ಪರಿಚಯ

ಕರ್ನಾಟಕ ಸರ್ಕಾರ ೧೯೮೯ರಲ್ಲಿ ಅಸ್ತಿತ್ವಕ್ಕೆ ತಂದ ರಂಗಾಯಣ ದಿವಂಗತ ಬಿ.ವಿ. ಕಾರಂತರ ಕನಸಿನ ಕೂಸು. ರಂಗಾಯಣ ಬಿ.ವಿ. ಕಾರಂತರ ಕಲ್ಪನೆ, ಕನಸು, ಹಾಗೂ ಪ್ರತಿಜ್ಞೆಗಳನ್ನು ಒಳಗೊಂಡ ಕಲಾವಿದರು, ತಾಂತ್ರಿಕವರ್ಗ, ಮತ್ತು ಸಿಬ್ಬಂದಿಗಳ ಶ್ರಮದಿಂದ ಅರಳಿ ನಿಂತಿದೆ. ಕಾರಂತರ ನಂತರ ಸಿ. ಬಸವಲಿಂಗಯ್ಯ, ಪ್ರಸನ್ನ, ಮತ್ತು ಚಿದಂಬರರಾವ್ ಜಂಬೆ ನಿರ್ದೇಶಕರಾಗಿದ್ದು ಕಾರಂತರ ಕಸನನ್ನು ನನಸು ಮಾಡುವಲ್ಲಿ ಬಹಳಷ್ಟು ದುಡಿದಿದ್ದಾರೆ.

 

ಶತಮಾನದ ಅಂಚು ಮನುಷ್ಯನ ಚಟುವಟಿಕೆಗಳಲ್ಲಿ ಒಂದು ಹೊಸ ಕ್ಷಿತಿಜವನ್ನು ಆನಾವರಣಗೊಳಿಸುವಂತೆಯೇ ದಶಕದ ಕೊನೆ ನಮ್ಮ ಚಿಂತನೆಗಳಲ್ಲಿ ನಾವೀನ್ಯತೆಯನ್ನು ಉಂಟುಮಾಡುವುದು. ಹಾಗಾಗಿ ಒಂದು ದಶಕದ ಕೊನೆ ಮತ್ತು ನವ ಸಹಸ್ರಮಾನದ ಹೊಸ್ತಲಲ್ಲೇ ರಂಗಾಯಣ ಸ್ಥಾಪನೆಯಾಯಿತು. ಕರ್ನಾಟಕ ಸರ್ಕಾರ ರಂಗಾಯಣಕ್ಕಾಗಿ ‘ಬಹು ಆಯಾಮ’ದ ಒಬ್ಬ ಪ್ರತಿಭಾವಂತನ ಶೋಧದಲ್ಲಿದ್ದಾಗ ಅದೃಷ್ಟವಶಾತ್ ಬಿ.ವಿ. ಕಾರಂತರು ದಕ್ಕಿದ್ದರು; ಅವರ ಅನುಭವ ಮತ್ತು ವಿವೇಕ ಹೊಸ ರಂಗಭೂಮಿಯನ್ನು ಯಶಸ್ವಿಯಾಗಿ ನಡೆಸುವಲ್ಲಿ ಸಹಕಾರಿಯಾದವು. ಈ ರೆಪರ್ಟರಿ ದಕ್ಷಿಣ ಭಾರತದಲ್ಲಿಯೇ ಮೊದಲನೆಯದು ಎನ್ನುವುದನ್ನು ನಾವು ಮರೆಯುವಂತಿಲ್ಲ.

ಇತರ ಯಾವ ಕಡೆಯೂ ಮಾಡಿರದಂಥ ವಿನ್ಯಾಸವನ್ನು ಅಳವಡಿಸಿಕೊಂಡು ವಿಕಸಿಸುವುದು ರಂಗಾಯಣದ ಗುರಿಯಾಗಿದ್ದಿತು. ಹಾಗಾಗಿ ಕಲಾವಿದರ ಆಯ್ಕೆಯಿಂದಲೇ ತನ್ನ ವಿನೂತನ ಹೆಜ್ಜೆ ಇಡುವ ಹೊಣೆಗಾರಿಕೆಯನ್ನು ರಂಗಾಯಣ ಹೊತ್ತುಕೊಂಡಿತು. ಸೂಕ್ಷ್ಮಾತಿಸೂಕ್ಷ್ಮ ವಿವರಗಳಿಗೆ ಗಮನ ಕೊಡುತ್ತ ರಂಗಾಯಣದ ವಿನೂತನ ಪ್ರಯೋಗಕ್ಕೆ ಒಗ್ಗುವ, ಸಮ್ಮತಿಸುವ, ಚೈತನ್ಯದಿಂದ ಪುಟಿಯುವ ಕಲಾವಿದರನ್ನೇ ರಂಗಾಯಣ ಆರಿಸಿಕೊಂಡಿತು. ಇಲ್ಲಿನ ಬಹುತೇಕ ಕಲಾವಿದರು ಗ್ರಾಮಾಂತರ ಪ್ರದೇಶದವರು; ಜೊತೆಗೆ ನಾಡಿನ ಮೂಲೆ ಮೂಲೆಯಿಂದ ಬಂದವರು.

ಆರಂಭದಲ್ಲಿ ೧೯ ಮಂದಿ ಕಲಾವಿದರು ಹಾಗೂ ೬ ಮಂದಿ ಕಲಾವಿದೆಯರನ್ನು ಒಳಗೊಂಡ ರಂಗಾಯಣ ಏಕಕಾಲದಲ್ಲಿ ಮೂರು ಅಂಶಗಳನ್ನು ತನ್ನಲ್ಲಡಗಿಸಿಕೊಂಡಿತ್ತು: ವೃತ್ತಿಪರ ರೆಪರ್ಟರಿ ರಂಗಭೂಮಿ, ರಾಷ್ಟ್ರಮಟ್ಟದ ರಂಗ ತರಬೇತಿ ಸಂಸ್ಥೆ, ಮತ್ತು ರಂಗ ಕಲೆಗಾಗಿ ಮುಡಿಪಾದ ದಾಖಲಾತಿ ಕೇಂದ್ರ. ಇಡೀ ಯೋಜನೆಗೆ ತಕ್ಕರೀತಿಯ ಚಾಲನೆ ಕೊಡಲು ರಂಗಭೂಮಿಗೆ ತೆತ್ತುಕೊಂಡ ಅನುಭವಿ ಶಿಕ್ಷಕರಿದ್ದರು. ಅವರೆಲ್ಲ ಒಟ್ಟಾಗಿ ಸಂಸ್ಥಾಪಕ-ನಿರ್ದೇಶಕರ ಕನಸನ್ನು ನನಸು ಮಾಡಿದರು.

ಕರ್ನಾಟಕದಲ್ಲಿ ಆಧುನಿಕ ರಂಗಭೂಮಿ ಹೆಚ್ಚೂ ಕಡಿಮೆ ಹವ್ಯಾಸಿ ಸಂದರ್ಭವನ್ನೇ ಪ್ರತಿಫಲಿಸುವಂಥದ್ದಾಗಿದೆ. ಆದಾಗ್ಯೂ ರಂಗಭೂಮಿಯ ಅರೆ ವೃತ್ತಿಪರ ಹಿನ್ನೆಲೆ ಅದರ ಬೆಳವಣಿಗೆಯನ್ನು ಕುಗ್ಗಿಸಿಲ್ಲ. ಈ ಬಗೆಯ ಸಂಕಲ್ಪದಿಂದಲೇ ಸಿ. ಬಸವಲಿಂಗಯ್ಯ, ಪ್ರಸನ್ನ, ಚಿದಂಬರರಾವ್ ಜಂಬೆ, ಬಿ. ಜಯಶ್ರೀ, ಲಿಂಗದೇವರು ಹಳೆಮನೆ, ಮತ್ತು ಬಿ.ವಿ. ರಾಜಾರಾಂ ಅವರಂಥ ನಿರ್ದೇಶಕರು ಪ್ರತಿಭಾನ್ವಿತರಾದ ಬಿ.ವಿ ಕಾರಂತರ ನಂತರ ಮಾರ್ಗದರ್ಶನಕ್ಕೆ ಮುಂದಾದರು.

ಸಮಾಜವನ್ನು ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸದೃಢಗೊಳಿಸುವಲ್ಲಿ ರಂಗಾಯಣ ಮಹತ್ವದ ಪಾತ್ರವನ್ನು ವಹಿಸಿದೆ. ಮಹಾರಾಜರ ಕಾಲದಿಂದಲೂ ಮೈಸೂರಿನಲ್ಲಿ ರಸಿಕವೃಂದ ಕಲಾರಾಧನೆಯಲ್ಲಿ ತೊಡಗಿಯೇ ಇದ್ದಿತು. ರಂಗಾಯಣ ಇಂಥ ರಸಿಕ ಮಂಡಲಿಯ ಚಿತ್ತವನ್ನಾಕರ್ಷಿಸುವಲ್ಲಿ ಸಫಲತೆಯನ್ನು ಪಡೆದಿದೆ.

ರಂಗಾಯಣದ ಭೌಗೋಳಿಕ ಪರಿಸರವೂ ನಯನಮನೋಹರವಾದುದು. ಸುತ್ತಲೂ ಹಬ್ಬಿ ಜಲತರಂಗಗಳಿಂದ ಸಾಲಂಕೃತವಾದ ಕುಕ್ಕರಕಳ್ಳಿ ಕೆರೆ, ವಿಶ್ವವಿದ್ಯಾನಿಲಯ ಆಡಳಿತ ಕಛೇರಿಯಾದ ಕ್ರಾಫರ್ಡ್ ಭವನ, ವಿಶ್ವವಿದ್ಯಾನಿಲಯದ ಮಹಾಶಿಕ್ಷಣ ಮಂದಿರಗಳಾದ ಮಹಾರಾಜ ಕಾಲೇಜು ಹಾಗೂ ಯುವರಾಜ ಕಾಲೇಜು, ಮತ್ತು ಭವ್ಯವಾದ ಕಲಾಮಂದಿರದ ಸಾಮಿಪ್ಯ.

1994ರಲ್ಲಿ ರಂಗಸಮಾಜ ಅಸ್ತಿತ್ವಕ್ಕೆ ಬಂದಾಗಿನಿಂದ ರಂಗಾಯಣದ ಕಾರ್ಯ ಚಟುವಟಿಕೆಗಳಿಗೆ ಗರಿಮೂಡಿತು. ರಂಗಸಮಾಜದ ಉದ್ದೇಶಗಳಿವು:

  • ರಂಗಾಯಣದ ರೀತಿಯಲ್ಲೇ ಗುರಿ ಹೊಂದಿದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳ ಮಟ್ಟಕ್ಕೆ ರಂಗಾಯಣವನ್ನು ಕೊಂಡೊಯ್ಯುವುದು
  • ರಂಗಾಯಣವನ್ನು ಕರ್ನಾಟಕದ ಪ್ರಾತಿನಿಧಿಕ ರೆಪರ್ಟರಿಯನ್ನಾಗಿ ರೂಪಿಸುವುದು
  • ‘ವನರಂಗ’, ‘ಮಿನಿ ರಂಗಮಂದಿರ’, ‘ದುಂಡು ಕಣ’, ಮತ್ತು ‘ಚಿಣ್ಣರ ರಂಗಭೂಮಿ’ಗಳನ್ನು ಸ್ಥಾಪಿಸುವುದು
  • ರಂಗಭೂಮಿ ತಜ್ಞರು, ಸಂಶೋಧಕರು, ನಾಟಕಕಾರರು, ನಿರ್ದೇಶಕರು, ಕಲಾವಿದರು, ಹಾಗೂ ರಂಗತಂಡಗಳನ್ನು ಆಹ್ವಾನಿಸುವುದು; ರಂಗಶಿಬಿರಗಳು, ನಾಟಕ ರಚನೆ, ಮತ್ತು ನಿರ್ದೇಶನವನ್ನೇರ್ಪಡಿಸುವುದು; ವಿಚಾರ ಸಂಕಿರಣಗಳು, ಸಮ್ಮೇಳನಗಳು, ನಾಟಕೋತ್ಸವ, ಮತ್ತು ಪ್ರದರ್ಶನಗಳನ್ನು ಏರ್ಪಡಿಸುವುದು
  • ರಂಗಭೂಮಿಯಲ್ಲಿ ಆಸಕ್ತಿ ಇರುವವರನ್ನೆಲ್ಲ ಒಟ್ಟುಗೂಡಿಸಿ ತರಬೇತಿಯ ಮೂಲಕ ಅವರನ್ನು ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದು
  • ರಂಗಭೂಮಿಗೆ ಸಂಬಂಧಿಸಿದ ಪರಿಕರಗಳ ಸಂಗ್ರಹಣೆ; ಲೇಖನಗಳು, ಪುಸ್ತಕಗಳು, ಹಾಗೂ ಪತ್ರಿಕೆಗಳಿಂದ ಸಂಶೋಧನೆಯನ್ನು ನಡೆಸುವುದು; ಹೊಸ ನಾಟಕಗಳನ್ನು ಪ್ರಕಟಿಸುವುದು; ಇತರ ಭಾಷೆಗಳಿಂದ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸುವುದು
  • ‘ರಂಗ ಮಾಹಿತಿ ಕೇಂದ್ರ’ವನ್ನು ಸ್ಥಾಪಿಸುವುದು
  • ಇದೇ ರೀತಿ ಆಸಕ್ತಿ ಹೊಂದಿರುವ ವ್ಯಕ್ತಿಗಳು ಹಾಗೂ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಕುದುರಿಸುವುದು

ಆರಂಭದಲ್ಲಿಯೇ ರಂಗಾಯಣದ ನಾಲ್ಕು ರೆಪರ್ಟರಿಗಳನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಲಾಯಿತು: ಮೈಸೂರು ರಂಗಾಯಣ, ಕರಾವಳಿ ರಂಗಾಯಣ, ಮಲೆನಾಡು ರಂಗಾಯಣ, ಮತ್ತು ಹೈದರಾಬಾದ್–ಕರ್ನಾಟಕ ರಂಗಾಯಣ. ಅವುಗಳನ್ನು ಸ್ಥಾಪಿಸುವ ಮೂಲಕ ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯ ಸೊಗಡನ್ನು ಜೀವಂತವಾಗಿಡುವ ಪ್ರಯತ್ನ ಇದಾಗಿದೆ. ಶಿವಮೊಗ್ಗ, ಧಾರವಾಡ, ಮತ್ತು ಕಲಬುರಗಿ ರಂಗಾಯಣ ಕೇಂದ್ರಗಳು ಈಗಾಗಲೇ ಕಾರ್ಯಾರಂಭ ಮಾಡಿವೆ.

ಮೇಲೆ ಕಾಣಿಸಿದ ಬಹುಪಾಲು ಉದ್ದೇಶಗಳು ಭಾರತದ ಹಾಗೂ ವಿದೇಶಗಳ ತಜ್ಞರ ಸಹಾಯದಿಂದ ಈಗಾಗಲೇ ಈಡೇರಿವೆ. ರಂಗಾಯಣ ಹಾಗೂ ಸ್ವೀಡನ್ನಿನ ಸಿಐಡಿಎ (ಸೀಡಾ) ಎಂಬ ಸಂಘಟನೆ ಸಂಯುಕ್ತವಾಗಿ ’ಮಕ್ಕಳ ರಂಗಭೂಮಿ’ಯನ್ನು ಸ್ಥಾಪಿಸಿವೆ.