ಡಾ. ಎಸ್.ಎಲ್.ಭೈರಪ್ಪನವರ ಮೇರು ಕಾದಂಬರಿ ಪರ್ವ ದ ರಂಗರೂಪ ಪ್ರದರ್ಶನ.

ರಂಗಾಯಣದಿಂದ ‘ಪರ್ವ’ ನನ್ನ ಕನಸು

ಎಪ್ಪತ್ತರ ದಶಕದಲ್ಲಿ ಡಾ. ಎಸ್.ಎಲ್. ಭೈರಪ್ಪನವರ ಕಾದಂಬರಿಗಳನ್ನ ಓದಿಯೇ ಅವರ ಅಭಿಮಾನಿಗಳಾದವರು, ಆರಾಧಕರಾದವರು ಅದೆಷ್ಟೋ ವಿದ್ಯಾರ್ಥಿ ಸಮೂಹ. ಆಗ ಅದೊಂದು ಟ್ರೆಂಡ್ ಆಗಿ ಬೆಳೆಯಿತು. ಕಾದಂಬರಿಯೊಂದು ಮುದ್ರಣವಾಗಿ, ಅದು ಬಿಡುಗಡೆಯಾದ ದಿನವೇ ಎಲ್ಲಾ ಪ್ರತಿಗಳು ಮಾರಾಟವಾಗುವುದು ತಮಾಷೆಯ ಮಾತಲ್ಲ. ಒಂದೇ ಕೃತಿ ೨೦ಕ್ಕೂ ಹೆಚ್ಚು ಮುದ್ರಣ ಕಾಣುವುದು ಭಾರತೀಯ ಸಾಹಿತ್ಯ ಇತಿಹಾಸದಲ್ಲಿ ಅಪರೂಪ. ಇದಕ್ಕಾಗಿಯೇ ಅವರು ರಾಷ್ಟ್ರೋಜ. ಹೀಗೆ ಕರೆಸಿಕೊಳ್ಳುವುದು, ಪದ್ಮಶ್ರೀ ಎಂಬ ಬಿರುದು ಲಗತ್ತಿಸಿಕೊಳ್ಳುವುದು ಭೈರಪ್ಪನವರಿಗೆ ಇಷ್ಟವಿಲ್ಲ ಆ ಮಾತು ಬೇರೆ.

ಇಂತಹ ಶ್ರೇಷ್ಠ ಕಾದಂಬರಿಕಾರ ೪೨ ವರ್ಷಗಳ ಹಿಂದೆ ಬರೆದ ಕೃತಿ ‘ಪರ್ವ’. ‘ಪರ್ವ’ ಭೈರಪ್ಪನವರ ಕಾದಂಬರಿಗಳಲ್ಲೇ ಅದ್ಭುತವಾದ ಒಂದು ಕಲಾಕೃತಿ. ನನಗೆ ಹೆಚ್ಚು ಪ್ರೀತಿ ಪಾತ್ರವಾದ ಕೃತಿ ‘ಪರ್ವ’- ಇದು ಭೈರಪ್ಪನವರ ಮಾತು. ಮನುಷ್ಯತ್ವ, ವಾಸ್ತವತೆ, ಮಾನವ ಸ್ವಭಾವದ ನಿಕಟ ಪರಿಚಯ ಮಾಡಿಕೊಡುವ ಸಂಯಮ ಹಾಗೂ ಅಲಿಪ್ತತೆಗಳನ್ನು ಮೀರಿ ನಿಲ್ಲುವ ವರ್ತಮಾನದ ಒಂದು ಶ್ರೇಷ್ಠ ಕಲಾಕೃತಿ. ವಸ್ತು, ನಿರೂಪಣಾ ಕೌಶಲ, ತಂತ್ರ ಎಲ್ಲದರಲ್ಲೂ ಈ ಕೃತಿ ಅನನ್ಯ.

ಮಹಾಭಾರತ ಒಂದು ದೊಡ್ಡ ದೊಡ್ಡ ಅಲೆಗಳ ಸಮುದ್ರ. ಹೀಗಾಗಿ ಇದು ಎಲ್ಲಾ ಪಂಥದವರಿಗೆ, ಸಿದ್ಧಾಂತವಾದಿಗಳಿಗೆ ಕುತೂಹಲ, ನಂಬಿಕೆ, ಅಪನಂಬಿಕೆಗಳ ಪ್ರವಾಹ. ಆದರೆ ವ್ಯಾಸ ಮಹರ್ಷಿಗಳ ಮಹಾಭಾರತದ ಅಲೌಕಿಕ ಅಂಶಗಳನ್ನು ಪಕ್ಕಕ್ಕೆ ಸರಿಸಿ ಸಾಮಾನ್ಯರನ್ನು ಅಸಾಮಾನ್ಯರನ್ನು ಒಂದೇ ದೃಷ್ಟಿಯಿಂದ ನೋಡಿ ಆದರ್ಶ ವಾಸ್ತವತೆಗಳನ್ನು ಮೇಳೈಸಿ, ಯಾವುದೋ ಕಾಲದ ವ್ಯಕ್ತಿಗಳು, ಘಟನೆಗಳು ನಮಗೆ ತೀರ ಹತ್ತಿರದವರಾಗಿ ಕಾಣಿಸಿಕೊಳ್ಳುವ ವಿಶೇಷತೆ ಈ ಕಾದಂಬರಿಯಲ್ಲಿ ವಿಫುಲವಾಗಿ ಇರುವುದನ್ನು ನಾನು ಗಮನಿಸಿದೆ. ಇದು ರಂಗಭೂಮಿಗೆ ತೀರ ಆಪ್ತವಾಗಬಲ್ಲದು ಎಂದು ತೀವ್ರವಾಗಿ ಅನಿಸಿತು. ಕಲಾವಿದರ ನಟನೆಗೆ ಅವಕಾಶವಿರುವ, ಪ್ರೇಕ್ಷಕರಿಗೆ ಮುದ ಕೊಡುವ ವಸ್ತುವನ್ನು ರಂಗಭೂಮಿ ಬಯಸುತ್ತದೆ. ಹೀಗೆ ‘ಪರ್ವ’ ಆಯ್ಕೆ ನಮ್ಮ ಖಚಿತ ನಿರ್ಧಾರ.

‘ಪರ್ವ’ ಎಲ್ಲ ಮಿಥ್ಯಗಳನ್ನು ವಾಸ್ತವಗೊಳಿಸುತ್ತಾ ಹೋಗುತ್ತದೆ. ಕಾದಂಬರಿಯಲ್ಲಿ ಯಾವ ಧ್ವನಿಯನ್ನು ಭೈರಪ್ಪನವರು ಇಟ್ಟಿದ್ದರೋ ಅದೇ ಧ್ವನಿಯನ್ನು ಪ್ರಕಾಶ್ ಬೆಳವಾಡಿ ರಂಗಪಠ್ಯವನ್ನಾಗಿಸಿ ರಂಗ ಪ್ರಸ್ತುತಿಯಲ್ಲಿ ಪರಿಣಾಮಕಾರಿಯಾಗಿ ಹೊರಡಿಸಿದ್ದಾರೆಂಬ ದೃಢ ನಂಬಿಕೆ ನನ್ನದು.

ಮಹಾಭಾರತದ ಶಲ್ಯ, ಕೃಷ್ಣ, ಕುಂತಿ, ದ್ರೌಪದಿ, ಕರ್ಣ, ಭೀಮ, ಅರ್ಜುನ, ದ್ರೋಣ ಈ ಎಲ್ಲಾ ಪಾತ್ರಗಳು ಮಹಾಭಾರತವನ್ನು ಓದಿಕೊಂಡಿರುವ, ನಂಬಿಕೊಂಡಿರುವ ಜನರ ನಿರೀಕ್ಷೆಗಳನ್ನು ಹುಸಿಗೊಳಿಸುತ್ತವೆ, ತಲ್ಲಣಗೊಳಿಸುತ್ತವೆ. ನಿಯೋಗ ಧರ್ಮ ಸಮ್ಮತವಲ್ಲ ಎಂದು ಆರ್ಭಟಿಸುವ ಧುರ್ಯೋಧನನಿಗೆ ನಿಯೋಗವಾಗದೆ ನಾಳೆ ಎಂಬುದು ಇಲ್ಲ’ ಎಂಬ ಕಾದಂಬರಿಯ ಸಂದೇಶವನ್ನು ಜೀವಂತ ಪಾತ್ರಗಳು ರಂಗದ ಮೇಲೆ ಆರ್ಭಟಿಸಿ, ನಟಿಸಿದಾಗ ಯಾವ ಅನುಭವ ಸಿಗಬಲ್ಲದು ಎನ್ನುವುದನ್ನು ಪ್ರಕಾಶ ಬೆಳವಾಡಿ ಸವಾಲಾಗಿ ಸ್ವೀಕರಿಸಿ ಸಮರ್ಥವಾಗಿ ಧ್ವನಿಸಿದ್ದಾರೆ.

ಹೆಣ್ಣು ಕೇವಲ ಕ್ಷೇತ್ರ ಮಾತ್ರ. ಅವಳಿಗೆ ಆಯ್ಕೆಗಳೇ ಇಲ್ಲ. ಅವಳ ಬಯಕೆಗಳೇನು?, ಕನಸುಗಳೇನು? ಕೇಳುವವರಿಲ್ಲ. ರಾಣಿಯೊಂದಿಗೆ ಅದೆಷ್ಟೋ ದಾಸಿಯರು ಬಂದಾಗ ಅವರೆಲ್ಲವನ್ನು ಧೃತರಾಷ್ಟ್ರ ಮಹಾರಾಜ ಭೋಗಿಸುತ್ತಾನೆ. ಅವರೆಲ್ಲರಿಗೂ ಮಕ್ಕಳಾಗುತ್ತವೆ. ನಂತರ ಯಾವ ದಾಸಿ?, ಯಾರ ಮಕ್ಕಳು? ಪಾಂಡವರು ನಿಯೋಗಕ್ಕೆ ಹುಟ್ಟಿದವರು. ಅವರು ಕುರುವಂಶದವರಲ್ಲ ಎಂದ ದುರ್ಯೋಧನನ ಒಂದೇ ಮಾತಿನಿಂದ ಕುರುಕ್ಷೇತ್ರ ಯುದ್ಧ ನಡೆದು ಹೋಗುತ್ತದೆ. ‘ನಿಯೋಗ’ ನಮ್ಮ ರಂಗಪ್ರಸ್ತುತಿಯಲ್ಲಿ ದೊಡ್ಡ ಧ್ವನಿಯಾಗಿ ಧ್ವನಿಸುತ್ತದೆ.

ಕಾದಂಬರಿಯೊಂದು ನೀಡಿರುವ ಸೂಕ್ಷ್ಮತೆಯನ್ನು ಅಷ್ಟೆ ಸಮರ್ಥವಾಗಿ ಗ್ರಹಿಸುವುದು ರಂಗಭೂಮಿಗಿರುವ ಸವಾಲು. ಈ ರಂಗಪ್ರಸ್ತುತಿಯಲ್ಲಿ ಧರ್ಮರಾಯ ನರಪೇತಲ. ‘ಅಯ್ಯೋ ಕೌರವರು ನನ್ನನ್ನು ಬಂಧಿಸಿ, ಮತ್ತೆ ನನ್ನನ್ನು ಜೂಜಾಡಲು ಬಾ ಎಂದು ಕರೆದರೆ ಏನು ಮಾಡಲಿ’ ಎನ್ನುವ ಧರ್ಮನಿಸ್ತೇಜ. ಕುಂತಿ, ಗಾಂಧಾರಿ, ದ್ರೌಪದಿ ಈ ಪಾತ್ರಗಳು ಸ್ವಗತದ ಮೂಲಕ ಕಟ್ಟಿಕೊಡುವ ಚಿತ್ರಣ ಕಾದಂಬರಿಯಲ್ಲಿ ಓದುಗರಿಗೆ ಸಿಗುವ ಅನುಭವಕ್ಕಿಂತ ರಂಗಪ್ರಸ್ತುತಿಯಲ್ಲಿ ನಟ-ನಟಿ ರಂಗದ ಮೇಲೆ ಬಂದು ನಮ್ಮೆದುರಿಗೆ ನಟಿಸಿ ಹೇಳುವಾಗ ಆಗುವ ಅನುಭವ ಬೇರೆಯೇ ಆಗಿರುತ್ತದೆ. ಕವಿ ಬೇಂದ್ರೆಯವರ ‘ಇಳಿದು ಬಾ ತಾಯಿ ಇಳಿದು ಬಾ’ ಗೀತೆ ಓದಿನಲ್ಲಿ ಸಿಗುವ ಅನುಭವ, ಹಾಡು ಕೇಳಿದಾಗ ಆಗುವ ಅನುಭವದಂತೆ.

ಅಶ್ವತ್ಥಾಮ ದ್ರೌಪದಿಯ ಮಕ್ಕಳನ್ನು ಕೊಂದಾಗ ಪಾಂಡವರು ಮೂಕರಾಗಿರುತ್ತಾರೆ. ಆದರೆ ದ್ರೌಪದಿ ಸಿಡಿಯುತ್ತಾಳೆ. ಮಕ್ಕಳನ್ನು ಕಳೆದುಕೊಂಡ ನೋವಿಗಲ್ಲ. ಸುಭದ್ರೆಗೆ, ಸಾಲಕಟಂಕಟಿಗೆ ಸಾಂತ್ವನ ಹೇಳಿದ ನೀವು ನನಗೆ? ಛೀ! ಸತ್ತವು ಕೇವಲ ದ್ರೌಪದಿ ಮಕ್ಕಳೇನೂ? ಹೆಣ್ಣನ್ನು ಹಣ್ಣಿನಂತೆ ಪಾಲು ಮಾಡಿಕೊಂಡವರಿಗೆ ಹೆಣ್ಣಿನ ನೋವು ಅರ್ಥವಾಗುವುದಿಲ್ಲ. ಇಂತಹ ಮಾತುಗಳು ರಂಗದ ಮೇಲೆ ಬಂದಾಗ ರೋಮಾಂಚನವಾಗುತ್ತದೆ. ಕುಂತಿಯ ಸ್ವಗತ ರಂಗಭೂಮಿಗಿರುವ ಶಕ್ತಿಯನ್ನು ತೋರಿಸಿಕೊಡುತ್ತದೆ. “ಮೊದಲ ರಾತ್ರಿ ಅನಿಸಿತ್ತು, ತಿಳಿಯಲಿಲ್ಲ. ಎದೆ, ತೋಳುಗಳು, ಗಟ್ಟಿಯಾದ ಬಿಗಿದಪ್ಪು, ನಡು ವಯಸ್ಸಿನ ಎದೆಯ ತುಂಬೆಲ್ಲಾ ಬೆವರು ಕೂದಲಿನ ಮೃದು ತೋಳಿನ ಋಷಿಯ ಮಾಗು ಮೃದುವಲ್ಲ. ಕುಂತಿ, ನಿನ್ನ ಮುಖ ಚಂದ ಎಂದು ಉಬ್ಬಿಸಿ ಉಬ್ಬಿಸಿ ಮನ ತಣಿಸುವ ಮಾತುಗಳೆಷ್ಟು, ಆದರೆ ನಾನು ಬಯಸಿದ್ದು, ನನಗೆ ಗೊತ್ತಿದ್ದದ್ದು ಆಗಲಿಲ್ಲ. ಸ್ವಲ್ಪ ಹೊತ್ತಿಗೆ ಮುಖ ತಿರುಗಿಸಿ ಮಲಗಿ ಬಿಟ್ಟನಲ್ಲ ಸೋತ ಎತ್ತಿನಂತೆ. ನಿದ್ರೆ ಬರುತ್ತಿದೆ ಎಂದು ಅತ್ತ ತಿರುಗಿ ಮುಖದಲ್ಲಿ ಚಿಂತೆ ತುಂಬಿಕೊಂಡು. ಆದರೆ ನನಗೆ ಹೇಗೆ ನಿದ್ದೆ ಬರಬೇಕು. ಆಸೆ, ನಾಚಿಕೆ ಪಟ್ಟಮಹಿಷಿಯಾಗುವ ಕನಸು”.

“ಒಂದು ದಿನ ತಿರುಗಿ ಬಿದ್ದೆ. ‘ಆರ್ಯಪುತ್ರ’, ನಾನು ನಿನಗೆ ತಕ್ಕ ಹೆಂಡತಿಯಲ್ಲ ಎಂದು ಬೈಯುತ್ತೀಯಲ್ಲ. ಬೇರೆ ಯಾವ ಹೆಂಗಸಿನಲ್ಲಿ ಇನ್ನೇನಿರುತ್ತೆ. ನಿನ್ನಲ್ಲಿ ಶಕ್ತಿಯಿದ್ದರೆ ನಾನು ತಕ್ಕವಳೇ ಆಗುತ್ತಿದ್ದೆ. ಈ ರಾಜರುಗಳೇ ಹಾಗೆ, ಇವರಿಗಿಂಥ ಬ್ರಹ್ಮಚರ್ಯದಿಂದ ವೀರ್‍ಯ ಸಂಚಯ ಮಾಡಿ ತಪೋನಿರತರಾಗಿರುವ ಋಷಿಗಳ ಹೆಂಡತಿಯಾಗುವುದು ಮೇಲು. ಮಾದ್ರಿಯಲ್ಲ ಇನ್ನೂ ನಾಲ್ವರು ಹೆಂಡತಿಯರನ್ನು ತಂದರು ಮುಟ್ಟಿನ ರಕ್ತವನ್ನು ನೀನು ನಿಲ್ಲಿಸಲಾರೆ. ಒಂದೊಂದು ಈ ಸಲ ಈ ರಕ್ತ ಬಿದ್ದಾಗಲೂ ನಿನ್ನ ಜನ್ಮ ಜನ್ಮಾಂತರಕ್ಕೂ ಪಾಪ ಸಂಚಯವಾಗುತ್ತಿರುತ್ತೆ”. ಹೀಗೆ ಪರ್ವದಲ್ಲಿನ ಸ್ತ್ರೀ ಪಾತ್ರಗಳು ಗಂಡಿನ ಅಹಂನ್ನು ಮೆಟ್ಟಿ ನಿಲ್ಲುತ್ತದೆ. ಇದು ‘ಪರ್ವ’ ರಂಗಪಠ್ಯದ ಶಕ್ತಿಯು ಕೂಡ ಆಗಿದೆ.

ಬಿ.ವಿ. ಕಾರಂತರು ರಂಗಾಯಣ ಕಟ್ಟುವಾಗ ಅವರೊಂದಿಗಿದ್ದ ನಮ್ಮ ಕಲಾವಿದರಲ್ಲಿ ಅರ್ಧದಷ್ಟು ಈಗಿದ್ದಾರೆ. ಉಳಿದವರು ಬಿಟ್ಟಿದ್ದಾರೆ, ಇಲ್ಲವೇ ನಿವೃತ್ತಿ ಹೊಂದಿದ್ದಾರೆ. ಈಗ ಇರುವವರು ೫೦ ವರ್ಷ ಕಳೆದು ಮಾಗಿದ್ದಾರೆ. ಇವರ ಸಾಮರ್ಥ್ಯ ಮತ್ತು ವಯಸ್ಸಿನ ಜೊತೆಗೆ ಇನ್ನಷ್ಟು ಯುವ ಕಲಾವಿದರನ್ನು ಸೇರಿಸಿ ರಂಗಾಯಣದಿಂದ ಹೊಸ ಸಾಹಸಕ್ಕೆ ಇಳಿದ ಫಲವೇ ಭೈರಪ್ಪನವರ ‘ಪರ್ವ’ ಕಾದಂಬರಿಯ ರಂಗಪ್ರಸ್ತುತಿ. ಈ ಕಾದಂಬರಿಯನ್ನು ರಂಗಪಠ್ಯವನ್ನಾಗಿಸಬಲ್ಲ, ಸಮರ್ಥವಾಗಿ ನಿರ್ದೇಶನ ಮಾಡಬಲ್ಲ, ಭೈರಪ್ಪನವರಿಂದ ಅನುಮತಿ ದೊರಕಿಸಿಕೊಳ್ಳಬಲ್ಲ ಸಾಮರ್ಥ್ಯವಿರುವ ಈ ನಾಡಿನ ಖ್ಯಾತ ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರನ್ನು ನಾವು ಈ ಸಾಹಸದಲ್ಲಿ ಜೊತೆಗೂಡುವಂತೆ ಆಹ್ವಾನಿಸಿದೆವು. ಅವರು ಖುಷಿಯಿಂದಲೇ ಬಂದರು. ನಮ್ಮ ಕಲಾವಿದರು ಸಂಪೂರ್ಣವಾಗಿ ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡರು. ಬಿ.ವಿ. ಕಾರಂತರು ನುಡಿದಂತೆ ಜಗತ್ತಿನ ಅತ್ಯಂತ ಕಷ್ಟಕರ ಮತ್ತು ಸುಲಭ ಕಾಯಕ ನಟನೆ. ಈ ನಟನಾ ಕಾಯಕದಲ್ಲಿ ನಮ್ಮ ತಂಡ ಕಷ್ಟಗಳನ್ನು ಸುಲಭವಾಗಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ. ರಂಗಭೂಮಿಯ ಹಲವು ರಂಗ ಸಾಧ್ಯತೆಗಳ ಸಾಧನೆ ಮಾಡಿರುವ ನಮ್ಮ ಕಲಾವಿದರು ಈ ಸಾಹಸದಲ್ಲಿ ಗೆಲ್ಲುತ್ತಾರೆ ಎಂಬ ದೃಢ ನಂಬಿಕೆ ನನ್ನದು, ರಂಗಾಯಣದ್ದು.

ಇಂಥ ಒಂದು ದೊಡ್ಡ ಬೃಹತ್ತಾದ ಕಾದಂಬರಿಯನ್ನು, ಬಹು ಚರ್ಚಿತವಾದ ಕಾದಂಬರಿಯನ್ನು ರಂಗದ ಮೇಲೆ ತರುವುದು ಸವಾಲಿನ ಕೆಲಸ. ಅದರಲ್ಲೂ ಭೈರಪ್ಪನವರ ಅನುಮತಿ ಸಿಗುವುದು, ಸಿಕ್ಕ ನಂತರ ಅವರಿಗೆ ಮೊದಲು ಇಷ್ಟವಾಗಿಸುವುದು ಅಷ್ಟೇ ಸವಾಲು. ಈ ಎರಡು ಸವಾಲುಗಳನ್ನು ನಾವು ದಾಟಿದ್ದೇವೆ. ಭೈರಪ್ಪನವರು ತಮ್ಮ ಅಮೂಲ್ಯ ಸಮಯವನ್ನು ನಮಗೆ ನೀಡಿ, ನಾಲ್ಕು ಬಾರಿ ರಂಗಾಯಣಕ್ಕೆ ಬಂದು ನಮ್ಮ ಎಲ್ಲಾ ಕಲಾವಿದರೊಂದಿಗೆ, ನಾಟಕ ನಿರ್ದೇಶಕರೊಂದಿಗೆ ಸಂವಾದ ನಡೆಸಿ, ಅಮೂಲ್ಯ ಸಲಹೆ ನೀಡಿದ್ದಾರೆ. ಇದು ನಮ್ಮ ಚೈತನ್ಯ ಶಕ್ತಿಯನ್ನು ವೃದ್ಧಿಸಿದೆ, ನಮ್ಮ ರಂಗಾಯಣದ ಎಲ್ಲಾ ಕಲಾವಿದರು ಪ್ರಾಮಾಣಿಕವಾಗಿ ಸವಾಲನ್ನು ಸ್ವೀಕರಿಸಿ ‘ಪರ್ವ’ ಕಟ್ಟುವಲ್ಲಿ ಶ್ರಮಿಸುತ್ತಿದ್ದಾರೆ. ಇಂಥ ಒಂದು ಕಾದಂಬರಿಯನ್ನು ಅದರ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ರಂಗಪಠ್ಯವನ್ನಾಗಿಸುವುದು ನಾವು ತಿಳಿದಷ್ಟು ಸುಲಭವಾಗಿರಲಿಲ್ಲ. ಇದನ್ನು ಸಾಕಷ್ಟು ಸಂಯಮದಿಂದ ಈ ನಾಡಿನ ಖ್ಯಾತ ರಂಗ ನಿರ್ದೇಶಕ ಪ್ರಕಾಶ್ ಬೆಳವಾಡಿ ಸಾಧಿಸಿದ್ದಾರೆ. ರಂಗಪ್ರಸ್ತುತಿಯ ಪೂರ್ಣ ವಿವರವನ್ನು ಅವರ ಮಾತಿನಲ್ಲಿ ಮುಂದೆ ಕೇಳಲಿದ್ದೀರಿ. ನಾವು ಸಾಕಷ್ಟು ದೂರ ಕ್ರಮಿಸಿದ್ದೇವೆ. ಪ್ರದರ್ಶನದತ್ತ ದಾಪುಗಾಲು ಇಡುತ್ತಿದ್ದೇವೆ. ಪರ್ವ ಎಂಬ ಮೇರುಪರ್ವತವನ್ನು ಏರುವ ನಿಟ್ಟಿನಲ್ಲಿ ನಮ್ಮ ಘನ ಸರ್ಕಾರ ನಮ್ಮೊಂದಿಗೆ ಕೈ ಜೋಡಿಸಿದೆ ಎಂಬ ಸಂತೋಷ ನಮಗಿದೆ. ನಮ್ಮ ಎಲ್ಲಾ ಹವ್ಯಾಸಿ ರಂಗತಂಡಗಳು ನಮ್ಮೊಂದಿಗಿದ್ದಾರೆ. ಹಾಗೆಯೇ ಸಹೃದಯರಾದ, ಸಜ್ಜನರಾದ ರಂಗಾಸಕ್ತರು.

ಮಹಾಭಾರತದ ಧ್ಯೇಯ ವಾಕ್ಯವೇ ‘ಕರ್ಮಣ್ಯೇವಾಧಿಕಾರಸ್ತೇ, ಮಾಫಲೇಶು ಕದಾಚನ’ ನಮ್ಮ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಭಾರತೀಯ ರಂಗಭೂಮಿಯ ಇತಿಹಾಸದಲ್ಲಿ ಇದು ಮೈಲಿಗಲ್ಲಾಗಬೇಕೆಂಬುದು ನಮ್ಮ ಕನಸು. ಇದನ್ನು ನನಸು ಮಾಡುವ ಮನಸ್ಸು ಸಹೃದಯ ಪ್ರೇಕ್ಷಕರಿಗೆ ಬಿಟ್ಟಿದ್ದು.
– ಅಡ್ಡಂಡ ಸಿ. ಕಾರ್ಯಪ್ಪ
ನಿರ್ದೇಶಕರು, ರಂಗಾಯಣ, ಮೈಸೂರು

ನಾಟಕದ ಬಗ್ಗೆ

ನಾಟಕದ ಕುರಿತಾಗಿ ವಿಶೇಷವಾಗಿ ಹೇಳಬೇಕಾಗಿರುವುದು ಏನೂ ಇಲ್ಲ. ಶತಾವಧಾನಿ ಆರ್ ಗಣೇಶ್, ಕಾದಂಬರಿಕಾರ ಭೈರಪ್ಪನವರು, ರಂಗಾಯಣ ನಿರ್ದೇಶಕರು ತಮ್ಮ ನುಡಿಗಳಲ್ಲಿ ಸಾಕಷ್ಟು ಹೇಳಿದ್ದಾರೆ. ಕಾದಂಬರಿಯನ್ನು ರಂಗಪಠ್ಯವನ್ನಾಗಿಸುವಾಗ ಪ್ರಕಾಶ್ ಬೆಳವಾಡಿ ಅವರು ಮೂಲಕೃತಿಗೆ ಯಾವುದೇ ರೀತಿಯಲ್ಲಿ ಲೋಪವಾಗದಂತೆ ಎಚ್ಚರವಹಿಸಿದ್ದಾರೆ. ಕಾದಂಬರಿಕಾರ ಯಾವ ಧ್ವನಿಯನ್ನು ತಮ್ಮ ಕೃತಿಯ ಮೂಲಕ ಧ್ವನಿಸಲು ಹೊರಟಿದ್ದಾರೋ ಅದಕ್ಕೆ ಪೂರಕವಾಗಿ ರಂಗಪಠ್ಯವಿದೆ. ನಮ್ಮದೇನೋ ಹೊಸ ವ್ಯಾಖ್ಯಾನ ಹೇಳಲು ಹೊರಟಿಲ್ಲ. ಒಟ್ಟಾರೆ ಕಾದಂಬರಿನಿಷ್ಠ ರಂಗಪಠ್ಯ. ಆದರೆ ಕಾದಂಬರಿಯಲ್ಲಿ ಇರುವುದೆಲ್ಲವನ್ನು ರಂಗದಲ್ಲಿ ತರಲು ಅಸಾಧ್ಯ. ರಂಗಭೂಮಿಗೂ ಒಂದು ಮಿತಿ ಇದೆ. ನಾಟಕಕ್ಕೆ ಒಂದು ಸಮಯ ಅಂತ ಇದೆ. ಅದನ್ನು ಸರಿದೂಗಿಸಬೇಕಾದ ಅನಿವಾರ್ಯತೆಯೂ ಇದೆ.

ರಂಗಪಠ್ಯದ ಉದ್ದಕ್ಕೂ ಗಂಡಿನ ಅಹಂನ್ನು ಮೆಟ್ಟಿ ನಿಲ್ಲುವ ಹೆಣ್ಣಿನ ಧ್ವನಿ ನಾಟಕದ ವಸ್ತುವಾಗಿ ನಿಲ್ಲುತ್ತದೆ. ಪಾಂಡವರೈವರಿಗೆ ಪತ್ನಿಯಾಗಿ ತ್ಯಾಗ ಮೆರೆದ ದ್ರೌಪದಿ ಎಲ್ಲದರಲ್ಲೂ ಒಂಟಿ. ಹೆಣ್ಣಿನ ಶೋಷಣೆಯೇ ಇದು. ಅಭಿಮನ್ಯು ಸತ್ತಾಗ ಸುಭದ್ರೆಯನ್ನು ತಬ್ಬಿ ರೋಧಿಸುವ ಅರ್ಜುನ, ಘಟೋತ್ಕಜ ಅಸುನೀಗಿದಾಗ ಹಿಡಿಂಬಿಯನ್ನು ಅಪ್ಪಿ ಬೊಬ್ಬಿಡುವ ಭೀಮ, ಇವರೆಲ್ಲ ಅಶ್ವತ್ಥಾಮ ದ್ರೌಪದಿಯ ಮಕ್ಕಳನ್ನು ಕೊಂದಾಗ ಮೂಕರಾಗುತ್ತಾರೆ. ಆದರೆ ದ್ರೌಪದಿ ಸಿಡಿಯುತ್ತಾಳೆ. ಮಕ್ಕಳನ್ನು ಕಳೆದುಕೊಂಡ ನೋವಲ್ಲ. “ಸುಭದ್ರೆಗೆ, ಹಿಡಿಂಬಿಗೆ, ಸಾಂತ್ವಾನ ಹೇಳಿದ ನೀವು. . . . ನನಗೆ? ಛೀ. ! ಸತ್ತವು ಕೇವಲ ದ್ರೌಪದಿ ಮಕ್ಕಳೇನು? ಹೆಣ್ಣನ್ನು ಹಣ್ಣಿನಂತೆ ಪಾಲು ಮಾಡಿಕೊಂಡವರಿಗೆ ಹೆಣ್ಣಿನ ನೋವು ಅರ್ಥವಾಗುವುದಿಲ್ಲ”.

ಇದೇ ರೀತಿ ಕುಂತಿ ಹೇಳುವ ಮಾತುಗಳು “ಹೆತ್ತ ಸೊಸೆಯ ಮಕ್ಕಳಲ್ಲದೆ ಹುಟ್ಟಿಸಿದವನ ಮಕ್ಕಳಾಗುತ್ತಾರೆಯೇ ಈ ವಂಶಕ್ಕೆ ಸೇರಿದ ಮೇಲೆ? ಇವನಪ್ಪ ಕುರುಡ. ಮದುವೆಗೆ ಮುಂಚೆ ಅವ್ವೆ ಎಂದರೇನಂತ ತಿಳಿದಿರಲಿಲ್ಲ. ಹೆಂಡತಿ ಬಸುರಾಗಿ ರುಚಿಹತ್ತಿದ ಮೇಲೆ ದಾಸಿಯರನ್ನು ಮೇಯಲು ಶುರು ಮಾಡಿದ್ದು. ಇಲ್ಲದಿದ್ದರೆ ಈ ದುರ್ಯೋಧನ ಗಾಂಧಾರಿಯ ಮಗನಾಗುತ್ತಿದ್ದನಾ? ಇವನ ಅಪ್ಪ ಅಂಬಿಕೆಯ ಮಗನಲ್ಲವೇ ವಿದುರ?”

ಗಾಂಧಾರಿ ಕೃಷ್ಣನಿಗೆ ಹೇಳುವ ಮಾತುಗಳು “ಕೃಷ್ಣ, ನೂರು ಮಕ್ಕಳು ಅನ್ನುವುದು ಮಹಾರಾಜನದು. ಹಾಗಂತ ಅವನ ಲೆಕ್ಕ. ಈ ಗಾಂಧಾರಿ ಎನ್ನಿಸಿಕೊಂಡ ದಾಸಿ ಹೆತ್ತದ್ದು ಬರೀ ಹದಿನಾಲ್ಕು. ಜೊತೆಗೆ ಒಬ್ಬ ಅಳಿಯನೂ ಸತ್ತಿದ್ದಾನೆ. ನನ್ನ ದುಃಖ ಸಣ್ಣದು. ಮಹಾರಾಜನದರಷ್ಟು ದೊಡ್ಡದಲ್ಲ.” ಈ ಎಲ್ಲಾ ವ್ಯಂಗ್ಯ ಪೂರಿತ ಮಾತುಗಳು ಹೆಣ್ಣಿನ ಶೋಷಣೆಯನ್ನು ಪ್ರತಿಭಟಿಸುವ ಅವರ ಭಾವನೆಯನ್ನು ಎಳೆ ಎಳೆಯಾಗಿ ಬಿಚ್ಚಿಡುವ ರೂಪಕಗಳಾಗಿ ಸಾಗುತ್ತದೆ. ರಂಗಪಠ್ಯದುದ್ದಕ್ಕೂ ಪಾತ್ರಗಳು ಸಂಕೇತಗಳಾಗಿ ಧ್ವನಿಸುತ್ತವೆ. ಭೀಮನ ಬೆವರು, ದ್ರೌಪದಿಯ ಶೆಕೆ, ಬೆಳದಿಂಗಳ ಅರ್ಜುನ, ನಾಯಿಯಂತೆ ಸ್ವಾಮಿನಿಷ್ಠ ಕರ್ಣ, ಎಣ್ಣೆಯ ಕಮಟು ವಾಸನೆಯ ಧೃತರಾಷ್ಟ್ರ, ಪರ್ವತದಂತಹ ಕುಂತಿ ಹೀಗೆ. . . . ಮಹಾಭಾರತವೊಂದು ಪುರಾಣವಾಗಿ ಉಳಿಯದೇ ಚಾರಿತ್ರಿಕ ಘಟನೆ ಎಂಬಂತೆ ಚಿತ್ರಿಸಿಕೊಂಡು ಸಾಗುತ್ತದೆ.

ಪರ್ವ ರಂಗಪಠ್ಯ ಏಳು ಗಂಟೆ ಮೂವತ್ತು ನಿಮಿಷಗಳ ಅವಧಿಯದ್ದು. ಇದನ್ನು ಐದು ಅಂಕಗಳಾಗಿ ವಿಂಗಡಿಸಲಾಗಿದೆ. ಈ ಐದು ಅಂಕಗಳಲ್ಲಿ ಒಂದು ಮತ್ತು ಎರಡನೇ ಅಂಕವನ್ನು ‘ಆದಿ ಪರ್ವ’ (ಪೂರ್ವರಂಗ) ಎಂದು ಕರೆದಿದ್ದೇವೆ. ಮೂರನೇ ಅಂಕ ‘ನಿಯೋಗ ಪರ್ವ’, ನಾಲ್ಕು ಮತ್ತು ಐದನೇ ಅಂಕ ‘ಯುದ್ಧ ಪರ್ವ’. ಈ ಎಲ್ಲಾ ಸಂಚಿಕೆ ಪರ್ವಗಳು ಎರಡು ಗಂಟೆ ಮೂವತ್ತು ನಿಮಿಷಗಳ ಅವಧಿಯದ್ದು. ಇದನ್ನು ಸಂಚಿಕೆಗಳನ್ನಾಗಿಯೂ ವಾರದ ಮೂರು ದಿನ ಸಂಜೆ ೬.೩೦ಕ್ಕೆ ಪ್ರಯೋಗಿಸುವ ಸಿದ್ದತೆ ನಡೆದಿದೆ. ಪೂರ್ಣ ಪರ್ವ ಬೆಳಗ್ಗೆ ೧೦.೦೦ ಗಂಟೆಗೆ ಪ್ರಯೋಗವಾಗುತ್ತದೆ. ಹೆಚ್ಚೇನು ಹೇಳುವ ಅಗತ್ಯವಿಲ್ಲ. ಪ್ರೇಕ್ಷಕರು ನಾಟಕವನ್ನು ನೋಡಿಯೇ ಸಂಭ್ರಮಿಸಬೇಕು.

ಡಾ. ಎಸ್.ಎಲ್. ಭೈರಪ್ಪ ಪರಿಚಯ (ಪರಿಚಯ)

ರಾಷ್ಟ್ರೋಜ, ಪದ್ಮಶ್ರೀ ಡಾ. ಎಸ್.ಎಲ್. ಭೈರಪ್ಪ ಭಾರತದ ಸರ್ವಶ್ರೇಷ್ಠ ಕಾದಂಬರಿಕಾರ. ಕಳೆದ ೬ ದಶಕಗಳಿಂದ ಕೃತಿ ರಚನೆಯಲ್ಲಿ ತೊಡಗಿರುವ ಇವರ ಕಾದಂಬರಿಗಳು ವಿಶ್ವ ಮಾನ್ಯತೆಯನ್ನು ಪಡೆದಿದೆ. ಇವರ ಕೃತಿಗಳು ಸಾರ್ವಕಾಲಿಕವಾಗಿ ಜನಮಾನಸದಲ್ಲಿ ಉಳಿಯಲು ಇವರು ತಮ್ಮ ಕಾದಂಬರಿಗಳಲ್ಲಿ ಮನುಷ್ಯತ್ವ , ವಾಸ್ತವತೆ, ಮಾನವ ಸ್ವಭಾವದ ನಿಕಟ ಪರಿಚಯವನ್ನು ಸಂಯಮ ಮತ್ತು ಅಲಿಪ್ತತೆಗಳನ್ನು ಮೀರಿ ನಿಲ್ಲುವ ಕೌಶಲ ತಂತ್ರಗಳನ್ನು ಅಳವಡಿಸುತ್ತಾ ಬಂದದ್ದು ಕಾರಣವಾಗಿದೆ. ಒಂದು ಕೃತಿ ಮುದ್ರಣವಾಗಿ ಅದು ಬಿಡುಗಡೆಯ ದಿನವೇ ಎಲ್ಲಾ ಪ್ರತಿಗಳು ಮಾರಾಟವಾಗಿರುವುದು ಭಾರತೀಯ ಸಾಹಿತ್ಯ ಇತಿಹಾಸದಲ್ಲೇ ಅಪರೂಪ. ಇದನ್ನು ಭೈರಪ್ಪನವರು ಸಾಧಿಸಿದ್ದಾರೆ.

1931 ಆಗಸ್ಟ್ 20 ರಂದು ಹಾಸನದ ಸಂತೇಶಿವರದಲ್ಲಿ ಹುಟ್ಟಿದ ಸಂತೇಶಿವ ಲಿಂಗಣ್ಣಯ್ಯ ಭೈರಪ್ಪ ಬಡತನದಲ್ಲೇ ಬೆಳೆದು ಅನುಭವ ಪಡೆದವರು. 1958 ರಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸೌಂದರ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ 1963 ರಲ್ಲಿ ನಿವೃತ್ತಿ ಪಡೆದರು. ಭಾರತದಾದ್ಯಂತ ಹನ್ನೆರಡಕ್ಕೂ ಹೆಚ್ಚು ಗೌರವ ಡಾಕ್ಟರೇಟ್ ಪದವಿ ಪಡೆದ ಇವರ ಸಾಧನೆ ಕನ್ನಡ ನಾಡಿಗೆ ಹೆಮ್ಮೆ.

1955 ರಿಂದ ‘ಗತಜನ್ಮಾಂಭ’ ಕಾದಂಬರಿಯ ಮೂಲಕ ತಮ್ಮ ಕೃತಿ ರಚನೆ ಆರಂಭಿಸಿ, 2017 ರ ‘ಉತ್ತರಕಾಂಡ’ ದವರೆಗೆ 26ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಯಾನ, ಆವರಣ, ಮಂದ್ರ, ಪರ್ವ, ನಿರಾಕರಣ, ಗರ್ವಭಂಗ, ವಂಶವೃಕ್ಷ, ಕವಲು, ತಂತು, ಸಾಕ್ಷಿ, ದಾಟು, ನಾಯಿ ನೆರಳು ಇವರ ಪ್ರಮುಖ ಕಾದಂಬರಿಗಳು. ಆವರಣ 55ಕ್ಕೂ ಹೆಚ್ಚು ಮುದ್ರಣ ಕಂಡಿದ್ದರೆ, ಯಾನ ಮತ್ತು ಕವಲು ಕಾದಂಬರಿಗಳು 35 ಕ್ಕೂ ಹೆಚ್ಚು ಮುದ್ರಣಗಳನ್ನು ಕಂಡಿದೆ. ‘ಪರ್ವ’ ಕಾದಂಬರಿ 22ಕ್ಕೂ ಹೆಚ್ಚು ಮುದ್ರಣ ಕಂಡಿದೆ. ಮರಾಠಿ, ಸಂಸ್ಕೃತ, ತೆಲುಗು, ಹಿಂದಿ, ಇಂಗ್ಲಿಷ್, ಉರ್ದು, ಗುಜರಾತಿ, ಬೆಂಗಾಲಿ, ತಮಿಳು, ಪಂಜಾಬಿ, ಮಲಯಾಳಂ ಹೀಗೆ ಭಾರತದ ಎಲ್ಲ ಭಾಷೆಗಳಲ್ಲೂ ಇವರ ಕಾದಂಬರಿ ಅನುವಾದಗೊಂಡಿದೆ. ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ, ಕೇಂದ್ರ ಸಾಹಿತ್ಯ ಅಕಾಡೆಮಿಯ ಮೂಲಕ ಇವರ ಅನೇಕ ಕಾದಂಬರಿಗಳು ಭಾರತೀಯ ಭಾಷೆಗಳಲ್ಲಿ ಮುದ್ರಣವಾಗಿದೆ. ಸಾಹಿತ್ಯ ಭಂಡಾರ ಬೆಂಗಳೂರು ಇವರ ಎಲ್ಲಾ ಕನ್ನಡ ಕಾದಂಬರಿಗಳನ್ನು ಪ್ರಕಟಿಸುತ್ತಾ ಬಂದಿದೆ. ಭಾರತೀಯ ಸಂಗೀತ ವಿಷಯದಲ್ಲಿ ಅದರಲ್ಲೂ ಹಿಂದೂಸ್ತಾನಿ ಸಂಗೀತ ಮತ್ತು ಸಂಗೀತ ಕಲಾವಿದನ ಮೇಲೆ ಚಿತ್ರಿಸಿದ ‘ಮಂದ್ರ’ ಕಾದಂಬರಿ ಭಾರತೀಯ ಕಾದಂಬರಿ ಕ್ಷೇತ್ರದಲ್ಲಿ ಅತ್ಯಂತ ವಿಶಿಷ್ಟವಾದ ಮನ್ನಣೆ ಪಡೆದಿದೆ. ಈ ಕಾದಂಬರಿಗಾಗಿ ಅತ್ಯಂತ ಪ್ರತಿಷ್ಠಿತ ಸಾಹಿತ್ಯ ಗೌರವ ‘ಸರಸ್ವತಿ ಸಮ್ಮಾನ್’ ಪ್ರಶಸ್ತಿ ಭೈರಪ್ಪನವರ ಮುಡಿಗೇರಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗರಾಷ್ಟ್ರಗಳ ಸಭೆಯಲ್ಲಿ ಪ್ರಸ್ತಾಪಿಸಿದಂತೆ ಭಾರತದ ಸರ್ವಶ್ರೇಷ್ಠ ಹತ್ತು ಕೃತಿಗಳು ಶೃಂಗರಾಷ್ಟ್ರಗಳ ಭಾಷೆಯಲ್ಲಿ ಅನುವಾದಗೊಳ್ಳುತ್ತವೆ. ಇದರಲ್ಲಿ ‘ಪರ್ವ’ ಒಂದು ಎಂಬ ಹೆಮ್ಮೆ ಕನ್ನಡ ನಾಡಿನದು. ಇದರಂತೆ ‘ಪರ್ವ’ ಕಾದಂಬರಿ ರಷ್ಯನ್ ಮತ್ತು ಮ್ಯಾಂಡರಿನ್ (ಚೀನಾ) ಭಾಷೆಗಳಲ್ಲಿ ಅನುವಾದಗೊಂಡು ಪ್ರಕಟವಾಗಿದೆ.

ಭಾರತದ ಶ್ರೇಷ್ಠ ಚಲನಚಿತ್ರ ನಿರ್ದೇಶಕರಿಂದ ಇವರ ನಾಯಿ ನೆರಳು, ಗರ್ವಭಂಗ, ಮತದಾನ, ವಂಶವೃಕ್ಷ, ಗೋಧೂಳಿ ಮತ್ತು ತಬ್ಬಲಿಯು ನೀನಾದೆ ಮಗನೆ ಕಾದಂಬರಿಗಳು ಚಲನಚಿತ್ರವಾಗಿ ರಾಷ್ಟ್ರೀಯ ಪುರಸ್ಕಾರ ಪಡೆದಿವೆ. ಗಿರೀಶ್ ಕಾಸರವಳ್ಳಿ, ಬಿ.ವಿ. ಕಾರಂತ, ಗಿರೀಶ್ ಕಾರ್ನಾಡ್, ಬಾಬು ಮುಂತಾದ ನಿರ್ದೇಶಕರು ಇವರ ಕಾದಂಬರಿಗಳನ್ನು ಚಲನಚಿತ್ರವಾಗಿಸಿದ್ದಾರೆ. ಇಂದಿಗೂ ಇವರ ಕೃತಿಗಳ ಮೇಲೆ ಚರ್ಚೆಗಳು ನಡೆಯುತ್ತಲೆ ಇದೆ. ಆರಂಭದ ಇವರ ಕಾದಂಬರಿಗಳನ್ನು ಓದಿ ಸಾಹಿತ್ಯ ಓದುವಿಕೆಯಲ್ಲಿ ಪ್ರಭಾವಿತರಾದ ಲಕ್ಷಾಂತರ ವಿದ್ಯಾರ್ಥಿಗಳು ಇದ್ದಾರೆ. ಇವರ ಅಭಿಮಾನಿ ಬಳಗ ವಿಶ್ವದ ಎಲ್ಲೆಡೆ ವ್ಯಾಪಿಸಿದೆ. ಇವರ ಕೃತಿಗಳನ್ನು ಆಧರಿಸಿ 1990 ರಿಂದ ಇಂದಿನವರೆಗೆ ಮೂವತ್ತಕ್ಕೂ ಹೆಚ್ಚು ವಿಮರ್ಶಾ ಗ್ರಂಥಗಳು ಪ್ರಕಟಗೊಂಡಿವೆ.

ಇವರಿಗೆ ಸಂದ ಪ್ರಶಸ್ತಿಯ ಪಟ್ಟಿಯೇ ದೊಡ್ಡದಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಮತ್ತು ಕೇಂದ್ರ ಸರ್ಕಾರ ಎಲ್ಲವೂ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಪದ್ಮಶ್ರೀ, ಅಸ್ಸಾಮಿನ ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ, ಭಾರತ ಮಾನವ ಸಂಪನ್ಮೂಲ ಸಂಸ್ಕೃತಿ ಸಚಿವಾಲಯದ ರಾಷ್ಟ್ರೀಯ ಪ್ರಾಧ್ಯಾಪಕ ಪುರಸ್ಕಾರ, ಸರಸ್ವತಿ ಸಮ್ಮಾನ್ ಪ್ರಶಸ್ತಿ, ಕೊಲ್ಕೊತ್ತಾದ ಹೆಡ್ಗೇವಾರ್ ಪ್ರಶಸ್ತಿ, ಆಂಧ್ರದ ಎನ್.ಟಿ.ಆರ್ ಪ್ರಶಸ್ತಿ, ಪಂಪ ಪ್ರಶಸ್ತಿ, ಗೊರೂರು ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಭಾರತೀಯ ಭಾಷಾ ಪರಿಷತ್ ಪುರಸ್ಕಾರ ಹೀಗೆ ಇವರಿಗೆ ಸಂದ ಪ್ರಶಸ್ತಿಗಳಿಂದ ಪ್ರಶಸ್ತಿಯ ಗೌರವ ಹೆಚ್ಚಿದೆ.

1992 ರಿಂದ ಅನೇಕ ರಾಷ್ಟ್ರಗಳಿಗೆ ಭಾರತದ ಸಾಹಿತ್ಯ ರಾಯಭಾರಿಯಾಗಿ ವಿದ್ವಾಂಸವೇತನ ಪಡೆದು ಹೋಗಿದ್ದಾರೆ. ಚೀನಾ, ಅಮೇರಿಕಾ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ‘ಭಾರತ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ಸಾಹಿತ್ಯ ಸಂಬಂಧ’ದ ಬಗ್ಗೆ ಉಪನ್ಯಾಸ ನೀಡಿದ್ದಾರೆ. ಇಟಲಿ, ದುಬೈ, ಅಮೇರಿಕಾ, ಸಾಲ್ವೇನಿಯಾ, ಜಪಾನ್ ಮುಂತಾದ ದೇಶಗಳ ಸಾಹಿತ್ಯ ಸಮ್ಮೇಳನಗಳಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ಭಾರತದ ಸಾಹಿತ್ಯ ಪರಂಪರೆಯನ್ನು ಎತ್ತಿಹಿಡಿದಿದ್ದಾರೆ. 1999ರಲ್ಲಿ ಬೆಂಗಳೂರಿನ ಕನಕಪುರದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಹೆಮ್ಮೆ ಇವರದು. ಇವರ ಅತ್ಯಂತ ಮಹತ್ವದ ‘ಪರ್ವ’ ಕಾದಂಬರಿಯನ್ನು ರಂಗಪ್ರಸ್ತುತಿಯನ್ನಾಗಿಸಿ ರಂಗಾಯಣ ಮೈಸೂರು ಕನ್ನಡ ಕಾಯಕ ವರ್ಷದಲ್ಲಿ ನಾಡಿನಾದ್ಯಂತ ಪ್ರದರ್ಶನಕ್ಕೆ ಸಿದ್ಧವಾಗಿರುವುದು ರಂಗಾಯಣ ಭೈರಪ್ಪನವರಿಗೆ ಸಲ್ಲಿಸುವ ಗೌರವವಾಗಿದೆ.

ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತದಲ್ಲಿ ಅಪಾರ ಒಲವು ಇರುವ ಇವರಿಗೆ ಶಿಲ್ಪಕಲೆ, ಪ್ರವಾಸ, ಪರ್ವತಾರೋಹಣ ಮುಂತಾದವುಗಳ ಬಗ್ಗೆ ವಿಶೇಷ ಆಸಕ್ತಿ. ಹಿಮಾಲಯ ಪರ್ವತಶ್ರೇಣಿಗಳಲ್ಲಿ ಅನೇಕಬಾರಿ ಅಡ್ಡಾಡಿದ ಅನುಭವ ಇವರದು. ಪತ್ನಿ ಮತ್ತು ಇಬ್ಬರು ಪುತ್ರರ ಸುಖ ಸಂಸಾರದ ಭೈರಪ್ಪನವರು ವರ್ತಮಾನ ಭಾರತೀಯ ಸಾಹಿತ್ಯ ಕ್ಷೇತ್ರದ ಅನನ್ಯ ಕೊಡುಗೆ.

ಪ್ರಕಾಶ್ ಬೆಳವಾಡಿ (ಪರಿಚಯ)

ಭಾರತೀಯ ರಂಗಭೂಮಿಯಲ್ಲಿ ಪ್ರಕಾಶ್ ಬೆಳವಾಡಿ ಪ್ರಮುಖ ಹೆಸರು. ರಂಗಭೂಮಿ, ಚಲನಚಿತ್ರ, ಕಿರುತೆರೆ, ಮಾಧ್ಯಮ ಕ್ಷೇತ್ರದಲ್ಲಿ ದುಡಿಯುತ್ತಿರುವ ಪ್ರಕಾಶ್ ಒಬ್ಬ ಶಿಕ್ಷಕ, ಹೋರಾಟಗಾರ ಮತ್ತು ಪತ್ರಕರ್ತ ಕೂಡ ಹೌದು. ಇವರ ಇಡೀ ಕುಟುಂಬ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಸಕ್ರಿಯವಾಗಿದೆ. 1983ರಲ್ಲಿ ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದ ಇವರು ತಮ್ಮ ಪೂರ್ಣ ಜೀವಿತವನ್ನು ರಂಗಭೂಮಿ, ಚಲನಚಿತ್ರ, ಪತ್ರಿಕೋದ್ಯಮ ಮತ್ತು ಶಿಕ್ಷಣಕ್ಕೆ ಮೀಸಲಿಟ್ಟಿದ್ದಾರೆ.

ಅನೇಕ ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿ, ಭಾರತದ ಸಾಹಿತ್ಯ – ಸಂಸ್ಕೃತಿಯನ್ನು ಎತ್ತಿಹಿಡಿದಿದ್ದಾರೆ. 2011 ರಲ್ಲಿ ಗೋಥೆನ್‌ಬರ್ಗ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, 2011 ರಲ್ಲಿ ಸಿಯೋಲ್‌ನಲ್ಲಿ ನಡೆದ ‘ವಿಶ್ವ ಪ್ರದರ್ಶಕ ಕಲೆಗಳ ಮಾರುಕಟ್ಟೆ’ ಎಂಬ ಸಮ್ಮೇಳನ, 2011ರಲ್ಲಿ ಬರ್ಲಿನ್‌ನಲ್ಲಿ ನಡೆದ ೫೦ನೇ ಅಂತರರಾಷ್ಟ್ರೀಯ ವಾರ್ಷಿಕ ರಂಗೋತ್ಸವದಲ್ಲಿ, 2013ರಲ್ಲಿ ಟ್ರೋಲಟನ್‌ನಲ್ಲಿ ‘ಪ್ರಕೃತಿ ಒಂದು ಒಳ್ಳೆಯ ಸಲಹೆ’ ಎಂಬ ವಸ್ತು ಪ್ರದರ್ಶನದಲ್ಲಿ ಮತ್ತು 2014 ರಲ್ಲಿ ಸ್ವೀಡನ್, ಟರ್ಕಿ ರಾಷ್ಟ್ರಗಳ ಅನೇಕ ಸಮ್ಮೇಳನಗಳಲ್ಲಿ ಭಾರತವನ್ನು ಪ್ರಕಾಶ್ ಬೆಳವಾಡಿ ಪ್ರತಿನಿಧಿಸಿದ್ದಾರೆ.

ಪ್ರಕಾಶ್ ಬೆಳವಾಡಿ ಇಂಗ್ಲೀಷ್‌ನಲ್ಲಿ ರಚಿಸಿ, ನಿರ್ದೇಶಿಸಿದ ‘ಸ್ಟಂಬಲ್’ ಚಲನಚಿತ್ರಕ್ಕೆ 2003 ರ ರಾಷ್ಟ್ರೀಯ ಪುರಸ್ಕಾರ ದೊರೆತಿದೆ. ಪ್ರಸಾರ ಭಾರತಿಯ ದೂರದರ್ಶನದಲ್ಲಿ ಭಾರತದ ಅತ್ಯುತ್ತಮ ಚಲನಚಿತ್ರ ಸರಣಿಗೆ ಈ ಚಿತ್ರ ಆಯ್ಕೆಯಾಗಿ ಚಲನಚಿತ್ರ ರಂಗದ ಗೌರವ ಹೆಚ್ಚಿಸಿದೆ. 2003 ರಲ್ಲಿ ಕರ್ನಾಟಕ ರಾಜ್ಯ ಸರ್ಕಾರ ‘ಪ್ರತಿಭಾ ಭೂಷಣ್’ ಪುರಸ್ಕಾರ ನೀಡಿ ಗೌರವಿಸಿದೆ. ಕರ್ನಾಟಕ ನಾಟಕ ಅಕಾಡೆಮಿಯು ಇವರ ಕನ್ನಡ ಮತ್ತು ಇಂಗ್ಲಿಷ್ ರಂಗಭೂಮಿಯ ಸೇವೆಗಾಗಿ 2011-12 ರ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಅನೇಕ ನಾಟಕಗಳಲ್ಲಿ ನಟಿಸಿರುವ ಪ್ರಕಾಶ್ ಬೆಳವಾಡಿ ವೆಬ್ ಸೀರಿಸ್‌ನ 50 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಭಾರತೀಯ ಭಾಷೆಗಳಲ್ಲಿ ನಟಿಸಿದ್ದಾರೆ. 2005 ರಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ (META) ಸಂದಿದೆ. 2019 ರಲ್ಲಿ ಕೌಂಟಿಂಗ್ & ಕ್ರಾಕಿಂಗ್ ಎಂಬ ಮಳೆಯಾಧಾರಿತ ನಾಟಕಕ್ಕೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಸಂದಿದೆ. ಪ್ರತಿಷ್ಠಿತ ನ್ಯೂಸ್18 ಕನ್ನಡ ಚಾನಲ್ ಇವರಿಗೆ ‘ವರ್ಷದ ಕನ್ನಡಿಗ’ ಪ್ರಶಸ್ತಿ ನೀಡಿ ಗೌರವಿಸಿದೆ. 2011ರಲ್ಲಿ ಇವರು ರಚಿಸಿ ನಿರ್ದೇಶನ ಮಾಡಿದ ‘ಗರ್ವ’ ಕನ್ನಡ ಧಾರಾವಾಹಿ ಇಂದಿಗೂ ಒಂದು ಕಲಾತ್ಮಕ ಧಾರಾವಾಹಿ ಎನಿಸಿಕೊಂಡಿದೆ.

ಇವರು ನಿರ್ದೇಶಿಸಿದ ಪ್ರಮುಖ ನಾಟಕಗಳು ಯು.ಆರ್. ಅನಂತಮೂರ್ತಿಯವರ ಅವಸ್ಥೆ, ಈವ್ ಎನ್ಸ್ಸ್‌ಲರ್‌ಳ ನೆಸೆಸ್ಸರಿ ಟಾರ್ಗೆಟ್ಸ್, ಮೈಕೆಲ್ ಫ್ರೆನ್‌ನ ಕೋಪನ್ ಹೆಗನ್, ಬರ್ಟೋಲ್ಟ್ ಬ್ರೆಕ್ಟ್‌ನ ಗೆಲಿಲಿಯೋ, ರಿಚಡ್ ಶಾನೆನ್‌ನ ದಿ ಲೇಡಿ ಆಫ್ ಬರ್ಮಾ, ಸ್ಟೀವ್ ವಿಲ್ಮರ್‌ನ ಸೀನ್ಸ್ ಫ್ರಮ್ ಸೋವಿಟೋ, ಬಾದಲ್ ಸರ್ಕಾರ್ ಅವರ ಬಾಕಿ ಇತಿಹಾಸ್, ವಿಜಯ ತೆಂಡೂಲ್ಕರ್ ಅವರ ಸದ್ದು…! ವಿಚಾರಣೆ ನಡೆಯುತ್ತಿದೆ, ಸುರೇಂದ್ರನಾಥ್ ಕನ್ನಡಕ್ಕೆ ಅಳವಡಿಸಿದ ಡಾರಿಯೋಫೋನ ಆತಂಕವಾದಿಯ ಆಕಸ್ಮಿಕ ಸಾವು, ಜಾನ್ ಮಿಲಿಂಗ್ಟನ್ ಸಿಂಗ್‌ನ ಪ್ಲೇ ಬಾಯ್ ಆಫ್ ದಿ ವೆಸ್ಟರ್ನ್ ವರ್ಲ್ಡ್, ಪಿರ್‍ಯಾಂಡಲೋನ ಹೆನ್ರಿ ದ ಫೋರ್ತ್, ಆರ್ತರ್ ಮಿಲ್ಲರ್‌ನ ದ ಪ್ರೈಸ್, ಇವರೇ ಕನ್ನಡಕ್ಕೆ ಅಳವಡಿಸಿದ ಟೆನಿಸ್ಸಿ ವಿಲಿಯಮ್ಸ್‌ನ ಗಾಜಿನ ಗೊಂಬೆಗಳು, ಕೆ.ವಿ. ಅಕ್ಷರ ರಂಗರೂಪ ಮಾಡಿರುವ ಪೂರ್ಣಚಂದ್ರ ತೇಜಸ್ವಿಯವರ ಚಿದಂಬರ ರಹಸ್ಯ, ಬ್ರಯಾನ್ ಫ್ರಿಯಲ್‌ನ ಟ್ರಾನ್ಸ್‌ಲೇಷನ್ಸ್ ಮುಂತಾದವುಗಳು.

ರಂಗಾಯಣಕ್ಕೆ 2011ರಲ್ಲಿ ರವೀಂದ್ರನಾಥ ಟ್ಯಾಗೋರರ ‘ಗೋರಾ’ ಕಾದಂಬರಿಯನ್ನು, ಯಶವಂತ ಚಿತ್ತಾಲರ ‘ಶಿಕಾರಿ’ ಕಾದಂಬರಿಯನ್ನು ರಂಗರೂಪಗೊಳಿಸಿ ರಂಗಾಯಣಕ್ಕೆ ನಿರ್ದೇಶಿದ್ದಾರೆ. ಪ್ರಸ್ತುತ ಇವರು ಡಾ. ಎಸ್.ಎಲ್. ಭೈರಪ್ಪನವರ ‘ಪರ್ವ’ ಮಹಾ ಕಾದಂಬರಿಯನ್ನು ಏಳೂವರೆ ತಾಸುಗಳ ರಂಗಪಠ್ಯವನ್ನಾಗಿಸಿ, ನಿರ್ದೇಶನ ಮಾಡಿದ್ದಾರೆ.

ಪರಿಸರ ಮತ್ತು ಪ್ರಕೃತಿಯ ಆರಾಧಕರಾಗಿರುವ ಪ್ರಕಾಶ್ ಬೆಳವಾಡಿ ಬೆಂಗಳೂರಿನಲ್ಲಿ ‘ಸಿಟಿಜೆನ್ ಫಾರ್ ಬೆಂಗಳೂರು’ ಎಂಬ ಸಂಸ್ಥೆ ಕಟ್ಟಿ ಅನೇಕ ವರ್ಷಗಳಿಂದ ಪರಿಸರ ರಕ್ಷಣೆಗೆ ಹೋರಾಡುತ್ತಿದ್ದಾರೆ. ‘ರೋಟರಿ ಅವನಿ’ಯ ಮೂಲಕ ಪ್ರತಿವರ್ಷ ವಿಶ್ವ ಪರಿಸರದ ದಿನದಂದು ಅಂತರರಾಷ್ಟ್ರೀಯ ಮಟ್ಟದ ‘ಮಾತೃಭೂಮಿ ದಿನ’ ಎಂದು ಆಚರಿಸಿಕೊಂಡು ಬಂದಿದ್ದಾರೆ. ಭೂಮಿ, ಜಲ, ಬೆಂಕಿ, ಗಾಳಿ ಮತ್ತು ಆಕಾಶ ಇವರ ಪಂಚ ರಕ್ಷಣಾ ಆದ್ಯತೆಗಳು. ‘ಪರಿಸರ ಉಳಿದರೆ, ಮನುಕುಲ ಉಳಿದೀತು’ ಇವರ ಸಂಕಲ್ಪ.

ಅಂತರಂಗದಿಂದ ಬಹಿರಂಗಕ್ಕೆ. . .

ಎಸ್.ಎಲ್.ಭೈರಪ್ಪನವರ ಪರ್ವ ಮೂಲ ಮಹಾಭಾರತ ಕಥಾವಸ್ತು, ಪಾತ್ರಗಳು ಮತ್ತು ಅವರ ಕ?ಗಳನ್ನು ಒಳಗೊಂಡಿದ್ದರೂ ನನ್ನಮಟ್ಟಿಗೆ ಕಾದಂಬರಿಯ ಶ್ರದ್ಧೆ ಮತ್ತು ಕುತೂಹಲ ಇರುವುದು ಈ ಪಾತ್ರಗಳ ಅಂತರಂಗವನ್ನು ಕಲಕುವ ನೆನಪುಗಳಲ್ಲಿ, ಮಾಯದ ನೋವಿನಲ್ಲಿ ಮತ್ತು ಅವು ನೈತಿಕಗೊಂದಲಗಳನ್ನು ಬಗೆಹರಿಸಿಕೊಳ್ಳದೆ ಮಾಡುವ ನಿರ್ಧಾರಗಳಲ್ಲಿ. ಮಹಾಭಾರತವು ಒಟ್ಟು ಧರ್ಮದ ಸಂವಾದಕ್ಕೆ ನೆಲೆಯಾದರೆ, ಭೈರಪ್ಪನವರ ಪರ್ವ ಧರ್ಮಸಂಕಟದ ಪರಿಕಲ್ಪನೆಗೆ ವಸ್ತುವಾಗುತ್ತದೆ.

ಇದರ ಮುಖ್ಯಪಾತ್ರಗಳು ಯುದ್ಧದ ಪೂರ್ವರಂಗದಲ್ಲಿ ಯಾರು ಹಾಗೂ ಯಾವುದರ ಪರ ನಿಲ್ಲಬೇಕು ಅಥವ ಕಾಯಬೇಕು ಎಂದು ನಿಶ್ಚಯಿಸಲೇಬೇಕಾದ ಸಂದಿಗ್ಧಕ್ಕೆ ಸಿಕ್ಕಿಕೊಂಡಾಗ, ಅವರುಗಳು ತಾವು ಪಟ್ಟ ಕ?, ತಾಳಿದ ಅವಮಾನ ಮತ್ತು ತೀರಿಸಿಕೊಳ್ಳಲಾಗದ ಹಗೆತನವನ್ನು ಒಳಗೊಳಗೇ ಸ್ಮರಿಸುತ್ತ, ಇನ್ನೊಬ್ಬರಿಗೆ ಹೇಳಲು ಸಾಧ್ಯವೆನಿಸಿದ್ದನ್ನೂ ಅಷ್ಟಿ? ಹೇಳಿಕೊಳ್ಳುತ್ತ ಸಾಗುತ್ತಾರೆ. ಇದನ್ನು ಒಂದು ಸ್ಟ್ರೀಮ್ ಆಫ್ ಕಾನ್ಷ್ಯಸ್ನೆಸ್ ಶೈಲಿಯಲ್ಲಿ ಭೈರಪ್ಪನವರು ಓದುಗನಿಗೆ ಪ್ರಸ್ತುತಪಡಿಸುತ್ತಾ ಹೋಗುತ್ತಾರೆ.

ಈ ಅಂತರಂಗದ ಆಖ್ಯಾನಗಳನ್ನು ಬಹಿರಂಗವಾಗಿಸುವುದು ಹೇಗೆ? ಇದು ನನ್ನ ಮತ್ತು ರಂಗಾಯಣದ ಮುಂದೆ ಇದ್ದ ಸವಾಲು. ಭೈರಪ್ಪನವರೇ ರಂಗಾಯಣಕ್ಕೆ ಮೊದಲ ಸಲ ಬಂದು ರೆಹರ್ಸಲ್ ನೋಡಿ ನಮ್ಮ ಮಧ್ಯೆ ಆಪ್ತವಾಗಿ ಕೂತು ಮಾತಾಡಿದರು: ಒಂದು ರೀತಿಯಲ್ಲಿ ನೋಡಿದರೆ, ಪರ್ವವನ್ನು ನಾಟಕವಾಗಿ ಮಾಡುವುದು ತುಂಬ ಕ?, ಆದರೆ ಇನ್ನೊಂದು ರೀತಿಯಲ್ಲಿ ತುಂಬ ಸುಲಭ ಅನ್ನಬಹುದು. ಅದರಲ್ಲಿ ಅ? ಡ್ರಮಾಟಿಕ್ ಸನ್ನಿವೇಶಗಳು, ರಸಸ್ಥಾನಗಳು ಇವೆ, ಆಂದರು.

ನಾಟಕದ ಕಟ್ಟಿಗೆ ಒದಗುವ ಮತ್ತು ಒಪ್ಪುವ ಸನ್ನಿವೇಶಗಳನ್ನು ರಸಸ್ಥಾನಗಳನ್ನು ಬಳಸಿಕೊಳ್ಳುವ ಪ್ರಯತ್ನ ನಮ್ಮದಾಗಿದೆ. ಕಾದಂಬರಿಯಲ್ಲಿರುವುದು ಎಲ್ಲವೂ ನಾಟಕದಲ್ಲಿ ಇಲ್ಲ. ಇರುವುದು ಸಾಧ್ಯವೂ ಅಲ್ಲ, ಇಡುವುದು ಉಚಿತವೂ ಅಲ್ಲ. ಕಾದಂಬರಿಯನ್ನು ಓದಿದ ಪ್ರತಿಯೊಬ್ಬರಿಗೂ ಒಂದೊಂದು ಸನ್ನಿವೇಶದಲ್ಲೂ ತಾವೇ ಕಲ್ಪಿಸಿಕೊಂಡ ಪಾತ್ರ, ಪರಿಸರ, ಮಾತು, ಹಾವಭಾವಗಳು ಮನಸ್ಸಿಲ್ಲಿ ಇರುತ್ತವೆ. ಆದರೆ ನಾಟಕ ನಾವು ಕಟ್ಟಿಕೊಡುವ ಆಟ, ಕಾದಂಬರಿಯ ವಿಭಾವಕ್ಕೆ ಅನುಭಾವ. ಇದರಲ್ಲಿ ನಿಮ್ಮುಂದಿರುವುದು ನಟರು ನಿರೂಪಿಸುವ ಪಾತ್ರಗಳು, ಕಾದಂಬರಿಯ ಪಾತ್ರಗಳಿಗೆ ಇವು ಅಭಿಜ್ಞಾನಗಳು. ಇಲ್ಲಿ ಯೋಚನೆ ಮಾತಾಗಿ, ಅಂತ:ಕರಣದ ಗೊಂದಲ ವಾದ-ವಿವಾದವಾಗಿ, ಮನಸ್ಸಿನ ನಿರ್ಧಾರವನ್ನು ಅಭಿನಯವಾಗಿ ತೆರೆದಿಡುವ ಪ್ರಯತ್ನ ಆಗಿದೆ. ನಿಮಗೆ ಇ?ವಾಗಿದ್ದ ಪಾತ್ರ, ಸನ್ನಿವೇಶ, ಮಾತು ಇಲ್ಲಿ ಬಿಟ್ಟುಹೋಗಿರಬಹುದು. ಹಾಗಾಗಿದ್ದಲ್ಲಿ ಕ್ಷಮೆ ಇರಲಿ.

ಕಡೆಯದಾಗಿ, ನಮಗೆ ಬೇಕು ಎನಿಸಿದಾಗ ಪುಟ ತಿರುಗಿಸಿ, ಸಾಕೆನಿಸಿದಾಗ ಬದಿಗಿಟ್ಟು, ಮತ್ತೆ ಮನಸ್ಸಾದಾಗ ಪುಸ್ತಕ ಕೈಗೆತ್ತಿಕೊಳ್ಳುವಂತಿಲ್ಲ ಇಲ್ಲಿ. ನಾಟಕವೆಂದರೆ ಕಾಲ-ದೇಶದ ಕಟ್ಟುಪಾಡು ನಟರಿಗೂ, ನೋಡುಗರಿಗೂ ಸಹ. ಕಾದಂಬರಿ ಕ್ರಮಿಸುವ ಮಾರ್ಗದಲ್ಲಿ ನಾವು ಕ್ರಮಿಸುವುದಿಲ್ಲ. ದೃಶ್ಯ ಬಿಗಿಯನ್ನು ಕಾಪಾಡುವ, ಸನ್ನಿವೇಶದ ಸತ್ಯವನ್ನು ತೆರೆದಿಡುವ ಮತ್ತು ಸದಾ ಮುಂದೇನು ಎನ್ನುವ ಕುತೂಹಲವನ್ನು ಕೆರಳಿಸುವ ಉದ್ದೇಶದಿಂದ ರಚಿತವಾಗಿದೆ ಈ ನಾಟಕದ ಕಟ್ಟು. ಆಟ ಮುದ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ನಮಸ್ಕಾರ.
– ಪ್ರಕಾಶ್ ಬೆಳವಾಡಿ.

ಪರ್ವ ನಮ್ಮ ಬದುಕು

ನಲವತ್ತೆರಡು ವರ್ಷಗಳ ಹಿಂದೆ ಅಂದರೆ 1979 ರಲ್ಲಿ ಭೈರಪ್ಪನವರು ಪರ್ವ ಬರೆದಿದ್ದು, ಇಂದಿಗೂ ಈ ಕಾದಂಬರಿ ಲೋಕಮಾನ್ಯವಾಗಿದೆ. ಭೈರಪ್ಪನವರೇ ಹೇಳುವಂತೆ, ಸಾಹಿತ್ಯದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ವಿಂಗಡನೆ ತಪ್ಪು. ನಾನು ಬರೆಯುವುದೆಲ್ಲಾ ಪ್ರತ್ಯಕ್ಷವೇ. ಮಹಾಭಾರತ ಸಹ ಇತಿಹಾಸ ಎನಿಸಿಕೊಳ್ಳುತ್ತದೆ. ವ್ಯಾಸ, ವಾಲ್ಮೀಕಿ ಪರಂಪರೆಯನ್ನು ಭೈರಪ್ಪನವರು ಮುಂದುವರೆಸಿದ್ದು, ಇದು ಬಹಳ ವಿಶೇಷ ಎಂದೆನಿಸುತ್ತದೆ. ಅಂತರಂಗಕ್ಕೆ ಸಾಕ್ಷಿಯಿಲ್ಲ. ನಾಣ್ಯಗಳನ್ನು, ಶಾಸನಗಳನ್ನು, ಆ ಕಾಲದ ಭಕೈರುಗಳನ್ನು ಹಿಡಿದು, ಕಛೇರಿಯಲ್ಲಿ ಸಿಕ್ಕ ಪತ್ರಗಳನ್ನು ಹುಡುಕಿ ತೆಗೆಯಬೇಕು. ಸಮಕಾಲೀನ ಸಾಹಿತ್ಯದಲ್ಲಿ ಬಂದಿದ್ದನ್ನು ವಿಮರ್ಶಿಸಬೇಕು. ಎಲ್ಲವನ್ನೂ ನೋಡಿ ಬರೆಯಬೇಕು. ಒಬ್ಬ ಸೃಷ್ಟಿಶೀಲ ಲೇಖಕನು ಅಂತರಂಗದ ಭಾವವನ್ನು ಮುಟ್ಟುವ ಮಟ್ಟಕ್ಕೆ ಬರೆಯಬೇಕು. ಘಟನೆಗಳಿಗೆಲ್ಲಾ ಬುನಾದಿಯಾದದ್ದನ್ನು ಲೇಖಕ ಹಿಡಿದು ಅಲ್ಲಿಯ ಮಾತುಗಳನ್ನು ಬರೀತಾನೆ.

ಭೈರಪ್ಪನವರು ಹೇಳುತ್ತಾರೆ. ನಾನು ಬರೆಯುತ್ತಿರುವುದು ಭಾರತದ ಕಥೆಯಲ್ಲ, ಮಾನವ ಕಥೆಗಳ ಪ್ರಜ್ಞೆ ನನಗೆ ಉದ್ದಕ್ಕೂ ಇತ್ತು ಅಂತ ಹೇಳಿದ್ದಾರೆ. ಮತ್ತೊಂದು ಮಹಾಭಾರತ ಹೊರಡುವಾಗ, ಜೈಪುರದ ಹತ್ತಿರ ವಿರಾಟನಗರದ ಹತ್ತಿರ ಚೋಟಾ ಕುರುಕ್ಷೇತ್ರ ಎಂಬುದು ಇರುತ್ತದೆ. ಅದರ ಬಳಿಯೇ ಉತ್ತರ ಗೋಗ್ರಹಣ ಆದದ್ದು. ಅಲ್ಲಿ ಒಂದು ಗುಹೆ. ಆ ಗುಹೆಯಲ್ಲಿ ಭೀಮನ ವಿಗ್ರಹ. ಅಲ್ಲಿ ಮದುವೆಯಾದ ದಂಪತಿಗಳು ದೇವರ ಪೂಜೆ ಮಾಡಿಸಿಕೊಂಡು ಬರಬೇಕು. ಹಾಗೆ ಮಾಡಿದರೆ ಹೆಂಡತಿಯ ಮೇಲೆ ಕಣ್ಣು ಹಾಕಿದ ಪರ ಗಂಡಸಿನ ಹೆಡೆಮುರಿ ಕಟ್ಟುವಷ್ಟು ಶಕ್ತಿ ಗಂಡನಿಗೆ ಬರುತ್ತದೆ ಎಂಬುದು ವಾಡಿಕೆ. ಒಂದು ಪಕ್ಷ ಮಹಾಭಾರತ ಇತಿಹಾಸ ಅಲ್ಲ ಎಂದು ಯಾರೋ ತಲೆಕೆಟ್ಟ ವಿದ್ವಾಂಸರು ೫೦ ಸಾವಿರ ಮಹಾಗ್ರಂಥ ಬರೆದು ನಮ್ಮ ತಲೆ ಮೇಲಿಟ್ಟು ಚಪ್ಪಡಿ ಹಾಕಿದರು ಅಂತ ಇಟ್ಟುಕೊಳ್ಳಿ. ಆ ಸಮಯದಲ್ಲಿ ಅಂತರಂಗದಲ್ಲಿ ಮಹಾಭಾರತ ದಿನನಿತ್ಯ ನಡೆಯುತ್ತಾ ಇರುವಾಗ 50 ಸಾವಿರವಲ್ಲ, 50 ಲಕ್ಷ ಪುಟ ಬರೆದರೂ, ತಲೆ ಮೇಲೆ ಬಿದ್ರೂ ಅದು ಭಸ್ಮವಾಗುತ್ತೆ ಹೊರತು ವಿಶೇಷವೇನಾಗುವುದಿಲ್ಲ. ಯಾಕೆಂದರೆ ವ್ಯಾಸರು ಬರೆದದ್ದು ನಮ್ಮ ಬದುಕೇ ಅಗಿರುವುದರಿಂದ, ಅದು ಮಹಾಭಾರತ ನಡೆದಿರುವುದು ನಿಜವೆಂದು ಅನ್ನಿಸುವುದು ಖಂಡಿತಾ. ಇತಿಹಾಸ ಎಂಬುದು ಒಂದು ಕಾವ್ಯವಾದಾಗ, ಮನ ಮುಟ್ಟುತ್ತೆ.

ಭೈರಪ್ಪನವರು ಯೌವನದಲ್ಲಿ ಇದ್ದಂತ ನವ್ಯ ಸಾಹಿತ್ಯಕ್ಕಿಂತ ಭಿನ್ನವಾಗಿ ಬರೆದಿದ್ದಾರೆ. ಸಾಹಿತಿಗೆ ಬೇಕಾದ ಸತ್ಯ ಯಾವುದು? ಅಥವಾ ಭೀಮ ಕುರು ವಂಶಕ್ಕೆ ಸೇರಿದವನು, ಕೀಚಕ ಸೂತ ವಂಶಕ್ಕೆ ಸೇರಿದವನು, ಅವನು ಬೇರೆ ದೇಶಕ್ಕೆ ಸೇರಿದವನು ಇಷ್ಟು ಮೇಲೆ ಮೇಲೆ ಜಾತಿ ಆಧಾರದ ಮೇಲೆ ನೋಡಬೇಕಾ? ನ್ಯೂಟನ್ ಓದಲಿ ಬಿಡಲಿ ನ್ಯೂಟನ್ ಥಿಯರಿ ಇದ್ದೇ ಇರುತ್ತೆ. ಹಾಗೇ ಮಹಾಭಾರತ ಓದಿದರೆ ಮಾತ್ರ ಆಗಲ್ಲ, ಅದನ್ನು ಅನುಭವಿಸಬೇಕು. ಹೀಗೆ ನಮ್ಮ ಅನುಭವಕ್ಕೆ ಬಂದದ್ದನ್ನು ವ್ಯವಸ್ಥಿತವಾಗಿ ತಂದರೆ ಶಾಸ್ತ್ರ. ನಮ್ಮ ಅನುಭವಕ್ಕೆ ಬಂದಿದ್ದನ್ನು ಮತ್ತೊಬ್ಬನ ಅನುಭವಕ್ಕೂ ಬರುವಂತೆ ಕಲಾತ್ಮಕವಾಗಿ ರೂಪಿಸಿದರೆ ಅದು ಕಾವ್ಯ, ಅನುಭಾವ, ವಿಭಾವ ಇರುತ್ತದೆ. ಭೈರಪ್ಪನವರು ಪರ್ವದಲ್ಲಿ ಅನುಭಾವ ವಿಭಾವಗಳನ್ನು ಮೂಡಿಸಿದ್ದಾರೆ. ನಾವೇ ಪಾತ್ರವಾಗಿ, ಪಾತ್ರವೇ ನಮ್ಮಲ್ಲಿಗೆ ಬಂದು, ವಿನೂತನ ಸೃಷ್ಟಿಯನ್ನು ಪರ್ವದಲ್ಲಿ ಮೂಡಿಸಿದ್ದಾರೆ. ಇದನ್ನೇ ರಂಗಸ್ಥಳಕ್ಕೆ ತಂದರೆ ಅದು ನಾಟಕ ಎನಿಸುತ್ತದೆ.

ಭೈರಪ್ಪನವರು ಪರ್ವದಲ್ಲಿ ಹಿಡಿಯ ಹೊರಟಿರುವುದು ನಮ್ಮ ಬದುಕನ್ನು. ನಮ್ಮೊಳಗೆ ಭಾವಗಳು ಇದೆ ಎಂದು ಸಂಪೂರ್ಣವಾಗಿ ಶರಣಾಗುತ್ತಾರೆ. ಕೆಲವರ ಕಾದಂಬರಿ ಸಂಶೋಧನೆ ಕಾವ್ಯದಂತಿರುತ್ತದೆ. ಆದರೆ ಭೈರಪ್ಪನವರು ಬದುಕನ್ನು ಬದುಕಿದಂತೆ ತೋರಿಸಿದ್ದಾರೆ. ದ್ವಾರಕೆಗೆ ಹೋದದ್ದು, ಥಾಕರ್ ಮನೆಯಲ್ಲಿದ್ದದ್ದು, ಲೈಟ್ ಹೌಸ್‌ನಲ್ಲಿ ಹೋಗಿದ್ದು ಇವೆಲ್ಲಾ ಹೇಳಿ, ಕಾದಂಬರಿಯಲ್ಲಿ ಸಾತ್ಯಕಿ ಮಲಗಿ ಅನುಭವಿಸಿದ್ದನ್ನು ತಾವೇ ಅನುಭವಿಸಿದ್ದಾರೆ. ಕೃಷ್ಣನ ದ್ವಾರಕೆ ನನಗೆ ಅಂತರ್ಗತವಾಗಿತ್ತು. ನಾನು ಯಾವಾಗ ಬೇಕಾದರೂ ಹೋಗಬಹುದಾಗಿತ್ತು ಎಂದು ಭೈರಪ್ಪನವರು ಹೇಳುತ್ತಾರೆ. ಅವರಿಗೆ ಸರಸ್ವತಿ ತನ್ನ ಕೀಲಿ ಕೈ ಕೊಟ್ಟಿದ್ದಾಳೆ. ಭಾವ ಲೋಕದ ಕಡೆ ಮುಕ್ತ ಪ್ರವೇಶ. ಭೈರಪ್ಪನವರು ಎದುರಿನವರು ಮಾತುನಾಡುತ್ತಿದ್ದುದ್ದನ್ನು ಸ್ಪಂದಿಸುತ್ತಾರೆ. ಭಾರತೀಯ ಕಾವ್ಯ ಮೀಮಾಂಸೆ ಒಂದು ಸತ್ಯ. ಭೈರಪ್ಪನವರ ಬರವಣಿಗೆ ಬದುಕಿದೆ. ಬಾಳಿದೆ. ನಮ್ಮ ಭಾವಗಳಿಗೆ ಸ್ಪಂದಿಸಿ ಬರೆದಿದ್ದುದರಿಂದ ಅದು ಉಳಿದಿದೆ.

ಪರ್ವದಲ್ಲಿ ಬಂದಿರುವುದೆಲ್ಲಾ ಹುಟ್ಟಿನ ಸಂದೇಹ. ಪಾಂಡು ಮೊದಲೇ ನಿರ್ವೀರ್ಯನಾಗಿದ್ದರೂ ಈ ಪಾಂಡವರು ಹೇಗೆ ಜನಿಸಿದರು ಎಂಬ ಶಂಕೆ ಜನರಲ್ಲೂ ಮೂಡಿತ್ತು. ಭೈರಪ್ಪನವರು ಇಂತಹ ಸಣ್ಣ ವಿಷಯಗಳನ್ನೂ ಗಮನಿಸಿ ಮಂಡಿಸಿದ್ದಾರೆ. ಭೈರಪ್ಪನವರು ಪ್ರತಿ ಪಾತ್ರವನ್ನು ಸ್ವಾರಸ್ಯವಾಗಿ ಚಿತ್ರಿಸುತ್ತಾ ಬಂದಿದ್ದಾರೆ. ಯುದ್ಧ ಎದುರಾಗುತ್ತಿರುವಾಗ ಬದುಕನ್ನು ಆಲೋಚಿಸುವುದು ಇದರಲ್ಲಿ ಚಿತ್ರಿತವಾಗಿದೆ. ನಮ್ಮ ಮೌಲ್ಯಗಳು ನಿಜವಾಗಿ ರೂಪಿತವಾಗಬೇಕಾದದ್ದು ಸಾವು ಎದುರಿಗೆ ನಿಂತಾಗ ಎಂದು ಭೈರಪ್ಪನವರು ಹೇಳಿದ್ದಾರೆ. ಪರ್ವದಲ್ಲಿ ಎಲ್ಲಾ ಪಾತ್ರಗಳು ಮೌಲ್ಯವನ್ನು ರೂಪಿಸಿಕೊಳ್ಳುವುದು ಯುದ್ದೋನ್ಮುಖರಾದಾಗ. ಅದು ಕುಂತಿಯಲ್ಲಿ ಇರಬಹುದು, ದ್ರೌಪದಿಯಲ್ಲಿ ಇರಬಹುದು. ಭೀಮ, ಅರ್ಜುನ, ಕರ್ಣ, ದುರ್ಯೋದನ, ಸಾತ್ಯಕಿ ಇವರೆಲ್ಲರ ಮೂಲಕ ತೋರಿಸಿದ್ದು, ಸಾವಿನ ಎದುರಿಗೆ ಸುಳ್ಳಾಡಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿದ್ದಾರೆ. ಆತ್ಮ ನಿವೇದನೆ ಮಾಡಿರುವುದು ಪರ್ವದಲ್ಲಿ ಕಾಣಬರುತ್ತದೆ. ದ್ರೌಪದಿಯನ್ನು ಕುರಿತು ಭೀಮ ಯೋಚಿಸುವುದಕ್ಕೂ, ಅರ್ಜುನ ಯೋಚಿಸುವುದಕ್ಕೂ ವ್ಯತ್ಯಾಸವಿದೆ. ಅದನ್ನೇ ಕೃಷ್ಣನನ್ನು ಕುರಿತು ಬರೆದಿದ್ದಾರೆ. ಕೃಷ್ಣ ಎಲ್ಲರಿಗೂ ಬೇರೆ ಬೇರೆ ರೀತಿಯಲ್ಲಿ ಕಾಣುತ್ತಾನೆ. ಧೃತರಾಷ್ಟನ ಬಾಯಿಂದ ಬರುವ ಮಾತು ಕೃಷ್ಣಾ… ತಂತ್ರಗಾರ ಮೋಸಗಾರ ಎಂದು. ಕೃಷ್ಣನೊಬ್ಬನೇ ಹೆಣ್ಣಿಗೆ ನಿಜವಾಗಿ ಗೌರವ ಕೊಡುವವನು ಎಂದು ದ್ರೌಪದಿ ಅಂದುಕೊಳ್ಳುವ ಮಾತು.

ಇಡೀ ಪರ್ವದಲ್ಲಿ ಸಮಗ್ರವಾದ ಆಸ್ವಾದ ತೋರಿದ್ದು, ಕುಂತಿ ರಾಧೆಗೆ ತರ್ಪಣ ಕೊಡುವುದು ಮೂಲ ಭಾರತದಲ್ಲಿ ಇಲ್ಲದಿದ್ದರೂ ರಾಧೆಗೆ ತರ್ಪಣ ಕೊಡುವುದನ್ನು ಬರೆದಿದ್ದಾರೆ. ಕರ್ಣನನ್ನು ಕುಂತಿ ಕಳೆದುಕೊಂಡ ರೀತಿಯಲ್ಲೇ ದುರ್ಯೋಧನನು ಘಟೋತ್ಕಚನನ್ನು ಕೊಂದ ಎಂದ ಕೂಡಲೇ ಎಂಥಾ ಕಠಿಣ ಎನ್ನಿಸಿಬಿಡುತ್ತದೆ. ಇಲ್ಲಿ ಕುಂತಿ ಪರಿತ್ಯಾಗ ಮಾಡಿದ ಮಗನ ಹೆಣ ಸಿಗದಂತೆ ಆಗುತ್ತದೆ. ಇಲ್ಲಿ ಭೀಮನಿಗೆ ತನ್ನ ಮಗನಿಗೆ ಅಂತ್ಯಕ್ರಿಯೆ ಮಾಡುವ ಅವಕಾಶ ಬಂತು. ಆದರೆ ಕುಂತಿಗೆ ತನ್ನ ಹಿರಿಯ ಮಗನನ್ನು ನೋಡುವ ಅವಕಾಶವೂ ಬರಲಿಲ್ಲ. ಹೀಗೆ ಕಠಿಣ ಪರಿಸ್ಥಿತಿ ತಂದು ಇಟ್ಟಿದ್ದಾರೆ.

ಕುಂತಿ ಮತ್ತು ದ್ರೌಪದಿ ಸಂಬಂಧವನ್ನು ವರ್ಣಿಸುತ್ತಾ, ಕುಂತಿಗೆ ತಾನು ಗಂಡನ ಸುಖವನ್ನು ಪೂರ್ಣವಾಗಿ ಅನುಭವಿಸಿಲ್ಲ. ಕುಂತಿಗೆ ಆ ಸಾಮರ್ಥ್ಯ ಇದ್ದರೂ ತನಗೆ ಪೂರ್ಣ ವಂಚಿತವಾದಳು ಎಂಬುದು ಬರೆದಿದ್ದು, ಅದೇ ಸಂದರ್ಭದಲ್ಲಿ ದ್ರೌಪದಿಗೆ ಅತಿಯೋಗದ ರೂಪದಲ್ಲಿ ಕಾಮವನ್ನು ತಡೆಯಲು ಸಾಧ್ಯವಾಗಲಿಲ್ಲ. ದ್ರೌಪದಿ ಭೀಮನ ಮೇಲೆ ಗೌರವ ಇದ್ದರೂ ಪ್ರೀತಿಯೆಲ್ಲಾ ಅರ್ಜುನನ ಮೇಲೆ ಇರುತ್ತದೆ. ಹೀಗೆ ಸಂದಿಗ್ಧತೆಯನ್ನು ಭೈರಪ್ಪನವರು ವರ್ಣಿಸಿ ಬರೆದಿದ್ದಾರೆ.

ವರ್ಣ ಪರಿವರ್ತನೆಯ ಬಗ್ಗೆ ಬರೆದಿದ್ದಾರೆ. ದ್ರೋಣ ಕ್ಷತ್ರಿಯನಾಗಿಯೂ ಇಲ್ಲ, ಬ್ರಾಹ್ಮಣನಾಗಿಯೂ ಇಲ್ಲ. ಭೀಷ್ಮ ಬ್ರಾಹ್ಮಣನಾಗಿಯೂ ಇಲ್ಲ, ಕ್ಷತ್ರಿಯನಾಗಿಯೂ ಇಲ್ಲ. ಹೀಗೆ ಹೊಯ್ದಾಟಗಳಲ್ಲಿ ತಾವು ಮಾಡುವ ಕೆಲಸ, ಕರ್ಮ ಸಂಕರವನ್ನು ತೋರ್ಪಡಿಸಿದ್ದಾರೆ. ನಾನು ಇಷ್ಟಪಡುವುದೊಂದು, ನಾನು ಮಾಡುವುದೊಂದು. ಹೀಗೆ ತೊಳಲಾಟವನ್ನು ದ್ರೋಣರ ಮೂಲಕ ತೋರಿಸಿದ್ದಾರೆ. ಇಡೀ ಪರ್ವದಲ್ಲಿ ಬರುವ ಪಾತ್ರಗಳಲ್ಲಿ ನಗು ತರಿಸುವ ಪಾತ್ರ ಎಂದರೆ ಕೃಪಾಚಾರ್ಯರ ಪಾತ್ರ. ನಿಮ್ಮ ಕಡೆ ಪರವಾಗಿಲ್ಲ, ಹೋಮದ ವಾಸನೆಯಾದರೂ ಬರುತ್ತೆ. ನಮ್ಮ ಕಡೆ ಕುದುರೆ ಲದ್ದಿ ವಾಸನೆ ಎಂದು ಹೇಳಿ ಜೇನುತುಪ್ಪ ನೆಕ್ಕುತ್ತಾ ಕುಳಿತುಕೊಳ್ಳುವುದು ಹಾಸ್ಯವನ್ನು ಉಂಟುಮಾಡುತ್ತದೆ.

ಪರ್ವದಲ್ಲಿ ಅತ್ಯಂತ ಶಕ್ತವಾದ ಪಾತ್ರಗಳಲ್ಲಿ ಕುಂತಿ. ಹೆಣ್ಣಿಗೆ ಧೈರ್ಯ ಬಂದಿದ್ದು ಯಾವಾಗ ಎಂದು ಚೆನ್ನಾಗಿ ತೋರಿದ್ದಾರೆ. ದ್ರೌಪದಿಯನ್ನು ರಣಚಂಡಿ ಎಂಬುದನ್ನು ತೋರಿದ ವ್ಯಾಸರ ಪಾತ್ರ ಭೈರಪ್ಪನವರ ಪರ್ವದಲ್ಲಿ ವಿಭಿನ್ನವಾಗಿದೆ. ಗಂಡಸರು ಸಭ್ಯತೆ ದಾಟಿದಾಗ ಹೆಣ್ಣು ಧೈರ್ಯಮಾಡುತ್ತಾಳೆ ಎಂದು ಹೇಳಿದ್ದಾರೆ. ರಂಗಸೂಚನೆಯನ್ನು ಪರ್ವದಂತಹ ಕೃತಿಯನ್ನು ಯಾವ ಮಾಧ್ಯಮಕ್ಕೆ ತರುವುದೂ ಕಷ್ಟ. ಇದನ್ನು ನಾಟಕ ಮಾಡುತ್ತಿರುವುದು ಧೈರ್ಯವೇ ಸರಿ. ಹೆರಿಗೆ ನೋವುಗಳನ್ನು ಪರ್ವದಲ್ಲಿ ವಿವರಿಸಿರುವ ರೀತಿ ಮನಸ್ಸಿಗೆ ಕಟ್ಟುವಂತೆ ಬರೆದಿದ್ದಾರೆ.

ಇಲ್ಲಿ ದುರ್ಯೋಧನ ಎತ್ತರಕ್ಕೆ ಹತ್ತಿದರೆ ತಲೆ ತಿರುಗುತ್ತದೆ. ಅಂದರೆ ತನ್ನ ಸ್ಥಾನ ಎತ್ತರದ್ದಾಗಿದ್ದರೂ ಅದನ್ನು ಕಾಪಾಡಿಕೊಳ್ಳಲಾರ ಎಂಬುದನ್ನು ಈ ರೀತಿ ತೋರಿಸಿದ್ದಾರೆ. ಎತ್ತರಕ್ಕೆ ಹೋದರೆ ಅವನಿಗೆ ತಲೆ ನಿಲ್ಲೋಲ್ಲ ಎಂದರೆ ದುರಹಂಕಾರಿ ಎಂದಾಗುತ್ತದೆ. ಮತ್ತೊಂದು, ತಲೆ ಉರುಳಿ ಹೋಗುತ್ತದೆ. ಅಂದರೆ ಸಾವು ಎಂದಾಗುತ್ತದೆ. ಹೀಗೆ ವಿಭಿನ್ನ ರೀತಿಯಲ್ಲಿ ಭೈರಪ್ಪನವರ ವರ್ಣನೆ ಮನಸ್ಸಿನಲ್ಲಿ ಪಾತ್ರಗಳ ತೂಕ ಮಾಡುವಂತೆ ಮಾಡುತ್ತದೆ. ಪರ್ವ ನಾಟಕವನ್ನು ಒಂದೆರಡು ಪುಟಗಳಲ್ಲಿ ವಿಮರ್ಶಿಸುವುದು, ಹೇಳುವುದು ಕಷ್ಟ. ಪರ್ವ ಒಂದು ಮೇರು ಪರ್ವತ.
– ಶತಾವಧಾನಿ ಡಾ. ಆರ್. ಗಣೇಶ್

ಪರ್ವ ನಾನೇಕೆ ಬರೆದೆ !

ಪರ್ವ ಬರೆಯುವುದಕ್ಕಾಗಿ ನಾನು ಏನೇನು ಸಂಶೋಧನೆ ಮಾಡಿದೆ, ಯಾವ ಪುಸ್ತಕಗಳನ್ನು ಓದಿದೆ, ಎಲ್ಲೆಲ್ಲಿಗೆ ಹೋಗಿ ಕ್ಷೇತ್ರ ಕಾರ್ಯವನ್ನು ಮಾಡಿದೆ ಎಂಬುದೆಲ್ಲವನ್ನೂ ನಾನು ಹಿಂದೆಯೇ ಬರೆದಿದ್ದೇನೆ. ಈಗ ಮತ್ತೆ ಹೇಳುವ ಅಗತ್ಯವಿಲ್ಲ. ಆದರೆ ರಂಗಾಯಣ ನನ್ನ ಪರ್ವ ಕಾದಂಬರಿಯನ್ನು ನಾಟಕವನ್ನಾಗಿಸಿ ಪ್ರದರ್ಶನ ಮಾಡಲು ಹೊರಟಿರುವ ಸಾಹಸ ನನಗೆ ಮೆಚ್ಚುಗೆಯಾಗಿದೆ. ಪ್ರಕಾಶ್ ಬೆಳವಾಡಿ ರಚಿಸಿರುವ ರಂಗಪಠ್ಯವನ್ನು ಓದಿ ಖುಷಿಗೊಂಡಿದ್ದೇನೆ. ಈ ಹಿನ್ನಲೆಯಲ್ಲಿ ಒಂದೆರಡು ಮಾತು.

ಪರ್ವದಂತಹ ಕಾದಂಬರಿಯಲ್ಲಿ ಪುರಾಣ ಕಲ್ಪನೆ ತೆಗೆದುಹಾಕಿದ್ದೀರಿ. ಅದರಿಂದ ಏನು ಸಾಧನೆ ಮಾಡಿದಂತಾಯಿತು. ಪುರಾಣ ಕಥೆಯಲ್ಲಿ ಎಷ್ಟು ಆಶ್ಚರ್ಯಕರವಾದದ್ದು ಇತ್ತು. ಅದನ್ನೆಲ್ಲಾ ತೆಗೆದು ಹಾಕಿದ್ದರಿಂದ ಏನು ಉಳಿದಂತಾಯಿತು ಎಂದು ಅನೇಕ ಮಂದಿ ಪ್ರಶ್ನೆ ಕೇಳಿದ್ದಾರೆ, ಕೇಳುತ್ತಲೂ ಇದ್ದಾರೆ. ಏನಾಯಿತೆಂದರೆ ಕಾದಂಬರಿ ಎಂಬುದು ಹಿಂದೆಯೇ ಪ್ರಾರಂಭವಾದದ್ದು. ನಮ್ಮಲ್ಲಿ ಬಾಣಭಟ್ಟ ಕಾದಂಬರಿ ಬರೆದಿದ್ದಾನೆ. ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಇಂಗ್ಲಿಷ್‌ನ ನಾವೆಲ್ ಅಂತಲೇ ಇಟ್ಟು, ಕಾದಂಬರಿ ಎಂದೇ ಹೇಳಿದ್ದಾರೆ. ನಿಜವಾದ ಕಾದಂಬರಿ ಹುಟ್ಟಿದ್ದು 350-400 ವರ್ಷದ ಹಿಂದೆ ಯೂರೋಪ್‌ನಲ್ಲಿ. ಅವರ ಕಲ್ಪನೆ ಏನೆಂದರೆ ಕಥೆ ಹೇಳಬೇಕು. ಕಥೆಗೆ ಥೀಮ್ ಎಲ್ಲಿಂದ ತೆಗೆದುಕೊಳ್ಳಬೇಕು? ನಮ್ಮ ಸುತ್ತಮುತ್ತ ನಡೆಯುವ ಘಟನೆಗಳಿಂದ, ನಮ್ಮ ಕುಟುಂಬದಿಂದ, ನಮ್ಮ ಬಂಧುಬಾಂಧವರಲ್ಲಿ ನಡೆಯುವ ಘಟನೆಯಿಂದ, ಅಥವಾ ನಮ್ಮ ದೇಶದ ಘಟನೆಗಳಲ್ಲಿ ಆಕರ್ಷಕವಾಗಿ ಕಂಡದ್ದನ್ನು ಬರೆಯುವುದನ್ನು ನಾವೆಲ್ ಎಂದು ಕರೆದರು. ನಾವೆಲ್ ಎಂದರೆ ಹೊಸದು ಅಂತ ಅರ್ಥ. ಯೂರೋಪ್‌ನಲ್ಲಿ ರಿಯಲಿಸಂ ಹೆಚ್ಚಾಗಿ ಬಂದಿತ್ತು. ಚರ್ಚ್‌ನ ಪ್ರಭಾವ ಕಮ್ಮಿ ಆದ ನಂತರ ಯೂರೋಪ್‌ನ ಎಲ್ಲಾ ದೇಶದಲ್ಲೂ ಹೀಗೇ ಬೆಳೆಯುತ್ತಾ ಬಂತು. ನೋಡಿದ ಅನುಭವದಿಂದ ಬರೆಯುತ್ತೀವಿ ಅಂದರೆ ವಾಸ್ತವಿಕತೆ ಇರಬೇಕು. ಬರವಣಿಗೆಯಲ್ಲೂ ವಾಸ್ತವಿಕತೆ ಬಂದಿದ್ದರಿಂದ, ಎಷ್ಟರಮಟ್ಟಿಗೆ ಫ್ರೆಂಚ್ ಕಾದಂಬರಿಕಾರರು ರಿಯಲಿಸಂ ಬರೆಯುತ್ತಿದ್ದರು ಎಂದರೆ, ಫ್ರೆಂಚ್‌ನ Gustave Flaubert ಎಂಬುವವನು Madame Bovary ಎಂಬ ಕಾದಂಬರಿ ಬರೆದಿದ್ದಾರೆ. ಆ ಕಾದಂಬರಿ ಬರೆಯುವಾಗ ಹಳ್ಳಿ ಚಿತ್ರಿಸಬೇಕಾದರೆ ಪ್ಯಾರಿಸ್‌ನಿಂದ ದೂರದಲ್ಲಿರುವ ಹಳ್ಳಿಗೆ ಬೆಳಗಾಗೆದ್ದು ಹೋಗಿ ಸೂರ್ಯೋದಯ ಹೇಗಾಗುತ್ತೆ? ಯಾವ ಮರದ ಹಿಂದೆ ಸೂರ್ಯ ಕಾಣುತ್ತಾನೆ ಎಂಬುದನ್ನೆಲ್ಲಾ ಚಿತ್ರಿಸಿಕೊಂಡು, ನಿತ್ಯವೂ ಹೋಗಿ ಹಳ್ಳಿಯನ್ನು ತನ್ನ ಬರವಣಿಗೆಯಲ್ಲಿ ಚಿತ್ರಿಸಿದ್ದಾರೆ. Emile Zola ಎಂಬುವವರು ನಾನಾ ಎಂಬ ಕಾದಂಬರಿಯನ್ನು ಬರೆದರು. ಒಬ್ಬ ಡಾನ್ಸರ್ ನಾಟಕದಲ್ಲಿ ನಟಿಸುತ್ತಿದ್ದಳು. ಅವಳ ಡಾನ್ಸ್ ವರ್ಣಿಸಿದ್ದು, ಅವನು ರಂಗದಲ್ಲಿ ಪರದೆಯನ್ನು ಮಾಡಿ, ಅರಮನೆ, ಕಾಡು, ಹೀಗೆ ನಾಟಕದ ಪರದೆಗಳನ್ನು ಮಾಡಿ, ಅದಕ್ಕೆ ಎಂಥಾ ದಾರ ಉಪಯೋಗಿಸ್ತಾರೆ, ಅದಕ್ಕೆಂಥಾ ರಾಟೆ ಇರುತ್ತೆ ಎಂಬುದನ್ನು ಪುಟಗಟ್ಟಲೆ ವರ್ಣಿಸಿದ್ದಾರೆ. ನಾನು ವಿದ್ಯಾರ್ಥಿಯಾಗಿದ್ದಾಗ ಆ ಕಾದಂಬರಿಯನ್ನು ಓದಿದ್ದೆ. ಎಷ್ಟು ಚೆನ್ನಾಗಿ ವರ್ಣಿಸಿದ್ದಾರೆ. ಮುಂದೆ ನಾನು ಕಾದಂಬರಿ ಬರೆದರೆ ನಾನೂ ಹೀಗೆ ವರ್ಣಿಸಬೇಕು ಎಂದು ನನ್ನ ಮನಸ್ಸಿಗೆ ಬಂದಿತ್ತು. ಸುಮಾರು 2-3 ವರ್ಷ ಅದೇ ನನ್ನ ತಲೆಯಲ್ಲಿ ತುಂಬಿತ್ತು. ನಂತರ ನಾನು ಆ ರೀತಿ ಬರಿಯಲೇ ಇಲ್ಲ. ಇತ್ತೀಚಿಗೆ ಆ ಕಾದಂಬರಿ ಕೈಗೆ ಸಿಕ್ಕಿತ್ತು. ಮತ್ತೊಮ್ಮೆ ಓದಲು ಪ್ರಾರಂಭಿಸಿದೆ. ರಿಯಲಿಸಂ ಅತಿಯಾದರೆ ಬೋರ್ ಆಗುತ್ತೆ. ರಿಯಲಿಸಂನಲ್ಲಿ ರಸ ಇರಬೇಕು. ರಸ, ಧ್ವನಿ, ಔಚಿತ್ಯ ರಿಯಲಿಸಂ ಜೊತೆಯಲ್ಲೇ ಸೇರಿದರೆ ಕಲೆಯಾಗುತ್ತದೆ. ನಮ್ಮಲ್ಲಿ ರಸ, ಧ್ವನಿ, ಔಚಿತ್ಯ ಮೊದಲಿನಿಂದಲೂ ಇಟ್ಟುಕೊಂಡಿದ್ದರು. ಅದನ್ನೇ ಅನುಸರಿಸಿಕೊಂಡು ಬರೆದಿದ್ದರು ಕೂಡ. ನಿನ್ನೆ ಮೊನ್ನೆವರೆಗೂ ರಸ, ಧ್ವನಿ, ಔಚಿತ್ಯವೇ ಇತ್ತು. ಈಗ ನವ್ಯರು, ಮಾರ್ಕ್ಸಿಸ್ಟ್ ಬಂದು ಅವೆಲ್ಲಾ ಬಿಟ್ಟಿದ್ದಾರೆ ಅಷ್ಟೇ. ನಮ್ಮ ನವೋದಯ ಕಾಲದಲ್ಲಿ ರಸ, ಧ್ವನಿ, ಔಚಿತ್ಯವನ್ನೇ ಹೇಳುತ್ತಿದ್ದರು. ಅದು ಇಲ್ಲದೇ ಹೋದಲ್ಲಿ, ಕೇವಲ ಹಾಗೇ ವರ್ಣಿಸಿದರೆ ಅದು ಕಲೆಯಾಗಲ್ಲ, ಅದು ಸಾಹಿತ್ಯ ಆಗಲ್ಲ.

ಕಾದಂಬರಿ ಎಂದರೆ ರಿಯಲಿಸಂ ಅಂತಲೇ ಅರ್ಥ. ಸುತ್ತಲೂ ನಾವು ಕಣ್ಣಾರೆ ಕಂಡಿದ್ದನ್ನು ಮಾತ್ರ ಕಾದಂಬರಿಯಲ್ಲಿ ಬರೆದರು. ಈಗ ನನಗೆ ಬಂದ ಸಮಸ್ಯೆ ಏನೆಂದರೆ, ರಾಮಾಯಣ ಮತ್ತು ಮಹಾಭಾರತವನ್ನು ಯಾವ ರೀತಿ ಬರೆಯಬೇಕು. ಎಷ್ಟರಮಟ್ಟಿಗೆ ಪುರಾಣ ಮತ್ತು ಎಷ್ಟರಮಟ್ಟಿಗೆ ನೈಜ ಘಟನೆ? ನನ್ನ ಪ್ರಕಾರ ರಾಮಾಯಣ, ಮಹಾಭಾರತ ಇತಿಹಾಸ. ನಾನು ಅದನ್ನು ಇತಿಹಾಸ ಎಂದು ನಂಬದೇ ಇದ್ದರೆ ಕಾಲ್ಪನಿಕ ಎಂದಾಗುತ್ತಿತ್ತು. ಮಹಾಭಾರತ ಯಾವ ಕಾಲದಲ್ಲಿ ನಡೆಯಿತು ಎಂಬುದನ್ನು ಅಧ್ಯಯನ ಮಾಡಿದೆ. ಈ ಇತಿಹಾಸವನ್ನು ಸಮಾಜ ಶಾಸ್ತ್ರಜ್ಞರು, ಮಾನವ ಶಾಸ್ತ್ರಜ್ಞರು ಕ್ರಿ.ಪೂ.12ನೇ ಶತಮಾನದಲ್ಲಿ ಮಹಾಭಾರತ ನಡೆಯಿತೆಂದು ಹೇಳುತ್ತಾರೆ. ಅದಕ್ಕೆಲ್ಲಾ ವಂಶವೃಕ್ಷ ಬರೆದಿದ್ದಾರೆ. ಮಹಾಭಾರತದಲ್ಲಿ ಪರೀಕ್ಷಿತನಿಂದ ಹಿಡಿದು ಹಿಂದಕ್ಕೆ ಲೆಕ್ಕ ಹಾಕುತ್ತಾ ಹೋಗಿದ್ದಾರೆ. ಒಂದು ತಲೆಮಾರಿಗೆ 20 ವರ್ಷವೆಂದು ಲೆಕ್ಕ ಹಾಕಿದರೂ 1200 ವರ್ಷ ಹಿಂದಕ್ಕೆ ಹೋಗುತ್ತದೆ. ಹೀಗೆ ಮಹಾಭಾರತ ನಡೆದಿದ್ದ ಕಾಲ ಲೆಕ್ಕ ಹಾಕಲಾಗಿದೆ. ನಂತರದಲ್ಲಿ ಮಹಾಭಾರತದ ಮೂಲ ಕಥೆಗೆ ಅನೇಕ ಉಪ ಕಥೆಗಳನ್ನು ಸೇರಿಸಿದ್ದಾರೆ.

ಇದರಲ್ಲಿ ವಾಸ್ತವಿಕತೆ ಯಾವುದು? ಕಾಲ್ಪನಿಕ ಯಾವುದು ಎಂದು ಸಂಶೋಧನೆ ಮಾಡಿದಾಗ ನಮ್ಮ ಜೀವನ ಕಥೆಗಳಿಗೆ ರಾಮಾಯಣಕ್ಕಿಂತ ಮಹಾಭಾರತ ಕಥೆಯನ್ನು ಅವಲಂಬಿಸಿದ್ದಾರೆ. ಅಂದರೆ ೧೫೦೦ ದಿಂದ 2000 ವರ್ಷಗಳ ವೇದಗಳ ಕಾಲದಲ್ಲಿ ಒಂದೊಂದು ಯುಗ ಎಂದು ವಿಂಗಡಿಸುತ್ತಾ ಬಂದರೆ ಯಾವ ಯಾವ ಯುಗದಲ್ಲಿ ಆಹಾರ ಹೇಗಿತ್ತು? ಹೆಸರುಗಳೇನು? ಎಂತಹ ಬಟ್ಟೆ ಹಾಕುತ್ತಿದ್ದರು? ಹೆಣ್ಣು ಮತ್ತು ಗಂಡಿನ ಬಟ್ಟೆ ರೀತಿ.. ಹೀಗೆ ಎಲ್ಲವನ್ನೂ ಸಂಶೋಧನೆ ಮಾಡಿದ್ದಾರೆ. ನಾನು ಅವನ್ನೆಲ್ಲಾ ಓದಿದ್ದೇನೆ. ಆ ಸಂಶೋಧನೆಗಳನ್ನು ಅರ್ಥಮಾಡಿಕೊಂಡು ನಂತರದಲ್ಲಿ ವ್ಯಾಸಭಾರತವನ್ನು ಓದಿದೆ. ವ್ಯಾಸಭಾರತ ಓದುವಾಗ ವಾಸ್ತವಿಕತೆ ಯಾವುದು? ಕಾಲ್ಪನಿಕ ಯಾವುದು? ಎಂಬುದನ್ನು ಅರ್ಥಮಾಡಿಕೊಂಡೆ. ಭರತಖಂಡದ ಒಂದು ಕಡೆ ಒಂದುರೀತಿ ಮಹಾಭಾರತ ಬರೆದರೆ ಮತ್ತೊಂದು ಕಡೆ ಬೇರೊಂದು ರೀತಿ ಬರೆದಿರುತ್ತಾರೆ. ಗೋರಖ್‌ಪುರದಲ್ಲಿ ನೂರಾರು ಜನ ಸಂಸ್ಕೃತ ತಿಳಿದ ಸನ್ಯಾಸಿಗಳು ಎಲ್ಲಾ ಮಹಾಕಾವ್ಯದ ಓಲೆಗರಿಗಳನ್ನು ಸಂಗ್ರಹಿಸಿದ್ದಾರೆ. ಅದರಲ್ಲಿ ಜಾನಪದ ಕಥೆಗಳು ತುಂಬಿದೆ. ನಾನು ಅದನ್ನೇ ಓದಿ ಜಾನಪದ ಕಥೆಯನ್ನು ನನ್ನ ಪರ್ವಕ್ಕೆ ಬಳಸಿಕೊಂಡೆ.

ಆದ್ದರಿಂದ ನಾನು ಬರೆದಿರುವುದು ನೈಜ ಕಾದಂಬರಿ. ಆದರೆ ಶೇ. 100 ವಾಸ್ತವಿಕತೆಯೇ ತುಂಬಿಲ್ಲ. ಆದರೆ ವ್ಯಾಸಭಾರತದ ಸುಮಾರು ಶೇ.20 ರಷ್ಟು ಮಾತ್ರ ನಾನು ಬರೆದ ಪರ್ವಕ್ಕೆ ಹತ್ತಿರವಾಗಿದೆ. ಪೂರ್ಣ ಕಥೆಯ ಹಂದರ ಶೇ. 20ರಷ್ಟು ತೆಗೆದುಕೊಂಡಿದ್ದೇನೆ. ಉಳಿದದ್ದೆಲ್ಲಾ ನನ್ನ ಸೃಷ್ಟಿ. ಮನುಷ್ಯ ಸ್ವಭಾವದ ಮುಖೇನ ಸೃಷ್ಟಿಸಿದ್ದೇನೆ. ಉದಾಹರಣೆಗೆ ವನವಾಸದಲ್ಲಿದ್ದಾಗ ದ್ರೌಪದಿ ಸೌಗಂಧಿಕಾ ಪುಷ್ಪ ಬೇಕೆಂದು ಭೀಮನಲ್ಲಿ ಮೊರೆ ಇಡುತ್ತಾಳೆ. ಭೀಮ ಹೂವು ಹುಡುಕಿಕೊಂಡು ಹೋಗಿರುತ್ತಾನೆ. ದ್ರೌಪದಿ ಹೀಗೆ ಕಾಡಿನಲ್ಲಿ ಒಬ್ಬಳೇ ಸುತ್ತಾಡುತ್ತಿರುತ್ತಾಳೆ. ಆ ಸಮಯದಲ್ಲಿ ಜಯದ್ರಥ (ದುರ್ಯೋಧನನ ಭಾವ, ಗಾಂಧಾರಿಯ ಒಬ್ಬನೇ ಅಳಿಯ, ದುಶ್ಶಲೆಯ ಗಂಡ) ದ್ರೌಪದಿಯ ಮೇಲೆ ಕಣ್ಣಿಟ್ಟಿರುತ್ತಾನೆ. ದ್ರೌಪದಿ ಬಹಳ ಸುಂದರಿ. ಬಹಳಷ್ಟು ಮಂದಿ ಅವಳನ್ನು ಬಯಸಿದ್ದರು. ಈ ಜಯದ್ರಥ ದ್ರೌಪದಿ ಒಬ್ಬಳೇ ಇದ್ದಾಳೆಂದು ಅರಿತು ಅವಳನ್ನು ಹಿಡಿದು, ಬಾಯಿಗೆ ಬಟ್ಟೆ ತುರುಕಿ ಕಾಡಿನೊಳಕ್ಕೆ ಹೊತ್ತುಕೊಂಡು ಹೋಗ್ತಾನೆ. ಆಗ ದ್ರೌಪದಿ ಕಿರುಚಿಕೊಳ್ಳುತ್ತಾಳೆ. ಅವಳ ಧ್ವನಿ ಭೀಮನಿಗೂ ಕೇಳುತ್ತೆ. ನಂತರ ಭೀಮ ಜಯದ್ರಥನನ್ನು ಅಟ್ಟಿಸಿಕೊಂಡು ಬಂದು ಇಬ್ಬರಿಗೂ ಗುದ್ದಾಟವಾಗಿ, ಕೊನೆಗೆ ಜಯದ್ರಥನಿಗೆ ಕೈಕಾಲು ಕಟ್ಟಿ, ಹೆಗಲಮೇಲೆ ಹಾಕಿಕೊಂಡು ಸೀದಾ ಧರ್ಮರಾಜನ ಮುಂದೆ ಹೋಗುತ್ತಾನೆ. ಭೀಮ ಜಯದ್ರಥನನ್ನು ಹೆಣದಂತೆ ಕುಕ್ಕಿ ಬೀಳಿಸುತ್ತಾನೆ. ನಂತರ ಧರ್ಮರಾಜನಿಗೆ ಹೇಳುತ್ತಾನೆ. ನೋಡು ಇಂಥ ಮಾನಗೇಡಿ ಕೆಲಸ ಮಾಡಿದ್ದಾನೆ ಜಯದ್ರಥ? ಇವನಿಗೆ ಏನು ಮಾಡಬೇಕು? ಎಂದು ಗದೆ ಹಿಡಿದು ನಿಲ್ಲುತ್ತಾನೆ. ಆಗ ಧರ್ಮರಾಜ ಹೇಳುತ್ತಾನೆ ಭೀಮ, ಹೀಗೆ ಮಾಡಬಾರದು, ಇವನು ಎಷ್ಟೆಂದರೂ ನಮ್ಮ ಭಾವ, ನಮ್ಮ ತಂಗಿ ಗಂಡ, ನಮ್ಮ ತಂಗಿ ಗಂಡನಿಗೆ ನಾವು ನೋವುಂಟು ಮಾಡಬಹುದೇ? ನಮ್ಮ ತಾಯಿ ಸಮಾನರಾದ ಗಾಂಧಾರಿ ದೇವಿಯ ಮನಸ್ಸಿಗೆ ನೋವಾಗುತ್ತದೆ. ಆದ್ದರಿಂದ ಜಯದ್ರಥನಿಗೆ ಕಟ್ಟಿರುವುದನ್ನೆಲ್ಲಾ ಬಿಚ್ಚಿ, ಸುಖವಾಗಿ ಊರಿಗೆ ಕಳಿಸು ಎಂದು ಹೇಳುತ್ತಾನೆ. ಇದು ಮೂಲ ಭಾರತದಲ್ಲಿದೆ. ಇಲ್ಲಿ ಏನಾಗಿದೆ ಎಂದರೆ ಕಾದಂಬರಿಯಲ್ಲಿ ಒಂದು ಪಾತ್ರವನ್ನು ಬೆಳೆಸಿಕೊಂಡು ಹೋದರೆ ಅದರ ಅಕ್ಕಪಕ್ಕದ ಪಾತ್ರಗಳನ್ನೂ ಹೇಗೆ ಬೆಳೆಸಬೇಕೆಂಬ ವಿಧಾನ ವ್ಯಾಸರಿಗೂ, ವಾಲ್ಮೀಕಿಗಳಿಗೂ ತಿಳಿದಿರಲಿಲ್ಲ. ಆದ್ದರಿಂದ ಅಲ್ಲಿಗೆ ನಿಲ್ಲಿಸಿದ್ದಾರೆ. ಇಲ್ಲಿ ನನ್ನ ಮನಸ್ಸಿಗೆ ಅನ್ನಿಸಿದ್ದು, ದ್ರೌಪದಿಗೆ ಈ ಸಂದರ್ಭದಲ್ಲಿ ಏನನ್ನಿಸಿರಬೇಕು? ಎಂಬುದನ್ನು ಮೂಲಭಾರತದಲ್ಲಿ ಬರೆದಿಲ್ಲ. ಧರ್ಮರಾಜನಿಗೆ ಧರ್ಮವೇ ಮೂಲ. ಅವನು ಹುಟ್ಟಿದ್ದೇ ಯಮಧರ್ಮನಿಂದ. ತನ್ನ ಹೆಂಡತಿಯನ್ನು ಅತ್ಯಾಚಾರ ಮಾಡಲು ಎತ್ತಿಕೊಂಡು ಹೋದವನನ್ನು ಭೀಮ ಹೊಡೆದು ಕಟ್ಟಿ ಹಾಕದೇ ಹೋಗಿದ್ದರೆ ದ್ರೌಪದಿಗೆ ಮಾನಭಂಗ ಆಗಿಹೋಗುತ್ತಿತ್ತು ಎಂಬುದು ಧರ್ಮರಾಯನಿಗೆ ಗೊತ್ತಗಲಿಲ್ಲವೇಕೆ? ಆ ಸಮಯದಲ್ಲಿ ಧರ್ಮದ ವಿಚಾರ ಹೇಳುತ್ತಾ ನಿಂತಿರುತ್ತಾನಲ್ಲವೇ? ದ್ರೌಪದಿ ಮನಸ್ಸಿನಲ್ಲಿ ಧರ್ಮರಾಜನ ಬಗ್ಗೆ ಏನನ್ನಿಸಬಹುದು? ಗಂಡನ ಬಗ್ಗೆ ಮರ್ಯಾದೆ ಉಳಿಯುತ್ತಾ? ಧರ್ಮರಾಜ ಒಬ್ಬ ರಣಹೇಡಿ ಅಂತ ಅವಳ ಮನಸ್ಸಿನಲ್ಲಿ ಅನ್ನಿಸಿರಬೇಕು. ಇಂಥಹ ಲೋಪಗಳೇ ನನ್ನ ಸೃಷ್ಟಿಗೆ ಬಂದದ್ದು. ಎಲ್ಲಿ ಯಾವ ಪಾತ್ರಕ್ಕೆ ವ್ಯಾಸರು ಏನು ಪ್ರಾಮುಖ್ಯತೆ ಕೊಟ್ಟಿಲ್ಲವೋ ಅದಕ್ಕೆ ನಾನು ಹೇಗೆ ಕನೆಕ್ಟ್ ಮಾಡಬೇಕೆಂದು ಯೋಚಿಸಿದೆ. ಆ ಕ್ಷಣದಲ್ಲಿ ಮತ್ತೊಬ್ಬರ ನಡವಳಿಕೆ ಹೇಗಿತ್ತು? ಎಂಬುದನ್ನು ವ್ಯಾಸರು ವಿವರಿಸಿಲ್ಲ. ಹೀಗಾಗಿ ಮೂಲ ಭಾರತದಲ್ಲಿ ಅಂದಾಜು ಶೇ.20 ಇರಬಹುದು. ಉಳಿದದ್ದೆಲ್ಲಾ ನನ್ನ ಸೃಷ್ಟಿ. ಪರ್ವ ಕಾದಂಬರಿಯ ಶಕ್ತಿ ನನ್ನ ಸೃಷ್ಟಿ.

ಇದನ್ನೆಲ್ಲಾ ಮನುಷ್ಯ ಸ್ವಭಾವದಿಂದ ಮಾಡಿದೆ. ಪುರಾಣ ದೃಷ್ಟಿಯಿಂದ ಬರೆಯುವಾಗ ಇವ್ಯಾವುದೂ ಹೊಳೆಯಲ್ಲ. ನಮ್ಮಲ್ಲಿ ನವೋದಯ ಕಾಲದಲ್ಲಿ ಇದೇ ವಸ್ತು ಉಪಯೋಗಿಸಿ ಬರೆದಿದ್ದಾರೆ. ಆದರೆ ಪುರಾಣ ಸೇರಿಸಿ ದೈವಲೀಲೆ ಎಂದು ಮಾಡಿದ್ದಾರೆ. ಮನುಷ್ಯರಾಗಿ ದ್ರೌಪದಿಗೇನನ್ನಿಸಿತು? ಕುಂತಿಗೇನನ್ನಿಸಿತು? ಮಾದ್ರಿಗೇನನ್ನಿಸಿತು? ಗಾಂಧಾರಿಗೇನನ್ನಿಸಿತು? ಗಾಂಧಾರಿ ಏಕಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಳು? ಹೀಗೆಯೇ ಗಂಡು ಮತ್ತು ಹೆಣ್ಣು ಪಾತ್ರಗಳು ತಮಗನಿಸಿದ್ದನ್ನು ಇಲ್ಲಿ ನಾನು ಬರೆದಿದ್ದೇನೆ. ರಂಗಾಯಣ ಈ ಕಾದಂಬರಿಯನ್ನು ನಾಟಕ ಮಾಡಲು ಹೊರಟಾಗ ನನಗೆ ಕುತೂಹಲ ಆಗಿತ್ತು. ಪ್ರಕಾಶ್ ಬೆಳವಾಡಿ ರಚಿಸಿದ ರಂಗಪಠ್ಯವನ್ನು ನಾನು ಓದಿದಾಗ ನಿಜವಾಗಿಯೂ ಖುಷಿಯಾಯಿತು. ರಂಗಾಯಣ ಕೂಡ ಅದ್ಬುತವಾಗಿ ‘ಪರ್ವ’ವನ್ನು ಕಟ್ಟಿದೆ. ಈ ಸಂತೋಷ ನನಗಿದೆ.
– ಡಾ. ಎಸ್.ಎಲ್. ಭೈರಪ್ಪ

ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವಿರಿ. . . .

ಮಹಾಭಾರತದ ಮಹಾಯುದ್ಧ ದೇಶದ ಬಹುಪಾಲು ರಾಜರು ಮತ್ತು ವೀರಯೋಧರನ್ನೆಲ್ಲಾ ಬಲಿಗೊಂಡು ಬಣಗುಡುತ್ತಿದೆ. ಕುರುವಂಶದ ಯುದ್ದೋನ್ಮಾದಕ್ಕೆ ಕುರು ಪಾಂಡವ ಬಲಗಳೆರಡರಲ್ಲೂ ಅಮಾಯಕ ಪ್ರಜೆಗಳೆಲ್ಲಾ ಬಲಿಯಾಗಿದ್ದಾರೆ. ಆದರೂ ಕುರುವಂಶದ ವಾರಸುದಾರರನ್ನು ಪಡೆಯುವ ಅವರಾಸೆ ಕುಗ್ಗಿಲ್ಲ. ಪಾಂಡವರು, ಕುಂತಿ, ದ್ರೌಪದಿ, ಮಾದ್ರಿ ಸುಭದ್ರೆಯರಾದಿಯಾಗಿ ಎಲ್ಲರೂ ಕಣ್ಣುಕೀಲಿಸಿ ಕುಳಿತಿದ್ದ ಉತ್ತರೆಯ ಬಸುರಿನಿಂದ ಸತ್ತ ಮಗು ಹೊರಗೆ ಬಂದಿದೆ. ಹದಿನೆಂಟು ಅಕ್ಷೆಹಿಣಿ ಎಂಬ ಲಕ್ಷೆಪಲಕ್ಷ ಜೀವಗಳನ್ನು ನುಂಗಿನೊಣೆದ ಸುಟ್ಟ ಸೂಡಿನಂತಿರುವ ಈ ಕುರುವಂಶದಲ್ಲಿ ಹುಟ್ಟುವುದಾದರೂ ಹೇಗೆ ಹೊಸ ಜೀವ?. ಸುದ್ಧಿ ತಿಳಿದ ಯಾರ ಮುಖದಲ್ಲೂ ಸಮಾಧಾನವಿಲ್ಲ. ವಂಶೋದ್ಧಾರದ ಚಡಪಡಿಕೆಯೂ ತಪ್ಪಿಲ್ಲ. ತಲೆಯ ಮೇಲೆ ಕೈಹೊತ್ತು ಕುಳಿತಿದ್ದ ಧರ್ಮಜನ ಮುಂದೆ ನುಗ್ಗಿ ಬಂದಿದೆ ಅಷ್ಟರಲ್ಲೇ ಬಸುರಿಯರ ಹಿಂಡು. ಧರ್ಮಜ ದಿಗ್ಬ್ರಾಂತನಾಗಿದ್ದಾನೆ. ಇವರೆಲ್ಲ ಯಾರು? ಏನಿವರ ಗೋಳು?. ಮುದುಕಿಯೊಬ್ಬಳು ಕೂಗಿ ಹೇಳುತ್ತಾಳೆ ‘ಮಹಾಭಾರತ ಯುದ್ಧದಲ್ಲಿನ ಸೈನಿಕರ ರಂಜನೆಗೆಂದು ಹಳ್ಳಿಗಳಿಂದ ಎಳೆದೊಯ್ದಿದ್ದ ಹೆಂಗಸರಿವರು. ಯುದ್ಧದಲ್ಲಿ ಇವರೆಲ್ಲ ಬಸುರಾಗಿದ್ದಾರೆ. ಗಂಡಂದಿರು ಮನೆಗೆ ಸೇರಿಸುತ್ತಿಲ್ಲ. ಇವರ ದಿಕ್ಕೇನು?. ಅವರೆಲ್ಲರ ಪ್ರಶ್ನೆ ಒಂದೇ. ನಿಮ್ಮ ವಂಶದ ಯುದ್ಧದಲ್ಲಿ ನಾವೆಲ್ಲ ಬಸುರಾಗಿದ್ದೇವೆ. ಹುಟ್ಟುವ ಮಕ್ಕಳಿಗೆ ತಂದೆ ಯಾರು?. ಧರ್ಮಜ ಮೂಕನಾಗಿದ್ದಾನೆ. ಇತ್ತ ಅರಮನೆಯೊಳಗೆ ಕುಂತಿ ದ್ರೌಪದಿಯ ತಲೆ ಸವರಿ ಹೇಳುತ್ತಿದ್ದಾಳೆ “ಮಗು ಮತ್ತೆ ನೀನೇ ಬಸುರಾಗಬೇಕು. ಇಲ್ಲದಿದ್ದರೆ ಈ ವಂಶ ನಿಂತು ಹೋಗುತ್ತದೆ”. ದ್ರೌಪದಿಯ ಕಣ್ಣುಗಳಲ್ಲಿ ಧಿಕ್ಕಾರ ತುಂಬಿಕೊಳ್ಳುತ್ತದೆ. ಈ ವಂಶ ನಿಂತು ಹೋದರೇನಂತೆ? ದ್ರೌಪದಿಯ ಆಕ್ರೋಶದ ಪ್ರಶ್ನೆ. ಅದೆಲ್ಲಾ ಸಾಧ್ಯವಿಲ್ಲ. ಈ ಮನೆಗೆ ಸೊಸೆಯಾಗಿ ಬಂದ ನೀನು ಹೀಗೆನ್ನಬಹುದೇ?, ಕುಂತಿಯ ಉರಿಗಣ್ಣಿನ ಪ್ರಶ್ನೆ. ಅತ್ತೆಯ ಕಣ್ಣಿನ ಆಳಕ್ಕೆ ದೃಷ್ಟಿ ನೆಟ್ಟು ದ್ರೌಪದಿ ಉತ್ತರಿಸುತ್ತಾಳೆ “ಅಮ್ಮ, ಈ ಮನೆಗೆ ನನಗಿಂತ ಮೊದಲು ಸೊಸೆಯಾಗಿ ಬಂದ ನೀವು ಹೀಗನ್ನಬಹುದೇ?” ಎಲ್ಲವನ್ನೂ ಕೇಳಿಸಿಕೊಳ್ಳುತ್ತಿರುವ ಧರ್ಮಜ ಏನೂ ಹೇಳಲಾಗದೆ ಹೊರಗೆ ಸುರಿಯುತ್ತಿರುವ ಮಳೆಯನ್ನು ನೋಡುತ್ತಾ ಕೂರುತ್ತಾನೆ.

ಇದು ಕಾದಂಬರಿಯ ಕಡೆಯ ವಾಕ್ಯಗಳು. ಇಡೀ ಮಹಾಭಾರತದ ಕಾರಣ ಮತ್ತು ಪರಿಣಾಮಗಳನ್ನು ಅತ್ಯಂತ ಮನೋಜ್ಞವಾಗಿ ತೆರೆದಿಡುವ ಮಾತುಗಳಿವು. ಅಪ್ಪನ ಅಕಾಲ ಕಾಮ್ಯ ಗುಣವನ್ನು ಪ್ರಶ್ನಿಸದೆ ಆದರ್ಶವನ್ನು ಮೆರೆಯಲು ತನ್ನ ತಂದೆಗೆ ಸತ್ಯವತಿಯನ್ನು ಮದುವೆ ಮಾಡಿಸಿ, ಆಜನ್ಮ ಬ್ರಹ್ಮಚಾರಿಯಾಗಿ ಉಳಿದ ಭೀಷ್ಮ ತನ್ನ ಔದಾರ್ಯದ ಉರುಳಲ್ಲಿ ತಾನೇ ಬಂಧಿಯಾಗಿದ್ದಾನೆ. ಕುರುವಂಶ ನಿಂತು ಹೋಗದಂತೆ ರಕ್ಷಿಸುವ ಹೊಣೆಯಲ್ಲಿ ತಾಯಿಯೊಂದಿಗೆ ತಾನೂ ಪಾಲುದಾರನಾಗುತ್ತಾನೆ. ಮುಂದಿನದು ಎಲ್ಲರಿಗೂ ತಿಳಿದ ಭಾರತದ ಕಥೆಯೇ. ಆದರೆ ಈವರೆಗಿನ ಮಹಾಭಾರತದಲ್ಲಿ ಬಾಯ್ತೆರೆಯದಂತೆ ನಿರ್ಬಂಧಿಸಲ್ಪಟ್ಟಿದ್ದ ಗಾಂಧಾರಿ, ಕುಂತಿ, ಮಾದ್ರಿ, ದ್ರೌಪದಿ ಮುಂತಾಗಿ ಸ್ತ್ರೀ ಪಾತ್ರಗಳೆಲ್ಲಾ ‘ಪರ್ವ’ದಲ್ಲಿ ಸಿಡಿದು ನಿಲ್ಲುತ್ತವೆ. ಪರಿಣಾಮ ಮಹಾಭಾರತವನ್ನು ತಮ್ಮ ಪೌರುಷದಿಂದ ತುಂಬಿದ್ದ ಪುರುಷ ಪಾತ್ರಗಳೆಲ್ಲಾ ಬೆತ್ತಲಾಗುತ್ತವೆ. ಈ ಬಗೆಯ ಸಂಘರ್ಷವನ್ನು ಮತ್ತಾವ ಭಾರತದಲ್ಲೂ ಕಾಣಲು ಸಾಧ್ಯವಿಲ್ಲ. ಇದೇ ‘ಪರ್ವ’ ಕಾದಂಬರಿಯ ಶಕ್ತಿ. ಕಾದಂಬರಿಕಾರರ ಶಕ್ತಿಯೂ.

ಸಣ್ಣ ಕವಿತೆಯಿಂದ ಹಿಡಿದು ಬೃಹತ್ ಕಾದಂಬರಿಯವರೆಗೆ ಯಾವುದೇ ವಸ್ತುವನ್ನು ಕೈಗೆತ್ತಿಕೊಂಡರೂ ಅದನ್ನು ರಂಗದ ಮೇಲೆ ಯಶಸ್ವಿಯಾಗಿ ಪ್ರಯೋಗಿಸುವ ನೈಪುಣ್ಯತೆ, ಸವಾಲುಗಳನ್ನು ಸ್ವೀಕರಿಸುವ ಛಲ, ರಂಗಾಯಣಕ್ಕೆ ಹೊಸದಲ್ಲ. ‘ಮಲೆಗಳಲ್ಲಿ ಮದುಮಗಳು’, ‘ಶ್ರೀ ರಾಮಾಯಣ ದರ್ಶನಂ’ ಮುಂತಾದ ವಿಶಿಷ್ಟ ರಂಗಪ್ರಯೋಗಗಳ ಮೂಲಕ ರಂಗಭೂಮಿಯಲ್ಲಿ ದಾಖಲೆಗಳನ್ನು ಸೃಷ್ಟಿಸಿದ ಹಿರಿಮೆ ರಂಗಾಯಣದ್ದು. ಆದರೆ ಭಾರತೀಯ ರಂಗ ಪರಂಪರೆಯಲ್ಲಿ ಅಕ್ಷರಸ್ಥ, ಅನಕ್ಷರಸ್ಥ ಎಂಬ ಭೇದವಿಲ್ಲದೆ ಎಲ್ಲಾ ಬಗೆಯ ಜನರಿಗೂ ಪರಿಚಯವಿರುವ ಮಹಾಭಾರತ ವಸ್ತುವಿಷಯವನ್ನೊಳಗೊಂಡ ‘ಪರ್ವ’ದಂತಹ ಏಳುನೂರು ಪುಟಗಳ ಬೃಹತ್ ಕಾದಂಬರಿಯನ್ನು ರಂಗರೂಪದಲ್ಲಿ ಪ್ರದರ್ಶನಕ್ಕೆ ಸಿದ್ಧಗೊಳಿಸುವ ಪ್ರಯತ್ನ ಸಾಮಾನ್ಯವಾದುದಲ್ಲ.

‘ಪರ್ವ’ ಕಾದಂಬರಿಯ ರಂಗರೂಪ ಮೈಸೂರು ರಂಗಾಯಣದ ನೂತನ ಕನಸು. ಈ ಕನಸಿನ ಬೀಜ ಮೊಳೆತದ್ದು ಸರಿಸುಮಾರು ಒಂದು ವರ್ಷದ ಹಿಂದೆ ರಂಗಾಯಣದ ನಿರ್ದೇಶಕರಾಗಿ ಬಂದ ಅಡ್ಡಂಡ ಸಿ. ಕಾರ್ಯಪ್ಪನವರ ಮನದಲ್ಲಿ. ಮುಂದೆ ಅದು ಎದುರಾದ ಪ್ರಾಕೃತಿಕ ಮತ್ತು ಪ್ರೇರಿತ ತಡೆಗಳನ್ನೆಲ್ಲಾ ಮೀರಿ ‘ಪರ್ವ’ ಕಾದಂಬರಿಯಷ್ಟೇ ಬೃಹತ್ತಾದ ರಂಗರೂಪವಾಗಿ ಬೆಳೆದು ನಿಂತದ್ದು ವಿಸ್ಮಯವೇ ಸರಿ.

೨೦೨೦ರ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಯಶಸ್ವಿಯಾಗಿ ಮುಗಿಸಿದ ಸಂತಸದಲ್ಲಿ ಕಲಾವಿದರೊಂದಿಗೆ ಚರ್ಚಿಸುತ್ತಾ, ಮುಂದೆ ಯಾವ ನಾಟಕವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಜಿಜ್ಞಾಸೆಯಲ್ಲಿದ್ದಾಗ ಡಾ. ಎಸ್.ಎಲ್. ಭೈರಪ್ಪನವರ ‘ಪರ್ವ’ ಕಾದಂಬರಿಯನ್ನೇ ರಂಗಪ್ರಸ್ತುತಿಯನ್ನಾಗಿಸುವ ನಿರ್ಧಾರಕ್ಕೆ ಬಂದೆವು. ಇದರ ನಿರ್ದೇಶನಕ್ಕೆ ಬಹುಮುಖ ಪ್ರತಿಭೆಯ ಅನುಭವಿ ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರನ್ನೇ ಆಹ್ವಾನಿಸಬೇಕೆಂದು ತೀರ್ಮಾನಿಸಿ ಆಹ್ವಾನಿಸಲಾಯಿತು.

ಭರದಿಂದ ಸಾಗಿದ ‘ಪರ್ವ’ದ ಪಠಣ ಕಾರ್ಯಕ್ಕೆ ಬರ ಸಿಡಿಲಿನಂತೆ ಬಂದೆರಗಿತು ಕೋವಿಡ್ ಪ್ರೇರಿತ ಲಾಕ್‌ಡೌನ್ ದಿಗ್ಬಂಧನ. ಎದೆಗುಂದಲಿಲ್ಲ ಯಾರೂ. ಮನೆಯಿಂದಲೇ ಕೆಲಸ ಎಂಬಂತೆ ‘ಪರ್ವ’ದ ಓದು, ದೂರವಾಣಿಗಳ ಮೂಲಕ ಚರ್ಚೆ ನಿರಂತರ ಸಾಗಿತು. ಈ ಸಮಯವನ್ನು ಬಳಸಿಕೊಂಡು ನಾಟಕ ನಿರ್ದೇಶಕರು ರಂಗಪಠ್ಯವನ್ನು ಸಿದ್ಧಪಡಿಸಿಯೇಬಿಟ್ಟರು. ಅದನ್ನು ರಂಗಾಯಣದ ನಿರ್ದೇಶಕರು ಮತ್ತು ನಾನು ಕಾದಂಬರಿಕಾರರ ಮನೆಗೊಯ್ದು ಅಳುಕಿನಿಂದಲೇ ಒಪ್ಪಿಸಿ ಬಂದೆವು. ಎರಡೇ ದಿನದಲ್ಲಿ ಭೈರಪ್ಪನವರೇ ದೂರವಾಣಿಯ ಮೂಲಕ ನಿರ್ದೇಶಕರಿಗೆ ಸಂತಸದ ಒಪ್ಪಿಗೆ ಸೂಚಿಸಿದರು. ಆ ವೇಳೆಗೆ ಕೋವಿಡ್ ಪ್ರಕರಣಗಳು ಕೂಡ ಇಳಿಮುಖಗೊಂಡು ಜನಮನದಲ್ಲಿ ಹೆಪ್ಪುಗಟ್ಟಿದ್ದ ಭಯ ಕರಗಲಾರಂಭಿಸಿತ್ತು.

ಇಂಥ ಬೃಹತ್ ಪ್ರಯೋಗಕ್ಕೆ ಬೇಕಾದ ಆರ್ಥಿಕ ಭದ್ರತೆಯ ಭಯವನ್ನು ಬದಿಗಿಟ್ಟು ‘ಪರ್ವ’ ಮಹಾ ರಂಗಪ್ರಸ್ತುತಿಯ ಸುದ್ದಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ನಿರ್ದೇಶಕರು ಅಗತ್ಯವಾದ ಹೆಚ್ಚುವರಿ ಕಲಾವಿದರ ಆಯ್ಕೆಗೆ ಪ್ರಕಟಣೆಯನ್ನೂ ಕೊಡಿಸಿದರು. ಇದರ ನಡುವೆಯೇ ಈ ಬೃಹತ್ ಯೋಜನೆಯ ಮಹತ್ವವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು, ವಿಶೇಷ ಅನುದಾನ ಕೋರಿಕೆಯ ಅಭಿಯಾನವನ್ನೇ ಆರಂಭಿಸಿದರು. ಕಲಾವಿದರು ಆಯ್ಕೆಗೊಂಡು ರಂಗಾಯಣದ ಹಿರಿಯ ಕಲಾವಿದರ ತಂಡವನ್ನು ಸೇರಿಕೊಂಡ ನಂತರ ಇಂಥ ಮಹತ್ವಾಕಾಂಕ್ಷಿ ರಂಗಪ್ರಯೋಗಕ್ಕೆ ಅಗತ್ಯವಾದ ಸಂಗೀತಗಾರರು, ವಿನ್ಯಾಸಕಾರರು, ತಂತ್ರಜ್ಞರನ್ನು ಶೋಧಿಸುತ್ತಾ, ಪ್ರತಿ ವಿಭಾಗವನ್ನು ಶಕ್ತಿಗೊಳಿಸುತ್ತಾ ವಿದ್ವಜ್ಜನರ ಸಲಹೆಗಳನ್ನು ಪಡೆಯುತ್ತಾ ತಾಲೀಮು ಒಂದು ಪರಿಪೂರ್ಣ ಹಂತಕ್ಕೆ ಬರುವ ವೇಳೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೂತನ ಸಚಿವರಾಗಿ ಬಂದ ಶ್ರೀ ಅರವಿಂದ ಲಿಂಬಾವಳಿ ಅವರಿಂದ ಮೊದಲ ಭೇಟಿಯಲ್ಲೇ ಈ ಯೋಜನೆಗೆ ಬೇಕಾದ ಅನುದಾನದ ಬಿಡುಗಡೆಯ ಭರವಸೆ ಸಿಕ್ಕಿತು. ನಂತರದ ಒಂದು ವಾರದಲ್ಲಿ ಐವತ್ತು ಲಕ್ಷ ರೂಪಾಯಿಗಳ ಬಿಡುಗಡೆಗೆ ಸರ್ಕಾರದ ಆದೇಶವೂ ಕೈಸೇರಿತು. ತಂಡದ ಉತ್ಸಾಹ ಇಮ್ಮಡಿಸಿತು. ಈ ದೀರ್ಘ ಪಯಣದ ಫಲಿತಾಂಶ ಇದೀಗ ನಿಮ್ಮ ಮುಂದೆ ತೆರೆದುಕೊಳ್ಳುತ್ತಿರುವ ಏಳು ಗಂಟೆ ಮೂವತ್ತು ನಿಮಿಷಗಳ ಬೃಹತ್ ರಂಗರೂಪ ‘ಪರ್ವ’.

ಇಂಥದೊಂದು ಬೃಹತ್ ರಂಗಪ್ರಯೋಗಕ್ಕೆ ಮನಸ್ಥೈರ್ಯ ತುಂಬಿದ ಕಾದಂಬರಿಕಾರರು, ನಾಟಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು, ‘ಪರ್ವ’ ಪಾತ್ರಗಳಿಗೆ ಜೀವ ತುಂಬುತ್ತಿರುವ ಕಲಾವಿದರು, ಕಳೆದ ಹತ್ತು ತಿಂಗಳಿನಿಂದ ಈ ಯೋಜನೆಯನ್ನು ಹಠಯೋಗದಂತೆ ಭಾವಿಸಿ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಾ ಹಲವಾರು ಸಾರಿ ಬಿ.ಪಿ. ಶುಗರ್‌ಗಳು ಏರುಪೇರಾದರೂ ಲೆಕ್ಕಿಸದೆ ದುಡಿಯುತ್ತಿರುವ ರಂಗಾಯಣದ ನಿರ್ದೇಶಕರು, ಇಲಾಖೆಯ ಸಚಿವರಾದ ಕೂಡಲೇ ಈ ಯೋಜನೆಗೆ ಬೇಕಾದ ಹಣ ಮಂಜೂರು ಮಾಡಿ, ಬೆನ್ನುತಟ್ಟಿದ ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರು, ‘ಪರ್ವ’ದ ಓದು ಆರಂಭವಾದಾಗಿನಿಂದಲೇ ವ್ಯಾಪಕ ಪ್ರಚಾರ ನೀಡುತ್ತಿರುವ ಎಲ್ಲಾ ಮಾಧ್ಯಮ ಮಿತ್ರರು, ತಿಂಗಳ ಮುಂಚೆಯೇ ನಾಟಕದ ಟಿಕೆಟ್‌ಗಳನ್ನು ಖರೀದಿಸಿದ ರಂಗಾಯಣದ ಪ್ರೇಮಿಗಳು, ನಮ್ಮಿಬ್ಬರ ಎಲ್ಲಾ ಒತ್ತಡಗಳನ್ನು ಸಹಿಸಿಕೊಳ್ಳುತ್ತಲೇ ಎಲ್ಲಾ ಕೆಲಸಗಳನ್ನು ತಮ್ಮ ಮನೆಯದೆಂಬಂತೆ ಸಂಭ್ರಮದಿಂದಲೇ ನಿರ್ವಹಿಸುತ್ತಿರುವ ರಂಗಾಯಣದ ಸಿಬ್ಬಂದಿಗಳು ಮತ್ತು ಈ ನಾಟಕದ ಯಶಸ್ಸಿಗೆ ಕಾರಣರಾಗುತ್ತಿರುವ ಎಲ್ಲ ರಂಗಪ್ರೇಮಿಗಳನ್ನು ತುಂಬು ಕೃತಜ್ಞತೆಯಿಂದ ನೆನೆಯುತ್ತಾ. . . .

– ವಿ.ಎನ್. ಮಲ್ಲಿಕಾರ್ಜುನಸ್ವಾಮಿ
ಜಂಟಿ ನಿರ್ದೇಶಕರು, ರಂಗಾಯಣ, ಮೈಸೂರು

ರಂಗವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್

ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯ (ಕಾವಾ) ಬಿ.ಎಫ್.ಎ ಪದವೀಧರರು. ರಂಗಾಯಣದಲ್ಲಿ ವಿನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಬರೋಡಾದ ಎಂ.ಎಸ್ ವಿಶ್ವವಿದ್ಯಾನಿಲಯದಿಂದ ಎಂ.ಎಫ್.ಎ ಪದವಿಯನ್ನು ಪಡೆದಿದ್ದಾರೆ. ಚಿತ್ರಕಲೆ ಮತ್ತು ಭಿತ್ತಿ ಚಿತ್ರಕಲೆಯಲ್ಲಿ ಪರಿಣಿತರಾದ ಇವರು ರಂಗಾಯಣದಲ್ಲಿ ನಾಟಕ ನಿರ್ದೇಶಿಸಿದ ದೇಶ ವಿದೇಶಗಳ ರಂಗ ನಿರ್ದೇಶಕರಿಗೆ ರಂಗವಿನ್ಯಾಸ ರೂಪಿಸಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾಗಿರುವ ಇವರಿಗೆ ಪ್ರಜಾಮತ ಪತ್ರಿಕೆಯ ಪ್ರಜಾರತ್ನ ಪ್ರಶಸ್ತಿಯೂ ಲಭಿಸಿದೆ.

ವಸ್ತ್ರವಿನ್ಯಾಸ : ಪ್ರಸಾದ್ ಬಿದ್ದಪ್ಪ

ಕೊಡಗು ಮೂಲದ ಪ್ರಸಾದ್ ಬಿದ್ದಪ್ಪ ಅಂತರಾಷ್ಟ್ರೀಯ ಖ್ಯಾತಿಯ ವಸ್ತ್ರವಿನ್ಯಾಸಕಾರ. ನೃತ್ಯ ವಿನ್ಯಾಸಕಾರರಾಗಿ, ಚಿತ್ರ ಸಲಹೆಗಾರರಾಗಿ ಫ್ಯಾಶನ್ ಜಗತ್ತಿನಲ್ಲಿ ಭಾರತಾದ್ಯಂತ ಅನೇಕ ಕಾರ್ಯಕ್ರಮಗಳನ್ನು ನಡೆಸಿ ಪ್ರಸಿದ್ಧಿ ಪಡೆದವರು. ಬೆಂಗಳೂರಿನಲ್ಲಿ ನಡೆದ ಕಿಂಗ್‌ಫಿಶರ್ ಫ್ಯಾಶನ್ ಶೋನಲ್ಲಿ ಪ್ರಮುಖ ಪ್ರದರ್ಶಕರಾಗಿ ಭಾಗವಹಿಸಿದ್ದು, ಅನೇಕ ಮಾಧ್ಯಮಗಳಲ್ಲಿ ಮೆಚ್ಚುಗೆಯ ಲೇಖನಗಳು ಪ್ರಕಟವಾಗಿವೆ. ಇವರು ಲ್ಯಾಕ್ಮಿ ಫ್ಯಾಶನ್ ವೀಕ್‌ನ ತೀರ್ಪುಗಾರರಾಗಿ ಕೂಡ ಗಮನ ಸೆಳೆದಿದ್ದರು.

ದೀನದಲಿತ ವಿದ್ಯಾರ್ಥಿಗಳಿಗಾಗಿ ‘ರ್‍ಯಾಂಪ್ ಫಾರ್ ಚಾಂಪ್ಸ್’ ಎಂಬ ಫ್ಯಾಶನ್ ಶೋ ನಡೆಸಿದ್ದು, ಇದೊಂದು ಅನನ್ಯ ಪರಿಕಲ್ಪನೆ ಎಂದು ಫ್ಯಾಶನ್ ಜಗತ್ತಿನ ಅನೇಕ ಗಣ್ಯರು ಅಭಿಪ್ರಾಯಪಟ್ಟಿದ್ದಾರೆ. ಖಾದಿ ವಸ್ತ್ರಗಳ ಬಗ್ಗೆ ಭಾರತ ಮತ್ತು ವಿದೇಶಗಳಲ್ಲಿ ವ್ಯಾಪಕ ಪ್ರಚಾರ ನಡೆಸಿ, ಫ್ಯಾಶನ್‌ಶೋ ಕಾರ್ಯಕ್ರಮಗಳನ್ನು ಏರ್ಪಡಿಸಿದ ಸಾಂಸ್ಕೃತಿಕ ರಾಯಭಾರಿ. ಪರಿಸರ ಮತ್ತು ಪ್ರಕೃತಿಯ ಅಪಾರ ಕಾಳಜಿ ಪ್ರಸಾದ್ ಬಿದ್ದಪ್ಪ ಬೆಂಗಳೂರಿನಲ್ಲಿ ಅನೇಕ ಪರಿಸರ ಸಂಘಟನೆಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ. ತನ್ನದೇ ಆದ ವಿಶಿಷ್ಟತೆಯನ್ನು ಫ್ಯಾಶನ್ ಜಗತ್ತಿಗೆ ನೀಡುತ್ತಾ ಬಂದಿರುವ ಪ್ರಸಾದ್ ಬಿದ್ದಪ್ಪ ಇಂದಿನ ಅನೇಕ ಪ್ರಸಿದ್ಧಿ ಪಡೆದ ನಟ-ನಟಿಯರನ್ನು ಮತ್ತು ಮಾಡೆಲ್‌ಗಳನ್ನು ಪರಿಚಯಿಸಿದ ಖ್ಯಾತಿ ಇವರದು. ಬೆಂಗಳೂರಿನ ಯಲಹಂಕದಲ್ಲಿ ಪತ್ನಿ ಮತ್ತು ಕುಟುಂಬದೊಂದಿಗೆ ಸುಖಿ ಜೀವನ ನಡೆಸುತ್ತಿರುವ ಇವರು ಪ್ರಸ್ತುತ ‘ಪರ್ವ’ ನಾಟಕಕ್ಕೆ ವಸ್ತ್ರವಿನ್ಯಾಸಕಾರರಾಗಿ ರಂಗಭೂಮಿಗೂ ಪ್ರವೇಶ ಪಡೆದಿರುವುದು ಗಮನಾರ್ಹವಾಗಿದೆ.

ಸಂಗೀತ ನಿರ್ದೇಶನ : ರವಿ ಮುರೂರು

ಹಿಂದೂಸ್ತಾನಿ ಸಂಗೀತವನ್ನು ಪಂ. ಎಂ.ಪಿ. ಹೆಗಡೆ ಪಡಿಗೆರೆ ಅವರ ಶಿಷ್ಯರಾಗಿ ಅಭ್ಯಾಸ ಮಾಡಿ, ಶ್ರೀ ರಾಜು ಅನಂತಸ್ವಾಮಿ ಅವರಿಂದ ಲಘು ಸಂಗೀತವನ್ನು ಕರಗತ ಮಾಡಿಕೊಂಡಿರುವ ಗಾಯಕ ಪ್ರತಿಭೆ ರವಿ ಮೂರೂರು. ಗಾನ ಗಾರುಡಿಗ ಶ್ರೀ ಸಿ. ಅಶ್ವಥ್ ಅವರೊಂದಿಗೆ ಮುಖ್ಯ ಸಹಗಾಯಕರಾಗಿ ದೇಶ, ವಿದೇಶದ ವೇದಿಕೆಗಳಲ್ಲಿ ಹಾಡಿದ್ದು, ನಾಡಿನ ಹಲವು ರಂಗಪ್ರಯೋಗಗಳಿಗೆ ಸಂಗೀತ ಸಂಯೋಜಿಸಿ, ಪ್ರಮುಖ ಹಿನ್ನೆಲೆ ಗಾಯಕರಾಗಿ ದುಡಿದ ಅನುಭವ ಶ್ರೀಯುತರಿಗಿದೆ.

ನಾಡಿನ ಹೆಸರಾಂತ ಗಾಯಕರಾದ ಶ್ರೀಮತಿ ಸಂಗೀತ ಕಟ್ಟಿ, ಪಂಡಿತ್ ಫ಼ಯಾಜ್ ಖಾನ್, ಶ್ರೀ ಪ್ರವೀಣ್ ಗೋಡ್ಕಿಂಡಿ, ಶ್ರೀ ಪುತ್ತೂರು ನರಸಿಂಹ ನಾಯಕ್ ಮುಂತಾದವರೊಂದಿಗೆ ವಿವಿಧ ವೇದಿಕೆಗಳನ್ನು ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯ ಭಾಗವಹಿಸುವಿಕೆಯ ಜೊತೆಗೆ ಹಾರ್ಮೋನಿಯಂ, ಚಂಡೆ, ಡೋಲಕ್ ಮುಂತಾದ ವಾದ್ಯಗಳನ್ನು ನುಡಿಸುವ ಕೌಶಲವನ್ನೂ ಹೊಂದಿರುವ, ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಇವರು ಅನೇಕ ರಂಗಪ್ರಯೋಗಗಳಿಗೆ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಪ್ರಸ್ತುತ ರಂಗಾಯಣ ಪ್ರದರ್ಶಿಸುತ್ತಿರುವ ಶ್ರೀರಾಮಾಯಣ ದರ್ಶನಂ ನಾಟಕಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಬೆಳಕಿನ ವಿನ್ಯಾಸ

ಕೃಷ್ಣಕುಮಾರ ನಾರ್ಣಕರ್ಜೆ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕನ್ಯಾನ ಎಂಬ ಹಳ್ಳಿಯವರಾದ ಇವರು ಎಂ.ಎ. ಪದವೀಧರರು. ನೀನಾಸಂ ರಂಗಶಿಕ್ಷಣ ಕೇಂದ್ರದಿಂದ ಡಿಪ್ಲೋಮ ಪಡೆದು ನಂತರ ಸತತವಾಗಿ ಮೂರು ವರ್ಷಗಳ ಕಾಲ ತಿರುಗಾಟದಲ್ಲಿ ನಟ ಮತ್ತು ತಂತ್ರಜ್ಞರಾಗಿ ಕರ್ನಾಟಕದಾದ್ಯಂತ ಪ್ರವಾಸ ಮಾಡಿದ್ದಾರೆ. ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಮಕ್ಕಳ ನಾಟಕ ರಂಗ ಶಿಬಿರಗಳನ್ನು ನಡೆಸಿದ್ದಾರೆ. ನಾಗಮಂಡಲ, ಚೋರ ಪುರಾಣ, ಸಂಕ್ರಾಂತಿ, ಮಹಿಮಾಪುರ, ರಥಮುಸಲ, ಘಾಶೀರಾಂ ಕೊತ್ವಾಲ್ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬೆಳಕಿನ ವಿನ್ಯಾಸದಲ್ಲಿ ವಿಶೇಷ ಆಸಕ್ತಿ ಮತ್ತು ಪರಿಣತಿಯನ್ನು ಪಡೆದಿರುವ ಇವರು ರಂಗಾಯಣದ ಎಲ್ಲ ನಾಟಕಗಳಲ್ಲೂ ಅಭಿನಯಿಸಿದ್ದಾರೆ.

ಮಹೇಶ್ ಕಲ್ಲತ್ತಿ : ಮಹೇಶ್.ಕೆ.ಎಸ್. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಗಾದ ಕಲ್ಲತ್ತಿಯ ಇವರು ಬಿ.ಎ. ಪದವೀಧರರಾಗಿದ್ದು, ಕಾಲೇಜು ದಿನಗಳಿಂದಲೇ ನಾಟಕದ ಕಡೆಗೆ ಒಲವು ಮೂಡಿಸಿಕೊಂಡು ತೀರ್ಥಹಳ್ಳಿಯ ಹವ್ಯಾಸಿ ರಂಗತಂಡವಾದ ನಟಮಿತ್ರರು ತಂಡದೊಂದಿಗೆ ನಟನಾಗಿ ಅಭಿನಯಿಸುತ್ತ ಹೆಚ್ಚಿನ ತರಬೇತಿಗೆಂದು ಮೈಸೂರು ರಂಗಾಯಣದಲ್ಲಿ 2012-13ನೇ ಸಾಲಿನ ಭಾರತೀಯ ರಂಗಶಿಕ್ಷಣ ಕೇಂದ್ರಕ್ಕೆ ಸೇರಿಕೊಂಡು, ಮುಂದೆ ಮೂರು ವರ್ಷ ರಂಗಾಯಣದಲ್ಲೇ ಕೆಲಸ ನಿರ್ವಹಿಸುತ್ತ ನಟನೆಯೊಂದಿಗೆ ಬೆಳಕಿನ ವಿನ್ಯಾಸ, ರಂಗವಿನ್ಯಾಸ, ವಸ್ರ್ತವಿನ್ಯಾಸ, ನಿರ್ದೇಶನ ಎಲ್ಲದರ ಪರಿಣತಿ ಹೊಂದಿದ್ದಾರೆ. ಪ್ರಸ್ತುತ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಎಂ.ಎ. ನಾಟಕ ಸ್ನಾತಕೋತ್ತರ ಪದವಿ ಪಡೆದಿದ್ದು, ಹದಿನೈದಕ್ಕೂ ಹೆಚ್ಚು ನಾಟಕಗಳಲ್ಲಿ ನಟರಾಗಿ, ಅರವತ್ತಕ್ಕೂ ಹೆಚ್ಚು ನಾಟಕಗಳಿಗೆ ಬೆಳಕಿನ ವಿನ್ಯಾಸಕರಾಗಿ ಹಲವಾರು ಮಕ್ಕಳ ನಾಟಕಗಳಿಗೆ ಸಹ ನಿರ್ದೇಶನ ಮತ್ತು ನಿರ್ದೇಶನವನ್ನು ಮಾಡಿರುತ್ತಾರೆ.

ರಂಗದ ಮೇಲೆ

ಜಗದೀಶ ಮನವಾರ್ತೆ : ದ್ರೋಣ, ಸತ್ಯಕ
ಕೃಷ್ಣಕುಮಾರ್ ನಾರ್ಣಕಜೆ : ಭೀಷ್ಮ, ಇಂದ್ರ, ಯುಯುತ್ಸು
ಹುಲುಗಪ್ಪ ಕಟ್ಟೀಮನಿ : ದುರ್ಯೋಧನ, ಕೃಷ್ಣದ್ವೈಪಾಯನ
ಕ.ಆರ್. ನಂದಿನಿ : ಕುಂತಿ
ಪ್ರಶಾಂತ್ ಹಿರೇಮಠ : ಸಂಜಯ
ವಿನಾಯಕಭಟ್ ಹಾಸಣಗಿ : ವಿದುರ
ರಾಮು. ಎಸ್ : ಶಲ್ಯ, ಕೃಪಾಚಾರ್ಯ
ಸರೋಜಾ ಹೆಗಡೆ : ದಪದಿ
ಪ್ರಮೀಳಾ ಬೆಂಗ್ರೆ : ಗಾಂಧಾರಿ
ಗೀತಾ ಎಂ.ಎಸ್ : ರಾಣಿ, ಜೈಮಿನಿ, ಸತ್ಯವತಿ, ಶಿಖಂಡಿ, ಮುದುಕಿ
ಮಹದೇವ್ : ಧೃತರಾಷ್ಟ್ರ, ಪಾಂಡು
ಬಿ.ಎನ್. ಶಶಿಕಲಾ : ರುಕ್ಮಿಣಿ, ಸುಮಂತು, ಸುಭದ್ರೆ, ಹೋಮದತ್ತ, ದಾಸಿ
ಮಹಶ್ ಕಲ್ಲತ್ತಿ : ಕಿರಿಯ ದ್ರೋಣ, ಶಕುನಿ
ಧನಂಜಯ ಆರ್.ಸಿ : ದುಶ್ಯಾಸನ, ಬಲರಾಮ, ಧೃಷ್ಟದ್ಯುಮ್ನ
ದಾನಪ್ಪ ಟಿ. : ಧರ್ಮಜ, ಸುಶರ್ಮ, ರುಕ್ಮಿ, ಅಶ್ವತ್ಥಾಮ, ಸುಷೇಣ, ದೇವಲೋಕದ ವೈದ್ಯ, ಅಲಾಯುಧನ ರಾಕ್ಷಸ, ಪಾಂಡವರ ಸೈನಿಕ, ಡಂಗುರದವರು, ಹದ್ದು,
ಅನುರಾಗ್ ಎಸ್ : ಕರ್ಣ, ದ್ರ್ರುಪದ, ಪಾಂಡವರ ಸೈನಿಕ, ಡಂಗುರದವರು,
ಆಶ್ರಮದ ಸೇವಕ, ಹದ್ದು, ಪಂಜಿನವರು
ಮಿಲನ್ ಕೆ ಗೌಡ : ಅರ್ಜುನ, ಭಾರ್ಗವ, ಏಕಲವ್ಯ, ದ್ರುಪದನ ಸೇವಕ, ಡಂಗುರದವರು, ಹದ್ದು, ಪಂಜಿನವರು, ಗುಂಪು,
ರಾಜಶೇಖರ್ ಗಂಗಾವತಿ: ಯುಯುಧಾನ, ಅಶ್ವಿನಿ ದೇವತೆ, ಪ್ರತಿವಿಂಧ್ಯ, ಅಲಾಯುಧನ ರಾಕ್ಷಸ, ಶಲ್ಯನ ಸೈನಿಕ, ಪಂಜಿನವರು, ಡಂಗುರದವರು, ಪ್ರಹರಿ, ಹದ್ದು
ದುರ್ಗಾ ಪರಮೇಶ : ಕೃಷ್ಣ, ಹವ್ಯ, ಪುಲಹ, ಹದ್ದು, ಪಂಜಿನವರು, ಡಂಗುರದವರು
ಸೌಮ್ಯಾ ಎಸ್ : ದ್ರೌಪದಿ, ಹಿರಣ್ಯವತಿ, ಶೃತಸೇನ, ಅಭಿಮನ್ಯು, ಅನರಣ್ಯ, ಧೃತರಾಷ್ಟ್ರನ ದಾಸಿ, ಮಾದ್ರಿಯ ದಾಸಿ, ಘಟೋತ್ಕಚನ ರಾಕ್ಷಸ, ಯಾದವರ ಸೈನಿಕ, ಹೆಂಗಸರ ಗುಂಪು, ಕೌರವರ ಸೈನಿಕ, ಹದ್ದು, ಪಂಜಿನವರು, ಕೃಷ್ಣನ ಸಖಿ, ಬಾಲ ಕೌರವರು.
ಅಕ್ಷತಾ ಕುಮಟಾ : ಕಿರಿಯಕುಂತಿ, ಶೃತಸೋಮ, ಬಾಲ ಅರ್ಜುನ, ವೈಶಂಪಾಯನ, ಭಾನುಮತಿ, ಕೌರವರ ಸೈನಿಕ, ಹದ್ದು, ಅಭಿಮನ್ಯು ಗುಂಪು, ಆಲಾಯುಧನ ರಾಕ್ಷಸ, ಯಾದವರ ಸೈನಿಕ, ಪಂಜಿನವರು, ಕೃಷ್ಣನ ಸಖಿ, ಹೆಂಗಸರ ಗುಂಪು, ದಾಸಿ
ಚಾಂದಿನಿ. ಪಿ : ತಪನ, ಶತಾನೀಕ, ರಾಧೆ, ಧೃತರಾಷ್ಟ್ರನ ದಾಸಿ, ಸತ್ಯಕನ ದಾಸಿ, ಮದ್ರದೇಶದ ದಾಸಿ, ಕೃಷ್ಣನ ಸಖಿ, ಕೌರವರ ಸೈನಿಕ, ಬಾಲ ಪಾಂಡವರು, ಅಂಬಿಕೆಯ ದಾಸಿ, ಅಭಿಮನ್ಯು ಗುಂಪು, ಘಟೋತ್ಕಚನ ರಾಕ್ಷಸ, ಹೆಂಗಸರ ಗುಂಪು, ಪಂಜಿನವರು
ಸಲ್ಮಾ : ಮಾದ್ರಿ, ಶೃತಕೀರ್ತಿ, ಕಿರಿಯ ದ್ರ್ರುಪದ, ವೃಷ, ದುಃಶ್ಯಲೆ, ಪಾರಸವಿ, ದಾಸಿ, ಕೌರವರ ಸೈನಿಕ, ಬಾಲ ಕೌರವರು, ಹದ್ದು, ಅಭಿಮನ್ಯುವಿನ ಗುಂಪು, ಘಟೋತ್ಕಚನ ರಾಕ್ಷಸ, ಯಾದವರ ಸೈನಿಕ, ಪಂಜಿನವರು, ಕೃಷ್ಣನ ಸಖಿಯರು, ಹೆಂಗಸರ ಗುಂಪು
ರಾಜೇಶ್ ಮಾಧವನ್ : ಭೀಮ, ಅಧಿರಥ, ಪ್ರಾಂತ್ಯಪಾಲನ ಸಂಗಡಿಗ, ಹದ್ದು,
ಸತ್ಯಕನ ಸೇವಕ, ಪಂಜಿನವರು
ಗಿರೀಶ್ ಹೆಚ್.ಎಂ : ಸಹದೇವ, ಸುಕೇಶ, ಹಿಡಂಬಿ, ಚೈತ್ಯ, ಸೋಮರಥ, ಪಾಂಡುವಿನ ಕಡೆಯ ಸೂತ, ಪಂಜಿನವರು, ಗುಂಪು,
ಅಭಿಷೇಕ್ ಗಾಣಿಗ : ನಕುಲ, ರುಕ್ಮರಥ, ಸಿಂಹಕ, ದುಸ್ಸಹ, ನಾಗತರುಣ, ಬಾಲ ಪಾಂಡವರು, ಪ್ರಾಂತ್ಯಪಾಲನ ಸಂಗಡಿಗ, ಹದ್ದು, ಅಲಾಯುಧ, ಸೇವಕ, ಪಂಜಿನವರು, ಶಲ್ಯನ ಸೈನಿಕ, ಗುಂಪು,
ಚಂದನ್ : ಘಟೋತ್ಕಚ, ಕೃತವರ್ಮ, ಜಯದ್ರಥ, ಲೋಹಕಾರ, ಪ್ರಾಂತ್ಯಪಾಲಕ, ಕೌರವರ ಸೈನಿಕ, ಯಾದವರ ಸೈನಿಕ, ಪಂಜಿನವರು

ರಂಗದ ಹಿಂದೆ

ರಂಗವಿನ್ಯಾಸ ಮತ್ತು ರಂಗಪರಿಕರ : ಹೆಚ್.ಕೆ ದ್ವಾರಕಾನಾಥ್
ವಸ್ತ್ರವಿನ್ಯಾಸ : ಪ್ರಸಾದ್ ಬಿದ್ದಪ್ಪ
ಬೆಳಕು ವಿನ್ಯಾಸ : ಕೃಷ್ಣಕುಮಾರ್ ನಾರ್ಣಕಜೆ, ಮಹೇಶ ಕಲ್ಲತ್ತಿ
ಸಂಗೀತ ನಿರ್ದೇಶನ : ರವಿ ಮುರೂರು
ಸಂಗೀತ ನಿರ್ವಹಣೆ : ರಾಮಚಂದ್ರ ಹಡಪದ
ವಸ್ತ್ರಪರಿಕರ, ಆಭರಣ : ಸಂಕೀರ್ತಿ ಐಪಂಜಿಗುಳಿ
ಚಲನಾವಿನ್ಯಾಸ : ಅಂಜುಸಿಂಗ್
ಪ್ರಸಾದನ ವಿನ್ಯಾಸ : ರಾಮಕೃಷ್ಣ ಬೆಳ್ತೂರು
ಪರಿಚಯ ಪತ್ರ, ಭಿತ್ತಿಚಿತ್ರ ವಿನ್ಯಾಸ : ಚನ್ನಕೇಶವ
ಸಂಗೀತ ಸಾಂಗತ್ಯ : ಧನಂಜಯ ಆರ್.ಸಿ, ಸುಬ್ರಹ್ಮಣ್ಯ ಎಸ್, ಕೃಷ್ಣ ಚೈತನ್ಯ, ಸಮೀರ್‌ರಾವ್
ತಾಂತ್ರಿಕ ನಿರ್ವಾಹಕರು : ನಂದಕಿಶೋರ್
ರಂಗ ವ್ಯವಸ್ಥಾಪಕರು : ಪ್ರಮೀಳಾ ಬೆಂಗ್ರೆ
ರಂಗ ನಿರ್ವಹಣೆ : ವಿನಾಯಕಭಟ್ ಹಾಸಣಗಿ
ಮೂಲ ಕಾದಂಬರಿ : ಡಾ. ಎಸ್.ಎಲ್. ಭೈರಪ್ಪ
ರಂಗಪಠ್ಯ, ನಿರ್ದೇಶನ : ಪ್ರಕಾಶ್ ಬೆಳವಾಡಿ

ನೇಪಥ್ಯದಲ್ಲಿ . . . .

ರಂಗಸಜ್ಜಿಕೆ : ಕೃಷ್ಣಕುಮಾರ್ ನಾರ್ಣಕಜೆ, ದುರ್ಗಾ ಪರಮೇಶ್, ಅನುರಾಗ್, ಸಲ್ಮಾ, ಅಭಿ ಹುಣಸೂರು, ರಾಜೇಶ್ ಮಾಧವನ್
ತಾಂತ್ರಿಕ ಸಹಕಾರ : ಜನಾರ್ಧನ್ ಪಿ, ರಾಜು ಎಸ್, ಅಭಿ, ಪ್ರಸನ್ನ, ವಿನಯ, ರಂಗನಾಥ್, ಭಾರ್ಗವ, ನಂದನ್, ದರ್ಶನ್, ಭರತ್‌ಕುಮಾರ್
ವಸ್ತ್ರಾಲಂಕಾರ : ಹುಲುಗಪ್ಪ ಕಟ್ಟೀಮನಿ, ಅಕ್ಷತಾ ಕುಮಟಾ, ರಾಜಶೇಖರ್, ಗಿರೀಶ್
ತಾಂತ್ರಿಕ ಸಹಕಾರ : ಮೋಹನ್
ಪರಿಕರ : ಮಹದೇವ್, ರಾಮು ಎಸ್, ದಾನಪ್ಪ, ಸೌಮ್ಯ ಪಾಣಾಜೆ
ತಾಂತ್ರಿಕ ಸಹಕಾರ : ಶ್ರೀಕಾಂತ್ ಎಸ್, ಪುರುಷೋತ್ತಮ್ ಆರ್
ಮುಖವಾಡ : ನಂದಿನಿ ಕೆ.ಆರ್
ತಾಂತ್ರಿಕ ಸಹಕಾರ : ಚಿರಂಜೀವಿ ಎಂ.ವಿ, ಸಂದೀಪ್ .ಎಂ
ಪ್ರಸಾದನ : ವಿನಾಯಕ ಭಟ್ ಹಾಸಣಗಿ, ಜಗದೀಶ್ ಮನೆವಾರ್ತೆ, ಚಾಂದಿನಿ .ಪಿ, ಚಂದನ್
ಸಂಗೀತ : ಗೀತಾ ಮೋಂಟಡ್ಕ
ತಾಂತ್ರಿಕ ಧ್ವನಿ ಸಹಕಾರ : ಕೃಷ್ಣಪ್ರಸಾದ್ .ಎಂ
ಪ್ರಚಾರ, ಪರಿಚಯ ಪುಸ್ತಿಕೆ : ಪ್ರಶಾಂತ್ ಹಿರೇಮಠ, ಶಶಿಕಲಾ .ಬಿ.ಎನ್
ತಾಂತ್ರಿಕ ಸಹಕಾರ : ರವಿ .ವಿ, ಪೂರ್ಣಿಮಾ
ಬೆಳಕು : ಸರೋಜಾ ಹೆಗಡೆ, ಮಿಲನ್ ಕೆ. ಗೌಡ
ತಾಂತ್ರಿಕ ಸಹಕಾರ : ಶಿವಕುಮಾರ್ ಪಿ.
ಪರ್ವ ಮಾಹಿತಿ ಕೇಂದ್ರ ನಿರ್ವಹಣೆ : ಕೆ. ಅಂಜುಸಿಂಗ್, ಅರಸೀಕೆರೆ ಯೋಗಾನಂದ, ಆಲೂರು ದೊಡ್ಡನಿಂಗಪ್ಪ
ಕಛೇರಿ ವಿಶೇಷ ನಿರ್ವಹಣೆ : ಕೆ.ಬಿ. ರಾಜೇಶ್, ಎಂ.ಸಿ. ಮಂಜುನಾಥ್, ಗೋಪಿನಾಥ್
ವಿಶೇಷ ಪ್ರದರ್ಶನ ನಿರ್ವಹಣೆ : ಎಸ್. ರಾಮನಾಥ, ದಿಗ್ವಿಜಯ, ಅಪೂರ್ವ ಆನಗಳ್ಳಿ, ಮಂಜು ಕಾಸರಗೋಡು
ಸ್ವಯಂಸೇವಕ ನಿರ್ವಹಣೆ : ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು,
ಕರ್ನಾಟಕ ಕಲಾಮಂದಿರ ಸಿಬ್ಬಂದಿಗಳು
ಸಂಚಾರ ನಿರ್ವಹಣೆ : ಹೆಚ್.ವಿ. ಚಂದ್ರೇಗೌಡ
ಪರಿಚಾರಿಕೆ ಸಹಕಾರ : ನಾಗಮಣಿ, ಪ್ರೇಮಾ, ಬ್ರಹ್ಮಲಿಂಗಪ್ಪ, ಶೇಷನಾರಾಯಣ
ವಿಶೇಷ ಸಹಕಾರ : ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ, ಮೈಸೂರು

ಕೃತಜ್ಞತೆಗಳು

ಡಾ. ಎಸ್.ಎಲ್. ಭೈರಪ್ಪ, ಖ್ಯಾತ ಕಾದಂಬರಿಕಾರರು, ಮೈಸೂರು
ಶ್ರೀ ಅರವಿಂದ ಲಿಂಬಾವಳಿ, ಮಾನ್ಯ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ಶ್ರೀ ಎಸ್.ಟಿ. ಸೋಮಶೇಖರ್, ಮಾನ್ಯ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು, ಬೆಂಗಳೂರು
ಶ್ರೀ ರವಿಶಂಕರ್, ಮಾನ್ಯ ಸರ್ಕಾರದ ಕಾರ್ಯದರ್ಶಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ಶ್ರೀ ರಂಗಪ್ಪ, ಮಾನ್ಯ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
ಶ್ರೀ ಎಲ್. ನಾಗೇಂದ್ರ, ಮಾನ್ಯ ಶಾಸಕರು, ಚಾಮರಾಜ ವಿಧಾನಸಭಾ ಕ್ಷೇತ್ರ, ಮೈಸೂರು
ಶ್ರೀ ಹೆಚ್.ವಿ. ರಾಜೀವ್, ಅಧ್ಯಕ್ಷರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು
ಶ್ರೀಮತಿ ಬನಶಂಕರಿ, ಪ್ರಭಾರ ಜಂಟಿ ನಿರ್ದೇಶಕರು (ಆಡಳಿತ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು
ಡಾ. ಜಿ.ಎಲ್. ಶೇಖರ್ ಮತ್ತು ಶ್ರೀ ಉದಯ್‌ಶಂಕರ್, ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ, ಮೈಸೂರು
ಶ್ರೀ ಫಣೀಶ್, ಅಧ್ಯಕ್ಷರು, ಮೈಸೂರು ಪೈಂಟ್ಸ್ & ವಾರ್ನಿಷ್, ಮೈಸೂರು
ಡಾ. ಹನೂರು ಕೃಷ್ಣಮೂರ್ತಿ, ಜಾನಪದ ವಿದ್ವಾಂಸರು, ಮೈಸೂರು
ಶ್ರೀ ಹೆಚ್. ಚನ್ನಪ್ಪ, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು
ಉಪ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೈಸೂರು
ಶ್ರೀ ಪಿ. ಶೇಷಾದ್ರಿ, ಖ್ಯಾತ ಚಲನಚಿತ್ರ ನಿರ್ದೇಶಕರು, ಬೆಂಗಳೂರು
ಡಾ. ಕೆ.ವೈ. ಶ್ರೀನಿವಾಸಗೌಡರು ಮತ್ತು ಶ್ರೀ ಅರವಿಂದ್
ರಂಗಸಮಾಜದ ಎಲ್ಲಾ ಸದಸ್ಯರು
ಮೈಸೂರಿನ ಎಲ್ಲಾ ಮಾಧ್ಯಮ ಮಿತ್ರರು
ಮೈಸೂರು ಆಕಾಶವಾಣಿ ಬಳಗ
ನಾಟಕದ ಟಿಕೆಟ್ ಖರೀದಿಸಿ ನಾಟಕ ವೀಕ್ಷಿಸುವ ಎಲ್ಲಾ ರಂಗಾಸಕ್ತರಿಗೆ. . .
ವಿಶೇಷವಾಗಿ : ಡಾ. ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ, ಮೈಸೂರು