ಪರಿಕಲ್ಪನೆ, ವಿನ್ಯಾಸ, ನಿರ್ದೇಶನ : ಅಂಜುಸಿಂಗ್ ಕೆ. |  ವಸ್ತ್ರವಿನ್ಯಾಸ : ಸಂತೋಷ ಕುಮಾರ್ ಕುಸುನೂರು | ಬೆಳಕಿನ ವಿನ್ಯಾಸ : ಮಹೇಶ್ ಕಲ್ಲತ್ತಿ | ಸಂಗೀತ : ಅಂಜುಸಿಂಗ್ ಕೆ. ಮತ್ತು ಧನಂಜಯ | ನಿರ್ವಹಣೆ : ಮಂಜುನಾಥ್ ಬೆಳಕೆರೆ | ದಿನಾಂಕ : 29.03.2016 ರಂದು | ಸಮಯ : ಸಂಜೆ 6.30 ಕ್ಕೆ | ಸ್ಥಳ : ಭೂಮಿಗೀತ

ಭಾರತೀಯ ರಂಗಶಿಕ್ಷಣ ಕೇಂದ್ರ

ರಂಗಾಯಣದ ಅಂಗ ಸಂಸ್ಥೆ ಭಾರತೀಯ ರಂಗ ಶಿಕ್ಷಣ ಕೇಂದ್ರ ರಂಗಶಾಲೆಗೆ ಐದನೇಯ ವರ್ಷ. ರಂಗಶಾಲೆಯಲ್ಲಿ ರಂಗಶಿಕ್ಷಣದಲ್ಲಿ ಒಂದು ವರ್ಷದ ’ಡಿಪ್ಲೋಮಾ’ವನ್ನು ನೀಡಲಾಗುವುದು. ಇದು ಪೂರ್ಣಪ್ರಮಾಣದ ರಂಗಶಾಲೆಯಾಗಿದ್ದು ರಂಗಾಯಣವು ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿಯನ್ನು ನೀಡಿ, ಮಾಹೆಯಾನ ವಿದ್ಯಾರ್ಥಿವೇತನವನ್ನು ನೀಡುತ್ತದೆ. ಶಾಲೆಯಲ್ಲಿ ಪಠ್ಯಕ್ರಮದಂತೆ ತರಗತಿಗಳು ನಡೆಯುವುದರ ಜೊತೆಗೆ ಪ್ರಾಯೋಗಿಕತೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು. ತರಗತಿಗಳಲ್ಲಿ ತರಬೇತಿ ನೀಡಿದ್ದನ್ನು ಪ್ರಾತಕ್ಷಿಕೆ ಮೂಲಕ ಪ್ರದರ್ಶನವನ್ನು ನೀಡುವುದು ಉದ್ದೇಶವಾಗಿದೆ. ನಟ ಯಾವಾಗಲೂ ಪ್ರೇಕ್ಷಕನ ಕಣ್ಣೆದುರಿನಲ್ಲಿ ಬೆಳೆಯಬೇಕು. ಪ್ರೇಕ್ಷಕನ ಪ್ರತಿಕ್ರಿಯೆ ಅವನ ಅನುಭವಕ್ಕೆ ದಕ್ಕಬೇಕು. ಈಗಾಗಲೇ ’ಆದಿಮ ರಂಗ’ ಮತ್ತು ‘ಧಂ ಅಂಡ್ ರಿದಂ’ ಶಬ್ಧ ತರಂಗ ಪ್ರಾತ್ಯಕ್ಷಿಕೆಯನ್ನು ಹಾಗೂ ಶ್ರೀಮತಿ ಜಿ. ಭವಾನಿ ಅವರ ಪರಿಕಲ್ಪನೆ ಹಾಗೂ ಮಾರ್ಗದರ್ಶನದಲ್ಲಿ ‘ಯೋಗ’ ಪ್ರಾತ್ಯಕ್ಷಿಕೆ ಹಾಗೂ ತಿಪ್ಪೂರಿನ ಪ್ರಸಿದ್ಧ ಜಾನಪದ ಕೋಲಾಟದ ಕಲಾವಿದರಾದ ಶ್ರೀಯುತ ನರಸಿಂಹ ನಾಯಕ್ ಹಾಗೂ ರಂಗಾಯಣ ರಂಗಶಿಕ್ಷಣ ಕೇಂದ್ರದ ಶಿಕ್ಷಕರಾದ ಶ್ರೀ ಸಂತೋಷ್ ದಿಂಡಿಗನೂರು. ಧನಂಜಯ್‌ರವರ ಮಾರ್ಗದರ್ಶನದಲ್ಲಿ ದೇಶಿಯ ಕೋಲಾಟ ’ಕತ್ತೆ ಮತ್ತು ಧರ್ಮ’ ಪ್ರಾತ್ಯಕ್ಷಿಕೆ ಪ್ರದರ್ಶನ ಹಾಗೂ ರಂಗಾಯಣದ ಹಿರಿಯ ಕಲಾವಿದರಾದ ಶ್ರೀ ಜಗದೀಶ್ ಮನವಾರ್ತೆ ರವರ ನಿರ್ದೇಶನದಲ್ಲಿ ’ಆಷಾಢದ ಒಂದು ದಿನ’ ನಾಟಕವನ್ನು ಯಶಸ್ವಿಯಾಗಿ ಪ್ರದರ್ಶಿಸಿರುತ್ತಾರೆ. ಪ್ರಸ್ತುತ ರಂಗಾಯಣದ ಸಮರಕಲೆ ಶಿಕ್ಷಕರಾದ ಶ್ರೀ ಅಂಜುಸಿಂಗ್‌ರವರು ’ಹುಲಿಮುಖ’ ಪ್ರಾತ್ಯಕ್ಷಿಕೆಯನ್ನು ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ.

ನಾಟಕದ ಬಗ್ಗೆ

ಗುರುವಿನ ಬಳಿಯಲ್ಲಿ ಆತ್ಮರಕ್ಷಣೆಗಾಗಿ ಶಿಷ್ಯಂದಿರು ಪಾರಂಪರಿಕವಾಗಿ ಬಂದ ಸಮರಕಲೆಯನ್ನು ಕಲಿಯುತ್ತಿರುತ್ತಾರೆ. ಅವನ ಶಿಷ್ಯಂದಿರಲ್ಲಿ ಐದು ಜನ ಸಹೋದರರು ಇರುತ್ತಾರೆ. ಅವರಿಗೆ ಒಬ್ಬಳು ಮುದ್ದಾದ ತಂಗಿ ಇರುತ್ತಾಳೆ. ಐದು ಜನ ಸಹೋದರರಿಗೆ ಗುರು ಕಾಡಿನಲ್ಲಿರುವ ಏಳು ಸುತ್ತಿನ ಸಂಪಿಗೆ ಪುಷ್ಪವನ್ನು ತಂದು ಅರ್ಪಿಸಿದರೆ ನೀವು ಕಲಿತ ಈ ಸಮರ ಕಲೆ ವಿದ್ಯೆ ಪೂರ್ಣವಾಗುತ್ತದೆ ಎಂದು ಹೇಳುತ್ತಾನೆ. ಐದು ಜನ ಸಹೋದರರು ತಾವು ತಿರುಗಿ ಬರುವವರೆಗೂ ತಮ್ಮ ತಂಗಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿ ಕಾಡಿಗೆ ಹೊರಟು ಹೋಗುತ್ತಾರೆ. ಆ ಊರಿನಲ್ಲಿ ಒಬ್ಬ ಮಾಂತ್ರಿಕನಿರುತ್ತಾನೆ. ಗಿಡಿಮೂಲಿಕೆಗಳಿಂದ ರೋಗಗಳನ್ನು ನಿವಾರಣೆ ಮಾಡುವ ಮತ್ತು ರೂಪಬದಲಾವಣೆ ಮಾಡಿಕೊಳ್ಳುವ ವಿದ್ಯೆ ಗೊತ್ತಿರುತ್ತದೆ. ಮಾಂತ್ರಿಕ ಮನಸ್ಸಿನಲ್ಲಿ ಹಣ ಸಂಪಾದನೆ ಮಾಡುವ ದುರಾಸೆ ಬಂದು, ತನ್ನ ರೂಪಬದಲಾಣೆ ವಿದ್ಯೆಯಿಂದ ಹುಲಿಮುಖವನ್ನು ಧಾರಣೆ ಮಾಡಿಕೊಂಡು ಜನರಿಗೆ ಹಿಂಸೆಯನ್ನು ನೀಡುತ್ತಾ ಹಣ ಸಂಪಾದನೆಗೆ ಇಳಿಯುತ್ತಾನೆ. ಹುಲಿಮುಖನನ್ನು ಎದುರಿಸಲು ಹೋದ ಗುರು ಅಸುನೀಗುತ್ತಾನೆ. ಹುಲಿಮುಖ ಐದು ಜನ ಸಹೋದರರ ತಂಗಿ ಚಿನ್ನಾರಿಯನ್ನು ಅಪಹರಿಸಿಕೊಂಡು ಹೋಗುತ್ತಾನೆ. ಏಳುಸುತ್ತಿನ ಸಂಪಿಗೆ ಪುಷ್ಪವನ್ನು ತೆಗೆದುಕೊಂಡು ಮರಳಿ ಬಂದ ಸಹೋದರರು ವಿಷಯ ತಿಳಿದು ಹುಲಿಮುಖನನ್ನು ಹುಡುಕಿಕೊಂಡು ಕಾಡಿಗೆ ತೆರಳುತ್ತಾರೆ. ಕಾಡಿನಲ್ಲಿ ಎದುರಾದ ಹುಲಿಮುಖನೊಂದಿಗೆ ಹೋರಾಡಿ ತಮ್ಮ ತಂಗಿಯನ್ನು ಬಿಡಿಸಿಕೊಂಡು ಬರುತ್ತಾರೆ.

ಸಮರ ಕಲೆಗಳಾದ ಕತ್ತಿವರಸೆ, ದೊಣ್ಣೆ ವರಸೆ, ಸಾಹಸ ಕಲೆಗಳ ಸಂಯೋಜನೆಗಳೊಂದಿಗೆ ಈ ನಾಟಕವನ್ನು ಕಟ್ಟಲಾಗಿದೆ. ಇದೊಂದು ವಿಶೇಷ ಪ್ರಯೋಗವಾಗಿದೆ. ಈ ನಾಟಕ ಮಣಿಪುರದ ಜಾನಪದ ಕತೆಯ ಆಧಾರಿತವಾಗಿದೆ.

ಕೆ. ಅಂಜುಸಿಂಗ್

ಮಣಿಪುರದವರಾದ ಇವರ ಹುಟ್ಟೂರು ಆ ರಾಜ್ಯದ ರಾಜಧಾನಿ ಇಂಫಾಲ್, ಮಣಿಪುರಿ. ಸಮರಕಲೆ ಥಾಂಗ್‌ಟಾ ಮತ್ತು ಕೊರಿಯಾದ ಸಮರಕಲೆ ಟಾಯ್ಯೊಂಡು ತಜ್ಞರು. ಸಮರಕಲೆಯ ಇತರ ಅನೇಕ ಮುಖಗಳ ಪರಿಜ್ಞಾನವಿರುವವರು. ಸಮರಕಲೆಯ ಪ್ರಾತ್ಯಕ್ಷಿಕೆಗಳಿಗೆ ಹಾಗೂ ನಾಟಕ ಪ್ರಯೋಗಗಳಿಗೆ ಸಮರ ದೃಶ್ಯಗಳ ಸಂಯೋಜನೆ ಮಾಡುವಲ್ಲಿ ತುಂಬ ಅನುಭವ ಇರುವವರು. ಅಲ್ಲದೆ ಅನೇಕ ನಾಟಕಗಳಿಗೆ ವಾದ್ಯ ಸಂಗೀತ ನೀಡಿದ್ದಾರೆ.

ಅಂತರಾಷ್ಟ್ರೀಯ ಖ್ಯಾತಿಯ Bodo International ಎಂಬ ಜರ್ಮನ್ ಕ್ರೀಡಾ ಪತ್ರಿಕೆ ಹಾಗೂ ಭಾರತದ ಈಶಾನ್ಯ ಭಾಗದ ಪ್ರಮುಖ ಪತ್ರಿಕೆ Sun Magazine  ಗಳು ಇವರನ್ನು ಕುರಿತು ಲೇಖನಗಳನ್ನು ಪ್ರಕಟಿಸಿವೆ. ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಸಮರಕಲಾ ಸ್ಫರ್ಧೆಗಳ ಮುಕ್ತ ಶೈಲಿಯ ವಿಭಾಗದಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಮಣಿಪುರದ ಕಲೆ ಮತ್ತು ಸಂಸ್ಕೃತಿ ಇಲಾಖೆ, ದೇಶದ ಪೂರ್ವ ವಿಭಾಗದ ಸಂಸ್ಕೃತಿ ಕೇಂದ್ರ, ಕೊಲ್ಕತ್ತಾ ಹಾಗೂ ಈಶಾನ್ಯ ವಿಭಾಗ ಸಂಸ್ಕೃತಿ ಕೇಂದ್ರ, ಧೀಮಾಪುರ ಇವುಗಳ ಆಶ್ರಯದಲ್ಲಿ ಭಾರತಾದ್ಯಂತ ಸಮರಕಲೆ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ಇಂಫಾಲದ ಮೀರಾಸ್ಕಾ ತರಬೇತಿ ಕೇಂದ್ರದಲ್ಲಿ ಐದು ವರ್ಷ ಸಮರಕಲಾ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ರಂಗಾಯಣದ ಹೊರಗೆ ನೀನಾಸಂ, ಸಮುದಾಯ, ಸ್ಪಂದನ, ಕರ್ನಾಟಕ ನಾಟಕ ಅಕಾಡೆಮಿ ಅಲ್ಲದೆ ಇತರ ಅನೇಕ ನಾಟಕ ಸಂಸ್ಥೆಗಳಿಗೆ ಹಾಗೂ ಆಸಕ್ತ ಗುಂಪುಗಳಿಗೆ ಸಮರಕಲೆಯ ಕಮ್ಮಟಗಳನ್ನು ನಡೆಸಿಕೊಟ್ಟಿದ್ದಾರೆ. ೧೯೮೯ ರಿಂದ ನಾಟಕ ಕರ್ನಾಟಕ ರಂಗಾಯಣದಲ್ಲಿ ಸಮರಕಲಾ ಶಿಕ್ಷಕರಾಗಿ, ವಾದ್ಯ ಸಂಗೀತಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ರಂಗದ ಮೇಲೆ

ಭಾಗ್ಯಲಕ್ಷ್ಮೀ ಎಂ.ಪಿ,
ಅಶ್ವಿನಿ.ಬಿ.ಬಿ,
ಸೂರ್ಯಕುಮಾರಿ,
ರಾಕೇಶ ಯಾದವ್.ಪಿ,
ಕುಮಾರ.ಬಿ.ಜಿ,
ರವಿ.ಶಿ.ವಿಭೂತಿಮಠ,
ಸಂಜಯಕುಮಾರ್.ಟಿ.ಪಿ.,
ವೆಂಕಟೇಶಪ್ರಸಾದ್ ಹೆಚ್.ಡಿ,
ಕಾರ್ತಿಕ.ಬಿ.ಎನ್,
ವಿನೋದಕುಮಾರ್ ಹಿರೇಮಠ,
ಅಮಿತ್.ಜೆ.ರೆಡಿ,
ರವಿ.ವಿ,
ಶ್ರೀಕಾಂತ ನವಲಗರಿ,
ಎಂ.ಹೆಚ್.ಬೋಪಣ್ಣ,
ರವಿತೇಜ.ಆರ್,