..

ಬೆಂದ ಕಾಳು ಆನ್ ಟೋಸ್ಟ್

‘ಬೆಂದ ಕಾಳು ಆನ್ ಟೋಸ್ಟ್’ ಸದ್ಯ ನಾಗರೀಕ ಬದುಕು ನಾಗಾಲೋಟದಲ್ಲಿ ಮಂಕು ಕವಿದ ಸಾವಿರಾರು ತಲೆಗಳಿಗೆ ಸ್ವಾದಿಷ್ಟ ಆಹಾರವಾಗುತ್ತಿರುವ ಮಾಯಾನಗರಿಯ ನಿಜ ಬಿಕ್ಕಟ್ಟಿನೆಡೆಗೆ ಸೃಜನಶೀಲ ನಾಟಕದ ಮೂಲಕ ಒಂದು ನೋಟವಾಗಿದೆ. ಹೊಟ್ಟೆ ಬಟ್ಟೆಗಳ ಹಸಿವಿನಿಂದ ಹಿಡಿದು ಮುಗಿಲು ಮುಟ್ಟುವ ಸ್ಟೇಟಸ್‌ನ ದಾಹಕ್ಕೆ ನಾನಾ ಚಿಟ್ಟೆಗಳ ನಗರ ಮಕರಂದದ ಶೋಕಿಯಾಸೆಗೆ ಊರು ಬಿಟ್ಟ ಹೈವೇಗಳ ಅಮಲಿಗೆ ಕಪಟ ಕಳ್ಳಾಟಗಳ ತಾಪಕ್ಕೆ ಗಿಜಿಗುಡುವ ನಗರ ಬೇಕು ಬೇಕೆಂಬ ಕೊಳ್ಳುಬಾಕರ ದಾಹಕ್ಕೆ ತುತ್ತಾಗಿ ತತ್ತರಿಸುತ್ತಿರುವ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಸಂಪನ್ನವಾಗಿದ್ದ ಬೆಂದಕಾಳೂರೆಂಬ ನಗರದ ಚಿತ್ರಣವಿದು. ಇದು ಹೈಟೆಕ್‌ನೆಡೆಗಿನ ದಾಂಗುಡಿಯಲ್ಲಿ ನಗರೀಕರಣದ ಒರಟು-ಗಡಸು ಓಟಕ್ಕೆ ಹೊಸಕಿ ಹೋದ ನಾಜೂಕು ಮನಸ್ಸುಗಳ, ನವಿರು ಕನಸುಗಳ ಭೀಕರ ವಾಸ್ತವತೆಯ ಕಥೆ ಮತ್ತು ತುಳಿಸಿಕೊಂಡ ಆಸೆಯ ಚಿಗುರುಗಳು ಕತ್ತೆತ್ತುವ ವಿಕಾರ ಪ್ರಯತ್ನದ ದರ್ಶನ. ನಗರವೆಂಬ ದೈತ್ಯನ ಪ್ರಾಣ ಪಕ್ಷಿಯನ್ನು ಹಿಡಿದಿಟ್ಟಿರುವ ಮೊಬೈಲ್, ಕಂಪ್ಯೂಟರ್ ಪೆಟ್ಟಿಗೆಗಳು ಬೀಸಿರುವ ಡಿಜಿಟಲ್ ಜಾಲಕ್ಕೆ ಕ್ರೂರವಾಗಿ ಬಲಿಯಾಗುವ ಕೋಮಲ ಕರುಳುಗಳ ಹಸಿ ಚಿತ್ರಣವಿದು.

ದೂರದಿಂದ ಓರಣಗೊಂಡ ಗಾಜಿನಂತೆ ಹೊಳೆಯುವ ನಗರಜೀವನದ ಕಲ್ಪನೆಯ ಒಳಗೆ ಮಿಡುಕುತ್ತಿರುವ ಹಲವಾರು ಕರಾಳ ಪಾತ್ರಗಳನ್ನು ಮತ್ತು ಸನ್ನಿವೇಶಗಳನ್ನು ನಾಟಕ ಉಸಿರಾಡುತ್ತದೆ. ತೀವ್ರ ಏಕತಾನತೆಯಲ್ಲಿ ಎಂದೂ ಆತ್ಮೀಯ ಒತ್ತಾಸೆ ಸಿಗದೆ ನಗರದ ಕೃತಕತೆಗೆ ರೋಸಿ ಹೋದ ಅಂಜನಾ ಯಶಸ್ಸಿನ ಮೆಟ್ಟಿಲುಗಳನ್ನೇರುವ ಹಪಾಹಪಿಯಲ್ಲಿ, ದೂರದ ಸಿಂಗಾಪುರಕ್ಕೆ ಹಾರುವ ಆತುರದಲ್ಲಿ ದಾರಿ ತಪ್ಪಿ ದಿಗ್ಭ್ರಮೆಗೊಳಗಾದರೂ ಮತ್ತೆ ಸಾಧನೆಗಳ ತಡೆಗಳನ್ನು ಮೀರಿ ಈಜಲು ಛಾತಿ ಗಟ್ಟಿಯಾಗಿಸಿಕೊಳ್ಳುವ ಸುಮ್ಮನೆ ಅನ್ಯರೊಂದಿಗೆ ಚೆಲ್ಲಾಟವಾಡುವ ವಿಚಿತ್ರ ಗೀಳೇ ಮೂರ್ತಗೊಂಡ ಪ್ರಭಾಕರ್ ತನ್ನ ಸ್ವಂತ ಬದುಕಲ್ಲಿ ಕಾಣುವ ದುರಂತ, ಎಂತಾ ಸವಾಲನ್ನೂ ಸಂಭಾಳಿಸಬಲ್ಲ ಚಾಲಾಕಿತನದ ಮತ್ತು ಎಲ್ಲೂ ನುಸುಳಬಲ್ಲ ವಿಮಲಾ, ಪಟ್ಟಣದ ಜೀವನ ಸಿಗದೆ ಅಸೂಯೆಯ ಕೂಪದಲ್ಲಿ ನರಳುವ ಚಿನ್ನಸ್ವಾಮಿ, ಬದುಕಿನ ವಿಕ್ಷಿಪ್ತತೆಗೆ, ಭೀಕರತೆಗೆ ಸಾಕ್ಷಿಯಾಗಿ ಅದನ್ನು ಗಿಟಾರ್‌ನಲ್ಲಿ ನುಡಿಸುವ ಹಂಬಲದ ಕುಣಾಲ್, ಇತ್ಯಾದಿ ಹಲವು ಪಾತ್ರ ವೈವಿಧ್ಯಗಳ ಒಡಲಾಳದ ಹಸಿವು, ಆಶೆ, ಹತಾಶೆಗಳೇ ನಿಮ್ಮೆದುರಿನ ಬೆಂದ ಕಾಳು ಆನ್ ಟೋಸ್ಟ್.

 

ನಿರ್ದೇಶನ : ಶ್ರೀ ಚಿದಂಬರರಾವ್ ಜಂಬೆ

ಕನ್ನಡದ ಶ್ರೇಷ್ಠ ರಂಗ ತಜ್ಞ ಹಾಗೂ ರಂಗ ನಿರ್ದೇಶಕರು. ಶ್ರೀಯುತರು ರಾಷ್ಟ್ರೀಯ ನಾಟಕ ಶಾಲೆಯ ಪದವೀಧರರು. ನೀನಾಸಂ ರಂಗಸಂಸ್ಥೆಯ ಪ್ರಾಂಶುಪಾಲರಾಗಿ, ಮೈಸೂರಿನ ರಂಗಾಯಣದ ನಿರ್ದೇಶಕರಾಗಿ, ಮೈಸೂರು ವಿಶ್ವವಿದ್ಯಾಲಯದ ಗುಬ್ಬಿವೀರಣ್ಣ ಪೀಠದ ಗೌರವಾನ್ವಿತ ಅಧ್ಯಕ್ಷರಾಗಿ, ಸಾಣೇಹಳ್ಳಿಯ ಶಿವಕುಮಾರ ರಂಗ ಪ್ರಯೋಗ ಶಾಲೆಯ ಗೌರವಾನ್ವಿತ ನಿರ್ದೇಶಕರಾಗಿ ಹಾಗೂ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ನಾಟಕ ನಿರ್ದೇಶನಕ್ಕಾಗಿ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಪ್ರಶಸ್ತಿ ದೊರೆತಿದೆ.