ನಿರ್ದೇಶಕರ ನುಡಿ

ರಂಗಾಯಣ ಮೈಸೂರು ತನ್ನ ೧೭ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ೨೦೧೮ರ ಜನವರಿ ೧೪ ರಿಂದ ೨೧ ರವರೆಗೆ ಎಂಟು ದಿನಗಳ ಕಾಲ ಸಂಭ್ರಮದಿಂದ ಆಚರಿಸುತ್ತದೆ ಎಂದು ಸಂತೋಷದಿಂದ ತಿಳಿಸುತ್ತಿದ್ದೇವೆ. ಪ್ರಸ್ತುತ ಸಮಾಜದ ಧ್ವನಿಯಾಗಿರುವ ಬಹುರೂಪಿ ಉತ್ಸವದ ಈ ಬಾರಿಯ ಆಶಯ ವಲಸೆ ಮತ್ತು ಅದರ ಸ್ವರೂಪಗಳು.

ವಲಸೆ ಎಂಬ ಪ್ರಕ್ರಿಯೆ ಜೀವನದ ಅವಿಭಾಜ್ಯ ಅಂಗ. ಯುಲಿಸಿಸ್‌ನ ಹತ್ತು ವರ್ಷಗಳಷ್ಟು ದೀರ್ಘ ಪ್ರಯಾಣ, ರಾಮಾಯಣದ ಸಮುದ್ರ ಲಂಘನ ಪ್ರಸಂಗ ಮತ್ತು ಪಾಂಡವರ ವನವಾಸ ವಲಸೆಯ ಬೇರೆ ಬೇರೆ ರೂಪಗಳಾಗಿವೆ. ಜಾಗತಿಕ ಇತಿಹಾಸದಲ್ಲಿಯೂ ಕೂಡ ವಲಸೆಯ ಪ್ರಭಾವ ಅಗಾಧವಾಗಿದ್ದು, ಅನೇಕ ದೇಶಗಳ ಚರಿತ್ರೆಯು ವಲಸಿಗರಿಂದಲೇ ರಚಿತವಾಗಿರುವ ಉದಾಹರಣೆಗಳು ನಮ್ಮ ಮುಂದಿವೆ.

ಪೌರಾಣಿಕ ಮತ್ತು ಇತಿಹಾಸದಲ್ಲಷ್ಟೇ ಅಲ್ಲದೇ ಮಾನವನ ಸಾಮಾಜಿಕ ಜೀವನದಲ್ಲಿ ವಲಸೆ ಹಲವು ರೂಪಗಳಲ್ಲಿ ಬೆಸೆದುಕೊಂಡಿದೆ. ಅನ್ನ ಮತ್ತು ಸೂರಿಗಾಗಿ ಗುಳೆ ಎದ್ದವರಿಗೆ ಲೆಕ್ಕವಿಲ್ಲ. ನೆಲೆ ಇಲ್ಲದೆ, ಪ್ರದೇಶದಿಂದ ಪ್ರದೇಶಕ್ಕೆ ಸಾಗುವ ಅಲೆಮಾರಿ ಹಾಗು ಅರೆ ಅಲೆಮಾರಿ ಸಮೂಹಗಳೂ ನಮ್ಮ ಸಮಾಜದ ಭಾಗವೇ ಆಗಿವೆ. ಅಷ್ಟೇ ಏಕೆ, ವಚನಕಾರರನ್ನು ಒಳಗೊಂಡಂತೆ, ಅನೇಕ ಸಂತರು ಹಾಗು ಜಾನಪದರು ನಿರಂತರ ಚಲನಶೀಲತೆಯನ್ನು ಜಂಗಮ ಸ್ಥಿತಿ ಎಂದು ಕರೆದೆದ್ದಾರೆ.

ಹೀಗೆ ಸಾಂಸ್ಕೃತಿಕ ಭಾಗವೇ ಆಗಿರುವ ವಲಸೆಯು ದೇಶ-ರಾಜ್ಯ ಗಡಿಗಳ ಸಂದರ್ಭದಲ್ಲಿ ರಾಜಕೀಯ ರೂಪವನ್ನು ಪಡೆದುಕೊಂಡಿದೆ. ಗಡಿಗಳ ವಿಷಯಕ್ಕೆ ದೇಶಗಳ ಸಂಬಂಧಗಳಲ್ಲಿ ಬಿರುಕುಂಟಾಗಿವೆ. ನಾಡಿನ ಭದ್ರತೆಯ ಹೆಸರಿನಲ್ಲಿ ಲಕ್ಷಾಂತರ ಜನರು ಎಲ್ಲಿಯೂ ಸಲ್ಲದವರಾಗಿದ್ದಾರೆ. ಇಷ್ಟಲ್ಲದೇ, ಪೌರತ್ವ ಎಂಬ ರಾಜಕೀಯ ವಿಷಯಕ್ಕೆ ಧರ್ಮವೂ ತಳುಕು ಹಾಕಿಕೊಂಡು ವಲಸೆ ಇನ್ನಷ್ಟು ಸಂಕೀರ್ಣ ಸಮಸ್ಯೆಯಾಗಿದೆ.

ಈ ವಿಷಯಗಳಿಗೆ ಸ್ಪಂದಿಸಲು, ಬಹುರೂಪಿ ರಾಷ್ಟ್ರೀಯ ಬಹುಭಾಷಾ ನಾಟಕೋತ್ಸವ-೨೦೧೮ಕ್ಕೆ ರಂಗಾಯಣವು ಭಾರತದಾದ್ಯಂತ ನಾಟಕಗಳನ್ನು ಆಹ್ವಾನಿಸಿದೆ. ವಲಸೆ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ವಿಚಾರಸಂಕಿರಣವನ್ನೂ ನಾಟಕೋತ್ಸವದ ಅಂಗವಾಗಿ ಏರ್ಪಡಿಸಿದ್ದು, ದೇಶದ ಹಲವು ಭಾಗಗಳಿಂದ ತಜ್ಞರು ಆಗಮಿಸಲ್ಲಿದ್ದು ಅರ್ಥಪೂರ್ಣ ಚರ್ಚೆಗೆ ವೇದಿಕೆಯನ್ನು ಸಿದ್ಧಮಾಡಲಾಗಿದೆ. ವಲಸೆಯ ಕುರಿತು ಚಲನಚಿತ್ರ ಹಾಗು ನಾಟಕ ಪ್ರದರ್ಶನ, ವಿಚಾರಸಂಕಿರಣದ ಜೊತೆಜೊತೆಗೆ, ಆಹಾರ ಮೇಳ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಹಾಗು ಕರಕುಶಲ ವಸ್ತುಗಳ ಜಾತ್ರೆಯೂ ನಡೆಯಲಿದೆ. ರಂಗಾಯಣದ ರಂಗಸಮಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರಿನ ಉಸ್ತುವಾರಿ ಸಚಿವರು ಹಾಗು ಜಿಲ್ಲಾಡಳಿತಗಳ ಸಹಕಾರದಿಂದ ನಡೆಸುತ್ತಿರುವ ಈ ರಂಗೋತ್ಸವದಲ್ಲಿ ಮೈಸೂರಿನ ಮತ್ತು ನಾಡಿನ ರಂಗಕರ್ಮಿಗಳು, ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಚಿಂತಕರು ಹಾಗು ನಾಡಿನ ಎಲ್ಲಾ ಕಲಾಭಿಮಾನಿಗಳು ಭಾಗವಹಿಸಿ ಉತ್ಸವದ ಯಶಸ್ಸಿಗೆ ಸಹಕರಿಸಬೇಕೆಂದು ವಲಸೆ-೨೦೧೮ ಆಶಿಸುತ್ತದೆ.

ವಂದನೆಗಳೊಂದಿಗೆ,

ಭಾಗೀರಥಿ ಬಾಯಿ
ನಿರ್ದೇಶಕರು,
ರಂಗಾಯಣ, ಮೈಸೂರು.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ 2018

ಕಾರ್ಯಕ್ರಮಗಳ ವಿವರಗಳು

ರಾಷ್ಟ್ರೀಯ ವಿಚಾರಸಂಕಿರಣ

ಕಾರ್ಯಕ್ರಮಗಳ ವಿವರಗಳು

ಚಲನಚಿತ್ರ ಪ್ರದರ್ಶನ

ಕಾರ್ಯಕ್ರಮಗಳ ವಿವರಗಳು