ರಚನೆ : ಪ್ರಸನ್ನ, ನಿರ್ದೇಶನ : ಎಚ್.ಎಸ್. ಉಮೇಶ್

ನಾಟಕದ ಬಗ್ಗೆ :

ಗಾಂಧೀಜಿಯವರ ಜೀವನದ ಕೆಲವು ಘಟನೆಗಳ ಚಿತ್ರಣದ ಮೂಲಕ ಅವರ ವ್ಯಕ್ತಿತ್ವವನ್ನು ಬಿಡಿಸುತ್ತದೆ. ಪ್ರಸನ್ನ ಅವರ ಗಮನ ಗಾಂಧಿ ತತ್ವ ಮತ್ತು ವಿಚಾರಗಳನ್ನು ಒರೆಗೆ ಹಚ್ಚುವ ಕೆಲಸದಲ್ಲಿ ಮಗ್ನವಾಗಿದೆ. ಗಾಂಧೀಜಿ ಹೇಗೆ ಬದುಕಿದ್ದರು ಎನ್ನುವುದು ಅರ್ಥಪೂರ್ಣವಾಗುವುದು. ಅವರು ಯಾವ ವಿಚಾರಗಳಿಗೆ ಬದ್ಧರಾಗಿ ನಡೆದುಕೊಳ್ಳುತ್ತಿದ್ದರು ಎಂಬುದರಿಂದ. ಆದುದರಿಂದ ಗಾಂಧೀಜಿಯವರು ಹೇಳಿದ್ದೇನು, ಅದಕ್ಕಿರುವ ಪಸ್ತುತತೆ ಮತ್ತು ಅದು ಮಾನವಕುಲದ ಮುನ್ನಡೆಗೆ ಕೊಡುವ ಕೊಡುಗೆಗಳೇನು ಎನ್ನುವುದನ್ನು ಪರಿಶೀಲಿಸುವ ಕಾರ್ಯದಲ್ಲಿ ಪ್ರಸನ್ನ ತೊಡಗಿಕೊಂಡಿದ್ದಾರೆ. ರಂಗಭೂಮಿಯ ವಿಶಿಷ್ಟ ಲಕ್ಷಣಗಳಿಗೆ ಬಾಕದವಾಗದಂತೆ, ವಿಚಾರಗಳ ಮಥನ ಕಲಾತ್ಮಕವಾಗಿರುವಂತೆ ತಮ್ಮ ಸೃಜನಶೀಲತೆಯನ್ನು ದುಡಿಸಿಕೊಂಡಿದ್ದಾರೆ. ದೃಶ್ಯ ಸ್ವರೂಪಗಳಲ್ಲಿನ ವೈವಿದ್ಯತೆ, ಪಾತ್ರಗಳ ನಡುವಿನ ಬಿಕ್ಕಟ್ಟುಗಳು, ಇಂದು ಮತ್ತು ಹಿಂದಿನ ಕಾಲದ ತೂಗುಯ್ಯಾಲೆಗಳು ಗಂಭೀರ ಚರ್ಚೆಯೊಂದನ್ನು ನಾಟಕವಾಗಿಸಿವೆ.

ನಿರ್ದೇಶಕರ ಬಗ್ಗೆ : ಎಚ್.ಎಸ್. ಉಮೇಶ್

ಮೈಸೂರು ಶಾರದಾ ವಿಲಾಸ ಶಿಕ್ಷಕರ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿದ್ದ ಎಚ್.ಎಸ್. ಉಮೇಶ್‌ರವರು ರಂಗ ನಿರ್ದೇಶನದಲ್ಲಿ ಗೋಕರ್ಣದ ಗೌಡಶಾನಿ, ಕಣ್ಣೀರು, ಈಡಿಪಸ್, ಗಾಡೋ, ದುರ್ಗಾಸ್ತಮಾನ, ಓ ದೇವರೇ ಇವರನ್ನು ಕ್ಷಮಿಸು, ಬಿರುಗಾಳಿ, ಮಹಾರಾತ್ರಿ, ದಾಟು, ರಕ್ತ ಕಣಗಿಲೆ, ನಟ ಸಾಮ್ರಾಟ, ಕೇಳು ಜನಮೇಜಯ, ಸೀತಾ ಸ್ವಯಂವರ, ಅಂತೆಂಬರಗಂಡ, ಉಲಿ, ನುಲಿಯ ಚಂದಯ್ಯ, ದೇವಯಾನಿ, ನರ್ತಕಿಯ ಪೂಜೆ, ರಾಕ್ಷಸನ ಮುದ್ರಿಕೆ, ಕೃಷ್ಣದೇವರಾಯ, ಭೈರವಿ ವೆಂಕಟಸುಬ್ಬಯ್ಯ, ದಂಗೆಯ ಮುಂಚಿನ ದಿನಗಳು, ಬೆಟ್ಟದ ಅರಸು, ಪುರುಷಾರ್ಥ ಬೆಂಕಿ ಹಚ್ಚೋರು ಇವೇ ಮೊದಲಾದ ವಿಭಿನ್ನ ಶೈಲಿಯ ನಾಟಕಗಳನ್ನು ಬಹು ಸಮರ್ಥವಾಗಿ ನಿರ್ದೇಶಿಸಿ, ತಮ್ಮ ಛಾಪನ್ನು ಮೂಡಿಸಿರುವುದು ಶ್ರೀಯುತರ ನಿರ್ದೇಶನ ಕೌಶಲಕ್ಕೆ ಸಾಕ್ಷಯಾಗಿದೆ.

ಮೈಸೂರು ಹವ್ಯಾಸಿ ರಂಗದ ಇತಿಹಾಸದಲ್ಲಿ ಇವರು ನಿರ್ದೇಶಿಸಿರುವ ನಾಟಕಗಳ ಮೊತ್ತ ಅಚ್ಚರಿಯನ್ನುಂಟು ಮಾಡುತ್ತದೆ. ಕಲಾಪ್ರಿಯರಾದ ಉಮೇಶ್ ಕಲಾಪ್ರಿಯಕ್ಕೆ ಮಾತ್ರವಲ್ಲ, ಇನ್ನಿತರ ನಾಟಕ ತಂಡಗಳಿಗೂ ನಾಟಕಗಳನ್ನು ನಿರ್ದೇಶಿಸಿ ತಮ್ಮ ವಿಶಾಲ ಭಾವನೆಯನ್ನು ತೋರಿದ್ದಾರೆ. ಇವುಗಳಲ್ಲಿ ಸಿಂಹಪಾಲು ಕದಂಬ ರಂಗವೇದಿಕೆಗೆ ಲಭಿಸಿದೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ನೀಡಿ ಸತ್ಕರಿಸಿದೆ.

ಪ್ರಸನ್ನ

ಪ್ರಸನ್ನ ಅವರ ರಂಗ ಕಾರ್ಯವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳುವುದು ಇಡೀ ಭಾರತೀಯ ಆಧುನಿಕ ರಂಗಭೂಮಿಯನ್ನೆ ಅರ್ಥಮಾಡಿಕೊಂಡಂತೆ. ಭಾರತೀಯ ರಂಗಭೂಮಿಯಲ್ಲಿ ಪ್ರಸನ್ನರ ಹೆಸರು ಮುಖ್ಯವಾದದ್ದು. ರಾಜ್ಯದಲ್ಲಿ ’ಸಮುದಾಯ’ ತಂಡವನ್ನು ಹುಟ್ಟುಹಾಕಿದ ಇವರು. ಸಾಮಾಜಿಕ ಸಾಂಸ್ಕೃತಿಕ ರಾಜಕೀಯ ಪ್ರಜ್ಞೆಯನ್ನು ಮೂಡಿಸಲು ಅನೇಕ ಸಾಂಸ್ಕೃತಿಕ ಜಾಥಾಗಳನ್ನು ಮುಂಚೂಣಿಯಲ್ಲಿ ನಿಂತು ರಾಜ್ಯಾದ್ಯಂತ ಪ್ರದರ್ಶನ ಮಾಡಿಸಿದರು. ಈ ಚಳುವಳಿಯಿಂದಾಗಿ ಸಮುದಾಯ ಘಟಕಗಳು ರಾಜ್ಯದ ಎಲ್ಲೆಡೆ ಪ್ರಾರಂಭವಾದವು. ದೆಹಲಿಯ ರಾಷ್ಟ್ರೀಯ ನಾಟಕಶಾಲೆ ಮತ್ತು ಭೂಪಾಲದ ರಂಗಮಂಡಲ, ಹೆಗ್ಗೋಡಿನ ನೀನಾಸಂ ತಿರುಗಾಟಕ್ಕೆ ನಾಟಕಗಳನ್ನು ಇವರು ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ಅವರು ನಿರ್ದೇಶಿಸಿದ ’ತಾಯಿ’, ’ಗೆಲಿಲಿಯೋ’, ’ಹುತ್ತವ ಬಡಿದರೆ’, ’ತದ್ರೂಪಿ’, ’ಹದ್ದು ಮೀರಿದ ಹಾದಿ’ ನಾಟಕಗಳ ಯಶಸ್ಸು ಹಾಗೂ ಅದರ ಪ್ರಯೋಗ ವೈಖರಿ ರಂಗಭೂಮಿಯಲ್ಲಿ ದಾಖಲೆಯನ್ನು ನಿರ್ಮಿಸಿವೆ. ಹಿಂದಿಯಲ್ಲಿ ’ತುಘಲಕ್’, ’ಗಾಂಧಿ’, ಅಗ್ನಿ ಮತ್ತು ಮಳೆ’, ’ಅಂಜುಮಲ್ಲಿಗೆ’, ’ಲಾಲ್‌ಗಾಸ್ ಪರ್ ನೀಲೆ ಗೋಡೆ’, ಮುಂತಾದ ನಾಟಕಗಳು ಪ್ರಸಿದ್ಧವಾದವು.

ಪ್ರಸನ್ನ ಉತ್ತಮ ವಿನ್ಯಾಸಕಾರರಾಗಿದ್ದಾರೆ. ಸಾಹಿತ್ಯದ ರಚನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದೂ, ತದ್ರೂಪಿ, ದಂಗೆಯ ಮುಂಚಿನ ದಿನಗಳು, ಮಹಿಮಾಪುರ, ಹದ್ದುಮೀರಿದ ಹಾದಿ, ಉಲಿ, ಜಂಗಮದ ಬದುಕು, ನಾಟಕಗಳನ್ನು ನೌಟಂಕಿ ಎಂಬ ಕಾದಂಬರಿಯನ್ನು ಬರೆದಿದ್ದಾರೆ. ರಂಗಭೂಮಿಗೆ ಸಂಬಂಧಪಟ್ಟ ನಾಟಕ ರಂಗಕೃತಿ, ನಟನೆಯ ಪಾಠಗಳು ಎಂಬ ಎರಡು ಕೃತಿಗಳನ್ನೂ ಮಾಗಿ, ದೇವವಾರು ಎಂಬ ಎರಡು ಕವನ ಸಂಕಲಗಳನ್ನು ರಚಿಸಿದ್ದಾರೆ. ಗ್ರಾಮೀಣ ಸಂಸ್ಕೃತಿಯನ್ನು ಪುನರ್‌ಚೇತನ ನೀಡುವ ಮಹತ್ತರ ಉದ್ದೇಶದಿಂದ ಚರಕ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದು ಉತ್ಪಾದಿಸುವ ವಸ್ತುಗಳಿಗೆ ಮಾರುಕಟ್ಟೆ ಒದಗಿಸುವ ಸತತ ಪ್ರಯತ್ನ ನಡೆಸಿದ್ದಾರೆ. ದೇಸಿ ಹೆಸರಿನಲ್ಲಿ ಮಾರಾಟ ಮಳಿಗೆಯನ್ನು ಸ್ಥಾಪಿಸಿದ್ದಾರೆ. ಕವಿಕಾವ್ಯ ಟ್ರಸ್ಟ್ ಹುಟ್ಟುಹಾಕಿ ಸತತ ಸಾಹಿತ್ಯ ಚಿಂತನೆಗೆ ಅನುವು ಮಾಡಿಕೊಟ್ಟರಲ್ಲದೆ, ಯು.ಆರ್. ಅನಂತಮೂರ್ತಿಯವರ ಸಂಪಾದಕೀಯದ ರುಜುಮಾತು ಪತ್ರಿಕೆಯನ್ನು ಕೆಲಕಾಲ ನಡೆಸಿಕೊಂಡು ಬಂದರು. ಪ್ರಸನ್ನರು ರಂಗಾಯಣಕ್ಕೆ ’ಪುಗಳೇಂದಿ ಪ್ರಹಸನ’, ಹಾಗೂ ಶೇಕ್ಸ್‌ಪಿಯರ್‌ನ ಹ್ಯಾಮ್ಲೆಟ್ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ ಕೈಮಗ್ಗ ಉಳಿವಿಗೆ ಸರಳ ಜೀವನದತ್ತ ಜನ ಸಮುದಾಯವನ್ನು ಅರಿವಿನೆಡೆಗೆ ಕರೆ ನೀಡಿ ಸುಸ್ಥಿರ ಬದುಕಿನತ್ತ ಮಹತ್ವದ ನಡಿಗೆಯನ್ನು ನಡೆಸುವ ಪಯಣದಲ್ಲಿದ್ದಾರೆ.

ರಂಗಾಯಣ ನಿರ್ದೇಶಕರ ನುಡಿ

ನಾಟಕ ಕರ್ನಾಟಕ ರಂಗಾಯಣವು ದೇಶದಲ್ಲೆ ಪ್ರತಿಷ್ಠಿತ ಪೂರ್ಣ ಪ್ರಮಾಣದ ಆಧುನಿಕ ರಂಗ ಸಂಸ್ಥೆಯಾಗಿದ್ದು, ೨೫ ವರ್ಷಗಳ ರಂಗಪಯಣದತ್ತ ಸಾಗಿದೆ. ನಿರಂತರ ತನ್ನ ರಂಗ ಪ್ರಕ್ರಿಯೆಯಲ್ಲಿ ಕನ್ನಡ ರಂಗಭೂಮಿಗೆ ಪ್ರಬುದ್ಧ ನಾಟಕ ಪ್ರಯೋಗಗಳನ್ನು ನೀಡಿದೆ. ನಾಡಿನ ಜನಗಳ ನಾಟಕಾಭಿರುಚಿಯನ್ನು ಬೆಳೆಸುತ್ತಾ ತನ್ನದೆ ಆದ ಬೃಹತ್ ಪ್ರೇಕ್ಷಕರನ್ನು ಸೃಷ್ಟಿಸಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ ರಂಗತಜ್ಞರಿಂದ ತರಬೇತಿ ಪಡೆದ ನುರಿತ ಕಲಾವಿದರು ಪ್ರಖ್ಯಾತ ರಂಗ ನಿರ್ದೇಶಕರ ನಿರ್ದೇಶನದಲ್ಲಿ ರಂಗಾಯಣವನ್ನು ಬೆಳೆಸುತ್ತಾ ’ಚಿಣ್ಣರ ಮೇಳ’ ನಡೆಸುವ ಮೂಲಕ ಸಾವಿರಾರು ಮಕ್ಕಳು ರಂಗಚಟುವಟಿಕೆಗಳಲ್ಲಿ ತೊಡಗಿ ತಮ್ಮ ಪ್ರತಿಭಾವಲೋಕನಕ್ಕೆ ಸಾಕ್ಷಿಯಾಗುವಂತಹ ವೇದಿಕೆಗಳನ್ನು ರಂಗಾಯಣ ಸೃಷ್ಟಿಸಿದೆ. ಹವ್ಯಾಸಿ ರಂಗಭೂಮಿಗೆ ಸೇತುವೆಯಾಗಿ ರಂಗೋತ್ಸವಗಳನ್ನು ಆಯೋಜಿಸಿದೆ. ವಿದ್ಯಾರ್ಥಿ ಯುವಜನರಲ್ಲಿ ರಂಗಾಸಕ್ತಿ ಬೆಳೆಸುವ ನಿಟ್ಟಿನಲ್ಲಿ ರಂಗೋತ್ಸವಗಳನ್ನು ಆಯೋಜಿಸಿ ಸಹಸ್ರಾರು ಯುವಜನರಲ್ಲಿ ರಂಗಾಸಕ್ತಿ ತುಂಬುವಲ್ಲಿ ಯಶಸ್ವಿಯಾಗಿದೆ. ಅಕ್ಕ, ಬಹುರೂಪಿಯಂಥ ರಾಷ್ಟ್ರೀಯ ನಾಟಕೋತ್ಸವಗಳು ಲಕ್ಷಾಂತರ ಜನರ ಗಮನ ಸೆಳೆದು ನಮ್ಮ ಕನ್ನಡದ ಜನಪದ ಗಾಥೆ, ಗೀತೆ, ಪ್ರಕಾರಗಳ ಪ್ರದರ್ಶನ, ವೈವಿಧ್ಯತೆಯ ನಾಟಕ ಪ್ರಯೋಗಗಳಿಂದ ರಾಷ್ಟ್ರೀಯ ಹಬ್ಬದ ಆವರಣ ರೂಪಿಸಿ ಜನ ಸಾಗರದಲ್ಲಿ ರಂಗಪ್ರಕ್ರಿಯೆಗೆ ಜೀವ ತುಂಬುವ ಕಾರ್ಯ ಮಾಡುತ್ತಾ ಮುಂದುವರೆದಿದೆ. ಪ್ರಸ್ತುತ ತನ್ನ ಬೆಳ್ಳಿ ಹಬ್ಬವನ್ನು ಆಚರಿಸುವ ಸಂಭ್ರಮದಲ್ಲಿ ’ರಂಗಾಯಣ-ಬೆಳ್ಳಿರಂಗ ಪಯಣ’ದ ಸಿದ್ಧತೆಯಲ್ಲಿ ಪಯಣಿಸುತ್ತಿದೆ.

೨೦೧೦-೧೧ರಲ್ಲಿ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ರಂಗಾಯಣ ಒಂದು ವರ್ಷದ ಡಿಪ್ಲೋಮಾ ಕೋರ್ಸ್‌ನ್ನು ನಡೆಸುತ್ತಿದೆ, ಆಯ್ಕೆಯಾದ ವಿದ್ಯಾರ್ಥಿಗಳಿಗೆ ರಂಗಭೂಮಿಗೆ ಸಂಬಂಧಿಸಿದ ವಿವಿಧ ಆಯಾಮಗಳಲ್ಲಿ ರಂಗಪ್ರಯೋಗಕ್ಕೆ ಬೇಕಾದ ಅಂಶಗಳಲ್ಲಿ ತರಬೇತಿಗೊಳಿಸಲಾಗುತ್ತದೆ. ರಂಗಾಯಣದ ಈ ರಂಗಶಾಲೆಯಲ್ಲಿ ತರಬೇತಿ ಪಡೆದು ಕನ್ನಡ ರಂಗಭೂಮಿಗೆ ಕೊಡುಗೆಯಾಗಲಿ ಎಂಬ ಅಭಿಲಾಷೆ ನಮ್ಮದು. ತರಬೇತಿ ಹೊಂದಿದ ನಂತರ ಎರಡು ವರ್ಷಗಳ ಕಾಲ ಅವರನ್ನು ಕಿರಿಯ ಕಲಾವಿದರನ್ನಾಗಿ ರಂಗಾಯಣ ನೇಮಿಸಿಕೊಳ್ಳುತ್ತಾ ಬಂದಿದೆ. ಅವರು ರಂಗಾಯಣದಲ್ಲಿ ಕಿರಿಯ ಕಲಾವಿದರಾಗಿ ಹಿರಿಯ ಕಲಾವಿದರೊಡಗೂಡಿ ಪ್ರಬುದ್ಧ ನಾಟಕಗಳಲ್ಲಿ ಅಭಿನಯ-ತಾಂತ್ರಿಕತೆಯಲ್ಲಿ ತೊಡಗಿಸಿಕೊಂಡು ಅನುಭವಿ ಕಲಾವಿದರಾಗಿ ಹೊರ ಹೊಮ್ಮುತ್ತಿದ್ದಾರೆ. ಈಗ ಈ ವರ್ಷದ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಪ್ರಸನ್ನ ರವರ ರಚನೆಯ ’ಕೊಂದವರಾರು’ ನಾಟಕವನ್ನು ಹಿರಿಯ ರಂಗ ನಿರ್ದೇಶಕರಾದ ಪ್ರೊ. ಎಚ್.ಎಸ್. ಉಮೇಶ್ ರವರು ಸುಮಾರು ಒಂದು ತಿಂಗಳ ತರಬೇತಿಯೊಂದಿಗೆ ತಾಲೀಮು ನಡೆಸಿ ರಂಗ ಪ್ರಯೋಗವನ್ನು ಸಿದ್ದಪಡಿಸಿದ್ದಾರೆ. ಈ ಪ್ರಯೋಗವು ಅಭೂತಪೂರ್ವ ಯಶಸ್ಸನ್ನು ಕಾಣಲಿ, ರಂಗಶಾಲೆ ವಿದ್ಯಾರ್ಥಿಗಳ ಈ ವಿನೂತನ ಪ್ರದರ್ಶನ ಪ್ರೇಕಕ್ಷರಿಗೊಂದು ಹೊಸ ಅನುಭವ ನೀಡಲಿ ಎಂದು ಹಾರೈಸುತ್ತೇನೆ.

ಭಾರತೀಯ ರಂಗಶಿಕ್ಷಣ ಕೇಂದ್ರ

ರಂಗಾಯಣದ ಅಂಗ ಸಂಸ್ಥೆ ಭಾರತೀಯ ರಂಗಶಿಕ್ಷಣ ಕೇಂದ್ರವು ೨೦೧೦-೧೧ರ ಸಾಲಿಗೆ ರಂಗಶಾಲೆಯನ್ನು ಪ್ರಾರಂಭಿಸಿ ನಾಲ್ಕು ವರ್ಷವನ್ನು ಯಶಸ್ವಿಯಾಗಿ ಮುಗಿಸುತ್ತಿದ್ದು, ಈಗ ಐದನೇ ವರ್ಷಕ್ಕೆ ಕಾಲಿಡುತ್ತಿದೆ. ರಂಗಶಿಕ್ಷಣದಲ್ಲಿ ಒಂದು ವರ್ಷದ ಡಿಪ್ಲೋಮಾವನ್ನು ನೀಡಲಾಗುತ್ತದೆ. ಈ ರಂಗಶಿಕ್ಷಣ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾನ್ಯತೆಯನ್ನು ನೀಡಿದೆ. ಇದು ಪೂರ್ಣ ಪ್ರಮಾಣದ ರಂಗಶಾಲೆಯಾಗಿದ್ದು, ರಂಗಾಯಣವು ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿಯನ್ನು ನೀಡಿ ಮಾಹೆಯಾನ ವಿದ್ಯಾರ್ಥಿ ವೇತನವನ್ನು ನೀಡುತ್ತದೆ. ಶಾಲೆಗಳಲ್ಲಿ ಪಠ್ಯಕ್ರಮದಂತೆ ತರಗತಿಗಳು ನಡೆಯುವುದರ ಜೊತೆಗೆ ಪ್ರಾಯೋಗಿಕತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಈಗಾಗಲೇ ೨೦೧೪-೧೫ನೇ ಸಾಲಿನ ವಿದ್ಯಾರ್ಥಿಗಳು ಶ್ರೀಪಾದಭಟ್‌ರವರ ನಿರ್ದೇಶನದಲ್ಲಿ ಭೀಮಾಯಣ ನಾಟಕವನ್ನು ಯಶಸ್ವಿಯಾಗಿ ಪ್ರದರ್ಶನ ನೀಡಿ, ಪ್ರಸ್ತುತ ಎರಡನೇ ನಾಟಕವಾದ ’ಕೊಂದವರಾರು’ ನಾಟಕ ಪ್ರಯೋಗಕ್ಕೆ ಸಿದ್ಧರಾಗಿದ್ದಾರೆ.

ರಂಗದ ಹಿಂದೆ

ರಂಗಸಜ್ಜಿಕೆ : ಜನಾರ್ಧನ,
ಸಹಾಯ: ನಂದೀಶ್, ಸಂಜಯ್ ಕಿರಣ್, ಸಂತೋಷ್
ಸಂಗೀತ ಸಾಂಗತ್ಯ : ಶ್ರೀಕಂಠಸ್ವಾಮಿ, ವಿಜಯ್
ಸಹಾಯ : ಮುತ್ತ ಹನುಮಯ್ಯ, ಮಂಜು .ಹೆಚ್
ಬೆಳಕು : ಮಹೇಶ ಕಲ್ಲತ್ತಿ, ಸಹಾಯ : ಮಹೇಶ್ ಭೋವಿ
ವಸ್ತ್ರಾಲಂಕಾರ : ಮೋಹನ, ಶೃತಿ ಎ.ಎಸ್
ಸಹಾಯ : ದಿವ್ಯಾ, ಪುಷ್ಪಾ, ವಿಜಯ್
ಪ್ರಸಾದನ : ಚಾಂದಿನಿ .ಪಿ
ಸಹಾಯ : ರಂಗಸ್ವಾಮಿ, ಸೋಮಶೇಖರ್
ಪರಿಕರ : ಕವಿತಾ ಎ.ಎಂ
ಸಹಾಯ : ಶ್ರೀಮಂತ, ರಂಜಿತ್‌ಕುಮಾರ, ವಿನೇಶ್
ಪ್ರಚಾರ : ರಾಘವೇಂದ್ರ ಹಾಸನ, ರವಿ.ವಿ.
ರಂಗ ನಿರ್ವಹಣೆ : ರಾಘವೇಂದ್ರ ಹಾಸನ
ನಿರ್ದೇಶನ ಸಹಾಯ : ವಿಶಾಲ್ ಪಾಲಾಪುರೆ

ರಂಗದ ಮೇಲೆ

ಪುಷ್ಪಾ :ರಾಮೀ ಮೇಡಮ್
ದಿವ್ಯಾ : ನಟಿ, ಸಂದರ್ಶಕಿ
ನಂದೀಶ್ : ಗಣಪ, ಗಾಂಧಿ, ಗುಮಾಸ್ತ
ರಾಘವೇಂದ್ರ ಹಾಸನ : ಠೊಣಪ
ರಂಗಸ್ವಾಮಿ : ಎರಡನೆಯ ವಕೀಲ
ಸಂಜಯ್ ಕಿರಣ್ : ನಾಥೂರಾಮ್ ಗೋಡ್ಸೆ
ಮುತ್ತ ಹನುಮಯ್ಯ : ದರ್ಬಾನ, ಪ್ಯಾರೇಲಾಲ್
ಶ್ರೀಮಂತ : ಸಂಪಾದಕ, ಗುರುದೇವ
ರಂಜಿತ್‌ಕುಮಾರ್ : ಮೊದಲನೆಯ ವಕೀಲ
ವಿನೇಶ್ : ಗುಮಾಸ್ತ, ಸಂಪಾದಕ, ಗುರುದೇವ
ಮಂಜು : ಚಾರ್‍ಲಿ ಚಾಪ್ಲಿನ್
ಮಹೇಶ್ ಭೋವಿ : ನಾಥೂರಾಮ್ ಗೋಡ್ಸೆ
ಸಂತೋಷ್ : ಎರಡನೆಯ ವಕೀಲ
ವಿಜಯಕುಮಾರ್ : ಮೊದಲನೆಯ ವಕೀಲ
ಸೋಮಶೇಖರ್ : ಗಣಪ, ಗಾಂಧಿ, ದರ್ಬಾನ