ರಂಗಭೀಷ್ಮ ಬಿ.ವಿ.ಕಾರಂತ  ಕಾಲೇಜು ರಂಗೋತ್ಸವ 2019

ಆಧುನಿಕ ಕನ್ನಡ ರಂಗಭೂಮಿಯ ಅಪ್ರತಿಮ ನಿರ್ದೇಶಕ ರಂಗಭೀಷ್ಮ ಶ್ರೀ ಬಿ.ವಿ. ಕಾರಂತರಿಂದ ಆರಂಭವಾದ ಮೈಸೂರು ರಂಗಾಯಣವು ಕಳೆದ ಮೂವತ್ತು ವರ್ಷಗಳಿಂದ ಹೊಸ ಹೊಸ ನಾಟಕಗಳನ್ನು ಪ್ರಯೋಗಿಸುತ್ತಾ, ನಾಡಿನ ತುಂಬಾ ಪ್ರದರ್ಶಿಸುತ್ತ ನಾಟಕಾಭಿರುಚಿಯನ್ನು ಬೆಳೆಸುತ್ತಾ ಬಂದಿದೆ. ಕನ್ನಡದ ಮಹತ್ವದ ನಾಟಕಗಳಲ್ಲದೆ ಭಾರತದ ಬೇರೆ ಬೇರೆ ಭಾಷೆಗಳ ಹಾಗೂ ಜಗತ್ತಿನ ಬೇರೆ ಬೇರೆ ಭಾಷೆಗಳ ಶ್ರೇಷ್ಠ ನಾಟಕಕಾರರ ನಾಟಕಗಳನ್ನು ಯಶಸ್ವಿಯಾಗಿ ಪ್ರಯೋಗಿಸಿ ಇಂದು ಭಾರತೀಯ ರಂಗಭೂಮಿಯಲ್ಲೇ ಅತ್ಯಂತ ವೃತ್ತಿಪರ ರೆಪರ್ಟರಿಯೆಂಬ ಖ್ಯಾತಿಗೆ ಪಾತ್ರವಾಗಿದೆ.

ಇದಕ್ಕೆ ಮುಖ್ಯ ಕಾರಣ ಬುದ್ಧಿ, ಭಾವ, ವಿಚಾರಗಳ ಜೊತೆಗೆ ಸಾಹಿತ್ಯ, ಸಂಗೀತ ಮತ್ತು ನಟನೆಗಳ ಜಂಗಮ ಸ್ವರೂಪಿಯಂತಿದ್ದ ಬಿ.ವಿ. ಕಾರಂತರಂಥ ಅನುಭವಿ ರಂಗಕರ್ಮಿ ಮತ್ತು ಅವರೊಂದಿಗೆ ರಂಗಭೂಮಿಗೆ ತಮ್ಮ ಜೀವಿತವನ್ನು ಒಪ್ಪಿಸಿಕೊಂಡ ಇಲ್ಲಿನ ಕಲಾವಿದರ ಅವಿರತ ದುಡಿಮೆ ಮತ್ತು ಸದಾ ಹೊಸತನಕ್ಕೆ ತುಡಿಯುವ ಪ್ರಯೋಗಶೀಲ ಮನಸ್ಸುಗಳು. ಕಿಂದರಿಜೋಗಿ ಕವನದ ನಾಟಕ ರೂಪಾಂತರದಿಂದ, ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ರಂಗದರ್ಶನದವರೆಗೆ ರಂಗಾಯಣದ ನಟರ ಸಾಮರ್ಥ್ಯ ಬಿಡು ಬೀಸಾಗಿ ಚಾಚಿಕೊಂಡಿದೆ. ಕಥೆಯಿರಲಿ, ಕವಿತೆಯಿರಲಿ, ಬೃಹತ್ ಕಾದಂಬರಿಯೇ ಇರಲಿ ರಂಗಾಯಣದ ವೇದಿಕೆಯಲ್ಲಿ ಪ್ರದರ್ಶನಕ್ಕೆ ಅಣಿಗೊಂಡಿತೆಂದರೆ ಅದು ನಾಡಿನ ತುಂಬಾ ನಾಟಕ ಪ್ರೇಮಿಗಳ ಮನೆಮಾತಾಗುತ್ತದೆ.

ರಂಗ ಚಟುವಟಿಕೆಗಳ ಮೂಲಕವೇ ಆರೋಗ್ಯಪೂರ್ಣ ಸಮಾಜಕ್ಕೆ ಅಗತ್ಯ ವಿಚಾರಗಳನ್ನು ಬಿತ್ತುತ್ತ ಸಮಾಜದ ಎಲ್ಲಾ ವರ್ಗದ, ಎಲ್ಲಾ ವಯಸ್ಸಿನ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆದುಕೊಳ್ಳುವ ರಂಗಾಯಣವು ಮಕ್ಕಳಿಗಾಗಿಯೇ ಪ್ರತಿವರ್ಷ ಒಂದು ತಿಂಗಳ ಚಿಣ್ಣರಮೇಳ ರಂಗ ಶಿಬಿರವನ್ನು ಏರ್ಪಡಿಸುತ್ತದೆ. ಅಂತೆಯೇ ಕಾಲೇಜು ಯುವಕ ಯುವತಿಯರನ್ನು ರಂಗಭೂಮಿಯೆಡೆಗೆ ತೊಡಗಿಸುವ, ಆ ಮೂಲಕ ಸಮಾಜದ ಅತ್ಯಂತ ಮುಖ್ಯ ವಿಷಯಗಳೆಡೆಗೆ ಅವರ ಗಮನ ಹರಿಯುವಂತೆ ಮಾಡಲು ಕಳೆದ ಹದಿನೇಳು ವರ್ಷಗಳಿಂದ ಬಿ.ವಿ. ಕಾರಂತರ ಹೆಸರಿನಲ್ಲಿ ಕಾಲೇಜು ರಂಗೋತ್ಸವವನ್ನು ನಡೆಸುತ್ತಾ ಬಂದಿದೆ. ತುಂಬಾ ಸೂಕ್ಷ್ಮವಾದ ಹದಿ ವಯಸ್ಸಿನ ಕಾಲೇಜು ವಿದ್ಯಾರ್ಥಿಗಳ ಜೀವನ ಸಹಜವಾಗಿಯೇ ಹೊಸ ಹೊಸ ವಿಷಯಗಳಿಗೆ, ಅಭಿರುಚಿಗಳಿಗೆ ತೆರೆದುಕೊಳ್ಳುವ, ಹೊಸ ಹೊಸ ಸವಾಲು, ಸಾಹಸಗಳನ್ನು ಆಹ್ವಾನಿಸುವ ವಯೋಮಾನವಾದ್ದರಿಂದ, ಈ ವಯೋಮಾನದ ಮನಸ್ಸುಗಳನ್ನು ಸಾಮಾಜಿಕ ಬದುಕಿನೆಡೆಗೆ ಅರ್ಥಪೂರ್ಣವಾಗಿ ತೆರೆದುಕೊಳ್ಳುವಂತೆ ಮತ್ತು ಆ ಮೂಲಕ ಬದುಕಿನ ಸಮಸ್ಯೆಗಳನ್ನು ವಿವೇಕ ಮತ್ತು ವಿಶ್ವಾಸದಿಂದ ಎದುರಿಸುವ ಶಕ್ತಿ ತುಂಬಲು ಕಾಲೇಜು ರಂಗೋತ್ಸವವು ಕಳೆದ ಹದಿನೇಳು ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳನ್ನು ರಂಗ ಚಟುವಟಿಕೆಗಳಲ್ಲಿ ತೊಡಗಿಸಿ, ಅವರ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಒದಗಿಸುತ್ತಿದೆ.

ರಂಗಾಯಣದ ಕಾರಣ ಪುರುಷರಾದ ಬಿ.ವಿ. ಕಾರಂತರ ಜನ್ಮದಿನ ಸೆಪ್ಟೆಂಬರ್ ತಿಂಗಳಲ್ಲಿ ಬರುವುದರಿಂದ ಶ್ರೀ ಚಿದಂಬರರಾವ್ ಜಂಬೆ ಅವರು ಬಿ.ವಿ. ಕಾರಂತರ ಹೆಸರಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲು ಆರಂಭಿಸಿದ ಈ ಕಾಲೇಜು ರಂಗೋತ್ಸವದಲ್ಲಿ ಈವರೆಗೆ ಹಲವಾರು ಕಾಲೇಜಿನ ತಂಡಗಳು ಭಾಗವಹಿಸಿ, ಸುಮಾರು ೧೨೦ಕ್ಕೂ ಹೆಚ್ಚಿನ ನಾಟಕಗಳನ್ನು ಯಶಸ್ವಿಯಾಗಿ ಪ್ರಯೋಗಿಸಿವೆ. ಈ ಎಲ್ಲಾ ನಾಟಕಗಳನ್ನು ರಂಗಾಯಣದ ಕಲಾವಿದರು, ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರ ಮತ್ತು ಸಂಚಾರಿ ರಂಗಘಟಕದಲ್ಲಿ ತರಬೇತಿ ಪಡೆದ ಕಲಾವಿದರು ನಿರ್ದೇಶಿಸಿರುವುದು ವಿಶೇಷ. ಇಂಥ ಪ್ರಯೋಗಗಳ ಮೂಲಕ ಪ್ರತಿವರ್ಷ ನಾಡಿನ ಹವ್ಯಾಸಿ ರಂಗಕ್ಷೇತ್ರಕ್ಕೆ ಹೊಸ ಹೊಸ ಪ್ರತಿಭೆಗಳು ಸೇರ್ಪಡೆಯಾಗುತ್ತಿರುವುದು ಹೊಸ ಪ್ರೇಕ್ಷಕರು ಹುಟ್ಟಿಕೊಳ್ಳುತ್ತಿರುವುದು, ಅಲ್ಲದೆ ಇಂಥ ನಾಟಕಗಳಿಂದ ಪ್ರಭಾವಿತರಾದ ಯುವ ಜನಾಂಗ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪೋಷಕರು ಪ್ರೋತ್ಸಾಹಿಸುತ್ತಿರುವುದು ಅರ್ಥಪೂರ್ಣವಾದ ಸಮಾಜಮುಖಿ ಬೆಳವಣಿಗೆಯಾಗಿದೆ.

ಪ್ರತಿವರ್ಷ ಮೈಸೂರಿನ ಕಾಲೇಜುಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ನಡೆಸುತ್ತಿದ್ದ ಕಾಲೇಜು ರಂಗೋತ್ಸವವನ್ನು ಈ ವರ್ಷ ಮೊಟ್ಟ ಮೊದಲ ಬಾರಿಗೆ ನೆರೆಯ ಜಿಲ್ಲೆಗಳಿಗೂ ವಿಸ್ತರಿಸಿ ಮಂಡ್ಯ, ಮೈಸೂರು ಹಾಗೂ ಕೊಡಗು ಮೂರೂ ಜಿಲ್ಲೆಯ ಒಟ್ಟು ೮ ಕಾಲೇಜುಗಳನ್ನು ಈ ವರ್ಷದ ನಾಟಕ ಶಿಬಿರಕ್ಕೆ ಆಯ್ಕೆ ಮಾಡಲಾಗಿದೆ. ಪ್ರತಿ ಕಾಲೇಜಿನಲ್ಲಿ ಇಂದಿನಿಂದ ಒಂದು ತಿಂಗಳು ನಡೆಯುವ ಈ ರಂಗತರಬೇತಿಯಲ್ಲಿ ಪ್ರತಿಯೊಂದು ಕಾಲೇಜಿಗೂ ಇಬ್ಬರು ಯುವ ನಿರ್ದೇಶಕರನ್ನು ನೇಮಿಸಿದ್ದು, ಇವರು ಆಯಾ ಕಾಲೇಜಿನಲ್ಲೇ ಇದ್ದು, ವಿದ್ಯಾರ್ಥಿಗಳಿಗೆ ನಾಟಕ ತರಬೇತಿ ನೀಡುವುದಲ್ಲದೆ, ರಂಗಭೂಮಿ ಹಾಗೂ ನಟನೆಗೆ ಸಂಬಂಧಪಟ್ಟ ವಿಷಯಗಳನ್ನು ನಿರಂತರವಾಗಿ ಚರ್ಚಿಸಲಿದ್ದಾರೆ. ಇದಕ್ಕೆ ಪೂರ್ಣ ಸಹಕಾರ ನೀಡುತ್ತಿರುವ ಎಲ್ಲಾ ಕಾಲೇಜುಗಳ ಪ್ರಾಚಾರ್ಯರೂ ಕೂಡ ಇಂದಿನ ಸಭೆಯಲ್ಲಿ ಹಾಜರಿದ್ದು, ಇಂಥ ರಂಗ ಚಟುವಟಿಕೆಗಳ ಮೂಲಕವೇ ಯುವಕರನ್ನು ಸಮಾಜದಲ್ಲಿ ಅರ್ಥಪೂರ್ಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಲು ಸಾಧ್ಯ ಎಂಬ ಅಭಿಪ್ರಾಯದೊಂದಿಗೆ ತಮ್ಮ ಕಾಲೇಜಿನ ನಾಟಕ ತಂಡಗಳಿಗೆ ಅಗತ್ಯ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಸೆಪ್ಟೆಂಬರ್ 22 ರಿಂದ ಆರಂಭವಾಗುವ ಕಾಲೇಜು ರಂಗೋತ್ಸವ ನಾಟಕೋತ್ಸವವು ರಂಗಾಯಣದ ಭೂಮಿಗೀತದಲ್ಲಿ 8 ದಿನಗಳ ಕಾಲ ರಂಗಪ್ರೇಮಿಗಳಿಗೆ ವೈವಿಧ್ಯಮಯ ನಾಟಕಗಳ ಪ್ರದರ್ಶನದ ರಸದೌತಣ ನೀಡಲಿದೆ. ತಮ್ಮ ಕಲ್ಪನೆ, ಕನಸುಗಳಿಗೆ ಅಭಿನಯದ ರೂಪಕೊಡಲು ತುಡಿಯುತ್ತಿರುವ ಯುವಕ-ಯುವತಿಯರ ಯುವ ಮನಸ್ಸುಗಳನ್ನು ಪ್ರೋತ್ಸಾಹಿಸಲು ತಮ್ಮೆಲ್ಲ ಮಾಧ್ಯಮಗಳ ಮೂಲಕ ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ವ್ಯಾಪಕ ಪ್ರಚಾರ ನೀಡಿ, ಸಹಕರಿಸಬೇಕಾಗಿ ಕೋರಿದೆ.

ಈ ನಾಟಕೋತ್ಸವದಲ್ಲಿ ಭಾಗವಹಿಸುವ ಕಾಲೇಜು/ತಂಡ, ನಿರ್ದೇಶಕರು, ಕಾಲೇಜಿನ ಪ್ರಾಚಾರ್ಯರು – ಇವುಗಳ ವಿವರಗಳನ್ನು ಅನುಬಂಧದಲ್ಲಿ ಲಗತ್ತಿಸಿದ್ದು, ಕಾಲೇಜು ರಂಗೋತ್ಸವದಲ್ಲಿ ಅಭಿನಯಿಸಲ್ಪಡುವ ನಾಟಕಗಳ ವಿವರವನ್ನು ಮುಂದಿನ ಮಾಧ್ಯಮಗೋಷ್ಠಿಯಲ್ಲಿ ಒದಗಿಸಲಾಗುವುದು. ಈ ಹಿಂದೆ ನಡೆದ ಬಿ.ವಿ. ಕಾರಂತ ಕಾಲೇಜು ರಂಗೋತ್ಸವದ ಕಾರ್ಯಕ್ರಮಗಳ ಛಾಯಾಚಿತ್ರಗಳಿಗಾಗಿ ರಂಗಾಯಣದ ವೆಬ್‌ಸೈಟ್ http://www.rangayana.org/?p=9493 ನ್ನು ಸಂಪರ್ಕಿಸಬಹುದಾಗಿದೆ.