ರಂಗಪಯಣ-2019 -20

ರಂಗಾಯಣ, ಮೈಸೂರು

ರಂಗಪಯಣ-2019-20

ರಂಗಾಯಣವು ಕಳೆದ ಸಾಲಿನಲ್ಲಿ ಸಂಚಾರಿ ರಂಗಘಟಕದ ಕಿರಿಯ ಕಲಾವಿದರಿಂದ ೩ ನಾಟಕಗಳನ್ನು ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಿತ್ತು. ಪ್ರಸ್ತುತ 2019-20ನೇ ಸಾಲಿನಲ್ಲಿ ಪ್ರವಾಸ ಪ್ರದರ್ಶನಕ್ಕಾಗಿ ಮೂರು ನಾಟಕಗಳನ್ನು ಸಿದ್ಧಪಡಿಸಲಾಗಿದೆ. ಕೇರಳದ ಚಂದ್ರದಾಸನ್ ನಿರ್ದೇಶನದ ‘ಆರ್ಕೇಡಿಯಾದಲ್ಲಿ ಪಕ್’, ಚಿದಂಬರರಾವ್ ಜಂಬೆ ನಿರ್ದೇಶನದ ‘ಬೆಂದಕಾಳು ಆನ್ ಟೋಸ್ಟ್’ ಮತ್ತು ಶ್ರವಣ್‌ಕುಮಾರ್ ಅವರ ನಿರ್ದೇಶನದ ‘ರೆಕ್ಸ್ ಅವರ್‍ಸ್’- ಡೈನೋ ಏಕಾಂಗಿ ಪಯಣ’ ನಾಟಕಗಳನ್ನು ರಾಜ್ಯದಾದ್ಯಂತ ಪ್ರವಾಸ ಪ್ರದರ್ಶನಕ್ಕೆ ಅಣಿಗೊಳಿಸಲಾಗಿದ್ದು, 2019 ನವಂಬರ್ 18 ರಂದು ರಾಘವ ರಂಗಮಂದಿರ ಬಳ್ಳಾರಿಯಿಂದ ‘ರಂಗಪಯಣ-2019-20’ ಪ್ರಾರಂಭಗೊಳ್ಳಲಿದ್ದು, ಮೊದಲ ಹಂತದ ಈ ಪ್ರವಾಸ ಸುಮಾರು 37 ದಿನಗಳು ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ ಸಂಚರಿಸಲಿದೆ. ಬೆಂದಕಾಳು ಆನ್ ಟೋಸ್ಟ್ ಜೊತಗೆ ಈ ಪ್ರವಾಸದಲ್ಲಿ ಪ್ರದರ್ಶನಗೊಳ್ಳುವ ಉಳಿದೆರಡು ನಾಟಕಗಳ ವಿವರ ಕೆಳಕಂಡಂತಿದೆ.

 

ರೆಕ್ಸ್ ಅವರ್ಸ್

ಪಪೆಟ್ ತಯಾರಿಕೆ ಮತ್ತು ನಿರ್ದೇಶನ
ಶ್ರವಣಕುಮಾರ್ ಹೆಗ್ಗೋಡು

ಬೆಂದ ಕಾಳು ಆನ್ ಟೋಸ್ಟ್

ರಚನೆ :  ಡಾ. ಗಿರೀಶ್ ಕಾರ್ನಾಡ
ನಿರ್ದೇಶನ : ಚಿದಂಬರರಾವ್ ಜಂಬೆ

ಆರ್ಕೇಡಿಯಾದಲ್ಲಿ ಪಕ್


ರಚನೆ: ಎಸ್. ರಾಮನಾಥ್
ನಿರ್ದೇಶನ: ಚಂದ್ರದಾಸನ್

 

ಆರ್ಕೇಡಿಯಾದಲ್ಲಿ ಪಕ್

ಆರ್ಕೇಡಿಯಾದಲ್ಲಿ ಪಕ್ ಒಂದು ಸಂಗೀತ ಪ್ರಧಾನ ಹಾಸ್ಯ ನಾಟಕ. ಎಲಿಜಬೆತ್ ಕಾಲದ ಆಸು ಪಾಸಿನ ಮುಖ್ಯ ಬರಹಗಾರ ಫಿಲಿಫ್ ಸಿಡ್ನಿ ಮತ್ತು ಜಗತ್ತಿನ ಶ್ರೇಷ್ಠ ನಾಟಕಕಾರ ಶೇಕ್ಸ್‌ಪಿಯರ್‌ನಿಂದ ಸ್ಫೂರ್ತಿಗೊಂಡು ಎಲ್ಲರ ರಂಜನೆಗೊದಗುವ ರುಚಿಕರ ಕಥೆಯಿದು. ಹಳೆ ಕಾಲದ ಆರ್ಕೇಡಿಯಾ ನಾಡಿನ ಪ್ರೀತಿ, ಪ್ರೇಮ, ಮೋಹ, ಸೇಡು, ರಾಜಕಾರಣಗಳ ಹೂರಣವುಳ್ಳ ಆರ್ಕೇಡಿಯಾದ ಕುಲೀನ (ರಾಜ) ಮನೆತನದ ರೋಚಕ ಕಥೆಯೆ ಮಿಂಚಿನ ತುಂಟತನಕ್ಕೆ ಮಿಡ್ ಸಮ್ಮರ್ ನೈಟ್ ಡ್ರೀಮ್ಸ್ ನಾಟಕದ ಪಕ್, ಮ್ಯಾಕ್‌ಬೆತ್ ನಾಟಕದ ಜಕ್ಕಿಣಿಯರ ಮಾಯದ ನಿಗೂಢತೆಗಳು ಆವರಿಸಿಕೊಂಡಿದ್ದು, ಜೂಲಿಯಸ್ ಸೀಸರ್, ಈಡಿಪಸ್, ಕಿಂಗ್‌ಲಿಯರ್‌ನ ಫಾಲ್‌ಸ್ಟಫ್ ಇತ್ಯಾದಿ ಹಲವು ನಾಟಕಗಳ ಪಾತ್ರಗಳು ಅರಳಿವೆ. ಯುರೋಪಿನ ಕಥೆಯಾದರೂ ಸಾಂಪ್ರದಾಯಿಕ ಭಾರತೀಯ ನಿರೂಪಣಾ ಶೈಲಿಯಲ್ಲಿ ನಾಟಕ ಹೆಣೆಯಲಾಗಿದ್ದು, ಸಮಕಾಲೀನ ಅಭಿರುಚಿಯ ಸಂಗೀತ ಮತ್ತು ನೃತ್ಯವನ್ನು ಸಂಯೋಜಿಸಲಾಗಿದೆ. ಹಾಡು, ನೃತ್ಯ, ಆಕರ್ಷಕ ಪರಿಕರ, ರಂಗಸಜ್ಜಿಕೆಗಳೆಲ್ಲವೂ ಎಲ್ಲಾ ಪ್ರಕಾರದ ಪ್ರೇಕ್ಷಕರನ್ನು ರಂಗಭೂಮಿಯತ್ತ ಸೆಳೆಯುವ ಆಶಯ ಹೊಂದಿದೆ. ದೂರದ ಆರ್ಕೇಡಿಯಾದ ರಾಜ ಮನೆತನದ ಕಥೆಯೊಂದು ಎಲ್ಲ ದೇಶ-ಕಾಲಗಳ ಕಥೆಯಾಗುವ ಸೋಜಿಗದ ತಮಾಷೆಯನ್ನು ನಾಟಕವು ಹಾಸ್ಯದ ಫಲುಕುಗಳಿಂದ, ಸಂಗೀತ, ನೃತ್ಯದ ಝಲಕ್‌ನೊಂದಿಗೆ ಪ್ರಸ್ತುತ ಪಡಿಸುತ್ತದೆ. “ರಂಗದ ಮೇಲಿನ ಎಲ್ಲ ಬಣ್ಣಗಳು, ಸಾರಿ ಹೇಳಲಿ ಮಾನವತೆಯ, ಎಲ್ಲರ ಮನೆಯ ಎಲ್ಲ ಕಿಟಕಿಗಳು, ಎಲ್ಲಾ ದಿಕ್ಕಿಗೆ ತೆರೆದಿರಲಿ” ಎನ್ನುವ ಜೀವನ ಪ್ರೀತಿಯ ಆಶಯ ನಾಟಕದ್ದಾಗಿದೆ.

ನಿರ್ದೇಶನ : ಶ್ರೀ ಚಂದ್ರದಾಸನ್, ಕೇರಳ
ಚಂದ್ರದಾಸನ್ ಅವರು ಕೇರಳದ ಕೊಚ್ಚಿಯಲ್ಲಿ ಲೋಕಧರ್ಮಿ ರಂಗಸಂಸ್ಥೆ ಮತ್ತು ಮಝೆವಿಲು (ಕಾಮನಬಿಲ್ಲು) ಮಕ್ಕಳ ನಾಟಕ ತಂಡದ ಸಂಸ್ಥಾಪಕರು ಹಾಗೂ ಭಾರತದ ಪ್ರಮುಖ ನಿರ್ದೇಶಕ, ನಟ ಮತ್ತು ಬರಹಗಾರರಲ್ಲಿ ಒಬ್ಬರು. ಇವರು ಕನ್ನಡ, ಮಲಯಾಳ, ಇಂಗ್ಲೀಷ್, ಸಂಸ್ಕೃತ, ಲಿಥುವೇನಿಯಾ, ಫಿನ್ನಿಶ್ ಮತ್ತು ತಮಿಳು ಭಾಷೆಗಳಲ್ಲಿ 35ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. 2018 ರಲ್ಲಿ ದೆಹಲಿಯಲ್ಲಿ ನಡೆದ ಮಹೀಂದ್ರ ಥಿಯೇಟರ್ ಫೆಸ್ಟಿವಲ್‌ನಲ್ಲಿ ಇವರ ಕರ್ಣಭಾರಮ್ ನಾಟಕವು ಶ್ರೇಷ್ಠ ನಾಟಕ ಪ್ರಶಸ್ತಿ ಪಡೆದಿದೆ. ಅಲ್ಲದೆ ಇವರು ಭಾರತದಾದ್ಯಂತ ನಾಟಕ ನಿರ್ದೇಶನ ಮತ್ತು ನಟನಾ ಕ್ಷೇತ್ರಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕೇರಳ ರಾಜ್ಯ ಸರಕಾರವು ರಂಗಭೂಮಿಯ ಇವರ ಸೇವೆಯನ್ನು ಮೆಚ್ಚಿ ರಾಜ್ಯಮಟ್ಟದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

 

 ರೆಕ್ಸ್ ಅವರ್‍ಸ್- ಡೈನೋ ಏಕಾಂಗಿ ಪಯಣ

ಸಂಬಂಧಗಳ ಜಾಲದಲ್ಲಿ ಸಿಲುಕಿ ಒಂಟಿಯಾಗಿರುವ ಆಧುನಿಕ ಮನುಷ್ಯ ಸಮಾಜವನ್ನು ಪ್ರಕೃತಿಯು ಇನ್ನೂ ಕಲ್ಪಿಸಿಯೇ ಇರದ ಕಾಲದ ಕಥೆ “ರೆಕ್ಸ್ ಅವರ್‍ಸ್- ಡೈನೋ ಏಕಾಂಗಿ ಪಯಣ”. ಜೀವ ರಹಸ್ಯಗಳಲ್ಲೇ ಅಮೋಘ ಬೆರಗಿನ ಪ್ರಾಣಿ ಸಂತತಿ-ಡೈನೋಸರ್ ನಿರ್ಣಾಯಕ ವಿಕಾಸದ ಹಂತದಲ್ಲಿ ಜೀವಿಸುವ ಸಮಯದ ಕಲ್ಪನೆಯೇ ರೆಕ್ಸ್ ಅವರ್‍ಸ್. ಮನುಷ್ಯ ಸಂತತಿಗಿಂತ ಎಷ್ಟೋ ಶತಮಾನಗಳಾಚೆಗೆ ಬರೀ ಗುಡ್ಡ, ಕಲ್ಲು, ಪೊದೆ ದಪ್ಪ ದಪ್ಪ ಮರಗಳು, ವಿರಳ ಒಡನಾಡಿಗಳ ಪರಿಸರದಲ್ಲಿ ದಟ್ಟ ತೊಡರುಗಳ ಹಾದಿಯಲ್ಲಿ ತನ್ನ ಬದುಕಿನ ಕ್ರಮವನ್ನು ಬೆಸೆದುಕೊಂಡು ಪ್ರತ್ಯೇಕಗೊಂಡ ಸೃಷ್ಟಿಯ ಬಲಿಷ್ಠ ಕುಡಿಯೊಂದು ಎದುರಿಸುವ ಪ್ರಾಕೃತಿಕ ಹೋರಾಟದ ಕಥೆಯಿದು. ಈ ಕಾಲ್ಪನಿಕ ಕಥೆಯಲ್ಲಿ ತಾಯಿಯಿಂದ ಬೇರ್ಪಟ್ಟ ಟಿ-ರೆಕ್ಸ್‌ನ ಒಂಟಿ ಮೊಟ್ಟೆಯ ಸಾಹಸ ಕಥೆಯನ್ನು ಹೇಳಲು ಗೊಂಬೆಗಳೇ ಪಾತ್ರಗಳಾಗಿವೆ. ಜಪಾನಿನ ಪ್ರಸಿದ್ಧ ಸಾಂಪ್ರದಾಯಿಕ ಗೊಂಬೆಯಾಟ ಪ್ರಕಾರ ಬುನ್ರಾಖುವನ್ನು ರೆಕ್ಸ್ ಅವರ್‍ಸ್ನಲ್ಲಿ ಅಳವಡಿಸಲಾಗಿದ್ದು ಭಾರತದ ಕಥೆಗಳಿಗನುಸಾರ ವಿನ್ಯಾಸಗೊಳಿಸಿ ಸಮಕಾಲೀನ ಶೈಲಿಗೆ ಮಾರ್ಪಾಡುಗೊಳಿಸಿರುವ ಈ ಬುನ್ರಾಖು ಗೊಂಬೆಯಾಟ ಪ್ರಕಾರ ರೆಕ್ಸ್ ಅವರ್‍ಸ್‌ನ ಪ್ರಸ್ತುತಿಗೆ ಜೀವಂತಿಕೆಯನ್ನು ಒದಗಿಸಿದೆ. ಪ್ರಸ್ತುತ ಪ್ರದರ್ಶನದಲ್ಲಿ ಮಾನವ ದೇಹರಚನೆಯ ಗೊಂಬೆಗಳ ಬದಲಾಗಿ ಪ್ರಾಣಿಗಳ ದೇಹರಚನೆಯ ಗೊಂಬೆಗಳನ್ನು ತಯಾರಿಸಲಾಗಿದೆ. ಇದರ ಜೊತೆಗೆ ನಾಟಕವು ಡಾರ್ವಿನ್‌ನ ವಿಕಾಸವಾದ ಸಿದ್ಧಾಂತವು ತಿಳಿಸುವ ಬದುಕುಳಿಯುವ ಸಾಮರ್ಥ್ಯಕ್ಕೆ ಒತ್ತು ನೀಡಿದ್ದು, ಪ್ರಾಕೃತಿಕ ಸಮತೋಲನವನ್ನು ಕಾಪಾಡಲು ನಿಸರ್ಗಕ್ಕೆ ಎಲ್ಲಾ ಪ್ರಾಣಿಗಳ ಬದುಕು ಮತ್ತು ತ್ಯಾಗ ಪ್ರಮುಖವಾದುದು ಎನ್ನುವುದನ್ನು ಆಕರವಾಗಿರಿಸಿಕೊಂಡಿದೆ.

ಧಡೂತಿ, ದೊಡ್ಡ ದೊಡ್ಡ ಡೈನೋಸರ್‌ಗಳ ಸೆಣಸಾಟ, ಸ್ನೇಹ, ಕಾಲ್ಪನಿಕ ಸಾಹಸಗಳಿಂದ ರಂಜಿಸುವ ರೆಕ್ಸ್ ಅವರ್‍ಸ್ ನಾಟಕವು ಜೀವ ವೈವಿಧ್ಯವನ್ನು ಅರಿತ ಸಮತೋಲಿತ ಬಾಳ್ವೆಯ ಆಶಯವನ್ನು ಹೊಂದಿದೆ. ರೆಕ್ಸ್‌ನ ಪುಟಾಣಿ ಮರಿಯೊಂದು ತನ್ನ ಒಂಟಿ ಸ್ಥಿತಿಯಲ್ಲಿ ಪ್ರತಿಕೂಲ ಪರಿಸ್ಥಿತಿ, ಸಂಬಂಧಗಳಲ್ಲಿ ಬದುಕಿಗಾಗಿ, ಸ್ನೇಹಕ್ಕಾಗಿ ನಡೆಸುವ ಏಕಾಂಗಿ ಹೋರಾಟವು ನಿಸರ್ಗ ಸಹಜ ಚಿತ್ರಣಗಳಿಂದ ತುಂಬಿದೆ. ಸಲಹುವ ಮೂಲದಿಂದ ಬೇರ್ಪಟ್ಟ ಜೀವಿಯೊಂದು ಎದುರಿಸುವ ನೈಸರ್ಗಿಕ ಪರಿಸ್ಥಿತಿಗಳು, ನಿಸರ್ಗದನಿವಾರ್‍ಯ ಹಿಂಸೆ, ಬಾಂಧವ್ಯದ ಸಾಧ್ಯತೆಗಳು, ಜೀವ ಕಾಯುವ ಅಕಸ್ಮಿಕ ಘಟನೆ ಎಲ್ಲವನ್ನು ಒಳಗೊಂಡ ಏಕಾಂಗಿ ಪಯಣ ರಸಪೂರ್ಣ ಯಾತ್ರೆಯಾಗಿದೆ.

ನಿರ್ದೇಶನ : ಶ್ರೀ ಶ್ರವಣ್‌ಕುಮಾರ್
ಶ್ರವಣ ಹೆಗ್ಗೋಡು ಇವರು ನೀನಾಸಂ ರಂಗ ಶಿಕ್ಷಣ ಕೇಂದ್ರದ ಪದವೀಧರರು. ನಂತರ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೌತ್ ಚಾಪ್ಟರ್‌ನಲ್ಲಿ ಡಿಸೈನಿಂಗ್ ತರಬೇತಿಯನ್ನು ಪಡೆದಿದ್ದಾರೆ. ರಂಗಭೂಮಿಯಲ್ಲಿ ತೀವ್ರ ಆಸಕ್ತಿಯಿಂದ ಹಲವಾರು ನಾಟಕಗಳಲ್ಲಿ ಅಭಿನಯಿಸಿದವರು 2013 ರಲ್ಲಿ ಪೆಪಟ್ ಥಿಯೇಟರ್‌ನತ್ತ ಆಸಕ್ತರಾಗಿ ದೆಹಲಿಯ ಅನುರೂಪ್ ರಾಯ್ ಅವರಲ್ಲಿ 5 ವರ್ಷಗಳ ಕಾಲ ಶಿಷ್ಯತ್ವ ಮಾಡಿದ್ದಾರೆ. ಸರ್ಕಲ್ ಆಫ್ ಲೈಫ್ ಡೈನಾಸರ್ ಎಂಬ ಎರಡು ಪಪೆಟ್ ನಾಟಕಗಳನ್ನು ನಿರ್ದೇಶಿಸಿರುವ ಇವರು ಟರ್ಕಿ, ಚೀನಾ ಮುಂತಾದ ದೇಶಗಳಲ್ಲಿ ಪಪೆಟ್ ಪ್ರದರ್ಶನಗಳನ್ನು ನೀಡಿದ್ದಾರೆ. ಇವರು ಜಪಾನಿನ ಸಾಂಪ್ರದಾಯಿಕ ಗೊಂಬೆಯಾಟ ಬುನ್ರಾಖು ಮಾದರಿಯನ್ನು ಅನುಸರಿಸುತ್ತಿದ್ದು, ಪ್ರಸ್ತುತ ರಂಗಾಯಣದ ಸಂಚಾರಿ ರಂಗಘಟಕಕ್ಕೆ ರೆಕ್ಸ್ ಅವರ್‍ಸ್ ಎನ್ನುವ ಪಪೆಟ್ ಪ್ರದರ್ಶನವನ್ನು ಸಿದ್ಧಪಡಿಸಿದ್ದಾರೆ.