ಶ್ರೀ ಸೈಯದ್ ಘನಿಖಾನ್ ಮತ್ತು ಶ್ರೀಮತಿ ಸಯಿದಾ ಫಿರ್ದೋಸ್

ಶ್ರೀ ಸೈಯದ್ ಘನಿಖಾನ್ ಮತ್ತು ಶ್ರೀಮತಿ ಸಯ್ಯದಾ ಫಿರ್ದೋಸ್ ಇವರು ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು, ಕಿರುಗಾವಲು ಗ್ರಾಮದ ಬೆಳಕಿನ ಬೇಸಾಯದತ್ತ ನಡೆದಿರುವ ಅಪರೂಪದ ಕೃಷಿ ದಂಪತಿಗಳು. ಶ್ರೀ ಸೈಯದ್ ಘನಿಖಾನ್‌ರವರು ವಸ್ತುಸಂಗ್ರಹಾಲಯಶಾಸ್ತ್ರ ಕುರಿತಂತೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ ಪಡೆದವರು. ರಾಷ್ಟ್ರದ ವಸ್ತು ಸಂಗ್ರಹಾಲಯವೊಂದರಿಂದ ಇವರಿಗೆ ಉದ್ಯೋಗ ಅರಸಿ ಬಂದರೂ, ವಂಶಪಾರಂಪರ್‍ಯವಾದ ಕೃಷಿ ಕಸುಬು ಇವರನ್ನು ಕೈಬೀಸಿ ಕರೆದಿದ್ದರ ಪರಿಣಾಮವಾಗಿ ಶ್ರೀ ಘನಿಖಾನ್ ಸರ್ಕಾರಿ ಉದ್ಯೋಗವನ್ನು ನಿರಾಕರಿಸಿ ತಮ್ಮ ಜಮೀನನ್ನೇ ಜೀವಂತ ವಸ್ತುಗಳ ಸಂಗ್ರಹಾಲಯವನ್ನಾಗಿ ಮಾಡಿಕೊಂಡವರು. ಇವರ ಜಮೀನಿನಲ್ಲಿ ಸುಮಾರು ೧೨೦ಕ್ಕೂ ಹೆಚ್ಚು ಅಪರೂಪದ ಮಾವಿನ ತಳಿಗಳಿವೆ. ೮೦೦ಕ್ಕೂ ಹೆಚ್ಚು ಭತ್ತದ ತಳಿಗಳಿವೆ. ಇವರ ಇಂದಿನ ಕೃಷಿ ಕಾರ್ಯಕ್ಷೇತ್ರ ವೈವಿಧ್ಯಮಯ ಜೀವಂತ ಸಸ್ಯಗಳ ಸಂರಕ್ಷಣಾ ಸಂಗ್ರಹಾಲಯವಾಗಿದ್ದು, ಇನ್ನೂ ಹೆಚ್ಚು ಹೆಚ್ಚು ದೇಸಿ ತಳಿಗಳ ಸಂರಕ್ಷಣೆ ಇವರ ಸಂಕಲ್ಪವಾಗಿದೆ. ನೈಸರ್ಗಿಕ ಕೃಷಿಯನ್ನು ಆಧರಿಸಿ, ಆ ಮೂಲಕ ಬೆಳಕಿನ ಬೇಸಾಯದತ್ತ ನಡೆಯುತ್ತಿರುವ ಇವರದು ಅವಿಭಕ್ತ ಕುಟುಂಬ.

 

ಪತಿಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು, ಚಳಿ ಮಳೆ ಗಾಳಿ ಎನ್ನದೆ ದುಡಿಯುವ ಶ್ರೀಮತಿ ಸಯ್ಯದಾ ಫಿರ್ದೋಸ್ ಪತಿಯ ಎಲ್ಲಾ ಹಂಬಲಗಳಿಗೂ ಬೊಗಸೆ ತುಂಬಿ ನೀರೆರೆವವರು. ಯುವ ರೈತ ಸೈಯದ್ ಘನಿಖಾನ್ ತಮ್ಮ ಸಂಕಲ್ಪ, ಶ್ರಮ, ಸಾಧನೆಯಿಂದಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೃಷಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ‘ಕೃಷಿ ಪಂಡಿತ’, ‘ಜೀವವೈವಿಧ್ಯ ಸಂರಕ್ಷಕ’, ‘ಇನ್ನೋವೇಟೀವ್ ರೈಸ್ ಫಾರ್ಮರ್’, ‘ಜಿನೋಮೆನ್’ (ತಳಿ ಸಂರಕ್ಷಕ) ಮುಂತಾದವು ಇವರಿಗೆ ಸಂದಿರುವ ಪ್ರಶಸ್ತಿಗಳಲ್ಲಿ ಕೆಲವು ಮಾತ್ರ.

ಪ್ರಸ್ತುತ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅಂಗವಾಗಿ ರಂಗಾಯಣ ಆಯೋಜಿಸಿರುವ ನವರಾತ್ರಿ ರೈತೋತ್ಸವ-೨೦೧೫ರ ಕೃಷಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ದಿ: ೧೪.೧೦.೨೦೧೫ ರಂದು ಶ್ರೀ ಸೈಯದ್ ಘನಿಖಾನ್ ಮತ್ತು ಶ್ರೀಮತಿ ಸಯ್ಯದಾ ಫಿರ್ದೋಸ್ ಇವರನ್ನು ಸನ್ಮಾನಿಸಿ, ಗೌರವಿಸಲು ರಂಗಾಯಣ ಹರ್ಷಿಸುತ್ತದೆ.