತರ ರಾಷ್ಟ್ರೀಯ ಕಂಪನಿಯ ಉದ್ಯೋಗಿಯಾದ ನಾಗಪ್ಪ ತನ್ನ ಹುಟ್ಟಿನ ಹನೇಹಳ್ಳಿಯ ನೆನಪುಗಳನ್ನು ಇಟ್ಟುಕೊಂಡೇ ತನ್ನೆಲ್ಲ ಪ್ರತಿಭೆ, ಪ್ರತಿಷ್ಠೆಗಳನ್ನು ಮುಂಬೈಯಿನ ವಾತಾವರಣದಲ್ಲಿ ಅರ್ಥೈಸುವುದಾದರೂ ಹೇಗೆ? ಬದುಕಿನಲ್ಲಿ ಅರ್ಥ ಹುಡುಕುವುದೇ ತಪ್ಪೇನೋ. ಅರ್ಥ ಇದ್ದರಲ್ಲವೇ ಹುಡುಕುವುದು? ಅದು ನಾವು ಹುಟ್ಟಿಸಿಕೊಂಡದ್ದು. ಉತ್ಸಾಹವೇ ಇಲ್ಲದಿದ್ದಲ್ಲಿ ಸೃಜನಶೀಲತೆ ಹೇಗೆ ಸಾಧ್ಯ? ಸೃಷ್ಟಿಕಾರ್ಯ ಹೇಗೆ ಸಾಧ್ಯ? ಅರ್ಥ ಹೇಗೆ ಹುಟ್ಟಬೇಕು? ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಜೀವಿಸುವುದರಲ್ಲೇ ಅದಮ್ಯ ಉತ್ಸಾಹ ಇಟ್ಟುಕೊಂಡ ಉಳಿದ ಜೀವಕೋಟಿಗಳಲ್ಲಿ ಏಳದ ಪ್ರಶ್ನೆ ನನ್ನ ಬದುಕಿನಲ್ಲೇ ಏಳುವುದಕ್ಕೆ ಮುಖ್ಯ ಕಾರಣ… ಉತ್ಸಾಹದ ಅಭಾವವಾಗಿರಬಹುದು.

ಡಾರ್ವಿನ್‌ನ ವಿಕಾಸವಾದವನ್ನು ಮೆಚ್ಚುತ್ತಲೇ ನಾಗಪ್ಪನ ಆದರ್ಶವಾದ ಮಾನವನನ್ನು ಬೇರೆಲ್ಲಾ ಪ್ರಾಣಿವರ್ಗಗಳಿಂದ ಜೀವಶಕ್ತಿಗಳಿಂದ ಬೇರ್ಪಡಿಸುತ್ತದೆ. ಮಾನವ ಬರೀ ಪ್ರಾಣಿಯಲ್ಲ: ಬರೀ ಪ್ರವೃತ್ತಿಗಳ ಪಾತಳಿಯಲ್ಲೇ ಬದುಕುವವನೆ? ಮನುಷ್ಯ ಜೀವನದ ಎಳೆತಗಳು ಅವುಗಳಿಗಿಂತ ಪುರಾತನವಾದ ಪಶುಪ್ರವೃತ್ತಿಗಳಿಂದಲೇ ವಿಕಾಸ ಹೊಂದಿದ್ದರೂ, ಮಾನವಕೋಟಿಗೆ ವಿಶಿಷ್ಟವಾದ ಎಳೆತಗಳೂ ಈ ವಿಕಾಸಕ್ರಮದಲ್ಲಿ ಹುಟ್ಟಿಕೊಂಡಿಲ್ಲವೆ? ನಾಗಪ್ಪ ಕೇಳುತ್ತಾನೆ.

ಪ್ರೀತಿ, ಆದರ, ಕಾಳಜಿ…?
ಅವನ ವಿವೇಕ, ನ್ಯಾಯಬುದ್ಧಿ, ನೀತಿ?

ಆದರೆ ತಾನು ಗೌರವಿಸುವ, ತನ್ನ ಆತ್ಮಸಾಕ್ಷಿಯನ್ನು ಕೆಣಕುವ ಗಿಲ್ಬರ್ಟ್ ಡಿಸೋಜಾ ಈ ವಾದವನ್ನು ತಳ್ಳಿ ಹಾಕುತ್ತಾನೆ. Cut that silly sentimentality out. ನೀನು ಈ ಮಾನವ ಪ್ರಾಣಿಯ ಸಾಧ್ಯತೆಗಳ ಬಗ್ಗೆ ಅವಾಸ್ತವ ಕಲ್ಪನೆ ಮಾಡಿಕೊಂಡಿರುವೆ ನಾಗಪ್ಪ. ನಮ್ಮ ಎಲ್ಲಾ ವ್ಯವಹಾರಗಳ ಅಡಿಗೆ, ಸಾಮಾಜಿಕ ನಡವಳಿಕೆಯ ಕೆಳಗೆ ಕೆಲಸ ಮಾಡುವ ಶಕ್ತಿಯೊಂದೆ – ಸ್ವಾರ್ಥ! ಎನ್ನುವನು.

ಆದರೂ ನಾಗಪ್ಪನಲ್ಲಿ ಒಂದು ನಂಬಿಕೆ ಉಳಿದಿದೆ. ಮನುಷ್ಯತ್ವದ ಅಂತಿಮ ಲಕ್ಷಣವೊಂದೇ – ಅನ್ಯಾಯಕ್ಕೆ ಬಗ್ಗದೆ ಇರುವುದು: ಅದರ ವಿರುದ್ಧ ಹೋರಾಡುವುದು, ಸತ್ತರೂ ಅಡ್ಡಿಯಿಲ್ಲ. ಸೋಲನ್ನೊಪ್ಪಲಾರೆ ಎನ್ನುವುದು.

ತನ್ನನ್ನು ಅಂತಿಮವಾಗಿ ತನಿಖೆಗೆ ಒಳಪಡಿಸುವ ಕಂಪನಿ ಡೈರೆಕ್ಟರ್ ದಸ್ತೂರ್ ಇಂತಹ ಕಲ್ಪನೆಯನ್ನು ತಿರಸ್ಕರಿಸುವನು! ““I have a great regard for the artist in you Mr. Nagnath. But in matters that concern us most as professionals, you are too naïve and immature. Pardon me if I am blunt. The professional world is not a world of truth and values – not in any case of your imagination – but a world of self-interests… the prime mover of the organization, the motive force is the ambition of the individual to climb its tall ladder.”

ಪುರಂದರದಾಸರು ಹಾಡಿದ್ದುಂಟು –
ಉದ್ಯೋಗ, ವ್ಯವಹಾರ, ನೃಪಸೇವೆ ಕುಶಲಗತಿ
ಕ್ಷುದ್ರತನ, ಕಳವು ಪರದ್ರೋಹದಿಂದ
ಬುದ್ಧಿಯಿಂದಲೇ ಗಳಿಸಿಟ್ಟಿದ್ದ ಅರ್ಥವನು
ಸದ್ಯದಲ್ಲೇ ಆರು ಉಂಬುವರು ಪೇಳೋ ಮನುಜ?
ಕುಮಟ, ಧಾರವಾಡದಿಂದ ಪಡೆದ ವಿದ್ಯಾಭ್ಯಾಸ, ಅಮೇರಿಕಾದಲ್ಲಿ ವಿಕಾಸ ಹೊಂದಿ ವಿಜ್ಞಾನ ಮತ್ತು ಸಾಹಿತ್ಯ, ಎರಡೂ ಕ್ಷೇತ್ರಗಳಲ್ಲಿ ಚಿತ್ತಾಲರ ಶ್ರೇಯಸ್ಸನ್ನು ವೃದ್ಧಿಸಿತ್ತು. ನಾವು ಈಗಷ್ಟೆ ಅಸ್ಪಷ್ಟವಾಗಿ ಗ್ರಹಿಸುತ್ತಿರುವ multinational corporate ಸಂಸ್ಕೃತಿಯ ಒಳನೋಟಗಳನ್ನು ೧೯೭೦ರ ದಶಕದಲ್ಲೇ ’ಶಿಕಾರಿ’ಯಲ್ಲಿ ಹಿಡಿದಿಟ್ಟರು. ಕಾದಂಬರಿಯಲ್ಲಿ ಇರುವುದೆಲ್ಲವೂ ನಾಟಕದಲ್ಲಿ ಇಲ್ಲ. ಇರುವುದು ನಾಟಕಕ್ಕೆ ಸಾಧ್ಯವೂ ಅಲ್ಲ. ಸಾಧುವೂ ಅಲ್ಲ. ಚಿತ್ತಾಲರಲ್ಲಿ, ಅಂದರೆ ನಾಗಪ್ಪನ ಪ್ರಜ್ಞೆಯಲ್ಲಿ, ಉದ್ಭವಿಸುವ ಆಸ್ಥೆ, ಅಸ್ಮಿತೆ, ಅರ್ಥ ಹುಡುಕಾಟದ ಗೊಂದಲಗಳು ನಮ್ಮನ್ನು ಇಂದೂ ಕಾಡಬಹುದು ಎಂದು ನಂಬಿ ಈ ಪ್ರಯೋಗ ನಿಮ್ಮ ಮುಂದೆ ಅರ್ಪಿಸುತ್ತೇವೆ. ಇದು ಚಿತ್ತಾಲರ ನೆನಪಿಗೆ ನಾವು ಅರ್ಪಿಸುವ ನಮನ ಕೂಡ.
– ಪ್ರಕಾಶ್ ಬೆಳವಾಡಿ

ಆಧುನಿಕ ಜಗದ ಬೇಟೆ ಮತ್ತು ಸಾಮಾನ್ಯ ಬದುಕಿನ ತಲ್ಲಣ

ಸೀಳುನಾಯಿಗಳ ಪಡೆಯೊಂದು ಮರಿ ಮೊಲವೊಂದನ್ನು ಬೆನ್ನಟ್ಟಿದೆ. ಹುಲ್ಲು ಮೇಯುತ್ತಿರುವ ಮರಿ ಗಾಬರಿಯಿಂದ “ಇದೇನಾಗುತ್ತಿದೆ..? ಯಾಕೆ ಹೀಗೆ ಸುತ್ತಲಿನ ಅಪ್ಪ, ಅಮ್ಮ, ಅಣ್ಣ, ಅಕ್ಕ ಓಡುತ್ತಿದ್ದಾರೆ..? ನಾನೂ ಬರುತ್ತೇನೆ.. ನಿಲ್ಲಿ.. ಅಮ್ಮಾ.., ಅಪ್ಪಾ.., ಅಕ್ಕಾ.., ಅಣ್ಣಾ..” ಎಂದು ಕೂಗತೊಡಗುತ್ತದೆ. ಸುತ್ತಲಿಂದ ಎಲ್ಲ ದಿಕ್ಕುಗಳಿಂದ ದಾಳಿಯಿಕ್ಕುವ ನಾಯಿಗಳಿಂದ ತಪ್ಪಿಸಿಕೊಳ್ಳಲೋಸುಗ ಮರಿ ಮನ ಬಂದತ್ತ ಓಡತೊಡಗುತ್ತದೆ. ಇದೆಲ್ಲಾ ಏನು..? ಏನು ನಡೆಯುತ್ತಿದೆ..? ಯಾಕೆ..? ಒಂದೂ ತಿಳಿಯುತ್ತಿಲ್ಲ. ಗಂಟಲಿನಿಂದ ತಿಳಿವು ಮೀರಿ ಉಕ್ಕಿ ಬರುತ್ತಿರುವ ಆಕ್ರಂದನ. ಓಡಿಸಿ, ಓಡಿಸಿ ಓಡುವ ದಣಿವಿನಿಂದಲೇ ಕೊಲ್ಲುವ ಶೀತಲ ಕ್ರೌರ್ಯದ ನಾಯಿಗಳ ಮುಖದಲ್ಲಿ ಮಂದಹಾಸ. ಕೊನೆಗೊಮ್ಮೆ “ಸರ್ವೈವಲ್ ಆಫ಼್ ದಿ ಫಿಟ್ಟೆಸ್ಟ್”.

ಇದು ಕಾಡಿನ ಕತೆ. ಈ ಕತೆ ನಾಡಿಗೆ ವರ್ಗವಾದರೆ..! ‘ಕಾಂಕ್ರೀಟ್’ ಕಾಡಾಗಿರುವ ನಾಗರಿಕತೆಗೆ ನಕಲಾದರೆ..! ಮೊಲವೇ ಇದ್ದಕ್ಕಿದ್ದಂತೆ ನಾಯಿಯಂತಾಗಿ ಮರಿ ಮೊಲವೊಂದನ್ನು ಬೆನ್ನಟ್ಟಿ ಕೊಲ್ಲುವಂತಾದರೆ..! ಆಧುನಿಕ ಬದುಕು ಸೃಷ್ಟಿಸಿದ ಸಂಕೀರ್ಣ ಜಗತ್ತು ತಲ್ಲಣ ಹುಟ್ಟಿಸುವ ಗೊಂಡಾರಣ್ಯದಂತಾದರೆ..! ಮನುಷ್ಯರೇ ನಾಯಿಗಳಂತಾಗಿ ಇನ್ನೋರ್ವ ಮನುಷ್ಯನ ಮೇಲೆ ಎರಗಿದರೆ…! ‘ಕರಿಯರ್’, ‘ಮೇಲೇರುವುದು’ ಎನ್ನುವ ಮಾಯಾಮೃಗದ ಹಿಂದೆ ಬೆನ್ನಟ್ಟಿ ಪಕ್ಕದ ಜೀವವನ್ನೂ ನೋಡದಷ್ಟು, ಅದರ ಆತಂಕಗಳನ್ನೂ ಗಮನಿಸದೇ ಹೋಗುವಂತಾದರೆ..! ಆಸರೆಗಾಗಿ ಹಗ್ಗವೆಂದು ಹಿಡಿಯಲು ಹೋದದ್ದೆಲ್ಲಾ ಹಾಲಾಹಲ ಉಗುಳುವ ಕಾರ್ಕೋಟಕ ಸರ್ಪವಾದರೆ..! ತುತ್ತು ನೀಡುವ ಕೈಯೊಂದು ಅದೇ ತುತ್ತಿನಲ್ಲಿ ವಿಷ ಬೆರೆಸಿದರೆ..! ಪ್ರೀತಿ ತೋರುವ ಕೈಯೊಂದು ಕತ್ತು ಹಿಚುಕಲು ಬಂದರೆ..! ತಾಯ ಮೊಲೆ ಹಾಲು ನಂಜಾಗಿ ಕೊಲ್ಲುವುದಾದರೆ..! ಈ ಇಂಥ ಕಾರಣಗಳಿಂದಾಗಿ ಭೂತ, ವರ್ತಮಾನ ಹಾಗೂ ಭವಿಷ್ಯತ್ಕಾಲಗಳೆಲ್ಲಾ ಏಕಕಾಲದಲ್ಲಿ ಆತಂಕ ಹುಟ್ಟಿಸುತ್ತಾ ಭೂತಗಳಾಗಿ ಕಾಡತೊಡಗಿದರೆ..! ಯಾರಿಗೆ ದೂರುವುದು..! ಏನು ಮಾಡುವುದು..! ಎಲ್ಲಿಗೆ ಹೋಗುವುದು..!

ಇದು ಯಶವಂತ ಚಿತ್ತಾಲರ ‘ಶಿಕಾರಿ’ ಕಾದಂಬರಿಯ ಕತೆ. ಕಾರ್ಪೋರೇಟ್ ಬದುಕಿನ ಗೊಂಡಾರಣ್ಯದ ಚಕ್ರವ್ಯೂಹದಲ್ಲಿ ನಮ್ಮನ್ನು ಸುತ್ತಿಸುವ ಚಿತ್ತಾಲರು ಬಾಲ್ಯದ ಕರಾಳ ನೆನಪುಗಳನ್ನು ಹೊತ್ತ, ಪ್ರಾಮಾಣಿಕವಾಗಿ ಬದುಕಲೆತ್ನಿಸುವ ನಾಗಪ್ಪನ ತಲ್ಲಣಗಳನ್ನು ನಮ್ಮ ತಲ್ಲಣಗಳನ್ನಾಗಿ ಪರಿವರ್ತಿಸುವಲ್ಲಿ ಗೆಲ್ಲುವುದಷ್ಟೇ ಅಲ್ಲ, ಸಾಮಾನ್ಯ ಬದುಕಿನ ಮುಗ್ಧ,

ನಿರಾಳ ಸರಳತೆಯನ್ನು ಧಿಕ್ಕರಿಸಿದ, ಪಕ್ಕದ ಜೀವವನ್ನು ತುಳಿಯುವುದನ್ನೇ ಬದುಕಿನ ಪರಮ ಧರ್ಮವನ್ನಾಗಿ ಮಾಡಿಕೊಂಡ ‘ಆಧುನಿಕ’ ಜಗತ್ತಿನ ಪಾಶವೀಯ ಮುಖಕ್ಕೆ ಕನ್ನಡಿ ಹಿಡಿಯುತ್ತಾರೆ.

“ಏನಿಲ್ಲದಿದ್ದರೂ ಬದುಕಬಹುದೇನೋ.. ಆದರೆ ಪ್ರೀತಿಯಿಲ್ಲದೇ..? ಗೆಳೆತನವಿಲ್ಲದೇ..? ಮಾನವೀಯ ಅಂತಃಕರಣವಿಲ್ಲದೇ..? ಸಹಾನುಭೂತಿ ಇಲ್ಲದೆ ಬದುಕಲು ಸಾಧ್ಯವೇ..? ಇವೆಲ್ಲ ಇಲ್ಲವಾದರೆ ಬದುಕಬೇಕಾದರೂ ಯಾಕೆ..?” ಚಿತ್ತಾಲರು ಇಂತಹ ಪ್ರಶ್ನೆಗಳನ್ನು ಕೇಳಿ, ಸಂವೇದನಾರಹಿತ ಸ್ವಕೇಂದ್ರಿತ ಹುಸಿ ಅವಸರದ ಮನಸ್ಸುಗಳನ್ನು ಬೆಚ್ಚಿಸುತ್ತಾರೆ. ತನ್ನೆಲ್ಲ ಕುರೂಪಗಳನ್ನು, ದೌರ್ಬಲ್ಯಗಳನ್ನು ಒಪ್ಪಿಕೊಂಡು ಅಪ್ಪಿಕೊಳ್ಳುವ ತಾಯಿ ಜೀವಕ್ಕಾಗಿ ಕಾಯುವ ತಳಮಳದ ಜೀವವೊಂದರ ಸಂಕೇತವಾಗುತ್ತಾನೆ ನಾಗಪ್ಪ.

“ಈ ದಿನವನ್ನು ಎಲ್ಲ ಪ್ರಾಮಾಣಿಕ ಅರ್ಥಗಳಲ್ಲೂ ಸಾರ್ಥಕವಾಗಿ, ಸದ್ಬಳಕೆ ಮಾಡಿಕೊಳ್ಳದಿದ್ದರೆ ಎಷ್ಟೊಂದು ನಾಳೆಗಳಿದ್ದೇನು ಪ್ರಯೋಜನ..?” ಎನ್ನುವ ನಿರಂತರವಾಗಿ ಮನುಷ್ಯ ಎನ್ನುವ ಪ್ರಾಣಿಯನ್ನು ಕಾಡುವ ಪ್ರಶ್ನೆಯನ್ನು, ಆಗಾಗ ಮರೆಯುವ ಮನುಷ್ಯ ಪ್ರಾಣಿಗೆ ‘ಶಿಕಾರಿ’ಯ ಮೂಲಕ ಚಿತ್ತಾಲರು ಮತ್ತೆ ಮತ್ತೆ ನೆನಪಿಸುತ್ತಾ ಎದುರಿಗಿಡುತ್ತಾರೆ.

ಇಂಥ ಕನ್ನಡದ ಶ್ರೇಷ್ಠ ಹಾಗೂ ಸಂಕೀರ್ಣ ಕಾದಂಬರಿಯೊಂದನ್ನು ರಂಗಕ್ಕೆ ತರುವುದು ನಿಜಕ್ಕೂ ಸವಾಲಿನ ಕೆಲಸ. ಸಾಹಿತ್ಯಾಭಿವ್ಯಕ್ತಿ ಹಾಗೂ ರಂಗಾಭಿವ್ಯಕ್ತಿಗಳು ಪರಸ್ಪರ ಸಂಧಿಸಿ, ಸಂಘರ್ಷಿಸಿ ಹೊಸದೊಂದು ಹುಟ್ಟುವ ಪರಿ ಸೋಜಿಗವಾದುದು. ಈ ಸವಾಲನ್ನು ಕನ್ನಡದ ಶ್ರೇಷ್ಠ ಹಾಗೂ ಸೂಕ್ಷ್ಮ ಸಂವೇದನೆಯ ನಿರ್ದೇಶಕರಾದ ಶ್ರೀ ಪ್ರಕಾಶ್ ಬೆಳವಾಡಿಯವರ ಜೊತೆ ಎದುರಿಸಿದ ಈ ಹಾದಿಯ ಪಯಣವೇ ಒಂದು ಅದ್ಭುತ ಅನುಭವ. ಇಂಥ ಸವಾಲನ್ನು ಸ್ವೀಕರಿಸಿದಾಗಲೆಲ್ಲಾ ದೊಡ್ಡ ಕೃತಿಯ ದೊಡ್ಡ ಶಕ್ತಿಯ ಸಣ್ಣ ಕಂಪನವೊಂದು ನಮ್ಮಲ್ಲೂ ಪ್ರವಹಿಸುವ ಸಂಭ್ರಮ, ಸಡಗರ ನಮ್ಮದು. ಇಂಥ ದೊಡ್ಡದರ ಜೊತೆ ಸೆಣೆಸುತ್ತಾ, ನಿಮಗಿದನ್ನು ಅರ್ಪಿಸಿ ಹಿಗ್ಗುವ, ಹಿಗ್ಗಿಸುವ ಹಾಗೂ ಹಿಗ್ಗಿಸಿಕೊಳ್ಳುವ ಆಸೆ ನಮ್ಮದು.

– ಪ್ರಶಾಂತ್ ಹಿರೇಮಠ

 

ರಂಗದ ಮೇಲೆ
ಹುಲುಗಪ್ಪ ಕಟ್ಟಿಮನಿ : ನಾಗಪ್ಪ
ನಂದಿನಿ ಕೆ.ಆರ್. : ಸಾಕ್ಷಿ
ಜಗದೀಶ ಮನವಾರ್ತೆ : ಗಿಲ್ಬರ್ಟ್ ಡಿಸೋಜ಼, ದಸ್ತೂರ್
ಕೃಷ್ಣಕುಮಾರ್ ನಾರ್ಣಕಜೆ : ಶ್ರೀನಿವಾಸ
ಪ್ರಶಾಂತ್ ಹಿರೇಮಠ : ಫಿರೋಜ಼್ ಬಂದೂಕ್‌ವಾಲಾ
ಕೃಷ್ಣಪ್ರಸಾದ್ ಎಂ.ಸಿ. : ನೌಶೀರ್ ಕಂಬಾಟ
ರಾಮು ಎಸ್. : ಜಲಾಲ್, ಪದ್ದಕ್ಕ, ಸೀತಾರಾಮ
ವಿನಾಯಕ ಭಟ್ ಹಾಸಣಗಿ : ಅರ್ಜುನ್‌ರಾವ್, ಪಟೇಲ್
ಮಹದೇವ್ : ರೆಡ್ಡಿ, ನಾಯಕ, ಧೋಂಡೋಬಾ ಶಿಂಪಿ
ಗೀತಾ. ಎಂ.ಎಸ್. : ರೀನಾ, ಥ್ರೀಟಿ, ಅರ್ಜುನ್‌ರಾವ್ ತಾಯಿ
ಶಶಿಕಲಾ ಬಿ.ಎನ್. : ಚೇತನ, ಡಯಾನಾ, ಜಾನಕಿ
ಪ್ರಮೀಳಾ ಬೆಂಗ್ರೆ : ಶಾರದೆ, ಮೇರಿ
ಮೈಮ್ ರಮೇಶ್ : ಪ್ರಭಾಕರ, ವೇಟರ್
ನೂರ್ ಅಹಮದ್ ಶೇಖ್ : ಹೈದರ್, ದೋಶಿ
ವನಿತಾ ಎಸ್.ಎಸ್. : ಜ಼ರೀನ್, ವತ್ಸಲಾ, ಗುಂಪು
ಲಕ್ಷ್ಮಿ ವಿ. : ರಾಣಿಯ ಗೆಳತಿ, ಗುಂಪು
ಹೊಯ್ಸಳ : ಕೃಷ್ಣ, ಗುಂಪು
ಪ್ರದೀಪ್ ಬಿ.ಎಮ್. : ಗುಂಪು
ಬೋಪಣ್ಣ ಎಮ್.ಹೆಚ್. : ಗುಂಪು

ರಂಗದ ಹಿಂದೆ
ರಂಗಸಜ್ಜಿಕೆ : ಜನಾರ್ಧನ, ನಿತಿನ್ ಕೊಡಿಯಾಲ್ ಬೈಲ್, ವಿನಾಯಕಭಟ್ ಹಾಸಣಗಿ,
ಶಶಿಕಲಾ ಬಿ.ಎನ್, ನೂರ್ ಅಹಮದ್ ಶೇಖ್,
ವಸ್ತ್ರಾಲಂಕಾರ : ಹುಲುಗಪ್ಪ ಕಟ್ಟಿಮನಿ, ಜಗದೀಶ್ ಮನವಾರ್ತೆ, ಮಹದೇವ,
ಪರಿಕರ : ಪ್ರಮೀಳಾ ಬೆಂಗ್ರೆ, ಕೃಷ್ಣಕುಮಾರ್ ನಾರ್ಣಕಜೆ, ಮೈಮ್ ರಮೇಶ್
ಪ್ರಸಾದನ : ನಂದಿನಿ. ಕೆ.ಆರ್.
ಪ್ರಚಾರ : ಗೀತಾ ಎಂ.ಎಸ್., ಪ್ರಶಾಂತ್ ಹಿರೇಮಠ
ಸಂಗೀತ : ಪ್ರಶಾಂತ್ ಹಿರೇಮಠ, ಧನಂಜಯ ಆರ್.ಸಿ.
ರಂಗ ನಿರ್ವಹಣೆ : ರಾಮು ಎಸ್. ಮತ್ತು ಎಂ.ಸಿ. ಕೃಷ್ಣಪ್ರಸಾದ್