ಪ್ರದರ್ಶಿಸಿರುವ ನಾಟಕಗಳು

ರಂಗಾಯಣ ಬಹುತ್ವದಲ್ಲಿ ನಂಬಿಕೆಯುಳ್ಳ ಕಾರಣ ಏಕಮುಖಿ ಪ್ರದರ್ಶನಗಳಿಂದ ಹೊರಗೆ ಕೈಚಾಚಿ ಜಗತ್ತಿನ ಎಲ್ಲ ಖಂಡಗಳಿಂದ ಉದ್ಭವವಾದ ನಾಟಕಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಸಂಸ್ಕೃತ ನಾಟಕಗಳಿಂದ ಹಿಡಿದು ಸ್ವೀಡಿಷ್ ನಾಟಕಗಳವರೆಗೆ ಇದರ ವ್ಯಾಪ್ತಿ ಬಲು ದೊಡ್ಡದು. ಬ್ರೆಕ್ಟ್, ಚೆಕಾಫ್, ಶೇಕ್‌ಸ್ಪಿಯರ್, ಓಲೇಸೋಯಿಂಕಾ, ಬೆಕೆಟ್, ಅಯನೆಸ್ಕೊ ಮುಂತಾದ ನಾಟಕಕಾರರ ನಾಟಕಗಳು ರಂಗಾಯಣದ ರಂಗಮಂದಿರಗಳಲ್ಲಿ ಪ್ರದರ್ಶಿತವಾಗಿವೆ. ಹಾಗೆಯೇ, ಮರಾಠಿ, ಗುಜರಾತಿ, ಉರ್ದು, ಹಿಂದಿ, ಮತ್ತು ಬಂಗಾಳಿ ನಾಟಕಗಳು ಕನ್ನಡೀಕರಣಗೊಂಡು ಪ್ರದರ್ಶನವಾಗಿವೆ. ಕನ್ನಯ ಲಾಲ್, ಹಬೀಬ್ ತನ್ವಿರ್, ಬಹುರುಲ್ ಇಸ್ಲಾಂ, ಕ್ರಿಶ್ಚಿಯನ್ ಸ್ಟುಕುಲ್, ವ್ಯಾಶಿಲಿಯೋಸ್ ಕಲಿಟ್ಸಿಸ್, ಫ್ರಿಟ್ಸ್ ಬೆನವಿಟ್ಸ್, ಹಾಗೂ ಉವೆ ಜೆನ್ಸ್ ಜೆನ್‌ಸೆನ್ ಇವರ ನಿರ್ದೇಶನದಲ್ಲಿ ಪ್ರದರ್ಶಿತಗೊಂಡ ನಾಟಕಗಳು ರಂಗಾಯಣಕ್ಕೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟಿವೆ.

ಕುವೆಂಪು, ಗಿರೀಶ್ ಕಾರ್ನಾಡ್, ಮಾಸ್ತಿ, ಶ್ರೀರಂಗ, ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಸಂಸ, ಮತ್ತು ಬೀಚಿ ಅವರ ಕೃತಿಗಳು ಇಲ್ಲಿ ಪ್ರದರ್ಶಿತವಾಗಿವೆ. ಈಗಾಗಲೇ ತಿಳಿಸಿದಂತೆ ಪುಸ್ತಕ ಬಿಡುಗಡೆಗೆ ರಂಗಾಯಣ (ವಿಶೇಷವಾಗಿ ಶ್ರೀರಂಗ) ಹೇಳಿ ಮಾಡಿಸಿದ ಸ್ಥಳವಾಗಿದೆ. ಬರಹಗಾರರು, ಓದುಗರು, ಹಾಗೂ ಸಾಂಸ್ಕೃತಿಕವಾಗಿ ವಿಕಸಿತ ಮನಸ್ಸುಳ್ಳ ಪ್ರತಿಯೊಬ್ಬ ಮೈಸೂರಿಗರೂ ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗುತ್ತಾರೆ. ಆಗಿಂದಾಗ್ಯೆ ರಂಗಾಯಣದಲ್ಲಿ ವ್ಯಕ್ತಿ ಪರಿಚಯದ ಕಾರ್ಯಕ್ರಮಗಳೂ ನಡೆಯುತ್ತಿರುತ್ತವೆ.

ಜನರ ಪ್ರಜ್ಞೆಯಲ್ಲಿ ನಮ್ಮ ಸುತ್ತಮುತ್ತಲು ಏನು ನಡೆಯುತ್ತಿದೆ ಎಂಬುದನ್ನು ಊರುವುದಕ್ಕೆ ಇಂತಹ ಕಾರ್ಯಕ್ರಮಗಳು ಅತ್ಯಂತ ಸಹಕಾರಿ. ಪುಸ್ತಕ ಪ್ರಕಟಣೆಯೂ ಸಹ ರಂಗಾಯಣದ ಚಟುವಟಿಕೆಗಳ ಒಂದು ಮುಖ್ಯ ಭಾಗ. ವಿಶೇಷವಾಗಿ ರಂಗಭೂಮಿಗೆ ಸಂಬಂಧಿಸಿದ ಹೊತ್ತಿಗೆಗಳನ್ನು ಹೊರತರುವಲ್ಲಿ ರಂಗಾಯಣ ಕೆಲಸ ಮಾಡುತ್ತಿದೆ.

‘ಪರಿಕರ’ ರಂಗಾಯಣ ಕೆಲವು ವರ್ಷಗಳ ಹಿಂದೆ ಹೊರತಂದ ನಿಯತಕಾಲಿಕೆ. ನಿಯತವಾಗಿ ಬೆಳಕು ಕಾಣದಿದ್ದರೂ ತಾನಿದ್ದಷ್ಟು ದಿನ ‘ಪರಿಕರ’ ರಂಗಭೂಮಿ ಹಾಗೂ ನಾಟಕ ಪ್ರದರ್ಶನಗಳಿಗೆ ಸಂಬಂಧಿಸಿದ ಹಲವು ಉಪಯುಕ್ತ ಪ್ರಬಂಧಗಳು ಮತ್ತು ಮಾಹಿತಿಯನ್ನು ಪ್ರಕಟಿಸಿ ಸಂಶೋಧಕರಿಗೆ ಒದಗಿ ಬರುವ ದಾಖಲೆಯಾಗಿ ಉಳಿದಿದೆ.

ಒಟ್ಟಿನಲ್ಲಿ, ರಂಗಾಯಣ ಕರ್ನಾಟಕದ ಸಾಂಸ್ಕೃತಿಕ ಭೂಪಟದಲ್ಲಿ ಒಂದು ಮಹತ್ವದ ಸ್ಥಾನವನ್ನು ಪಡೆದುಕೊಂಡಿರುವುದಲ್ಲದೆ ಕಲೆಯ ಕ್ಷೇತ್ರದಲ್ಲಿ ಹೊಸ ಶಕೆಯ ಆರಂಭಕ್ಕೆ ಕಾರಣವಾಗಿದೆ. ಮೈಸೂರು ಸಾಂಸ್ಕೃತಿಕ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿನ್ನೆಲೆಯಲ್ಲಿ ಅದರ ಆಯಾಮವನ್ನು ಹೆಚ್ಚಿಸುವಲ್ಲಿ ರಂಗಾಯಣ ಬಹು ಮಹತ್ವದ ಭೂಮಿಕೆಯನ್ನು ನಿಭಾಯಿಸುತ್ತಿದೆ.