ರಾವಿ ನದಿಯ ದಂಡೆಯಲ್ಲಿ

13  ಸೆಪ್ಟೆಂಬರ್   2015 – ಸಂಜೆ 6.30ಕ್ಕೆ | ಸ್ಥಳ : ಭೂಮಿಗೀತ | ನಿರ್ದೇಶನ : ಎಸ್. ಆರ್‍. ರಮೇಶ್ | ಮೂಲ: ಅಜ್ಗರ್‍ ವಜ್ಝಾಹತ್ | ಕನ್ನಡ ಅನುವಾದ : ಡಾ|| ತಿಪ್ಪೆಸ್ವಾಮಿ | ಕವಿತೆಗಳು : ಇಟಗಿ ಈರಣ್ಣ  |

ಈಗಾಗಲೇ ಅನೇಕ ಯಶಸ್ವಿ ಪ್ರದರ್ಶನಗಳನ್ನು ಕಂಡಿರುವ ನಾಟಕ ರಾವಿ ನದಿ ದಂಡೆಯಲ್ಲಿ. ಸುಮಾರು ಎರಡು ದಶಕದ ಹಿಂದೆ ಮೈಸೂರು ಸಮುದಾಯ ಪ್ರಸ್ತುತ ಪಡಿಸಿದ ಈ ನಾಟಕದ ವಸ್ತು ಮತ್ತು ಸಂದರ್ಭ ಅಖಂಡ ಭಾರತದ ವಿಭಜನೆಯಾದ ಘಳಿಗೆಗಳಿಗೆ ನಮ್ಮನ್ನು ಕರೆದೊಯ್ಯುತ್ತದೆ. ವಿಭಜನನೆಯಾದ ನಂತರ ಪಾಕಿಸ್ತಾನಕ್ಕೆ ಸೇರುವ ಲಾಹೋರ್‍ ನಗರದ ಹವೇಲಿಯೊಂದರಲ್ಲಿ ಉಳಿದುಬಿಡುವ ಹಿಂದು ಮುದುಕಿ ರತನ್ ತಾಯಿ ಮತ್ತು ಅಲ್ಲಿಗೆ ಹೊಸದಾಗಿ ಬರುವ ಸಿಖಂದರ್‍ ಮಿರ್ಝಾರ ಕುಟುಂಬದ ನಡುವೆ ಚಿಗುರೊಡೆಯುವ ಬಾಂಧವ್ಯದ ಎಳೆ ಮೂಲಭೂತವಾದಿಗಳನ್ನು ಅಲಗಾಡಿಸುವ ಮಟ್ಟಕ್ಕೆ ಗಟ್ಟಿಯಾಗುವುದೇ ವಸ್ತುವಿನ ಮೂಲ. ಧರ್ಮದ ಸೀಮೆಗಳನ್ನು ಮೀರಿ ಬೆಳೆಯುವ ಮಾನವೀಯ ಸಂಬಂಧಗಳು ತನ್ನ ಕಬಂಧ ಬಾಹುವಿನಲ್ಲೇ ಬಂಧಿಯಾಗಬೇಕೆಂದು ಬಯಸುವ ಮೂಲಭೂತವಾದ. ಮಾನವೀಯತೆಗೆ ಮಿಡಿಯುವ ಆದರ್ಶವಾದಿಗಳು ಅದನ್ನು ವಿರೋಧಿಸುವ ಮತೀಯವಾದಿಗಳ ನಡುವಿನ ತಿಕ್ಕಾಟದ ಮಧ್ಯದಲ್ಲಿ ಅರಳುವ ಕವಿ ಹೃದಯಗಳ ಕಾವ್ಯ. ಎಲ್ಲೆಲ್ಲೂ ಅದೇ ಹೂ ಅರಳುವುದನ್ನು ಅದೇ ಹಕ್ಕಿ ರೆಕ್ಕೆ ಬಿಚ್ಚಿ ಹಾರುವುದನ್ನ ಅದೇ ಸೂರ್ಯ ಉದಯಿಸುವುದನ್ನು ಕಂಡು ನಲಿಯುವ ವಲಸೆ ಹಕ್ಕಿಗಳು ನಾಟಕದ ಪ್ರಮುಖ ಆಕರ್ಷಣೆ. ಸರಿಯಾಗಿ ೧೮ ವರ್ಷದ ನಂತರ ಹಿಂದೆ ನಟಿಸಿದ ನಟರು ಹಾಗೂ ಹೊಸಬರು ಸೇರಿ ಈ ಪ್ರಯೋಗವನ್ನು ಪ್ರಸ್ತುತಪಡಿಸುತ್ತಿದ್ದಾರೆ.

ವೇದಿಕೆಯಲ್ಲಿ
ಉಷಾ ಭಂಡಾರಿ
ಭುವನ ಮೈಸೂರು
ದ್ವಾರಕಾನಾಥ್
ಶಿವಾಜಿರಾವ್ ಜಾಧವ್

ಸೈಯದ್ ಅಸ್ಗರ್‍ ವಜಾಹತ್ ಉತ್ತರ ಪ್ರದೇಶದ ಫತೇಪುರ್‍ ಜಿಲ್ಲೆಯಲ್ಲಿ ೧೯೪೬ರಲ್ಲಿ ಜನಸಿದ ಸೈಯದ್ ಅಸ್ಗರ್‍ ವಸಾಹತ್ ದೇಶ ಕಂಡ ಪ್ರಮುಖ ಹಿಂದಿ ಲೇಖಕರಲ್ಲಿ ಒಬ್ಬರು. ಐದು ಕಾದಂಬರಿ, ಆರು ನಾಟಕ, ಸಣ್ಣ ಕಥೆಗಳ ಐದು ಸಂಕಲನ, ಬೀದಿ ನಾಟಕಗಳ ಸಂಕಲನ, ಪ್ರವಾಸ ಕಥನ ಹೀಗೆ ಅವರ ಲೇಖನಿಯ ಕೋಡುಗೆಯಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಸ್ವತಃ ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸುವ ವಜಾಹತ್, ಅನೇಕ ಬಾಲಿವುಡ್ ಚಿತ್ರಗಳಿಗೆ ಚಿತ್ರಕಥೆ ಬರೆದಿದ್ಧಾರೆ. ಅವರ “ಜಿಸ್ನೆ ಲಾಹೋರ್‍ ನಹಿ ದೇಖಾ” ನಾಟಕವನ್ನು ಮೊದಲು ಹಬೀಬ್ ತನ್ವೀರ್‍ ೧೯೮೯ರಲ್ಲಿ ನಿರ್ದೇಶಿಸಿದರು. ಈ ನಾಟಕವು ಜಗತ್ತಿನ ಲಾಹೋರ್‍ ಸೇರಿದಂತೆ ಜಗತ್ತಿನ ಅನೇಕ ನಗರಗಳಲ್ಲಿ ಪ್ರದರ್ಶನ ಕಂಡಿದೆ.

ಡಾ|| ತಿಪ್ಪೇಸ್ವಾಮಿ ಮೈಸೂರು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾಗಿದ್ದ ಡಾ|| ತಿಪ್ಪೇಸ್ವಾಮಿ ಅನೇಕ ಹಿಂದಿ ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಜಿಸ್ನೇ ಲಾಹೋರ್‍ ನಹಿ ದೇಖ್ಯಾ ವೋ ಜನ್ಮ್ಯಾ ಹಿ ನಹಿ ಕೃತಿಯ ಕನ್ನಡ ಅವತರಣಿಕೆ ರಾವಿ ನದಿಯ ದಂಡೆಯಲ್ಲಿ ಅತಿ ಹೆಚ್ಚು ಯಶಸ್ಸು ಕಂಡ ಅನುವಾದಗಳಲ್ಲಿ ಒಂದು.