ಶ್ರೀ ಕೆ. ತಮ್ಮು ಮತ್ತು ಶ್ರೀಮತಿ ಜೆ.ಟಿ. ಸುಶೀಲ

 

ಶ್ರೀ ಕೆ. ತಮ್ಮು ಮತ್ತು ಶ್ರೀಮತಿ ಜೆ.ಟಿ. ಸುಶೀಲ ದಂಪತಿಗಳು ಬುಡಕಟ್ಟು ಸಮುದಾಯಕ್ಕೆ ಸೇರಿದ ಜೇನುಕುರುಬರು. ಸಾಮಾನ್ಯವಾಗಿ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ, ಆ ಮೂಲಕವೇ ಬದುಕು ನಡೆಸುವ ಜೇನುಕುರುಬ ಸಮುದಾಯದವರಲ್ಲೇ ಈ ದಂಪತಿಗಳು ವಿಶಿಷ್ಟರು, ವಿಭಿನ್ನರು. ಇವರು ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲ್ಲೂಕಿನ ಸೂಳೆಬಾವಿ ಗಿರಿಜನ ಹಾಡಿಯಲ್ಲಿ ವಾಸಿಸುತ್ತಿದ್ದಾರೆ. ಕೃಷಿ ಬದುಕಿಗೆ ಬರುವುದಕ್ಕೆ ಮುನ್ನ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಈ ದಂಪತಿಗಳು ಅನಕ್ಷರಸ್ಥರು. ಆದರೆ ಕೃಷಿ ವಿದ್ಯಾವಂತರು. ಅರಣ್ಯ ಇಲಾಖೆಯ ಕಾಯ್ದೆಯಡಿಯಲ್ಲಿ ಕರ್ನಾಟಕ ಘನ ಸರ್ಕಾರವು ಈ ದಂಪತಿಗಳಿಗೆ ಏಳು ಎಕರೆ ಜಮೀನನ್ನು ನೀಡಿ ಪುನರ್ವಸತಿ ಕಲ್ಪಿಸಿದೆ. ಅಂದಿನಿಂದ ಈ ಜಮೀನಿನಲ್ಲಿ ಶ್ರೀ ತಮ್ಮು ಮತ್ತು ಜೆ.ಟಿ. ಸುಶೀಲರವರು ’ಸಾವಯವ ಕೃಷಿ-ಭೂಮಿಗೂ ಸುಖ, ಮನುಷ್ಯನಿಗೂ ಹಿತ’ ಎಂದು ದೃಢವಾಗಿ ನಂಬಿ ಅಂತೆಯೇ ಸಾವಯವ ಕೃಷಿಪದ್ಧತಿಯನುಸಾರ ಬೇಸಾಯದಲ್ಲಿ ನಿರತರಾಗಿದ್ದಾರೆ.

ಕಾಫಿ ಇವರ ಮುಖ್ಯ ಬೆಳೆಯಾದರೂ ಭತ್ತ, ರಾಗಿ ಎಲ್ಲ ರೀತಿಯ ದವಸ ಧಾನ್ಯ, ಹಣ್ಣು ಹಂಪಲು, ತರಕಾರಿಗಳನ್ನು ತಮ್ಮ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆಯುತ್ತಾರೆ. ತಮ್ಮ ಜೀವನ ನಿರ್ವಹಣೆಗೆ ಅನಿವಾರ್ಯವಾದ ಕೆಲವೇ ಕೆಲವು ವಸ್ತುಗಳನ್ನು ಹೊರತುಪಡಿಸಿ, ಮಿಕ್ಕೆಲ್ಲವನ್ನು ತಮ್ಮ ಜಮೀನಿನಲ್ಲಿ ಬೆಳೆದುಕೊಳ್ಳುತ್ತಾರೆ. ಅಲ್ಲದೆ ಸುಮಾರು ೨೦ಕ್ಕೂ ಹೆಚ್ಚು ರಾಸುಗಳನ್ನು ಹೊಂದಿದ್ದಾರೆ.

 

ವರ್ಷಪೂರ್ತಿ ನಿರಂತರವಾಗಿ ತಮ್ಮ ಜಮೀನಿನಲ್ಲಿ ದುಡಿಯುವ ಈ ದಂಪತಿಗಳು ತಮ್ಮ ಕೃಷಿ ಕಾಯಕದ ನಡುವೆ ಸಮಯಾವಕಾಶ ದೊರೆತರೆ ಮಾತ್ರ ಜೊತೆಯಾಗಿ ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸಲು ಹೋಗುತ್ತಾರೆ. ಕೃಷಿಯಿಂದಲೇ ಸರಳ, ಸಮೃದ್ಧ ಸುಖದ ಬದುಕು ನಡೆಸುತ್ತಿರುವ ಈ ದಂಪತಿಗಳು ಬುಡಕಟ್ಟು ಜನಾಂಗದ ರೈತರಲ್ಲೇ ಮಾದರಿ ರೈತರಾಗಿದ್ದಾರೆ.

ಪತಿಯ ಕೃಷಿ ಕುರಿತ ಆಸೆ, ಆಕಾಂಕ್ಷೆ, ಶ್ರದ್ಧೆ, ಶ್ರಮಕ್ಕೆ ಪೂರಕವಾಗಿ ಸ್ಪಂಧಿಸುತ್ತ ಬೇಸಾಯದ ಪ್ರತಿ ಹಂತದಲ್ಲೂ ಪತಿಯ ಭುಜಕ್ಕೆ ಭುಜ ಕೊಟ್ಟು ದುಡಿಯುವ ಶ್ರೀಮತಿ ಜೆ.ಟಿ. ಸುಶೀಲ ಪತಿಗೆ ಅನುರೂಪರಾದ ಸತಿ.

ಪ್ರಸ್ತುತ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅಂಗವಾಗಿ ರಂಗಾಯಣ ಆಯೋಜಿಸಿರುವ ನವರಾತ್ರಿ ರೈತೋತ್ಸವ-೨೦೧೫ರ ಕೃಷಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ದಿ: ೧೭.೧೦.೨೦೧೫ ರಂದು ಶ್ರೀ ಕೆ. ತಮ್ಮು ಮತ್ತು ಶ್ರೀಮತಿ ಜೆ.ಟಿ. ಸುಶೀಲ ಕೃಷಿ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲು ರಂಗಾಯಣ ಹರ್ಷಿಸುತ್ತದೆ.