ಸೇವಂತಿ ಪ್ರಸಂಗ

ನಾಟಕದ ಬಗ್ಗೆ

ಕೊಳಗೇರಿ ತಿಪ್ಪೇಕ್ರಾಸ್‌ನ ಬಲೂನ್ ಮಾರುವ ಹುಡುಗಿ ಸೇವಂತಿ. ಈಕೆಯ ತಂದೆ ಜವರಣ್ಣ ಅವಳಿಗೊಬ್ಬ ಮಲತಾಯಿ. ಒಮ್ಮೆ ಬಲೂನ್ ಮಾರುತ್ತಿರುವ ಸಂದರ್ಭದಲ್ಲಿ ಭಾಷಾಶಾಸ್ತ್ರ ಪಂಡಿತನಾದ ಭಾರ್ಗವಶಾಸ್ತ್ರೀ ಸೇವಂತಿಯನ್ನು ನೋಡಿ ಅವಳ ಭಾಷೆಯಲ್ಲಿರುವ ಒರಟುತನವನ್ನೂ, ಭಾಷೆಯ ಮಿಶ್ರತೆಯನ್ನು ಗುರುತಿಸಿ, ಆಕಸ್ಮಿಕವಾಗಿ ಸಿಕ್ಕ ಸಂಸ್ಕೃತ ಪಂಡಿತ ಕ್ಯಾಪ್ಟನ್ ಕಲ್ಯಾಣಪುರ್‌ಕರ್ ಎದುರು ’ಇವಳನ್ನು ಆರೇ ತಿಂಗಳನಲ್ಲಿ ಮಿಸ್. ರಾಜಧಾನಿ ಮಾಡುತ್ತೇನೆ’ ಎಂದು ಛಾಲೆಂಜ್ ಮಾಡುತ್ತಾನೆ. ಸೇವಂತಿ ಎದೆಯೊಳಗೆ ತಾನು ಮಿಸ್. ರಾಜಧಾನಿ ಆಗಬೇಕೆಂಬ ಆಸೆ ಹುಟ್ಟುತ್ತದೆ. ಅದಕ್ಕಾಗಿ ಭಾರ್ಗವಶಾಸ್ತ್ರಿಯ ಮನೆಯನ್ನು ಸೇರುತ್ತಾಳೆ. ಆರು ತಿಂಗಳ ತರಬೇತಿಯ ನಂತರ ಸೌಂದರ್ಯ ಸ್ವರ್ಧೆಯಲ್ಲಿ ’ಮಿಸ್. ಸೇವಂತಿ’ಯಾಗಿ ಆಯ್ಕೆಯಾಗುತ್ತಾಳೆ. ಅವಳನ್ನು ಬಳಸಿಕೊಳ್ಳಲು ವ್ಯವಸ್ಥೆ ಮುಂದಾಗುತ್ತದೆ. ಸೇವಂತಿ ರೋಸಿ ಹೋಗುತ್ತಾಳೆ. ಭಾರ್ಗವ ಶಾಸ್ತ್ರಿ ತನ್ನ ಕೆಲಸ ಮುಗೀತು ಎಂಬಂತೆ ವರ್ತಿಸುತ್ತಾನೆ. ಅವನ ವರ್ತನೆಯಿಂದ ಬೇಸರಗೊಂಡು ಅವನ ಮನೆ ಬಿಟ್ಟು ಹೊರಡುತ್ತಾಳೆ.

ನಿರ್ದೇಶಕರ ಬಗ್ಗೆ

ದಾವಣಗೆರೆ ಜಿಲ್ಲೆಯ ಹರಿಹರದ ಇವರು ಎಂ.ಎ., ಪದವೀಧರರು. ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ರಂಗಾಯಣ ಪ್ರಾರಂಭವಾದಾಗಿಂದ ನಟನಾಗಿ ಹಾಗೂ ರಂಗಭೂಮಿಯ ವಿವಿಧ ವಿಭಾಗಗಳಲ್ಲಿ ವಿಶೇಷ ಪರಿಣಿತಿ ಹೊಂದಿದ್ದಾರೆ. ಸುಮಾರು ೪೦ಕ್ಕೂ ಹೆಚ್ಚು ನಾಟಕ ಹಾಗೂ ಮಕ್ಕಳ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಕಥೆ ಕವನ ಮತ್ತು ನಾಟಕ ಮತ್ತು ಮಕ್ಕಳ ನಾಟಕಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಇದಿ ತಾಯಿ, ಶರೀಫ, ನನ್ನೊಳು ನೀ ನಿನ್ನೊಳು ನಾ, ಮುಕ್ತಿ, ಕಡಲ ದೋಣಿ, ಬೀಚಿ ಬುಲೆಟ್ಸ್, ಕುಹುಕುಹೂ ಕೋಗಿಲೆ(ಮಕ್ಕಳ ನಾಟಕ) ಇವರ ಪ್ರಕಟಿತ ನಾಟಕಗಳು. ಇದಿತಾಯಿ ನಾಟಕಕ್ಕೆ ಸಮತೆಂತೋ ಪ್ರಶಸ್ತಿ, ಆರ್‍ಯಭಟ ಸಾಹಿತ್ಯ ಪ್ರಶಸ್ತಿ, ಕಡಲದೋಣಿ ನಾಟಕಕ್ಕೆ ಆಕಾಶವಾಣಿ ನಾಟಕ ರಚನಾ ಪ್ರಶಸ್ತಿ, ಶೂರಸೇನಾ ನಾಟಕಕ್ಕೆ ಗ್ರಾಮರಂಗ (ರಟ್ಟಿಹಳ್ಳಿ). ಪ್ರಶಸ್ತಿ, ಕುಂಕುಮ ನಾಟಕಕ್ಕೆ ’ನಾಟಕ ಬೆಂಗಳೂರು’ ಪ್ರಶಸ್ತಿ, ಆಶ್ರಯ ಕಥೆಗೆ ಕನ್ನಡ ಪ್ರಭ ಉಗಾದಿ ಕಥಾ ಸ್ಪರ್ಧೆಯ ಬಹುಮಾನ ಲಭಿಸಿವೆ. ಅನೇಕ ಕಿರುತೆರೆ, ಹಿರಿತೆರೆ ಹಾಗು ಸಾಕ್ಷ್ಯಚಿತ್ರಗಳಲ್ಲಿ ಅಭಿನಯಿಸಿರುವ ಇವರು, ಸಾಧನೆ, ಸಂಕ್ರಾಂತಿ, ಗೆಳತಿ, ಮಹಾಮಾಯಿ ಮೆಗಾ ಧಾರವಾಹಿಗಳಿಗೆ ಸಂಭಾಷಣೆಯನ್ನು, ಹತ್ತಾರು ಸಾಕ್ಷ್ಯಚಿತ್ರಗಳಿಗೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನು ರಚಿಸಿದ್ದಾರೆ. ಕೈಸಾಲೆ ಕಂಸಾಳೆ ಮಕ್ಕಳ ಚಲನಚಿತ್ರಕ್ಕೆ ಸಂಭಾಷಣೆಯನ್ನು ರಚಿಸಿದ್ದಾರೆ. ರಂಗಾಯಣ ರೆಪರ್ಟರಿ ತಂಡಕ್ಕೆ ಸದ್ದು ವಿಚಾರಣೆ ನಡೆಯುತ್ತಿದೆ ನಾಟಕವನ್ನು ನಿರ್ದೇಶಿಸಿದ್ದಾರೆ. ಶಬ್ಧ ನಿಶ್ಯಬ್ಧ ನಾಟಕದ ನಿರ್ದೇಶನ ನಿರ್ವಹಣೆ ಮಾಡಿದ್ದಾರೆ. ಅನೇಕ ರಂಗಭೂಮಿಯ ಖ್ಯಾತ ನಿರ್ದೇಶಕರಿಗೆ ಸಹಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಂಘಟನೆಯಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿ ಅನೇಕ ನಾಟಕೋತ್ಸವದ ಸಂಚಾಲಕರಾಗಿ ಯಶಸ್ವಿಗೊಳಿಸಿದ್ದಾರೆ. ರಂಗಾಯಣವು ದೇಶ ವಿದೇಶಗಳಲ್ಲಿ ಪ್ರದರ್ಶಿಸಿದ ಎಲ್ಲ ನಾಟಕಗಳಲ್ಲೂ ಇವರು ಭಾಗವಹಿಸಿದ್ದಾರೆ. ರಂಗಾಯಣವು ನಡೆಸುತ್ತಿದ್ದ ಸಂಜೆ ರಂಗಶಾಲೆಯ ಪ್ರಾಂಶುಪಾಲರಾಗಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ರಂಗಶಾಲೆಯ ಸಂಯೋಜಕ-ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ರಂಗಭೂಮಿಯ ಅಧ್ಯಯನಕ್ಕಾಗಿ ಮಾನವ ಸಂಪನ್ಮೂಲ ಇಲಾಖೆಯಿಂದ ಫೆಲೋಶಿಪ್ ದೊರತಿದೆ. ಅನೇಕ ಸಂಘ ಸಂಸ್ಥೆಗಳು ಇವರ ಸೇವೆಯನ್ನು ಗುರುತಿಸಿ ಗೌರವಿಸಿವೆ. ಕರ್ನಾಟಕ ಸರ್ಕಾರದ ಕನ್ನಡ ಸಾಹಿತ್ಯ ಅಕಾಡೆಮಿಯು
೨೦೦೬ ರ ಪುಸ್ತಕ ಪ್ರಶಸ್ತಿಗೆ ನನ್ನೊಳು ನೀ ನಿನ್ನೊಳು ನಾ ನಾಟಕ ಕೃತಿಯನ್ನು ಆಯ್ಕೆ ಮಾಡಿ ಗೌರವಿಸಿದೆ. ಕರ್ನಾಟಕ ನಾಟಕ ಅಕಾಡೆಮಿಯು ಇವರ ರಂಗಭೂಮಿಯ ಸಾಧನೆಗೆ ೨೦೦೯ ರ ರಂಗ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ರಾಷ್ಟ್ರೀಯ ಪಿಆರ್‌ಐಸಿ ಸಂಸ್ಥೆಯು ರಂಗಭೂಮಿಯ ಸಾಧನೆಗೆ ೨೦೧೩ ರ ರಂಗ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ನಾಟಕ ನಿರ್ದೇಶಕರ ನುಡಿ

ಹೊರನಾಡಿನ ಕನ್ನಡಿಗರೊಂದಿಗೆ ’ಸಾಂಸ್ಕೃತಿಕ ಅನುಸಂಧಾನ’ವನ್ನು ಆರಂಭಿಸಿ ರಂಗಾಯಣ ಮತ್ತೊಂದು ಮಹತ್ವದ ಹೆಜ್ಜೆಯನ್ನಿಡಲು ರಂಗಾಯಣ ನಿರ್ದೇಶಕರು ಮುಂದಾಗಿರುವುದು ಅತ್ಯಂತ ಪ್ರಶಂಸನೀಯವಾದದ್ದು. ಈ ಹೊಸ ಪ್ರಕ್ರಿಯೆಯಲ್ಲಿ ರಂಗಾಯಣದ ಸಹಯೋಗದಲ್ಲಿ ’ದೆಹಲಿ ಕರ್ನಾಟಕ ಸಂಘ’ದ ಕಲಾವಿದರಿಗೆ ನಾಟಕವನ್ನು ನಿರ್ದೇಶನ ಮಾಡಲು ನನ್ನನ್ನು ಆಯ್ಕೆ ಮಾಡಿ ಕಳುಹಿಸಿ ಕೊಟ್ಟ ರಂಗಾಯಣದ ನಿರ್ದೇಶಕರಿಗೆ ನಾನು ಅಭಾರಿಯಾಗಿದ್ದೇನೆ.

ದೆಹಲಿ ಕರ್ನಾಟಕ ಸಂಘ ದೆಹಲಿಯೊಳಗಿರುವ ’ಮಿನಿ ಕರ್ನಾಟಕ’. ವಿಸ್ಮಯ ಹುಟ್ಟಿಸುವಷ್ಟು ಸದೃಢವಾಗಿ ಬೆಳೆಸಿದ್ದಾರೆ. ಸಂಘದ ಅಧ್ಯಕ್ಷರಾದ ಶ್ರೀ ವಸಂತ ಶೆಟ್ಟಿ ಬೆಳ್ಳಾರೆಯವರು ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಎಂ. ನಾಗರಾಜ ಅವರು ಕೇವಲ ೧೯ ದಿನದಲ್ಲಿ ನಾಟಕವೊಂದನ್ನು ಸಿದ್ದಪಡಿಸಬೇಕೆಂದಾಗ ನಾನು ಸ್ವಲ್ಪ
ವಿಚಲಿತನಾದೆ. ನನ್ನ ರಂಗಪಯಣದಲ್ಲಿ ದಿನಾಂಕವನ್ನು ನಿಗದಿ ಪಡಿಸಿ ನಾಟಕದ ತಯಾರಿಗೆ ತೊಡಗಿದ ಉಹಾಹರಣೆ ಇಲ್ಲ. ಇಲ್ಲಿ ಪ್ರದರ್ಶನದ ದಿನಾಂಕ ಮೊದಲೇ ನಿಗದಿಯಾಗಿತ್ತು. ನಾಟಕ ಯಾವುದು ಎಂಬ ಕಲ್ಪನೆಯೇ ಇಲ್ಲದೇ ಕಲಾವಿದರ ಮುಂದೆ ನಿಂತೆ. ಅವರನ್ನೆಲ್ಲ ನೋಡಿದ ಮೇಲೆ ಡಾ. ಜಯಂತ ಕಾಯ್ಕಿಣಿಯವರ ’ಸೇವಂತಿ ಪ್ರಸಂಗ’ ಸರಿಯೆಂದು ಆಯ್ಕೆ ಮಾಡಿಕೊಂಡೆ. ಕಲಾವಿದರೆಲ್ಲ ಸಂಘದ ಭಾಗಿಯಾದವರು. ವಿವಿಧ ಇಲಾಖೆಯಲ್ಲಿ ನೌಕರರು. ತಾಲೀಮಿನ ಸಮಯಕ್ಕೆ ಸರಿಯಾಗಿ ಬಾರಲು ಸಾಧ್ಯವಾಗದಿರುವಷ್ಟು ಒತ್ತಡದಲ್ಲಿರುವವರು. ಆದರೂ ಸಮಯ ಹೊಂದಿಸಿಕೊಂಡು ನನ್ನೊಂದಿಗೆ ಸಹಕರಿಸಿದ್ದಾರೆ ಪ್ರೀತಿ ವಿಶ್ವಾಸದಿಂದ ನಡೆದುಕೊಂಡಿದ್ದಾರೆ. ಸದಸ್ಯರಲ್ಲಿ ತುಂಬಾ ಉತ್ತಮ ಕಲಾವಿದರಿದ್ದಾರೆ. ಇವರಿಗೆ ಸರಿಯಾದ ತರಬೇತಿ ಸಿಕ್ಕರೆ ಶ್ರೇಷ್ಠ ಕಲಾವಿದರಾಗುವುದರಲ್ಲಿ ಅನುಮಾನವೇ ಇಲ್ಲ. ಒಂದು ಸಮರ್ಥ ವೃತ್ತಿಪರತೆಯುಳ್ಳ ರಂಗತಂಡವನ್ನು ರೂಪಿಸಲು ಸಶಕ್ತ ಕಲಾವಿದರಿದ್ದಾರೆ. ಇವರಿಗೆ ಸೂಕ್ತ ತರಬೇತಿ ಬೇಕು ಅಷ್ಟೆ. ನಾಟಕವನ್ನು ಸಾಧ್ಯವಾದಷ್ಟು ಸ್ಥಳೀಯ ಸಂಪನ್ಮೂಲಗಳನ್ನು ಬಳಿಸಿಕೊಂಡು ಕಟ್ಟಿದ್ದೇನೆ. ಜಾಹೀರಾತು ಯುಗದಲ್ಲಿ ’ಹೆಣ್ಣು’ನ್ನು ಮಾರಾಟದ ಸರಕಿನಂತೆ ಬಿಂಬಿಸಲಾಗಿದೆ, ಅವಮಾನಿಸಲಾಗುತ್ತಿದೆ. ಭಾರತೀಯ ಸಂದರ್ಭದಲ್ಲಿ ’ಸ್ತ್ರೀ ಸಂಸ್ಕೃತಿ’ ಗೆ ತನ್ನದೇ ಆದ ಸಾಂಸ್ಕೃತಿಕ ಮೌಲ್ಯಗಳಿವೆ. ಈ ಸ್ತ್ರೀತನ ಆಧುನಿಕತೆಯ ಭರಾಟೆಯಲ್ಲಿ ಅಪಮೌಲ್ಯವಾಗದಂತೆ ಕಾಪಾಡಿಕೊಳ್ಳುವುದು ಹೇಗೆ? ಎಂಬುದು ದೈತ್ಯ ಪ್ರಶ್ನೆಯಾಗಿದೆ. ಈ ನಾಟಕ ಅಂತಹದೊಂದು ಪ್ರಶ್ನೆಯನ್ನು ನಿಮ್ಮ ಮುಂದಿಡುತ್ತದೆ. ಸಂಘದ ಅಧ್ಯಕ್ಷರಾದ ಶ್ರೀ ವಸಂತಶೆಟ್ಟಿ ಬೆಳ್ಳಾರೆ ರಂಗಪ್ರೀತಿ ಅಪಾರ. ಅವರ ಕಲ್ಪನೆಯ ಕೂಸಿದು. ಇದು ಮುಂದೆ ಕೂಡ ಮುಂದುವರಿಯಬೇಕಷ್ಟೆ. ಈ ೨೦ ದಿನಗಳಲ್ಲಿ ತುಂಬಾ ಪ್ರೀತಿಯನ್ನು ಅನುಭವಿಸಿದ್ದೇನೆ. ಇಲ್ಲಿಯ ಪದಾಧಿಕಾರಿಗಳು ಸಿಬ್ಬಂದಿಗಳು ಹಾಗೂ ನನ್ನ ಕಲಾವಿದರು ನನ್ನನ್ನು ಪ್ರೀತಿಯಿಂದ ನಡೆಸಿಕೊಂಡಿದ್ದಾರೆ. ಶ್ರೀ ಶಿವಾನಂದ ಇಂಗಳೇಶ್ವರರವರು ನನ್ನ ಬೆನ್ನಿಗೆ ನಿಂತು ನಾಟಕವನ್ನು ಕಟ್ಟಲು ಸಹಕರಿಸಿದ್ದಾರೆ. ಸಹಕರಿಸಿದ ಡಾ.ಪುರುಷೋತ್ತಮ ಬಿಳಮಲೆಯವರನ್ನು ಮತ್ತು ಈ ಯೋಜನೆಟ್ಟಿಗಿರುವ ನಮ್ಮ ನಾಡಿನ ಶ್ರೇಷ್ಠ ಸಂಸ್ಕೃತಿ ಚಿಂತಕ ನನ್ನ ಮೆಚ್ಚಿನ ಕವಿ ಮತ್ತು ನಾಟಕಕಾರ ಡಾ. ಹೆಚ್.ಎಸ್.ಶಿವಪ್ರಕಾಶ್‌ರವರನ್ನು ನಾನು ನೆನೆಯಲೇಬೇಕು. ನಾಟಕವನ್ನು ನೋಡಿ ಅಭಿಪ್ರಾಯವನ್ನು ಖಂಡಿತ ತಿಳಿಸಿ