ಶ್ರೀ ಶ್ರೀನಿವಾಸಮೂರ್ತಿ ಮತ್ತು ಶ್ರೀಮತಿ ವಿ. ಗೀತಾ

 

ಶ್ರೀ ಶ್ರೀನಿವಾಸಮೂರ್ತಿ ಮತ್ತು ಶ್ರೀಮತಿ ವಿ. ಗೀತಾ ರವರು ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕು, ಸೋಸಲೆ ಹೋಬಳಿಯ ಸಿದ್ದನಹುಂಡಿಯ ಕೃಷಿ ದಂಪತಿಗಳು. ತಮಗಿರುವ ಕೇವಲ ಒಂದೇ ಒಂದು ಎಕರೆ ಜಮೀನಿನಲ್ಲಿ ಭತ್ತ ಬೆಳೆಯುವ ಮೂಲಕ ವಾರ್ಷಿಕ ರೂ.೩.೦೦ ಲಕ್ಷಗಳನ್ನು ಗಳಿಸಿದ್ದಾರೆ. ೧೯೯೬-೯೭ ರಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ದಂಪತಿಗಳು ಸುಭಾಷ್ ಪಾಳೇಕಾರ್‌ರವರ ಶೂನ್ಯ ಬಂಡವಾಳ-ನೈಸರ್ಗಿಕ ಕೃಷಿ ಪದ್ಧತಿಯನ್ನು ತಮ್ಮ ಬೇಸಾಯ ಪದ್ಧತಿಯನ್ನಾಗಿ ಅಳವಡಿಸಿಕೊಂಡು ದೇಸಿ ಭತ್ತದ ತಳಿ ಉಳಿಸುವ ಕಾಯಕ ಮಾಡುತ್ತಿದ್ದಾರೆ.
ಕೃಷಿಯನ್ನು ಖುಷಿಯಿಂದಲೇ ಮಾಡುವ ಶ್ರೀನಿವಾಸಮೂರ್ತಿ ಭತ್ತವನ್ನು ಬಿತ್ತನೆ ಬೀಜವಾಗಿ ಮಾರಾಟ ಮಾಡುವುದಲ್ಲದೆ, ಮೈಸೂರಿನ ಸಾವಯವ ಕೃಷಿ ಉತ್ಪನ್ನ ಮಳಿಗೆಗಳಿಗೆ ಪೂರೈಸುತ್ತಾರೆ. ಶ್ರೀನಿವಾಸಮೂರ್ತಿಯವರು ಕೇವಲ ಪ್ರಗತಿಪರ ರೈತರು ಮಾತ್ರವಲ್ಲ, ಪದವೀಧರರಾದರು ಪ್ರಯೋಗಶೀಲತೆಗೆ ಹೆಸರಾದವರು. ತಮ್ಮ ಒಂದೇ ಎಕರೆ ಜಮೀನಿನಲ್ಲಿ ಯಾವುದೇ ಕೃಷಿ ವಿಜ್ಞಾನಿಗೆ ಕಡಿಮೆ ಇಲ್ಲದಂತೆ ಸುಮಾರು ೨೦೦ ವಿವಿಧ ದೇಸಿ ತಳಿಗಳನ್ನು ಬೆಳೆದು ಯಶಸ್ವಿಯಾದವರು.

 

ಸಾವಯವ ಕೃಷಿ ತರಬೇತಿ ಕಾರ್ಯಕ್ರಮಗಳನ್ನು ಕೃಷಿ ಇಲಾಖೆ ಹಮ್ಮಿಕೊಂಡಾಗ ಇವರನ್ನು ಕರೆಸಿ ಶೂನ್ಯ ಬಂಡವಾಳ-ನೈಸರ್ಗಿಕ ಕೃಷಿ ಕುರಿತಂತೆ ರೈತರಿಗೆ ಸಲಹೆ ಕೊಡಿಸುವುದು ಉಂಟು.

’ಸಾವಯವ ಕೃಷಿ, ಭೂಮಿಗೂ ಹಿತ ಮನುಷ್ಯನಿಗೂ ಸುಖ’ ಎಂದು ಬಲವಾಗಿ ನಂಬಿ ಕೃಷಿ ನಡೆಸುತ್ತಿರುವ ಪತಿಯ ಆಕಾಂಕ್ಷೆ, ಶ್ರದ್ಧೆ, ಶ್ರಮಕ್ಕೆ ಪೂರಕವಾಗಿ ಸ್ಪಂಧಿಸುತ್ತ ಬೇಸಾಯದ ಪ್ರತಿ ಹಂತದಲ್ಲೂ ಪತಿಯ ಭುಜಕ್ಕೆ ಭುಜ ಕೊಟ್ಟು ದುಡಿಯುವ ಶ್ರೀಮತಿ ವಿ. ಗೀತಾ ಪತಿ ಶ್ರೀನಿವಾಸಮೂರ್ತಿ ರವರಿಗೆ ಬಾಳ ಸಂಗಾತಿ
ಪ್ರಸ್ತುತ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅಂಗವಾಗಿ ರಂಗಾಯಣ ಆಯೋಜಿಸಿರುವ ನವರಾತ್ರಿ ರೈತೋತ್ಸವ-೨೦೧೫ರ ಕೃಷಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ದಿ: ೧೯.೧೦.೨೦೧೫ ರಂದು ಶ್ರೀ ಶ್ರೀನಿವಾಸಮೂರ್ತಿ ಮತ್ತು ಶ್ರೀಮತಿ ವಿ. ಗೀತಾ ಕೃಷಿ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲು ರಂಗಾಯಣ ಹರ್ಷಿಸುತ್ತದೆ.