ಶ್ರೀ ಎಂ.ಡಿ. ಈರೇಗೌಡ ಮತ್ತು ಶ್ರೀಮತಿ ನೀಲಮ್ಮ

 

ಶ್ರೀ ಎಂ. ಡಿ. ಈರೇಗೌಡ ಮತ್ತು ಶ್ರೀಮತಿ ನೀಲಮ್ಮ ಇವರು ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು ಮಾದರಹಳ್ಳಿ ಗ್ರಾಮದ ಆದರ್ಶ ಕೃಷಿ ದಂಪತಿಗಳು. ಸಾವಯವ ಕೃಷಿ, ’ಭೂಮಿಗೂ ಸುಖ, ಮನುಷ್ಯನಿಗೂ ಹಿತ’ ಎಂದು ನಂಬಿ ಸಾವಯವ ಕೃಷಿಯನ್ನೇ ತಮ್ಮ ಬೇಸಾಯ ಪದ್ಧತಿಯನ್ನಾಗಿ ಮಾಡಿಕೊಂಡವರು.
ರೈತರು ತಾವು ಬೆಳೆಯುವ ಬೆಳೆಗಳಲ್ಲಿ ವೈವಿಧ್ಯತೆಯನ್ನು ಸಾಧಿಸಿದರೆ ಮಾತ್ರ ಯಾವುದೇ ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗದೆ, ಕೃಷಿಕಾಯಕದ ಮೇಲೇ ಅವಲಂಬಿತರಾಗಿ ಸುಂದರ ಸರಳ ಬದುಕನ್ನು ಬಾಳಬಹುದು ಎಂದು ನಂಬಿದವರು. ಅಂತೆಯೇ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ರೇಷ್ಮೆ, ಕಬ್ಬು, ಭತ್ತ, ಬಾಳೆ. . . ಜೊತೆ ಜೊತೆಗೆ ತಡಗುಣಿ, ಉದ್ದು, ಹೆಸರು, ತೊಗರಿ ಮುಂತಾದ ಕಾಳುಗಳ ಅಂತರಬೆಳೆಯನ್ನೂ ಬೆಳೆಯುತ್ತಾರೆ. ಒಂದಿಷ್ಟು ನೆಲದಲ್ಲಿ ವರ್ಷಪೂರ್ತಿ ಆದಾಯ ತರುವಂಥ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ. ಹೀಗೆ ಲಭ್ಯವಿರುವ ಜಮೀನಿನಲ್ಲಿ ಯೋಜನಾಬದ್ಧವಾಗಿ ವರ್ಷಪೂರ್ತಿ ಕೃಷಿಕಾಯಕ ಕೈಗೊಳ್ಳುವುದರಿಂದಾಗಿ ಯಾವುದೇ ಆತಂಕಕಾರಿ ಸ್ಥಿತಿಯನ್ನೂ ಸಮರ್ಥವಾಗಿ ನಿಭಾಯಿಸಿ ಕೃಷಿಯಿಂದಲೇ ದೃಢ ಬದುಕು ನಡೆಸಲು ಇವರಿಗೆ ಅನುಕೂಲವಾಗಿದೆ.

 

ಪತಿಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಶ್ರೀಮತಿ ನೀಲಮ್ಮನವರು ಪತಿ ಈರೇಗೌಡರ ಕೃಷಿ ಕಾಯಕದ ಬಾಳ ಸಂಗಾತಿ. ಬೇಸಾಯದ ಪ್ರತಿ ಹಂತದಲ್ಲೂ ಪತಿಯ ಪ್ರತಿ ಹೆಜ್ಜೆಯೊಂದಿಗೆ ಹೆಜ್ಜೆಯಿಡುತ್ತ ಕೃಷಿಯ ಮೂಲಕವೇ ಸದೃಢ ಬದುಕು ಸಾಕಾರವಾಗುವ ನಿಟ್ಟಿನಲ್ಲಿ ಶ್ರಮಿಸುತ್ತಿರುವವರು.

ಪ್ರಸ್ತುತ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅಂಗವಾಗಿ ರಂಗಾಯಣ ಆಯೋಜಿಸಿರುವ ನವರಾತ್ರಿ ರೈತೋತ್ಸವ-೨೦೧೫ರ ಕೃಷಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ದಿ: ೧೫.೧೦.೨೦೧೫ ರಂದು ಶ್ರೀ ಎಂ. ಡಿ. ಈರೇಗೌಡ ಮತ್ತು ಶ್ರೀಮತಿ ನೀಲಮ್ಮ ಕೃಷಿ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲು ರಂಗಾಯಣ ಹರ್ಷಿಸುತ್ತದೆ.