ಮಹಾಮಾಯಿ

ರಂಗ ನಿರ್ವಹಣೆ : ಬಿ.ಎನ್. ಶಶಿಕಲಾ
ರಂಗ ವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್
ವಸ್ತ್ರ ವಿನ್ಯಾಸ : ಬಿ.ಎಂ. ರಾಮಚಂದ್ರ
ಬೆಳಕಿನ ವಿನ್ಯಾಸ : ಮಹೇಶ್ ಕಲ್ಲತ್ತಿ
ನೃತ್ಯ ಸಂಯೋಜನೆ : ಕೃಪಾ ಫಡ್ಕೆ
ಸಂಗೀತ : ಚಿಂತನ್ ವಿಕಾಸ್
ನಿರ್ದೇಶನ : ಹೆಚ್. ಜನಾರ್ಧನ (ಜನ್ನಿ)

ಸಾವಿನಿಂದ ಪ್ರೀತಿಯತ್ತ ಗತಿ

ಜನಪದ ಪುರಾಣಕ್ಕೆ ಸಮಕಾಲೀನ ಬದುಕಿನ ಸ್ಪರ್ಶ ನೀಡುವಲ್ಲಿ ಕಂಬಾರರದು ದೊಡ್ಡ ಪ್ರತಿಭೆ. ಶೆಟವಿತಾಯಿ, ಸಂಜೀವಶಿವ ಇವರಿಬ್ಬರ ಸಂಘರ್ಷ ಮಹಾಮಾಯಿ ನಾಟಕದ ಕೇಂದ್ರ. ತಾಯಿ ಸಾವಿಗಾಗಿ ಕಾಯುತ್ತಿದ್ದರೆ, ಸಂಜೀವ ಜೀವವನ್ನು ಉಳಿಸುವಲ್ಲಿ ಕ್ರಿಯಾಶೀಲ. ಈ ಎರಡು ಪಾತ್ರಗಳು ನಿರ್ವಹಿಸುವ ಎರಡು ಪ್ರಜ್ಞೆಗಳೆಂದರೆ ಸಾವು ಮತ್ತು ಇರುವಿಕೆ. ಇರುವಿಕೆ ಕೇವಲ ಶುಷ್ಕವಾದುದಲ್ಲ. ಅದು ಪ್ರೀತಿಯ ಪರಿವೇಷಿ. ಮನುಷ್ಯನ ನಿಜವಾದ ಹೋರಾಟ ಬದುಕಿಗಾಗಿಯೇ ಇದೆ. ಇದಕ್ಕೆ ಅನೇಕ ಪದರಗಳಿವೆ. ಅದರಲ್ಲಿ ಜೀವ ಉಳಿಸಿಕೊಳ್ಳುವುದು ಒಂದು. ಬಹುಶಃ ವೈದ್ಯಕ್ಕೆ ಈ ನಾಟಕ ಮಾನವೀಯ ಸಹಜತೆಯನ್ನು ಜೋಡಿಸಿದೆ. ವೈದ್ಯವೆಂಬುದು ಸುಲಿಗೆ ಆಗಿರುವ ಈ ಕಾಲಕ್ಕೆ ವೈದ್ಯಲೋಕದ ಜನ ಈ ನಾಟಕದಿಂದ ಕಲಿಯಬೇಕಾದ ವಿಷಯಗಳು ಸಾಕಷ್ಟಿವೆ. ’ಕೆರಿಯರ್’ ಎಂಬ ಮರಾಠಿಯ ಪ್ರಸಿದ್ಧ ಕಾದಂಬರಿ ವೈದ್ಯ ಮಾಫೀಯ ತೋರಿಸಿದರೆ, ಮಹಾಮಾಯಿ ವೈದ್ಯನೊಬ್ಬನ ಮಾನವೀಯತೆಯನ್ನು ಅಭಿವ್ಯಕ್ತಿಸುತ್ತದೆ.

ರೋಗಗ್ರಸ್ಥಳಾದ ರಾಜಕುಮಾರಿಯನ್ನು ನುಂಗಲು ಕಾದಿರುವ ಶೆಟವಿತಾಯಿ, ರಾಜಕುಮಾರಿಯನ್ನು ಉಳಿಸಬೇಕೆಂಬ ಸಂಜೀವಶಿವರಲ್ಲಿ ನಿಜಕ್ಕೂ ಗೆಲವು ಯಾರದು? ಯಾಕಾಗಿ? ಎಂಬುದು ನಾಟಕದ ಬೆಳವಣಿಗೆ. ಸಾವಿಗೆ ಚಳ್ಳೆಹಣ್ಣು ತಿನ್ನಿಸಲೆಂದು ಬೇರೆ ಬೇರೆ ವೇಷ ಧರಿಸುವ ಮದನತಿಲಕ ಉಳಿಯಲಾರ. ಹೆಂಡತಿ ಭೂತವಾಗಿ ಕಾಡುವ ಕರ್ಮ ಅವನದು. ಉಳಿಯಲಾರೆ ಎನ್ನುವ ರಾಜಕುಮಾರಿಯನ್ನು ಸಂಜೀವ ಉಳಿಸುವ ಬಗೆ ನಾಟಕದ ಒಟ್ಟು ದರ್ಶನ. ಮನುಷ್ಯ ಸಾವನ್ನು ಗೆಲ್ಲಲಾಗುತ್ತದೆಯೇ? ಇಲ್ಲವೇ? ಎಂಬುದು ನಾಟಕದ ತಾರ್ಕಿಕತೆ. ಸಾವನ್ನು ಮನುಷ್ಯ ಗೆಲ್ಲಲಾರ ಎಂಬುದು ಸತ್ಯ. ಅದು ತರ್ಕವಲ್ಲ. ಆದರೂ ಪ್ರೀತಿ ಎಂಬ ಗುಪ್ತಗಾಮಿನಿಯಾದ ಸಂಜೀವಿನಿಯೊಂದಿದೆಯಲ್ಲ, ಅದರ ಮುಂದೆ ಸಾವು ಕೂಡ ಮಂಡಿಯೂರಿ ಕುಳಿತುಕೊಳ್ಳಬೇಕಾದ ಸ್ಥಿತಿ ಒದಗಿಸಬೇಕಾಗುತ್ತದೆ. ಮೃತ್ಯು-ಪ್ರೀತಿಗಳ ಸಂಘರ್ಷದ ಭೂಮಿಕೆಯಾಗಿ ನಾಟಕ ನಮಗೆ ಹೊಸ ಜೀವನ ಸಾಕ್ಷಾತ್ಕಾರವನ್ನು ಮಾಡಿಸುತ್ತದೆ. ತಾಯಿ ಲೋಕ ಭೀಕರ : ಪ್ರೀತಿ ಲೋಕ ಅಮರ. ಆಳದಲ್ಲಿರುವ ಹೆಣ್ಣಿನ ಅಸಮಾಧಾನ ಮೀರಿ ನಾಟಕ ಬೆಳೆಯುತ್ತದೆ. ತಾಯಿ ಸಾಕುವ ಹಾಗೂ ಸಾವಾಗುವ ನೆಲೆಗಳಿಗೆ ಸಂಜೀವ ಶಿವ ತನ್ನ ವೈದ್ಯದಿಂದ ಗೆಲ್ಲುವ ಗೆಲುವು ಪ್ರೀತಿಯ ಗೆಲುವಾಗುತ್ತದೆ. ಗುಹೆಯೊಳಗಿನ ತಾಯಿ ಶೆಟವಿ ಪಕ್ಷಿರೂಪಿಯಾಗಿ ಬೆಳೆದಂತೆ ಸಾಮಾನ್ಯ ವೈದ್ಯ ಅಸಮಾನ್ಯ ವೈದ್ಯನಾಗುವ ನೆಲೆ ಸಂಜೀವಶಿವನಲ್ಲಿದೆ.

ನಮ್ಮ ತರ್ಕಕ್ಕೆ ಸಿಗದ ಅನೇಕ ವಿಷಯಗಳನ್ನು ನಾಟಕ ಸಾವು ಪ್ರೀತಿಗಳ ನಡುವೆ ಚರ್ಚಿಸುತ್ತದೆ. ನಾಟಕದ ಆ ಗತಿಗೆ ನಾನು ಮರುಳಾಗಿದ್ದೇನೆ. ಹಾಗೆ ಮರುಳು ಮಾಡುವುದೇ ಕಂಬಾರರ ಪ್ರತಿಭಾ ಶಕ್ತಿ.

– ರಾಜಪ್ಪ ದಳವಾಯಿ

ಡಾ. ಚಂದ್ರಶೇಖರ್ ಕಂಬಾರ

ಕನ್ನಡದ ಸಮಕಾಲೀನ ಕವಿ, ಕಾದಂಬರಿಕಾರ, ನಾಟಕಕಾರ, ಚಲನಚಿತ್ರ ನಿರ್ದೇಶಕ, ರೂಪಕಗಳ ಮಾಟ, ಜಾನಪದದ ಆಟೋದೊಟ್ಟಿಗೆ ಸಾಹಿತ್ಯ ಲೋಕದಲ್ಲಿ ತಮ್ಮದೆ ಛಾಪು ಮೂಡಿಸಿದ ಡಾ. ಚಂದ್ರಶೇಖರ ಕಂಬಾರ ಕನ್ನಡಕ್ಕೆ ಇತ್ತೀಚಿನ ಹಾಗೂ ಎಂಟನೇ ಜ್ಞಾನಪೀಠ ಪ್ರಶಸ್ತಿಯ ಸಂಭ್ರಮವನ್ನು ತಂದಿತ್ತವರು. ತಮ್ಮ ಕವಿತೆ, ನಾಟಕಗಳು ಹಾಗೂ ಕಾದಂಬರಿಗಳಲ್ಲಿ ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಮನಮುಟ್ಟುವಂತೆ ಬಳಸಿಕೊಂಡ ದ.ರಾ. ಬೇಂದ್ರೆಯವರ ನಂತರದ ಬರಹಗಾರ. ೨೨ ನಾಟಕಗಳು, ೫ ಕಥೆ- ಕಾದಂಬರಿಗಳು, ರಂಗಭೂಮಿ ಹಾಗೂ ಸಾಹಿತ್ಯವನ್ನು ಕುರಿತ ಸಂಶೋಧನಾ ಲೇಖನಗಳ ೧೨ ಸಂಕಲನಗಳು, ಮುಂತಾಗಿ ಇವರ ಒಟ್ಟು ೪೭ ಕೃತಿಗಳು ಪ್ರಕಟವಾಗಿವೆ. ಕಂಬಾರರ ಕೃತಿಗಳಲ್ಲಿ ಸಂಪ್ರದಾಯ ಹಾಗೂ ಆಧುನಿಕತೆ, ಊಳಿಗಮಾನ್ಯ ಪದ್ಧತಿಯ ಬಿಕ್ಕಟ್ಟು, ಸ್ಥಳೀಯ ಅನನ್ಯತೆ, ವಸಾಹತುಶಾಹಿ ಮನೋಭಾವ, ಇತಿಹಾಸ, ಲೈಂಗಿಕತೆ, ವಿಶ್ವಾಸದ ನಾಶ, ದೈವದ ನಾಶ. . . . ಹೀಗೆ ಹಲವು ವೈರುಧ್ಯಗಳು ವಿಶಿಷ್ಠತೆಗಳು ಹಾಗೂ ಭಿನ್ನತೆಗಳು ಮೈಳೇಸಿವೆ. ಸಾಹಿತ್ಯವನ್ನು ಹೊರತುಪಡಿಸಿ, ಕರ್ನಾಟಕಕ್ಕೆ ಕಂಬಾರರ ಅತ್ಯಂತ ಮಹತ್ವದ ಕೊಡುಗೆಯೆಂದರೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಹಾಗೂ ಅಭಿವೃದ್ಧಿ, ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ತಮಗಿದ್ದ ದೂರದೃಷ್ಠಿಯನ್ನು ಹಂಪಿ ವಿಶ್ವವಿದ್ಯಾನಿಲಯವನ್ನು ಕಟ್ಟಿ ಬೆಳೆಸುವುದರ ಮೂಲಕ ಕಂಬಾರರು ಅಭಿವ್ಯಕ್ತಿಗೊಳಿಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ೧೫ಕ್ಕೂ ಹೆಚ್ಚು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿರುವ ಡಾ. ಚಂದ್ರಶೇಖರ ಕಂಬಾರರ ಮುಖ್ಯನಾಟಕಗಳಲ್ಲೊಂದು ’ಮಹಾಮಾಯಿ’.

ನಿರ್ದೇಶಕರ ನುಡಿ

ಮನುಷ್ಯನ ಅದಮ್ಯ ಪ್ರಯೋಗಶೀಲತೆಗೆ ಅಡ್ಡಿ, ಆತಂಕಗಳನ್ನುಂಟು ಮಾಡುವುದು ಮೂಢನಂಬಿಕೆ. ಮನುಷ್ಯನಲ್ಲಿರುವ ಸಾಮರ್ಥ್ಯವನ್ನು ಮೌಡ್ಯಗಳು ತಮ್ಮ ಸರ್ಪ ಸುತ್ತಿನ ಹಿಡಿತದಿಂದ ಅಸಮರ್ಥಗೊಳಿಸುತ್ತದೆ. ವೈಚಾರಿಕ ಪ್ರಜ್ಞೆಯಿಂದ ಮೌಡ್ಯದ ಕಬಂಧsಗಳನ್ನು ಭೇದಿಸಿ ಬಿಡುಗಡೆ ಪಡೆದು ಮಾನವ ಸಹಜ ಪ್ರಕ್ರಿಯೆಯತ್ತ ದಾವಿಸಬೇಕೆಂಬ ಆಶಯವುಳ್ಳ ನಾಟಕ ಮಹಾಮಾಯಿ ಸಾವಿನ ತಾಯಿ ಎಲ್ಲವನ್ನು ನುಂಗುವ, ಉಗುಳುವ, ಎಲ್ಲವನ್ನು ಇಲ್ಲವಾಗಿಸುವ ಕಾರ್ಗತ್ತಲು, ಪ್ರಾಣಗಳನ್ನು ಹೀರುವ ಹಸಿ ಹಸಿ ಜೀವಗಳಿಗಾಗಿ ಸದಾ ಬಾಯ್ತೆರೆದ ನರಕ ಸ್ವರೂಪಿ, ಅಸಹಜ, ಅವಾಸ್ಥವ ಭ್ರಮಾಲೋಕದ ಏಕೈಕ ಒಡತಿ, ಸಾವು, ಭಯ, ಕ್ರೌರ್ಯದ ನಿರ್ದಾಕ್ಷಣ್ಯಳು ಮುಗ್ಧ ಜೀವಗಳ ಬಲಿಗೆ ಸದಾ ಆತೊರೆವ ಅದೋ ಲೋಕದ ಕರಿ ರಾತ್ರಿಯಲ್ಲೇ ಬದುಕುತ್ತ ಮಾನವ ಸಹಜ ಕಲಿಕೆ, ಸಾಧನೆ, ಸಾಮರ್ಥ್ಯಗಳ ನೆಲ ಮೂಲ ಸಂಸ್ಕೃತಿಯ ಮೇಲೆ ಏಕಸೌಮ್ಯ ಸಾಧಿಸ ಹೊರಟ ಸಾವಿನ ದೇವತೆ ಒಂದು ಕಡೆಯಾದರೆ ಮತ್ತೊಂದೆಡೆ ಈ ಎಲ್ಲಾ ಕ್ರೌರ್ಯ ಸರ್ವನಾಶದ ಸಾಮ್ರಾಜ್ಯಶಾಹಿಯ ಹಿಡಿತದೊಳಗೆ ಸಾಕು ಮಗನಾಗಿ ಸಿಕ್ಕು ನರಳಿ ಈ ಭಯಾನಕ ನರಕ ಸೃಷ್ಟಿಯಿಂದ ತನ್ನ ವೃತ್ತಿ ಘನತೆಯನ್ನು ಕುಂದಿಸದೆ. ಮನುಷ್ಯ ಸಹಜ ಪ್ರೀತಿಯ ಸುತ್ತ ಸಾವಿನ ಬಲೆ ಎಣೆದಿರುವ ಶೆಟವಿತಾಯಿಯನ್ನು ಧಿಕ್ಕರಿಸಿ ಸ್ವತಂತ್ರವಾಗಲು ಹೋರಾಡುವ ವೈದ್ಯ ಸಂಜೀವಶಿವನ ಸಂರ್ಘಷವೇ ಮಹಾಮಾಯಿ ನಾಟಕ.

ಸ್ವಾತಂತ್ರ್ಯದ ಬೆಲೆಯನ್ನರಿಯದೆ ಮನುಷ್ಯ ತನ್ನ ಸುತ್ತ ನರಕ ಸೃಷ್ಠಿಸಿಕೊಂಡಿದ್ದಾನೆ. ಸ್ವಾತಂತ್ರ್ಯವೆಂದರೆ ಮನುಷ್ಯ ಮನುಷ್ಯನಾಗುವುದು ಎಂಬ ಅರಿವಿನಿಂದ ಮುಗ್ಧಜೀವ ಬಯಸುವ ಸಾವಿನ ತಾಯಿಯ ಆದೇಶ ಮೀರಿ ತನ್ನ ನೆಲ ಮೂಲ ಹುಡುಕಾಟದಿಂದ ಸಿದ್ಧಿಸಿದ ವೈದ್ಯವನ್ನು ಅತ್ಯಂತ ಪ್ರೀತಿ, ಆತ್ಮ ವಿಶ್ವಾಸದಿಂದ ನಿರ್ಮಲ ತ್ಯಾಗ ಮನೋಭಾವದಿಂದ ರೋಗಗ್ರಸ್ಥ ರಾಜಕುಮಾರಿಗೆ ಔಷಧ ಮಾಡಿ ಗುಣಪಡಿಸುತ್ತಾನೆ. ಆ ಮೂಲಕ ವೈದ್ಯ ವೃತ್ತಿಯ ಹಾಗೂ ಮಾನವ ಪ್ರೀತಿಯ ಘನತೆಯನ್ನು ಮೆರೆಸಿ ಅರ್ಥಪೂರ್ಣವಾದಂತಹ ಸರಳ ಬದುಕು ನಡೆಸಲು ಮುಂದಾಗುವ ಸಂಜೀವಶಿವನ ಪಯಣ ನಾಟಕದಲ್ಲಿದೆ. ಮಾನವ ಪ್ರೀತಿ ಸಹಿಸದೇ ಜೀವನಾಶ ಮಾಡಲೊರಟ ತಾಯಿಯನ್ನು ಚಾಣಾಕ್ಷತನದ ಮಾತುಗಳಿಂದ ಮೋಹಗೊಳಿಸಿ ತಾನು ಪಡೆದ ಅಮರತ್ವ ಜೀವದ ಅರ್ಧ ಭಾಗವನ್ನು ರಾಜಕುಮಾರಿ ಜೀವಕ್ಕೆ ಧಾರೆಯೆರೆದು ಅವಳನ್ನು ಬದುಕಿಸಿಕೊಂಡು ಕಾರ್ಗತ್ತಲು ಸಾವಿನ ತಾಯಿಯ ನರಕ ಲೋಕವನ್ನು ಸುಟ್ಟು ಬೂದಿ ಮಾಡುವುದರ ಮೂಲಕ ಸ್ವಾತಂತ್ರ್ಯದ ನರಲೋಕದಲ್ಲಿ ಬದುಕುವ ಆಶಾದಾಯಕ ಕೃತಿಯನ್ನು ರಚಿಸಿದ ನಮ್ಮ ನಾಡು ಕಂಡ ಅಪ್ರತಿಮ ಪ್ರತಿಭೆ ಜನಪದ ಸಾಗರದ ಅಮೂಲ್ಯ ರತ್ನಗಳನ್ನು ಆಧುನಿಕ ರಂಗಭೂಮಿಯ ಸೃಜನ ಪ್ರಯತ್ನಗಳಿಗೆ ಕೊಡುಗೆಯಾಗಿ ನೀಡುತ್ತಾ ಬರುತ್ತಿರುವ ಡಾ. ಚಂದ್ರಶೇಖರ ಕಂಬಾರರು ಈ ನಾಟಕವನ್ನು ರಂಗಕ್ಕೇರಲು ಪ್ರೇರಣೆಯಾದವರು. ನಾಟಕಕ್ಕೆ ಪೂರಕವಾದ ಹಾಡುಗಳನ್ನು ಕಂಬಾರರ ವಿವಿಧ ಕಾವ್ಯ ಸಂಗ್ರಹಗಳಿಂದ ಆಯ್ದು ಸಹಕರಿಸಿದ ಡಾ.ರಾಜಪ್ಪ ದಳವಾಯಿರನ್ನ ನೆನೆಯುತ್ತಾ, ಭಾರತೀಯ ರಂಗಭೂಮಿಯಲ್ಲಿ ತನ್ನದೇ ಮಹತ್ವದ ಇತಿಹಾಸವನ್ನು ಸೃಷ್ಟಿಸಿರುವ ಕನ್ನಡದ ಆಧುನಿಕ ರಂಗ ರೆಪರ್ಟರಿ ರಂಗಾಯಣವು ಜಗತ್ತಿನ ಹಲವು ಭಾಷೆಗಳ ಶೈಲಿಗಳ ಪ್ರಖ್ಯಾತ ನಿರ್ದೇಶಕರಿಂದ ಮಹತ್ವದ ನಾಟಕಗಳನ್ನು ನಿರ್ಮಿಸಿ ಲೋಕಾರ್ಪಣೆ ಮಾಡಿ ಪ್ರಶಂಸೆಗೊಳಪಟ್ಟಿದ್ದರು. ಜನಪದ ಶೈಲಿಯ ಮಹತ್ವದ ನಾಟಕಗಳನ್ನು ಹೆಚ್ಚು ಮಾಡಿಲ್ಲವಾದ್ದರಿಂದ ಅದನ್ನು ನೀವು ಮಾಡಿ ಎಂಬ ಪ್ರೀತಿಯ ಒತ್ತಾಯದ ಫಲವೇ ಮಹಾಮಾಯಿ ನಾಟಕವು ದರ್ಶನಕ್ಕೆ ಸಿದ್ಧಗೊಂಡಿದೆ. ರಂಗಾಯಣದ ಮೇಲಿನ ನಿಮ್ಮ ಅಭಿಮಾನದ ಬರುವಿಕೆ ಮತ್ತು ನಾಟಕ ವೀಕ್ಷಣೆಯೇ ನಮ್ಮ ಯಶಸ್ಸು ಎಂದು ಭಾವಿಸುತ್ತೇನೆ.

ಹೆಚ್. ಜನಾರ್ಧನ (ಜನ್ನಿ)

ರಂಗದ ಮೇಲೆ

ಮೇಳ : ಜಗದೀಶ್ ಮನವಾರ್ತೆ, ರಾಮು ಎಸ್, ವಿನಾಯಕ ಭಟ್, ಮಹದೇವ್, ಮಂಜು ಹೆಚ್
ಗಿರಿಮಲ್ಲಿಗೆ : ಬಿ.ಎನ್. ಶಶಿಕಲಾ
ಶೆಟವಿ ತಾಯಿ : ಪ್ರಮೀಳಾ ಬೇಂಗ್ರೆ
ಶಿವ : ಮೈಮ್ ರಮೇಶ್
ಸಂಜೀವ ಶಿವ : ಹುಲುಗಪ್ಪ ಕಟ್ಟೀಮನಿ
ರಾಜಕುಮಾರಿ : ಸರೋಜಾ ಹೆಗಡೆ
ಪುಷ್ಪ ಗಂಧಿ : ನಂದಿನಿ ಕೆ.ಆರ್
ಮದನ ತಿಲಕ : ಕೃಷ್ಣಕುಮಾರ್ ನಾರ್ಣಕಜೆ
ಹೆಂಗಸು, ಮಂಜರಿ,
ಸೇಡುಮಾರಿ-೨ : ಚಾಂದಿನಿ .ಪಿ
ಮದರಂಗಿ : ಶೃತಿ ಎ.ಎಸ್
ಮುದುಕಿ : ದಿವ್ಯಾ .ಎನ್
ಸೇಡುಮಾರಿ-೧ : ಗೀತಾ ಎಂ.ಎಸ್
ರಾಜ : ಮಹದೇವ್
ಮಾರ : ಮಂಜುನಾಥ ಬೆಳಕೆರೆ
ಮಂತ್ರಿ : ಎಂ.ಸಿ. ಕೃಷ್ಣಪ್ರಸಾದ್
ಸೈನಿಕ : ಮಂಜು ಹೆಚ್
ಕೀರ್ತಿ ಶಿವನ ಭೂತ : ಸಂತೋಷ್‌ಕುಮಾರ್ ಕುಸನೂರು
ಹಾಡುಗಳ ಆಯ್ಕೆ : ರಾಜಪ್ಪ ದಳವಾಯಿ

ರಂಗದ ಹಿಂದೆ

ವಸ್ತ್ರಗಳು : ರಾಮು. ಎಸ್, ಹುಲುಗಪ್ಪ ಕಟ್ಟೀಮನಿ, ಪ್ರಮೀಳಾ ಬೇಂಗ್ರೆ, ದಿವ್ಯಾ ಎನ್, ಚಾಂದಿನಿ .ಪಿ, ಮೋಹನ
ಪರಿಕರ : ಸಂತೋಷ್‌ಕುಮಾರ್ ಕುಸನೂರು, ಶೃತಿ .ಎ.ಎಸ್
ಪ್ರಸಾದನ : ಮಹದೇವ್, ವಿನಾಯಕಭಟ್, ಮಂಜು. ಹೆಚ್
ಸಂಗೀತ : ಕೃಷ್ಣಕುಮಾರ್ ನಾರ್ಣಕಜೆ, ಮಂಜುನಾಥ ಬೆಳಕೆರೆ
ರಂಗಸಜ್ಜಿಕೆ : ಜಗದೀಶ ಮನವಾರ್ತೆ, ನಂದಿನಿ ಕೆ.ಆರ್,
ನೂರ್ ಅಹ್ಮದ್ ಶೇಕ್, ರಂಗನಾಥ್ .ವಿ
ಸಂಗೀತ ಸಾಂಗತ್ಯ : ಶ್ರೀನಿವಾಸಭಟ್ (ಚೀನಿ), ಧನಂಜಯ್ ಆರ್.ಸಿ, ದೇವಾನಂದ ವರಪ್ರಸಾದ್, ಶ್ರೀಕಂಠಸ್ವಾಮಿ
ಪರಿಚಯ ಪತ್ರ : ಎಸ್. ರಾಮನಾಥ್
ಪ್ರಚಾರ : ಪ್ರಶಾಂತ್ ಹಿರೇಮಠ್