ಸಂಸ್ಥಾಪಕ ನಿರ್ದೇಶಕರು

ಆಧುನಿಕ ರಂಗಸಂಗೀತದ ಮಾಂತ್ರಿಕ ರಂಗಭೀಷ್ಮ ಬಿ.ವಿ. ಕಾರಂತ

೧೯೭೦ರಲ್ಲಿ ಬೆಂಗಳೂರಿನ ರಂಗಭೂಮಿಯತ್ತ ಒಲಿದು ಕಳೆಗುಂದಿದ್ದ ಕನ್ನಡ ರಂಗಕ್ಕೊಂದು ರಂಗುರಂಗಿನ ಮಾಂತ್ರಿಕತೆ, ತಾಂತ್ರಿಕತೆ, ದೃಶ್ಯವೈಭವ, ಸಂಗೀತ ನೃತ್ಯ ಸಾಂಗತ್ಯ, ರಂಗಸಂಗೀತ ಪ್ರಯೋಗಶೀಲತೆ, ಅನೇಕಾನೇಕ ಶೈಲಿಗಳ ಸಮ್ಮಿಲನದ ಸಮಾಗಮದ ರಂಗಸಗ್ಗವನ್ನೆ ಸೃಷ್ಠಿಸಿದರು. ಹಯವದನ, ಜೋಕುಮಾರಸ್ವಾಮಿ, ಸಂಕ್ರಾಂತಿ, ಏವಂ ಇಂದ್ರಜಿತ್, ಸತ್ತವರ ನೆರಳು ಮುಂತಾದ ನಾಟಕಗಳು ರಂಗಕ್ರಿಯೆಗೊಂದು ನಿಸರ್ಗಧಾಮವಾಗಿ ರೂಪಿತಗೊಂಡು ರೂಪ ರೂಪಗಳನ್ನು ದಾಟಿ ನಾಮಕೋಟಿಗಳನು ಮೀಟಿದವು; ನಾಡಿನ ರಂಗ ಕ್ರಿಯಾಶೀಲರೆಲ್ಲ ನಿಬ್ಬೆರಗಾದರು. ಚೈತನ್ಯದ ರಂಗ ಪ್ರಯೋಗಶೀಲತೆಗೆ ಸಾಕ್ಷಿಯಾದ ಕಾರಂತರು ಮುಂದುವರೆದು ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ರಂಗಭೂಮಿಗೆ ಭಾರತೀಯತೆಯ ಸೊಗಡನ್ನಿತ್ತು, ರಂಗೇರಿಸಿದರು. ಭೂಪಾಲಿನ ಭಾರತ್‌ ಭವನ್ನಲ್ಲಿ ರಂಗಮಂಡಲವನ್ನು ನಿರ್ಮಿಸಿ ಕನ್ನಡದ ಸ್ಥೈರ್‍ಯವನ್ನು ಭರತ ಖಂಡದೊಳಗೆ ಹಿಗ್ಗಿಸಿದರು. ಕುಗ್ಗಿಸಲು ಹೊರಟವರಿಗೆ ಕುಗ್ಗದೆ ಬಗ್ಗದೆ ಮೈಸೂರಿನಲ್ಲಿ ಕರ್ನಾಟಕ ಸರ್ಕಾರ ಆರಂಭಿಸಿದ ‘ನಾಟಕ ಕರ್ನಾಟಕ ರಂಗಾಯಣ’ (1989)ದ ರೂವಾರಿಯಾದರು.
ಸ್ತ್ರೀ ಪಾತ್ರಗಳ ನಟನೆ, ನಾಟಕಗಳ ಹಸ್ತಪ್ರತಿ ತಯಾರಿಸುವ ಕೆಲಸ ಮಾಡುತ್ತ ಗುಬ್ಬಿ ಕಂಪನಿಯ ಮಾಲೀಕರಾದ ಗುಬ್ಬಿ ವೀರಣ್ಣ, ಕಂಪನಿ ನಾಟಕಕಾರ/ನಿರ್ದೇಶಕ ಬಿ. ಪುಟ್ಟಸ್ವಾಮಯ್ಯನವರ ಉತ್ತೇಜನದೊಂದಿಗೆ ಕಂಪನಿಯಲ್ಲಿದ್ದ ಬೆಳ್ಳಾವೆ ನರಹರಿಶಾಸ್ತ್ರಿ, ಹುಣಸೂರು ಕೃಷ್ಣಮೂರ್ತಿ, ಕು.ರಾ. ಸೀತಾರಾಮಶಾಸ್ತ್ರಿ, ಜಿ.ವಿ. ಐಯ್ಯರ್, ಡಾ. ರಾಜ್‌ಕುಮಾರ್, ಬಾಲಕೃಷ್ಣ ಮುಂತಾದವರ ಒಡನಾಟದಲ್ಲಿ ಬೆಸೆದ ಬಿ.ವಿ. ಕಾರಂತರು ಗಾಂಧೀಜಿಯವರ ಹರಿಜನ ಪತ್ರಿಕೆಯ ಪ್ರೇರಣೆ ಪಡೆದು ಹಿಂದಿ ಕಲಿಯತೊಡಗಿದರು. ಇಂಗ್ಲೀಷ್ ಜ್ಞಾನ ಚೆನ್ನಾಗಿಲ್ಲದಿದ್ದರೂ ಖಾಸಗಿಯಾಗಿ ಹಿಂದಿ ಮಾಧ್ಯಮ ಮೆಟ್ರಿಕ್, ಇಂಟರ್‌ಮೀಡಿಯಟ್ ಬಿ.ಎ. ಮಾಡಿ ಪರೀಕ್ಷೆ ಬರೆಯಲು ಕಾಶಿಗೆ ತೆರಳಿದರು.

1956-58ರಲ್ಲಿ ಕಾರಂತರು ಕಾಶಿಯ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಹಿಂದಿ ಎಂ.ಎ. ಅಧ್ಯಯನ ಮುಗಿಸಿ, ಪಂಡಿತ ಓಂಕಾರನಾಥ ಠಾಕೂರ್‌ರ ಶಿಷ್ಯನಾಗಿ ಹಿಂದೂಸ್ತಾನಿ ಸಂಗೀತ ಕಲಿತರು. ಎಂ.ಎ. ಪ್ರಬಂಧಕ್ಕಾಗಿ ‘ಲಯತತ್ವ ಮತ್ತು ಹಿಂದಿ ಕಾವ್ಯ’ ವಿಷಯವನ್ನು ಆಯ್ಕೆ ಮಾಡಿಕೊಂಡರು. ಮುಂದೆ ಪಿಹೆಚ್‌ಡಿಗಾಗಿ ಕಾರಂತರು ‘ರಂಗಭೂಮಿ ಮತ್ತು ಹಿಂದಿ ನಾಟಕ’ ಎಂಬ ವಿಷಯ ಆರಿಸಿಕೊಂಡರು; ಪ್ರೊ. ಹಜಾರಿ ಪ್ರಸಾದ್ ತ್ರಿವೇದಿ ಮಾರ್ಗದರ್ಶಕರಾಗಿದ್ದರು.

ಎನ್.ಎಸ್.ಡಿ. ಪದವಿ ಮುಗಿಸಿ, ಬದುಕಿಗಾಗಿ ದೆಹಲಿಯ ಪಟೇಲ್ ಸ್ಕೂಲ್‌ನಲ್ಲಿ ಡ್ರಾಮಾ ಮಾಸ್ತರ್ ಆದರು. ಕನ್ನಡದಲ್ಲಿ ಪ್ರಖ್ಯಾತವಾದ ಮಕ್ಕಳ ನಾಟಕಗಳನ್ನು ಬರೆದು ಭಾಷಾಂತರಿಸಿ ನಿರ್ದೇಶಿಸಿದರು. ದೆಹಲಿಯ ಮಿತ್ರರೊಡಗೂಡಿ ‘ಕನ್ನಡ ಭಾರತಿ’ ಆರಂಭಿಸಿ ಪ್ರಬುದ್ಧ ನಾಟಕಗಳನ್ನು ನಿರ್ಮಿಸಿ, ಕನ್ನಡ ನಾಟಕ ರಥವನ್ನೆಳೆಯುತ್ತ ಅಂತರಾಷ್ಟ್ರೀಯ ಪ್ರವಾಸದ ಹಾದಿ ತುಳಿದರು.