ಮನ್ಮಥ ವಿಜಯ

ಸಂಗೀತ ಮತ್ತು ನಿರ್ದೇಶನ:  ಶ್ರೀ. ವೈ.ಎಂ.ಪುಟ್ಟಣ್ಣಯ್ಯ

ರಂಗಾಯಣ ಅರ್ಪಿಸುವ ಪೌರಾಣಿಕ ನಾಟಕ

ಗಿರಿಭಟ್ಟರ ತಮ್ಮಯ್ಯ ವಿರಚಿತ

 

ಮನ್ಮಥ ವಿಜಯ

 

ಸಂಪಾದಕರು : ಪ್ರೊ.ಎ.ವಿ. ಸೂರ್ಯನಾರಾಯಣಸ್ವಾಮಿ
ಶ್ರೀ. ಎಚ್.ಎಸ್. ಗೋವಿಂದಗೌಡ

ಸಂಗೀತ ಮತ್ತು ನಿರ್ದೇಶನ : ವೈ.ಎಂ. ಪುಟ್ಟಣ್ಣಯ್ಯ
ರಂಗವಿನ್ಯಾಸ : ಹೆಚ್.ಕೆ. ದ್ವಾರಕಾನಾಥ್
ವಸ್ತ್ರ ವಿನ್ಯಾಸ ಮತ್ತು ವರ್ಣಾಲಂಕಾರ : ಬಿ.ಎಂ. ರಾಮಚಂದ್ರ
ಬೆಳಕಿನ ವಿನ್ಯಾಸ : ಮಹೇಶ್ ಕಲ್ಲತ್ತಿ
ನೃತ್ಯ ಸಂಯೋಜನೆ : ಡಾ. ತುಳಸಿ ರಾಮಚಂದ್ರ
ರಂಗ ನಿರ್ವಹಣೆ : ಮಹದೇವ್
ಕ್ಲಾರಿಯೋನೆಟ್ : ಡಿ. ರಾಮು
ತಬಲಾ : ಜಯರಾಮ್ ಎಂ.ಎಸ್.
ಪ್ರಚಾರ ಕಲೆ : ಮೈಕ್ ಚಂದ್ರು

ವಿದ್ವಾನ್ ವೈ. ಎಂ. ಪುಟ್ಟಣ್ಣಯ್ಯ

ಸುಪ್ರಸಿದ್ಧ ಹಾರಮೋನಿಯಂ ವಾದಕರೂ ರಂಗಸಂಗೀತ ಶಿಕ್ಷಕರೂ ಆಗಿರುವ ವಿದ್ವಾನ್ ಶ್ರೀ. ವೈ.ಎಂ ಪುಟ್ಟಣ್ಣಯ್ಯನವರು ೧೯೪೪ನೆಯ ಇಸವಿ ಆಗಸ್ಟ್ ತಿಂಗಳ ಹದಿನೈದರಂದು ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಯರಿಗೇನಹಳ್ಳಿ ಗ್ರಾಮದಲ್ಲಿ, ಗುಬ್ಬಿ ಕಂಪನಿಯ ರಾಜಾ ಪಾರ್ಟ್ ಮುದ್ದಣ್ಣ ಮತ್ತು ಶ್ರೀಮತಿ ಲಕ್ಷ್ಮಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು. ಕಂಪನಿ ನಾಟಕದ ಹಾಡುಗಳನ್ನು ಕೇಳುತ್ತ ಹೇಳುತ್ತಲೇ ಬೆಳೆದ ಇವರು ಗುಬ್ಬಿಯ ಶ್ರೀ ಚನ್ನಬಸವೇಶ್ವರ ನಾಟಕ ಸಂಘದಲ್ಲಿ ಬಾಲ ನಟರಾಗಿ ಮಿಂಚಿದರು. ಕ್ರಮೇಣ ರಂಗಸಂಗೀತದ ನಾದ-ಲಯಗಳನ್ನು ಕರತಲಾಮಲಕ ಮಾಡಿಕೊಂಡು ತಮ್ಮ ಕಂಚಿನ ಕಂಠದಿಂದ ರಂಗಗೀತೆಗಳನ್ನು ಹಾಡುವುದರೊಂದಿಗೇ ಹಾರ್‍ಮೋನಿಯಂ ವಾದ್ಯವನ್ನೂ ಲೀಲಾಜಾಲವಾಗಿ ನುಡಿಸಲು ಕಲಿತರು. ಈ ವಿದ್ವತ್ತು ಪ್ರತಿಭೆಗಳನ್ನು ಗುರುತಿಸಿದ ಜನ ಇವರಲ್ಲಿ ರಂಗಗೀತೆಗಳನ್ನು ಹೇಳಿಸಿಕೊಳ್ಳಲು ಮುಗಿಬಿದ್ದರು. ಗುರುಗಳಾದ ವೇಣುವಿದ್ವಾನ್ ಸೋಮಶೇಖರಪ್ಪನವರಿಂದ ತಾವು ಕಲಿತ ಸಂಗೀತಪಾಠವನ್ನು ಶಿಷ್ಯರಿಗೆ ಧಾರೆಯೆರೆದರು. ನಂತರ ವೃತ್ತಿ ಕಂಪನಿಗಳಾದ ಗುಬ್ಬಿ ಕಂಪನಿ, ಹೊನ್ನಪ್ಪ ಭಾಗವತರ್ ಕಂಪನಿ, ಮಹದೇವಸ್ವಾಮಿ ಕಂಪನಿಗಳಲ್ಲಿ ಹಾರ್ಮೋನಿಯಂ ಮಾಸ್ಟರ್ ಆಗಿ ಸೇವೆ ಸಲ್ಲಿಸಿ ನಾಟಕ ನಿರ್ದೇಶನ ಮತ್ತು ಹಲವಾರು ನಾಟಕಗಳಿಗೆ ಸಂಗೀತ ನಿರ್ದೇಶನ ನಿರ್ವಹಿಸಿರುತ್ತಾರೆ. ಪ್ರಸ್ತುತ ಮೈಸೂರಿನ ಹಲವಾರು ನಾಟಕ ಸಂಘ ಸಂಸ್ಥೆಗಳಿಗೆ ಸಂಗೀತ ಹಾಗೂ ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಮೈಸೂರಿನ ಆಕಾಶವಾಣಿ ಕಲಾವಿದರಾದ ಪುಟ್ಟಣ್ಣಯ್ಯನವರು ವೃತ್ತಿ ಕಂಪನಿಯ ಪ್ರಮುಖ ನಾಟಕಗಳಾದ ಸುಭದ್ರ ಕಲ್ಯಾಣ, ಭೀಷ್ಮ ಪ್ರತಿಜ್ಞೆ, ಸಂಪೂರ್ಣ ಕೃಷ್ಣಲೀಲೆ, ಮನ್ಮಥ ವಿಜಯ ಮುಂತಾದ ನಾಟಕಗಳನ್ನು ಮೈಸೂರು ಆಕಾಶವಾಣಿಗಾಗಿ ನಿರ್ದೇಶಿರುತ್ತಾರೆ.

ರಂಗಸಂಗೀತ ಶಿಕ್ಷಕ ಪುಟ್ಟಣ್ಣಯ್ಯ ಎಂದೇ ಇವರನ್ನು ಮೊದಲು ಗುರುತಿಸಿದ್ದ ಮೈಸೂರಿಗರು. ಕ್ರಮೇಣ ಹಾರ್‍ಮೋನಿಯಂ ವಾದ್ಯದ ಮೇಲೆ ಇವರಿಗಿರುವ ಪ್ರಭುತ್ವವನ್ನು ಕಂಡು ಬೆರಗಾದರು. ಆ ವಾದ್ಯದ ಸ್ವರನಳಿಕೆಗಳ ಮೇಲೆ ಇವರ ಕೈಬೆರಳುಗಳು ಲಬದ್ದವಾಗಿ ನರ್ತಿಸುವುದನ್ನು ನೋಡುವುದೇ ಸೊಗಸು. ರಂಗಪಾತ್ರಗಳ ಭಾವ-ಭಾವನೆಗಳಿಗೆ ಅನುಗುಣವಾಗಿ ಹೊರಹೊಮ್ಮುವ ಆ ಸಂಗೀತ ಕೇಳುಗರನ್ನು ಬೇರೊಂದು ಲೋಕಕ್ಕೇ ಕರೆದೊಯ್ಯುತ್ತದೆ. ವೈಕುಂಠ ಕೈಲಾಸಗಳ ವೈಭವವನ್ನು, ಭಕ್ತಿ ವೈರಾಗ್ಯಾದಿ ಭಾವಗಳನ್ನು, ನೋವು ನಲಿವುಗಳ ತೀವ್ರತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುವ ಶಕ್ತಿ ಇವರ ಹಾರ್‍ಮೋನಿಯಂ ವಾದನದ ಗಾರುಡಿಗಿದೆ. ಒಂದು ಕಾಲಕ್ಕೆ ಗುಬ್ಬಿ ಕಂಪನಿ, ಹೊನ್ನಪ್ಪ ಭಾಗವತರ ಕಂಪನಿ, ಹಿರಣ್ಣಯ್ಯ ಮಿತ್ರಮಂಡಳಿಗಳಂತಹ ವೃತ್ತಿನಾಟಕ ಕಂಪನಿಗಳ ಜೀವಾಳವಾಗಿದ್ದ ಇವರನ್ನು ಹಾರ್‍ಮೋನಿಯಂ ಮಾಸ್ಟರ್ ಎಂದೇ ರಂಗಕ್ಷೇತ್ರ ಗೌರವಿಸಿದೆ. ಇಂದಿಗೂ ಜನ ನೆನೆ ನೆನೆದು ಸಂತೋಷಪಡುವ ಕುರುಕ್ಷೇತ್ರ, ಸದಾರಮೆಯಂತಹ ನಾಟಕಗಳಲ್ಲಿ ಇವರು ಹಾರ್‍ಮೋನಿಯಂ ವಾದನದಿಂದ ಸೃಷ್ಟಿಸಿದ ಭಾವನಾಸಾರೀ ವಾತಾವರಣ ಮರೆಯಲಾಗದಂಥದು.

ಹೆಸರಾಂತ ಗುಬ್ಬಿ ಕಂಪನಿಯ ಪ್ರಸಿದ್ಧ ನಾಟಕವಾದ ‘ಸದಾರಮಾ ನಾಟಕಂ’ ವನ್ನು ಮೈಸೂರಿನ ರಂಗಾಯಣದ ಕಲಾವಿದರಿಗೆ ಸಂಗೀತ ನೀಡಿ ನಿರ್ದೇಶನ ಮಾಡಿದ್ದಾರೆ. ಈ ‘ಸದಾರಮಾ ನಾಟಕಂ’ ನಾಟಕವು ಕರ್ನಾಟಕವಲ್ಲದೆ ಹೊರ ರಾಜ್ಯಗಳೂ ಸೇರಿದಂತೆ ಅರವತ್ತಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನಗಳನ್ನು ಕಂಡ, ಬೆಳಗಾಂವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲಿಯೂ ಪ್ರದರ್ಶನಗೊಂಡ, ಜನ ಮಾನಸವನ್ನು ಸೂರೆಗೊಂಡ ಅತ್ಯಂತ ಬೇಡಿಕೆಯ ನಾಟಕವಾಗಿದೆ. ಅಳಿವಿನ ಅಂಚಿನಲ್ಲಿರುವ ವೃತ್ತಿರಂಗಭೂಮಿಯ ಸಂಗೀತವನ್ನು ಉಳಿಸಿ ಬೆಳೆಸಬೇಕೆಂಬ ಹಂಬಲದೊಂದಿಗೆ ‘ರಂಗ ಗೀತಾಂಜಲಿ’ ಎಂಬ ತಂಡವನ್ನು ಕಟ್ಟಿದ ಇವರು ಆಸಕ್ತ ಯುವ ಪೀಳಿಗೆಗೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ರಂಗಸಂಗೀತವನ್ನು ಕಲಿಸಿ, ನಾಡಿನಾದ್ಯಂತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿದ್ದಾರೆ.

ಶ್ರೀ ವೈ.ಎಂ. ಪುಟ್ಟಣ್ಣಯ್ಯನವರಿಗೆ ೨೦೧೭ ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ರಂಗಚಾರ್ಲು ಪ್ರಶಸ್ತಿ, ಪದ್ದಣ್ಣ ಪ್ರಶಸ್ತಿ, ಹಂಸಧ್ವನಿ ಪ್ರಶಸ್ತಿ, ಸಂಸ್ಕಾರ ಭಾರತಿ, ಗಾನಭಾರತಿ, ರಂಗಭಾರತಿ ಮುಂತಾದ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಎಪ್ಪತ್ತೊಂದು ವಸಂತಗಳನ್ನು ಕಳೆದಿರುವ ಪುಟ್ಟಣ್ಣಯ್ಯನವರನ್ನು ಇತ್ತೀಚೆಗೆ ಕರ್ನಾಟಕ ಸರ್ಕಾರವು ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯದ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿದೆ.

ನಿರ್ದೇಶಕರ ನುಡಿ

ಎ.ವಿ.ವರದಾಚಾರ್ಯರ ರತ್ನಾವಳಿ ಕಂಪನಿಯ ನಾಟಕ ‘ಮನ್ಮಥ ವಿಜಯ’ – ಇದು ಸಂಪೂರ್ಣ ಶಾಸ್ತ್ರೀಯ ಪೌರಾಣಿಕ ನಾಟಕ. ಕಾಳಿದಾಸನ ‘ಕುಮಾರ ಸಂಭವ’ ಹರಿಹರನ ಗಿರಿಜಾ ಕಲ್ಯಾಣ ಇವುಗಳಿಂದ ಸ್ಫೂರ್ತಿ ಪಡೆದ ಈ ನಾಟಕದಲ್ಲಿ ಸ್ವತಃ ವರದಾಚಾರ್ಯರೇ ಮನ್ಮಥನ ಪಾತ್ರಧಾರಿಯಾಗಿ ಈ ನಾಟಕವನ್ನು ಜಾವಳಿ, ಸೀಸ ಪದ್ಯ, ಕಂದ, ವೃತ್ತ ಇತ್ಯಾದಿ ಕಂಪನಿಯ ಮಟ್ಟುಗಳಿಂದ, ಈ ‘ಮನ್ಮಥ ವಿಜಯ’ ನಾಟಕವನ್ನು ಶ್ರೀಮಂತಗೊಳಿಸಿದ್ದರು. ಪ್ರಸ್ತುತ ಸುಮಾರು ಏಳು ಗಂಟೆಯ ನಾಟಕವನ್ನು ಮೂರು ಗಂಟೆಗಳಿಗೆ ಸೀಮಿತಗೊಳಿಸಿ, ಹಳೆಯ ಕಂಪನಿಯ ಹಾಗೂ ಹೊಸ ಮಟ್ಟುಗಳನ್ನು ಸೇರಿಸಿ ರಂಗಾಯಣದ ಹಳೇ ಬೇರುಗಳನ್ನು ಹೊಸ ಚಿಗುರುಗಳನ್ನೊಳಗೊಂಡ ಸುಮಾರು ಇಪ್ಪತ್ತೆಂಟು ಕಲಾವಿದರ ತಂಡದೊಂದಿಗೆ ಈ ನಾಟಕದ ಪ್ರದರ್ಶನವನ್ನು ಸಿದ್ಧಪಡಿಸಲಾಗಿದೆ. ರಂಗಾಯಣದ ನಿರ್ದೇಶಕರು, ಜಂಟಿ ನಿರ್ದೇಶಕರು, ಸಿಬ್ಬಂದಿ ವರ್ಗದವರು ಹೆಗಲು ಕೊಟ್ಟು, ತುಂಬು ಸಹಕಾರದೊಂದಿಗೆ ಹಳೆಯ ನಾಟಕವನ್ನು ಕಣ್ಮರೆಯಾಗದಂತೆ ಪ್ರೋತ್ಸಾಹಿಸುತ್ತಿದ್ದಾರೆ. ಇವರೆಲ್ಲರನ್ನೂ ನಾನು ಆತ್ಮೀಯವಾಗಿ ಅಭಿನಂದಿಸುತ್ತೇನೆ.
– ಶ್ರೀ ವೈ.ಎಂ. ಪುಟ್ಟಣ್ಣಯ್ಯ

ಗುರುಭ್ಯೋನಮಃ

ಎ.ವಿ. ವರದಾಚಾರ್‍ಯರ ನಾಟಕ ಕಂಪನಿಯ ಹೆಸರಾಂತ ನಾಟಕಗಳಲ್ಲಿ ಒಂದಾದ ಮನ್ಮಥ ವಿಜಯ ಎಂಬ ಪೌರಾಣಿಕ ನಾಟಕ, ಪುಸ್ತಕರೂಪದಲ್ಲಿ ಪ್ರಕಟವಾಗಿ, ಈಗ ರಂಗಾಯಣದಿಂದ ರಂಗದ ಮೇಲೆ ಪ್ರದರ್ಶನ ಕಾಣುತ್ತಿರುವುದು ತುಂಬಾ ಸಂತಸದ ಸಂಗತಿ. ಸಂಗೀತ, ಸಾಹಿತ್ಯ ಪ್ರಧಾನವಾದ ಪೌರಾಣಿಕ ನಾಟಕಗಳೇ ಮರೆತು ಹೋಗುತ್ತಿರುವಾಗ, ಇಂತಹ ನಾಟಕಗಳ ಪ್ರಕಟಣೆ, ಪ್ರದರ್ಶನಗಳು ಅವಶ್ಯಕವಾಗಿವೆ. ಹಿಂದಿನ ಕಾಲದ ಸಂಸ್ಕೃತ ಪಂಡಿತರುಗಳಿಂದ ಮೈಸೂರಿನ ಮಹಾರಾಜರು ಬರೆಸಿದ ಪೌರಾಣಿಕ ನಾಟಕಗಳು, ಪುಸ್ತಕ ರೂಪದಲ್ಲಿ ಹಾಗೂ ರಂಗದ ಮೇಲೆ ಬರುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ.

ಶಿವನ ತಪಸ್ಸನ್ನು ಕೆಡಿಸಲು ಬಂದ ಮನ್ಮಥನು, ಪರಶಿವನ ಆ ತೇಜಸ್ಸನ್ನು ನೋಡಿ ಮುಗ್ಧನಾಗಿ ಹಾಡುವ ರಾಗಮಾಲಿಕೆಯ ಕಂದಗಳ ಸಾಹಿತ್ಯದ ವೈಖರಿ ‘ನ ಭೂತೊ ನ ಭವಿಷ್ಯತಿ’. ಶ್ರೀ ವರದಾಚಾರ್‍ಯರೇ ಅಭಿನಯಿಸುತ್ತಿದ್ದ ಮನ್ಮಥನ ಪಾತ್ರವನ್ನು ಅವರ ನಂತರ ಅಭಿನಯ ವಿಶಾರದ ಶ್ರೀ ಜಿ. ನಾಗೇಶರಾಯರು ಅಭಿನಯಿಸಿ, ತಮ್ಮ ಅಮೋಘವಾದ ಕಂಚಿನ ಕಂಠದಿಂದ ರಾಗಮಾಲಿಕೆಯ ಕಂದಗಳನ್ನು ಹಾಡಿ ಜನರ ಕರತಾಡನಗಳ ಮೆಚ್ಚುಗೆ ಪಡೆದಿದ್ದರು. ಹಾಗೆಯೇ ಮಳವಳ್ಳಿ ಸುಂದರಮ್ಮನವರು ರತಿಯ ಪಾತ್ರದಲ್ಲಿ ಹಾಡುತ್ತಿದ್ದ, ಪ್ರಾಣೇಶನೆ ಪೋಗಬೇಡವೊ ಬೇಡಿಕೊಂಬೆನು ಎಂಬ ‘ನಾಟಕುರಂಜಿ’ ರಾಗದ ಹಾಡನ್ನು ಮರೆಯುವಂತೆಯೇ ಇಲ್ಲ. ಹೀಗೆ ಸಾಹಿತ್ಯ ಸಂಗೀತ ಪ್ರಧಾನವಾದ ನಾಟಕಗಳನ್ನು ಇಂದು ನೋಡುವುದೇ ಕನಸಾಗಿದೆ. ಕರ್ನಾಟಕದ ಜನತೆ ನಮ್ಮ ಹಳೆಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪೌರಾಣಿಕ ನಾಟಕಗಳನ್ನು ನೋಡಿ ಪ್ರೋತ್ಸಾಹಿಸಿದಾಗ ಮಾತ್ರ ನಮ್ಮ ಪೌರಾಣಿಕ ನಾಟಕಗಳು ಜೀವಂತವಾಗಿ ಉಳಿಯಲು ಸಾಧ್ಯ.

‘ಹೊಸ ಚಿಗುರು ಹಳೇ ಬೇರು ಕೂಡಿರಲು ಮರ ಸೊಬಗು’ ಎಂಬಂತೆ, ಹೊಸದನ್ನು ಬಿಡದೆ, ಹಳೆಯದನ್ನು ಮರೆಯದೇ, ನಮ್ಮ ಪುರಾತನ ರಂಗಭೂಮಿಯ ಕಲೆಯನ್ನು ಉಳಿಸಿ, ಬೆಳೆಸುವ ಹೊಣೆ ಕರ್ನಾಟಕದ ಜನತೆಯ ಮೇಲಿದೆ. ಜನತೆ ಅದನ್ನು ಮಾಡದಿದ್ದರೆ ಈಗಲೇ ಕಣ್ಮರೆಯಾಗುತ್ತಿರುವ ಪೌರಾಣಿಕ ರಂಗಭೂಮಿಯ ಕಲೆ ಹೀಗೆ ಇತ್ತಂತೆ.. ಹಾಗೆ ಇತ್ತಂತೆ.. ಎಂದು ಹೇಳುವ ಪರಿಸ್ಥಿತಿ ಬರಬಹುದು. ಕೊನೆಗೊಮ್ಮೆ ಅದೂ ಕೂಡಾ ಜನತೆಯ ಸ್ಮೃತಿ ಪಟಲದಿಂದ ಅಳಿಸಿ ಹೋಗುತ್ತದೇನೋ ಎಂಬ ಭಯ ಕಾಡುತ್ತದೆ. ನಾಟಕ ಕಲಿಸುವ ಮೇಷ್ಟ್ರುಗಳು, ಹಳೆಯ ನಾಟಕಗಳನ್ನು ಕಲಿಸಿ ಪ್ರದರ್ಶಿಸುವ ಹೊಣೆಯನ್ನು ಹೊತ್ತುಕೊಂಡರೆ ಮಾತ್ರ, ನಮ್ಮ ಪೌರಾಣಿಕ ನಾಟಕಗಳು ಮಾರ್ಕಂಡೇಯನಂತೆ ಮತ್ತೆ ಜೀವ ತಾಳಿ ಕನ್ನಡ ಕಲಾಭಿಮಾನಿಗಳ ಪ್ರೋತ್ಸಾಹ ಆಶೀರ್ವಾದಗಳನ್ನು ಪಡೆಯಬಹುದು. ಇತ್ತೀಚೆಗೆ ಅನೇಕ ರಂಗ ತಂಡಗಳು ಹಳೆಯ ನಾಟಕಗಳ ಗೀಳನ್ನು ಹಚ್ಚಿಕೊಳ್ಳುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆಯಾಗಿದೆ.

ವಿರಾಟಪರ್ವ, ಮನ್ಮಥವಿಜಯ, ರಾಮಾಂಜನೇಯ ಯುದ್ಧ ಮುಂತಾದ ಕಬ್ಬಿಣದ ಕಡಲೆಗಳಂತಿರುವ ನಾಟಕಗಳು, ನಾಟಕ ಕಲಿಯುವ ಕಲಾವಿದರಿಗೆ ಹಾಗೂ ಕಲಿಸುವ ಮಾಸ್ತರಿಗೇ ಪರೀಕ್ಷಾರ್ಥವಾದ ಸವಾಲನ್ನೆಸೆಯುವ ನಾಟಕಗಳು. ಕೊನೆಯ ಪಕ್ಷ ಒಂದೊಂದು ಪ್ರಯೋಗವನ್ನಾದರೂ ಮಾಡುವ ಪ್ರಯತ್ನ ಮಾಡಿದರೆ, ಮಾಸ್ತರಿಗೆ ಹಾಗೂ ಕಲಾವಿದರಿಗೆ ಭಾಷೆ ಶುದ್ಧವಾಗುತ್ತದೆ. ಇಂತಹ ಕಠಿಣ ಪರಿಶ್ರಮಕ್ಕೆ ಕೈಹಾಕುವ ಮನಸ್ಸನ್ನು ಕೊಡುವಂತೆ ಆ ಕಲಾಮಾತೆ ಭುವನೇಶ್ವರಿಯನ್ನು ಪ್ರಾರ್ಥಿಸುತ್ತೇನೆ. ಇಂತಹ ಮಹತ್ತರ ಸವಾಲಿಗೆ ತಮ್ಮನ್ನು ಒಡ್ಡಿಕೊಂಡಿರುವ ಶ್ರೀಯುತ ಪುಟ್ಟಣ್ಣಯ್ಯನವರಿಗೂ, ರಂಗಾಯಣದ ಕಲಾವಿದರಿಗೂ ಶುಭ ಹಾರೈಸುತ್ತೇನೆ.

ವಿದ್ವಾನ್ ಆರ್. ಪರಮಶಿವನ್
ಪ್ರಖ್ಯಾತ ಕಂಪನಿ ನಾಟಕಗಳ ನಿರ್ದೇಶಕರು ಹಾಗೂ ಹಾರ್ಮೋನಿಯಂ ಮಾಸ್ಟರ್

ನಾಟಕ ಹಾಗೂ ನಾಟಕಕಾರರ ಕುರಿತು

ಕ್ರಿ.ಶ. 1880 ರಲ್ಲಿ ಮೈಸೂರಿನ ಅರಮನೆಗೆ ಸೇರಿದ ಕೆಲವು ಕಲಾವಿದರು ‘ಶ್ರೀ ಶಾಕುಂತಲಾ ಕರ್ಣಾಟಕ ನಾಟಕ ಸಭಾ ಎಂದು ಅವರ ಮಂಡಳಿಗೆ ನಾಮಕರಣ ಮಾಡಿ, ಆಸ್ಥಾನ ವಿದ್ವಾಂಸರಾದ ಅಭಿನವ ಕಾಳಿದಾಸ ಬಸವಪ್ಪಶಾಸ್ತ್ರಿಗಳು ಅನುವಾದಿಸಿದ ಶಾಕುಂತಲಾ ನಾಟಕವನ್ನು ಅಭಿನಯಿಸಿದರು. ಇದರಲ್ಲಿ ಲಕ್ಷ್ಮೀಪತಿ ಶಾಸ್ತ್ರಿ (ಶಕುಂತಲೆ) ಎಂ.ಡಿ. ಸುಬ್ಬಣ್ಣ (ದುಷ್ಯಂತ), ಗಿರಿಭಟ್ಟರ ತಮ್ಮಯ್ಯ (ಕಣ್ವ), ದೇವರಾಜ ಅರಸು (ವಿದೂಷಕ), ಬಿ. ಬಾಳಾಜಿರಾಯ, ಬಿ. ಭೀಮರಾಯ, ಸಿ. ರಾಮಚಂದ್ರರಾಯ, ಸಿ. ಸುಬ್ಬರಾಯ ಮೊದಲಾದವರು ಪಾತ್ರವಹಿಸಿದ್ದರು. ಈ ಮಂಡಳಿಯು 1882ರಲ್ಲಿ ಶ್ರೀ ಚಾಮರಾಜೇಂದ್ರ ಕರ್ಣಾಟಕ ಸಭಾ ಎಂದು ನಾಮಕರಣಗೊಂಡಿತು. ಯಕ್ಷಗಾನವನ್ನು ಚೆನ್ನಾಗಿ ಬಲ್ಲವರಾಗಿದ್ದ ಬಿಡಾರಂ ಕೃಷ್ಣಪ್ಪನವರು ಮೇಲ್ವಿಚಾರಕರಾಗಿದ್ದರೆ, ಯಕ್ಷಗಾನದಲ್ಲಿ ಅನುಭವವಿದ್ದ ಕವಿ ಗಿರಿಭಟ್ಟರ ತಮ್ಮಯ್ಯನವರು ಅವರಿಗೆ ಸಹಾಯಕರಾಗಿದ್ದರು.

ಕ್ರಿ.ಶ. 1904 ರಲ್ಲಿ ರತ್ನಾವಳಿ ಥಿಯೇಟ್ರಿಕಲ್ ಕಂಪನಿ ಪ್ರಾರಂಭವಾಗಿ, ಅಂದಿನಿಂದ ಇಪ್ಪತ್ತು ವರ್ಷಗಳ ಕಾಲ ಎ.ವಿ. ವರದಾಚಾರ್‍ಯರು ಕಂಪನಿಯನ್ನು ಯಶಸ್ವಿಯಾಗಿ ನಡೆಸಿದರು. ಆರು ವರ್ಷಗಳೊಳಗೆ ಅದು ಸುಮಾರು ಇಪ್ಪತ್ತು ನಾಟಕಗಳನ್ನು ಸಿದ್ಧಪಡಿಸಿಕೊಂಡು ನೂರಾರು ಪ್ರದರ್ಶನಗಳನ್ನು ನಾಡಿನಾದ್ಯಂತ ನೀಡಿತು. ಅವುಗಳಲ್ಲಿ ರತ್ನಾವಳಿ, ಶಾಕುಂತಲ ಮತ್ತು ಮನ್ಮಥವಿಜಯ ನಾಟಕಗಳು ಅಂದಿನ ಪ್ರೇಕ್ಷಕರ ಮೇಲೆ ಅಚ್ಚಳಿಯದಂತಹ ಪರಿಣಾಮವನ್ನು ಬೀರಿದ್ದವು.

ಸಂಗೀತದಲ್ಲಿ ಶೃತಿ, ರಾಗ, ತಾಳ, ಸಾಹಿತ್ಯ, ಆಲಾಪನೆ, ಸ್ವರಗಳು ಮತ್ತು ವಾದ್ಯಗಳು ಒಂದನ್ನೊಂದು ಪ್ರೀತ್ಯಾದರದಿಂದ ಕೂಡಿದರೆ ಮಾತ್ರ ಸಂಗೀತ ಪ್ರಿಯರಿಗೆ ರಸಾನಂದವಾಗುತ್ತದೆ. ಸಾಹಿತ್ಯದಲ್ಲಿ ಕಥೆ, ಘಟನೆ, ಛಂದಸ್ಸು, ಶೈಲಿ, ಅಲಂಕಾರ, ಧ್ವನಿ ಮತ್ತು ರಸಗಳು ಒಂದನ್ನೊಂದು ಅವಲಂಬಿಸಿ, ಅನ್ಯೋನವಾಗಿ ಸೇರಿದರೆ ಮಾತ್ರ ಸಾಹಿತ್ಯ ಪ್ರಿಯರಿಗೆ ಹರ್ಷೋತ್ಸಾಹವಾಗುತ್ತದೆ. ಹಾಗೆಯೇ ನಾಟಕದಲ್ಲಿ ಕಥೆ, ಸಂಭಾಷಣೆ, ಅಭಿನಯ, ಸಂಗೀತ, ನರ್ತನ, ದೀಪಾಲಂಕಾರ, ವಸ್ತ್ರಾಲಂಕಾರ, ಪರದೆಗಳು, ರಸಗಳು ಮತ್ತು ವಾದ್ಯಗಳೆಲ್ಲವೂ ಒಂದಕ್ಕೊಂದು ಪೋಷಕವಾಗಿ, ಹಾಲು ಜೇನಿನಂತೆ ಸಾಮರಸ್ಯದಿಂದ ಸಮ್ಮಿಲನಗೊಂಡರೆ ಮಾತ್ರ ರಂಗಪ್ರಿಯರಿಗೆ ರಸೋಲ್ಲಾಸವಾಗುತ್ತದೆ.

ಆ ಕಾಲದಲ್ಲಿ ಎ.ವಿ. ವರದಾಚಾರ್, ಕೆ. ಅಶ್ವತ್ಥಮ್ಮ, ಮಳವಳ್ಳಿ ಸುಂದರಮ್ಮ, ಎಂ. ಸುಬ್ಬರಾವ್ ಮತ್ತು ಹೊಳಲಿ ಸುಬ್ರಹ್ಮಣ್ಯ ಶಾಸ್ತ್ರಿಗಳೇ ಮೊದಲಾದ ಮಹಾನ್ ಕಲಾರತ್ನರು, ಗಿರಿಭಟ್ಟರ ತಮ್ಮಯ್ಯ ವಿರಚಿತ ಮನ್ಮಥ ವಿಜಯ ನಾಟಕವನ್ನು ಅದರಲ್ಲಿ ಬರುವ ರಂಗಗೀತೆಗಳೊಂದಿಗೆ ತನ್ಮಯತೆಯಿಂದ ಅಭಿನಯಿಸಿ, ಸಹೃದಯರ ಅಚ್ಚರಿಯ ರೋಮಾಂಚನದ ಪ್ರತಿಕ್ರಿಯೆಗೆ ಕಾರಣ ಪುರುಷರಾಗಿರುತ್ತಾರೆ.

ವರದಾಚಾರ್‍ಯರಿಗೆ ಅಪಾರವಾದ ಕೀರ್ತಿ ತಂದುಕೊಟ್ಟ ಮನ್ಮಥ ವಿಜಯ ನಾಟಕದ ಹಿನ್ನೆಲೆ ಕುರಿತು ಬಿ. ಪುಟ್ಟಸ್ವಾಮಯ್ಯನವರು ಹೀಗೆ ಬರೆದಿದ್ದಾರೆ. “ಕಾಳಿದಾಸನ ಕುಮಾರಸಂಭವ, ಹರಿಹರನ ಗಿರಿಜಾಕಲ್ಯಾಣ ಇವುಗಳಿಂದ ಸ್ಫೂರ್ತಿ ಪಡೆದ ಈ ನಾಟಕದ ಕರ್ತೃ ಶ್ರೀನಿವಾಸ ಅಯ್ಯಂಗಾರ್‍ಯನು ಗಂಗಾಧರನ ವರಪ್ರಸಾದದಿಂದ ತಾನು ಹುಟ್ಟಿದುದಾಗಿ ಪ್ರಾರಂಭದಲ್ಲಿ ಹೇಳಿಕೊಂಡಿದ್ದಾನೆ. ನಾಟಕದ ಮೊದಲ ಮೂರು ಅಂಕಗಳು ಮುಖ್ಯವಾಗಿ ಕುಮಾರ ಸಂಭವದ ಕತೆಯನ್ನೇ ಅನುಸರಿಸುತ್ತದೆ. ದಕ್ಷಯಜ್ಞ, ದಕ್ಷನಿಂದ ಪತಿನಿಂದನೆಯನ್ನು ಕೇಳಿದ ದಾಕ್ಷಾಯಿಣಿ, ಅಗ್ನಿಯಲ್ಲಿ ದೇಹತ್ಯಾಗ ಮಾಡುವುದು, ವೀರಭದ್ರನಿಂದ ಯಜ್ಞ ಧ್ವಂಸ, ತ್ರಿಪುರಾಸುರರ ಉಪಟಳ, ಮುಂದೆ ಶಿವಸೇನಾಧಿಪತಿಯಾಗುವ ಕುಮಾರನನ್ನು ಪಡೆಯಲು ಮನ್ಮಥನಿಂದ ಶಿವನ ತಪೋಭಂಗ, ಕಾಮದಹನ, ಗಿರಿಜಾ ಕಲ್ಯಾಣ ಇವು ಈ ಅಂಕಗಳ ಕಥಾವಸ್ತು.

ಕೊನೆಯ ಎರಡು ಅಂಕಗಳಲ್ಲಿ ಹರಿವಂಶದಲ್ಲಿ ಹೇಳುವ ಪ್ರದ್ಯುಮ್ನನ ಕತೆ ನಿರೂಪಿತವಾಗಿದೆ. ಗಿರಿಜೆಯ ವರದಂತೆ ಪತಿಯ ಪುನರ್‍ಮಿಲನಕ್ಕಾಗಿ ಹಂಬಲಿಸುತ್ತಿದ್ದ ರತಿದೇವಿಯನ್ನು ಶಂಬರನೆಂಬ ರಾಕ್ಷಸ ಅಪಹರಿಸಿ ಅಂತಃಪುರದಲ್ಲಿ ಸೆರೆಯಿಡುತ್ತಾನೆ. ಕೆಲವು ದಿನಗಳ ಅನಂತರ ಬೆಸ್ತನೊಬ್ಬನು ಸಮುದ್ರದಲ್ಲಿ ಮೀನಿನ ಹೊಟ್ಟೆಯಲ್ಲಿ ಸಿಕ್ಕ ಮಗುವನ್ನು ಶಂಬರನಿಗೆ ತಂದು ಕೊಡುವನು. ತನ್ನ ಮೃತ್ಯುವಿಗೆ ಕಾರಣನಾಗುವೆನೆಂದು ನಾರದನಿಂದ ತಿಳಿದು ತಾನೇ ಅಪಹರಿಸಿ ಸಮುದ್ರಕ್ಕೆಸೆದ ಕೃಷ್ಣನ ಮಗನೇ ಆ ಶಿಶುವೆಂದು ತಿಳಿಯದೆ ಶಂಬರನು ಮಗುವನ್ನು ಸಾಕಲು ಮಾಯಾವತಿಯ ಬಳಿಗೆ ಕಳುಹಿಸುವನು. ರತಿದೇವಿ ಶಂಬರನಿಗೆ ಕೊಟ್ಟ ಪರಿಚಯದ ಹೆಸರು ಮಾಯಾವತಿ.

ಹದಿನೆಂಟು ವರುಷಗಳ ಅನಂತರ ಮಾಯಾವತಿ ಬೆಳೆಸುತ್ತಿದ್ದ ಮಗು ಯುವಕನಾದಾಗ ಐದನೆಯ ಅಂಕದ ಆರಂಭ. ಮಾಯಾವತಿ ತಾನು ಬೆಳೆಸಿದ ಕುಮಾರನನ್ನು ಕಾಮಿಸಿ ಅಂತಃಪುರಕ್ಕೆ ಕರೆಸಿಕೊಂಡಿರುವಳೆಂದು ಸಖಿಯರ ಮಾತುಗಳಿಂದ ತಿಳಿಯುತ್ತದೆ. ಮಾಯಾವತಿ ಪ್ರದ್ಯುಮ್ನ ಕುಮಾರನಿಗೆ ತನ್ನ ಪ್ರೇಮವನ್ನು ತಿಳಿಸುತ್ತಾಳೆ. ಸಾಕುತಾಯಿಯೊಡನೆ ಆಶ್ರಯ ಸಂಬಂಧವನ್ನು ನಿರಾಕರಿಸಿದ ಪ್ರದ್ಯುಮ್ನಕುಮಾರನು, ಆಮೇಲೆ ನಾರದ ಮಹರ್ಷಿಯಿಂದ, ಹಿಂದಿನ ಭವದಲ್ಲಿ ತಾನು ಮನ್ಮಥನೆಂದೂ ಮಾಯಾವತಿ ರತಿದೇವಿಯೆಂದೂ ತಿಳಿದು ಅವಳನ್ನೂ ಪರಿಗ್ರಹಿಸುತ್ತಾನೆ. ಈ ವಿಚಾರವನ್ನು ತಿಳಿದ ಶಂಬರನು ಕೋಪಾವೇಶದಿಂದ ಅಂತಃಪುರಕ್ಕೆ ಬಂದು ಪ್ರದ್ಯುಮ್ನ ಕುಮಾರನಿಂದ ಹತನಾಗುತ್ತಾನೆ.

ದೀರ್ಘವಾದ ಈ ಕತೆಯನ್ನು ನಾಟಕಕ್ಕೆ ಅಳವಡಿಸಿಕೊಳ್ಳುವುದರಲ್ಲಿ ಅನೇಕ ಘಟನೆಗಳು ಪರೋಕ್ಷದಲ್ಲಿ ನಡೆಯುವುದು ಅನಿವಾರ್ಯವಾಗುತ್ತದೆ. ಆದರೂ ರಚನೆಯ ಜಾಣ್ಮೆ ಹಾಗೂ ಅಭಿನಯ ಕೌಶಲದಿಂದ ಕಥೆ ಸುಲಭವಾಗಿ ಪ್ರೇಕ್ಷಕರಿಗೆ ಅರ್ಥವಾಗುತ್ತದೆ. ಈ ನಾಟಕದ ರಚನಾ ಕೌಶಲವು ಗ್ರೀಕ್ ರುದ್ರನಾಟಕಗಳ ರಚನಾ ಕೌಶಲಕ್ಕಿಂತ ಕಡಿಮೆಯೇನಿಲ್ಲ.

ವೀರ, ಅದ್ಭುತ, ಶಾಂತ ರಸಗಳಿಗೆ ನಾಟಕದಲ್ಲಿ ಸಾಕಾದಷ್ಟು ಅವಕಾಶವಿದ್ದರೂ ಪ್ರಯೋಗದಲ್ಲಿ ಎದ್ದು ಕಾಣುವುದು ಶೃಂಗಾರರಸ, ಮನ್ಮಥನ ಆಸ್ಥಾನ, ಶಿವನ ತಪೋಭಂಗ, ಪ್ರದ್ಯುಮ್ನ ಮಾಯಾವತಿಯರ ಪ್ರಣಯ ಪ್ರಸಂಗ ಇವು ನಾಟಕದ ಕಲಾಸ್ಥಾನಗಳು. ಮನ್ಮಥನ ಪಾತ್ರವನ್ನು ನಿರ್ವಹಿಸುತ್ತಿದ್ದ ವರದಾಚಾರ್‍ಯರ ಸುಂದರರೂಪ, ಗಾನಮಾಧುರ್‍ಯ, ಹಿತಮಿತವಾದ ಲಲಿತ ಅಭಿನಯ, ಅರ್ಥ ಸ್ಫುಟವಾಗುವಂತೆ ಪದ್ಯಗಳನ್ನು ಬಿಡಿಸಿ ಹೇಳುತ್ತಿದ್ದ ಗಮಕ ಶೈಲಿ ಇವು ಪ್ರೇಕ್ಷಕರನ್ನು ತನ್ಮಯರಾಗಿ ಮಾಡುತ್ತಿದ್ದವು. ರತಿದೇವಿಯಾಗಿ ಬೋಧರಾವ್, ಶಂಬರಾಸುರನಾಗಿ ಹಾಸ್ಯನಟ ಕೃಷ್ಣಮೂರ್ತಿರಾವ್ ಚೆನ್ನಾಗಿ ಅಭಿನಯಿಸುತ್ತಿದ್ದರು. ಆಚಾರ್ಯರು ಪ್ರದರ್ಶಿಸುತ್ತಿದ್ದ ಇತರ ನಾಟಕಗಳಂತೆ ಮನ್ಮಥ ವಿಜಯದ ಪದ್ಯ ಮತ್ತು ಗೀತಗಳು ಮಾರ್ಗಕಾವ್ಯದ ಅಭಿಜಾತ ಶೈಲಿಯಲ್ಲಿ ರಚಿತವಾಗಿದ್ದವು.

ಸಭೆಯಲ್ಲಿ ಹೆಂಗಳೆಯರ ಸ್ತೋತ್ರಗಾನಕ್ಕೆ ಮೆಚ್ಚಿ ಮನ್ಮಥನು ಹಾಡುವ ಭಲರೆ ಭಲರೆ ನಿಮ್ಮ ನುಡಿಗೆ ನಲಿಯುವೆ ನಾನು ಎಂಬ ’ಬೇಹಾಗ್’ ರಾಗದ ಗೀತ, ಶಿವನ ತಪೋಭಂಗಕ್ಕೆ ಹೊರಟಾಗ ರತಿದೇವಿಯನ್ನು ಸಮಾಧಾನ ಪಡಿಸಲು ಮನ್ಮಥನು ಹಾಡುವ ಸೈತಿರು ಮೋಹಾಕರೇ ಎಂಬ ಕಮಾಚ್ ರಾಗದ ಗೀತ ನಾಟಕದ ಆಕರ್ಷಣಗಳಾಗಿದ್ದವು. ಆಚಾರ್ಯರು ಸಂಗತಿಗಳನ್ನು ಸೇರಿಸುತ್ತ ಈ ಗೀತಗಳನ್ನು ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಹಾಡಿದರೂ, ಗಾನಮಗ್ನರಾದ ಪ್ರೇಕ್ಷಕರು ಆಸಕ್ತಿಯಿಂದ ಕೇಳುತ್ತಿದ್ದರು. ಆಚಾರ್ಯರ ಕೈಯಲ್ಲಿ ಮನ್ಮಥ ವಿಜಯ ನಾಟಕವು ಅಪೂರ್ವ ಅನುಭವದ ಒಂದು ರಸಘಟ್ಟಿಯಾಗಿತ್ತು.”- (ಭಾರತೀಯ ಕಲಾದರ್ಶನ, ಪುಟ. 351 ರಿಂದ 353)

ಮನ್ಮಥ ವಿಜಯ ನಾಟಕವನ್ನು ರಾಜ ಕವಿಪಂಡಿತ ಶ್ರೀನಿವಾಸ ಅಯ್ಯಂಗಾರ್ ಅವರು ವರದಾಚಾರ್‍ಯರಿಗಾಗಿ ರಚಿಸಿಕೊಟ್ಟಿದ್ದರೂ (ಅವರ ‘ಮನ್ಮಥ ವಿಜಯ’ ನಾಟಕ ಪುಸ್ತಕವು ೧೯೩೫ರಲ್ಲಿ ಮುದ್ರಣಗೊಂಡಿದೆ) ಈ ಪುಸ್ತಕದ ಯಾವುದೇ ಕಂದಪದ್ಯಗಳನ್ನು ಮತ್ತು ಹಾಡುಗಳನ್ನು ವರದಾಚಾರ್‍ಯರಾಗಲೀ, ಮುಂದೆ ಈ ನಾಟಕದಲ್ಲಿ ಪಾತ್ರವಹಿಸಿ, ಹೆಸರು ಮಾಡಿದ ಜಿ. ನಾಗೇಶರಾಯರಾಗಲಿ, ಹೊಳಲಿ ಸುಬ್ರಹ್ಮಣ್ಯ ಶಾಸ್ತ್ರಿಗಳಾಗಲಿ ಹಾಡಿರುವ ದಾಖಲೆಗಳಿಲ್ಲ. ಆದರೆ ಮನ್ಮಥ ವಿಜಯ ನಾಟಕವನ್ನು ನಟ, ಕವಿ ಗಿರಭಟ್ಟರ ತಮ್ಮಯ್ಯನವರ ಅಪ್ರಕಟಗೊಂಡಿರುವ ಈ ನಾಟಕದ ಕಂದಪದ್ಯಗಳನ್ನು ಹಾಗೂ ಹಾಡುಗಳನ್ನು ಮೇಲೆ ತಿಳಿಸಿರುವ ರಂಗದಿಗ್ಗಜರು ಬಳಸಿಕೊಂಡು, ಹಾಡಿರುವುದನ್ನು ದೊರೆತಿರುವ ದಾಖಲೆಗಳಿಂದ ತಿಳಿಯಬಹುದಾಗಿದೆ. ಪ್ರಾಯಶಃ ಗಿರಿಭಟ್ಟರ ತಮ್ಮಯ್ಯನವರು (ಕಾಲ ಕ್ರಿ.ಶ.1895-1920) ೧೯ನೇ ಶತಮಾನದ ಪ್ರಾರಂಭದಲ್ಲೇ, ಅಂದರೆ ವರದಾಚಾರ್‍ಯರ ಆರಂಭದ ಯುಗದಲ್ಲೇ ಈ ನಾಟಕವನ್ನು ಬರೆದಿದ್ದರೂ, ಅದೇಕೆ ಆ ಕಾಲದಲ್ಲಿ ಪ್ರಕಟವಾಗಲಿಲ್ಲವೆಂಬುದು ಸರಿಯಾಗಿ ತಿಳಿಯುತ್ತಿಲ್ಲ.

ಪೌರಾಣಿಕ ರಂಗಪ್ರೇಮಿ ಹಾಗೂ ರಂಗಸಂಘಟಕ ಶ್ರೀ ಎಚ್.ಜಿ ಶಿವಲಿಂಗ ಮೂರ್ತಿಯವರು ಹೆಸರಾಂತ ರಂಗನಟ ಮೂಕನಹಳ್ಳಿ ಪಟ್ಟಣದ ನಟಭಯಂಕರ ಎಂ.ಎನ್. ಗಂಗಾಧರರಾಯರ ಅಳಿಯ ಹಾಗೂ ಗಾಯಕ ನಟ ಎಂ.ಸುಬ್ಬರಾಯರ ಸೊಸೆ ಶ್ರೀಮತಿ ಸುಬ್ಬಲಕ್ಷ್ಮಮ್ಮ ಅವರಿಂದ ಮನ್ಮಥ ವಿಜಯ ನಾಟಕದ ಮೂಲ ಹಸ್ತಪ್ರತಿಯನ್ನು ಪಡೆದು ನಮಗೆ ಕೊಟ್ಟಿದ್ದರ ಫಲವಾಗಿ, ಕಲಾಮಾತೆಯ ಆಶೀರ್ವಾದಗಳಿಂದ ಮತ್ತು ತಮ್ಮೆಲ್ಲರ ಶುಭಾಶಯಗಳಿಂದ ಮನ್ಮಥ ವಿಜಯ ನಾಟಕವು ಇದೀಗ ಪ್ರಕಟವಾಗಿ, ರಂಗಾಯಣದಂತಹ ವಿದ್ವತ್ಪೂರ್ಣ ಸಂಸ್ಥೆಯಿಂದ ಪ್ರದರ್ಶನವಾಗುತ್ತಿರುವುದು ನಮಗೆಲ್ಲ ಸಂತಸದ ಸಂಗತಿಯಾಗಿದೆ. ಹರಿಕಥಾ ವಿದ್ವಾನ್ ಬೆಳಗೊಳದ ಶ್ರೀ ನಾರಾಯಣದಾಸ್ ಕೂಡ ಈ ಹಸ್ತಪ್ರತಿಯನ್ನು ಕೊಟ್ಟು ಸಹಕರಿಸಿದ್ದಾರೆ. ಇವರೆಲ್ಲರಿಗೂ ನಾವು ಚಿರಋಣಿಗಳು.

– ಪ್ರೊ.ಎ.ವಿ. ಸೂರ್ಯನಾರಾಯಣಸ್ವಾಮಿ
ಎಚ್.ಎಸ್.ಗೋವಿಂದಗೌಡ
ನಾಟಕದ ಸಂಗ್ರಹಕಾರರು

ವೃತ್ತಿ ಕಂಪನಿಯ ಸುವರ್ಣಯುಗ ಮತ್ತೆ ಮರುಕಳಿಸುವ ನಿರೀಕ್ಷೆಯಲ್ಲಿ

ಈಗ ಒಂದು ಕ್ಷಣ ನಿಂತು ನಾನು ನನ್ನ ಬಾಲ್ಯದಲ್ಲಿ ನೋಡಿದ ನಾಟಕ ಯಾವುದು ಎಂದು ಹಿಂದಕ್ಕೆ ತಿರುಗಿ ನೆನಪಿಸಿಕೊಂಡರೆ, ಕಣ್ಣ ಮುಂದೆ ಬರುವುದು ವರ್ಷಕ್ಕೊಮ್ಮೆ ನನ್ನ ಹಳ್ಳಿಯಲ್ಲಿ ನಡೆಯುತ್ತಿದ್ದ ಕಂಪನಿ ನಾಟಕಗಳು. ಮನೆಯ ಎದುರಿನ ವಿಠ್ಠಲನ ದೇವಸ್ಥಾನದಲ್ಲಿ ಹಾರ್ಮೋನಿಯಂ ಧ್ವನಿ ಕೇಳಿದರೆ ಸಾಕು ನಾವು ಮಕ್ಕಳೆಲ್ಲ ಓಡಿಹೋಗುತ್ತಿದ್ದೆವು, ಹಾಡಿನ ಗಂಧಗಾಳಿ ತಿಳಿಯದಿದ್ದರೂ ಆ ನಾಟಕಗಳ ರಿಹರ್ಸಲ್ ನೋಡುತ್ತಾ ನೋಡುತ್ತಾ ಮೈಮರೆಯುತ್ತಿದ್ದೆವು. ನಾಟಕದ ದಿನದಂದು ನಮಗೆಲ್ಲಾ ಸಂಭ್ರಮವೋ ಸಂಭ್ರಮ. ಇಡೀ ಹಳ್ಳಿಗೇ ಅದೊಂದು ದೊಡ್ಡ ಹಬ್ಬ. ಕೃಷ್ಣ ಗಾರುಡಿ ನಾಟಕಕ್ಕೆ ಪರದೆಗಳನ್ನು ಹೊತ್ತು ತರುವ ಲಾರಿಗಳು, ಸ್ಟೇಜ್‌ನ ತಯಾರಿ, ಮೈಕ್ ಸೆಟ್. ರಾತ್ರಿ ಆಯಿತೆಂದರೆ ಝಗಮಗಿಸುವ ಲೈಟಿನಲ್ಲಿ ನಾಟಕ ಆರಂಭ. ಕೌತುಕದಿಂದ ವಿಭಿನ್ನ ರೀತಿಯ ದೃಶ್ಯಗಳು, ದಾರಿ, ಕಾಡು, ಅರಮನೆ, ದೇವತೆಗಳು, ನಾರದ ಆಕಾಶದಿಂದ ಇಳಿದು ಬರುವುದು, ಇನ್ನೊಂದು ನಾಟಕದಲ್ಲಿ ಶಿವಲಿಂಗ ಉದ್ಭವವಾಗುವುದು, ಒಂದೇ, ಎರಡೇ ನಾಟಕ ನೋಡುತ್ತ ನೋಡುತ್ತ ಯಾವಾಗ ನಿದ್ದೆ ಹೋಗುತ್ತಿದ್ದೆವೊ ತಿಳಿಯದು. ಯಾವ ಶಬ್ದಕ್ಕೆ ಮತ್ತೆ ಎಚ್ಚರವಾಗಿ ನಾಟಕ ನೋಡುತ್ತಿದ್ದೆವೋ. ನಾವೆಲ್ಲ ಒಂದು ವಾರದ ತನಕ ಅದೇ ನಾಟಕದ ಹಾಡು, ಸಂಭಾಷಣೆ, ಝಗ ಝಗಿಸುವ ಲೈಟ್‌ಗಳು ಹಾಗೂ ಆ ಪಾತ್ರಗಳ ಗುಂಗಿನಲ್ಲೇ ಇರುತ್ತಿದ್ದೆವು. ನಾವು ಚಿಕ್ಕಂದಿನಲ್ಲಿ ಪಡೆದ ಈ ಸಂಭ್ರಮ ಸಡಗರಗಳ ಅನುಭವ ಈಗಿನ ಪೀಳಿಗೆಗೆ ಇಲ್ಲವಲ್ಲ ಎಂಬ ನೋವು ಕಾಡುತ್ತದೆ. ಕನ್ನಡ ವೃತ್ತಿಕಂಪನಿಗಳಿಗೆ, ವೃತ್ತಿ ರಂಗಭೂಮಿಗೆ ಬಹಳ ದೊಡ್ಡ ಇತಿಹಾಸವಿದೆಯೆಂದು ಕೇಳಿದ್ದೇವೆ. ನಮಗೆ ಅರಿವು ಬರುವ ಮೊದಲೇ ಅದು ನಶಿಸಿ ಹೋದದ್ದನ್ನು ಕೂಡ ನೋಡಿದ್ದೇವೆ. ಆ ಸುವರ್ಣಯುಗ ಮತ್ತೆ ಬರಬಹುದೇ ಎಂದು ಕಾತುರದಿಂದ ನಾವೀಗ ನೋಡುವಂತಾಗಿದೆ. ಬಹುಶಃ ರಂಗಭೂಮಿಯ ಪ್ರತಿಯೊಬ್ಬರಿಗೂ ಈ ಕೊರತೆ ಕಾಡದೇ ಇರದು.

ಮೈಸೂರು ರಂಗಾಯಣವು ಈಗಾಗಲೇ ಇಂತಹ ಸಾಹಸಕ್ಕೆ ಕೈ ಹಾಕಿ ಜೈ ಎನಿಸಿಕೊಂಡಿದೆ. ಕಂಪನಿ ನಾಟಕಗಳಲ್ಲೆ ಬಹಳ ಪ್ರಸಿದ್ಧವಾದ ಸದಾರಮಾ ನಾಟಕಂ ನಾಟಕವನ್ನು ಅಭಿನಯಿಸಿ, ನಾಡಿನಾದ್ಯಂತ ಅತ್ಯಂತ ಯಶಸ್ವಿ ಪ್ರದರ್ಶನಗಳನ್ನು ನೀಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ರಂಗಾಯಣದ ಪ್ರತಿಭಾನ್ವಿತ ಕಲಾವಿದರ ದಂಡು ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಸುಮಾರು ನೂರು ವರ್ಷಗಳ ಹಿಂದೆ ಶ್ರೀ ಗಿರಿಭಟ್ಟರ ತಮ್ಮಯ್ಯ ಅವರು ರಚಿಸಿರುವ ಕಂಪನಿ ನಾಟಕಗಳಲ್ಲೆ ಶ್ರೇಷ್ಠವಾದ, ಶಾಸ್ತ್ರೀಯ ಸಂಗೀತ ಪ್ರಧಾನವಾದ ಪೌರಾಣಿಕ ನಾಟಕ ಮನ್ಮಥ ವಿಜಯ ರಂಗಾಯಣದಲ್ಲಿ ಈಗ ರಂಗಕ್ಕೇರುತ್ತಿದೆ. ಇದು ರಂಗಾಯಣಕ್ಕೆ ಒಂದು ಸಾರ್ಥಕತೆಯ ಹಾಗೂ ಹೆಮ್ಮೆಯ ವಿಷಯ ಎಂದುಕೊಳ್ಳುತ್ತೇನೆ.

ಹಾರ್ಮೋನಿಯಂ ಮೇಲೆ ಬೆರಳಾಡಿಸಿದರೆ ಸಾಕು ಕೇಳುಗರು ತಲ್ಲೀನರಾಗಿ ಮೈ ಮರೆಯುವಂತೆ ಮಾಡುವ, ಹಲವಾರು ಪ್ರಶಸ್ತಿಗಳಿಂದ ಸನ್ಮಾನಿತರಾದ ಶ್ರೀ ವೈ.ಎಂ. ಪುಟ್ಟಣ್ಣಯ್ಯರವರು ಮನ್ಮಥ ವಿಜಯ ನಾಟಕವನ್ನು ನಿರ್ದೇಶನ ಮಾಡುತ್ತಿರುವುದು ನಮ್ಮ ಸೌಭಾಗ್ಯವೇ ಸರಿ. ಅವರಿಗೆ 2017ರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿದ್ದು, ರಂಗಾಯಣ ಇವರಿಂದ ಮತ್ತೊಂದು ಪೌರಾಣಿಕ ಕಂಪನಿ ನಾಟಕವನ್ನು ನಿರ್ದೇಶಿಸುವಂತೆ ಕೇಳಿಕೊಂಡು ಆ ಮೂಲಕ ಅವರಿಗೆ ಗೌರವವನ್ನು ಸೂಚಿಸುತ್ತಿದೆ. ರಂಗಾಯಣದ ಭೂಮಿಗೀತ ರಂಗಮಂದಿರ ರಂಗು ರಂಗಿನ ಪರದೆಗಳಿಂದ ಅಲಂಕರಣಗೊಂಡು ನಮ್ಮ ಕಲಾವಿದರ ಕಂಠಸಿರಿಯೊಂದಿಗೆ ಪ್ರೇಕ್ಷಕರ ಮನಸ್ಸನ್ನು ಖಂಡಿತವಾಗಿಯೂ ಸೂರೆಗೊಳ್ಳುತ್ತದೆ ಎಂಬ ನಂಬಿಕೆ ನನ್ನದು.

ಕಂಪನಿ ನಾಟಕಗಳ ಪರಂಪರೆಯನ್ನು ಉಳಿಸಿಕೊಳ್ಳುವ ಸಲುವಾಗಿ ಈಗಾಗಲೇ ಹಲವಾರು ಹವ್ಯಾಸಿ ತಂಡಗಳು ಪ್ರಯತ್ನಿಸುತ್ತಿರುವುದು ಸಂತೋಷ. ರಂಗಾಯಣ ಮತ್ತೊಮ್ಮೆ ಕಂಪನಿಯ ಪೌರಾಣಿಕ ನಾಟಕಗಳ ಹಿರಿಮೆಯನ್ನು ಪ್ರೇಕ್ಷಕರಿಗೆ ನೀಡುತ್ತಾ, ಇಂದಿನ ಯುವ ಪೀಳಿಗೆ ಯಾಂತ್ರಿಕ ಜಗತ್ತಿನಲ್ಲಿ ತನ್ನ ಅಮೂಲ್ಯವಾದ ಭಾವನೆಗಳನ್ನು, ಕಲ್ಪನೆಗಳನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಹೊಸ ಪೀಳಿಗೆಯ ಮಕ್ಕಳಿಗೆಲ್ಲ ನಮ್ಮ ರಂಗಭೂಮಿಯ ಪರಂಪರೆ ಮತ್ತು ಸಂಸ್ಕೃತಿಯ ಅರಿವನ್ನು ಮೂಡಿಸುವ ಪ್ರಯತ್ನವಿದು. ಕಲಾಮಾತೆಯ, ಹಿರಿಯರ ಆಶಿರ್ವಾದ ರಂಗಾಯಣಕ್ಕಿರಲಿ; ರಂಗಾಯಣ ಮತ್ತಷ್ಟು ವಿಜೃಂಭಿಸಲಿ ಎಂದು ಆಶಿಸುತ್ತೇನೆ.

ಭಾಗೀರಥಿಬಾಯಿ ಕದಂ
ನಿರ್ದೇಶಕರು, ರಂಗಾಯಣ, ಮೈಸೂರು

ಕನ್ನಡ ವೃತ್ತಿ ರಂಗಭೂಮಿಯತ್ತ ಮರುಪಯಣ

ಕನ್ನಡ ವೃತ್ತಿ ನಾಟಕ ಕಂಪೆನಿಗಳಿಗೆ ಅಪೂರ್ವ ಇತಿಹಾಸವಿದೆ. ಗುಬ್ಬಿ ಕಂಪೆನಿ ಹಾಗೂ ಎ.ವಿ ವರದಾಚಾರ್ಯರ ಕಂಪನಿಗಳು ನಾಡಿನ ತುಂಬಾ ಪೌರಾಣಿಕ ನಾಟಕಗಳ ರಸದೌತಣ ಉಣಬಡಿಸಿದ್ದಲ್ಲದೆ ರಾಜಮಹಾರಾಜರಿಗೂ ನಾಟಕದ ಹುಚ್ಚು ಹಿಡಿಸಿದ್ದ ಕಂಪನಿಗಳೆನಿಸಿದ್ದವು. ಗುಬ್ಬಿ ಕಂಪನಿಯಂತೆಯೇ ಎ.ವಿ ವರದಾಚಾರ್ಯರ ರತ್ನಾವಳಿ ಥಿಯೇಟ್ರಿಕಲ್ ಕಂಪನಿ ಕೂಡ ಅನೇಕ ಪೌರಾಣಿಕ ನಾಟಕ ರತ್ನಗಳನ್ನು ರಂಗ ರಸಿಕರಿಗೆ ಉಣಬಡಿಸಿದ್ದರೂ ರತ್ನಾವಳಿ, ಶಾಕುಂತಲಾ ಹಾಗೂ ಮನ್ಮಥ ವಿಜಯ ನಾಟಕಗಳು ಈ ಕಂಪನಿಯ ರತ್ನತ್ರಯಗಳಂತೆ ಅಂದಿನ ಪ್ರೇಕ್ಷಕರ ಮೇಲೆ ಮೋಡಿ ಮಾಡಿದ ನಾಟಕಗಳು ಮತ್ತು ವರದಾಚಾರ್ಯರಿಗೆ ಹಾಗೂ ಅವರ ಕಂಪನಿಗೆ ಅಪಾರ ಕೀರ್ತಿ ಮತ್ತು ಧನಸಂಪಾದನೆ ಮಾಡಿಕೊಟ್ಟ ನಾಟಕಗಳು.

ಸಾಹಸದ ಬೆನ್ನು ಹತ್ತುವುದು, ಸವಾಲುಗಳನ್ನು ಮೈಮೇಲೆ ಹಾಕಿಕೊಳ್ಳುವುದೆಂದರೆ ಮೈಸೂರು ರಂಗಾಯಣಕ್ಕೆ, ಇಲ್ಲಿನ ಕಲಾವಿದರಿಗೆ ಎಲ್ಲಿಲ್ಲದ ಉತ್ಸಾಹ. ಕಳೆದ ಮೂವತ್ತು ವರ್ಷಗಳಿಂದ ರಂಗಾಯಣದ ಹಿರಿಯ ಕಲಾವಿದರ ಪಡೆ ಅಕ್ಷರಶಃ ಹೀಗೆಯೇ ಸಾಗಿ ಬಂದಿದೆ. ಜಗತ್ತಿನ ಬೇರೆ ಬೇರೆ ಭಾಷೆಗಳ ಶ್ರೇಷ್ಠ ನಾಟಕಕಾರರ ನಾಟಕಗಳನ್ನೂ ಒಳಗೊಂಡಂತೆ ಕನ್ನಡದ ಬಹು ಮುಖ್ಯ ನಾಟಕಕಾರರೆಲ್ಲರ ನಾಟಕಗಳನ್ನು ಭಾರತೀಯ ಹಾಗೂ ಜಗತ್ತಿನ ಬೇರೆ ಬೇರೆ ಭಾಷೆಗಳ ಮಹತ್ವದ ನಾಟಕಗಳನ್ನು ಯಶಸ್ವಿಯಾಗಿ ರಾಜ್ಯದಾದ್ಯಂತ, ದೇಶದಾದ್ಯಂತ ಮತ್ತು ಬೇರೆ ಬೇರೆ ದೇಶಗಳಲ್ಲೂ ಪ್ರದರ್ಶಿಸಿ ಕನ್ನಡದ ಗರಿಮೆಯನ್ನು ಸೀಮೆಯಾಚೆ ಮೆರೆಸಿದ ಹೆಗ್ಗಳಿಕೆ ನಮ್ಮದು. ಮಹತ್ವದ ಕಥೆ ಕಾದಂಬರಿಗಳನ್ನೂ ನಾಟಕವಾಗಿಸಿ ಯಶಸ್ಸು ಗಳಿಸಿದ ರಂಗಾಯಣವು ರಾಷ್ಟ್ರಕವಿ ಕುವೆಂಪುರವರ ಮಲೆಗಳಲ್ಲಿ ಮದುಮಗಳು ಬೃಹತ್ ಕಾದಂಬರಿಯನ್ನು ನಾಲ್ಕು ವೇದಿಕೆಗಳಲ್ಲಿ ಅಹೋರಾತ್ರಿ ಪ್ರದರ್ಶನ ನೀಡಿದ್ದು, ಭಾರತೀಯ ರಂಗಭೂಮಿಯಲ್ಲೇ ಇತಿಹಾಸವೆನಿಸಿದೆ. ಕೆಲವು ವರ್ಷಗಳ ಹಿಂದೆ ನಾಡಿನಾದ್ಯಂತ ‘ಸದಾರಮಾ ನಾಟಕಂ’ ನಾಟಕದ ಅರವತ್ತಕ್ಕೂ ಮಿಕ್ಕಿದ ಪ್ರದರ್ಶನಗಳನ್ನು ಪೂರೈಸಿರುವ ಮೈಸೂರು ರಂಗಾಯಣ ಇದೀಗ ಪ್ರಥಮ ಬಾರಿಗೆ ಮನ್ಮಥ ವಿಜಯ ಶಾಸ್ತ್ರೀಯ ಸಂಗೀತ ಪ್ರಧಾನ ಪೌರಾಣಿಕ ನಾಟಕವನ್ನು ಪರಿಣತ ಕಲಾವಿದರ ಮೂಲಕ ಮತ್ತು ಹೊಸ ಸೀನರಿ ವಿದ್ಯುದ್ದೀಪಗಳ ಪರಿಪೂರ್ಣ ರಂಗಸಜ್ಜಿಕೆಯೊಂದಿಗೆ ರಂಗಪ್ರೇಮಿಗಳ ಮುಂದಿಡಲು ಸಜ್ಜಾಗಿದೆ. ಮೈಸೂರಿನ ಮತ್ತು ನಾಡಿನ ರಂಗಪ್ರೇಮಿಗಳ ಮುಂದೆ ಮತ್ತೊಮ್ಮೆ ಪೌರಾಣಿಕ ನಾಟಕದ ಸ್ವರ್ಣ ಕಿರಣಗಳ ಮಿಂಚು ಹರಿಯಲಿ ಎಂಬುದೇ ನಮ್ಮ ಆಸೆ.

ಬನ್ನಿ ರಂಗಪ್ರೇಮಿಗಳೆ, ನಾವೆಲ್ಲರೂ ಈ ರಸಕ್ಷಣಗಳನ್ನು ಕಣ್ಮನ ತುಂಬಿ ಸವಿಯೋಣ. ರಂಗಭೂಮಿ ಇತಿಹಾಸದ ಸ್ವರ್ಣಕ್ಷಣಗಳಿಗೆ ಸಾಕ್ಷಿಯಾಗೋಣ.

ವಿ.ಎನ್.ಮಲ್ಲಿಕಾರ್ಜುನಸ್ವಾಮಿ
ಜಂಟಿ ನಿರ್ದೇಶಕರು,  ರಂಗಾಯಣ, ಮೈಸೂರು

ರಂಗದ ಮೇಲೆ

ಈಶ್ವರ : ಮಹದೇವ
ಪಾರ್ವತಿ (ದಾಕ್ಷಾಯಿಣಿ) : ಪ್ರಮೀಳಾ ಬೆಂಗ್ರೆ
ನಾರದ : ಜಗದೀಶ್ ಮನವಾರ್ತೆ
ನಂದಿ, ರುಕ್ಮಿಣಿ, ಸಖಿ : ವನಿತಾ ಎಸ್.ಎಸ್
ಭೃಂಗಿ, ಸಖಿ : ಪುಟ್ಟಲಕ್ಷ್ಮಿ .ವಿ
ದಕ್ಷಬ್ರಹ್ಮ, ತಾರಕಾಸುರ : ರಾಮು ಎಸ್
ಪುರೋಹಿತ, ಬೃಹಸ್ಪತಾಚಾರ್ಯ : ವಿನಾಯಕಭಟ್ ಹಾಸಣಗಿ
ವೀರಭದ್ರ, ಇಂದಿರೆ, ಸಖಿ : ಗೀತಾ ಎಂ.ಎಸ್
ಮಹೇಂದ್ರ, ಕೃಷ್ಣ : ಕೃಷ್ಣಕುಮಾರ್ ನಾರ್ಣಕಜೆ
ಶೂರಪದ್ಮ, ಪರ್ವತರಾಜ : ಹೊಯ್ಸಳ ಜೆ
ಋಷಿಮುನಿ, ಅಸುರ ಸಿಂಹವಕ್ತ್ರ, ಋಷಿಮುನಿ, ಅಸುರ : ಪ್ರದೀಪ್ ಬಿ.ಎಂ

ಮನ್ಮಥ, ಪ್ರದ್ಯುಮ್ನ : ಹುಲುಗಪ್ಪ ಕಟ್ಟೀಮನಿ
ರತಿ :
ನಂದಿನಿ ಕೆ.ಆರ್ರತಿ : ನಂದಿನಿ ಕೆ.ಆರ್
ಮಾಯಾವತಿ : ಸರೋಜ ಹೆಗಡೆ
ಸಖಿಯರು : ಟುವ್ವಿ ಟುವ್ವಿ, ಲಕ್ಷ್ಮಿ ಎಂ, ಶೃತಿ, ಕವಿತಾ 
ಶಂಬರಾಸುರ, ಪುರೋಹಿತ : ಪ್ರಶಾಂತ್ ಹಿರೇಮಠ
ತಾರೆ, ಸಖಿ : ಶಶಿಕಲಾ ಬಿ.ಎನ್ 
ಚಾರ, ಭಟರು, ಋಷಿಮುನಿ : ಮಲ್ಲೇಶ ಮಾಲ್ವಿ, ಪವನ್ಕುಮಾರ್ ಮ ಗಂಟೆಅಷ್ಟದಿಕ್ಪಾಲಕರು : ಭಾಸ್ಕರ್ ಸಿ.ಪಿ, ಶಿವರಾಜ್ ಹೆಚ್.ಆರ್, ಕಿರಣ್,  ವೀರಭದ್ರಪ್ಪ ಅಣ್ಣಿಗೇರಿ 
ಅಪ್ಸರೆಯರು : ಆಹ್ವಾನಿತ ನೃತ್ಯ ಕಲಾವಿದರು, ನೃತ್ಯಾಲಯತಂಡ, ಮೈಸೂರು ಪಲ್ಲವಿ ಕೆ.ಎಸ್, ರೀತು ದಿನೇಶ್, ರಚನ ವೇಣುಗೋಪಾಲ್ ನವ್ಯಶ್ರೀ, ನಯನ ಕಳಲೆ