
ಪದ್ಮಶ್ರೀ ಡಾ. ಎಸ್.ಎಲ್. ಭೈರಪ್ಪನವರ ಜನಪ್ರಿಯ ಕಾದಂಬರಿ ‘ಪರ್ವ’ ವನ್ನು ರಂಗರೂಪಕ್ಕೆ ಅಳವಡಿಸಿ, ನಾಟಕ ಪ್ರದರ್ಶನಕ್ಕೆ ಮೈಸೂರು ರಂಗಾಯಣ ಯೋಜಿಸಿದೆ. ಈ ಬೃಹತ್ ಕಾದಂಬರಿಯ ವಸ್ತು ವಿಷಯವು ಇಡೀ ಭಾರತೀಯ ಪರಂಪರೆಯಲ್ಲೇ ಮೌಖಿಕ ಹಾಗೂ ಅಕ್ಷರಸ್ಥ ಸಮಾಜಗಳೆರಡರಲ್ಲೂ ಹಾಸುಹೊಕ್ಕಾಗಿ ಬಂದಿರುವ ಮಹಾಭಾರತದ ಕಥೆಯಾಗಿದ್ದು, ಆ ಮೂಲಕ ಮನುಷ್ಯ ಜೀವನದ ನೂರಾರು ಬಗೆಯ ವ್ಯಕ್ತಿತ್ವಗಳ ಸಂಕೀರ್ಣತೆಯನ್ನು ಬಿಂಬಿಸುವ, ಆ ಮೂಲಕ ಪ್ರತಿಯೊಬ್ಬ ವ್ಯಕ್ತಿಯೂ ಆತ್ಮಶೋಧ ಮಾಡಿಕೊಳ್ಳುವಂತೆ ಪ್ರೇರೇಪಿಸುವ ಕೃತಿಯಾಗಿದೆ. ಈ ಕೃತಿಯು ಕಂಡಿರುವ ಹಲವು ಮುದ್ರಣಗಳು ಮತ್ತು ಭಾರತದ ಬೇರೆ ಬೇರೆ ಭಾಷೆಗಳಿಗೆ ಅನುವಾದವಾಗಿರುವುದೇ ಅದರ ಮಹತ್ವವನ್ನು ಸಾರುವಂತಿದೆ. ಇಂಥ ಮೇರುಕೃತಿಯೊಂದನ್ನು ನಾಡಿನ ಪ್ರತಿಷ್ಠಿತ ರಂಗಸಂಸ್ಥೆಯಾದ ಮೈಸೂರು ರಂಗಾಯಣವು ಈ ವರ್ಷದ ಪ್ರಧಾನ ರಂಗಪ್ರದರ್ಶನವಾಗಿ ಕೈಗೆತ್ತಿಕೊಳ್ಳಲು ಸಂಕಲ್ಪಿಸಿದೆ. ಈ ಬೃಹತ್ ರಂಗರೂಪದ ನಿರ್ದೇಶಕರಾಗಿ ರಂಗಭೂಮಿ ಮತ್ತು ಚಲನಚಿತ್ರದ ಖ್ಯಾತ ನಟ, ನಿರ್ದೇಶಕ ಶ್ರೀ ಪ್ರಕಾಶ್ ಬೆಳವಾಡಿ ಅವರು ಜವಾಬ್ದಾರಿ ಹೊತ್ತಿದ್ದಾರೆ. ಈಗಾಗಲೇ ರಂಗಾಯಣದ ನಿರ್ದೇಶಕರಾದ ಶ್ರೀ ಅಡ್ಡಂಡ ಸಿ. ಕಾರ್ಯಪ್ಪ ಮತ್ತು ನಾಟಕ ನಿರ್ದೇಶಕರಾದ ಶ್ರೀ ಪ್ರಕಾಶ್ ಬೆಳವಾಡಿ ಅವರು ಭೈರಪ್ಪನವರನ್ನು ಖುದ್ದು ಭೇಟಿ ಮಾಡಿ ಅವರ ಅನುಮತಿಯನ್ನು ಪಡೆದಿದ್ದಾರೆ.
ರಂಗಾಯಣ ಮೈಸೂರು ಪ್ರಸ್ತುತಪಡಿಸುವ ಬಿ. ವಿ ಕಾರಂತ ರಂಗಸಂಗೀತ – ಸಂಚಿಕೆ

ರಂಗಾಯಣವು ಪ್ರಸ್ತುತಪಡಿಸಿದ `ಬೊಮ್ಮನಹಳ್ಳಿಯ ಕಿಂದರಿಜೋಗಿ’ ವಾಚಿಕಾಭಿನಯವನ್ನು ಕೋವಿಡ್ ನಿಯಮಗಳಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಂಪೂರ್ಣವಾಗಿ ವಾಚಿಕ ಅಭಿನಯದಲ್ಲಿ ಚಿತ್ರೀಕರಿಸಲಾಗಿದೆ. ದಿನಾಂಕ:07-09-2020ರಂದು ಬೆಳಗ್ಗೆ 11.15ಕ್ಕೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಮೈಸೂರಿನ ಅರಿವು ಶಿಕ್ಷಣ ಸಂಸ್ಥೆಯ ಕೆಲವು ಮಕ್ಕಳು ಈ ವಾಚಿಕಾಭಿನಯ ಚಿತ್ರಣವನ್ನು ಅನಾವರಣಗೊಳಿಸಲಿದ್ದಾರೆ. ಈ ವಾಚಿಕಾಭಿನಯವು ಅಂದು ಸಂಜೆ 6.30ಕ್ಕೆ ರಂಗಾಯಣ ಜಾಲತಾಣದಲ್ಲಿ ಹಾಗೂ ರಂಗಾಯಣದ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರಗೊಳ್ಳಲಿದೆ. ನಂತರ ರಾಜ್ಯದ ಎಲ್ಲಾ ಪ್ರಾಥಮಿಕ, ಪ್ರೌಢಶಿಕ್ಷಣ ಸಂಸ್ಥೆಗಳಲ್ಲಿ ಈ ವಾಚಿಕಾಭಿನಯ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಮೂಲಕ ಲಭ್ಯವಾಗಲಿದೆ.
ಸಂಚಿಕೆ 01
ಸಂಚಿಕೆ 02
ಸಂಚಿಕೆ 03
