ಬಹುರೂಪಿ 2016

Expression1
Expression

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ – ‘ಅಭಿವ್ಯಕ್ತಿ’- 2016

bahuroopi_logo ನಿರ್ದೇಶಕ ಆಶಯ ನುಡಿ,

ರಂಗಾಯಣ ಮೈಸೂರು ತನ್ನ ೧೩ನೇ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-೨೦೧೬ರನ್ನು ಜನವರಿ ೧೪ ರಿಂದ ೨೦ ರವರೆಗೆ ಒಂದು ವಾರಗಳ ಕಾಲ ಸಂಭ್ರಮದಿಂದ ಅರ್ಥಪೂರ್ಣವಾಗಿ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಅಭಿವ್ಯಕ್ತಿ ರೂಪದಲ್ಲಿ ಲೋಕಾರ್ಪಣೆ ಮಾಡುತ್ತಿದೆ ಎಂದು ತಿಳಿಸಲು ಹರ್ಷಿಸುತ್ತೇವೆ. ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಿ ಹಾಗೂ ಸಮುದಾಯಗಳ ಮೂಲ ತುಡಿತ ಹಾಗೂ ಎಲ್ಲ ಬಗೆಯ ಸೃಜನಶೀಲತೆಯ ಪ್ರಾಣ. ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನಾತ್ಮಕವಾಗಿ ದತ್ತವಾಗಿರುವ ಹಕ್ಕು. ಈ ಅವಕಾಶದಿಂದಾಗಿಯೇ ತುಳಿತಕ್ಕೀಡಾದ ಎಷ್ಟೋ ಸಮುದಾಯಗಳು ಪ್ರಗತಿ ಪಥದಲ್ಲಿ ನಡೆಯಲು ಸಾಧ್ಯವಾಯಿತು. ಸಮಾಜದ ಓರೆ-ಕೋರೆಗಳನ್ನು ತಿದ್ದಿ, ಸಮಾಜವನ್ನು ಸರಿಪಡಿಸಲು ಅವಕಾಶವಾಯಿತು. ಮುಕ್ತವಾಗಿ ಹಾಗೂ ಸ್ವತಂತ್ರವಾಗಿ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ನಿರ್ಭಿಡೆಯಿಂದ ಅಭಿವ್ಯಕ್ತಿಸುತ್ತಾ ಆತ್ಮಸ್ಥೈರ್ಯದಿಂದ ಬದುಕಲು ಅವಕಾಶವಾಯಿತು.

ರಂಗಭೂಮಿ ಎಂದಿನಿಂದಲೂ ಸಮಾಜ ಕುರಿತ ಅಭಿಪ್ರಾಯ, ಅನಿಸಿಕೆಗಳನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸುತ್ತಲೇ ಬಂದಿದೆ. ಸಮಾಜ ಓರೆ-ಕೋರೆಗಳನ್ನು ತಿದ್ದಿಕೊಳ್ಳಲು ಅವಕಾಶ ಮಾಡಿಕೊಡುವ ಕನ್ನಡಿಯಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾ ಬಂದಿದೆ. ರಂಗಭೂಮಿ ಸದಾ ವರ್ತಮಾನಕ್ಕೆ ಸಂಬಂಧಪಟ್ಟಿದ್ದು ಮತ್ತು ಸ್ಪಂದಿಸುವಂತದ್ದು. ಅಂತೆಯೇ ಚಲನಚಿತ್ರ, ಸಮೂಹ ಮಾಧ್ಯಮ, ಸಾಮಾಜಿಕ ಜಾಲತಾಣಗಳು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತಲೇ ಬಂದಿದೆ. ಆದರೆ ಕೆಲವೊಮ್ಮೆ ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರದಿಂದಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿರುವುದನ್ನು ನಾವು ನೋಡುತ್ತಿದ್ದೇವೆ. ಹಾಗೆಯೇ ತಂತ್ರಜ್ಞಾನದ ದುರುಪಯೋಗದಿಂದಾಗಿ ಸಮಾಜದ ಸ್ವಾಸ್ಥ್ಯ ಕೆಡಿಸುವ ಅಭಿವ್ಯಕ್ತಿಯ ಪ್ರಯತ್ನಗಳನ್ನೂ ನಾವು ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ಆಗಾಗ್ಗೆ ನಾವೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಪರಾಮರ್ಶೆ ಮಾಡಿಕೊಳ್ಳುತ್ತಲೇ ಸಮಾಜದ ಸ್ವಾಸ್ಥದತ್ತ ಗಮನ ಹರಿಸಬೇಕಾಗಿದೆ.

ಈ ನಿಟ್ಟಿನಲ್ಲಿ ಈ ವರ್ಷ ರಂಗಾಯಣದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ-೨೦೧೬ರ ಮುಖ್ಯ ವಿಷಯ ’ಅಭಿವ್ಯಕ್ತಿ’. ಸಮಾಜದ ಎಲ್ಲ ಸ್ಥರಗಳಲ್ಲಿ ಹಾಗೂ ಸೃಜನಶೀಲತೆಯ ಎಲ್ಲಾ ಪ್ರಕಾರಗಳಲ್ಲಿ ಅಭಿವ್ಯಕ್ತಿಯ ಸವಾಲು ಮತ್ತು ಸಾಧ್ಯತೆಗಳನ್ನು ಚರ್ಚೆಗೊಳಪಡಿಸುವುದು ಈ ಸಲದ ಬಹುರೂಪಿಯ ಮುಖ್ಯ ಆಶಯ.

ದೇಶದ ಹಾಗೂ ರಾಜ್ಯದ ಅನೇಕ ಭಾಗಗಳಿಂದ ವಿಷಯಕ್ಕೆ ಸಂಬಂಧಿಸಿದ ನಾಟಕಗಳನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ ರಂಗಭೂಮಿ ಪ್ರಕ್ರಿಯೆಗೆ ಯುವಕಲಾವಿದರನ್ನು ತರಬೇತುಗೊಳಿಸಿ ಸನ್ನದ್ಧಗೊಳಿಸುತ್ತಿರುವ ನಾಡಿನ ಕ್ರಿಯಾಶೀಲ ರಂಗಶಾಲೆಗಳ ನೂತನ ಪ್ರಯೋಗಗಳಿಗೆ ಈ ಬಾರಿ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ನಾಟಕಾಸಕ್ತರು ಉತ್ತಮ ನಾಟಕಗಳನ್ನು ನೋಡುವ ಅವಕಾಶವನ್ನು ಒದಗಿಸಲಾಗಿದೆ. ಅಭಿವ್ಯಕ್ತಿಗೆ ಸಂಬಂಧಿಸಿದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿದ್ದು, ರಾಷ್ಟ್ರದ, ರಾಜ್ಯದ ಅನೇಕ ಬುದ್ಧಿಜೀವಿಗಳು, ಚಿಂತಕರು, ರಂಗಕರ್ಮಿಗಳು ನಡೆಸಿಕೊಡಲಿದ್ದಾರೆ. ವಿಚಾರ ವಿನಿಮಯ, ಸಂವಾದ ಚರ್ಚೆಗೆ ಉತ್ತಮ ವೇದಿಕೆಯಾಗಿದೆ.

ರಾಷ್ಟ್ರದ ವಿವಿಧ ಭಾಗಗಳಿಂದ ಬರಲಿರುವ ವಿಶಿಷ್ಟ ಪ್ರಕಾರ, ಶೈಲಿಯ ಜನಪದ ತಂಡಗಳ ಪ್ರದರ್ಶನವನ್ನು ಏರ್ಪಡಿಸಿದ್ದು, ಕಾಲೇಜು ಯುವಜನರಲ್ಲಿ ಆಸಕ್ತಿ ಮೂಡಿಸಲು ವಿವಿಧ ಕಾಲೇಜುಗಳಲ್ಲಿ ಪ್ರದರ್ಶನವನ್ನು ವ್ಯವಸ್ಥೆ ಮಾಡಲು ಚಿಂತಿಸಿದ್ದೇವೆ. ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಹಾಗೂ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸಹಯೋಗದಲ್ಲಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾಜ್ಯದ ವಿವಿಧ ಸ್ಥಳಗಳಿಂದ ಹೆಸರಾಂತ ಅನುಭವಿ ಬೀದಿನಾಟಕ ತಂಡಗಳು ಪ್ರದರ್ಶನ ನೀಡಲಿದ್ದಾರೆ. ಜಗತ್ತಿನ ಅತ್ಯುತ್ತಮ ಚಿತ್ರಗಳನ್ನು ಆಯ್ಕೆ ಮಾಡಿದ್ದು, ಚಿತ್ರೋತ್ಸವವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಯೋಗದೊಂದಿಗೆ ಏರ್ಪಡಿಸಲಾಗಿದೆ. ಈ ಬಾರಿ ಪ್ರಥಮ ಬಾರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸಹಯೋಗದಲ್ಲಿ ಅಭಿವ್ಯಕ್ತಿ ಕಲಾ ಶಿಬಿರವನ್ನು ಮೈಸೂರಿನ ಮಹಾಲಕ್ಷ್ಮಿ ಸ್ವೀಟ್ಸ್ ರವರ ಸಹಕಾರದಿಂದ ಆಯೋಜಿಸಲಾಗಿದೆ. ಇದರ ಜೊತೆಗೆ ರಾಜ್ಯ ಹಾಗೂ ಸ್ಥಳೀಯ ಕರಕುಶಲ ವಸ್ತುಗಳು ಹಾಗೂ ಮಹತ್ವದ ಪುಸ್ತಕ ಪ್ರದರ್ಶನ ಹಾಗೂ ದೇಸಿ ತಿಂಡಿಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಬಾರಿಯ ಬಹುರೂಪಿ ರಾಷ್ಟ್ರೀಯ ಉತ್ಸವದ ಮುನ್ನುಡಿ ಪ್ರಯೋಗವಾಗಿ ಈ ಸಂದರ್ಭಕ್ಕಾಗಿ ಸಿದ್ಧಪಡಿಸಿದ ನಾಟಕವನ್ನು ವಿಶೇಷ ಪ್ರದರ್ಶನವಾಗಿ ವಿಶಿಷ್ಟ ವಿನ್ಯಾಸದೊಂದಿಗೆ ರಂಗಾಯಣದ ವನರಂಗದಲ್ಲಿ ಏರ್ಪಡಿಸಲಾಗಿದೆ.

೧೫೯೯ ರಲ್ಲಿ ಶೇಕ್ಸ್‌ಪಿಯರ್ ಇಂಗ್ಲೆಂಡಿನ ಐತಿಹಾಸಿಕ ಹಿನ್ನೆಲೆ ನಾಟಕಗಳನ್ನು ಹೊರತುಪಡಿಸಿ ರೋಮ್ ಗಣರಾಜ್ಯದ ವಿಷಯಾಧಾರಿತ ಪ್ರಪ್ರಥಮ ರಾಜಕೀಯ ನಾಟಕ ’ಜೂಲಿಯಸ್ ಸೀಜ್‌ರ್’ ನಾಟಕವನ್ನು ಬುದ್ದಿಜೀವಿ ವಲಯದಲ್ಲಿ ಸದಾ ಎಚ್ಚರ ಪ್ರಜ್ಞೆಯ ಪ್ರತೀಕವಾಗಿ ಕ್ರಿಯಾಶೀಲತೆಯ ಆಂತರ್ಯದಲ್ಲಿ ಸದಾ ತುಡಿಯುವ ಮಾನವೀಯ ನೆಲೆಯ ವಿಚಾರವಾದಿಗಳು ಜನಪ್ರಿಯ ನಟರು ಆದ ಪ್ರೊ. ಜಿ. ಕೆ. ಗೋವಿಂದರಾವ್‌ರವರು ಮೈಸೂರು ರಂಗಾಯಣಕ್ಕಾಗಿ ನಿರ್ದೇಶಿಸಿರುವ ನಾಟಕವನ್ನು ಈ ಸಂದರ್ಭದಲ್ಲಿ ವಿಶೇಷ ಪ್ರದರ್ಶನವಾಗಿ ಕಾರ್ಪಣೆಯಾಗುತ್ತಿದೆ. ರಂಗಾಯಣದ ರಂಗಸಮಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರಿನ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ಸಹಕಾರದಲ್ಲಿ ನಡೆಸುತ್ತಿರುವ ಈ ರಂಗೋತ್ಸವವು ಮೈಸೂರಿನ ಹಾಗೂ ನಾಡಿನ ರಂಗಕರ್ಮಿಗಳು, ಸಾಹಿತಿಗಳು, ಕಲಾವಿದರು, ಚಿಂತಕರು ಹಾಗೂ ನಾಡಿನ ಎಲ್ಲಾ ಕಲಾಭಿಮಾನಿಗಳು ಇದರ ಸದುಪಯೋಗ ಪಡೆಯಬೇಕೆಂದು ಅಭಿವ್ಯಕ್ತಿ-೨೦೧೬ ಆಶಿಸುತ್ತದೆ.

ವಂದನೆಗಳೊಂದಿಗೆ,

ಹೆಚ್. ಜನಾರ್ಧನ (ಜನ್ನಿ)
ನಿರ್ದೇಶಕರು, ರಂಗಾಯಣ

ಕಾರ್ಯಕ್ರಮಗಳ ಪಟ್ಟಿ ಪ್ರಗತಿಯಲ್ಲಿದೆ…