ಶ್ರೀರಾಮಾಯಣ ರಂಗದರ್ಶನಂ
ರಾಮಾಯಣ – ನಮ್ಮ ಹೆಮ್ಮೆಯ ಮಹಾಕಾವ್ಯ. ಸಾವಿರಾರು ವರ್ಷಗಳಿಂದ ತಲೆಮಾರಿನಿಂದ ತಲೆಮಾರಿಗೆ ವಿವಿಧ ರೂಪಗಳಲ್ಲಿ ಹರಿದು ಬರುತ್ತಿರುವ ಈ ಮಹಾಕಾವ್ಯವನ್ನು ಕೆ.ವಿ ಪುಟ್ಟಪ್ಪನವರು ಶ್ರೀರಾಮಾಯಣ ದರ್ಶನಂ ಹೆಸರಿನಲ್ಲಿ ಹೊಸ ವೈಚಾರಿಕ ದೃಷ್ಟಿ ಕೋನದಿಂದ ಪುನರ್ರಚಿಸಿದ್ದಾರೆ. ಹಳಗನ್ನಡ ಮತ್ತು ಹೊಸಗನ್ನಡಗಳೆರಡೂ ಹದವಾಗಿ ಬೆರೆತ ವಿಶಿಷ್ಟ ಶೈಲಿಯಲ್ಲಿ ರಚಿತವಾಗಿರುವ ಈ ಮಹಾಕಾವ್ಯದ ಓದು ಮತ್ತು ಓದಿನ ಕೇಳುವಿಕೆಯೇ ಒಂದು ಸೊಗಸು. ಈ ಹಿಂದೆ ಕುವೆಂಪುರವರ ಶ್ರೀರಾಮಾಯಣ ದರ್ಶನವನ್ನು ಗಮಕ ಶೈಲಿಯಲ್ಲಿ ಹಾಡಿ ಜನರಿಗೆ ತಲುಪಿಸುವ ಪ್ರಯತ್ನ ನಡೆದಿತ್ತು. ಈ ಕಾರ್ಯವನ್ನು ಅಭಿನಂದಿಸುತ್ತಲೇ ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು ಶ್ರೀಸಾಮಾನ್ಯರಿಗೆ ರಂಗ ಪ್ರದರ್ಶನದ ಮೂಲಕ ಪರಿಚಯಿಸುವ ವಿಭಿನ್ನ ಪ್ರಯತ್ನಕ್ಕೆ ನಾವು ಕೈ ಹಾಕಿದ್ದೇವೆ.

ಇದೀಗ ನಾವು ಗಂಭೀರ ಸಾಹಿತ್ಯ ಕೃತಿಗಳನ್ನೂ ಸಹ ಜನರಿಗೆ ಮನ ಮುಟ್ಟುವಂತೆ ತಲುಪಿಸುವ ರಂಗಭೂಮಿಯ ವಿಶಿಷ್ಟ ಶಕ್ತಿಯ ಮೇಲೆ ನಂಬಿಕೆಯಿಟ್ಟು, ಈ ಮಹಾಕಾವ್ಯವನ್ನು ಯಥಾವತ್ತಾಗಿ ಕುವೆಂಪು ಭಾಷಾ ಶೈಲಿಯಲ್ಲಿಯೇ ರಂಗ ಪ್ರದರ್ಶನ ಮಾಡುವ ಮಹತ್ಕಾರ್ಯಕ್ಕೆ ಕೈ ಹಾಕಿದ್ದೇವೆ. ಮಹಾಕಾವ್ಯದ ರಂಗ ಪ್ರದರ್ಶನಕ್ಕೂ ರಸಭಂಗವಾಗದಂತೆ ಹಾಗೂ ಪ್ರೇಕ್ಷಕ ಮಹಾಪ್ರಭುಗಳಿಗೂ ದೀರ್ಘಾವಧಿ ಎನಿಸದಂತೆ ರಂಗ ಪ್ರದರ್ಶನದ ಅವಧಿಯನ್ನು ಐದು ಘಂಟೆಗೆ ಸೀಮಿತಗೊಳಿಸಲಾಗಿದೆ. ನಮ್ಮ ಈ ಪ್ರಯತ್ನವನ್ನು ಪ್ರೇಕ್ಷಕರು ಪ್ರಾಂಜಲ ಮನಸ್ಸಿನಿಂದ ಸ್ವೀಕರಿಸಿ ಮೆಚ್ಚುತ್ತಾರೆ ಎನ್ನುವ ವಿಶ್ವಾಸ ನಮ್ಮದು.

ಈ ಅಪರೂಪದ ಕ್ಲಿಷ್ಟ ರಂಗ ಪ್ರಯೋಗವನ್ನು ಸಾಧ್ಯ ಮಾಡಿದ ಮೈಸೂರು ರಂಗಾಯಣ ರೆಪರ್ಟರಿ ಸಂಸ್ಥೆಗೆ ಹಾಗೂ ಈ ಮಹಾಪ್ರಯೋಗಕ್ಕೆ ತಮ್ಮ ಸೃಜನಾತ್ಮಕ ಕೊಡುಗೆಯನ್ನು ನೀಡಿದ ಮೈಸೂರು ರಂಗಾಯಣದ ಹಿರಿಯ ಕಲಾವಿದರೆಲ್ಲರಿಗೂ

ನಾವು ಋಣಿ. ಈ ರಂಗ ಪ್ರಯೋಗದ ಬೀಜಾಂಕುರ ಸಮಯದಿಂದಲೂ ನಮ್ಮೊಡನೆ ಸಹಕರಿಸಿ ಪ್ರೋತ್ಸಾಹ ನೀಡಿರುವ ಮೈಸೂರಿನ ಸಾಹಿತಿ ಕಲಾವಿದ ಸಮೂಹಕ್ಕೆ ನಮ್ಮ ಕೃತಜ್ಞತೆಗಳು. ಸಜನಾತ್ಮಕ ಸವಾಲಿನ ಈ ಕಾರ್ಯವನ್ನು ಹೂವಿನಷ್ಟು ಹಗುರ ಮಾಡಿದ ಈ ನಾಟಕದ ನಿರ್ದೇಶಕರಾದಿಯಾಗಿ, ರಂಗ ಪಠ್ಯ ನಿರೂಪಕರು, ಸಂಗೀತ ನಿರ್ದೇಶಕರು, ನೃತ್ಯಸಂಯೋಜಕರು, ಕಲಾ ನಿರ್ದೇಶಕರು, ಪ್ರಚಾರ ವಿನ್ಯಾಸಕರು, ಕಲಾವಿದರು ಹಾಗೂ ಮೈಸೂರು ರಂಗಾಯಣದ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿ ಸಿಬ್ಬಂದಿಗಳೆಲ್ಲರಿಗೂ ನನ್ನ ಕೃತಜ್ಞತಾಪೂರ್ವಕ ಅಭಿನಂದನೆಗಳು.

ಎನ್. ಆರ್. ವಿಶುಕುಮಾರ್
ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

’ಶ್ರೀ ರಾಮಾಯಣ ದರ್ಶನಂ’ ರಂಗಪಯಣ..

ಶಿವಮೊಗ್ಗ 2018 ಡಿಸೆಂಬರ್ 5 ಮತ್ತು 6 ಸಂಜೆ 6:00 ಕ್ಕೆ, ಕುವೆಂಪು ರಂಗಮಂದಿರ
ಹಾಸನ 2018 ಡಿಸೆಂಬರ್ 8 ಸಂಜೆ 6:00 ಕ್ಕೆ, ಹಾಸನಾಂಬ ರಂಗಮಂದಿರ
ಚಿಕ್ಕಮಗಳೂರು 2018 ಡಿಸೆಂಬರ್ 11 ಸಂಜೆ 6:00 ಕ್ಕೆ, ಕುವೆಂಪು ರಂಗಮಂದಿರ
ಸಾಣೇಹಳ್ಳಿ 2018 ಡಿಸೆಂಬರ್ 13 ಸಂಜೆ 6:00 ಕ್ಕೆ, ಶ್ಯಮನೂರು ಶಿವಶಂಕರಪ್ಪ ರಂಗಮಂದಿರ.
ಹೂವಿನಹಡಗಲಿ 2018 ಡಿಸೆಂಬರ್ 15 ಸಂಜೆ 6:00 ಕ್ಕೆ, ರಂಗಭಾರತಿ ರಂಗಮಂದಿರ.
ಬಳ್ಳಾರಿ  ಡಿಸೆಂಬರ್ 17 ಸಂಜೆ 6:00 ಕ್ಕೆ, ಡಾ|| ಜೋಳದರಾಶಿ ದೊಡ್ಡನಗೌಡ ರಂಗಮಂದಿರ.
ರಾಯಚೂರು ಡಿಸೆಂಬರ್ 19 ಸಂಜೆ 6:00 ಕ್ಕೆ, ಪಂಡಿತ್ ಸಿದ್ದರಾಮು ಜಂಬಲದಿನ್ನಿ ರಂಗಮಂದಿರ.
ಕಲಬುರಿಗಿ 2018 ಡಿಸೆಂಬರ್ 21 ಸಂಜೆ 6:00 ಕ್ಕೆ, ಡಾ|| ಎಸ್ ಎಂ ಪಂಡಿತ್ ರಂಗಮಂದಿರ.
ಬಾಗಲಕೋಟೆ 2018 ಡಿಸೆಂಬರ್ 23 ಸಂಜೆ 6:00 ಕ್ಕೆ, ಕಲಾಭವನ

ಬೆಳಗಾವಿ 2018 ಡಿಸೆಂಬರ್ 25 ಸಂಜೆ 6:00 ಕ್ಕೆ, ಕೆ. ಎಲ್. ಇ. ರಂಗಮಂದಿರ.
ಧಾರವಾಡ 2018 ಡಿಸೆಂಬರ್ 27 ಸಂಜೆ 6:00 ಕ್ಕೆ, ಸೃಜನ ರಂಗಮಂದಿರ.
ತೀರ್ಥಹಳ್ಳಿ 2018 ಡಿಸೆಂಬರ್ 29 ಸಂಜೆ 6:00 ಕ್ಕೆ, ಶಾಂತವೇರಿ ಗೋಪಾಲಗೌಡ ರಂಗಮಂದಿರ.
ಮಂಚಿಕೇರಿ 2019 ಜನವರಿ 1 ಸಂಜೆ 6:00 ಕ್ಕೆ, ಸಮಾಜ ರಂಗಮಂದಿರ.
ಶೇಷಗಿರಿ 2019 ಜನವರಿ 3 ಸಂಜೆ 6:00 ಕ್ಕೆ, ಸಿ ಎಂ ಉದಾಸಿ ರಂಗಮಂದಿರ.
ತುಮಕೂರು 2019 ಜನವರಿ 5 ಸಂಜೆ 6:00 ಕ್ಕೆ, ಗುಬ್ಬಿ ವೀರಣ್ಣ ರಂಗಮಂದಿರ.
ಕೋಲಾರ 2019 ಜನವರಿ 7 ಸಂಜೆ 6:00 ಕ್ಕೆ, ಟಿ ಚನ್ನಯ್ಯ ರಂಗಮಂದಿರ
ಮಂಡ್ಯ 2019 ಜನವರಿ 9 ಸಂಜೆ 6:00 ಕ್ಕೆ, ವಿವೇಕಾನಂದ ರಂಗಮಂದಿರ.

ಪರಿಕಲ್ಪನೆ : ಎನ್.ಆರ್. ವಿಶುಕುಮಾರ್
ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ನಿರ್ವಹಣೆ : ಭಾಗೀರಥಿಬಾಯಿ ಕದಂ
ನಿರ್ದೇಶಕರು, ರಂಗಾಯಣ, ಮೈಸೂರು

ರಂಗರೂಪ : ಜಗದೀಶ ಮನೆವಾರ್ತೆ ಮತ್ತು ಕೃಷ್ಣಕುಮಾರ್ ನಾರ್ಣಕಜೆ
ರಂಗ ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್
ಸಂಗೀತ : ರವಿ ಮೂರೂರು

ಸಂಗೀತ ನಿರ್ವಹಣೆ : ಶ್ರೀನಿವಾಸ ಭಟ್ (ಚೀನಿ)
ವಸ್ತ್ರ ಹಾಗೂ ಪರಿಕರ ವಿನ್ಯಾಸ : ಪ್ರಮೋದ ಶಿಗ್ಗಾಂವ್
ಪ್ರಚಾರ ವಿನ್ಯಾಸ : ಕೆ.ಜೆ. ಸಚ್ಚಿದಾನಂದ
ಬೆಳಕಿನ ವಿನ್ಯಾಸ : ಮಹೇಶ ಕಲ್ಲತ್ತಿ
ಸಹ ನಿರ್ದೇಶನ : ಉಮೇಶ್ ಸಾಲಿಯಾನ್
ನಿರ್ದೇಶನ : ಕೆ.ಜಿ. ಮಹಾಬಲೇಶ್ವರ

ನಾನು ಕಣ್ಣು ತೆರೆದು ಜಗತ್ತನ್ನು ವಿಸ್ಮಯದಿಂದ ವೀಕ್ಷಿಸಲು ಪ್ರಾರಂಭಿಸಿದಾಗ ನಮ್ಮ ಹಳ್ಳಿ ಮನೆಯ ಗೋಡೆಯ ಮೇಲೆ ದೇವರ, ಸಂಬಂಧಿಕರ ಭಾವಚಿತ್ರಗಳ ನಡುವೆ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರ ಕೂಡ ರಾರಾಜಿಸುತ್ತಿತ್ತು. ಮುಂದೆ ನಾನು ಬೆಳೆಯುತ್ತಾ ಹೋದಂತೆ ಓ ನನ್ನ ಚೇತನ ಆಗು ನೀ ಅನಿಕೇತನ ಎಂಬ ಕವಿವಾಣಿ ನನ್ನಲ್ಲಿನ ಚೇತನವನ್ನು ಬಡಿದೆಬ್ಬಿಸಿದರೆ ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು, ಕೊನೆಯನೆಂದು ಮುಟ್ಟದಿರು ಎನ್ನುವ ನುಡಿ ನನ್ನನ್ನು ರಂಗಭೂಮಿಯಂತಹ ಜಂಗಮದ ಬದುಕಿನಲ್ಲಿ ಧೈರ್ಯದ ಹೆಜ್ಜೆ ಇಡಲು ಪ್ರೇರೇಪಿಸಿತು. ರಂಗ ನಟಿಯಾಗಲು ತಳಹದಿ ಹಾಕಿದ ರಕ್ತಾಕ್ಷಿ; ನಟಿಯನ್ನಾಗಿಸಿದ ಕಾನೂರು ಹೆಗ್ಗಡತಿ ಎಲ್ಲವೂ ಈ ಮಹಾಚೇತನ ಸೃಷ್ಟಿಸಿದ ಪಾತ್ರಗಳೆ.

ಅಸ್ಸಾಮೀಸ್ ಭಾಷೆಗೆ ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಅನುವಾದ ಮಾಡುವಾಗ ಕುವೆಂಪು ಅವರ ಆದರ್ಶದ ನಿಲುವಿನ ವೈಚಾರಿಕತೆಯು ಬೆರಗನ್ನುಂಟುಮಾಡಿದುದಲ್ಲದೆ, ನನ್ನ ಪ್ರಜ್ಞೆಯನ್ನು ಜಾಗೃತಗೊಳಿಸಿತು. ಬುದ್ಧಿಯನ್ನು ಒರೆಗೆ ಹಚ್ಚಿ ಮೌಢ್ಯಗಳನ್ನು ದೂರವಾಗಿಸಿ ನಿರಂಕುಶ ಮತಿಗಳಾಗಿ ಎನ್ನುವ ಅವರ ಚಿಂತನೆ ಬರೀ ಆ ಸಮಯಕ್ಕಷ್ಟೇ ಅಲ್ಲ, ಪ್ರಸ್ತುತ ಸಮಯದಲ್ಲಿಯೂ ಯುವಪೀಳಿಗೆಯ ಪ್ರಜ್ಞೆಯ ಜಾಗೃತಿಗೆ ಅತ್ಯಂತ ಅವಶ್ಯಕವಾಗಿದೆ. ಸಾಹಿತಿಗಳಾದ ಶ್ರೀ ಬರಗೂರು ರಾಮಚಂದ್ರಪ್ಪನವರು ಹೇಳುವಂತೆ ಕುವೆಂಪು ಅವರೊಳಗೆ ಸಾಮಾಜಿಕ ವ್ಯಕ್ತಿತ್ವ ನಿರಂತರವಾಗಿ ಕೆಲಸ ಮಾಡುತ್ತಿತ್ತು. ಸಂಸ್ಕೃತಿ ಮತ್ತು ಸಮಾಜ ಇವೆರಡರ ನಡುವೆ ಸಂಬಂಧ ಕಲ್ಪಿಸಿದ, ಸೃಜನಶೀಲತೆ ಮತ್ತು ಚಿಂತನಾಶೀಲತೆ ಇವೆರಡನ್ನೂ ಒಟ್ಟಿಗೆ ನಿರ್ವಹಿಸಿದ ಆಧುನಿಕ ಚಿಂತನಾ ಶಿಖರ ಕುವೆಂಪು. ಆಧ್ಯಾತ್ಮಕ್ಕೆ ಸಾಮಾಜಿಕ ಆಯಾಮ ತಂದುಕೊಟ್ಟ ದೊಡ್ಡ ಪ್ರತಿಭೆ ಕುವೆಂಪು. ನಾನು ಮೈಸೂರು ರಂಗಾಯಣದಲ್ಲಿರುವಾಗ ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ರಂಗಕ್ಕೇರುತ್ತಿರುವುದು ನನ್ನ ಭಾಗ್ಯವೇ ಸರಿ. ರಂಗಾಯಣ ಈಗಾಗಲೇ ಕನ್ನಡ ಸಾಹಿತ್ಯದ ಹಲವಾರು ಮೇರುಕೃತಿಗಳನ್ನು ರಂಗಕ್ಕೆ ತಂದಿದೆ.

ಮೈಸೂರಿನ ರಂಗಾಯಣಕ್ಕೆ ಇಂತಹ ಸಾಹಸಗಳು ಹೊಸತಲ್ಲ. ತಾನು ಕಂಡ ಕನಸುಗಳನ್ನು ಸಾಕಾರಗೊಳಿಸಲು ಅಹರ್ನಿಶಿಯಾಗಿ ದುಡಿಯುವುದು ಮೈಸೂರು ರಂಗಾಯಣ ಬಳಗದ ಜಾಯಮಾನ. ಈ ಬೃಹತ್ ಕಾವ್ಯದ ದರ್ಶನವನ್ನು ಹೊತ್ತು, ಕುವೆಂಪು ಎಂಬ ಮಹಾಚೇತನದ ಮೂಲಕ ನಿಮ್ಮ ಮುಂದೆ ಬಂದಿದ್ದೇವೆ. ಎಂದಿನಂತೆ ಸಹೃದಯ ಪ್ರೇಕ್ಷಕರ ಆಶೀರ್ವಾದವನ್ನು ಬೇಡುತ್ತಿದ್ದೇವೆ. ಈ ನಾಟಕ ನಿರ್ದೇಶನದ ಸಾರಥ್ಯವನ್ನು ವಹಿಸಿರುವ, ನನ್ನ ಗುರುಗಳೂ ಆದ ಶ್ರೀ ಕೆ.ಜಿ. ಮಹಾಬಲೇಶ್ವರ ಅವರಿಗೆ ಅನಂತ ಧನ್ಯವಾದಗಳು. ನನ್ನೊಡನೆ ಕಾರ್ಯ ಬಾಹುಳ್ಯದ ಮಧ್ಯೆಯೂ ಈ ಯೋಜನೆಯನ್ನು ಹಗುರಾಗಿ ನಿರ್ವಹಿಸಲು ಉತ್ಸಾಹದ ಮನಸ್ಸಿನಿಂದ ಜೊತೆ ಜೊತೆಯಾಗಿ ದುಡಿದ ಜಂಟಿ ನಿರ್ದೇಶಕರಾದ ಶ್ರೀ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಅವರನ್ನು ಕೃತಜ್ಞತೆಯಿಂದ ನೆನೆಯುತ್ತೇನೆ. ಈ ಬೃಹತ್ ಕಾವ್ಯವನ್ನು ರಂಗರೂಪಕ್ಕೆ ತರಲು ಹಗಲಿರುಳು ಶ್ರಮಿಸಿದ ಗೆಳೆಯರಾದ ಜಗದೀಶ್ ಮನೆವಾರ್ತೆ ಮತ್ತು ಕೃಷ್ಣಕುಮಾರ್ ನಾರ್ಣಕಜೆ ಅವರು ರಂಗಭೂಮಿಯ ಯುವಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ.

ನಿರ್ದೇಶಕರ ಬೆನ್ನೆಲುಬಾಗಿ ನಿಂತ ಉಮೇಶ್ ಸಾಲಿಯಾನ, ಸಂಗೀತ ನಿರ್ದೇಶನ ಮಾಡಿದ ರವಿ ಮೂರೂರು, ಸಂಗೀತ ನಿರ್ವಹಣೆ ಮಾಡಿದ ಶ್ರೀನಿವಾಸಭಟ್ (ಚೀನಿ), ವಸ್ತ್ರವಿನ್ಯಾಸ ಮಾಡಿದ ಪ್ರಮೋದ ಶಿಗ್ಗಾಂವ್, ರಂಗಾಯಣದ ಅನುಭವಿ ಕಲಾವಿದರ ಜೊತೆಗೆ ರಂಗಭೂಮಿಗೆ ಕಾಲಿರಿಸುತ್ತಿರುವ ಹೊಸ ಪ್ರತಿಭೆಗಳಿಗೆಲ್ಲರಿಗೂ ಶುಭ ಕೋರುತ್ತೇನೆ. ಶ್ರೀರಾಮಾಯಣ ದರ್ಶನಂ ರಂಗಪ್ರಸ್ತುತಿ ರಾಜ್ಯಾದ್ಯಂತ ಪ್ರದರ್ಶನ ಕಂಡು ಕುವೆಂಪು ಅವರ ಸಾಹಿತ್ಯದ ಕಂಪನ್ನು ಹರಡಲೆಂದು ಆಶಿಸುತ್ತೇನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಎನ್.ಆರ್. ವಿಶುಕುಮಾರ್ ಅವರ ಪರಿಕಲ್ಪನೆಯನ್ನು ಸಂಭ್ರಮಿಸುತ್ತಾ, ಈ ಹೊಸ ಸಾಹಸದ ಲಂಘನಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸುತ್ತೇನೆ.

 ಈ ನಾಟಕ ನಿರ್ದೇಶನದ ಸಾರಥ್ಯವನ್ನು ವಹಿಸಿರುವ, ನನ್ನ ಗುರುಗಳೂ ಆದ ಶ್ರೀ ಕೆ.ಜಿ. ಮಹಾಬಲೇಶ್ವರ ಅವರಿಗೆ ಅನಂತ ಧನ್ಯವಾದಗಳು. ನನ್ನೊಡನೆ ಕಾರ್ಯ ಬಾಹುಳ್ಯದ ಮಧ್ಯೆಯೂ ಈ ಯೋಜನೆಯನ್ನು ಹಗುರಾಗಿ ನಿರ್ವಹಿಸಲು ಉತ್ಸಾಹದ ಮನಸ್ಸಿನಿಂದ ಜೊತೆ ಜೊತೆಯಾಗಿ ದುಡಿದ ಜಂಟಿ ನಿರ್ದೇಶಕರಾದ ಶ್ರೀ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಅವರನ್ನು ಕೃತಜ್ಞತೆಯಿಂದ ನೆನೆಯುತ್ತೇನೆ. ಈ ಬೃಹತ್ ಕಾವ್ಯವನ್ನು ರಂಗರೂಪಕ್ಕೆ ತರಲು ಹಗಲಿರುಳು ಶ್ರಮಿಸಿದ ಗೆಳೆಯರಾದ ಜಗದೀಶ್ ಮನೆವಾರ್ತೆ ಮತ್ತು ಕೃಷ್ಣಕುಮಾರ್ ನಾರ್ಣಕಜೆ ಅವರು ರಂಗಭೂಮಿಯ ಯುವಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ. ನಿರ್ದೇಶಕರ ಬೆನ್ನೆಲುಬಾಗಿ ನಿಂತ ಉಮೇಶ್ ಸಾಲಿಯಾನ, ಸಂಗೀತ ನಿರ್ದೇಶನ ಮಾಡಿದ ರವಿ ಮೂರೂರು, ಸಂಗೀತ ನಿರ್ವಹಣೆ ಮಾಡಿದ ಶ್ರೀನಿವಾಸಭಟ್ (ಚೀನಿ), ವಸ್ತ್ರವಿನ್ಯಾಸ ಮಾಡಿದ ಪ್ರಮೋದ ಶಿಗ್ಗಾಂವ್, ರಂಗಾಯಣದ ಅನುಭವಿ ಕಲಾವಿದರ ಜೊತೆಗೆ ರಂಗಭೂಮಿಗೆ ಕಾಲಿರಿಸುತ್ತಿರುವ ಹೊಸ ಪ್ರತಿಭೆಗಳಿಗೆಲ್ಲರಿಗೂ ಶುಭ ಕೋರುತ್ತೇನೆ. ಶ್ರೀರಾಮಾಯಣ ದರ್ಶನಂ ರಂಗಪ್ರಸ್ತುತಿ ರಾಜ್ಯಾದ್ಯಂತ ಪ್ರದರ್ಶನ ಕಂಡು ಕುವೆಂಪು ಅವರ ಸಾಹಿತ್ಯದ ಕಂಪನ್ನು ಹರಡಲೆಂದು ಆಶಿಸುತ್ತೇನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಎನ್.ಆರ್. ವಿಶುಕುಮಾರ್ ಅವರ ಪರಿಕಲ್ಪನೆಯನ್ನು ಸಂಭ್ರಮಿಸುತ್ತಾ, ಈ ಹೊಸ ಸಾಹಸದ ಲಂಘನಕ್ಕೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರನ್ನೂ ಕೃತಜ್ಞತೆಯಿಂದ ಸ್ಮರಿಸುತ್ತೇನೆ. 

– ಭಾಗೀರಥಿಬಾಯಿ ಕದಂ
ನಿರ್ದೇಶಕರು, ರಂಗಾಯಣ, ಮೈಸೂರು

ನೆಯ್ದಾಳುತಿದೆ ಜಗವನೊಂದತಿವಿರಾಣ್ಮನಂ,
ಸೂಕ್ಷ್ಮಾತಿಸೂಕ್ಷ್ಮತಂತ್ರದಿ ಬಿಗಿದು. . . .

ಆಧುನಿಕ ಕನ್ನಡ ರಂಗಭೂಮಿಯ ಅಪ್ರತಿಮ ರಂಗಕರ್ಮಿ ಶ್ರೀ ಬಿ.ವಿ. ಕಾರಂತರ ಕನಸು ಮೈಸೂರು ರಂಗಾಯಣದ ರೂಪದಲ್ಲಿ ಚಿಗುರೊಡೆದು ಕನ್ನಡಿಗರ ಹೆಮ್ಮೆಯ ರಂಗಭೂಮಿಯ ಮಹಾವೃಕ್ಷವಾಗಿ ನಿಲ್ಲುವವರೆಗೆ ಸಾಗಿ ಬಂದ ಹಾದಿ ರೋಚಕವಾದದ್ದು. ರಂಗಾಯಣವನ್ನು ಒಂದು ವೃತ್ತಿಪರ ತಂಡವಾಗಿ ರೂಪಿಸಿ, ಕಟ್ಟಲು ತಮ್ಮ ಆಯುಷ್ಯವನ್ನೇ ಒಡ್ಡಿಕೊಂಡ ಇಲ್ಲಿನ ಕಲಾವಿದರ ಬದ್ಧತೆಯಿಂದಾಗಿ ಮೈಸೂರು ರಂಗಾಯಣವು ಕಳೆದ ಮೂರು ದಶಕಗಳಲ್ಲಿ ತನ್ನೆಲ್ಲ ವೈವಿಧ್ಯತೆಯೊಂದಿಗೆ ಒಂದು ಪರಿಪೂರ್ಣ ರೆಪರ್ಟರಿಯಾಗಿ ಬೆಳೆದು ನಾಡಿನ ರಂಗ ರಸಿಕರ ಮನ ಮನದಲ್ಲಿ ಪ್ರತಿಫಲಿಸಿದೆ. ನೂರಕ್ಕೂ ಹೆಚ್ಚು ನಾಟಕಗಳನ್ನು ಅಣಿಗೊಳಿಸಿ, ನಾಡಿನಾದ್ಯಂತ, ದೇಶದಾದ್ಯಂತ ಮತ್ತು ವಿದೇಶಗಳಲ್ಲೂ ಯಶಸ್ವಿಯಾಗಿ ಪ್ರದರ್ಶಿಸಿದ ಮೈಸೂರು ರಂಗಾಯಣವು ಸಮಕಾಲೀನ ಚಿಂತನೆಗಳಿಗೆ ಕನ್ನಡಿ ಹಿಡಿಯುತ್ತಾ, ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ವೈಚಾರಿಕ ನಿಲುವುಗಳನ್ನು ತನ್ನ ಚಟುವಟಿಕೆಗಳ ಆತ್ಮದಂತೆ ಕಾಪಾಡಿಕೊಂಡು, ಕನ್ನಡದ ಬಹುಮುಖ್ಯ ನಾಟಕಕಾರರೆಲ್ಲರ ನಾಟಕಗಳನ್ನಷ್ಟೆ ಅಲ್ಲದೆ, ಭಾರತದ ಹಾಗೂ ಜಗತ್ತಿನ ಬೇರೆ ಬೇರೆ ಭಾಷೆಗಳ ಶ್ರೇಷ್ಠ ನಾಟಕಗಳನ್ನೆಲ್ಲಾ ಪ್ರದರ್ಶಿಸಿ ಸೈ ಎನಿಸಿಕೊಂಡಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ೨೦೧೦ರಲ್ಲಿ ರಾಷ್ಟ್ರಕವಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಬೃಹತ್ ಕಾದಂಬರಿಯನ್ನು 

ರಂಗರೂಪಕ್ಕಳವಡಿಸಿ, ನಾಲ್ಕು ಸಮಾನಾಂತರ ವೇದಿಕೆಗಳಲ್ಲಿ ಒಂಭತ್ತು ಗಂಟೆಗಳ ಅಹೋರಾತ್ರಿ ನಾಟಕವಾಗಿಸಿ ಯಶಸ್ವಿಯಾಗಿ ಪ್ರದರ್ಶಿಸಿ, ಅಪಾರ ಜನಮನ್ನಣೆಯನ್ನು ಪಡೆದುದು ಮಾತ್ರವಲ್ಲದೆ ಭಾರತೀಯ ರಂಗಭೂಮಿಯ ಇತಿಹಾಸದಲ್ಲಿಯೇ ದಾಖಲೆಯೆನಿಸಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಎನ್.ಆರ್. ವಿಶುಕುಮಾರ್ ಅವರು ರಂಗಾಯಣಕ್ಕೆ ಭೇಟಿ ನೀಡಿದಾಗ ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಸಂದು ಐವತ್ತು ವರ್ಷಗಳು ತುಂಬಿದ ಈ ಸಂದರ್ಭದಲ್ಲಿ ಈ ಮಹಾಕಾವ್ಯದಲ್ಲಿ ಕವಿ ಕಂಡರಿಸಿದ ವೈಚಾರಿಕ ದರ್ಶನಗಳನ್ನು ಮಹಾಕಾವ್ಯದ ಭಾಷೆಯಲ್ಲೇ ರಂಗರೂಪಕ್ಕಳವಡಿಸಿ ನಾಡಿನಾದ್ಯಂತ ಪ್ರದರ್ಶಿಸಿದರೆ ಹೇಗೆ? ಇದು ಮೈಸೂರು ರಂಗಾಯಣಕ್ಕೆ ಮಾತ್ರ ಸಾಧ್ಯ ಎಂಬ ಸೃಜನಶೀಲ ಸಾಹಸದ ಬೀಜವನ್ನು ಬಿತ್ತಿದರು. ಇದನ್ನೇ ಇರಬೇಕು ಕುವೆಂಪು ಅವರು ಮಹಾಕಾವ್ಯದಲ್ಲಿ ನೆಯ್ದಾಳುತಿದೆ ಜಗವನೊಂದತಿ ವಿರಾಣ್ಮನಂ, ಸೂಕ್ಷ್ಮಾತಿಸೂಕ್ಷ್ಮತಂತ್ರದಿ ಬಿಗಿದು….ಎಂದು ಹೇಳಿರುವುದು. ಈ ಸೂಕ್ಷ್ಮ ಪೃಥ್ವಿ ತತ್ವವೇ ಇಂಗ್ಲೀಷ್ ಕವಿಯಾಗಲು ಹಂಬಲಿಸಿದ್ದ ಕುವೆಂಪು ಅವರನ್ನು ಕನ್ನಡದ ಕವಿಶಿಖರಕ್ಕೆ ಏರಿಸಿದ್ದು, ಸನ್ಯಾಸಿಯಾಗ ಬಯಸಿದ್ದ ಕುವೆಂಪು ಅವರನ್ನು ತುಂಬು ಸಂಸಾರಿಯಾಗಿಸಿದ್ದು. ನಾವೆಲ್ಲರೂ ಈ ಸೂಕ್ಷ್ಮ ಪೃಥ್ವಿತತ್ವದ ಕೈಗೊಂಬೆಗಳೇ ಅಲ್ಲವೆ!.

ಈ ಸವಾಲನ್ನು ಹುಮ್ಮಸ್ಸಿನಿಂದಲೇ ಸ್ವೀಕರಿಸಿದ ರಂಗಾಯಣದ ಹಿರಿಯ ಕಲಾವಿದರು ಕಳೆದ ಮೂರು ತಿಂಗಳಿನಿಂದ ನಾಡಿನ ಹೊಸ ಕಲಾವಿದರು ಹಾಗೂ ತಂತ್ರಜ್ಞರನ್ನೊಳಗೊಂಡ ತಂಡದೊಂದಿಗೆ ಹಗಲಿರುಳು ತಾಲೀಮು ನಡೆಸಿ, ಹಿರಿಯ ರಂಗಕರ್ಮಿ ಶ್ರೀ ಕೆ.ಜಿ. ಮಹಾಬಲೇಶ್ವರ ಅವರ ನಿರ್ದೇಶನದಲ್ಲಿ ಮಹಾಕಾವ್ಯದ ದರ್ಶನಗಳನ್ನು ಮಹಾಜನತೆಯ ಮುಂದಿಡಲು ಸಜ್ಜಾಗಿ ನಿಂತಿದ್ದಾರೆ. ಈ ಮಹಾಕಾವ್ಯದ ರಂಗರೂಪ ಪ್ರದರ್ಶನಕ್ಕೆ ತುಂಬು ಪ್ರೀತಿಯಿಂದ ಅನುಮತಿ ನೀಡಿದ ಕವಿ ಕುವೆಂಪು ಅವರ ಸುಪುತ್ರಿ ಶ್ರೀಮತಿ ತಾರಿಣಿ ಚಿದಾನಂದಗೌಡ ಮತ್ತು ಕುಟುಂಬವರ್ಗದ ಸಹಕಾರವನ್ನು ನೆನೆಯುತ್ತಾ ೨೦೧೮ ನವಂಬರ್ ೧೪ ರಂದು ಲೋಕಾರ್ಪಣೆಗೊಳ್ಳಲಿರುವ ಶ್ರೀರಾಮಾಯಣ ದರ್ಶನಂ ರಂಗಪ್ರಸ್ತುತಿಯು ಮುಂದೆ ನಾಡಿನ ತುಂಬಾ ಪ್ರದರ್ಶನಗೊಂಡು ಮಹಾಕವಿ ಕುವೆಂಪು ಅವರ ವೈಚಾರಿಕ ದರ್ಶನಗಳನ್ನು ಪ್ರಚುರಪಡಿಸಲು ನಾಡಿನ ಎಲ್ಲ ರಂಗಪ್ರೇಮಿಗಳ ತುಂಬು ಸಹಕಾರದ ನಿರೀಕ್ಷೆಯಲ್ಲಿದ್ದೇವೆ.

ವಿ.ಎನ್. ಮಲ್ಲಿಕಾರ್ಜುನಸ್ವಾಮಿ
ಜಂಟಿ ನಿರ್ದೇಶಕರು, ರಂಗಾಯಣ, ಮೈಸೂರು

ಶ್ರೀರಾಮಾಯಣ ದರ್ಶನಂ ಕುರಿತು

ರಾಮಾಯಣವನ್ನು ಹೇಗೆಲ್ಲ ದರ್ಶನೀಯವಾಗಿಸಬಹುದು – ಆಗಿಸಬೇಕು-ಎನ್ನುವುದಕ್ಕೆ ಸಾಕ್ಷಿಯಂತಿದೆ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ. ಆದಿಕವಿ ವಾಲ್ಮೀಕಿಯು ರಾಮಾಯಣವನ್ನು ಕಂಡ ಬಗೆ, ಜೈನಕವಿಗಳು ಕಂಡ ಬಗೆ ಇವುಗಳೆಲ್ಲ ಕುವೆಂಪು ತಾವು ರಾಮಾಯಣವನ್ನು ಕಾಣಬಯಸುವ ಬಗೆಯನ್ನು ಪ್ರಭಾವಿಸಿವೆ. ಕಾಣುತ್ತಲೇ ಕಾಣುತ್ತಲೇ ಕಾಣಬಯಸುವುದು ಕೂಡ ಹುಟ್ಟಿಕೊಳ್ಳುವುದು. ಅಂದರೆ ಕಂಡುದರಲ್ಲಿ ಕಾಣದೆ ಇರುವುದನ್ನು – ಅಡಗಿ ಇದ್ದುದನ್ನು-ಕಾಣಬಯಸುವುದು. ಆದುದರಿಂದ, ದರ್ಶನ ಎನ್ನುವ ಪದ ಪ್ರಚ್ಛನ್ನ ಎನ್ನುವ ಇನ್ನೊಂದು ಪದವನ್ನು ಅರಿವಿಲ್ಲದೇ ನೆನಪಿಸುವುದು. ಆ ಪದವನ್ನು ತನ್ನಲ್ಲೇ ಅಡಗಿಸಿಕೊಂಡಿರುವುದು. ಪ್ರಚ್ಛನ್ನ ಎಂದರೆ ಮರೆಮಾಚಿಕೊಂಡು ಇರುವುದು – ಮಾರುವೇಷದಲ್ಲಿರುವುದು – ಇನ್ನೊಂದು ರೂಪದಲ್ಲಿರುವುದು-ಇನ್ನೊಂದು ಪಾತ್ರದಲ್ಲಿರುವುದು-ಇನ್ನೊಂದು ಅವಸ್ಥೆಯಲ್ಲಿರುವುದು! ಆದುದರಿಂದ ಯಾವುದೇ ನೋಟ, ಸ್ಥಗಿತ ಚಿತ್ರವೊಂದನ್ನು ನೋಡುವ ನೋಟವಾಗದೆ, ಸ್ಥಿತ್ಯಂತರದ ಕೋಲಾಹಲಕ್ಕೆ ಸಾಕ್ಷಿಯಾದ ನೋಟವಾದಾಗ-ನೋಡುತ್ತಿರುವಾಗ – ಪೊರೆ ಕಳಚಿಕೊಳ್ಳುತ್ತಿರುವ ಹಾವನ್ನು ಹತ್ತಿರದಿಂದ ಕಂಡಂತೆ ಕಂಡ ನೋಟವಾದಾಗ-ನೋಡುತ್ತಿರುವ ಮನಸ್ಸೂ ಕೂಡಾ ತಾನು ಪೊರೆ ಕಳಚಿಕೊಳ್ಳುವುದು. ತಾನೇ ಹೊಸತಾಗುವುದು. ಶ್ರೀ ಕುವೆಂಪುವ ಸೃಜಿಸಿದೀ ರಾಮಾಯಣಂ – ಎನ್ನುವ ಮಾತಿನ ಇಂಗಿತವಿದು. ಎಲ್ಲವೂ ಬದಲಾಗುತ್ತ ನಡೆದಿದೆ; ಇಲ್ಲಿರುವುದು ಪ್ರವಾಹ ಸತ್ಯ – ಎನ್ನುವ ಬುದ್ಧನ ಕಾಣ್ಕೆಯ ಕಲಾತ್ಮಕ ಮುಖವಿದು. ಇಂಥಲ್ಲಿ ಕಲೆ ಮತ್ತು ದರ್ಶನ ಒಂದಾಗುವವು. ಮೊದಲಿಗೇ ಹೇಳುವರು ಕುವೆಂಪು; ವಾಲ್ಮೀಕಿಯು ಸಹೃದಯನೆಂದು. ಸಹೃದಯಂ ವಾಲ್ಮೀಕಿ. ವಾಲ್ಮೀಕಿಗೆ ತನ್ನ ಸಹೃದಯತೆ ತನ್ನ ಅರಿವಿಗೇ ಬಂದದ್ದು ನಾರದನಿಂದ ರಾಮಕಥೆಯನ್ನು ಕೇಳಿದ ಹೊತ್ತಿನಲ್ಲಿ. ಸಹೃದಯನು ಕವಿಯಾಗುವುದಕ್ಕೆ – ಭಾವಯಿತ್ರೀ ಪ್ರತಿಭೆಯು ಕಾರಯಿತ್ರೀ ಆಗಿ ತಿರುಗುವುದಕ್ಕೆ ಕಾರಣವಾದದ್ದು ಹೆಣ್ಣು ಕ್ರೌಂಚದ ಅಳಲು. ಬೇಡನೊಬ್ಬ, ಜೊತೆಗಿದ್ದ ಹಕ್ಕಿಗಳಲ್ಲಿ ಒಂದನ್ನು ಕೆಡವಿದ. ಅಗಲಿಸುವವನಿಗೆ ಜೊತೆಯಲ್ಲಿರುವುದರ – ಒಡನಾಡಿತನದ – ಮಿಲನದ – ಮಹತ್ವ ಯಾವ ರೀತಿಯಲ್ಲಾದರೂ ತಿಳಿದಿರಲೇಬೇಕು! ಈಗ ಒಂದು ಮುಖ ಪ್ರಕಟವಾಗಿದೆ. ಇನ್ನೊಂದು ಮುಖ ಮರೆಯಲ್ಲಿದೆ – ಅಷ್ಟೆ. ವಿಪರ್ಯಾಸಾತ್ಮಕವೆಂದು ತೋರುವ ಈ ಅರಿವೇ ಕವಿಯ – ಎಲ್ಲ ಕವಿಗಳ – ವ್ಯಕ್ತಿತ್ವವಾಗಿದೆ! ವಾಲ್ಮೀಕಿಯಂತೂ ಹಿಂದೊಂದು ಕಾಲದಲ್ಲಿ ಹೀಗೆಯೇ ಬೇಡನಾಗಿದ್ದ! ಅಂದರೆ ಕವಿಯಲ್ಲಿ ಹಳೆಯ ಬೇಡನೊಬ್ಬನಿದ್ದಾನೆ. ನಿಷಾದನಲ್ಲಿ ಮುಂದಿನ ಕವಿ ಅಡಗಿದ್ದಾನೆ! ಮನಕೆ ಮಿಂಚಲ್ ತನ್ನ ಪೂರ್ವಂ- ಎನ್ನುತ್ತಾರೆ ಕುವೆಂಪು. ಹಿಂದಣ ನೆನಪು ಹೊಳೆಯಿತು! ಅಂದಾಗ, ಮುಂದಣ ಭವಿಷ್ಯವೂ ಹೊಳೆಯಲಿಕ್ಕೇ ಬೇಕು! ನಿಷಾದನಲ್ಲಿ ಕವಿಯೊಬ್ಬ ಅಡಗಿರುವ ದರ್ಶನವು ಬಹು ಆಯಾಮದ ವಿಸ್ತಾರವುಳ್ಳ ದರ್ಶನವಾಗಿದೆ.

ಹಕ್ಕಿಗಳ ಇಂಚರವನ್ನು ಕುವೆಂಪು ಅವರಂತೆ ಕೇಳಿದವರು ಕನ್ನಡದಲ್ಲಿ ಬಹಳ ಇಲ್ಲ.

ಹಕ್ಕಿಯ ಹಾಡು ಕೇಳದ ದಿನ ಲೋಕಕ್ಕೆ ಪ್ರಳಯವೇ ನಿಜ.

ಆದುದರಿಂದಲೇ ಕೆಡೆದುಬಿದ್ದ ಕ್ರೌಂಚವನ್ನು ವಾಲ್ಮೀಕಿ ಮರಳಿ ಬದುಕಿಸುವನು. ಕೊಂಚೆವಕ್ಕಿಯ ಮೆಯ್ಯಿನಾ ಬಾಣಮಂ ಬಿಡಿಸಿ ಪ್ರಾಣಮಂ ಬರಿಸಿ ಸಂಜೀವ ಜೀವನದಿಂದೆ.

ಸತ್ತಂತಿರುವವರನ್ನು ಬದುಕಿಸುವುದೇ ಕಾವ್ಯದ ಕೆಲಸ. ನಾವು, ಕವಿಯದು ಕಾರಯತ್ರೀ ಪ್ರತಿಭೆ ಎನ್ನುವೆವು. ಅಂದರೆ ಸೃಷ್ಟಿಸುವ 

ಪ್ರತಿಭೆ. poetry ಪದದ ಮೂಲ ಗ್ರೀಕ್ ಪದ -poiein – ಎಂದರೆ ಕೂಡಾ –to make- ಎಂದೇ ಅರ್ಥ. ಆಧ್ಯಾತ್ಮಿಕವಾಗಿ ಅತಿ ಮಹತ್ವದ ಸಂಗತಿ ಯಾವುದೆಂದರೆ ಅದು – Resurrection – ಅಂದರೆ ಪುನರುಜ್ಜೀವನ. ಅಂದರೆ ಸಾಯದ ಬದುಕಿನ ಹೊಳಹು! ಈ ಎಲ್ಲ ಅಂಶಗಳೂ ಕೂಡಿಕೊಂಡು ಕುವೆಂಪು ಕಾವ್ಯದಲ್ಲಿ ಕ್ರೌಂಚ ಮತ್ತೆ ಹಾರುವುದು. ಹಾಗೆ ಬದುಕಿದ ಹಕ್ಕಿ ಕಾವ್ಯದ ಉದ್ದಕ್ಕೆ ಆಗಸದಲ್ಲಿ ಅಗೋಚರವಾಗಿ ಹಾರುತ್ತಿದೆ; ನೆಲದ ಮೇಲೆ ನಡೆಯುತ್ತಿರುವ ಕಾವ್ಯಕ್ಕೆ ಮಾರ್ಗವನ್ನೂ ಸೂಚಿಸುವಂತಿದೆ!

ಹೌದು. ಕಾವ್ಯಕ್ಕೆ ಎರಡು ಪ್ರಚೋದನಾ ಸ್ಥಾನಗಳಿವೆ. ಒಂದು ಇಲ್ಲಿನ ನೋವು. ನಲಿವಿನ ರೂಪದಲ್ಲೂ ಇರುವ ಇಹದ ವಿಲಕ್ಷಣ ಸಂಕಟ. ಬೇನೆಗುದಿದೊಡಮಲ್ತೆ ಕಾವ್ಯಂ. ಇನ್ನೊಂದು – ಮನುಷ್ಯ ಪ್ರಜ್ಞೆಯ ವಿಕಾಸ ಪಥದಲ್ಲಿ ಎಂದೆಂದೂ ಕೆಡದ ಮುಗ್ಧತೆಯೊಂದು ಇರುತ್ತದೆ ಎಂಬ ಶ್ರದ್ಧೆ. ಮತ್ತೆ ಬದುಕಿದ ಹಕ್ಕಿ – ಗಾಯದ ಗುರುತನ್ನೇ ಅಳಿಸಿಕೊಂಡು ಹಾರಿದ ಹಕ್ಕಿ – ಈ ಮುಗ್ಧತೆಯ ಸಂಕೇತವಾಗಿದೆ. ನಾಗರಿಕತೆಯ ಮೈತುಂಬ ಮಾಯದ ಗಾಯದ ಗುರುತುಗಳಿವೆ ಎಂದು ಎಲ್ಲರಿಗಿಂತ ಚೆನ್ನಾಗಿ ಬಲ್ಲ ಬಸವಣ್ಣ ಹೇಳಿದರು-ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ-ಎಂದು. ಮುಗ್ಧತೆಗೆ ಕೇಡಿಲ್ಲ. ಮುಗ್ಧತೆಗೆ ಕೇಡಿನ ಗುರುತೇ ಇಲ್ಲ. ಈ ಅರಿವೇ ಒಲಿದಂತೆ ಹಾಡುವುದಕ್ಕೆ ಇರುವ ಮೂಲ ಬಲ. ಭಾಷೆಯ ಮೂಲ ಬಲ. ಬಸವಣ್ಣನಿಗಿಂತ ಮುನ್ನ ನಮ್ಮ ಆದಿಪುರಾಣದ ಆದಿಕವಿ ಪಂಪ ನರ್ತಕಿ ನೀಲಾಂಜನೆಯನ್ನು ಇನ್ನೊಂದು ರೀತಿಯಲ್ಲಿ ಬದುಕಿಸಿದ್ದ. ಕುಣಿ ಕುಣಿಯುತ್ತಿದ್ದಾಗಲೇ ರಂಗದಲ್ಲಿ ಆಕೆಗೆ ಸಾವು ಬಂದೆರಗಿತ್ತು. ನಿರ್ದೇಶಕನಾದ ಇಂದ್ರ ರಸಾಭಾಸವಾಗದಂತೆ ತತ್‌ಕ್ಷಣ ನೀಲಾಂಜನೆಯನ್ನೇ ಹೋಲುವ ಹೊಸ ಪಾತ್ರವೊಂದನ್ನು ಸೃಜಿಸಿದನು – ಯಾರಿಗೂ ತಿಳಿಯದಂತೆ! ನಿಜ. ನಾಟಕ ಮುಂದುವರೆಯಲೇಬೇಕು. ಆದರೆ ತಿಳಿಯಬಲ್ಲವರಿಗೆ ಈ ಬದುಕು ಕ್ಷಣಿಕ ಎಂದು ತಿಳಿದು ಹೋಗಿತ್ತು. ಈ ತಿಳುವಳಿಕೆಯನ್ನು ಅಲೌಕಿಕ ರಸೋದಯ ಎಂದು ಕರೆದರು. ಹಾಗೆ ಕರೆದು ಎಲ್ಲೂ ರಸಭಂಗವಾಗಿಲ್ಲ ಎಂದು ಹೊಸ ಸೂಚನೆಯನ್ನೇ ಕೊಟ್ಟರು! ರಸಭಂಗ-ಕುವೆಂಪು ಅವರಿಗೂ ಸಹಿಸದು. ಹಕ್ಕಿ ಹಾರಿಹೋಯಿತು ಎನ್ನುವ ಮಾತು ಏಕಕಾಲಕ್ಕೆ ಮರಣಕ್ಕೂ-ಜೀವಂತಿಕೆಗೂ ಸಲ್ಲುವ ಮಾತೆಂದು ಅವರು ಬಲ್ಲರು. ಅಲ್ಲದೆ ಅಲೌಕಿಕ ರಸೋದಯದ ಸೆಳೆತ ಕುವೆಂಪು ಕಾವ್ಯದ ಉದ್ದಕ್ಕೆ ಉಷಃಕಾಲಗಳನ್ನು ಸೃಜಿಸುತ್ತ ನಡೆದಿದೆ.
ಇಲ್ಲಿನ ಮಂಥರೆಯನ್ನು ನೋಡಿ. ಎಲ್ಲರಿಂದ ಕೀಳ್ಗಳೆಯಲ್ಪಡುವ ಮಂಥರೆ. ಮಗು ರಾಮನ ಅಂಗೈಗನ್ನಡಿಯಲ್ಲಿ ಚಂದ್ರನನ್ನು ತೋರಿಸುವ ಮಂಥರೆ. ಎಲ್ಲರಿಗೂ ಕನ್ನಡಿ ಹಿಡಿದ ಮಂಥರೆ. ಭರತನೇ ಬದುಕಿನ ಸರ್ವಸ್ವವಾದ ಮಂಥರೆ. ಇದನ್ನು ಮೋಹವೆನ್ನಬಹುದು. ಆದರೆ ಆ ಗಾಢಮೋಹದ ಶಕ್ತಿ ಏನು? ಹಾ ಮಂಥರೆಯ ಈ ಮಮತೆಯಾವರ್ತದೊಳ್ ಸುಟ್ಟುರೆಗೆ ಧೂಳಿ ತರಗೆಲೆ ತಿರ್ರನೆಯೆ ಸುತ್ತುವೊಲ್ ಸಿಲ್ಕಿ ಘೂರ್‍ಣಿಸದಿಹುದೆ ಪೇಳ್ ತ್ರೇತಾ ಮಹಾಯುಗಂ! ಇಂಥ ಯುಗಶಕ್ತಿ ಎನ್ನುವರು ಕುವೆಂಪು. ಕೊನೆಗೆ ಭರತನಿಗೇ ಬೇಡವಾದ ಮಂಥರೆ. ಆದರೆ ಕೊಟ್ಟಕೊನೆಯಲ್ಲಿ ಭರತನಿಗೆ ರಾಮಾಗಮನದ ವಾರ್ತೆಯನ್ನು ಹೇಳಿ – ಮಂಥರಾ ಪ್ರೇಮದಂತಃಕರಣಮಂ ಕಾಣೆ ನೀಂ-ಎಂದ ಭರತವತ್ಸಲೆ ಮಂಥರೆ! ಬೇಡ ಕವಿಯಾದಂತೆ ಈ ಪಾತ್ರ ವಿಕಾಸ.

ಅಹಲ್ಯೆ ಕಲ್ಲಾಗಿದ್ದಳೆಂದು ವಾಲ್ಮೀಕಿ ಹೇಳುವುದಿಲ್ಲ. ಆದರೆ ಕುವೆಂಪು ಕಲ್ಲಿನಲ್ಲಿ ಹೂ ಅರಳಿದ್ದನ್ನು ನೋಡಿದ್ದಾರೆ. ಹುಲಿಕಲ್ಲು ನೆತ್ತಿಯ ಸುತ್ತ ಬೆಟ್ಟದ ಬಂಡೆಗಳ ನಡುವೆ ನಡೆದಾಡಿ ಚೈತನ್ಯ 

 

ಪಡೆದ ಕವಿ – ಲಕ್ಷ್ಮಣನನ್ನು ಕಲ್ದವಸಿಎಂದು ಉಲ್ಲಾಸದ ನಗುವಿನಿಂದ ವರ್ಣಿಸಿದ ಕವಿ- ಕಗ್ಗಲ್ಲಬಂಡೆಗೂ ಇರುವ ಸ್ಪಂದನಶಕ್ತಿಯನ್ನು ಸೂಚಿಸಲೆಳಸಿದ್ದಾರೆ. ಕುವೆಂಪು ರಾಮನನ್ನು ವರ್ಣಿಸಿದ್ದು ಹೀಗೆ: ಮಣಿಯುವೆನು ರಾಮನಡಿದಾವರೆಗೆ ದಶಶಿರನ ವಧೆಗಾಗಿಯಲ್ತು ಮಂದಾಕಿನಿಯ ತಿಳಿವೊನಲ ಮೀಯುತಿರಲೊರ್ದಿನಂ ತಾಂ ಕಂಡ  ದೃಶ್ಯಸೌಂದರ್ಯದಿಂದಾತ್ಮದರ್ಶನಕೇರ್ದ ರಸಸಮಾಧಿಯ ಮಹಿಮೆಗಾಗಿ. ಈ ರಸಸಮಾಧಿಯನ್ನು ಅನುಭವಿಸಬಲ್ಲ ಮನಸ್ಸೇ- ಕಲ್ಲಿನಲ್ಲಿ ಅಹಲ್ಯೆಯ ಮನಸ್ಸು ಸೆರೆಯಾಗಿ ಇರುವುದನ್ನು ತಿಳಿಯಬಲ್ಲುದು! ಇಂಥದೊಂದು ಸಂವೇದನೆಯ ಸಂಪರ್ಕಕ್ಕಾಗಿ ಆ ಕಲ್ಲು ಕಾದಿತ್ತೆಂದೂ ತಿಳಿಯಬಲ್ಲುದು! ಮುಟ್ಟಿ ಹೆಣ್ಣನ್ನು ಕಲ್ಲುಮಾಡಿದವರಿರಬಹುದು. ಇಂಥವರ ನಡುವೆ ಕಲ್ಲಿನಲ್ಲಿ ಹೆಣ್ಣನ್ನು ಪಡೆಯುವವರಿಗಾಗಿ ಕಾವ್ಯ ಬಹುಕಾಲ ಕಾಯಬೇಕಾಗುತ್ತದೆ!

ಕಾಯದೆ ಪ್ರಚ್ಛನ್ನತೆಯಲ್ಲಿ ಅಡಗಿರುವ ನಿಜವನ್ನು ತಿಳಿಯಲಾಗುವುದಿಲ್ಲ. ಶಬರಿಯ ಭೇಟಿಯ ಸಂದರ್ಭದಲ್ಲಿ ಕವಿ ಹೇಳುವ ಮಾತಿದು: ಭಗವದಾಗಮನಮೇಂ ಭಕ್ತನ ನಿರೀಕ್ಷಿಸಿದ ರೂಪದಿಂ ಬಂದಪುದೇ? ಸುಖದವೋಲ್ ಆಶಿಸಲ್ ದು:ಖದೊಲ್ ಮೈದೋರಿ… ಶಬರಿ ಎಷ್ಟು ಕಾದಿದ್ದಳು ತನ್ನ ಕಾಡಿನಲ್ಲಿ! ಅಯೋಧ್ಯೆಯ ರಾಜಕಾರಣಕ್ಕೆಲ್ಲ ಈ ಕಾಯುವಿಕೆಯ ಮುಂದೆ ಬೇರೆಯೇ ಅರ್ಥವಿನ್ಯಾಸವೊಂದು ಉಂಟಾಗುವಂತಿದೆ! ಅಯೋಧ್ಯೆಯಲ್ಲಿ ನಡೆದುದೂ ಪ್ರಚ್ಛನ್ನ ಇತಿಹಾಸವೆಂಬಂತಿದೆ!

ಇಷ್ಟಾದರೂ ಒಳಗಿನ ನಿಜವನ್ನು ತಿಳಿಯಲಾಗದೆ, ಪ್ರಚ್ಛನ್ನತೆಯನ್ನೇ ನಿಜವೆಂದು ನಂಬಿ ಪ್ರಮಾದ ನಡೆದುಬಿಡಬಹುದು. ವಾಲಿಯೊಳಗಡೆ ನಡೆದ ಮಹಾನ್ ಪರಿವರ್ತನೆಯನ್ನು ಗ್ರಹಿಸಲಾಗದೆ, ಅದನ್ನು ತಿಳಿಯಲೆಡೆಯಿಲ್ಲದೆ, ವಾಲಿಯನ್ನು ಕೆಡಹಿ, ಮರೆಯಿಂದ ತನ್ನ ಬೇಟೆಯನ್ನು ಕೆಡಹುವಂತೆ ಕೆಡಹಿ, ಬಿದ್ದ ವಾಲಿ ತನ್ನೊಳಗನ್ನು ಬಿಚ್ಚಿಟ್ಟಾಗ, ರಾಮ, ವಾಲಿಯಲ್ಲಿ ಮನಃಪೂರ್ವಕವಾದ ಕ್ಷಮೆಯನ್ನು ಬೇಡುವ, ಮನಕಲಕುವ ಭಾಗವಿದೆ. ತನ್ನ ಬೇಟೆಯಲ್ಲೇ ತಾನು ಕ್ಷಮೆಯನ್ನು ಬೇಡುವ ಬೇಡ! ಬೇಟೆಯೇ ತನ್ನನ್ನು ಹೊಡೆದ ಬೇಟೆಗಾರನನ್ನು ಕ್ಷಮಿಸಿ ಅವನ ಉದ್ಧಾರಕ್ಕೆ ಕಾರಣವಾಗುವ ಚಿತ್ರ! ಇನ್ನೊಂದೆಡೆ ಕವಿ ಬಳಸಿದ ಮಾತನ್ನೇ ಇಲ್ಲಿ ಬಳಸುವುದಾದರೆ – ಇದು ರಾಮಾಯಣದೊಳತಿಮನೋಋತದ ಸಂಘಟನೆ.ಇಷ್ಟಾದರೂ ಒಳಗಿನ ನಿಜವನ್ನು ತಿಳಿಯಲಾಗದೆ, ಪ್ರಚ್ಛನ್ನತೆಯನ್ನೇ ನಿಜವೆಂದು ನಂಬಿ ಪ್ರಮಾದ ನಡೆದುಬಿಡಬಹುದು. ವಾಲಿಯೊಳಗಡೆ ನಡೆದ ಮಹಾನ್ ಪರಿವರ್ತನೆಯನ್ನು ಗ್ರಹಿಸಲಾಗದೆ, ಅದನ್ನು ತಿಳಿಯಲೆಡೆಯಿಲ್ಲದೆ, ವಾಲಿಯನ್ನು ಕೆಡಹಿ, ಮರೆಯಿಂದ ತನ್ನ ಬೇಟೆಯನ್ನು ಕೆಡಹುವಂತೆ ಕೆಡಹಿ, ಬಿದ್ದ ವಾಲಿ ತನ್ನೊಳಗನ್ನು ಬಿಚ್ಚಿಟ್ಟಾಗ, ರಾಮ, ವಾಲಿಯಲ್ಲಿ ಮನಃಪೂರ್ವಕವಾದ ಕ್ಷಮೆಯನ್ನು ಬೇಡುವ, ಮನಕಲಕುವ ಭಾಗವಿದೆ. ತನ್ನ ಬೇಟೆಯಲ್ಲೇ ತಾನು ಕ್ಷಮೆಯನ್ನು ಬೇಡುವ ಬೇಡ! ಬೇಟೆಯೇ ತನ್ನನ್ನು ಹೊಡೆದ ಬೇಟೆಗಾರನನ್ನು ಕ್ಷಮಿಸಿ ಅವನ ಉದ್ಧಾರಕ್ಕೆ ಕಾರಣವಾಗುವ ಚಿತ್ರ! ಇನ್ನೊಂದೆಡೆ ಕವಿ ಬಳಸಿದ ಮಾತನ್ನೇ ಇಲ್ಲಿ ಬಳಸುವುದಾದರೆ – ಇದು ರಾಮಾಯಣದೊಳತಿಮನೋಋತದ ಸಂಘಟನೆ.
ಬೇಡ, ಕವಿಯಾದಾಗ ಮತ್ತು ತಾನು ಬೇಡನಾಗಿದ್ದ ಕಾಲವೊಂದಿತ್ತು ಎಂಬುದನ್ನು ಮರೆಯದೆ ಇದ್ದಾಗ-ಬೇಟೆ, ಬೇಟೆಗಾರನೆಂಬ ಆದಿಮ ಪ್ರತಿಮೆಯೊಂದು ಹೇಗೆ ಅದ್ಭುತವಾಗಿ ವಿಕಾಸವಾಗಬಹುದು ಎಂಬುದಕ್ಕೆ ಶ್ರೀರಾಮಾಯಣ ದರ್ಶನಂ ಸಾಕ್ಷಿಯಾಗಿದೆ.

ಲಕ್ಷ್ಮೀಶ ತೋಳ್ಪಾಡಿ

ಕಾಡಿನ ಕೊಳಲಿದು ಕಾಡ ಕವಿಯು ನಾ ನಾಡಿನ ಜನರೊಲಿದಾಲಿಪುದು

ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಕನ್ನಡದ ನವೋದಯ ಸಾಹಿತ್ಯವನ್ನು ಪ್ರವೇಶಿಸಿದ ಮಲೆನಾಡಿನ ಕುಪ್ಪಳಿಯೆಂಬ ಒಂಟಿಮನೆಯ ಕುಗ್ರಾಮದಿಂದ ಉದಿಸಿಬಂದ ಪುಟ್ಟಪ್ಪನೆಂಬ ಪುಟ್ಟ ಕವಿ ಹೃದಯವೊಂದು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳನ್ನು ಶ್ರೀಮಂತಗೊಳಿಸುತ್ತಾ ವಿಶ್ವಪ್ರಜ್ಞೆಯ ವಿಸ್ತಾರದಲ್ಲಿ ಕನ್ನಡವನ್ನು, ಕನ್ನಡಿಗರನ್ನು ಬೆಳೆಸುತ್ತಾ, ಇಡೀ ನಾಡಿನ ಜನತೆಯ ಹೃದಯವನ್ನು ಆವರಿಸಿಕೊಂಡ ಪರಿ ವಿಸ್ಮಯವೇ ಸರಿ. ಅರ್ಧ ಶತಮಾನಕ್ಕೂ ಮೀರಿದ ಅವಧಿಯಲ್ಲಿ ತಮ್ಮ ಚಿಂತನೆಗಳು ಮತ್ತು ಬರವಣಿಗೆಯ ಮೂಲಕ ಈ ನಾಡಿನ ಸಾಹಿತ್ಯ, ಶಿಕ್ಷಣ ಮತ್ತು ಸಂಸ್ಕೃತಿಗೆ ಮಹತ್ತರವಾದ ಕೊಡುಗೆಗಳನ್ನು ಕೊಟ್ಟ ಈ ಮಹಾನ್ ಲೇಖಕನ ಬರವಣಿಗೆಯ ಆಳ ಮತ್ತು ವೈವಿಧ್ಯತೆಗಳು ಹಾಗೂ ಬರವಣಿಗೆಯುದ್ದಕ್ಕೂ ಅವರು ಕಾಯ್ದುಕೊಂಡ ವೈಚಾರಿಕ ಎತ್ತರ ಅವರು ಹುಟ್ಟಿ ಬೆಳೆದ ಪರಿಸರದ ದಟ್ಟ ಪರ್ವತಾರಣ್ಯ ಪ್ರಪಂಚದಂತೆ ಮಹೋನ್ನತವಾದುದು.

ವಾಸ್ತವವಾಗಿ ಕುವೆಂಪು ಅವರು ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದ್ದು, ಕನ್ನಡದ ಮೂಲಕ ಅಲ್ಲ; ಇಂಗ್ಲೀಷ್ ಮೂಲಕ. ಕನ್ನಡದ ಕವಿಪರಂಪರೆ ಪರಿಚಯವಾಗುವ ಮೊದಲೇ ಶೇಕ್ಸ್‌ಪಿಯರ್, ವರ್ಡ್ಸ್‌ವರ್ತ್, ಮಿಲ್ಟನ್ ಮೊದಲಾದ ಪಾಶ್ಚಿಮಾತ್ಯ ಕವಿಗಳು ಅವರ ಮನಸ್ಸನ್ನು ಆಕ್ರಮಿಸಿಕೊಂಡಿದ್ದರು. ಈ ಕವಿಗಳ ಸಾಹಿತ್ಯದ ಸವಿಯುಂಡ ಕುವೆಂಪು ಮೈಸೂರಿನಲ್ಲಿ ಪ್ರೌಢಶಾಲೆಯ ವ್ಯಾಸಂಗ ಮಾಡುವಾಗಲೇ ಸಾರ್ವಜನಿಕ ಗ್ರಂಥಾಲಯದಲ್ಲಿ ಈ ಕವಿಗಳ ಎಲ್ಲಾ ಕೃತಿಗಳನ್ನು ಓದಲಾರಂಭಿಸಿದರು. ಇಂಗ್ಲೀಷ್ ಭಾಷಾಂತರದ ಮೂಲಕ ರಷ್ಯನ್, ಫ್ರೆಂಚ್, ಜರ್ಮನ್, ಇಟಲಿ ಮತ್ತು ಸಂಸ್ಕೃತ ಸಾಹಿತ್ಯ ಕ್ಷೇತ್ರದಲ್ಲಿ ವಿಹರಿಸುತ್ತಾ, ತಮ್ಮ ಕವಿ ಪ್ರಜ್ಞೆಯ ವಿಕಸನದ ಸಿದ್ಧಿಗೆ ಅವಶ್ಯವಾದ ಚಿಂತನಾಂಶ, ಕಲ್ಪನಾಂಶ, ಭಾವನಾಂಶಗಳನ್ನು ಸಂಪಾದಿಸಿಕೊಂಡರು. ತಮ್ಮ ಹದಿನೆಂಟನೇ ವಯಸ್ಸಿಗೆ ಬಿಗಿನರ್‍ಸ್ ಮ್ಯೂಸ್ ಎಂಬ ಇಂಗ್ಲೀಷ್ ಕವಿತೆಗಳ ಸಂಕಲನವನ್ನು ಪ್ರಕಟಿಸಿ, ತಮ್ಮ ಸಹಪಾಠಿಗಳು, ಅಧ್ಯಾಪಕರು ಚಕಿತಗೊಳ್ಳುವಂತೆ ಮಾಡಿದರು. ಅವರ ಆಸಕ್ತಿ, 

ಗೌರವ ಎಲ್ಲವೂ ಇಂಗ್ಲೀಷ್ ಭಾಷೆಗೆ ಸಮರ್ಪಿತವಾಗಿತ್ತು. ಆದರೆ ೧೯೨೪ ರ ಜುಲೈ ೨ನೇ ತಾರೀಖು ಮೈಸೂರಿಗೆ ಬಂದಿದ್ದ ಐರೀಷ್ ಕವಿ ಜೆ.ಹೆಚ್. ಕಜೀನ್ಸ್ ಅವರನ್ನು ತಮ್ಮ ಗುರುಗಳ ಸೂಚನೆಯಂತೆ ಭೇಟಿಯಾದ ಕುವೆಂಪು ಅವರಿಗೆ ಕಜೀನ್ಸ್ ಅವರಿಂದ ಸಿಕ್ಕ ಪ್ರತಿಕ್ರಿಯೆ ನಿಮ್ಮದಲ್ಲದ ಭಾಷೆಯಲ್ಲಿ ಬರೆದು ನೀವೆಂದೂ ಒಳ್ಳೆಯ ಕವಿಯಾಗಲಾರಿರಿ, ಅದರಲ್ಲೂ ಕವಿತೆಯಂತಹ ಸೃಜನಾತ್ಮಕ ಅಭಿವ್ಯಕ್ತಿಯಂತೂ ಮಾತೃಭಾಷೆಯಿಂದಲ್ಲದೆ ಬೇರೆ ಭಾಷೆಯಲ್ಲಿ ದಕ್ಕಲಾರದು ಎಂಬ ಮಾತುಗಳು ಆವರೆಗಿದ್ದ ಕುವೆಂಪು ಅವರ ಇಂಗ್ಲೀಷ್ ಹೆಮ್ಮೆಯನ್ನು ಘಾಸಿಗೊಳಿಸಿತ್ತು. ಆದರೆ ತನ್ನೆಲ್ಲಾ ಸಾರಸತ್ವವನ್ನು ಧಾರೆಯೆರೆದು ಈ ಕವಿಯ ಬರವಣಿಗೆಯ ಮೂಲಕ ಸಾರ್ಥಕ್ಯವನ್ನು ಕಂಡುಕೊಳ್ಳಲು ಇಂತಹ ಶುಭ ಮುಹೂರ್ತಕ್ಕಾಗಿ ಕಾಯ್ದು ಕುಳಿತಿದ್ದಂತೆ ತಾಯ್ನುಡಿ ಕನ್ನಡ ಕಾವ್ಯಲೋಕ ಆ ಕ್ಷಣವೇ ಕುವೆಂಪು ಅವರನ್ನು ತನ್ನ ಮಡಿಲಿಗೆ ಸೆಳೆದುಕೊಂಡಿತು.

೧೯೩೦ರಲ್ಲಿ ತಮ್ಮ ಮೊದಲ ಕನ್ನಡ ಕವನಸಂಕಲನ ಕೊಳಲು ಪ್ರಕಟಿಸುವ ಮೂಲಕ ಅಧಿಕೃತವಾಗಿ ಕನ್ನಡ ಕಾವ್ಯ ಕ್ಷೇತ್ರಕ್ಕೆ ಪ್ರವೇಶಿಸಿದ ಕುವೆಂಪು ಅವರು ಮುಂದೆ ಒಂದರ ಮೇಲೊಂದರಂತೆ ಕವನ ಸಂಕಲನಗಳನ್ನು ಪ್ರಕಟಿಸುತ್ತಾ, ಕನ್ನಡದ ಶಕ್ತಿ ಕವಿಯಾಗಿ ಬೆಳೆಯಲಾರಂಭಿಸಿದರು. ಅವರು ಬಿ.ಎ. ವ್ಯಾಸಂಗ ಮುಗಿಸುವ ಹೊತ್ತಿಗೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿಯೇ ಕನ್ನಡ ಎಂ.ಎ ತರಗತಿಗಳು ಆರಂಭವಾಗಿದ್ದವು. ತತ್ವಶಾಸ್ತ್ರದ ವಿದ್ಯಾರ್ಥಿಯಾಗಿದ್ದ ಕುವೆಂಪು ಅವರ ಸಾಹಿತ್ಯ ಪ್ರತಿಭೆಯನ್ನು ಗಮನಿಸಿ ಕನ್ನಡ ಎಂ.ಎ ತರಗತಿಗೆ ಸೇರುವಂತೆ ಪ್ರೊ ಎ.ಆರ್. ಕೃಷ್ಣಶಾಸ್ತ್ರಿಗಳು ಮನವೊಲಿಸಿದ್ದು, ಆ ಮೂಲಕ ಕನ್ನಡ ಕವಿಯಾಗಿ ರೂಪುಗೊಳ್ಳುತ್ತಿದ್ದ ಕುವೆಂಪು ಎಂಬ ಪ್ರತಿಭೆಯನ್ನು ಕನ್ನಡ ಸಾಹಿತ್ಯ ಪರಂಪರೆಯೊಂದಿಗೆ ಮತ್ತು ಸಮಕಾಲೀನ ಸಾಹಿತ್ಯ ಸಂದರ್ಭದೊಂದಿಗೆ ಬೆಸೆದುಕೊಳ್ಳುವಂತೆ ಮಾಡಿದ ಘಟನೆಯನ್ನು ಕುವೆಂಪು ಅದೊಂದು ಅಮೃತ ಕ್ಷಣ ಎಂದು ವರ್ಣಿಸಿದ್ದಾರೆ. ಆ ಅಮೃತ ಕ್ಷಣ ಕನ್ನಡ ವಾಗ್ದೇವಿಗೆ ಮೊದಲ ಜ್ಞಾನಪೀಠ ಪ್ರಶಸ್ತಿಯ ಮುಕುಟವನ್ನು ತೊಡಿಸಿತು.

 

ಕವಿ ಕುವೆಂಪು ಅವರ ಸಾಹಿತ್ಯ ನಿರ್ಮಿತಿಯನ್ನು ಅವರು ಹುಟ್ಟಿ ಬೆಳೆದ ಸಹ್ಯಾದ್ರಿ ಪ್ರಪಂಚಕ್ಕೆ ಹೋಲಿಸುವುದಾದರೆ ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ಒಂದು ಮಹಾ ಪರ್ವತದಂತಿದೆ. ಇದು ಕೇವಲ ಹೋಲಿಕೆಗಾಗಿ ಮಾತ್ರವಲ್ಲ. ಕುವೆಂಪು ಅವರೇ ಹೇಳುವಂತೆ ಇದು

ಶ್ರೀಕುವೆಂಪುವ ಸೃಜಿಸಿದೀ ಮಹಾ ಛಂದಸ್ಸಿನ
ಮೇರುಕೃತಿ ಮೇಣ್ ಜಗದ್ಭವ್ಯ ರಾಮಾಯಣಂ

ಕುವೆಂಪು ಅವರ ಕಥೆ ಕಾದಂಬರಿಗಳನ್ನು ಅನಾಯಾಸವಾಗಿ ಓದಿ ಅರ್ಥಮಾಡಿಕೊಳ್ಳುವ ಅವರ ಕಾವ್ಯ ನಾಟಕಗಳನ್ನು ಸಹಜವಾಗಿ ಓದಿ ಸವಿಯುವ, ಅವರ ಸಾಹಿತ್ಯ ವಿಮರ್ಶೆ ಮತ್ತು ಕಾವ್ಯ ಮೀಮಾಂಸೆಯನ್ನು ಆಸಕ್ತಿಯಿಂದ ಓದಿ, ಚರ್ಚಿಸುವ ಓದುಗರಿಗೆ ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು ತೆರೆದಾಕ್ಷಣ ಮಹಾಪರ್ವತವೊಂದನ್ನು ಎದುರುಗೊಂಡಂತೆ ಭಾಸವಾಗುತ್ತದೆ.

ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು ಕುರಿತು ಅದು ಪ್ರಕಟವಾದ ಕಾಲದಿಂದ ಇಂದಿನವರೆಗೆ ಎಷ್ಟೆಲ್ಲಾ ವಿಮರ್ಶೆಗಳು ಬಂದಿದ್ದರೂ ಆ ಹೊಗಳಿಕೆ ತೆಗಳಿಕೆಗಳೆಲ್ಲವನ್ನೂ ಮೀರಿ ಇಪ್ಪತ್ತನೇ ಶತಮಾನದ ಮೇರುಕೃತಿಯಾಗಿ ಕನ್ನಡ ಮಹಾಕಾವ್ಯ ಪರಂಪರೆಯ ಮಹಾಪ್ರತಿಮೆಯಾಗಿ ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ಕಾಲದೇಶ ಭಾಷೆಗಳ ಗಡಿಯನ್ನು ಮೀರಿ ಓದುಗರ ಬುದ್ಧಿ-ಭಾವ, ಕಲ್ಪನೆಗಳ ಆಳ ಅಗಲಗಳಿಗೆ ತಕ್ಕಂತೆ ತನ್ನನ್ನು ಹಿಗ್ಗಿಸಿಕೊಳ್ಳುತ್ತಲೇ ಬೆಳೆಯುತ್ತಿದೆ. ಓದುಗರ ಅರಿವನ್ನು ವಿಸ್ತರಿಸುತ್ತಲೇ ಇದೆ. ವಸ್ತು ಪುರಾಣದ್ದಾದರೂ, ಈ ಕಥೆಯನ್ನಾಧರಿಸಿದ ನೂರೆಂಟು ರಾಮಾಯಣಗಳು ಈ ದೇಶದ ಬೇರೆ ಬೇರೆ ಭಾಷೆಗಳಲ್ಲಿ ಪ್ರಕಟವಾಗಿದ್ದರೂ, ಕವಿಯೇ ಹೇಳುವಂತೆ ಇಲ್ಲಿ ಅದು ಹೊಸ ಹುಟ್ಟು ಪಡೆದಿದೆ. ಹೊಸ ದರ್ಶನಗಳನ್ನೇ ನೀಡಿದೆ. ಇಂಥ ಜಗದ್ಭವ್ಯ ಮಹಾಕಾವ್ಯವನ್ನು ನಮಗಿತ್ತ ಕವಿ ಕುವೆಂಪು ಸರ್ವಕಾಲಕ್ಕೂ ವಿಶ್ವಮಾನ್ಯರಾಗಿದ್ದಾರೆ.

– ಕವಿಪ್ರಿಯ

ಮಾಣ್ ನಿಷಾದನೆ ಮಾಣ್, ಕೊಲೆ ಸಾಲ್ಗುಮಯ್ಯೊ

ಮಹಾಕವಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ಕನ್ನಡ ಸಾರಸ್ವತ ಜಗತ್ತಿನ ಮಕುಟಮಣಿ. ಸರ್ವ ಮಾನವಕುಲವನ್ನು ಸಮಷ್ಟಿ ಪ್ರಜ್ಞೆಯ ಆಧ್ಯಾತ್ಮಿಕ ವಿಕಾಸದೆಡೆಗೆ ಒಯ್ಯುವ ದೃಷ್ಟಿಯುಳ್ಳದ್ದು. ಪ್ರಾಚೀನ ವಸ್ತುವನ್ನಳವಡಿಸಿಕೊಂಡು ಜಗತ್ತಿನ ವೈಚಾರಿಕ ಚಿಂತನೆಗಳನ್ನು ತನ್ನೊಡಲೊಳಗೆ ಕೇಂದ್ರೀಕರಿಸಿಕೊಂಡ ಜಾಗತಿಕ ಕಾವ್ಯ.

ಸಂಸ್ಕೃತಿಗಳ ತ್ರಿಕೂಟ ಸಂಗಮವಾಗಿರುವ ಈ ಕಾವ್ಯದಲ್ಲಿ ಅಯೋಧ್ಯಾ ಸಂಸ್ಕೃತಿ ರಾಮ ಸೀತೆಯರಿಂದ ಕೂಡಿದ ಆದರ್ಶ ಪರವಾದ ಶೀಲ ಸ್ತರ. ಕಿಷ್ಕಿಂಧಾ ಸಂಸ್ಕೃತಿ ಹೆಣ್ಣಿನ ವಿಷಯದಲ್ಲಿ ನೀತಿ ಪರವಾದ ಸ್ತರ ಮತ್ತು ಲಂಕಾ ಸಂಸ್ಕೃತಿ ಪರಸ್ತ್ರೀ ಭೋಗ ಪರವಾಗಿದ್ದು, ಭಿನ್ನತೆಯನ್ನೂ ಪಡೆದಿದೆ.

ನೆಯ್ದಾಳುತಿದೆ ಜಗವನೊಂದತಿ ವಿರಾಣ್ಮನಂ
ಸೂಕ್ಷಾತಿ ಸೂಕ್ಷ್ಮತಂತ್ರದಿ ಬಿಗಿದು ಕಟ್ಟಿಯುಂ, ಜೀವಿಗಳ್ಗಿಚ್ಛೆಯಾ
ಸ್ವಾತಂತ್ರ ಭಾವಮಂ ನೀಡಿ. ಮಂಥರೆ, ಸೀತೆ, ರಾಮ, ರಾವಣರೆಲ್ಲರುಂ
ಸೂತ್ರ ಗೊಂಬೆಗಳಲ್ತೆ ವಿಧಿಯ ಹಸ್ತದಲಿ

ಇಚ್ಛೆಯ ಸ್ವಾತಂತ್ರ್ಯದ ಭಾವವಿದ್ದೂ ಸೂತ್ರದ ಗೊಂಬೆಗಳಾಗಿ, ವಿಧಿಯ ಹಸ್ತದಲ್ಲಿ ಚಲಿಸುವ ರಾಮ, ರಾವಣ, ಮಂಥರೆ ಮೊದಲಾದ ಪಾತ್ರಗಳೆಲ್ಲ ಸೂಕ್ಷಾತಿ ಸೂಕ್ಷ್ಮ ತಂತ್ರಗಳಿಂದ ಬಂಧಿಸಿದವುಗಳಾಗಿವೆ. ವಿಧಿಯ ದಾಳದಿಂದ ಪಾರಾಗುವುದು ದುಃಸಾಧ್ಯ.

ವಿಧಿ ನಿಯಮದಂತೆ ಪಾಪಿಗಳೆನಿಸಿಕೊಂಡು, ಶಿಕ್ಷೆಗೊಳಗಾದರೂ ಮಂಥರೆ ಮತ್ತು ರಾವಣರಂಥವರು ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್ವ್ಯೂಹ ರಚನೆಯೊಳ್ ಎನ್ನುವಂತೆ

ಸಾವಿನಂಚಿನಲ್ಲಿ ಆತ್ಮೋನ್ನತಿಯ ಮಾರ್ಗ ಹಿಡಿಯುತ್ತಾರೆ. ಹಾಗೆಯೇ, ವಿಧಿಯ ದಾಳಕ್ಕೆ ಸಿಲ್ಕಿ ತಪ್ಪಿತಸ್ಥರಾಗಿ ಪಾಪಿಗಳೆನಿಸಿಕೊಂಡ ಪಾತ್ರಗಳೂ ಕೂಡ ರಾಮ ಪ್ರಜ್ಞೆಯ ಪರಿಣಾಮವಾಗಿ ಮನಃ ಪರಿವರ್ತನೆಯ ಹಾದಿ ಹಿಡಿಯುತ್ತವೆ.

ಪೃಥ್ವಿಯೊಳ್ ಘೋರ ಯುದ್ಧಂಗಳಂ ಪೊತ್ತಿಸುವ ಛಲಂಗಳ್, ಮಹತ್ವಾಶೆಗಳ್, ಯಶೋಲೋಭಗಳ್, ಕೃಪಣತಾ ಭೂತಗಳ್ ಕೀರ್ತಿಶನಿಗಳ್, ಮಮತಾವಿಕಾರಗಳ್ ಮರೆದುವಲ್ಲಲ್ಲಿ. ಪಶುವೀರ್‍ಯ ದೈತ್ಯರ್ಕಳೊಲ್ ಈ ನುಡಿಯು ಮಹತ್ವಾಕಾಂಕ್ಷೆಯ ಸರ್ವಾಧಿಕಾರಿ ಹಿಟ್ಲರ್‌ನ ಹಿಂಸೆಯ ಮಹಾಯುದ್ಧವನ್ನು ಪ್ರತಿಧ್ವನಿಸಿದಂತಿದೆ. ಮಾಣ್ ನಿಷಾದನೆ ಮಾಣ್, ಕೊಲೆ ಸಾಲ್ಗುಮಯ್ಯೊ- ವಾಲ್ಮೀಕಿಯ ನುಡಿಯು ಅಹಿಂಸೆಯ ಪ್ರತೀಕವಾದ ಅರೆಬೆತ್ತಲ ಚರಕ ಚಕ್ರ ಹಿಡಿದ ಗಾಂಧೀಜಿಯನ್ನು ನೆನಪಿಸುತ್ತದೆ. ಆ ಮೂಲಕ ಕುವೆಂಪು ಅವರು ಕಾಣುವ ವಿಶ್ವಮಾನವತೆಯ ಅಹಿಂಸಾತತ್ವವು ಮೇಣ್‌ಕ್ಷಮಾ, ಮೇಣ್ ದಯಾ, ಮೇಣ್ ಮೈತ್ರಿ ಮೇಣ್ ಅಹಿಂಸಾ ದಿವ್ಯರೂಪಗಳಲ್ಲಿ ಚಂದ್ರರೋಚಿಯ ಚೆಲ್ಲಿ ತಳತಳಿಸುತಿರ್ದುವಾಶೀರ್ವಾದ ಮುದ್ರೆಗಳವೋಲ್ ಸಾಲುಗಳಲ್ಲಿ ಗಾಂಧಿ ಪ್ರಜ್ಞೆಯ ಅಹಿಂಸಾ ತತ್ವದೊಂದಿಗೆ ಹೆಣೆದುಕೊಳ್ಳುತ್ತದೆ.

ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿಯಲ್ಲಿ ಕಿಕ್ಕಿರಿದ ಪೂರ್ಣ ದರ್ಶನ, ತಪೋವಲಯ, ಸಾಂಸ್ಕೃತಿಕ ವಿಲೀನತೆ, ಪ್ರಕೃತಿ-ಪುರುಷ, ಜೀವನ ಪೂರ್ಣತ್ವ, ವೈಜ್ಞಾನಿಕತೆ, ವೈಚಾರಿಕತೆ, ತತ್ವ, ಚಿತ್‌ಶಕ್ತಿ (ರಾಮಪ್ರಜ್ಞೆ), ಅಚಿತ್‌ಶಕ್ತಿ (ರಾವಣ ಪ್ರಜ್ಞೆ) ಪಾತ್ರಗಳ ಮನಃಪರಿವರ್ತನೆ, ಸರ್ವಾಧಿಕಾರ, ಪ್ರಜಾಪ್ರಭುತ್ವ, ಅಗ್ನಿಯಾತ್ರೆ ಹಾಗೂ ನಿತ್ಯ ಸತ್ಯಗಳನ್ನ

ಪ್ರತಿಮಿಸುವ ಸತ್ಯಸ್ಯ ಸತ್ಯ ಕಥನ ಮುಂತಾದವುಗಳನ್ನು ರಂಗ ಪ್ರಯೋಗದಲ್ಲಿ ದರ್ಶನವೀಯುವುದರ ಜೊತೆಗೆ ವಿಭಿನ್ನ ಸಂಸ್ಕೃತಿಗಳಲ್ಲಿ ಏಕವಾಗಿ ಕಂಡು ಬರುವ ಅಗ್ನಿ ಪ್ರತಿಮೆ ಯ ಮೂಲಕ ಅರ್ಥೈಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.

ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು ನಾಟಕವಾಗಿ ನಿರ್ದೇಶಿಸಲು ಆಹ್ವಾನ ಬಂದಾಗ, ಇದು ಸವಾಲಿನದ್ದಾಗಿದ್ದರೂ ಮೈಸೂರಿನ ರಂಗಾಯಣದ ಅನುಭವಿ ನಟರು ನನ್ನ ಪ್ರೀತಿಯ ಶಿಷ್ಯರು, ಸ್ನೇಹಿತರು ಹಾಗೂ ಕುವೆಂಪು ಕೃತಿಗಳನ್ನ ಬಲ್ಲವರು ಎಂಬ ಧೈರ್ಯದಿಂದ ಮನಃ ಪೂರ್ವಕವಾಗಿ ಒಪ್ಪಿಕೊಂಡೆ. ಜಗದೀಶ್ ಮತ್ತು ಕೃಷ್ಣಕುಮಾರ್ ರಿಂದ ಆಗಲೇ ಅತ್ಯುತ್ತಮ ರಂಗಪಠ್ಯ ಸಿದ್ಧಗೊಂಡಿತ್ತು. ಅವರ ಸಹಾಯ, ಸಹಕಾರ ಮೆಚ್ಚುವಂಥದ್ದು. ಹಾಗೆಯೇ ಸಹನಿರ್ದೇಶಕನಾಗಿ ಶಿಷ್ಯ ಉಮೇಶ್ ಸಾಲಿಯಾನನ ನೆರವು, ರಂಗಾಯಣದ ಹಿರಿಯ ಕಲಾವಿದರ ವಿವಿಧ ರೀತಿಯ ಸಹಾಯ, ರಂಗವಿನ್ಯಾಸ, ವಸ್ತ್ರವಿನ್ಯಾಸ, ಸಂಗೀತ ವಿನ್ಯಾಸ, ಬೆಳಕಿನ ವಿನ್ಯಾಸ, ಪ್ರಚಾರ ವಿನ್ಯಾಸ, ರಂಗಪರಿಕರ, ರಂಗಚಲನೆಯ ಸಹಾಯಕರು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಾಯ ಮಾಡಿದವರು, ವಿಶೇಷವಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದಂತಹ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ನಿರ್ದೇಶಕರು, ಜಂಟಿ ನಿರ್ದೇಶಕರು ಹಾಗೂ ರಂಗಾಯಣ ಸಿಬ್ಬಂದಿವರ್ಗದವರೆಲ್ಲರನ್ನು ಮನಃ ಪೂರ್ವಕವಾಗಿ ಕೃತಜ್ಞತೆಯಿಂದ ಸ್ಮರಿಸುತ್ತೇನೆ.

-ಕೆ.ಜಿ. ಮಹಾಬಲೇಶ್ವರ

ಇತಿಹಾಸಮಲ್ತು; ಬರಿಕಥೆಯಲ್ತು; ಕಥೆತಾಂ ನಿಮಿತ್ತ ಮಾತ್ರಂ, ಆತ್ಮಕೆ ಶರೀರದೋಲಂತೆ…..

ಕಳೆದ ೩೫ ವರ್ಷಗಳಿಂದ ನಾವು ರಂಗಭೂಮಿಯ ನಟರು. ಕಾವ್ಯ, ಕಥೆ, ಕಾದಂಬರಿಯಂತಹ ನಾಟಕೇತರ ಸಾಹಿತ್ಯ ಪ್ರಕಾರಗಳನ್ನು ರಂಗಕ್ಕೆ ತಂದಿರುವ ಮೈಸೂರು ರಂಗಾಯಣದ ಎಲ್ಲ ನಾಟಕಗಳಲ್ಲಿ ಅಭಿನಯಿಸಿದವರು. ಈ ಜಗತ್ತಿನಲ್ಲಿ ಅತ್ಯಂತ ಸುಲಭ ಹಾಗೂ ಕಷ್ಟಕರ ಕಾಯಕ ನಟನೆ ಇದು ನಾವು ನಮ್ಮ ರಂಗ ಗುರು ಬಿ.ವಿ.ಕಾರಂತರಿಂದ ಕಲಿತ ಪಾಠ. ಇದನ್ನೇ ನಂಬಿಕೊಂಡಿರುವವರು ನಾವು. ಭಾಷೆಯೊಂದರ ಯಾವುದೇ ಪ್ರಕಾರವನ್ನು ನಾವು ಗ್ರಹಿಸುವುದು ನಟರಾಗಿಯೇ. ನಟ, ಭಾಷೆಯನ್ನು ಅರ್ಥ ಮಾಡಿಕೊಂಡು ಅದರ ಧ್ವನಿ, ತಾಳ, ಲಯಗಳೊಂದಿಗೆ ನುಡಿಸಬೇಕು. ಹಾಗಾಗಿ ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ರಂಗರೂಪಕ್ಕೆ ತರುವ ಜವಾಬ್ದಾರಿ ಹೊತ್ತಾಗ ಒಂದೆಡೆ ಸಂತಸದ ಸಂಭ್ರಮ, ಮತ್ತೊಂದೆಡೆ ಢವಗುಟ್ಟಿದ ಆತಂಕ; ಮಹಾಕಾವ್ಯವೊಂದನ್ನು ಓದಿ, ಅರ್ಥೈಸಿಕೊಂಡು ಕಥೆಗೆ ಚ್ಯುತಿ ಬಾರದ ಹಾಗೆ, ಭಾಷೆಗೆ ಅಪಚಾರವೆಸಗದೆ, ಸಂಕ್ಷಿಪ್ತಗೊಳಿಸಿ ರಂಗರೂಪಕ್ಕೆ ತರುವ ಹರಸಾಹಸ.

ರಾಮಾಯಣದ ಕಥೆ ಈ ಮಹಾಕವಿಗೆ ‘ಇತಿಹಾಸವಲ್ಲ, ಬರಿ ಕಥೆಯೂ ಅಲ್ಲ, ಕಥೆ ನಿಮಿತ್ತ ಮಾತ್ರ; ಆತ್ಮಕೆ ಶರೀರವಿದ್ದಂತೆ. ಬ್ರಹ್ಮಸೃಷ್ಟಿಯಂತೆಯೆ ಕವೀಂದ್ರ ಮತಿಯೂ ಲೋಕದೊಳ್ ಪೊಳೆವ ಋತಕಲ್ಪನಾ ಮೂರ್ತಂಗಳಂ, ಭಾವಚರ ನಿತ್ಯಸತ್ಯಂಗಳಂ ಕೃತಿನೇತ್ರ ಪಥದಿಂ ಪೊಕ್ಕು

ಕಾಣವೇಳ್ಕುಂ’ ಎನ್ನುವ ಕವಿ ರಾಮಾಯಣದ ಪಾತ್ರಗಳ ಆತ್ಮದ ಅಲೌಕಿಕ ರಸಸತ್ಯಗಳನ್ನು ಈ ಮಹಾಕಾವ್ಯ ರಸಯಾತ್ರೆಯ ಮೂಲಕ ದರ್ಶಿಸುತ್ತಾರೆ. ಕವಿಗೆ, ಕಾವ್ಯವೆಂಬುದು ‘ಹೃದಯದಿ ಮಥಿಸಿ, ರಸದ ನವನೀತವಂ ಕಡೆದು, ಜಡವೆ ಚಿನ್ಮಯವಾದಂತೆ, ದುಂಬಿ ಮೊರೆವಂತೆ ಮೊರೆದು ವಿದ್ಯುದ್ವಿಮಾನವನೇರಿದಂತೆ’. ಈ ಮಹಾಕಾವ್ಯದ ಪ್ರಕೃತಿ ವರ್ಣನೆಗಳಲ್ಲಿ, ದೃಶ್ಯಗಳಲ್ಲಿ, ಪಾತ್ರಗಳಲ್ಲಿ ಹಾಗೂ ಪಾತ್ರದ ಕನಸುಗಳಲ್ಲಿ ರಸಋಷಿ ಕುವೆಂಪುರವರು ಕಂಡ ದರ್ಶನವನ್ನು ನಾವು ಮನದುಂಬಿ ಆಸ್ವಾದಿಸಿ ಪುಳಕಗೊಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯವನ್ನು ರಂಗಪ್ರದರ್ಶನಕ್ಕೆ ರಂಗಕೃತಿಯಾಗಿ ಸಿದ್ಧಗೊಳಿಸಿ, ಪ್ರದರ್ಶನದ ಮೂಲಕ ಸಹೃದಯ ಪ್ರೇಕ್ಷಕನಲ್ಲಿ ಉಂಟಾಗುವ ರಸಾಸ್ವಾದನ ಪ್ರಕ್ರಿಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಂಗರೂಪಕ್ಕೆ ತಂದಿದ್ದೇವೆ. ಕನ್ನಡ ಜನಮಾನಸಕ್ಕೆ ಕುವೆಂಪು ಕನ್ನಡವನ್ನು ರಂಗಕ್ಕೆ ಪರಿಚಯಿಸುವ ನಮ್ಮ ಈ ಪ್ರಯತ್ನ ಸಫಲವಾದರೆ ನಮ್ಮ ಶ್ರಮ ಸಾರ್ಥಕ. ನಾವು ಧನ್ಯರು.

ಜಗದೀಶ ಮನೆವಾರ್ತೆ
ಕೃಷ್ಣಕುಮಾರ ನಾರ್ಣಕಜೆ

ಪರಿಚಯ

ಕೆ.ಜಿ. ಮಹಾಬಲೇಶ್ವರ

ಕೆ.ಜಿ. ಮಹಾಬಲೇಶ್ವರ

ನಿರ್ದೇಶನ

ಸಾಗರ ತಾಲ್ಲೂಕಿನ ಹೆಗ್ಗೋಡಿನವರಾದ ಶ್ರೀ ಕೆ.ಜಿ. ಮಹಾಬಲೇಶ್ವರ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಮೂಲತಃ ಕೃಷಿ ಕುಟುಂಬದಿಂದ ಬಂದ ಇವರು ಕಲೆ, ಸಾಹಿತ್ಯ, ರಂಗಭೂಮಿಯ ಸೆಳೆತದಿಂದಾಗಿ ನೀನಾಸಂ ರಂಗಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತಾ, ರಂಗಶಿಕ್ಷಣ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ, ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದವರು. ಸಾಗರ ತಾಲ್ಲೂಕಿನ ಹೆಗ್ಗೋಡಿನವರಾದ ಶ್ರೀ ಕೆ.ಜಿ. ಮಹಾಬಲೇಶ್ವರ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಮೂಲತಃ ಕೃಷಿ ಕುಟುಂಬದಿಂದ ಬಂದ ಇವರು ಕಲೆ, ಸಾಹಿತ್ಯ, ರಂಗಭೂಮಿಯ ಸೆಳೆತದಿಂದಾಗಿ ನೀನಾಸಂ ರಂಗಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತಾ, ರಂಗಶಿಕ್ಷಣ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ, ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದವರು. 

ಬೆರಳೆಣಿಕೆಯ ಹಳಗನ್ನಡ ವಿದ್ವಾಂಸರಲ್ಲಿ ಒಬ್ಬರಾದ ಶ್ರೀಯುತರು ಭಾರತೀಯ ಕಾವ್ಯ ಮೀಮಾಂಸೆ, ಆನಂದವರ್ಧನನ ಧ್ವನಿ ಸಿದ್ಧಾಂತ, ಅಭಿನವಗುಪ್ತನ ರಸ ಸಿದ್ಧಾಂತ, ಭರತನ ನಾಟ್ಯ ಶಾಸ್ತ್ರಗಳ ವಿಶ್ಲೇಷಣೆ ಬೋಧನೆಯಲ್ಲಿ ಅದ್ವಿತೀಯರು. ಅಂತೆಯೇ, ಹಳಗನ್ನಡ ಕಾವ್ಯ ಸಾಲುಗಳಿಗೆ ರಂಗಬೆಳಕಿನಲ್ಲಿ ಜೀವತುಂಬಿ ನಡೆದಾಡುವಂತೆ ಮಾಡಬಲ್ಲ ಸಮರ್ಥ ರಂಗ ನಿರ್ದೇಶಕರು. ಕಾವ್ಯದ ಮೂಲ ಸತ್ವ ಮತ್ತು ಕಾಲಮಾನದ ಪ್ರಸ್ತುತತೆಗಳನ್ನು ರೂಹುಗೆಡದಂತೆ ಕಂಡರಿಸಬಲ್ಲ ಕುಶಲಿಗಳು. ಮಾಯದ ಕುದುರೆ, ಅಪಕಾರಿಯ ಕಥೆ, ಆಷಾಢಭೂತಿ, ಭೀಷ್ಮ ಸೇನಾಧಿಪತ್ಯ, ಸಮಾಧಿ ಸತ್ವ, ಅದಲು ಬದಲು, ಕೇಶಪಾಶ ಪ್ರಪಂಚ, ಕರ್ಣದ್ಯುಮಣಿ, ಕರ್ಣ ರಸಾಯನ, ಉತ್ತರನ ಪೌರುಷ, ಹರಿಶ್ಚಂದ್ರ ಕಾವ್ಯ ಮುಂತಾದ ಪ್ರಯೋಗಗಳನ್ನು ನಿರ್ದೇಶಿಸಿದ್ದಾರೆ. ರಂಗಭೂಮಿಯ ಸಂಕೀರ್ಣ ಪ್ರಕಾರವಾದ ನಾಟಕದಲ್ಲಿ ವಾಚಿಕ ದುರ್ಬಲವಾಗುತ್ತಿರುವ ಸಂದರ್ಭದಲ್ಲಿ, ಕಣ್ಮರೆಯಾಗುತ್ತಿರುವ ಹಳಗನ್ನಡದ ಸತ್ವವನ್ನು ಪರಿಚಯಿಸಲು ವಾಚಿಕ ವಿನ್ಯಾಸವನ್ನು ಸಿದ್ಧಪಡಿಸಿದವರು. ಅಷ್ಟೇ ಅಲ್ಲದೆ ಕನ್ನಡ ರಂಗಭೂಮಿಯ ಸಮೃದ್ಧಿಗಾಗಿ ಹಳಗನ್ನಡದಲ್ಲೇ ಯಕ್ಷಗಾನ ತಾಳಮದ್ದಲೆಯ ಪ್ರಕಾರವನ್ನು ಪ್ರಾರಂಭಿಸುವ ಧೈರ್ಯ ತೋರಿಸಿದ್ದಾರೆ. ಪ್ರಸ್ತುತ ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಖ್ಯಾತ ನಿರ್ದೇಶಕರಲ್ಲೊಬ್ಬರಾಗಿ, ರಂಗಶಿಕ್ಷಣ ಶಾಲೆಗಳಿಗೆ ಅತಿಥಿ ಉಪನ್ಯಾಸಕರಾಗಿ ಕ್ರಿಯಾಶೀಲರಾಗಿದ್ದಾರೆ.


ಜಗದೀಶ ಮನೆವಾರ್ತೆ

ಜಗದೀಶ ಮನೆವಾರ್ತೆ

ರಂಗರೂಪ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯವರಾದ ಜಗದೀಶ ಮನೆವಾರ್ತೆಯವರು ಬಿ.ಎಸ್ಸಿ, ನೀನಾಸಂ ಪದವಿ ಜೊತೆಗೆ ಕನ್ನಡ ಎಂ.ಎ ಪಡೆದಿದ್ದಾರೆ. ನೀನಾಸಂ ತಿರುಗಾಟದಲ್ಲಿ ನಟರಾಗಿ ಹಾಗೂ ತಂತ್ರಜ್ಞರಾಗಿ ಕೆಲಸ ಮಾಡಿ ೧೯೮೯ ರಿಂದ ರಂಗಾಯಣದಲ್ಲಿದ್ದುಕೊಂಡು ರಂಗಭೂಮಿಯ ವಿವಿಧ ನೆಲೆಗಳಲ್ಲಿ ಪರಿಣತಿ ಪಡೆದಿದ್ದಾರೆ. ಸಾಕ್ಷರತಾ ಆಂದೋಲನದಂತಹ ಜನಪರ ಜಾಥಾಗಳಲ್ಲಿ, ಮಕ್ಕಳ ರಂಗ ಶಿಬಿರಗಳಲ್ಲಿ ನಾಟಕ ಬರೆದು ನಿರ್ದೇಶಿಸಿದ್ದಾರೆ. ರಂಗಾಯಣದ ನಾಟಕಗಳಲ್ಲಿ ಹಲವಾರು ಮುಖ್ಯ ಪಾತ್ರಗಳನ್ನು ನಿರ್ವಹಿಸಿ ದೇಶ-ವಿದೇಶ ಸುತ್ತಿದ್ದಾರೆ. ಹಾಗೆಯೇ ನಟನೆಯ ಜೊತೆಗೆ ನಿರ್ದೇಶಕರಾಗಿಯೂ ಕೆಲಸ ಮಾಡಿರುವ ಇವರು ರಂಗಾಯಣದ ರೆಪರ್ಟರಿಗೆ ಪಿ. ಲಂಕೇಶ್ ಅವರ ಪೋಲಿಸರಿದ್ದಾರೆ ಎಚ್ಚರಿಕೆ ನಾಟಕವನ್ನು ನಿರ್ದೇಶನ ಮಾಡಿದ್ದಾರೆ. ಶಕ್ತಿಭದ್ರನ ಸಂಸ್ಕೃತ ನಾಟಕ ಆಶ್ಚರ್ಯ ಚೂಡಾಮಣಿಯ ಮೂರನೇ ಅಂಕದ ಮಾಯಾಸೀತಾ ಪ್ರಸಂಗವನ್ನು ಹಳಗನ್ನಡಕ್ಕೆ ಅನುವಾದ ಮಾಡಿರುವ ಇವರು ಬೀಚಿ ಅವರ ಸಾಹಿತ್ಯ ಆಧಾರಿತ ಬೀಚಿ ಬುಲೆಟ್ಸ್ ನಾಟಕವನ್ನು ಶ್ರೀ ಮಂಜುನಾಥ ಬೆಳಕೆರೆ ಹಾಗೂ ಶ್ರೀ ಕೃಷ್ಣಕುಮಾರ್ ಅವರೊಂದಿಗೆ ರಚಿಸಿದ್ದಾರೆ. ಪ್ರಸ್ತುತ ರಾಷ್ಟ್ರಕವಿ ಕುವೆಂಪು ಅವರ ಮೇರುಕೃತಿ ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು ರಂಗರೂಪಕ್ಕಳವಡಸಿದ್ದಾರೆ.


ಕೃಷ್ಣಕುಮಾರ ನಾರ್ಣಕರ್ಜೆ

ಕೃಷ್ಣಕುಮಾರ ನಾರ್ಣಕರ್ಜೆ

ರಂಗರೂಪ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕನ್ಯಾನ ಎಂಬ ಹಳ್ಳಿಯವರಾದ ಇವರು ಎಂ.ಎ. ಪದವೀಧರರು. ನೀನಾಸಂ ರಂಗಶಿಕ್ಷಣ ಕೇಂದ್ರದಿಂದ ಡಿಪ್ಲೋಮ ಪಡೆದು ನಂತರ ಸತತವಾಗಿ ಮೂರು ವರ್ಷಗಳ ಕಾಲ ತಿರುಗಾಟದಲ್ಲಿ ನಟ ಮತ್ತು ತಂತ್ರಜ್ಞರಾಗಿ ಕರ್ನಾಟಕದಾದ್ಯಂತ ಪ್ರವಾಸ ಮಾಡಿದ್ದಾರೆ. ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಮಕ್ಕಳ ನಾಟಕ ರಂಗ ಶಿಬಿರಗಳನ್ನು ನಡೆಸಿದ್ದಾರೆ. ನಾಗಮಂಡಲ, ಚೋರ ಪುರಾಣ, ಸಂಕ್ರಾಂತಿ, ಮಹಿಮಾಪುರ, ರಥಮುಸಲ, ಘಾಶೀರಾಂ ಕೊತ್ವಾಲ್ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬೆಳಕಿನ ವಿನ್ಯಾಸದಲ್ಲಿ ವಿಶೇಷ ಆಸಕ್ತಿ ಮತ್ತು ಪರಿಣತಿಯನ್ನು ಪಡೆದಿರುವ ಇವರು ರಂಗಾಯಣದ ಎಲ್ಲ ನಾಟಕಗಳಲ್ಲೂ ಅಭಿನಯಿಸಿದ್ದಾರೆ.


ಹೆಚ್.ಕೆ. ದ್ವಾರಕಾನಾಥ್

ಹೆಚ್.ಕೆ. ದ್ವಾರಕಾನಾಥ್

ರಂಗವಿನ್ಯಾಸ

ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯ (ಕಾವಾ) ಬಿ.ಎಫ್.ಎ ಪದವೀಧರರು. ರಂಗಾಯಣದಲ್ಲಿ ವಿನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಬರೋಡಾದ ಎಂ.ಎಸ್ ವಿಶ್ವವಿದ್ಯಾನಿಲಯದಿಂದ ಎಂ.ಎಫ್.ಎ ಪದವಿಯನ್ನು ಪಡೆದಿದ್ದಾರೆ. ಚಿತ್ರಕಲೆ ಮತ್ತು ಭಿತ್ತಿ ಚಿತ್ರಕಲೆಯಲ್ಲಿ ಪರಿಣಿತರಾದ ಇವರು ರಂಗಾಯಣದಲ್ಲಿ ನಾಟಕ ನಿರ್ದೇಶಿಸಿದ ದೇಶ ವಿದೇಶಗಳ ರಂಗ ನಿರ್ದೇಶಕರಿಗೆ ರಂಗವಿನ್ಯಾಸ ರೂಪಿಸಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾಗಿರುವ ಇವರಿಗೆ ಪ್ರಜಾಮತ ಪತ್ರಿಕೆಯ ಪ್ರಜಾರತ್ನ ಪ್ರಶಸ್ತಿಯೂ ಲಭಿಸಿದೆ.


ಪ್ರಮೋದ್ ಶಿಗ್ಗಾಂವ್

ಪ್ರಮೋದ್ ಶಿಗ್ಗಾಂವ್

ವಸ್ತ್ರ ಮತ್ತು ಪರಿಕರ ವಿನ್ಯಾಸ

ರಂಗಭೂಮಿಯನ್ನ ಸದಾಕಾಲ ಧ್ಯಾನಿಸುವ ಕೆಲವೇ ಕೆಲವು ಕನ್ನಡ ನಿರ್ದೇಶಕರಲ್ಲಿ ಪ್ರಮೋದ್ ಶಿಗ್ಗಾಂವ್ ಅತ್ಯಂತ ಕ್ರಿಯಾಶೀಲ ಬಹುಮುಖ ಪ್ರತಿಭೆಯ ನಿರ್ದೇಶಕ. ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ತರಬೇತಿಯನ್ನು ಪಡೆದ ನಂತರ ರಂಗಭೂಮಿಯನ್ನು ವೃತ್ತಿಯಾಗಿ ಸ್ವೀಕರಿಸಿ ಕಳೆದ ಮೂರು ದಶಕಗಳಿಂದ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ನಿರ್ದೇಶಕನೊಬ್ಬ ಉತ್ತಮ ವಿನ್ಯಾಸಕಾರನಾಗಿರಬೇಕು ಎಂಬುದಕ್ಕೆ ಪ್ರಮೋದ್ ಶಿಗ್ಗಾಂವ್ ಬಹುದೊಡ್ಡ ಉದಾಹರಣೆ. ರಂಗಸಂಪನ್ಮೂಲ ವ್ಯಕ್ತಿಯಾಗಿ ಪಾಂಡೀಚೆರಿ, ತ್ರಿಶೂಲ್ ಡ್ರಾಮಾ ಸ್ಕೂಲ್, ನಾಗಪೂರ್, ತ್ರಿವೇಂಡ್ರಮ್‌ನ ಅಭಿನಯ ತಂಡಕ್ಕೆ ಕಾರ್ಯ ನಿರ್ವಹಿಸಿದ್ದಾರೆ. ವಸ್ತ್ರವಿನ್ಯಾಸಕರಾಗಿ ಇವರು ಅಪರೂಪದ ಕೊಡುಗೆಯನ್ನು ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗಕ್ಕೆ ನೀಡಿದ್ದಾರೆ. ಪರಿಕರ ತಯಾರಿಕೆಯಲ್ಲೂ ಇವರು ಸಿದ್ಧ ಹಸ್ತರು. ನೀನಾಸಂ ತಿರುಗಾಟ, ಚಿಣ್ಣ-ಬಣ್ಣ, ರೆಪರ್ಟರಿಗಳಲ್ಲಿ ನಟನಾಗಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ರಂಗಾಯಣ ಅಭಿನಯಿಸಿದ ತಲೆದಂಡ, ಚಂದ್ರಹಾಸ, ಗಾಂಧಿ ವರ್ಸಸ್ ಗಾಂಧಿ, ಟಿಪ್ಪುವಿನ ಕನಸುಗಳು ನಾಟಕಗಳಲ್ಲದೆ ಮಲೆಗಳಲ್ಲಿ ಮದುಮಗಳು ಮಹಾನ್ ನಾಟಕಕ್ಕೆ ಅಪರೂಪದ ವಸ್ತ್ರವಿನ್ಯಾಸ ಮಾಡಿದ್ದಾರೆ. ಇವರು ನಿರ್ದೇಶನ ಮಾಡಿದ ನಾಟಕಗಳು ಸೇಜುವಾನ್ ನಗರದ ಸಾಧ್ವಿ, ಮದರ್ ಕರೇಜ್, ಪಂಪಭಾರತ, ದಂಗೆಯ ಮುಂಚಿನ ದಿನಗಳು, ಮೂಕಬಲಿ, ಚಂದ್ರಹಾಸ, ನನಗ್ಯಾಕೋ ಡೌಟು, ಹೀಗಾದ್ರೆ ಹೇಗೆ? ಮತ್ತು ರಂಗಾಯಣದ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಗೆ ವಸಂತಯಾಮಿನಿ ಸ್ವಪ್ನ ಚಮತ್ಕಾರ ನಾಟಕವನ್ನು ನಿರ್ದೇಶಿಸಿದ್ದಾರೆ. ಬೆಂಗಳೂರಿನ ಸಮುದಾಯಕ್ಕೆ ಇವರು ನಿರ್ದೇಶಿಸಿದ ಪಂಪ ಭಾರತ ನಾಟಕ ಸದ್ಯದಲ್ಲೇ ನೂರು ಪ್ರದರ್ಶನ ಕಾಣಲಿದೆ. ಹಾಗೆಯೇ ಕ್ರಿಯೇಟೀವ್ ಥಿಯೇಟರ್‌ಗೆ ನಿರ್ದೇಶಿಸಿದ ಟಿ. ಸುನಂದಮ್ಮನವರ ಹಾಸ್ಯ ಲೇಖನಗಳಾಧಾರಿತ ಹೀಗಾದ್ರೆ ಹೇಗೆ ನಾಟಕವು ನೂರು ಪ್ರದರ್ಶನಗಳನ್ನು ಕಂಡಿದೆ. ಪ್ರಸನ್ನ ಅವರ ಚರಕ ಸಂಸ್ಥೆಯಲ್ಲಿ ಅವರೊಂದಿಗೆ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಧಾರವಾಡ ರಂಗಾಯಣದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ರಂಗಾಯಣ ಅಭಿನಯಿಸುತ್ತಿರುವ ರಾಷ್ಟ್ರಕವಿ ಕುವೆಂಪು ಅವರ ಮಹಾಕಾವ್ಯ ಶ್ರೀರಾಮಾಯಣ ದರ್ಶನಂ ನಾಟಕಕ್ಕೆ ಪರಿಕರ ಮತ್ತು ವಸ್ತ್ರವಿನ್ಯಾಸ ಮಾಡಿದ್ದಾರೆ.


ರವಿ ಮೂರೂರು

ರವಿ ಮೂರೂರು

ಸಂಗೀತ ನಿರ್ದೇಶನ

ಹಿಂದೂಸ್ತಾನಿ ಸಂಗೀತವನ್ನು ಪಂ. ಎಂ.ಪಿ. ಹೆಗಡೆ ಪಡಿಗೆರೆ ಅವರ ಶಿಷ್ಯರಾಗಿ ಅಭ್ಯಾಸ ಮಾಡಿ, ಶ್ರೀ ರಾಜು ಅನಂತಸ್ವಾಮಿ ಅವರಿಂದ ಲಘು ಸಂಗೀತವನ್ನು ಕರಗತ ಮಾಡಿಕೊಂಡಿರುವ ಗಾಯಕ ಪ್ರತಿಭೆ ರವಿ ಮೂರೂರು. ಗಾನ ಗಾರುಡಿಗ ಶ್ರೀ ಸಿ. ಅಶ್ವಥ್ ಅವರೊಂದಿಗೆ ಮುಖ್ಯ ಸಹಗಾಯಕರಾಗಿ ದೇಶ, ವಿದೇಶದ ವೇದಿಕೆಗಳಲ್ಲಿ ಹಾಡಿದ್ದು, ನಾಡಿನ ಹಲವು ರಂಗಪ್ರಯೋಗಗಳಿಗೆ ಸಂಗೀತ ಸಂಯೋಜಿಸಿ, ಪ್ರಮುಖ ಹಿನ್ನೆಲೆ ಗಾಯಕರಾಗಿ ದುಡಿದ ಅನುಭವ ಶ್ರೀಯುತರಿಗಿದೆ.

ನಾಡಿನ ಹೆಸರಾಂತ ಗಾಯಕರಾದ ಶ್ರೀಮತಿ ಸಂಗೀತ ಕಟ್ಟಿ, ಪಂಡಿತ್ ಫ಼ಯಾಜ್ ಖಾನ್, ಶ್ರೀ ಪ್ರವೀಣ್ ಗೋಡ್ಕಿಂಡಿ, ಶ್ರೀ ಪುತ್ತೂರು ನರಸಿಂಹ ನಾಯಕ್ ಮುಂತಾದವರೊಂದಿಗೆ ವಿವಿಧ ವೇದಿಕೆಗಳನ್ನು ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯ ಭಾಗವಹಿಸುವಿಕೆಯ ಜೊತೆಗೆ ಹಾರ್ಮೋನಿಯಂ, ಚಂಡೆ, ಡೋಲಕ್ ಮುಂತಾದ ವಾದ್ಯಗಳನ್ನು ನುಡಿಸುವ ಕೌಶಲವನ್ನೂ ಹೊಂದಿರುವ, ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಇವರು ಅನೇಕ ರಂಗಪ್ರಯೋಗಗಳಿಗೆ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಪ್ರಸ್ತುತ ರಂಗಾಯಣ ಪ್ರದರ್ಶಿಸುತ್ತಿರುವ ಶ್ರೀರಾಮಾಯಣ ದರ್ಶನಂ ನಾಟಕಕ್ಕೆ ಸಂಗೀತ ಸಂಯೋಜಿಸಿದ್ದಾರೆ.


ಶ್ರೀನಿವಾಸ ಭಟ್ (ಚೀನಿ)

ಶ್ರೀನಿವಾಸ ಭಟ್ (ಚೀನಿ)

ಸಂಗೀತ ನಿರ್ವಹಣೆ

ದಕ್ಷಿಣಕನ್ನಡ ಜಿಲ್ಲೆಯ ಉಡುಪಿಯವರಾದ ಇವರು ಬಿ.ಎ. ಪದವೀಧರರು. ರಂಗಾಯಣದಲ್ಲಿ ಸಂಗೀತ ಶಿಕ್ಷಕರಾಗಿದ್ದ ಇವರು ಎಲ್ಲಾ ರೀತಿಯ ವಾದ್ಯಗಳನ್ನು ನುಡಿಸಬಲ್ಲವರು. ಗಿಟಾರ್ ವಾದನದಲ್ಲಿ ಪರಿಣತರು. ಪಾಶ್ಚಾತ್ಯ ಹಾಗೂ ಭಾರತೀಯ ಎರಡೂ ಬಗೆಯ ಸಂಗೀತವನ್ನು ಕರತಲಾಮಲಕ ಮಾಡಿಕೊಂಡಿರುವ ಇವರು ರಾಜ್ಯದಲ್ಲಿರುವ ಕೆಲವೇ ರಂಗಸಂಗೀತ ತಜ್ಞರಲ್ಲಿ ಒಬ್ಬರು. ನೀನಾಸಂ ತಿರುಗಾಟದ ಹಲವಾರು ನಾಟಕಗಳಿಗೆ ಸಂಗೀತ ಒದಗಿಸಿರುವ ಇವರು ರಂಗಾಯಣದ ಬಹುಪಾಲು ನಾಟಕಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಬಿ.ವಿ. ಕಾರಂತರ ನೆಚ್ಚಿನ ಸಂಗೀತ ನಿರ್ದೇಶಕರಾಗಿದ್ದ ಇವರು ಇಂದಿಗೂ ಕಾರಂತರು ಸಂಯೋಜಿಸಿದ ಎಲ್ಲಾ ಕನ್ನಡ ರಂಗಗೀತೆಗಳನ್ನು ಚ್ಯುತಿಬಾರದ ಹಾಗೆ ನುಡಿಸಿ ಹಾಡಿಸಬಲ್ಲರು. ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಸುವರ್ಣ ಕರ್ನಾಟಕದ ಅಂಗವಾಗಿ ೨೦೦೭ರ ಪ್ರಶಸ್ತಿ ನೀಡಿ ಗೌರವಿಸಿದೆ. ರಂಗಾಯಣದ ದೇಶ ವಿದೇಶಗಳಲ್ಲಿ ಪ್ರದರ್ಶಿಸಿದ ಎಲ್ಲಾ ನಾಟಕಗಳಲ್ಲೂ ಇವರು ಭಾಗವಹಿಸಿದ್ದಾರೆ.


ಉಮೇಶ್ ಸಾಲಿಯಾನ್

ಉಮೇಶ್ ಸಾಲಿಯಾನ್

ಸಹ ನಿರ್ದೇಶನ

ದಕ್ಷಿಣ ಕನ್ನಡ ಜಿಲ್ಲೆಯವರಾದ ಉಮೇಶ್ ಸಾಲಿಯಾನ ನಾರಾಯಣ ಅವರು ನೀನಾಸಮ್ ರಂಗಶಿಕ್ಷಣ ಕೇಂದ್ರದ ಪದವೀಧರರಾಗಿದ್ದು, ನೀನಾಸಮ್ ತಿರುಗಾಟ, ಥಿಯೇಟರ್ ಸಮುರಾಯ್, ಗೊಂಬೆಮನೆ, ಕಿನ್ನರಮೇಳ ತಂಡಗಳಲ್ಲಿ ನಟರಾಗಿ, ತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ. ಎಸ್.ಡಿ.ಎಂ ಕಾಲೇಜು, ಉಜಿರೆ ಮತ್ತು ಸಾಗರದ ಎಲ್.ಬಿ. ಸಮುದಾಯ ಕಾಲೇಜು ರಂಗಶಿಕ್ಷಣ ಕೇಂದ್ರದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದು, ಮೈಸೂರು ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದಲ್ಲಿ ಶಿಕ್ಷಕರಾಗಿದ್ದಾರೆ. ಇವರು ನಿರ್ದೇಶಿಸಿರುವ ಪ್ರಮುಖ ನಾಟಕಗಳು- ಚಂದ್ರಹಾಸ, ಸಾಹೇಬರು ಬರುತ್ತಾರೆ, ಮೀಡಿಯಾ, ಪೋಸ್ಟ್ ಬಾಕ್ಸ್ ನಂ.೯, ಈಡಿಪಸ್, ಅಂತಿಗೊನೆ ಮತ್ತು ವೇಣೀಸಂಹಾರ.


ಮಹೇಶ್ ಕಲ್ಲತ್ತಿ

ಮಹೇಶ್ ಕಲ್ಲತ್ತಿ

ಬೆಳಕಿನ ವಿನ್ಯಾಸ

ಮಹೇಶ್.ಕೆ.ಎಸ್. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಗಾದ ಕಲ್ಲತ್ತಿಯ ಇವರು ಬಿ.ಎ. ಪದವೀಧರರಾಗಿದ್ದು, ಕಾಲೇಜು ದಿನಗಳಿಂದಲೇ ನಾಟಕದ ಕಡೆಗೆ ಒಲವು ಮೂಡಿಸಿಕೊಂಡು ತೀರ್ಥಹಳ್ಳಿಯ ಹವ್ಯಾಸಿ ರಂಗತಂಡವಾದ ನಟಮಿತ್ರರು ತಂಡದೊಂದಿಗೆ ನಟನಾಗಿ ಅಭಿನಯಿಸುತ್ತ ಹೆಚ್ಚಿನ ತರಬೇತಿಗೆಂದು ಮೈಸೂರು ರಂಗಾಯಣದಲ್ಲಿ ೨೦೧೨-೧೩ನೇ ಸಾಲಿನ ಭಾರತೀಯ ರಂಗಶಿಕ್ಷಣ ಕೇಂದ್ರಕ್ಕೆ ಸೇರಿಕೊಂಡು, ಮುಂದೆ ಮೂರು ವರ್ಷ ರಂಗಾಯಣದಲ್ಲೇ ಕೆಲಸ ನಿರ್ವಹಿಸುತ್ತ ನಟನೆಯೊಂದಿಗೆ ಬೆಳಕಿನ ವಿನ್ಯಾಸ, ರಂಗವಿನ್ಯಾಸ, ವಸ್ರ್ತವಿನ್ಯಾಸ, ನಿರ್ದೇಶನ ಎಲ್ಲದರ ಪರಿಣತಿ ಹೊಂದಿದ್ದಾರೆ. ಪ್ರಸ್ತುತ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಎಂ.ಎ. ನಾಟಕ ಸ್ನಾತಕೋತ್ತರ ಪದವಿ ಪಡೆದಿದ್ದು, ಹದಿನೈದಕ್ಕೂ ಹೆಚ್ಚು ನಾಟಕಗಳಲ್ಲಿ ನಟರಾಗಿ, ಅರವತ್ತಕ್ಕೂ ಹೆಚ್ಚು ನಾಟಕಗಳಿಗೆ ಬೆಳಕಿನ ವಿನ್ಯಾಸಕರಾಗಿ ಹಲವಾರು ಮಕ್ಕಳ ನಾಟಕಗಳಿಗೆ ಸಹ ನಿರ್ದೇಶನ ಮತ್ತು ನಿರ್ದೇಶನವನ್ನು ಮಾಡಿರುತ್ತಾರೆ.

ರಂಗದ ಮೇಲೆ

ಜಗದೀಶ್ ಮನೆವಾರ್ತೆ – ಹಿರಣ್ಯಕೇಶಿ
ಕೃಷ್ಣಕುಮಾರ್ ನಾರ್ಣಕಜೆ – ಮಹಾಪಾರ್ಶ್ವ
ಹುಲುಗಪ್ಪ ಕಟ್ಟೀಮನಿ – ರಾವಣ
ನಂದಿನಿ ಕೆ.ಆರ್ – ಮಂಡೋದರಿ
ಪ್ರಶಾಂತ ಹಿರೇಮಠ – ಮಾರೀಚ, ಕುಂಭಕರ್ಣ
ವಿನಾಯಕ ಭಟ್ ಹಾಸಣಗಿ – ವಿಭೀಷಣ
ರಾಮು ಎಸ್. – ಆಂಜನೇಯ
ಸರೋಜ ಹೆಗಡೆ – ಕೌಸಲ್ಯೆ, ತಾರೆ
ಪ್ರಮೀಳ ಬೆಂಗ್ರೆ – ತ್ರಿಜಟೆ
ಗೀತ ಎಂ.ಎಸ್ – ತ್ರಿಜಟೆ
ಶಶಿಕಲಾ ಬಿ.ಎನ್ ಕೈಕೆ, ಧಾನ್ಯಮಾಲಿನಿ
ಮಹದೇವ್ – ದಶರಥ, ಜಾಂಬವ
ಭಾಗೀರಥಿ ಬಾಯಿ – ಮಂಥರೆ
ಧನಂಜಯ ಆರ್.ಸಿ – ಕುವೆಂಪು
ಮಹೇಶ್ ಕಲ್ಲತ್ತಿ – ವಾಲ್ಮೀಕಿ, ಮಾಯಾವಿ
ಮಂಜು ಸಿರಿಗೇರಿ – ರಾಮ, ಶತೃಘ್ನ, ಇಂದ್ರಜಿತು, ಗುಂಪು
ಶರತ್ ಎಸ್. – ರಾಮ, ಶತೃಘ್ನ, ಇಂದ್ರಜಿತು, ಗುಂಪು
ಮಹಾಂತೇಶ್ ಆದಿಮ – ಲಕ್ಷ್ಮಣ
ಬಿ.ಬಿ.ಅಶ್ವಿನಿ – ಸೀತೆ, ಗುಂಪು
ಶೃತಿ ವಿ. ತಿಪಟೂರು – ಸೀತೆ, ಗುಂಪು
ಹೊಯ್ಸಳ ಜೆ. – ಭರತ, ಗುಂಪು
ರೋಹಿಣಿ ಹಾಸನ್- ಮಂಥರೆ, ಲಂಕಾಲಕ್ಷ್ಮಿ
ಶಿಲ್ಪಾ ಕೆ.ಪಿ – ಚಂದ್ರನಖಿ, ಗುಂಪು
ಪೂರ್ಣಿಮಾ – ಊರ್ಮಿಳೆ, ತ್ರಿಜಟೆ, ಗುಂಪು
ಅನುರಾಗ್ ಎಸ್. – ರಾವಣ, ಗುಂಪು
ಶಿಲ್ಪಾ ಎಸ್. – ಜಟಾಯು, ಅನಲೆ, ಕ್ರೌಂಚ ಪಕ್ಷಿ, ಗುಂಪು
ಪ್ರದೀಪ ಹಾಸನ್ – ವಾಲಿ, ಪ್ರಹಸ್ಥ, ಗುಂಪು
ದಿವ್ಯಾ ಎನ್ ಜಿಂಕೆ, ತಾರೆ, ಕ್ರೌಂಚ ಪಕ್ಷಿ, ಗುಂಪು
ಶೃತಿ ಎ.ಎಸ್. – ಕೌಸಲ್ಯೆ, ದಾಸಿ, ಸುರಾಂಗನೆ, ಗುಂಪು
ಕವಿತಾ ಎ.ಎಂ – ಸುಮಿತ್ರೆ, ಊರ್ಮಿಳೆ, ತಾರಾಕ್ಷಿ, ರುಮೆ, ಜಿಂಕೆ, ಗುಂಪು
ಪೀರಪ್ಪ ಹೆಚ್. ದೊಡ್ಡಮನಿ – ಕಂಚುಕಿ, ಮಾರೀಚ, ಮಹಾಪಾರ್ಶ್ವ, ಗುಂಪು
ಮಂಜು ಬಾದಾಮಿ – ಬೇಡ, ಗುಂಪು, ದಶರಥ, ಕುಂಭಕರ್ಣ, ಅಕಂಪನ
ರಜತ್ ಎನ್.ಎಸ್ – ನಳ, ಮಾಯಾವಿ, ಜಾಂಬವ, ಹಿರಣ್ಯಕೇಶಿ, ಗುಂಪು
ಸತ್ಯ ಪ್ರಮೋದಿನಿ ಎನ್. – ಕೈಕೆ, ಧಾನ್ಯಮಾಲಿನಿ, ಕ್ರೌಂಚ ಪಕ್ಷಿ, ಗುಂಪು
ಮಹಾದೇವಸ್ವಾಮಿ ಎಸ್.ಎಂ. ಆಂಜನೇಯ, ಇಂದ್ರಜಿತು, ಗುಂಪು
ಇನ್ಸಾಫ್ ಹೊಸಪೇಟೆ – ವಿಭೀಷಣ, ಮೇಳ
ಲಾಸ್ಯ – ಮಂಡೋದರಿ, ಮೇಳ
ವಿಜಯ್ ಎಸ್.ಕೆ. – ನಳ, ಗುಂಪು
ಮಧು ಕೆ.ಎನ್- ಗುಂಪು
ಶರೀಫ್ – ಜಾಂಬವ, ಅವಿಂಧ್ಯ, ಗುಂಪು

ರಂಗದ ಹಿಂದೆ

ರಂಗಸಜ್ಜಿಕೆ: ಪ್ರಮೀಳಾ ಬೆಂಗ್ರೆ, ಸರೋಜ ಹೆಗಡೆ, ಪ್ರದೀಪ ಕೆ.ಎಂ, ಹೊಯ್ಸಳ ಜೆ., ಪೀರಪ್ಪ, ಶೃತಿ ತಿಪಟೂರು, ಶಿವಕುಮಾರ್ ಗುಂಡ್ಲುಪೇಟೆ, ಮಂಜು ಸಿರಿಗೇರಿ, ಅರುಣ್‌ಕುಮಾರ್, ವಿನಯ್ (ಕಾವಾ), ಜಿತೇಂದ್ರ, ನಂದನ್ ಹೆಗಡೆ, ಭುವನ್‌ಜೈನ್, ನಿರಂಜನ್, ಪ್ರಸನ್ನ, ದರ್ಶನ್, ವಿಶಾಲ್, ಸೋಮು, ಲೋಕೇಶ್, ವಸ್ತ್ರಾಲಂಕಾರ: ವಿನಾಯಕ ಭಟ್ ಹಾಸಣಗಿ, ಹುಲುಗಪ್ಪ ಕಟ್ಟೀಮನಿ, ಮೋಹನ, ದಿವ್ಯಾ ಎನ್, ಶಿಲ್ಪಾ ಕೆ.ಪಿ, ಅನುರಾಗ್ ಎಸ್., ಶಿಲ್ಪಾ ಎಸ್, ಶರತ್ ಎಸ್, ಮಹೇಶ್ ಹೆಬ್ಬಾಳು, ಹೆಚ್.ಎಂ ದೇವರಾಜ್, ರಂಗನಾಥ, ದುರ್ಗಾ ಮಹಾಂತೇಶ್, ಮಹೆರುನ್ನಿಸಾ, ರಜನಿ

ಪರಿಕರ: ಎ.ಪಿ. ಚಂದ್ರಶೇಖರ, ರಾಮು ಎಸ್, ಶಶಿಕಲಾ ಬಿ.ಎನ್, ಪೂರ್ಣಿಮಾ, ಶೃತಿ ಎ.ಎಸ್, ಮಹದೇವಸ್ವಾಮಿ, ರಜತ್, ಸುರೇಶ್ ಜಿ.ಖೂನಿ, ಪ್ರಶಾಂತ್ ಹೆಬ್ಸೂರು, ಸುಧಾ ಮುತ್ತಾಳ್
ಬೊಂಬೆ ನಿರ್ವಹಣೆ: ಶ್ರವಣಕುಮಾರ್ ಎಂ. ಹೆಗ್ಗೋಡು, ಸಮರ್ಥ್ ಎಂ. ಹೆಗ್ಗೋಡು,

ಪ್ರಚಾರ: ಪ್ರಶಾಂತ್ ಹಿರೇಮಠ್, ಗೀತಾ ಎಂ.ಎಸ್, ರವಿ.ವಿ, ಮಂಜು ಸಿರಿಗೇರಿ, ಅರುಣ್ ಕುಮಾರ್

ಪ್ರವಾಸ ನಿರ್ವಹಣೆ : 
ಅಂಜುಸಿಂಗ್ ಕೆ., ಮಧುಸೂಧನ ವಿ.ಡಿ

ಪ್ರಸಾದನ : ಮಹದೇವ್, ನಂದಿನಿ ಕೆ.ಆರ್., ರೋಹಿಣಿ ಹಾಸನ, ಅಶ್ವಿನಿ ಬಿ.ಬಿ., ಸತ್ಯಪ್ರಮೋದಿನಿ, ಕವಿತಾ ಎ.ಎಂ

ಸಂಗೀತ ಸಾಂಗತ್ಯ: ರಾಘವ ಕಮ್ಮಾರ, ಇನ್ಸಾಫ್, ಸುಬ್ರಹ್ಮಣ್ಯ ಮೈಸೂರು, ಧನಂಜಯ .ಆರ್.ಸಿ, ಮಹಾಂತೇಶ್ ಆದಿಮ, ಲಾಸ್ಯ ಎಸ್.

ಬೆಳಕು: ಮಂಜು ಬಾದಾಮಿ, ಶಿವಕುಮಾರಸ್ವಾಮಿ

ಧ್ವನಿ: ಕೃಷ್ಣಪ್ರಸಾದ್

ಕಛೇರಿ ಸಿಬ್ಬಂದಿ: ರಾಜೇಶ್ ಕೆ.ಬಿ., ಮಂಜುನಾಥ್ ಎಂ.ಸಿ, ಆಲೂರು ದೊಡ್ಡನಿಂಗಪ್ಪ,ರಮಾಕಾಂತ್, ಬ್ರಹ್ಮಲಿಂಗಪ್ಪ, ಗೌರಮ್ಮ, ಶೇಷನಾರಾಯಣ, ರಾಜು, ಪೂರ್ಣಿಮಾ, ವೀಣಾ, ಪ್ರೇಮಾ. 

ಕೃತಜ್ಞತೆಗಳು

ಶ್ರೀಮತಿ ತಾರಿಣಿ ಚಿದಾನಂದಗೌಡ, ಡಾ. ಚಿದಾನಂದಗೌಡ, ಪ್ರೊ. ಕಾಳೇಗೌಡ ನಾಗವಾರ, ಪ್ರೊ. ಶಿವರಾಮಯ್ಯ, ಡಾ. ಹನೂರ ಕೃಷ್ಣಮೂರ್ತಿ, ಡಾ. ಪ್ರೀತಿ ಶುಭಚಂದ್ರ, ಶ್ರೀ ಲಕ್ಷ್ಮೀಶ್ ತೋಳ್ಪಾಡಿ, ಶ್ರೀ ಗಣೇಶ ಎಂ., ಡಾ. ಹಿ.ಶಿ. ರಾಮಚಂದ್ರೇಗೌಡ, ಶ್ರೀಮತಿ ಸುಜಾತ ಹೆಚ್.ಆರ್., ಡಾ. ಕೆ.ವೈ. ನಾರಾಯಣಸ್ವಾಮಿ, ಶ್ರೀ ಕಡಿದಾಳ್ ಪ್ರಕಾಶ್, ಡಾ. ಲಕ್ಷ್ಮಣದಾಸ್, ಶ್ರೀ ಎಮ್. ಆರ್. ಸತ್ಯನಾರಾಯಣ, ಶ್ರೀ ರಘುಪತಿಭಟ್, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ