ಚಿಣ್ಣರಮೇಳ-2017

ದಿನಾಂಕ:10-04-2017 ರಿಂದ 10-05-2017 ರವರಗೆ

ಚಿಣ್ಣರಮೇಳ-2017 ದಿನಾಂಕ:10-04-2017 ರಿಂದ 10-05-2017 ರವರಗೆ ಮೈಸೂರು ರಂಗಾಯಣದ ಆವರಣದಲ್ಲಿ ಪ್ರತಿದಿನ ಬೆಳಗ್ಗೆ 10.00 ರಿಂದ ಸಂಜೆ 5.00 ರವರೆಗೆ 7 ವರ್ಷಗಳು ತುಂಬಿದ, 14 ವರ್ಷದೊಳಗಿನ ವಯೋಮಿತಿಯ ಮಕ್ಕಳಿಗಾಗಿ ನಡೆಯಲಿದೆ. ಮಕ್ಕಳು ಪ್ರಕೃತಿಯ ಕೊಡುಗೆ, ಮನಸ್ಸು ಮುಕ್ತ, ಕನಸು ಕಣಜ, ಕಲ್ಪನೆ ಅದ್ಭುತ ಇವುಗಳನ್ನು ಮುತುವರ್ಜಿಯಿಂದ ಕಾಪಿಡುವ, ರೂಪಿಸುವ ಹೊಣೆ ಪೋಷಕರದ್ದು, ಶಿಕ್ಷಕರದ್ದು, ಸಮಾಜದ್ದು. ಅದಕ್ಕಾಗಿ ಬಂಧನ ಮುಕ್ತ ಸಾಂಸ್ಕøತಿಕ ವಾತಾವರಣದ ನಿರ್ಮಾಣ ಮತ್ತು ನಿರ್ವಹಣೆ ನಮ್ಮೆಲ್ಲರ ನೈತಿಕ ಜವಾಬ್ದಾರಿ ಎಂದರಿತು ರಂಗಾಯಣವು ಪ್ರತಿವರ್ಷ ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಅಗತ್ಯತೆಗೆ ತಕ್ಕಂತೆ 19ನೇ ಚಿಣ್ಣರಮೇಳವನ್ನು ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ಆಯೋಜಿಸುತ್ತಿದೆ. ಮಕ್ಕಳ ಲೋಕವನ್ನು ಪರಿಣಾಮಕಾರಿಯಾಗಿ ಸೃಷ್ಠಿಸಲು ಮುಂದಾಗಿದೆ. ಮಕ್ಕಳೊಂದಿಗೆ ಅತೀ ಸೂಕ್ಷ್ಮ ವರ್ತನೆ ಅಗತ್ಯ. ಅವರ ಕಲ್ಪನೆಗಳು ಮುಕ್ಕಾಗದ ಹಾಗೆ ಅವರ ಭಾಷೆ, ಭಾವಗಳನ್ನು ಅರ್ಥಮಾಡಿಕೊಂಡು ಅವರದ್ದೇ ಲೋಕವನ್ನು ಒಲವಿನ ಒಡನಾಟದೊಂದಿಗೆ ಉಲ್ಲಾಸ ಸಂತಸದ ವಾತಾವರಣವನ್ನು ನಿರ್ಮಿಸಿ ಮಕ್ಕಳು ನಲಿಯುತ್ತ ಕಲಿಯುವ ಪ್ರಕ್ರಿಯೆಗೆ ತೊಡಗಿಸುವ ಉದ್ದೇಶವೇ ‘ಸಮಾನತೆ-ಚಿಣ್ಣರಮೇಳ-2017’. ಮಕ್ಕಳು ತಮ್ಮನ್ನು ತಾವೇ ಕಂಡುಕೊಳ್ಳುವ ಕ್ರಿಯಾತ್ಮಕ ರಂಗಚಟುವಟಿಕೆಗಳ ಮೂಲಕ ಸುಮಾರು ಒಂದು ತಿಂಗಳು ನಡೆಯುವ ಈ ಮೇಳÀದಲ್ಲಿ ಮಕ್ಕಳು ಆಡುತ್ತಾ, ಕುಣಿಯುತ್ತಾ ತಮ್ಮ ಕಲ್ಪನೆಯ ಬಣ್ಣ-ಬಣ್ಣದ ಚಿತ್ರಗಳನ್ನು ಬಿಡಿಸುತ್ತ, ಕರಕುಶಲಗಳನ್ನು ತಯಾರಿಸುತ್ತ, ಕಥೆಗಳನ್ನು ಹೇಳುತ್ತಾ, ಕೇಳುತ್ತಾ ನಾಡಿನ ಹೆಸರಾಂತ ಮಕ್ಕಳ ಚಿಂತಕರೊಂದಿಗೆ ಮುಖಾ-ಮುಖಿ ನಡೆಸುತ್ತ, ಹಕ್ಕಿ-ಪಕ್ಷಿ ಪರಿಸರವನ್ನು ಸ್ಪರ್ಶಿಸುತ್ತ ಗ್ರಾಮ ವೀಕ್ಷಣೆ ಮಾಡಿ ಸರಳ ಹಾಗೂ ಶ್ರಮದ ಬದುಕನ್ನು ಅರಿಯುತ್ತಾ, ಅಭಿನಯದ ಮೂಲಕ ನಾಟಕಗಳನ್ನು ಕಟ್ಟಿ ಪ್ರದರ್ಶಿಸುವತ್ತ ರಂಗಪಯಣವನ್ನು ನಡೆಸಲಿದ್ದಾರೆ. ಮಕ್ಕಳು ಕೂಡಿ, ಹಾಡಿ, ಊಟ ಮಾಡಿ ತಮ್ಮ ಮನಸ್ಸಿನಾಳದ ಮಾತುಗಳನ್ನು ಹಂಚಿಕೊಳ್ಳುತ್ತಾ ಸಮಾನತೆಯತ್ತ ಸಾಗಲೆಂಬುದು ಈ ಚಿಣ್ಣರಮೇಳದ ಉದ್ದೇಶವಾಗಿದೆ.

ಈ ಮೇಳದಲ್ಲಿ ಶ್ರೀಮತಿ ಸುಮಾ ರಾಜ್‍ಕುಮಾರ್ ರವರಿಂದ ಮ್ಯಾಜಿಕ್ ಹಾಗೂ ಮಾತನಾಡುವ ಗೊಂಬೆ ಪ್ರದರ್ಶನ, ಶ್ರೀ ಸಿ.ವಿ. ನಾಗರಾಜ್ ರವರಿಂದ ಆಹಾರ ಆರೋಗ್ಯ ಕುರಿತ ಮುಖಾ-ಮುಖಿ, ಶ್ರೀ ವಾಸು ದೀಕ್ಷಿತ್‍ರವರಿಂದ ವಚನ ಗಾಯನ, ಡಾ. ಹಿ.ಶಿ. ರಾಮಚಂದ್ರೇಗೌಡ ರವರಿಂದ ಕಥೆ ಹೇಳುವ ಕಾರ್ಯಕ್ರಮ, ಶ್ರೀಮತಿ ಕೃಪಾಪಡ್ಕೆರವರಿಂದ ಜಾನಪದ, ಮೈಸೂರು ವಿ.ವಿಯ ಸಸ್ಯಶಾಸ್ತ್ರ ವಿಭಾಗದ ಪ್ರೊ. ಜಿ. ಆರ್. ಜನಾರ್ಧನರವರಿಂದ ಸಸ್ಯ ಪ್ರಪಂಚ ಕುರಿತಂತೆ ಮುಖಾ-ಮುಖಿ ಹಾಗೂ ಸಾಮೂಹಿಕ ನೃತ್ಯ ಪ್ರಾತ್ಯಕ್ಷಿಕೆ, ಶ್ರೀ ಕೆ. ಮನು ಅವರಿಂದ ಪರಿಸರ ನಡಿಗೆ, ಪ್ರಾಚ್ಯವಸ್ತು ಸಂಶೋಧನೆಗಳು ಮತ್ತು ಪಾರಂಪರಿಕ ಇಲಾಖೆ ವತಿಯಿಂದ ಪಾರಂಪರಿಕ ನಡಿಗೆ ಮತ್ತು ಮಾಹಿತಿ, ಪೋಲಿಸ್ ಇಲಾಖೆಯ ಶ್ವಾನದಳದಿಂದ ಡಾಗ್‍ಶೋ ಪ್ರದರ್ಶನ ಹಾಗೂ ಅಗ್ನಿಶಾಮಕ ದಳದಿಂದ ಅಗ್ನಿಶಾಮಕ ಪ್ರಾತ್ಯಕ್ಷಿಕೆ, ಸಮಾನತೆ ಕುರಿತು ಬಸವ ಜಯಂತಿಯಂದು ಶ್ರೀಮತಿ ಲತಾ ಮೈಸೂರು ಅವರಿಂದ ವಿಶೇಷ ಉಪನ್ಯಾಸ, ಪರಿಣಿತರಿಂದ ಡ್ರಾಯಿಂಗ್, ಮಾಸ್ಕ್‍ಮೇಕಿಂಗ್ ತರಗತಿಗಳು, ನುರಿತ ರಂಗ ನಿರ್ದೇಶಕರಿಂದ ಮೇಳದ ಮಕ್ಕಳಿಗೆ ರಂಗತರಬೇತಿ ಶಿಬಿರ ಮತ್ತು ನಾಟಕ ಪ್ರದರ್ಶನ, ಸಮಾನತೆ ಕುರಿತ ಸಂಗೀತ ತರಗತಿ, ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇಂತಹ ಮಹತ್ವಪೂರ್ಣ ಕಾರ್ಯಕ್ರಮದ ಉದ್ಘಾಟನೆಯನ್ನು ಈ ಬಾರಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದಿರುವ ಹುಬ್ಬಳ್ಳಿಯ ಕುಮಾರಿ. ಸಿಯಾ ಖೋಡೆ ರವರು ಉದ್ಘಾಟಿಸಿದ್ದು, ಕಲಾಶ್ರೀ ಪ್ರಶಸ್ತಿ ವಿಜೇತ ಅಂತರ ರಾಷ್ಟ್ರೀಯ ಯೋಗಪಟು ಕುಮಾರಿ ಖುಷಿ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾರೆ. ಪ್ರಸ್ತುತ ಚಿಣ್ಣರಮೇಳವು ನಡೆಯುತ್ತಿದೆ.