ಚಿಣ್ಣರ ಮೇಳ

ಮಕ್ಕಳ ಬೇಸಿಗೆ ಶಿಬಿರ – ಚಿಣ್ಣರ ಮೇಳ

ದಿನಾಂಕ:10-04-2017 ರಿಂದ 10-05-2017 ರವರಗೆ ಮೈಸೂರು ರಂಗಾಯಣದ ಆವರಣದಲ್ಲಿ ಪ್ರತಿದಿನ ಬೆಳಗ್ಗೆ 10.00 ರಿಂದ ಸಂಜೆ 5.00 ರವರೆಗೆ 7 ವರ್ಷಗಳು ತುಂಬಿದ, 14 ವರ್ಷದೊಳಗಿನ ವಯೋಮಿತಿಯ ಮಕ್ಕಳಿಗಾಗಿ ಚಿಣ್ಣರ ಮೇಳವನ್ನು ನಡೆಸಲಾಗುತ್ತಿದೆ.ಮಕ್ಕಳು ತಮ್ಮನ್ನು ತಾವೇ ಕಂಡುಕೊಳ್ಳುವ ಕ್ರಿಯಾತ್ಮಕ ರಂಗಚಟುವಟಿಕೆಗಳ ಮೂಲಕ ಸುಮಾರು ಒಂದು ತಿಂಗಳು ನಡೆಯುವ ಈ ಮೇಳದಲ್ಲಿ ಮಕ್ಕಳು ಆಡುತ್ತಾ, ಕುಣಿಯುತ್ತಾ ತಮ್ಮ ಕಲ್ಪನೆಯ ಬಣ್ಣ-ಬಣ್ಣದ ಚಿತ್ರಗಳನ್ನು ಬಿಡಿಸುತ್ತ, ಕರಕುಶಲಗಳನ್ನು ತಯಾರಿಸುತ್ತ, ಕಥೆಗಳನ್ನು ಹೇಳುತ್ತಾ, ಕೇಳುತ್ತಾ ನಾಡಿನ ಹೆಸರಾಂತ ಮಕ್ಕಳ ಚಿಂತಕರೊಂದಿಗೆ ಮುಖಾ-ಮುಖಿ ನಡೆಸುತ್ತ, ಹಕ್ಕಿ-ಪಕ್ಷಿ ಪರಿಸರವನ್ನು ಸ್ಪರ್ಶಿಸುತ್ತ ಗ್ರಾಮ ವೀಕ್ಷಣೆ ಮಾಡಿ ಸರಳ ಹಾಗೂ ಶ್ರಮದ ಬದುಕನ್ನು ಅರಿಯುತ್ತಾ, ಅಭಿನಯದ ಮೂಲಕ ನಾಟಕಗಳನ್ನು ಕಟ್ಟಿ ಪ್ರದರ್ಶಿಸುವತ್ತ ರಂಗಪಯಣವನ್ನು ನಡೆಸಲಿದ್ದಾರೆ. ಮಕ್ಕಳು ಕೂಡಿ, ಹಾಡಿ, ಊಟ ಮಾಡಿ ತಮ್ಮ ಮನಸ್ಸಿನಾಳದ ಮಾತುಗಳನ್ನು ಹಂಚಿಕೊಳ್ಳುತ್ತಾ ಸಮಾನತೆಯತ್ತ ಸಾಗಲೆಂಬುದು ಈ ಚಿಣ್ಣರಮೇಳದ ಉದ್ದೇಶವಾಗಿದೆ.

ಈ ಮೇಳದ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ:10-04-2017ರ ಸೋಮವಾರ ಸಂಜೆ 5.00ಕ್ಕೆ ರಂಗಾಯಣದ ವನರಂಗ ವೇದಿಕೆಯಲ್ಲಿ ಏರ್ಪಡಿಸಲಾಗಿತ್ತು. ಈ ಮೇಳದ ಉದ್ಘಾಟನಾ ಕಾರ್ಯವನ್ನು ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದಿರುವ ಹುಬ್ಬಳ್ಳಿಯ ಕುಮಾರಿ. ಸಿಯಾ ಖೋಡೆ ರವರು ನೆರವೇರಿಸಿದರು. ಕಲಾಶ್ರೀ ಪ್ರಶಸ್ತಿ ವಿಜೇತ ಅಂತರ ರಾಷ್ಟ್ರೀಯ ಯೋಗಪಟು ಕುಮಾರಿ. ಖುಷಿ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.