ರಂಗಭೀಷ್ಮ ಬಿ.ವಿ.ಕಾರಂತ  ಕಾಲೇಜು ರಂಗೋತ್ಸವ 2018

ನಾಟಕ ಕರ್ನಾಟಕ ರಂಗಾಯಣವು ದೇಶದಲ್ಲೇ ಪ್ರತಿಷ್ಠಿತ ಪೂರ್ಣ ಪ್ರಮಾಣದ ಆಧುನಿಕ ರಂಗ ಸಂಸ್ಥೆಯಾಗಿದೆ. ನಿರಂತರ ತನ್ನ ರಂಗ ಪ್ರಕ್ರಿಯೆಯಲ್ಲಿ ಕನ್ನಡ ರಂಗಭೂಮಿಗೆ ಪ್ರಬುದ್ಧ ನಾಟಕ ಪ್ರಯೋಗಗಳನ್ನು ನೀಡಿದೆ. ಕಳೆದ ಹದಿನಾಲ್ಕು ವರ್ಷಗಳಿಂದ ಮೈಸೂರಿನ ಹಾಗೂ ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿಗಳಿಗಾಗಿ ಬಿ.ವಿ. ಕಾರಂತ ಯುವಜನ ಕಾಲೇಜು ರಂಗೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಸುತ್ತಾ ಮುಂದುವರೆದಿರುವುದು ತಮಗೆ ತಿಳಿದ ವಿಷಯವಾಗಿದೆ. ಈ ಮೂಲಕ ಸಹಸ್ರಾರು ವಿದ್ಯಾರ್ಥಿಗಳಲ್ಲಿ ಸಾಹಿತ್ಯ, ಸಂಸ್ಕೃತಿ, ನೆಲ-ಜಲ, ಭಾಷೆ, ಪರಂಪರೆಯ ಅರಿವು, ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿತ್ವ ರೂಪಿಸುವ ದೃಷ್ಠಿಯಿಂದ ರಂಗಾಯಣ ಈ ಯೋಜನೆಯನ್ನು ರೂಪಿಸಿದೆ. 2018 ಆಗಸ್ಟ್ 27 ರಿಂದ ಸೆಪ್ಟೆಂಬರ್ 30 ರವರೆಗೆ ಪ್ರತಿ ವರ್ಷದಂತೆ ಒಂದು ತಿಂಗಳ ರಂಗ ತರಬೇತಿ ಶಿಬಿರವನ್ನು ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ವಿವಿಧ ಕಾಲೇಜುಗಳಿಗೆ ರಂಗಾಯಣದ ಒಡನಾಟದಲ್ಲಿ ಬೆಳೆಯುತ್ತಿರುವ ಪ್ರತಿಭಾವಂತ ನಿರ್ದೇಶಕರನ್ನು ನೇಮಿಸಿ (12 ಜನ) ಹಿರಿಯ ಕಲಾವಿದರಾದ ಶ್ರೀ ಎಸ್. ರಾಮನಾಥ ಮತ್ತು ಶ್ರೀ ಸಂತೋಷ್‌ಕುಮಾರ್ ಕುಸನೂರು ಅವರ ಸಂಚಾಲಕತ್ವದಲ್ಲಿ ನಾಟಕಗಳ ಸಿದ್ಧತೆ ನಡೆಸಲಾಯಿತು. ಸುಮಾರು ೨೭೦ ವಿದ್ಯಾರ್ಥಿಗಳು ನಿರಂತರವಾಗಿ ಈ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ 12 ನಾಟಕಗಳಿಗೆ ಶ್ರೀ ಹೆಚ್.ಕೆ. ದ್ವಾರಕಾನಾಥ್ ಇವರು ರಂಗ ವಿನ್ಯಾಸ, ಶ್ರೀಮತಿ ಬಿ.ಎನ್. ಶಶಿಕಲಾ ಅವರು ವಸ್ತ್ರ ವಿನ್ಯಾಸ ಮಾಡಿದ್ದಾರೆ. ನಾಟಕಗಳಿಗೆ ಬೆಳಕಿನ ವಿನ್ಯಾಸ ಎಂದಿನಂತೆ ಶ್ರೀ ಮಹೇಶ್ ಕಲ್ಲತ್ತಿ ಮಾಡಲಿದ್ದಾರೆ. 2018 ಅಕ್ಟೋಬರ್ 2 ರಂದು ಸಂಜೆ 6:00 ಕ್ಕೆ ಈ ರಂಗೋತ್ಸವದ ಉದ್ಘಾಟನೆಯನ್ನು ಖ್ಯಾತ ಕವಯತ್ರಿ ಶ್ರೀಮತಿ ಪ್ರತಿಭಾ ನಂದಕುಮಾರ್ ಅವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಂಗಾಯಣದ ನಿರ್ದೇಶಕರಾದ ಶ್ರೀಮತಿ ಭಾಗೀರಥಿಬಾಯಿ ಅವರು ವಹಿಸಲಿದ್ದಾರೆ. ಸಂಪೂರ್ಣ ಹೊಸ ಯುವ ಪ್ರತಿಭೆಗಳ ಈ ಹನ್ನೆರಡು ನಾಟಕಗಳನ್ನು ನೋಡುವ ಅವಕಾಶ ಮೈಸೂರಿನ ಜನತೆಗೆ ಒಂದೆಡೆ ಸಿಗುತ್ತಿರುವುದು ಒಂದೆಡೆಯಾದರೆ, 270 ಹೊಸ ಪ್ರತಿಭೆಗಳು ರಂಗಭೂಮಿಗೆ ಪರಿಚಿತಗೊಳ್ಳುತ್ತಿರುವ ಸಂತಸ ವಿದ್ಯಾರ್ಥಿಗಳಿಗಾಗಿದೆ.

ಅಂತೆಯೇ ಈ ಬಾರಿಯೂ ಕೂಡ ದಸರಾ ಮಹೋತ್ಸವದ ಸಂದರ್ಭ ರಂಗಾಯಣದಲ್ಲಿ ನವರಾತ್ರಿ ರಂಗೋತ್ಸವವನ್ನು 2018 ಅಕ್ಟೋಬರ್ 10 ರಿಂದ 18 ರವರೆಗೆ ರಂಗಾಯಣದ ವನರಂಗದಲ್ಲಿ ನಡೆಯಲಿದೆ. ಈ ನಾಟಕೋತ್ಸವದಲ್ಲಿ ರಂಗಾಯಣದ ಹಿರಿಯ ಕಲಾವಿದರಿಂದ ಚೆಕ್‌ಮೇಟ್, ರಂಗಾಯಣದ ಸಂಚಾರಿ ರಂಗಘಟಕದ ಕಲಾವಿದರಿಂದ ಪುಂಟಿಲಾ ಮತ್ತು ರೆಕ್ಸ್ ಅವರ್ಸ್ ಡೈನೋ ಏಕಾಂಗಿ ಪಯಣ ಎಂಬ ಪಪೆಟ್ ಪ್ರದರ್ಶನ, ರಂಗಾಯಣದ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಂದ ಕುವೆಂಪು ಅವರ ಚಂದ್ರಹಾಸ ನಾಟಕ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ನಾಟಕಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ನವರಾತ್ರಿ ರಂಗೋತ್ಸವದ ಈ ಸಂದರ್ಭದಲ್ಲಿ ನಾಡಿನ ಖ್ಯಾತ ಸಾಹಿತಿಗಳು ಹಾಗೂ ಚಿತ್ರಕಲಾವಿದರು ಆದ ಶ್ರೀ ಚಂದ್ರಕಾಂತ ಕುಸನೂರು ಅವರ ಅಮೂರ್ತ ಸಂಭ್ರಮ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಹಳೆಯ ಗ್ರಾಮೋಫೋನ್ ಮತ್ತು ರೆಕಾರ್ಡ್ ಪ್ಲೇಟ್‌ಗಳ ಪ್ರದರ್ಶನವನ್ನು ಸಹ ಆಯೋಜಿಸಲಾಗಿದೆ. ಜೊತೆಗೆ ಎಂದಿನಂತೆ ನಾಡಿನ 9 ಜನ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸಿ, ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ೨೦೧೮ ಅಕ್ಟೋಬರ್ 10 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಡಾ. ಜಯಮಾಲ ಅವರು ನೆರವೇರಿಸಲಿದ್ದಾರೆ.

ರಂಗಭೀಷ್ಮ ಬಿ.ವಿ.ಕಾರಂತ ಕಾಲೇಜು ರಂಗೋತ್ಸವ.. ನಾಟಕ ಪ್ರದರ್ಶನಗಳ ವಿವರ

02-10-2018 : ನಾಟಕ: ರೂಪಾಂತರ

ದಿನಾಂಕ: 02-10-2018,
ಸಂಜೆ 7 ಗಂಟೆಗೆ
ಸ್ಥಳ: ವನರಂಗ
ಕಾಲೇಜು: ಸೆಂಟ್ ಜೋಸೆಫ್ ಪ್ರಥಮದರ್ಜೆ ಕಾಲೇಜು, ಜಯಲಕ್ಷ್ಮಿಪುರಂ, ಮೈಸೂರು
ನಿರ್ದೇಶನ: ರಿಯಾಜ್ ಸಿಹಿಮೊಗೆ 

03-10-2018 ನಾಟಕ: ಬಹುಮುಖಿ

ಸಂಜೆ 7 ಗಂಟೆಗೆ
ಸ್ಥಳ: ವನರಂಗ
ಕಾಲೇಜು: ಮಹಾಜನ ಪದವಿ ಕಾಲೇಜು, ಮೈಸೂರು
ನಿರ್ದೇಶನ:ವಿನೋದ ರಂಗ

04-10-2018 : ನಾಟಕ: ಜೋಗತಿಕಲ್ಲು

ಸಂಜೆ 7 ಗಂಟೆಗೆ
ಸ್ಥಳ: ವನರಂಗ
ಕಾಲೇಜು: ಶ್ರೀ ನಟರಾಜ ಮಹಿಳಾ ವಸತಿ ಪ್ರಥಮದರ್ಜೆ ಕಾಲೇಜು,  ಶ್ರೀ ಹೊಸಮಠ, ಮೈಸೂರು-೧೪.
ನಿರ್ದೇಶನ: ನೂರ್ ಅಹಮದ್ ಶೇಖ್

05-10-2018 : ನಾಟಕ: ಮೇಘ ಮರೆಯ ಚಂದಿರ

ಸಂಜೆ 7 ಗಂಟೆಗೆ
ಸ್ಥಳ: ವನರಂಗ
ಕಾಲೇಜು: ಪದವಿಪೂರ್ವ ಕಾಲೇಜು, ಗಾವಡಗೆರೆ ಹೋಬಳಿ, ಹುಣಸೂರು ತಾ ಮೈಸೂರು ಜಿಲ್ಲೆ.
ನಿರ್ದೇಶನ: ಶ್ರೀಕಾಂತ ಪಿ.ನವಲಗರಿ

06-10-2018 : ನಾಟಕ: ಮಾರಿಕಾಡು

ಸಂಜೆ 7 ಗಂಟೆಗೆ
ಸ್ಥಳ: ವನರಂಗ
ಕಾಲೇಜು: ಜಿಎಸ್‌ಎಸ್‌ಎಸ್ ಕಾಲೇಜು, ಕೆ.ಆರ್.ಎಸ್.ರಸ್ತೆ, ಮೈಸೂರು
ನಿರ್ದೇಶನ: ಚಾಂದಿನಿ ಪಿ

07-10-2018 : ನಾಟಕ: ಮಲ್ಲಮ್ಮನ ಮನೆ ಹೋಟ್ಲು

ಸಂಜೆ 7 ಗಂಟೆಗೆ
ಸ್ಥಳ: ವನರಂಗ
ಕಾಲೇಜು: ಎಂ.ಎಂ.ಕೆ ಮತ್ತು ಎಸ್.ಡಿ.ಎಂ. ಮಹಿಳಾ ಮಹಾಸಭಾ, ಕೃಷ್ಣಮೂರ್ತಿಪುರಂ, ಮೈಸೂರು-೦೪
ನಿರ್ದೇಶನ: ರಂಗನಾಥ್ ವಿ

08-10-2018 : ನಾಟಕ: ಜೋಕುಮಾರಸ್ವಾಮಿ

ಸಂಜೆ 7 ಗಂಟೆಗೆ
ಸ್ಥಳ: ವನರಂಗ
ಕಾಲೇಜು:  ಬಿ.ಹೆಚ್.ಎಸ್ ಹೈಯರ್ ಎಜುಕೇಷನ್ ಸೊಸೈಟಿ, ಟಿ. ನರಸೀಪುರ.
ನಿರ್ದೇಶನ: ಕಾರ್ತಿಕ್ ಉಪಮನ್ಯು