ಶ್ರೀ ಶೇಷಕುಮಾರ ಮತ್ತು ಶ್ರೀಮತಿ ಸುಧಾ

ಶ್ರೀ ಶೇಷಕುಮಾರ್ ಮತ್ತು ಶ್ರೀಮತಿ ಸುಧಾ, ಇವರು ಚಾಮರಾಜನಗರ ಜಿಲ್ಲೆ, ಬೇಗೂರು ಹೋಬಳಿ, ಗುಂಡ್ಲುಪೇಟೆ ತಾಲ್ಲೂಕು, ಕೋಟಕೆರೆ ಗ್ರಾಮದಲ್ಲಿ ವ್ಯವಸಾಯ ನಿರತರಾಗಿರುವವರು.
ಇಂಜಿನಿಯರಿಂಗ್ ಪದವಿ ಪಡೆದು ಉದ್ಯೋಗ ನಿರತರಾಗಿದ್ದ ಶ್ರೀ ಶೇಷಕುಮಾರ್‌ರವರಿಗೆ ವ್ಯವಸಾಯ ಮಾಡಿ ರೈತನಾಗಬೇಕೆಂಬ ಬಯಕೆ ಬಾಲ್ಯದ ಕನಸು. ಹೀಗಾಗಿ ತಮ್ಮ ಕನಸ್ಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ತಮ್ಮ ಉದ್ಯೋಗಕ್ಕೆ ತಿಲಾಂಜಲಿಯಿತ್ತು, ಕಳೆದ ಹದಿನೈದು ವರ್ಷಗಳಿಂದ ತಮ್ಮ ಮೂರು ಎಕರೆ ಜಮೀನಿನಲ್ಲಿ ’ಸಾವಯವ ಕೃಷಿ-ಭೂಮಿಗೂ ಸುಖ, ಮನುಷ್ಯನಿಗೂ ಹಿತ’ ಎಂದು ದೃಢವಾಗಿ ನಂಬಿ ಅಂತೆಯೇ ಸಾವಯವ ಕೃಷಿಪದ್ಧತಿಯನುಸಾರ ಬೇಸಾಯದಲ್ಲಿ ನಿರತರಾಗಿದ್ದಾರೆ.
ದಾಳಿಂಬೆ, ತರಕಾರಿ, ರಾಗಿ, ಜೋಳ, ಗೋಧಿ ಜೊತೆ ಜೊತೆಗೆ ವಿವಿಧ ತರಕಾರಿ ಸೊಪ್ಪುಗಳನ್ನು ಬೆಳೆಯುವ ಶ್ರೀ ಶೇಷಕುಮಾರ್ ತಮ್ಮ ಕೃಷಿಕಾಯಕದಲ್ಲಿ ಸ್ಪಷ್ಟತೆ, ನಿರ್ಧಿಷ್ಟತೆ ಮತ್ತು ಶ್ರಮಕ್ಕೆ ಮಹತ್ವ ನೀಡುವವರು. ಸೌರಶಕ್ತಿ ಮತ್ತು ವಿಂಡ್‌ಮಿಲ್‌ನಿಂದ ತಮ್ಮ ಕೃಷಿಕಾಯಕಕ್ಕೆ ಅಗತ್ಯವಾದ ವಿದ್ಯುತ್‌ನ್ನು ತಾವೇ ತಯಾರಿಸಿಕೊಂಡಿರುವುದು ಇವರ ಇನ್ನೊಂದು ವಿಶಿಷ್ಟತೆ. ತಮ್ಮ ಜಮೀನಿನಲ್ಲಿ ಲಭ್ಯವಿರುವ ಜಲ ಸಂಪನ್ಮೂಲವನ್ನು ಬಹುಜತನದಿಂದ ಸಮರ್ಥವಾಗಿ ಬಳಕೆ ಮಾಡಿಕೊಳ್ಳುವ ಇವರ ಜಾಣತನ ಯಾರೂ ಮೆಚ್ಚತಕ್ಕ ಅಂಶ. ಪ್ರತಿವರ್ಷವೂ ತಾವು ಬೆಳೆಯುವ ಬೆಳೆಗಳನ್ನು ಬದಲಾಯಿಸುವುದು ಇವರ ಯಶಸ್ಸಿನ ಹಿಂದಿರುವ ಗುಟ್ಟು.

 

ಪತಿಯ ಕೃಷಿ ಆಸೆ, ಆಕಾಂಕ್ಷೆಗಳಿಗೆ ಪೂರಕವಾಗಿ ಸ್ಪಂದಿಸುತ್ತ, ಬೇಸಾಯದ ಪ್ರತಿ ಹಂತದಲ್ಲೂ ಭುಜಕ್ಕೆ ಭುಜಕೊಟ್ಟು ದುಡಿಯುವ ಶ್ರೀಮತಿ ಸುಧಾ ಶ್ರೀ ಶೇಷಕುಮಾರ್ ರವರ ಕೃಷಿ ಕಾಯಕದ ಸಂಗಾತಿ. ಇವರ ಕೃಷಿ ಸಾಧನೆಯನ್ನು ಗಮನಿಸಿ ಕರ್ನಾಟಕ ಘನ ಸರ್ಕಾರವು ’ಚಾಮರಾಜನಗರ ಜಿಲ್ಲೆಯ ಪ್ರಗತಿಪರ ರೈತ’ ಎಂದು ೨೦೧೪ ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.

ಪ್ರಸ್ತುತ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅಂಗವಾಗಿ ರಂಗಾಯಣ ಆಯೋಜಿಸಿರುವ ನವರಾತ್ರಿ ರೈತೋತ್ಸವ-೨೦೧೫ರ ಕೃಷಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ದಿ: ೧೬.೧೦.೨೦೧೫ ರಂದು ಶ್ರೀ ಶೇಷಕುಮಾರ್ ಮತ್ತು ಶ್ರೀಮತಿ ಸುಧಾ ಕೃಷಿ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲು ರಂಗಾಯಣ ಹರ್ಷಿಸುತ್ತದೆ.