ಶ್ರೀ ಟಿ. ರಾಜು ಮತ್ತು ಶ್ರೀಮತಿ ಗೌರಮ್ಮ

 

ಶ್ರೀ ಟಿ. ರಾಜು ಮತ್ತು ಶ್ರೀಮತಿ ಗೌರಮ್ಮ ದಂಪತಿಗಳು ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ, ದೊಡ್ಡಹೆಜ್ಜೂರು ಗ್ರಾಮದವರು. ಇಂದು ದಿನದಿನಕ್ಕೆ ಹೆಚ್ಚು ಪ್ರಚಲಿತಗೊಳ್ಳುತ್ತಿರುವ ’ಸಾವಯವ ಕೃಷಿ, ಭೂಮಿಗೂ ಹಿತ ಮನುಷ್ಯನಿಗೂ ಸುಖ’ ಎಂದು ಬಲವಾಗಿ ನಂಬಿ ತಮ್ಮ ಪಾಲಿಗೆ ಬಂದಿರುವ ಕೇವಲ ೨ ಎಕರೆ ಜಮೀನಿನಲ್ಲಿ ಈ ದಂಪತಿಗಳು ಬಲು ಆತ್ಮಸ್ಥೈರ್ಯದಿಂದ ಬದುಕು ನಡೆಸುತ್ತಿದ್ದಾರೆ.
ಮಳೆಯನ್ನೇ ನಂಬಿ ಬೇಸಾಯ ನಡೆಸುವ ಇವರು ಎಂದೂ ರಾಸಯನಿಕಗಳಿಗೆ ಮೊರೆ ಹೋದವರಲ್ಲ. ರಾಗಿ, ಜೋಳ, ದವಸ ಧಾನ್ಯಗಳು ಹೀಗೆ ವೈವಿಧ್ಯಮಯ ಬೆಳೆಗಳನ್ನು ಬೆಳೆಯುವ ಈ ದಂಪತಿಗಳು ತಮ್ಮ ಅಗತ್ಯಕ್ಕೆ ಬೇಕಾದಷ್ಟು ತರಕಾರಿಗಳನ್ನು ತಮ್ಮ ಜಮೀನಿನಲ್ಲೇ ಬೆಳೆದುಕೊಳ್ಳುತ್ತಾರೆ. ಕೃಷಿಯ ಜೊತೆಗೆ ಹೈನುಗಾರಿಕೆ, ಕುರಿಸಾಕಾಣಿಕೆಯನ್ನು ಮಾಡುತ್ತಾರೆ.

ಕೇವಲ ಎರಡು ಎಕರೆ ಜಮೀನಿನಲ್ಲೇ ಬೆಳೆ ಬೆಳೆದು, ಸರಳವಾದ ಬದುಕು ನಡೆಸುತ್ತಿರುವ ಈ ದಂಪತಿಗಳು ಭೂಮಿತಾಯಿ ಶ್ರದ್ಧೆಯಿಟ್ಟು ನಂಬಿ ದುಡಿವ ರೈತನಿಗೆ ಎಂದೂ ಮೋಸವಾಡುವವಳಲ್ಲ ಎಂದು ದೃಢವಾಗಿ ನಂಬಿದವರು.

ಪತಿಯ ಕೃಷಿ ಕುರಿತ ಆಸೆ, ಆಕಾಂಕ್ಷೆ, ಶ್ರದ್ಧೆ, ಶ್ರಮಕ್ಕೆ ಪೂರಕವಾಗಿ ಸ್ಪಂಧಿಸುತ್ತ ಬೇಸಾಯದ ಪ್ರತಿ ಹಂತದಲ್ಲೂ ಪತಿಯ ಭುಜಕ್ಕೆ ಭುಜ ಕೊಟ್ಟು ದುಡಿಯುವ ಶ್ರೀಮತಿ ಗೌರಮ್ಮ ಪತಿಗೆ ಅನುರೂಪರಾದ ಸತಿ.

ಪ್ರಸ್ತುತ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅಂಗವಾಗಿ ರಂಗಾಯಣ ಆಯೋಜಿಸಿರುವ ನವರಾತ್ರಿ ರೈತೋತ್ಸವ-೨೦೧೫ರ ಕೃಷಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ದಿ: ೧೮.೧೦.೨೦೧೫ ರಂದು ಶ್ರೀ ಟಿ. ರಾಜು ಮತ್ತು ಶ್ರೀಮತಿ ಗೌರಮ್ಮ ಕೃಷಿ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲು ರಂಗಾಯಣ ಹರ್ಷಿಸುತ್ತದೆ.