ಹೊರನಾಡು ಕನ್ನಡಿಗರ ಸಾಂಸ್ಕೃತಿಕ ಲೋಕಕ್ಕೆ ರಂಗಾಯಣ

ರಂಗಾಯಣ, ಮೈಸೂರು ಕರ್ನಾಟಕ ಸರ್ಕಾರದ ಸಂಪೂರ್ಣ ಸಹಕಾರದೊಂದಿಗೆ ತನ್ನ ೨೭ ವರ್ಷಗಳ ರಂಗ ಪಯಣದಲ್ಲಿ ಪ್ರಬುದ್ಧ ನಾಟಕಗಳ ಪ್ರದರ್ಶನದ ಮೂಲಕ ಸ್ಥಳೀಯವಾಗಿ ನಿರಂತರ ರಂಗ ಚಲನೆಯೊಂದಿಗೆ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ರಂಗಭೂಮಿಯ ಛಾಪನ್ನು ಮೂಡಿಸುವ ಹಾಗೂ ಬೆಳೆಸುವುದರ ಜೊತೆಗೆ ಸಾಮಾಜಿಕ, ಸಾಕ್ಷರತಾ ಆಂದೋಲನಗಳ ಪ್ರಗತಿಗೆ  ರಂಗ ತರಬೇತಿ ಶಿಬಿರಗಳು, ಬೀದಿನಾಟಕಗಳ ಮೂಲಕ ರಂಗಭೂಮಿಯ ಮೂಲಕ ಅರಿವಿನ ಚಟುವಟಿಕೆಗಳನ್ನು ನಡೆಸಿದೆ. ಈಗ ರಂಗಾಯಣ ತನ್ನ ಬೆಳ್ಳಿ ರಂಗಪಯಣವನ್ನು ಆರಂಭಿಸಿದ್ದು,  ರಂಗ ಚಟುವಟಿಕೆಗಳನ್ನು ವಿಸ್ತರಿಸುತ್ತ ಹೊರನಾಡು ಕನ್ನಡಿಗರೊಂದಿಗೆ ಕನ್ನಡ ಸಾಂಸ್ಕೃತಿಕ ಅನುಸಂಧಾನವನ್ನು ನಡೆಸಲು ಮುಂದಾಗಿದೆ. ರಂಗಾಯಣದಲ್ಲಿ ನುರಿತ ಅನುಭವಿ ಕಲಾವಿದರು, ತಂತ್ರಜ್ಞರು, ನಿರ್ದೇಶನದಲ್ಲಿ ಪರಿಣಿತಿ ಹೊಂದಿರುವವರಿದ್ದು, ಪ್ರಯೋಗಾತ್ಮಕ ರಂಗಕ್ರಿಯೆಯಲ್ಲಿ ವಿಸ್ತರಿಸುವ ದೃಷ್ಠಿಯಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರದರ್ಶನ, ರಂಗೋತ್ಸವಗಳು, ರಂಗ ತರಬೇತಿ ಶಿಬಿರಗಳನ್ನು, ನಾಟಕ ನಿರ್ದೇಶನಗಳನ್ನು ನಿರ್ವಹಿಸುವತ್ತ ಕಾರ್ಯೋನ್ಮುಖವಾಗಿದ್ದು, ರಂಗ ಕ್ರಿಯೆಯಲ್ಲಿ ವಿಕೇಂದ್ರಿಕರಣಗೊಳಿಸುವ ರಂಗಭೂಮಿ ಚಟುವಟಿಕೆಗಳನ್ನು ವಿಸ್ತರಿಸಲು ರಂಗಾಯಣ ತನ್ನ ಬೆಳ್ಳಿ ರಂಗಪಯಣದಲ್ಲಿ ಕಾರ್ಯೋನ್ಮುಖವಾಗಿದೆ.

ಈ ದಿಸೆಯಲ್ಲಿ ದೆಹಲಿ ಕರ್ನಾಟಕ ಸಂಘವು ಆಯೋಜಿಸಿರುವ ದಶಮಾನೋತ್ಸವದ ಸಂದರ್ಭದಲ್ಲಿ ಸಿದ್ಧಪಡಿಸುತ್ತಿರುವ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಒಂದು ಉತ್ತಮ ನಾಟಕವನ್ನು ರಂಗಾಯಣದ ಸಹಯೋಗದೊಂದಿಗೆ ನಡೆಸಿಕೊಡಬೇಕೆಂಬ ದೆಹಲಿ ಕರ್ನಾಟಕ ಸಂಘದ ಪದಾಧಿಕಾರಿಗಳ ಇಚ್ಛೆಯನುಸಾರವಾಗಿ ರಂಗಾಯಣ ಮೈಸೂರಿನ ಹಿರಿಯ ಕಲಾವಿದರು, ಪ್ರಶಸ್ತಿ ಪುರಸ್ಕೃತ ನಾಟಕಕಾರರಾದ ಶ್ರೀ ಮಂಜುನಾಥ ಬೆಳಕೆರೆಯವರ ನಿರ್ದೇಶನದಲ್ಲಿ ಜಯಂತ್ ಕಾಯ್ಕಿಣಿಯವರ ’ಸೇವಂತಿ’ ನಾಟಕವನ್ನು ಯಶಸ್ವಿಯಾಗಿ ಸಿದ್ಧಪಡಿಸಲಾಗಿದೆ. ರಂಗಾಯಣವು ಆರಂಭದಿಂದಲೂ ದೆಹಲಿ ಕರ್ನಾಟಕ ಸಂಘದೊಂದಿಗೆ ರಂಗಾಯಣದ ಸಂಬಂಧ ಬಿಡಿಸಲಾರದ್ದು, ಈವರೆಗೂ ನಿರಂತವಾಗಿ ಉತ್ತಮ ಭಾಂದವ್ಯ, ಸಹಕಾರಗಳೊಂದಿಗೆ ಸಾಗಿ ಬಂದಿದ್ದೇವೆ. ರಂಗಾಯಣದ ಆರಂಭ ಹಾಗೂ ಬೆಳವಣಿಗೆಯ ಹಂತದಲ್ಲಿ ಸಂಘದ ಪಾತ್ರ ಹಿರಿದಾದದ್ದು ಎಂಬುದು ಸ್ತುತ್ಯಾರ್ಹ. ರಂಗಾಯಣದ ಸಹಯೋಗದಲ್ಲಿ ನಡೆಸುತ್ತಿರುವ ರಂಗ ಪ್ರಯೋಗ ದೇಶದಾದ್ಯಂತ ಹೊರನಾಡು ಕನ್ನಡಿಗರ ಕನ್ನಡ ಸಂಸ್ಕೃತಿಯ ಆಶಯ ಮತ್ತು ಆಸಕ್ತಿಯನ್ನು ಪ್ರಕರಿಸುತ್ತ, ದೇಶದಾದ್ಯಂತ ಪ್ರದರ್ಶನಗೊಳ್ಳಲು ಕರ್ನಾಟಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ಹೃದಯಪೂರ್ವಕ ಪ್ರಯತ್ನ ಯಶಸ್ವಿಯಾಗಲಿ ಎಂದು ೧೦ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ರಂಗಾಯಣ ಶುಭ ಕೋರುತ್ತದೆ.