ಚಿನ್ನರ ಮೇಳ 2015

 

ನೆಲ- ಜಲ

ಜಾನಪದದಂಗಳದಲ್ಲಿ ಬಣ್ಣದ ಚಿಣ್ಣರು

ಗಾಡಿಯ ದಾರಿ ಸಾಗಲಿ, ನಮ್ಮ ಊರನು ಬೇಗ ಸೇರಲಿ ಎಂದು ಬದುಕಿನುದ್ದಕ್ಕೂ ಹಾಡುಗಳನ್ನು ತಮ್ಮ ಸರಳ ಸಜ್ಜನಿಕೆಯ ಬದುಕಿನೊಟ್ಟಿಗೆ ಬೆಸೆದುಕೊಳ್ಳುತ್ತಾ, ಕಟ್ಟುತ್ತಾ, ಪದಗಳನ್ನು ಎದೆಗಳಲ್ಲಿ ಬಿತ್ತುತ್ತ ಮಳೆ ಬೆಳೆಗಾಗಿ ಅರಸುತ್ತ, ಸುಸ್ಥಿರ ಬದುಕಿಗಾಗಿ ಗ್ರಾಮಭಾರತದ ನಿರ್ಮಾತರೇ ನಮ್ಮ ಜನಪದರು. ಅಕ್ಷರ ಅರಿಯದೆ ತಮ್ಮ ಬುದ್ಧಿ, ಸಾಮರ್ಥ್ಯಗಳಿಂದ ಹೊಸ ಹೊಸ ಅವಿಷ್ಕಾರಗಳನ್ನು ಪ್ರಕೃತಿದತ್ತವಾಗಿ ರೂಪಿಸುವತ್ತ ಶ್ರಮಜೀವ ತತ್ವಾಧಾರಿತ ಕಾವ್ಯಗಳನ್ನು ಸೃಷ್ಟಿಸಿ ಮಾನವನ ಬದುಕಿನ ನೋವು, ನಲಿವು, ದುಃಖ ದುಮ್ಮಾನ ನಡೆನುಡಿಯ ದೇಶಿ ಸಂಸ್ಕೃತಿ ಅಭಿವ್ಯಕ್ತಿಗೆ ಸಾಕ್ಷಿಯಾದವರು. ಯಂತ್ರಗಳನ್ನು ಕಳಚುತ್ತ ಪ್ರೀತಿ, ನಂಬಿಕೆ, ಸೌಹಾರ್ದದ ಬಾಳಿಗೆ ದಿವ್ಯವಾದವರು ನಮ್ಮ ಜನಪದರು. ಬೆಳಗಾಗಿ ನಾನೆದ್ದು ಯಾರ್‍ಯಾರ ನೆನೆಯಲಿ ಎಳ್ಳು ಜೀರಿಗೆ ಬೆಳೆಯೋಳ, ಜೀವ ತಾತ್ವರ್ಯಗಳಿಂದ ಸಮಸ್ಠಿಯ ಉಳಿವಿಗಾಗಿ ಹಬ್ಬ, ಉತ್ಸವ, ಆಚರಣೆ, ಸಂಪ್ರದಾಯಗಳಾದಿಯಲ್ಲಿ ಕಥೆಗಳನ್ನು, ಪದಗಳನ್ನು, ಒಗಟು ಗಾದೆಗಳನ್ನು ಮಾಂತ್ರಿಕ ಶಕ್ತವಾದ ಶಬ್ದ, ತಾಳ, ಲಯಬದ್ಧ, ಕುಣಿತಗಳಿಂದ ಮೈಮನ ಹದಗೊಳಿಸುವ, ಹಗುರಗೊಳಿಸುವ ತಂತ್ರಗಳನ್ನು ನದಿಹಾದಿಗಳಾಗಿ ಸೃಷ್ಟಿಸಿ, ಜನಮುಖಿಯಾಗಿ ಹರಿಸಿ, ಸಮುದ್ರವಾಗಿಸಿದವರು, ಸಂಗಮವಾಗಿಸಿದವರು ನಮ್ಮ ಜನಪದರು. ಇಂದು ಯಂತ್ರಗಳ ಲೋಕದಲ್ಲಿ ಬದುಕಿನ ಒತ್ತಡಗಳಲ್ಲಿ ಬಿದ್ದು ಒದ್ದಾಡುತ್ತಿರುವ ನಾವುಗಳು ನಮ್ಮ ಮಕ್ಕಳು ಯಂತ್ರಗಳ ಮಾಯಾ ಲೋಕದಲ್ಲಿ ಸಿಕ್ಕು ನಲುಗದಂತೆ, ಯಾಂತ್ರಿಕವಾಗದಂತೆ ನೋಡಿಕೊಳ್ಳುವುದು ಅವರದ್ದೆ ಆದ ಸೃಜನ ಭಾವಲೋಕದಲ್ಲಿ ತಮ್ಮದೇ ಕನಸುಗಳನ್ನು ಕಟ್ಟುತ್ತಾ, ನನಸಾಗುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ.

ದಿನಾಂಕ  10-04-2015  ರಿಂದ  04-05-2015

ಮಾಹಿತಿಗಾಗಿ – 0821 2512639

ನಮ್ಮ ನೆಲ-ಜಲಗಳು ಅಮೃತಗೊಳ್ಳಬೇಕಾಗಿವೆ. ನಮ್ಮ ಮಕ್ಕಳು ನಮ್ಮ ನೆಲ ಸಂಸ್ಕೃತಿಯಾದ ಜನಪದವನ್ನು ದನಿ ಬನಿಯಲ್ಲಿ ಸ್ವಚ್ಛಂದವಾಗಿ ಹಾಡಿ, ನಲಿದು, ಕುಣಿದು, ಸವಿದು ಸಮೃದ್ಧಗೊಳಿಸುವಂತೆ ಪ್ರೇರೇಪಿಸಬೇಕಾಗಿದೆ. ಅವರು ಅವರಾಗುವಂತೆ ಅನಾವರಣಗೊಳ್ಳುವಂತಹ ಸಾಂಸ್ಕೃತಿಕ ಆವರಣವನ್ನು, ವಾತಾವರಣವನ್ನು ಬಾಗಿಲು ತೆಗೆಯಿರಿ ಜ್ಯೋತಿಯನೊಳಗೆ ಕರಕೊಳ್ಳಿ, ಬೆಳಗಿ ಬೆಳಗಿಸಿ ಎಂಬ ನುಡಿಗಳನ್ನು ಚಿಗುರಿಸಲು ರಂಗಾಯಣ ನೆಲ-ಜಲದ ಪರಿಕಲ್ಪನೆಯನ್ನು ಜಾನಪದದಂಗಳದಲ್ಲಿ ಬಣ್ಣದಚಿಣ್ಣರ ಚಿಣ್ಣರಮೇಳ-2015ನ್ನು ಸಂಯೋಜಿಸಿದ್ದೇವೆ. ಮಕ್ಕಳು ಉಲ್ಲಾಸದಿಂದ ಕಥೆಗಳಿಂದ ಕಥೆಗಳಿಗೆ, ಜನಪದಗಳಿಂದ ಜಾನಪದಗಳಿಗೆ ಸಂಚರಿಸುತ್ತ ಜನಪದ ಗಾದೆ, ಒಗಟು, ಕರಕುಶಲಕಲೆ, ಪ್ರಕೃತಿಯೊಳಗಿನ ಶಬ್ದ, ಲಯ, ತಾಳ, ರಾಗಗಳೊಂದಿಗೆ ಕಾಡಿನ ವೀಕ್ಷಣೆ, ಇನ್ನಿತರ ಶೈಕ್ಷಣಿಕ ಪೂರಕ ಆಟಗಳೊಟ್ಟಿಗೆ ಕಲಿಯುತ್ತ ನಾಟಕಗಳನ್ನು ಪ್ರದರ್ಶಿಸುತ್ತಾರೆ. 2015 ಏಪ್ರಿಲ್ 10 ರಿಂದ ಮೇ 4 ರ ಬುದ್ಧ ಪೂರ್ಣಿಮೆಯಂದು ಸಂಭ್ರಮದಿಂದ ಚಿಣ್ಣರ ಮೇಳವನ್ನು ಸಮಾರೋಪಗೊಳಿಸಲಿದ್ದಾರೆ. ರಂಗಾಯಣದ ಈ ಜನಪದದಂಗಳಕ್ಕೆ ಮಕ್ಕಳನ್ನು ಕರೆತನ್ನಿ, ಸುಸ್ಥಿರ ಬದುಕಿನತ್ತ ಕಲಾ ವಿನ್ಯಾಸದೊಳಗೆ ನಾವೆಲ್ಲರೂ ಒಂದಾಗೋಣ ಬನ್ನಿ.

ಹೆಚ್. ಜನಾರ್ಧನ್ (ಜನ್ನಿ)
ನಿರ್ದೇಶಕರು
ರಂಗಾಯಣ, ಮೈಸೂರು

ಈ ಚಿಣ್ಣರಮೇಳದಲ್ಲಿ ಭಾಗವಹಿಸುವ ಮಕ್ಕಳಿಗೆ 7 ವರ್ಷ ಪೂರ್ತಿಯಾಗಿರಬೇಕು. 14 ವರ್ಷದೊಳಗಿರಬೇಕು. ಏಪ್ರಿಲ್ 2 ರಂದು ಬೆಳಿಗ್ಗೆ 10.00 ಗಂಟೆಗೆ ರಂಗಾಯಣದ ಟಿಕೆಟ್ ಕೌಂಟರ್‌ನಲ್ಲಿ ಪ್ರವೇಶದ ಅರ್ಜಿಗಳನ್ನು ನೀಡಲಾಗುವುದು. 2015 ಏಪ್ರಿಲ್ 7 ರೊಳಗೆ ಭರ್ತಿ ಮಾಡಿದ ಅರ್ಜಿಗಳನ್ನು ಮಗುವಿನ 2 ಪಾಸ್‌ಪೋರ್ಟ್ ಅಳತೆಯ ಪೋಟೋ, ಜನ್ಮದಿನಾಂಕದ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ರಂಗಾಯಣದ ಕಛೇರಿಗೆ ಹಿಂದಿರುಗಿಸಬೇಕು. ಅರ್ಜಿ ಶುಲ್ಕ ರೂ.50/- ಹಾಗೂ ಶಿಬಿರದ ಶುಲ್ಕ ರೂ.1800/- ಗಳಾಗಿರುತ್ತದೆ.