`ಕೋಲಾಟ’ ಮತ್ತು ’ಕತ್ತೆ ಮತ್ತು ಧರ್ಮ’

ಪ್ರಾತ್ಯಕ್ಷಿಕೆ-೪ 

ರಂಗಾಯಣದ ರಂಗಶಾಲೆಯ ೨೦೧೫-೧೬ ಸಾಲಿನ ವಿದ್ಯಾರ್ಥಿಗಳು ತಿಪ್ಪೂರಿನ ಪ್ರಸಿದ್ಧ ಜಾನಪದ ಕೋಲಾಟದ ಕಲಾವಿದರಾದ ಶ್ರೀಯುತ ನರಸಿಂಹ ನಾಯಕ್‌ರವರ ಮಾರ್ಗದರ್ಶನದಲ್ಲಿ ದೇಶಿಯ ಕೋಲಾಟ ಪ್ರಾತ್ಯಕ್ಷಿಕೆ ಪ್ರದರ್ಶನವನ್ನು ನೀಡಲು ಸಿದ್ದರಾಗಿದ್ದಾರೆ.

ಕತ್ತೆ ಮತ್ತು ಧರ್ಮ
IMG-20151130-WA0022ಕನ್ನಡದ ಪ್ರಸಿದ್ಧ ಕವಿ ಸಿದ್ಧಲಿಂಗಯ್ಯವರ ಕಥನ ಕವನ ಕತ್ತೆ ಮತ್ತು ಧರ್ಮ. ಈ ಕಾವ್ಯವನ್ನು ಕೋಲಾಟ ಪ್ರಕಾರಕ್ಕೆ ಅಳವಡಿಸಿ ಪ್ರದರ್ಶನಕ್ಕೆ ಸಿದ್ಧ ಮಾಡಲಾಗಿದೆ. ಕಾವ್ಯದ ಸಾರಾಂಶ ಹೀಗಿದೆ; ಮದುಗಿರಿ ಪಟ್ಟಣದಲ್ಲಿ ಸಿದ್ದಯ್ಯನೆಂಬ ಆಗಸ. ಅವನಿಗೆ ಹೆಂಡರು ಮಕ್ಕಳಿಲ್ಲ. ಅವನ ಸಾಕು ಕತ್ತೆ ಅವನ ಒಡನಾಡಿ. ಒಂದು ದಿನ ಕತ್ತೆ ಆಕಸ್ಮಕವಾಗಿ ಸತ್ತುಹೋಗುತ್ತದೆ. ಬೇಸರಗೊಂಡ ಸಿದ್ದಯ್ಯ ಮೂರುಹಾದಿ ಸೇರುವಲ್ಲಿ ಕತ್ತೆಯನ್ನು ಸಮಾಧಿ ಮಾಡಿ ದೇಶಾಂತರ ಹೊರಟು ಹೋಗುತ್ತಾನೆ. ವ್ಯಾಪಾರಕ್ಕೊಂಟಿದ್ದ ಶೆಟ್ಟಿಯೊಬ್ಬ ಆ ಸಮಾಧಿಗೆ ನಮಸ್ಕಾರ ಮಾಡಿ, ವ್ಯಾಪಾರ ಮಾಡಲು ಹೋಗುತ್ತಾನೆ. ಅಂದು ಅವನಿಗೆ ಸಿಕ್ಕಾಪಟ್ಟೆ ಹೆಚ್ಚಿನ ವ್ಯಾಪಾರವಾಗುತ್ತದೆ. ಸಮಾಧಿಯ ಪ್ರಭಾವದಿಂದ ಹೆಚ್ಚಿನ ಹೀಗಾಯಿತೆಂದು ಭಾವಿಸಿ ಹಿಂತಿರುಗಿ ಹೋಗುವಾಗ ಸಮಾಧಿಗೆ ಕಾಣಿಕೆಯನ್ನು ಸಲ್ಲಿಸುತ್ತಾನೆ. ಈ ಸುದ್ದಿ ಎಲ್ಲ್ಲಾ ಕಡೆಯಲ್ಲಿ ಹಬ್ಬಿ ರಾಜರಾಣಿಯರೂ ಬಂದು ನಮಸ್ಕರಿಸಿ ಪೂಜೆ ಸಲ್ಲಿಸುತ್ತಾರೆ. ಕಾಲಾಂತರದಲ್ಲಿ ಸಮಾಧಿ ಬಳಿ ದೇವಸ್ಥಾನ ನಿರ್ಮಾಣವಾಗುತ್ತದೆ. ಕತ್ತೆಸಮಾಧಿಗೆ ಪರಶೆ, ಹಬ್ಬಗಳು ನಡೆಯುತ್ತವೆ.
ದೇಶಾಂತರ ಹೋಗಿದ್ದ ಸಿದ್ದಯ್ಯ ಕತ್ತೆ ಸಮಾಧಿ ಮಾಡಿದ ಸ್ಥಳದಲ್ಲಿ ನಿರ್ಮಾಣಗೊಂಡ ದೇವಸ್ಥಾನದೊಳಗೆ ಹೋಗಲು ಪ್ರಯತ್ನಿಸಿದಾಗ ದೇವಸ್ಥಾನದ ಕಾವಲಿನವರು ಅವನನ್ನು ಹೊರಕ್ಕೆ ತಳ್ಳುತ್ತಾರೆ.

ಕೋಲಾಟ

IMG-20151130-WA0007ಭಾರತೀಯ ಕೃಷಿಸಂಸ್ಕೃತಿಯ ಒಂದು ಭಾಗವಾಗಿರುವ ಕೋಲಾಟ ಜನಪದರು ಸೃಜಿಸಿದ ಅದ್ಭುತ ಚಲನಶೀಲವಾದ ಒಂದು ಕಲಾಪ್ರಕಾರ. ದಿನನಿತ್ಯ ತಮ್ಮ ಹೊಲಗದ್ದೆಗಳಲ್ಲಿ ದುಡಿದು ದಣಿದ ದೇಹಗಳು ಸಂಜೆಯೊತ್ತು ತಮ್ಮ ದಣಿವಾರಿಸಿಕೊಳ್ಳಲು ದೇವಸ್ಥಾನಗಳ ಮುಂದೆ ಸೇರಿ ತಮ್ಮ ಮನೋರಂಜನೆಗಾಗಿ ಕೋಲಾಟವನ್ನು ಕಲಿಯುತ್ತಿದ್ದರು. ಈ ಕೋಲಾಟವನ್ನು ಕೃಷಿ ಕೆಲಸಗಳಾದ ಗದ್ದೆ ತುಳಿಯುವುದು ಮತ್ತು ಒಕ್ಕಲು ಮಾಡುವ ಸಂದರ್ಭದಲ್ಲಿ ಸಾಮೂಹಿಕವಾಗಿ ಕೋಲನ್ನು ಹಾಕುತ್ತಾ ಅದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಾ, ಹಾಡುತ್ತಾ ಕೋಲಾಟವನ್ನು ಮಾಡುವ ಪದ್ಧತಿ ಜಾರಿಯಲ್ಲಿತ್ತು. ಮುಂದೆ ಅದು ಮನೋರಂಜನೆ ಕಲೆಯಾಯಿತು. ಬಹುತೇಕ ಕರ್ನಾಟಕ ಎಲ್ಲಾ ಜಿಲ್ಲೆಗಳಲ್ಲಿ ಈ ಕಲಾ ಪ್ರಕಾರ ಜಾಲ್ತಿಯಲ್ಲಿದೆ.

ಪ್ರಾತ್ಯಕ್ಷಿಕೆ ಮಾರ್ಗದರ್ಶನ : ಶ್ರೀ ನರಸಿಂಹನಾಯಕ್ ಹಾಗೂ ಶ್ರೀ ಸಂತೋಷ ದಿಂಡಗೂರು,
ಸಂಗೀತ : ಶ್ರೀ ಹೆಚ್. ಜನಾರ್ಧನ್ (ಜನ್ನಿ),
ದಿನಾಂಕ : ೦೧.೧೨.೨೦೧೫,
ಸಮಯ : ಸಂಜೆ ೬.೩೦ಕ್ಕೆ
ಸ್ಥಳ : ವನರಂಗ ವೇದಿಕೆ, 
ಪ್ರವೇಶ : ಉಚಿತ

ಎಂದೆಂದಿಗೂ ಶೇಕ್ಸ್‌ಪಿಯರ್ : ವಿಶೇಷ ಉಪನ್ಯಾಸ

ಶೇಕ್ಸ್‌ಪಿಯರ್ ಜಗತ್ತಿನ ಶ್ರೇಷ್ಠ ನಾಟಕಕಾರ. ಈತ ರಚಿಸಿದ ನಾಟಕಗಳ ಬಗ್ಗೆ ಜಗತ್ತಿನಾದ್ಯಂತ ಚರ್ಚೆ ಸಂಶೋಧನೆ, ವಿಮರ್ಶೆ ನಡೆಯುತ್ತಲೆ ಇವೆ.  ಅಳಕ್ಕೆ ಇಳಿದಷ್ಟು ಅರಿವಿನ ವಿಸ್ತಾರವನ್ನು ಹೆಚ್ಚಿಸುವ ಗುಣ ಈತನ ನಾಟಕಗಳಿವೆ. ನಮ್ಮ ನಡುವಿನ ಅತ್ಯಂತ ವೈಚಾರಿಕ ಪ್ರಜ್ಞೆಯ ಸಮಾಜಮುಖಿ, ನಟ, ನಿರ್ದೇಶಕರಾದ ಪ್ರೊ. ಜಿ.ಕೆ.ಗೋವಿಂದರಾವ್‌ರವರು ಕಳೆದ ನಾಲ್ಕು ದಶಕಗಳಿಂದಲೂ ಉಪನ್ಯಾಕರಾಗಿ, ನಟರಾಗಿ, ನಿರ್ದೇಶಕ ವಿಮರ್ಶಕರಾಗಿ ಶೇಕ್ಸ್‌ಪಿಯರ್ ಸಾಹಿತ್ಯವನ್ನು ಪ್ರೀತಿಯಿಂದ ಅರಿತು ಅರಗಿಸಿಕೊಂಡವರು. ಇವರು ಎಂದೆಂದಿಗೂ ಶೇಕ್ಸ್‌ಪಿಯರ್ ಎಂಬ ವಿಷಯ ಕುರಿತಂತೆ  ಉಪನ್ಯಾಸವನ್ನು ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು, ರಂಗಭೂಮಿಯ ನಟ-ನಟಿಯರು ಹಾಗೂ ಮೈಸೂರಿನ ಎಲ್ಲಾ ರಂಗ ತಂಡಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದೆ.

ದಿನಾಂಕ : ೨.೧೨.೨೦೧೫
ಸ್ಥಳ : ಶ್ರೀರಂಗ-ರಂಗಾಯಣ  
ಸಮಯ : ಸಂಜೆ -೬,೩೦ಕ್ಕೆ