ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

bahuroopi_logoಲಿಂಗ ತಾರತಮ್ಯದ ಬಗ್ಗೆ ಬೆಳಕು ಚೆಲ್ಲಲು ‘ಅಕ್ಕ’ ಹೆಸರಿನಲ್ಲಿ ಪ್ರಾರಂಭವಾದ ರಾಷ್ಟ್ರೀಯ ನಾಟಕೋತ್ಸವ ಇಂದು ‘ಬಹುರೂಪಿ’ ಹೆಸರಿನಲ್ಲಿ ಒಂದು ಸದೃಢ ಹಾಗೂ ಪ್ರಭಾವಶಾಲಿ ವಾರ್ಷಿಕ ರಂಗಚಟುವಟಿಕೆಯಾಗಿ ಹೊರಹೊಮ್ಮಿದ್ದು ರಂಗಲೋಕದ ಆಸಕ್ತರನ್ನೆಲ್ಲ ಆಕರ್ಷಿಸುತ್ತಿದೆ. ಸಾಮಾಜಿಕ ನ್ಯಾಯ, ಮಕ್ಕಳ ಸಮಸ್ಯೆಗಳು, ಮಕ್ಕಳ ರಂಗಭೂಮಿ, ದೇಸಿ ಸಂಸ್ಕೃತಿ, ಕೃಷಿ ಸಂಸ್ಕೃತಿ – ಬಹುರೂಪಿಯ ಪ್ರತಿ ಅವತರಣಿಕೆ ಇಂತಹ ಒಂದು ಸಮಸ್ಯೆಯನ್ನು ಕೇಂದ್ರದಲ್ಲಿಟ್ಟುಕೊಂಡು ನಾಟಕೋತ್ಸವ ಹಮ್ಮಿಕೊಂಡಿದೆ. ವಿಭಿನ್ನ ಪ್ರಕಾರದ ನಾಟಕಗಳು ಈ ಉತ್ಸವದಲ್ಲಿ ಪ್ರತಿನಿಧಿಸಲ್ಪಡುತ್ತವೆ. ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಹಲವು ಕಾರ್ಯಕ್ರಮಗಳು ಸೇರ್ಪಡೆಯಾಗುತ್ತವೆ. ಉದಾಹರಣೆಗೆ, ರಾಷ್ಟ್ರೀಯ ಮಟ್ಟದ ನಾಟಕಗಳ ಪ್ರದರ್ಶನ, ಬೀದಿ ನಾಟಕಗಳು, ರಂಗ ನಾಟಕಗಳು, ಏಕಪಾತ್ರಭಿನಯ, ಜಾನಪದ ಕಲಾಪ್ರಕಾರಗಳು, ಜೊತೆಗೆ ಚಿತ್ರ ರಚನೆ, ಛಾಯಾಚಿತ್ರ ಪ್ರದರ್ಶನ, ಕರಕುಶಲ ವಸ್ತು ಪ್ರದರ್ಶನ, ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಕಲಾವಿದರೊಡನೆ ಸಂವಾದ, ಇತ್ಯಾದಿ. ‘ಮನೆ ಮನೆ ರಂಗ’ ಕಾರ್ಯಕ್ರಮಗಳು ಕಲಾಮಂದಿರದ ಅಂಗಳವನ್ನು ಮೀರಿ ಮೈಸೂರಿನ ಹಲವು ಭಾಗಗಳಲ್ಲಿ ಹರಡಿ ರಂಗಾಯಣವನ್ನು ಸುತ್ತಮುತ್ತಲ ಪ್ರದೇಶಗಳಿಗೆ ಪರಿಚಯಿಸುವಂಥ ಕಾರ್ಯಕ್ರಮವಾಗಿದೆ. ಮೈಸೂರು ಜಲ್ಲೆಯ ೩೬ ಮಂಡಲ ಪಂಚಾಯಿತಿಗಳಲ್ಲೂ ಈ ಕಾರ್ಯಕ್ರಮಗಳನ್ನು ನಡೆಸಿಕೊಡಲಾಗಿದೆ. ದೇಸಿ ಸಂಸ್ಕೃತಿಯ ಆಹಾರ ಮೇಳವು ವಿಭಿನ್ನ ಅಭಿರುಚಿಯ ಜನರನ್ನು ಬಹುರೂಪಿಗೆ ಆಕರ್ಷಿಸುವ ಒಂದು ಮುಖ್ಯ ಸಂಗತಿಯಾಗಿದೆ. ಮೈಸೂರಿನ ಸಾಂಸ್ಕೃತಿಕ ಚಟುವಟಿಕೆಗಳ ಆಯಾಮಗಳಲ್ಲಿ ಈ ಆಕರ್ಷಣೆಯೂ ಪ್ರಮುಖವಾದುದ್ದಾಗಿದೆ.

 

ಬಹುರೂಪಿ 2017 : ಕಾರ್ಯಕ್ರಮಗಳ ವಿವರ