ಶ್ರೀಮತಿ ಕೆ.ಎಸ್. ಇಂದಿರಮ್ಮ ಮತ್ತು ಶ್ರೀ ನಾಗಭೂಷಣ ಆರಾಧ್ಯ

ಶ್ರೀಮತಿ ಕೆ.ಎಸ್. ಇಂದಿರಮ್ಮ ಕೆ.ಆರ್.ನಗರ ತಾಲ್ಲೂಕಿನ ಹನುಮನಹಳ್ಳಿಯವರು. ಇವರು ಸಾಲಿಗ್ರಾಮ-ಮಿರ್ಲೆ-ಬೇರ್ಯ ಸಮೀಪ ಬರುವ ಹನುಮನಹಳ್ಳಿಯ ನಾಗಭೂಷಣ ಆರಾಧ್ಯ ರವರ ಪತ್ನಿಯವರಾದ ಶ್ರೀಮತಿ ಕೆ.ಎಸ್. ಇಂದಿರಮ್ಮ ತಮ್ಮ ನಾಲ್ಕು ಎಕರೆ ಜಮೀನಿಗೆ ಎಂದೂ ರಾಸಾಯನಿಕ ಗೊಬ್ಬರ, ಕ್ರಿಮಿ ಮತ್ತು ಕೀಟ ನಾಶಕ ಬಳಸುವುದಿಲ್ಲ. ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿ ತರಕಾರಿ ಬೆಳೆ ಯಿಂದಲೇ ವಾರ್ಷಿಕ ರೂ.೨.೦೦ ಲಕ್ಷಗಳ ಆದಾಯ ಗಳಿಸುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ೩ ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಇವರು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುವುದರಿಂದ ಎರೆಹುಳು ಗೊಬ್ಬರ ತಯಾರಿಸುತ್ತಾರೆ. ತಮ್ಮ ಜಮೀನಿಗೆ ಬಳಸಿ ಮಿಕ್ಕ ಗೊಬ್ಬರವನ್ನು ಮಾರುತ್ತಾರೆ. ಟೊಮ್ಯಾಟೊ, ಕುಂಬಳಕಾಯಿ ಬೆಳೆಯುವುದರೊಂದಿಗೆ ಇವರ ಜಮೀನಿನಲ್ಲಿ ೫೦ ಅಡಿಕೆ ಮರಗಳಿವೆ. ಹಸುಗಳನ್ನು ಸಾಕಿದ್ದಾರೆ. ಮನೆ ಅಳತೆಗೆ ಭತ್ತ, ರಾಗಿ ಬೆಳೆಯುತ್ತಾರೆ. ವಾರ್ಷಿಕವಾಗಿ ಎರಡು ಬೆಳೆಗಳನ್ನು ಬೆಳೆಯುವ ಕೆ.ಎಸ್. ಇಂದಿರಮ್ಮ ಮೈಸೂರಿನ ಹಾಪ್‌ಕಾಮ್ಸ್‌ಗೆ ತಮ್ಮ ಜಮೀನಿನಲ್ಲಿ ಬೆಳೆಯುವ ಉತ್ಪನ್ನಗಳನ್ನು ಮಾರುತ್ತಾರೆ.

ಬಿಡುವಿನ ವೇಳೆಯಲ್ಲಿ ರೈತ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಲ್ಲದೆ, ರೈತರಿಗೆ ತರಕಾರಿ ಬೆಳೆಯ ಬಗ್ಗೆ ಸಲಹೆ ನೀಡುತ್ತಾರೆ. ಮೈಸೂರು ಆಕಾಶವಾಣಿಯಲ್ಲಿ ಇವರ ಕಾರ್ಯಕ್ರಮಗಳು ಆಗಾಗ ಪ್ರಸಾರವಾಗುತ್ತವೆ. ಕೃಷಿ ಇಲಾಖೆಯವರು ಇವರ ಜಮೀನಿನಲ್ಲಿ ರೈತರ ಪಾಠಶಾಲೆ ನಡೆಸಿ ಸುತ್ತಮುತ್ತಲಿನ ರೈತರಿಗೆ ತಿಳುವಳಿಕೆ ನೀಡುತ್ತಾರೆ.

 

೨೦೦೫ ರಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು ಇವರಿಗೆ ಅತ್ತ್ಯುತ್ತಮ ರೈತ ಮಹಿಳೆ ಪ್ರಶಸ್ತಿ ನೀಡಿದೆ. ಬಾನುಲಿ ಕೃಷಿ ಬಳಗವು ೨೦೦೯ ರಲ್ಲಿ ಬಾನುಲಿ ಕೃಷಿ ರತ್ನ ಪ್ರಶಸ್ತಿ ನೀಡಿದೆ. ಅಲ್ಲದೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸಿಯೂ ಇವರಿಗೆ ಸಂದಿದೆ.

`ಸಾವಯವ ಕೃಷಿ, ಭೂಮಿಗೂ ಹಿತ ಮನುಷ್ಯನಿಗೂ ಸುಖ’ ಎಂದು ಬಲವಾಗಿ ನಂಬಿ ಕೃಷಿ ನಡೆಸುತ್ತಿರುವ ಪತ್ನಿಯ ಆಕಾಂಕ್ಷೆ, ಶ್ರದ್ಧೆ, ಶ್ರಮಕ್ಕೆ ಪೂರಕವಾಗಿ ಸ್ಪಂಧಿಸುತ್ತ ಬೇಸಾಯದ ಪ್ರತಿ ಹಂತದಲ್ಲೂ ಪತ್ನಿಯ ಭುಜಕ್ಕೆ ಭುಜ ಕೊಟ್ಟು ದುಡಿಯುವವರು ಶ್ರೀ ನಾಗಭೂಷಣ ಆರಾಧ್ಯರವರು.

ಪ್ರಸ್ತುತ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಅಂಗವಾಗಿ ರಂಗಾಯಣ ಆಯೋಜಿಸಿರುವ ನವರಾತ್ರಿ ರೈತೋತ್ಸವ-೨೦೧೫ರ ಕೃಷಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ದಿ: ೨೦.೧೦.೨೦೧೫ ರಂದು ಶ್ರೀಮತಿ ಕೆ.ಎಸ್. ಇಂದಿರಮ್ಮ ಮತ್ತು ಶ್ರೀ ನಾಗಭೂಷಣ ಆರಾಧ್ಯ ಕೃಷಿ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಲು ರಂಗಾಯಣ ಹರ್ಷಿಸುತ್ತದೆ.