ರಂಗಾಯಣದ ಸಂಕ್ಷಿಪ್ತ ಪರಿಚಯ

                                                                                                                                                                                         ರಂಗಶಾಲೆಗೆ ಆಯ್ಕೆಯಾದವರ ಪಟ್ಟಿ: 2017-18

ಕನ್ನಡ ರಂಗಭೂಮಿಗೆ ಪುನಶ್ಚೇತನ ನೀಡುವ ಸಲುವಾಗಿ ಕರ್ನಾಟಕ ಸರ್ಕಾರವು ರಂಗಾಯಣ ಸಂಸ್ಥೆಯನ್ನು 1989ರಲ್ಲಿ ಮೈಸೂರು ನಗರದಲ್ಲಿ ಸ್ಥಾಪಿಸಿತು. ಆಧುನಿಕ ರೆಪರ್ಟರಿ ಕಂಪನಿಯಾದ ರಂಗಾಯಣವು ತನ್ನ ವಿಶಿಷ್ಟವಾದ ರಂಗ ಪ್ರಯೋಗಗಳಿಂದಾಗಿ ದೇಶಾದ್ಯಂತ ಖ್ಯಾತಿ ಗಳಿಸಿದೆ. ದೇಶವಿದೇಶಗಳ ಹೆಸರಾಂತ ರಂಗ ನಿರ್ದೇಶಕರು ಹಾಗೂ ವಿನ್ಯಾಸಕರು ರಂಗಾಯಣ ಸಂಸ್ಥೆಗೆ ನಾಟಕಗಳನ್ನು ತಯಾರಿಸಿ ಕೊಟ್ಟಿದ್ದಾರೆ. ಕನ್ನಡದ ಎಲ್ಲ ಪ್ರಮುಖ ನಾಟಕಕಾರರ ನಾಟಕಗಳು. ವಿದೇಶಿ ನಾಟಕಾರರ ಪ್ರಮುಖ ಕೃತಿಗಳು ಈ ಆಧುನಿಕ ರೆಪರ್ಟರಿ ತಂಡದ ಪ್ರದರ್ಶನದ ಸರಮಾಲೆಯಲ್ಲಿ ಸೇರಿವೆ. ರಂಗಾಯಣವು ತನ್ನದೇ ಆದ ಕಲಾವಿದರು. ಪ್ರಶಿಕ್ಷಕರು, ತಂತ್ರಜ್ಞರು ಹಾಗೂ ಆಡಳಿತ ಸಿಬ್ಬಂದಿಯನ್ನು ಹೊಂದಿದೆ. ಸುಸಜ್ಜಿತವಾದ ಭೂಮಿಗೀತ (ರಂಗಮಂದಿರ), ವನರಂಗ (ಬಯಲು ರಂಗಮಂದಿರ), ಶ್ರೀರಂಗ (ಕಿರು ರಂಗಮಂದಿರ), ಮಕ್ಕಳ ರಂಗಭೂಮಿ ರೆಪರ್ಟರಿ ತಂಡವಾದ ರಂಗಕಿಶೋರವನ್ನು ಸ್ಥಾಪಿಸಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದೆ. ಶ್ರೀರಂಗ ಮಾಹಿತಿ ಮತ್ತು ಸಂಶೋಧನಾ ಕೇಂದ್ರ ಮುಂತಾದವುಗಳನ್ನು ಹೊಂದಿರುತ್ತದೆ. ಕನ್ನಡ ಭಾಷೆಯಲ್ಲಿ ವರ್ಷವಿಡೀ ವಾರಾಂತ್ಯ ರಂಗಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ರಂಗಾಯಣವು ಪ್ರತಿ ವರ್ಷ ಬಹುರೂಪಿ ರಾಷ್ಟ್ರೀಯ/ಅಂತರ ರಾಷ್ಟ್ರೀಯ ನಾಟಕೋತ್ಸವ, ಹವ್ಯಾಸಿಗಳಿಗಾಗಿ ಹವ್ಯಾಸಿ ನಾಟಕೋತ್ಸವ, ಕಾಲೇಜು ವಿದ್ಯಾರ್ಥಿಗಳಿಗಾಗಿ ಬಿ.ವಿ.ಕಾರಂತ ಕಾಲೇಜು ರಂಗೋತ್ಸವÀ, ಮೈಸೂರು ದಸರಾ ಸಂದರ್ಭದಲ್ಲಿ ನವರಾತ್ರಿ ನಾಟಕೋತ್ಸವ, ಮಕ್ಕಳಿಗಾಗಿ ಬೇಸಿಗೆ ರಜೆಯಲ್ಲಿ ಚಿಣ್ಣರ ಮೇಳಗಳನ್ನು ನಡೆಸಿಕೊಂಡು ಬರುತ್ತಿದೆ.

 

ರಂಗಾಯಣ ಸ್ವಾಯುತ್ತ ಸಾಂಸ್ಕೃತಿಕ ಸಂಸ್ಥೆ

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಂಗಾಯಣವು ಒಂದು ಸ್ವಾಯತ್ತ ಸಂಸ್ಥೆ. ರಂಗಸಮಾಜದ ಅಧೀನದಲ್ಲಿ ರಂಗಾಯಣವು ರೆಪರ್ಟರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕರ್ನಾಟಕ ಸರ್ಕಾರವು ಸಿಬ್ಬಂದಿ, ಕಲಾವಿದರ ವೇತನ ಹಾಗೂ ಇತರೆ ಚಟುವಟಿಕೆಗಳಿಗೆ ವಾರ್ಷಿಕ ಅನುದಾನವನ್ನು ನೀಡುತ್ತಿದೆ. ಕರ್ನಾಟಕ ಸರ್ಕಾರದ ಸಂಸ್ಕೃತಿ ಸಚಿವರು ರಂಗಸಮಾಜದ ಅಧ್ಯಕ್ಷರಾಗಿರುತ್ತಾರೆ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯವರು ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಾಗಿರುತ್ತಾರೆ. ರಂಗಸಮಾಜವು ರಂಗಭೂಮಿಯಲ್ಲಿ ಸೇವೆ ಸಲ್ಲಿಸಿರುವ ಪ್ರತಿಷ್ಠಿತರನ್ನು ಸದಸ್ಯರನ್ನಾಗಿ ಹೊಂದಿದ್ದು, ಇವರೆಲ್ಲರ ಮಾರ್ಗದರ್ಶನದಲ್ಲಿ ರಂಗಾಯಣವು ಕಾರ್ಯಕ್ರಮವನ್ನು ರೂಪಿಸಿ ನಿರ್ವಹಿಸಿಕೊಂಡು ಬರುತ್ತಿದೆ.

 

ರೆಪರ್ಟರಿ ನಾಟಕ ತಂಡ

ಭಾರತದಲ್ಲಿ ಕೆಲಸ ಮಾಡುತ್ತಿರುವ ಪ್ರಮುಖ ರೆಪರ್ಟರಿ ತಂಡಗಳಲ್ಲಿ ರಂಗಾಯಣವು ಒಂದು. ನಿರಂತರವಾಗಿ ವರ್ಷವಿಡೀ, ವಾರಾಂತ್ಯ ರಂಗಪ್ರದರ್ಶನ ನೀಡುತ್ತಿರುವ ಏಕೈಕ ರೆಪರ್ಟರಿ ತಂಡ. ರಂಗಾಯಣದ ವಾರಾಂತ್ಯ ರಂಗಪ್ರದರ್ಶನಗಳು ಮೈಸೂರಿನ ಭೂಮಿಗೀತ ರಂಗಮಂದಿರದಲ್ಲಿ ನಡೆಯುತ್ತವೆ. ಭೂಮಿಗೀತ ರಂಗಮಂದಿರವು ಒಂದು ಆಪ್ತ ರಂಗಮಂದಿರವಾಗಿದೆ.

ರಂಗಾಯಣವು ತನ್ನ ನಾಟಕಗಳನ್ನು ಭಾರತದ ವಿವಿಧ ಪ್ರದೇಶಗಳಲ್ಲಿ ನಡೆಯುವ ರಾಷ್ಟ್ರೀಯ ನಾಟಕೋತ್ಸವಗಳಲ್ಲಿ ಪ್ರದರ್ಶನ ನೀಡುತ್ತಾ ಬಂದಿದೆ. 1989 ರಿಂದ ನಿರಂತರವಾಗಿ ರಂಗಕಾಯಕ ಮಾಡುತ್ತಾ ಬಂದಿರುವ ಅನುಭವಿ ನಟ-ನಟಿಯರು, ಸಂಗೀತಗಾರರು, ವಿನ್ಯಾಸಕರು ಹಾಗೂ ತಂತ್ರಜ್ಞರು ರಂಗಾಯಣದಲ್ಲಿ ಲಭ್ಯವಿದ್ದಾರೆ. ದೇಶ ವಿದೇಶಗಳ ಪ್ರಖ್ಯಾತ ರಂಗನಿರ್ದೇಶಕರುಗಳಾದ ಪ್ರಿಟ್ಸ್ ಬೆನವಿಟ್ಸ್, ಕನ್ಹಯ್ಯಲಾಲ್, ವ್ಯಾಸಲಿ ಕ್ಯಾಲಿಟ್‍ಸೀಸ್, ಶ್ರೀಮತಿ ಇಲಿಯಾನ, ಬಿ.ವಿ.ಕಾರಂತ, ಪ್ರಸನ್ನ, ಸಿ.ಬಸವಲಿಂಗಯ್ಯ, ರಘುನಂದನ್, ಜಯತೀರ್ಥ ಜೋಷಿ, ಪಿ.ಗಂಗಾಧರಸ್ವಾಮಿ, ಭಾಗೀರಥಿಬಾಯಿ ಕದಂ, ರುಸ್ತುಂಬರೂಚ, ಎಂ.ಎಸ್.ಸತ್ಯು, ಇಕ್ಬಾಲ್ ಅಹ್ಮದ್, ಸ್ಟುಕಲ್, ಹೂವೇ ಎನ್ಸನ್, ರಮೇಶ ವರ್ಮ, ಸುರೇಶ ಆನಗಳ್ಳಿ, ಸಿ.ಜಿ.ಕೃಷ್ಣಸ್ವಾಮಿ, ಶ್ರೀನಿವಾಸ ಪ್ರಭು, ಆರ್. ನಾಗೇಶ್, ಅನೂಪ್ ಜೋಷಿ (ಬಂಟಿ) ಮುಂತಾದ ಅನೇಕರು ರಂಗಾಯಣಕ್ಕೆ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಶೇಕ್ಸ್‍ಪಿಯರ್, ಬರ್ಟೋಲ್ಟ್ ಬ್ರೆಕ್ಟ್, ಮೋಹನ್ ರಾಕೇಶ್, ವಿಜಯ ತೆಂಡೂಲ್ಕರ್, ಶ್ರೀರಂಗ, ಕುವೆಂಪು, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಆದಿಯಾಗಿ ಅನೇಕ ಹೆಸರಾಂತ ನಾಟಕಕಾರರುಗಳ ನಾಟಕವನ್ನು ರಂಗಾಯಣವು ಪ್ರದರ್ಶಿಸಿ ಜನಪ್ರಿಯಗೊಳಿಸಿದೆ. ಶಿವರಾಮ ಕಾರಂತ, ದೇವನೂರು ಮಹಾದೇವ, ಕುವೆಂಪು ಇವರುಗಳ ಕಾದಂಬರಿಗಳನ್ನು ರಂಗಕ್ಕಳವಡಿಸಿ ಪ್ರದರ್ಶನ ನೀಡಿದೆ. ಸಾಕ್ಷರತಾ ಆಂದೋಲನ, ಅಪರಾಧ ತಡೆ ಮಾಸದಲ್ಲಿ ಭಾಗಿಯಾಗಿ ನೂರಾರು ಬೀದಿ ನಾಟಕಗಳನ್ನು ಅಭಿನಯಿಸಿದೆ. ಡಿ.ಪಿ.ಇ.ಪಿ. ಹಾಗೂ ಡಿ.ಎಸ್.ಇ.ಆರ್.ಟಿ. ಸಂಸ್ಥೆಯೊಂದಿಗೆ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ನಡೆಸಿದೆ.

 

ಈಚೆಗೆ ರಾಷ್ಟ್ರಕವಿ ಕುವೆಂಪುರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಸತತ ಒಂಭತ್ತು ಗಂಟೆಗಳ ಕಾಲ ಯಶಸ್ವೀ ಪ್ರದರ್ಶನ ನೀಡಿ ರಂಗಭೂಮಿ ಇತಿಹಾಸದಲ್ಲಿ ದಾಖಲೆಯನ್ನು ಮಾಡಿದೆ. ಶ್ರೀ ಚಂದ್ರಶೇಖರ ಕಂಬಾರರ ಬೃಹತ್ ಕಾದಂಬರಿ ‘ಶಿಖರ ಸೂರ್ಯ’ವನ್ನು ರಂಗಕ್ಕಳವಡಿಸಿ ಶ್ರೀ ಡಾ. ಬಿ.ವಿ ರಾಜಾರಾಂರವರ ನಿರ್ದೇಶನದಲ್ಲಿ ಪ್ರದರ್ಶನ ನೀಡಿದೆ.

 

 

ಭಾರತೀಯ ರಂಗಶಿಕ್ಷಣ ಕೇಂದ್ರ

ಭಾರತೀಯ ರಂಗ ಶಿಕ್ಷಣ ಕೇಂದ್ರವನ್ನು ರಂಗಾಸಕ್ತ ಯುವಕರಿಗೆ ರಂಗ ಶಿಕ್ಷಣ ನೀಡುವ ಉದ್ದೇಶದಿಂದ 2010-11 ರಲ್ಲಿ ಪಾರಂಭಿಸಲಾಯಿತು

ಎರಡು ವರ್ಷದ ರಂಗ ಶಿಕ್ಷಣದಲ್ಲಿ ಡಿಪ್ಲೊಮಾ ಕೋರ್ಸು
ರಂಗ ಶಿಕ್ಷಣದಲ್ಲಿ ತರಬೇತಿ ನೀಡುವ ಡಿಪ್ಲೋಮಾ ಎರಡು ವರ್ಷದ ಅವಧಿಯದ್ದಾಗಿದೆ. ಈ ಕೋರ್ಸಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ದೊರಕಿದೆ. ಈ ಕೋರ್ಸಿನ ಶಿಕ್ಷಣದ ಪಠ್ಯಕ್ರಮ, ಬೋಧನಾ ವಿಧಾನ, ಪರೀಕ್ಷೆಗಳು ಹಂಪಿಯ ಕನ್ನಡ ವಿಶ್ವವಿದ್ಯಾಲಯ ಮಾರ್ಗಸೂಚಿ ಅನ್ವಯ ನಡೆಯುತ್ತದೆ. ಉತ್ತೀರ್ಣರಾದವರಿಗೆ ವಿಶ್ವವಿದ್ಯಾಲಯವು ಪ್ರಮಾಣ ಪತ್ರವನ್ನು ನೀಡುತ್ತದೆ. ತರಬೇತಿಯ ಮೊದಲನೇ ವರ್ಷ ಪಠ್ಯಾಧಾರಿತ ವಿಷಯ ಬೋಧನೆಯ ಜೊತೆಗೆ, ರಂಗಭೂಮಿಯ ಪ್ರಾಥಮಿಕ ಚಟುವಟಿಕೆಗಳ ಮೂಲಕ ತರಬೇತಿಯನ್ನು ನೀಡಲಾಗುವುದು.

ರಂಗಾಯಣದ ಸಂಚಾರಿ ರಂಗಘಟಕ (ಮಿನಿ ರೆಪರ್ಟರಿ)ದ ಮೂಲಕ ಎರಡನೆಯ ವರ್ಷ ನಾಟಕ ಕಲಿಕೆ ಹಾಗೂ ರಾಜ್ಯಾದ್ಯಂತ ನಾಟಕಗಳ ಪ್ರವಾಸ ಮಾಡಿ ನಾಟಕ ಪ್ರದರ್ಶನ ನೀಡುವುದು ಹಾಗೂ ಡಿಪ್ಲೊಮೊ ವಿದ್ಯಾರ್ಥಿಗಳು ಕೋರ್ಸ್‍ನ ಅವಧಿಯಲ್ಲಿ ರಂಗಾಯಣದ ಪ್ರಮುಖ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ರಂಗ ಸಂಘಟನಾ ಅನುಭವವನ್ನು ನೀಡಲಾಗುವುದು.

ಬೋಧನೆಯ ಮಾಧ್ಯಮ

ರಂಗಶಿಕ್ಷಣವನ್ನು ಕನ್ನಡ ಭಾಷೆಯಲ್ಲಿ ನೀಡಲಾಗುವುದು. ಅಗತ್ಯವಿದ್ದಲ್ಲಿ ಇಂಗ್ಲಿಷ್ ಭಾಷೆಯನ್ನು ಬಳಸಲಾಗುವುದು. ವಿದ್ಯಾರ್ಥಿಗಳು ಕನ್ನಡದಲ್ಲಿ ವ್ಯವಹರಿಸುವುದು  ಅನಿವಾರ್ಯ.

ಪ್ರವೇಶಕ್ಕೆ ಅರ್ಹತೆ

ಹಂಪಿಯ ಕನ್ನಡ ವಿಶ್ವವಿದ್ಯಾಲಯ ನಿಯಮಾವಳಿಗೆ ಅನುಗುಣವಾಗಿ ಅಭ್ಯರ್ಥಿಗೆ ಕನಿಷ್ಠ ವಿದ್ಯಾರ್ಹತೆ ಪಿ.ಯು.ಸಿ/ತತ್ಸಮಾನ ಪಾಸಾಗಿರಬೇಕು. 18 ರಿಂದ 28 ವರ್ಷದೊಳಗಿನವರಾಗಿರಬೇಕು. ಕನ್ನಡ ಭಾಷೆ ಓದಲು, ಬರೆಯಲು ಬರುವುದು ಕಡ್ಡಾಯ.

ಅರ್ಜಿ ಶುಲ್ಕ

ಡಿಪ್ಲೊಮಾ ಕೋರ್ಸ್‍ನ ಅರ್ಜಿ ಶುಲ್ಕ

ಸಾಮಾನ್ಯ ವರ್ಗ                                                                                    ರೂ.300/- (ಮೂರುನೂರು ರೂ.ಗಳು)
ಪ.ಜಾ, ಪ.ವರ್ಗ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ                                                ರೂ.150/- (ಒಂದುನೂರ ಐವತ್ತು ರೂ.ಗಳು)
ದಿನಾಂಕ:22.06.2017 ರಿಂದ ರಂಗಾಯಣದ ವೆಬ್‍ಸೈಟ್‍ನಲ್ಲಿ ಅರ್ಜಿಗಳನ್ನು ಪಡೆಯಬಹುದಾಗಿದೆ.
ಪಡೆದ ಅರ್ಜಿಗಳನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿಮಾಡಿ ದಿನಾಂಕ: 04.07.2017 ಒಳಗಾಗಿ ಸದರಿ ಕೇಂದ್ರಕ್ಕೆ ಸಲ್ಲಿಸುವುದು.

 

ಅರ್ಜಿ ಪಡೆಯುವ ಮತ್ತು ಸಲ್ಲಿಸುವ ವಿಧಾನ

(i) ರಂಗಾಯಣದ ವೆಬ್‍ಸೈಟ್ www.rangayana.org ನ ಮೂಲಕ ಡೌನ್‍ಲೋಡ್ ಮಾಡಿ, ಭರ್ತಿ ಮಾಡಿದ ಅರ್ಜಿಯೊಂದಿಗೆ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡಿ.ಡಿ. ಮೂಲಕ ನಿರ್ದೇಶಕರು, ರಂಗಾಯಣ, ಕಲಾಮಂದಿರ, ಹುಣಸೂರು ರಸ್ತೆ, ಮೈಸೂರು-5, ಇವರ ಹೆಸರಿಗೆ ಪಡೆದು ನಿಗದಿತ ದಿನಾಂಕದೊಳಗೆ ರಂಗಾಯಣ ವಿಳಾಸಕ್ಕೆ ರಿಜಿಸ್ಟರ್ಡ್ ಪೋಸ್ಟ್ ಅಥವಾ ಕೋರಿಯರ್ ಮೂಲಕ ಸಲ್ಲಿಸಬಹುದಾಗಿದೆ ಅಥವಾ ಖುದ್ದಾಗಿ ಕಚೇರಿ ಅವಧಿಯಲ್ಲಿ ಬಂದು ಸಲ್ಲಿಸಬಹುದಾಗಿದೆ. (ಚೆಕ್ಕುಗಳನ್ನು ಸ್ವೀಕರಿಸುವುದಿಲ್ಲ).

(ii) ಅಪೂರ್ಣ ಮಾಹಿತಿ ಇರುವ ಹಾಗೂ ಸೂಕ್ತ ದಾಖಲೆ ಇಲ್ಲದಿರುವ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.

(iii) ಅರ್ಜಿಯೊಂದಿಗೆ ಈ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳನ್ನು ಗೆಜೆಟೆಡ್ ಅಧಿಕಾರಿಗಳ ದೃಢೀಕರಣ ಸಹಿ ಪಡೆದು ಸಲ್ಲಿಸುವುದು.

(1) ವಿದ್ಯಾರ್ಹತೆಯ ಪ್ರಮಾಣಪತ್ರ
(2) ಜಾತಿಯ ಪ್ರಮಾಣ ಪತ್ರ
(3) ವಯಸ್ಸನ್ನು ದೃಢೀಕರಿಸುವ ಪ್ರಮಾಣಪತ್ರ
(4) ನಾಲ್ಕು ಸ್ಟಾಂಪ್ ಸೈಜಿನ ಹಾಗೂ ಒಂದು ಪಾಸ್‍ಪೋರ್ಟ್ ಸೈಜಿನ ಭಾವಚಿತ್ರ
(5) ರೂ.5/-ಗಳ ಅಂಚೆಚೀಟಿ ಅಂಟಿಸುವ ಸ್ವವಿಳಾಸವಿರುವ ಲಕೋಟೆ, ಜೊತೆಗಿರಬೇಕು.
(6) ಅಂಚೆ ಸಂಸ್ಥೆಗಳ ವಿಳಂಬದಿಂದಾಗುವ ತೊಂದರೆಗಳಿಗೆ ರಂಗಾಯಣವು ಹೊಣೆಯಲ್ಲ.

ಆಯ್ಕೆ ವಿಧಾನ

ಅಭ್ಯರ್ಥಿ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ಸಂದರ್ಶನಕ್ಕಾಗಿ ಕರೆಯಲಾಗುವುದು.

ಮುಕ್ತ ಸಂದರ್ಶನದ ಮೂಲಕ ವಿದ್ಯಾರ್ಥಿಗಳ ಆಯ್ಕೆಯನ್ನು ಮಾಡಲಾಗುವುದು.

ವಿದ್ಯಾರ್ಥಿಯ ಪ್ರತಿಭೆ ಮತ್ತು ರಂಗಾಸಕ್ತಿಯನ್ನು ಪ್ರಧಾನವಾಗಿ ಪರಿಗಣಿಸಲಾಗುವುದು.

ಸರ್ಕಾರದ ನಿಯಮಾನುಸಾರ ಮೀಸಲಾತಿಯ ಕ್ರಮವನ್ನು ಅನುಸರಿಸಲಾಗುವುದು.

ಅಭ್ಯರ್ಥಿಯು ತನ್ನ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.

ಪ್ರವೇಶ ಪರೀಕ್ಷೆ ನಾಟಕ ಕ್ಷೇತ್ರಕ್ಕೆ ಸಂಬಂಧಿಸಿದ ತಿಳುವಳಿಕೆಯನ್ನು ಪರೀಕ್ಷಿಸುವ ಸಂದರ್ಶನ ರೂಪದ್ದಾಗಿರುತ್ತದೆ.

ವಿಶ್ವವಿದ್ಯಾಲಯವು ನಿಯೋಜಿಸುವ ತಜ್ಞ ಪ್ರತಿನಿಧಿಯೊಬ್ಬರ ಸಮಕ್ಷಮ ದಿನಾಂಕ:06-07-2017 ಹಾಗೂ ದಿನಾಂಕ:07-07-2017 ರಂದು ಸಂದರ್ಶನವನ್ನು ರಂಗಾಯಣದ ಆವರಣದಲ್ಲಿ ನಡೆಸಲಾಗುವುದು.

ದಿನಾಂಕ:10-07-2017 ರಂದು ರಂಗಶಿಕ್ಷಣದ ಫಲಿತಾಂಶವನ್ನು ಪ್ರಕಟಿಸಲಾಗುವುದು.

ಆಯ್ಕೆಯಾದ ಅಭ್ಯರ್ಥಿಗಳು ದಿನಾಂಕ:15-07-2017ರೊಳಗೆ ನೊಂದಣಿ ಮಾಡಿಕೊಳ್ಳುವುದು.

ನೊಂದಣಿಯಾದ ಅಭ್ಯರ್ಥಿಗಳಿಗೆ ದಿನಾಂಕ:20-07-2017 ರಿಂದ ತರಗತಿಗಳು ಪ್ರಾರಂಭವಾಗುತ್ತವೆ.

ಹೆಚ್ಚಿನ ವಿವರಕ್ಕಾಗಿ ರಂಗಾಯಣ ಕಚೇರಿಯ ವೇಳೆಯಲ್ಲಿ ಸಂಪರ್ಕಿಸುವುದು. ದೂರವಾಣಿ: 0821-2512639.

ಅಭ್ಯರ್ಥಿಗಳಿಗೆ ರಂಗಾಯಣ ಒದಗಿಸುವ ಸೌಲಭ್ಯಗಳು

(i) ಆಯ್ಕೆಯಾದ ಅಭ್ಯರ್ಥಿಗೆ ಕೋರ್ಸಿನ ಒಂದು ವರ್ಷಕ್ಕೆ ಉಚಿತವಾಗಿ ವಸತಿಯನ್ನು ಒದಗಿಸಲಾಗುವುದು.

(ii) ಮಾಹೆಯಾನ ಅಭ್ಯರ್ಥಿಗೆ ರೂ.2,500/- ವಿದ್ಯಾರ್ಥಿ ವೇತನವನ್ನು ನೀಡಲಾಗುವುದು.

(iii) ಕೋರ್ಸ್‍ನ ಎರಡನೆಯ ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ರೂ.12000/-ಗಳ ಮಾಸಿಕ ಗೌರವ ಸಂಭಾವನೆ ನೀಡಲಾಗುವುದು. ಆದರೆ ಊಟ, ವಸತಿ ಸೌಲಭ್ಯ ಇರುವುದಿಲ್ಲ.

ಶೈಕ್ಷಣಿಕ ಪರಿಕರ ಸೌಲಭ್ಯಗಳು

(i) ರಂಗಭೂಮಿಗೆ ಸಂಬಂಧಿಸಿದ ವ್ಯವಸ್ಥಿತ ಗ್ರಂಥಾಲಯವಿದೆ. ರಂಗಭೂಮಿಗೆ ಸಂಬಂಧಿಸಿದ ಸಾವಿರಾರು ಪುಸ್ತಕಗಳು, ಜಾನಪದ ಕಲೆ ಸಂಬಂಧಿಸಿದ ಪರಿಚಯಾತ್ಮಕ, ಆಡಿಯೋ ವಿಡಿಯೊಗಳು ಲಭ್ಯವಿದೆ.
(ii) ಚಿತ್ರಕಲೆ ಮತ್ತು ರಂಗÀಸಂಗೀತಕ್ಕೆ ಸಂಬಂಧಿಸಿದ ಮಾಹಿತಿಗಳಿವೆ.
(iii) ಪ್ರಾಯೋಗಿಕಕ್ಕೆ ಸಂಬಂಧಿಸಿದಂತೆ ಬಡಗಿ ಕೆಲಸಕ್ಕೆ ಬೇಕಾದ ಸಾಮಗ್ರಿಗಳು ಸಂಗೀತ ಪರಿಕರಗಳು, ವಸ್ತುಗಳು, ಪ್ರಸಾದನ ಸಲಕರಣೆಗಳು ಲಭ್ಯವಿವೆ.

ಅಧ್ಯಯನ ವಿಷಯಗಳು

ಅಭ್ಯರ್ಥಿ ಒಂದು ವರ್ಷದ ಅವಧಿಯಲ್ಲಿ ಮೂರು ಸೈದ್ಧಾಂತಿಕ ಹಾಗೂ ಎರಡು ಪ್ರಾಯೋಗಿಕ ವಿಷಯಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ಒಟ್ಟು 5 ಪತ್ರಿಕೆಗಳು ಇರುತ್ತವೆ.

(i) ಭಾರತೀಯ ಅಭಿಜಾತ ರಂಗಭೂಮಿ (ಸಿದ್ಧಾಂತ)
(ii) ಪೌರ್ವಾತ್ಯ – ಪಾಶ್ಚಿಮಾತ್ಯ ರಂಗಭೂಮಿ (ಸಿದ್ಧಾಂತ)
(iii) ಅಭಿನಯ-ವಾಸ್ತವವಾದಿ ಅಭಿನಯ ಮತ್ತು ಶೈಲೀಕೃತ ಶೈಲಿ
(iv) ನೇಪಥ್ಯ: ರಂಗತಂತ್ರ ಮತ್ತು ವಿನ್ಯಾಸಗಳು (ಪ್ರಾಯೋಗಿಕ)
(v) ಪ್ರಯೋಗ-ಪ್ರದರ್ಶನ-ರಸಗ್ರಹಣ (ಪ್ರಾಯೋಗಿಕ)

ಮೇಲಿನ ಪತ್ರಿಕೆ 1, 2, 3, 4 ಸಿದ್ಧಾಂತವನ್ನು ಕುರಿತದ್ದಾಗಿರುತ್ತದೆ. ಪತ್ರಿಕೆ 5 ಪ್ರಾಯೋಗಿಕವಾಗಿರುತ್ತದೆ.

ಪರೀಕ್ಷಾ ವಿಧಾನ

ಆಂತರಿಕ ಮೌಲ್ಯಮಾಪನವನ್ನು ತರಗತಿ ನಡೆಸುವ ಅಧ್ಯಾಪಕರು ನಡೆಸುತ್ತಾರೆ. ನಿಗದಿತ ಸಮಯದಲ್ಲಿ ವಿಷಯಾಧಾರಿತ ಬರವಣಿಗೆ, ಗುಂಪು ಚಟುವಟಿಕೆಯಲ್ಲಿ ಭಾಗವಹಿಸುವಿಕೆ, ಅಭಿನಯ, ಶಿಸ್ತುಪಾಲನೆ ಮುಂತಾದ ವಿಷಯಗಳ ಕುರಿತು ನಡೆಸಲಾಗುವುದು. ವರ್ಷಾಂತ್ಯದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಿಯಮಾನುಸಾರ ಪರೀಕ್ಷೆಯನ್ನು ನಡೆಸಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು.

 

ತರಬೇತಿ ಶುಲ್ಕ

ಅಭ್ಯರ್ಥಿಗೆ ಕಲಿಕಾ ಅವಧಿಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಕಲಿಕಾವಧಿಯ ಮಧ್ಯದಲ್ಲಿಯೇ ಶಿಕ್ಷಣ ಕಲಿಕೆಯನ್ನು ನಿಲ್ಲಿಸಿದರೆ ಮತ್ತು ರಂಗಾಯಣದ ವಸ್ತುಗಳನ್ನು ಹಾಳು ಮಾಡಿದ್ದಲ್ಲಿ ಅಭ್ಯರ್ಥಿಯ ಮಾಸಿಕ ವಿದ್ಯಾರ್ಥಿ ವೇತನದಲ್ಲಿ ಆ ನಷ್ಟವನ್ನು ಕಡಿತಗೊಳಿಸಲಾಗುವುದು.

ಶಿಸ್ತು ಮತ್ತು ನಿಯಮ ಪಾಲನೆ

ರಂಗಾಯಣ ರೂಪಿಸುವ ಶಿಸ್ತನ್ನು ಕಡ್ಡಾಯವಾಗಿ ಪಾಲಿಸುವುದು. ನಿಯಮ ಉಲ್ಲಂಘನೆಯನ್ನು ಮಾಡಿದ್ದಲ್ಲಿ ನಿರ್ದೇಶಕರು ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತಾರೆ.

ಶಾಲೆಯ ವೇಳಾಪಟ್ಟಿ

ಈ ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಯು ರಂಗಾಯಣ ಒದಗಿಸುವ ವಸತಿಗೃಹದಲ್ಲಿ ವಾಸಿಸಬೇಕು. ಶಾಲೆಯ ವೇಳೆ, ವಿರಾಮಗಳು ಸೇರಿದಂತೆ ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ನಡೆಯುವುದು. ಅವಶ್ಯವಿದ್ದಲ್ಲಿ ಸಂದರ್ಭಾನುಸಾರ ಬದಲಾವಣೆಯನ್ನು ಮಾಡಲಾಗುವುದು.

ಫಲಿತಾಂಶ ತಿಳಿಯುವ ಬಗೆ.

(1)ಪರೀಕ್ಷೆ ಮುಗಿದ ಒಂದು ತಿಂಗಳು ಇಲ್ಲವೆ, ವಿಶ್ವವಿದ್ಯಾಲಯವು ಫಲಿತಾಂಶ ಪ್ರಕಟಿಸಿದ ಮರುದಿನ ಮಾಧ್ಯಮಗಳಲ್ಲಿ, ವೆಬ್‍ಸೈಟ್‍ನಲ್ಲಿ (ತಿತಿತಿ.ಡಿಚಿಟಿgಚಿಥಿಚಿಟಿಚಿ.oಡಿg) ಹಾಗೂ ಅಭ್ಯರ್ಥಿಗಳಿಗೆ ಅಂಚೆ ಮೂಲಕ ತಿಳಿಸಲಾಗುವುದು. ಕಚೇರಿಯನ್ನು ಸಂಪರ್ಕಿಸಿ ಫಲಿತಾಂಶ ತಿಳಿದುಕೊಳ್ಳಬಹುದು.

(2)ಮೊದಲನೇ ವರ್ಷದ ತರಬೇತಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಅಂಕಪಟ್ಟಿ ಮತ್ತು ಪ್ರಮಾಣಪತ್ರವನ್ನು ನೀಡಲಾಗುವುದು. ಎರಡನೇ ವರ್ಷದ ತರಬೇತಿಗೆ ರಂಗಾಯಣದಿಂದಲೇ ಪ್ರಮಾಣಪತ್ರವನ್ನು ನೀಡಲಾಗುವುದು.

(3)ತೇರ್ಗಡೆಯಾದ ವಿದ್ಯಾರ್ಥಿಗಳು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ನಿಯಮಗಳಿಗನುಸಾರವಾಗಿ ಪ್ರಮಾಣ ಪತ್ರ, ಅಂಕಪಟ್ಟಿಯನ್ನು ಪಡೆದುಕೊಳ್ಳಬಹುದಾಗಿದೆ.

(4)ಅನುತ್ತೀರ್ಣರಾದ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ನಿಯಮಗಳಿಗನುಸಾರ ಮುಂದಿನವರ್ಷ ಮರುಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಒಂದು ಅವಧಿಗೆ ಮಾತ್ರ. ಅನುತ್ತೀರ್ಣವಾದ ಪತ್ರಿಕೆಗಳಿಗೆ ಮರುಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ. ರಂಗಾಯಣ ವಿಧಿಸುವ ಶುಲ್ಕವನ್ನು ಭರಿಸಬೇಕು.