ದಿನಾಂಕ  10-04-2016  ರಿಂದ  08-05-2016

ಮಾಹಿತಿಗಾಗಿ – 0821 2512639

ಅನಿಕೇತನ- ಚಿಣ್ಣರಮೇಳ-2016 ದಿನಾಂಕ:10-04-2015 ರಿಂದ 08-05-2016 ರವರಗೆ ಮೈಸೂರು ರಂಗಾಯಣದ ಆವರಣದಲ್ಲಿ ಪ್ರತಿದಿನ ಬೆಳಗ್ಗೆ 10:00 ರಿಂದ ಸಂಜೆ 5:00 ರವರೆಗೆ 7 ವರ್ಷಗಳು ತುಂಬಿದ, 14 ವರ್ಷದೊಳಗಿನ ವಯೋಮಿತಿಯ ಮಕ್ಕಳಿಗಾಗಿ ನಡೆಯಲಿದೆ. ಮಕ್ಕಳು ಪ್ರಕೃತಿಯ ಕೊಡುಗೆ, ಮನಸ್ಸು ಮುಕ್ತ, ಕನಸು ಕಣಜ, ಕಲ್ಪನೆ ಅದ್ಭುತ ಇವುಗಳನ್ನು ಮುತುವರ್ಜಿಯಿಂದ ಕಾಪಿಡುವ, ರೂಪಿಸುವ ಹೊಣೆ ಪೋಷಕರದ್ದು, ಶಿಕ್ಷಕರದ್ದು, ಸಮಾಜದ್ದು. ಅದಕ್ಕಾಗಿ ಬಂಧನ ಮುಕ್ತ ಸಾಂಸ್ಕೃತಿಕ ವಾತಾವರಣದ ನಿರ್ಮಾಣ ಮತ್ತು ನಿರ್ವಹಣೆ ನಮ್ಮೆಲ್ಲರ ನೈತಿಕ ಜವಾಬ್ದಾರಿ ಎಂದರಿತು ರಂಗಾಯಣವು ಪ್ರತಿವರ್ಷ ಮಕ್ಕಳ ಸರ್ವಾಂಗೀಣ ಬೆಳವಣಿಗೆಯ ಅಗತ್ಯತೆಗೆ ತಕ್ಕಂತೆ 18ನೇ ಚಿಣ್ಣರಮೇಳವನ್ನು ಅಚ್ಚುಕಟ್ಟಾಗಿ, ಅರ್ಥಪೂರ್ಣವಾಗಿ ಆಯೋಜಿಸುತ್ತಿದೆ. ಮಕ್ಕಳ ಲೋಕವನ್ನು ಪರಿಣಾಮಕಾರಿಯಾಗಿ ಸೃಷ್ಠಿಸಲು ಮುಂದಾಗಿದೆ.

ಮಕ್ಕಳೊಂದಿಗೆ ಅತೀ ಸೂಕ್ಷ್ಮ ವರ್ತನೆ ಅಗತ್ಯ. ಅವರ ಕಲ್ಪನೆಗಳು ಮುಕ್ಕಾಗದ ಹಾಗೆ ಅವರ ಭಾಷೆ, ಭಾವಗಳನ್ನು ಅರ್ಥಮಾಡಿಕೊಂಡು ಅವರದ್ದೇ ಲೋಕವನ್ನು ಒಲವಿನ ಒಡನಾಟದೊಂದಿಗೆ ಉಲ್ಲಾಸ ಸಂತಸದ ವಾತಾವರಣವನ್ನು ನಿರ್ಮಿಸಿ ಮಕ್ಕಳು ನಲಿಯುತ್ತ ಕಲಿಯುವ ಪ್ರಕ್ರಿಯೆಗೆ ತೊಡಗಿಸುವ ಉದ್ದೇಶವೇ ಅನಿಕೇತನ ಚಿಣ್ಣರಮೇಳ-2016. ಮಕ್ಕಳು ತಮ್ಮನ್ನು ತಾವೇ ಕಂಡುಕೊಳ್ಳುವ ರೂಪ ರೂಪಗಳನ್ನು ದಾಟುವ, ನಾಮಕೋಟಿಗಳನ್ನು ಮೀಟುವ ಕ್ರಿಯಾತ್ಮಕ ರಂಗಚಟುವಟಿಕೆಗಳ ಮೂಲಕ ಸುಮಾರು ಒಂದು ತಿಂಗಳು ನಡೆಯುವ ಅನಿಕೇತನದಲ್ಲಿ ಮಕ್ಕಳು ಆಡುತ್ತಾ, ಕುಣಿಯುತ್ತಾ ತಮ್ಮ ಕಲ್ಪನೆಯ ಬಣ್ಣ-ಬಣ್ಣದ ಚಿತ್ರಗಳನ್ನು ಬಿಡಿಸುತ್ತ, ಕರಕುಶಲಗಳನ್ನು ತಯಾರಿಸುತ್ತ, ಕಥೆಗಳನ್ನು ಹೇಳುತ್ತಾ, ಕೇಳುತ್ತಾ ನಾಡಿನ ಹೆಸರಾಂತ ಮಕ್ಕಳ ಚಿಂತಕರೊಂದಿಗೆ ಮುಖಾ-ಮುಖಿ ನಡೆಸುತ್ತ, ಹಕ್ಕಿ-ಪಕ್ಷಿ ಪರಿಸರವನ್ನು ಸ್ಪರ್ಶಿಸುತ್ತ ಗ್ರಾಮ ವೀಕ್ಷಣೆ ಮಾಡಿ ಸರಳ ಹಾಗೂ ಶ್ರಮದ ಬದುಕನ್ನು ಅರಿಯುತ್ತಾ, ಅಭಿನಯದ ಮೂಲಕ ನಾಟಕಗಳನ್ನು ಕಟ್ಟಿ ಪ್ರದರ್ಶಿಸುವತ್ತ ರಂಗಪಯಣವನ್ನು ನಡೆಸಲಿದ್ದಾರೆ.

ಮಕ್ಕಳು ಕೂಡಿ, ಹಾಡಿ, ಊಟ ಮಾಡಿ ತಮ್ಮ ಮನಸ್ಸಿನಾಳದ ಮಾತುಗಳನ್ನು ಹಂಚಿಕೊಳ್ಳುತ್ತಾ ಅನಿಕೇತನದತ್ತ ಸಾಗಲೆಂಬುದು ಈ ಚಿಣ್ಣರಮೇಳದ ಉದ್ದೇಶವಾಗಿದೆ. ದಿನಾಂಕ:03-04-2016 ರಂದು ಬೆಳಿಗ್ಗೆ 10.00 ಗಂಟೆಗೆ ರಂಗಾಯಣದ ಕಛೇರಿಯಲ್ಲಿ ತಲಾ ಒಂದು ಅರ್ಜಿಯಂತೆ ರೂ.50/- ಅರ್ಜಿ ಶುಲ್ಕ ಪಡೆದು ಅರ್ಜಿಗಳನ್ನು ನೀಡಲಾಗುವುದು. ಅರ್ಜಿಗಳನ್ನು ಹಿಂದಿರುಗಿಸಲು ಕಡೆಯ ದಿನಾಂಕ:06-04-2016 ಎಂದು ನಿಗದಿಪಡಿಸಲಾಗಿದೆ. ಚಿಣ್ಣರಮೇಳದ ಶುಲ್ಕವನ್ನು ಮಗುವೊಂದಕ್ಕೆ ರೂ.2000/-ಗಳನ್ನು ನಿಗದಿಪಡಿಸಲಾಗಿದೆ. ರಂಗಾಯಣದ ಕಲಾವಿದರು, ತಂತ್ರಜ್ಞರು, ವಿಶೇಷ ಪರಿಣಿತರು ಮಕ್ಕಳೊಂದಿಗೆ ಕಲಾತ್ಮಕ ಸೃಜನಶೀಲ ರಂಗಪಯಣವನ್ನು ನಡೆಸಲಿದ್ದಾರೆ. ಓ ನನ್ನ ಚೇತನ, ಆಗು ನೀ ಅನಿಕೇತನ.

 

ಈ ಚಿಣ್ಣರಮೇಳದಲ್ಲಿ ಭಾಗವಹಿಸುವ ಮಕ್ಕಳಿಗೆ 7 ವರ್ಷ ಪೂರ್ತಿಯಾಗಿರಬೇಕು. 14 ವರ್ಷದೊಳಗಿರಬೇಕು. ಏಪ್ರಿಲ್ 3 ರಂದು ಬೆಳಿಗ್ಗೆ 10.00 ಗಂಟೆಗೆ ರಂಗಾಯಣದ ಟಿಕೆಟ್ ಕೌಂಟರ್‌ನಲ್ಲಿ ಪ್ರವೇಶದ ಅರ್ಜಿಗಳನ್ನು ನೀಡಲಾಗುವುದು. 2016 ಏಪ್ರಿಲ್ 6 ರೊಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಮಗುವಿನ 2 ಪಾಸ್‌ಪೋರ್ಟ್ ಅಳತೆಯ ಪೋಟೋ, ಜನ್ಮದಿನಾಂಕದ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ರಂಗಾಯಣದ ಕಛೇರಿಗೆ ಹಿಂದಿರುಗಿಸಬೇಕು. ಅರ್ಜಿ ಶುಲ್ಕ ರೂ.50/- ಹಾಗೂ ಶಿಬಿರದ ಶುಲ್ಕ ರೂ.2000/- ಗಳಾಗಿರುತ್ತದೆ.