ಶ್ರೀ ಅಡ್ಡಂಡ ಸಿ ಕಾರ್ಯಪ್ಪ

ನಿರ್ದೇಶಕರು, ರಂಗಾಯಣ

ಕರ್ನಾಟಕ ಸರ್ಕಾರದ ಪ್ರತಿಷ್ಠಿತ ರಂಗಸಂಸ್ಥೆಯಾಗಿರುವ ರಂಗಾಯಣ ಮೈಸೂರಿನ ನಿರ್ದೇಶಕರಾಗಿರುವ ಶ್ರೀ ಅಡ್ಡಂಡ ಸಿ ಕಾರ್ಯಪ್ಪ ದಕ್ಷಿಣದ ಕಾಶ್ಮೀರ ಎಂದೇ ಹೆಸರುವಾಸಿಯಾದ ಕೊಡಗು ಜಿಲ್ಲೆಯವರು. ಅಡ್ಡಂಡ ಚೆಂಗಪ್ಪ ಮತ್ತು ಅಡ್ಡಂಡ ತಂಗಮ್ಮ ರವರ ಪುತ್ರರಾದ ಶ್ರೀ ಕಾರ್ಯಪ್ಪ ನವರು ಹುಟ್ಟಿದ್ದು 1961 ರಲ್ಲಿ ಬಾಲ್ಯದಿಂದಲೂ ರಂಗಭೂಮಿ ಹಾಗೂ ಸಾಹಿತ್ಯದ ಬಗ್ಗೆ ತೀವ್ರವಾದ ಒಲವು ಬೆಳೆಸಿಕೊಂಡಿದ್ದ ಶ್ರೀ ಕಾರ್ಯಪ್ಪನವರು ತಮ್ಮ ಬಿ.ಎ. ಪದವಿಯ ನಂತರ ನೀನಾಸಂ ರಂಗಶಿಕ್ಷಣದಲ್ಲಿ ರಂಗಭೂಮಿ ಕುರಿತಂತೆ ತರಬೇತಿ ಪಡೆದು ಸುಮಾರು ಹತ್ತು ವರ್ಷಗಳ ಕಾಲ ಸೃಷ್ಠಿ ಕೊಡವ ರಂಗ ಎಂಬ ತಮ್ಮದೇ ಒಂದು ರೆಪರ್ಟರಿ ರಂಗತಂಡವನ್ನು ಕಟ್ಟಿ ಕೊಡವ ಮತ್ತು ಕನ್ನಡ ಭಾಷೆಯಲ್ಲಿ ನಾಡಿನಾದ್ಯಂತ ನಾಟಕ ಪ್ರದರ್ಶನಗಳನ್ನು ನೀಡಿದವರು. ಮ್ಯಾಕ್‌ಬೆತ್, ಹ್ಯಾಮ್ಲೆಟ್, ಕಿಂಗ್‌ಲಿಯರ್, ಈಡಿಪಸ್, ದಂಗೆ ಮುಂಚಿನ ದಿನಗಳು, ಅರುಂಧತಿ ಆಲಾಪ, ತಬರನ ಕಥೆ ಮುಂತಾದ 20ಕ್ಕೂ ಹೆಚ್ಚು ಕನ್ನಡ ನಾಟಕಗಳನ್ನು ನಿರ್ದೇಶಿಸಿರುವ ಶ್ರೀ ಕಾರ್ಯಪ್ಪನವರು ಸುಮಾರು 20 ಕ್ಕೂ ಹೆಚ್ಚು ಕೊಡವ ನಾಟಕಗಳು, ಮಕ್ಕಳ ನಾಟಕಗಳು ಮತ್ತು ಬೀದಿನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಸ್ವತಃ ನಾಟಕ ರಚನಾಕಾರರು ಆಗಿರುವ ಶ್ರೀ ಕಾರ್ಯಪ್ಪ ನವರು 10 ಕ್ಕೂ ಹೆಚ್ಚು ಕನ್ನಡ ಮತ್ತು ಕೊಡವ ನಾಟಕಗಳನ್ನು ರಚಿಸಿ, ಪ್ರಕಟಿಸಿದ್ದಾರೆ. 2012 ರಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಕರ್ನಾಟಕದಲ್ಲಿ ಮೊದಲ ಬಾರಿಗೆ ಬುಡಕಟ್ಟು ಜನಾಂಗದವರಿಗಾಗಿ ರಂಗ ತರಬೇತಿ ಶಿಬಿರವನ್ನು ಆಯೋಜಿಸಿದವರು. ಚಲನಚಿತ್ರ ರಂಗದಲ್ಲೂ ಕೃಷಿ ಮಾಡಿರುವ ಇವರು ‘ಬಾಳ್ ಪೊಲಂದತ್’ ಎಂಬ ಚಲನಚಿತ್ರವನ್ನು ನಿರ್ದೇಶಿಸಿ, ಉತ್ತಮ ಪ್ರಾದೇಶಿಕ ಚಲನಚಿತ್ರ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಇವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ್’ ಮತ್ತು ಕರ್ನಾಟಕದ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. ಅಲ್ಲದೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕೊಡವ ವಿದ್ಯಾ ನಿಧಿ ಪ್ರಶಸ್ತಿ ಮತ್ತು ಸಿ.ಜಿ.ಕೆ. ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಪತ್ನಿ ಶ್ರೀಮತಿ ಅನಿತಾ ಕಾರ್ಯಪ್ಪ ರವರು ಕೂಡ ಸೃಷ್ಠಿ ಕೊಡವ ರಂಗ ದ ಸಕ್ರಿಯ ಸದಸ್ಯರಾಗಿದ್ದು, ಶ್ರೀ ಅಡ್ಡಂಡ ಕಾರ್ಯಪ್ಪ ನವರ ರಂಗಭೂಮಿ ಹಾಗೂ ಸಾಹಿತ್ಯ ಚಟುವಟಿಕೆಯಲ್ಲಿ ಬೆನ್ನುಲುಬಾಗಿದ್ದಾರೆ.